ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 5, 2020

Mahabharata Tatparya Nirnaya Kannada 1716_1721


ಅಥ ಪ್ರಹಸ್ಯ ಸೌಭರಾಡ್ ವಚೋ ಜಗಾದ ಮಾಗಧಮ್ ।
ವಿನಿನ್ದ್ಯ ತೌ ಕ್ರುಧಾ ಸ್ಫುರನ್ ಕ್ರುಧಾ ಸ್ಫುರನ್ತಮೀಕ್ಷ್ಯ ಚ ॥೧೭.೧೬॥

ತದನಂತರ ಸೌಭಸಾಲ್ವನು ತಾನು ಸಿಟ್ಟಿನಿಂದ ಕಂಪಿಸುವವನಾಗಿ, ಸಿಟ್ಟಿನಿಂದ ನಡುಗುತ್ತಿರುವ ಜರಾಸಂಧನನ್ನು ನೋಡಿ, ಶಿಶುಪಾಲ-ದಂತವಕ್ರರನ್ನು ಚೆನ್ನಾಗಿ ನಿಂದಿಸಿ, ನಕ್ಕು, ಜರಾಸಂಧನನ್ನು  ಕುರಿತು ಹೀಗೆ ಹೇಳಿದನು:

ನ ತನ್ಮೃಷಾ ಹರಿಃ ಸ್ವಯಂ ಜನಾರ್ದ್ದನೋ ವಧಾಯ ನಃ ।
ಪ್ರಜಾತ ಏಷ ಯಾದವೋ ವಯಂ ಚ ದಾನವೇಶ್ವರಾಃ ॥೧೭.೧೭॥

ಈ ಇಬ್ಬರು ಹೇಳಿರುವುದರಲ್ಲಿ ಒಂದೊಂದು ಒಳ್ಳೆಯ ವಿಷಯವಿದೆ. ಅದು ಸುಳ್ಳಲ್ಲ.  ಕೃಷ್ಣನು ನಾರಾಯಣನೇ. ಆ ಜನಾರ್ದನನು ನಮ್ಮ ಸಾವಿಗಾಗಿಯೇ ಯಾದವನಾಗಿ ಹುಟ್ಟಿದ್ದಾನೆ. ಆದರೆ ನಾವು  ಶ್ರೇಷ್ಠ ದಾನವರು.   

ಸ್ವಧರ್ಮ್ಮ ಏಷ ನಃ ಸದಾ ದೃಢಪ್ರತೀಪತಾ ಹರೌ ।
ಸ್ವಧರ್ಮ್ಮಿಣೋ ಹತಾ ಅಪಿ ಪ್ರಯಾಮ ಸದ್ಗತಿಂ ಧ್ರುವಮ್ ॥೧೭.೧೮॥

ನಮ್ಮ ಸ್ವರೂಪಭೂತವಾದ ಧರ್ಮವೆಂದರೆ ಅದು  ಪರಮಾತ್ಮನನ್ನು  ದೃಢವಾಗಿ ದ್ವೇಷ ಮಾಡುವುದು.  ಸ್ವಧರ್ಮ ಪಾಲನೆಯಲ್ಲಿ ನಾವು ಸತ್ತರೂ ಕೂಡಾ, ಸದ್ಗತಿಯನ್ನೇ ಹೊಂದುತ್ತೇವೆ.

ಶಿವಶ್ಚ ನಃ ಪರಾ ಗತಿರ್ಗ್ಗುರುರ್ಭವಾನರಿರ್ಹರೇಃ ।
ಇತೀರಿತಃ ಸ ಮಾಗಧೋ ಜಗಾದ ಸಾಧುಸಾಧ್ವಿತಿ ॥೧೭.೧೯॥

ಜರಾಸಂಧಾ, ಶಿವನೇ ನಮಗೆ ಪರದೇವತೆಯು. ನಮ್ಮೆಲ್ಲರ ಶತ್ರುವಾದ ಕೃಷ್ಣನ ಶತ್ರುವಾದ  ನೀನೇ ನಮ್ಮ ಗುರುವು’. ಈ ರೀತಿಯಾಗಿ ಸಾಲ್ವನಿಂದ ಹೇಳಲ್ಪಟ್ಟಾಗ ಜರಾಸಂಧನು ‘ಹೌದು-ಹೌದು, ಸರಿಯಾಗಿ ಹೇಳಿದೆ’ ಎನ್ನುತ್ತಾನೆ.

ತಥೈವ ರುಗ್ಮಿಪೂರ್ವಕಾಃ ಕರೂಶಚೇದಿಪೌ ಚ ತೌ ।
ವಿನಿಶ್ಚಯಂ ಕುಬುದ್ಧಯೋ ಯುಧೇ ಚ ಚಕ್ರುರೂರ್ಜ್ಜಿತಮ್ ॥೧೭.೨೦॥


ಸಾಲ್ವನಂತೆ ರುಗ್ಮಿ ಮೊದಲಾದವರು, ಶಿಶುಪಾಲ-ದಂತವಕ್ರರೂ ಸೇರಿ, ಎಲ್ಲರೂ ‘ನಾರಾಯಣನಿಗೆ ಎದುರಾಗಿ ನಿಲ್ಲುವುದೇ ತಮ್ಮ ನಿಜವಾದ ಧರ್ಮ ಎಂದು ಯುದ್ಧಕ್ಕಾಗಿ ದೃಢವಾದ ನಿಶ್ಚಯ ಮಾಡಿದರು.

ಸದಾ ಪ್ರತೀಪಕಾರಿಣೌ ಭವಾವ ಕೃಷ್ಣ ಇತ್ಯಪಿ ।
ಗುರೋಃ ಪ್ರಸಾದಮಾಪ್ನುತಾಂ ಕರೂಶಚೇದಿಭೂಭೃತೌ ॥೧೭.೨೧॥

ಯಾವಾಗ ಶಿಶುಪಾಲ-ದಂತವಕ್ರರೂ ಕೃಷ್ಣನಿಗೆ ಎದುರಾಡೋಣ ಎಂದು ನಿಶ್ಚಯಮಾಡಿದರೋ, ಆಗ ಅವರು ತಮ್ಮ ಗುರುವಾದ ಜರಾಸಂಧನ ಅನುಗ್ರಹವನ್ನು ಪಡೆದರು.

No comments:

Post a Comment