ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 18, 2020

Mahabharata Tatparya Nirnaya Kannada 17154_17163


ಅಥಾಪರೇ ಚ ಯಾದವಾ ವಿಜಿತ್ಯ ತದ್ಬಲಂ ಯಯುಃ ।
ಪುರೈವ ರುಗ್ಮಿಪೂರ್ವಕಾಃ ಪ್ರಜಗ್ಮುರಚ್ಯುತಂ ಪ್ರತಿ ॥೧೭.೧೫೪॥

ಉಳಿದ ಯಾದವರೂ ಕೂಡಾ ಜರಾಸಂಧ ಶಿಶುಪಾಲರ ಸೈನ್ಯವನ್ನು ಗೆದ್ದು, ಅಲ್ಲಿಂದ ಹೊರಟರು. ಆದರೆ ಅದಕ್ಕೂ ಮೊದಲೇ ರುಗ್ಮಿ ಮೊದಲಾದವರೆಲ್ಲರೂ  ಪರಮಾತ್ಮನನ್ನು ಹಿಂಬಾಲಿಸಿ ತೆರಳಿದ್ದರು.

ಸಹೈಕಲವ್ಯಪೂರ್ವಕೈಃ ಸಮೇತ್ಯ ಭೀಷ್ಮಕಾತ್ಮಜಃ ।
ಹರಿಂ ವವರ್ಷ ಸಾಯಕೈಃ ಸ ಸಿಂಹವನ್ನ್ಯವರ್ತ್ತತ ॥೧೭.೧೫೫॥

ಏಕಲವ್ಯ ಮೊದಲಾದವರಿಂದ ಕೂಡಿಕೊಂಡ ಭೀಷ್ಮಕನ ಮಗನಾದ ರುಗ್ಮಿಯು ಬಾಣಗಳಿಂದ ಪರಮಾತ್ಮನನ್ನು ಪೀಡಿಸಲು ಹೋದ. ಆಗ ಪರಮಾತ್ಮ ಸಿಂಹದಂತೆ ಅವನತ್ತ ತಿರುಗಿದ.

ಅಕ್ಷೋಹಿಣೀತ್ರಯಂ ಹರಿಸ್ತದಾ ನಿಹತ್ಯ ಸಾಯಕೈಃ ।
ಅವಾಹನಾಯುಧಂ ವ್ಯಧಾನ್ನಿಷಾದಪಂ ಶರೈಃ ಕ್ಷಣಾತ್ ॥೧೭.೧೫೬॥

ಶ್ರೀಹರಿಯು ಮೂರು ಅಕ್ಷೋಹಿಣಿ ಪರಿಮಿತವಾದ ಸೇನೆಯನ್ನು ಬಾಣಗಳಿಂದ ಕೊಂದು, ಬೇಡರ ಒಡೆಯನಾಗಿರುವ ಏಕಲವ್ಯನನ್ನು ಕ್ಷಣದಲ್ಲಿ ವಾಹನಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದನು.

ಶರಂ ಶರೀರನಾಶಕಂ ಸಮಾದದಾನಮೀಶ್ವರಮ್ ।
ಸ ಏಕಲವ್ಯ ಆಶು ತಂ ವಿಹಾಯ ದುದ್ರುವೇ ಭಯಾತ್ ॥೧೭.೧೫೭॥

ಶರೀರವನ್ನೇ ನಾಶಮಾಡುವ ಉಗ್ರವಾದ ಬಾಣವನ್ನು ಕೈಗೆತ್ತಿಕೊಳ್ಳುತ್ತಿರುವ ಈಶ್ವರನನ್ನು ಕಂಡ ಆ ಏಕಲವ್ಯನು, ಕೂಡಲೇ  ರಣಾಂಗಣವನ್ನು ಬಿಟ್ಟು, ಭಯದಿಂದ ಓಡಿದನು.

ಧನುರ್ಭೃತಾಂ ವರೇ ಗತೇ ರಣಂ ವಿಹಾಯ ಭೂಭೃತಃ ।
ಕರೂಶರಾಜಪೂರ್ವಕಾಃ ಕ್ಷಣಾತ್ ಪ್ರದುರ್ದುವುರ್ಭಯಾತ್ ॥೧೭.೧೫೮॥

ಧನುಶ್ಕರಲ್ಲೇ ಅಗ್ರಗಣ್ಯನಾಗಿರುವ ಏಕಲವ್ಯನು ಯುದ್ಧರಂಗವನ್ನು ಬಿಟ್ಟು ಹೋಗುತ್ತಿರಲು, ದಂತವಕ್ರ ಮೊದಲಾಗಿರುವ ರಾಜರೆಲ್ಲರೂ ಕೂಡಾ, ಭಯದಿಂದ ಓಡಿ ಹೋದರು. 

ಅಥಾsಸಸಾದ ಕೇಶವಂ ರುಷಾ ಸ ಭೀಷ್ಮಕಾತ್ಮಜಃ ।
ಶರಾಮ್ಬುಧಾರ ಆಶು ತಂ ವಿವಾಹನಂ ವ್ಯಧಾದ್ಧರಿಃ ॥೧೭.೧೫೯॥

ಅವರು ಹೋದಮೇಲೆ, ರುಗ್ಮಿಯು ಬಾಣಗಳ ಮಳೆಗರೆಯುತ್ತಾ, ಪರಮಾತ್ಮನ ಎದುರು ಬಂದ. ಶ್ರೀಕೃಷ್ಣ ಕೂಡಲೇ ಅವನ ರಥವನ್ನು ಕತ್ತರಿಸಿದ. 

ಚಕರ್ತ್ತ ಕಾರ್ಮ್ಮುಕಂ ಪುನಃ ಸ ಖಡ್ಗಚರ್ಮ್ಮಭೃದ್ಧರೇಃ ।
ರಥಂ ಸಮಾರುಹಚ್ಛರೈಶ್ಚಕರ್ತ್ತ ಖಡ್ಗಮೀಶ್ವರಃ ॥೧೭.೧೬೦॥

ಪರಮಾತ್ಮನು ರುಗ್ಮಿಯ ಬಿಲ್ಲನ್ನು ಕತ್ತರಿಸಿದ. ಆಗ ಆತ ಕತ್ತಿ ಗುರಾಣಿಗಳನ್ನು ಹಿಡಿದು ಪರಮಾತ್ಮನ ರಥವನ್ನು ಏರಿದ. ಈರೀತಿ ಬಂದ ರುಗ್ಮಿಯ ಖಡ್ಗವನ್ನು ಶ್ರೀಕೃಷ್ಣ ತನ್ನ ಬಾಣದಿಂದ ಕತ್ತರಿಸಿದ.

ಶರೈರ್ವಿತಸ್ತಿಮಾತ್ರಕೈರ್ವಿಧಾಯ ತಂ ನಿರಾಯುಧಮ್ ।
ಪ್ರಿಯಾವಚಃ ಪ್ರಪಾಲಯನ್ ಜಘಾನ ನೈನಮಚ್ಯುತಃ ॥೧೭.೧೬೧॥

ದ್ವಾದಷಾಂಗುಲ ಪರಿಮಿತವಾದ ಬಾಣಗಳಿಂದ ಅವನನ್ನು ನಿರಾಯುಧನನ್ನಾಗಿ ಮಾಡಿದ ಶ್ರೀಕೃಷ್ಣ, ರುಗ್ಮಿಣಿಯ ಮಾತನ್ನು ಕೇಳುತ್ತಾ, ಅವನನ್ನು ಕೊಲ್ಲಲಿಲ್ಲ.

[ರುಗ್ಮಿಣಿ ಶ್ರೀಕೃಷ್ಣನಿಗೆ ಹೇಳಿದ ಮಾತನ್ನು ಭಾಗವತದಲ್ಲಿ(೧೦.೫೯.೩೫) ವಿವರಿಸಲಾಗಿದೆ.  ಯೋಗೇಶ್ವರಾಪ್ರಮೇಯಾತ್ಮನ್  ದೇವದೇವ  ಜಗತ್ಪತೇ । ಹನ್ತುಂ ನಾರ್ಹಸಿ ಕಲ್ಯಾಣ ಭ್ರಾತರಂ ಮೇ ಮಹಾಭುಜ’]

ನಿಬದ್ಧ್ಯ ಪಞ್ಚಚೂಳಿನಂ ವಿಧಾಯ ತಂ ವ್ಯಸರ್ಜ್ಜಯತ್ ।
ಜಗಜ್ಜನಿತ್ರಯೋರಿದಂ ವಿಡಮ್ಬನಂ ರಮೇಶಯೋಃ ॥೧೭.೧೬೨॥

ಪರಮಾತ್ಮನು ಅವನನ್ನು ಕಟ್ಟಿಹಾಕಿ, ಐದು ಜುಟ್ಟುಗಳನ್ನು ಇಟ್ಟು, ಅಲ್ಲಿಂದ ಕಳುಹಿಸಿದ. ಇದು ಜಗತ್ತಿನ ತಂದೆ-ತಾಯಿಗಳಾದ ಲಕ್ಷ್ಮೀ-ನಾರಾಯಣರ  ವಿಡಮ್ಬನವಾಗಿದೆ.
[ಈ ಹಿನ್ನೆಲೆಯನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ: ೬೦.೨೬) ಹೇಳಲಾಗಿದೆ. ‘ರುಗ್ಮಿಣಂ ಪತಿತಂ ದೃಷ್ಟ್ವಾ ವ್ಯದ್ರವಂತ ನರಾಧಿಪಾಃ’ ಇನ್ನು ಭಾಗವತದಲ್ಲೂ(೧೦.೫೯.೩೮) ಈ ಕುರಿತು ಹೇಳಿದ್ದಾರೆ: ‘ಚೈಲೇನ ಬಧ್ವಾ ತಮಸಾಧುಕಾರಿಣಂ ಸಷ್ಮಶ್ರುಕೇಶಾನ್ ಪ್ರವಪನ್ ವ್ಯರೂಪಯತ್’ ‘ಜನಿತ್ರ’ ಎನ್ನುವ ಶಬ್ದವನ್ನು ಋಗ್ವೇದ ಸಂಹಿತ(೧.೧೬೩.೪)ದಲ್ಲಿಯೂ ಕಾಣುತ್ತೇವೆ.  ಯತ್ರ ತ ಆಹುಃ  ಪರಮಂ ಜನಿತ್ರಮ್]

ಸದೈಕಮಾನಸಾವಪಿ ಸ್ವಧರ್ಮ್ಮಶಾಸಕೌ ನೃಣಾಮ್ ।
ರಮಾ ಹರಿಶ್ಚ ತತ್ರ ತೌ ವಿಜಹ್ರತುರ್ಹಿ ರುಗ್ಮಿಣಾ ॥೧೭.೧೬೩॥

ಯಾವಾಗಲೂ ಒಂದೇ ರೀತಿಯ ಮನೋಧರ್ಮವುಳ್ಳವರಾದರೂ ಕೂಡಾ, ಸಜ್ಜನರಿಗೆ ತಮ್ಮ ಧರ್ಮವನ್ನು ತೋರಿಸಲೋಸುಗ ಲಕ್ಷ್ಮೀನಾರಾಯಣರು ಆ ಯುದ್ಧಾಂಗಣದಲ್ಲಿ ರುಗ್ಮಿಯಿಂದ ಕೂಡಿಕೊಂಡು ವಿಹಾರ ಮಾಡಿದರಷ್ಟೇ.
[ಲಕ್ಷ್ಮೀ-ನಾರಾಯಣರ ಮನೋಧರ್ಮ ಬೇರೆಬೇರೆ ಅಲ್ಲ. ಕೃಷ್ಣನಿಗೆ ರುಗ್ಮಿಯನ್ನು ಕೊಲ್ಲಬೇಕು ಎಂದಿದ್ದರೆ ರುಗ್ಮಿಣಿ ತಡೆಯುತ್ತಿರಲಿಲ್ಲ. ಆದರೂ ಕೂಡಾ ತಡೆದಳು, ಏಕೆಂದರೆ: ಅದೊಂದು ವಿಡಂಬನೆ ಮತ್ತು ಜನರ ಸ್ವಧರ್ಮ ಪ್ರದರ್ಶನ ಅಷ್ಟೇ]

Wednesday, May 13, 2020

Mahabharata Tatparya Nirnaya Kannada 17146_17153


ಜರಾಸುತಾದಯೋ ರುಷಾ ತಮಭ್ಯಯುಃ ಶರೋತ್ತಮೈಃ ।
ವಿಧಾಯ ತಾನ್ ನಿರಾಯುಧಾನ್ ಜಗಾಮ ಕೇಶವಃ ಶನೈಃ ॥೧೭.೧೪೬॥

ಜರಾಸಂಧ ಮೊದಲಾದವರು ಸಿಟ್ಟಿನಿಂದ,  ಉತ್ಕೃಷ್ಟ ಬಾಣಗಳನ್ನು ಹೂಡಿ, ಶ್ರೀಕೃಷ್ಣನನ್ನು ಎದುರುಗೊಂಡರು. ಕೃಷ್ಣನು ಅವರನ್ನು ನಿರಾಯುಧರನ್ನಾಗಿ ಮಾಡಿ, ನಿಧಾನವಾಗಿ ಮುನ್ನಡೆದನು.

ಪುನರ್ಗ್ಗೃಹೀತಕಾರ್ಮ್ಮುಕಾನ್ ಹರಿಂ ಪ್ರಯಾತುಮುದ್ಯತಾನ್ ।
ನ್ಯವಾರಯದ್ಧಲಾಯುಧೋ ಬಲಾದ್ ಬಲೋರ್ಜ್ಜಿತಾಗ್ರಣೀಃ ॥೧೭.೧೪೭॥

ಪುನಃ ಬಿಲ್ಲುಗಳನ್ನು ಎತ್ತಿಕೊಂಡು ಪರಮಾತ್ಮನತ್ತ ತೆರಳಲು ಸಿದ್ಧರಾದ ಜರಾಸಂಧಾದಿಗಳನ್ನು,  ಬಲದಲ್ಲಿ ಶ್ರೇಷ್ಠರಾಗಿರುವವರನ್ನೇ ಸೈನಿಕರನ್ನಾಗಿ ಹೊಂದಿರುವ ಬಲರಾಮನು ತನ್ನ  ಸೈನ್ಯದೊಂದಿಗೆ  ಕೂಡಿಕೊಂಡು ತಡೆದನು.

ತದಾ ಸಿತಃ ಶಿರೋರುಹೋ ಹರೇರ್ಹಲಾಯುಧಸ್ಥಿತಃ ।
ಪ್ರಕಾಶಮಾವಿಶದ್ ಬಲಂ ವಿಜೇತುಮತ್ರ ಮಾಗಧಮ್ ॥೧೭.೧೪೮॥

ಆಗ ಬಲರಾಮನಲ್ಲಿರತಕ್ಕ ಪರಮಾತ್ಮನ ಶುಕ್ಲಕೇಶವು ಈ ಯುದ್ಧದಲ್ಲಿ ಜರಾಸಂಧನನ್ನು ಗೆಲ್ಲಲು ಅವನಿಗೆ  ಬಲವನ್ನು ಪ್ರಕಾಶಗೊಳಿಸಿತು. [ಪರಮಾತ್ಮನ ವಿಶೇಷ ಆವೇಶ ಬಲರಾಮನಲ್ಲಿ ಇದ್ದದ್ದರಿಂದ ಅವನಿಗೆ  ಜರಾಸಂಧನನ್ನು ಗೆಲ್ಲಲು ಸಾಧ್ಯವಾಯಿತು]

ಸ ತಸ್ಯ ಮಾಗಧೋ ರಣೇ ಗದಾನಿಪಾತಚೂರ್ಣ್ಣಿತಃ ।
ಪಪಾತ ಭೂತಳೇ ಬಲೋ ವಿಜಿತ್ಯ ತಂ ಯಯೌ ಪುರೀಮ್ ॥೧೭.೧೪೯॥

ಜರಾಸಂಧನು ಬಲರಾಮನ ಗದಾಪ್ರಹಾರದಿಂದ ಭೂಮಿಯಲ್ಲಿ ಬಿದ್ದ. ಹೀಗೆ ಬಲರಾಮನು ಜರಾಸಂಧನನ್ನು ಗೆದ್ದು, ದ್ವಾರಕಾ ಪಟ್ಟಣದತ್ತ ತೆರಳಿದನು.

ವರೋರುವೇಷಸಂವೃತೋsಥ ಚೇದಿರಾಟ್ ಸಮಭ್ಯಯಾತ್ ।
ತಮಾಸಸಾರ ಸಾತ್ಯಕಿರ್ನ್ನದನ್ ಮೃಗಾಧಿಪೋ ಯಥಾ ॥೧೭.೧೫೦॥

ಸ್ವಲ್ಪಕಾಲ ಕಳೆದ ನಂತರ, ಮದುಮಗನ ವೇಷದಿಂದ ಕೂಡಿರುವ ಶಿಶುಪಾಲನು ಯುದ್ಧಕ್ಕೆ ಬಂದನು. ಸಾತ್ಯಕಿಯು  ಗರ್ಜಿಸುವ ಸಿಂಹವೋ ಎಂಬಂತೆ ಅವನನ್ನು ಎದುರುಗೊಂಡ.

ಚಿರಂ ಪ್ರಯುದ್ಧ್ಯ ತಾವುಭೌ ವರಾಸ್ತ್ರಶಸ್ತ್ರವರ್ಷಿಣೌ ।
ಕ್ರುಧಾ ನಿರೀಕ್ಷ್ಯ ತಸ್ಥತುಃ ಪರಸ್ಪರಂ ಸ್ಫುರತ್ತನೂ ॥೧೭.೧೫೧॥

ಉತ್ಕೃಷ್ಟವಾದ ಅಸ್ತ್ರಗಳ ಹಾಗೂ ಶಸ್ತ್ರಗಳ ಮಳೆಗರೆಯುತ್ತಿರುವ ಆ ಶಿಶುಪಾಲ-ಸಾತ್ಯಕಿ, ನಿರಂತರವಾಗಿ ಬಹಳಕಾಲ ಯುದ್ಧಮಾಡಿ, ಪರಸ್ಪರ ಗೆಲ್ಲಲಾಗದೇ, ಸಿಟ್ಟಿನಿಂದ ಒಬ್ಬರನ್ನೊಬ್ಬರು ನೋಡಿಕೊಂಡೇ ಕೆಲವುಕಾಲ ಕಳೆದರು.

ಸಮಾನಭಾವಮಕ್ಷಮೀ ಶಿನೇಃ ಸುತಾತ್ಮಜಃ ಶರಮ್ ।
ಅಥೋದ್ಬಬರ್ಹ ತತ್ಕ್ಷಣಾದ್ ಬಲಾನ್ಮುಮೋಚ ವಕ್ಷಸಿ ॥೧೭.೧೫೨॥

ಶಿನಿಯ ಮಗನಾದ ಸತ್ಯಕನ ಮಗನಾಗಿರುವ ಸಾತ್ಯಕಿಯು, ತಮ್ಮಿಬ್ಬರ ನಡುವೆ ಸಮಾನತೆಯನ್ನು ಸಹಿಸದೇ, ಬಾಣವೊಂದನ್ನು ತೆಗೆದ. ಆ ಕ್ಷಣದಲ್ಲಿ ತನ್ನೆಲ್ಲಾ ಬಲವನ್ನು ಬಳಸಿದ ಆತ,  ಆ ಬಾಣವನ್ನು ಶಿಶುಪಾಲನ  ಎದೆಯಲ್ಲಿ ನೆಟ್ಟ.

ಸ ತೇನ ತಾಡಿತೋsಪತದ್ ವಿಸಜ್ಞಕೋ ನೃಪಾತ್ಮಜಃ ।
ವಿಜಿತ್ಯ ತಂ ಸ ಸಾತ್ಯಕಿರ್ಯ್ಯಯೌ ಪ್ರಹೃಷ್ಟಮಾನಸಃ ॥೧೭.೧೫೩॥

ಶಿಶುಪಾಲನಾದರೋ ಆ ಬಾಣದಿಂದ ಹೊಡೆಯಲ್ಪಟ್ಟವನಾಗಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದ. ಸಾತ್ಯಕಿಯು ಶಿಶುಪಾಲನನ್ನು ಗೆದ್ದು, ಸಂತಸಗೊಂಡ ಮನಸ್ಸಿನವನಾಗಿ ಅಲ್ಲಿಂದ ತೆರಳಿದ.

Monday, May 11, 2020

Mahabharata Tatparya Nirnaya Kannada 17140_17145


ಸಸಙ್ಜ್ಞಕಾಃ ಸಮುತ್ಥಿತಾಸ್ತತೋ ನೃಪಾಃ ಪುನರ್ಯ್ಯಯುಃ ।
ಜಿಗೀಷವೋsಥ ರುಗ್ಮಿಣೀಂ ವಿಧಾಯ ಚೇದಿಪೇ ಹರಿಮ್ ॥೧೭.೧೪೦॥

ಶ್ರೀಕೃಷ್ಣ ದ್ವಾರಕೆಗೆ ತೆರಳಿದಮೇಲೆ,  ಪ್ರಜ್ಞೆ ಬಂದು ಮೇಲೆದ್ದ ರಾಜರೆಲ್ಲರೂ ತಮ್ಮ ರಾಜ್ಯಕ್ಕೆ ಹಿಂತಿರುಗಿದರು. ಕೆಲವು ಸಮಯ ನಂತರ, ಅವರು ರುಗ್ಮಿಣಿಯನ್ನು ಶಿಶುಪಾಲನಿಗೆ ಕೊಟ್ಟು, ಪರಮಾತ್ಮನನ್ನು ಗೆಲ್ಲಬೇಕೆಂದು ಬಯಸಿ ಮತ್ತೆ ಕುಣ್ಡಿನಪಟ್ಟಣಕ್ಕೆ ಬಂದರು. [ರುಗ್ಮಿಣಿಯನ್ನು ಶಿಶುಪಾಲನಿಗೆ ಕೊಟ್ಟು, ಅದರಿಂದ  ಶ್ರೀಕೃಷ್ಣನಿಗೆ ಉಂಟಾಗುವ ಮಾನಭಂಗದಿಂದ ಅವನನ್ನು ಗೆಲ್ಲುವ ಸಂಕಲ್ಪಮಾಡಿ ಬಂದರು]
 
ಸಮಸ್ತರಾಜಮಣ್ಡಲೇ ವಿನಿಶ್ಚಯಾದುಪಾಗತೇ ।
ಸಭೀಷ್ಮಕೇ ಚ ರುಗ್ಮಿಣೀ ಪ್ರದಾತುಮುದ್ಯತೇ ಮುದಾ ॥೧೭.೧೪೧॥

ಸಮಸ್ತಲೋಕಯೋಷಿತಾಂ ವರಾ ವಿದರ್ಭನನ್ದನಾ ।
ದ್ವಿಜೋತ್ತಮಂ ಹರೇಃ ಪದೋಃ ಸಕಾಶಮಾಶ್ವಯಾತಯತ್ ॥೧೭.೧೪೨॥

ಎಲ್ಲಾ ರಾಜರ ಸಮೂಹವು ರುಗ್ಮಿಣಿಯನ್ನು ಶಿಶುಪಾಲನಿಗೆ ಕೊಡಿಸುತ್ತೇವೆಂದು ನಿಶ್ಚಯದಿಂದ ಕುಣ್ಡಿನಪಟ್ಟಣಕ್ಕೆ ಬಂದು, ಭೀಷ್ಮಕನಿಂದ ಕೂಡಿ, ತನ್ನನ್ನು ಶಿಶುಪಾಲನಿಗೆ ಕೊಡಲು ಬಯಸುತ್ತಿರಲು, ಸಮಸ್ತಲೋಕದಲ್ಲಿರುವ ಎಲ್ಲಾ ಹೆಣ್ಣುಮಕ್ಕಳಿಗಿಂತ ಶ್ರೇಷ್ಠಳಾದ, ವಿದರ್ಭರಾಜನ ಮಗಳಾದ್ದರಿಂದ ವೈದರ್ಭೀ ಎನಿಸಿಕೊಂಡಿರುವ ರುಗ್ಮಿಣಿಯು, ಒಬ್ಬ ಶ್ರೇಷ್ಠ ಬ್ರಾಹ್ಮಣನನ್ನು ಪರಮಾತ್ಮನ ಪಾದಗಳ ಬಳಿಗೆ ತಕ್ಷಣ ಕಳುಹಿಸಿದಳು.
[ಭಾಗವತದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ:ಬಂಧೂನಾಮಿಚ್ಛತಾಂ ದಾತುಂ ಕೃಷ್ಣಾಯ ಭಗಿನೀಂ ನೃಪ । ರುಗ್ಮೀ ನಿವಾರ್ಯ ಕೃಷ್ಣದ್ವಿಟ್ ಚೈದ್ಯಾಯ ಸಮಕಲ್ಪಯತ್ । ತದವೇತ್ಯಾಸಿತಾಪಾಙ್ಗೀ ವೈದರ್ಭೀ ದುರ್ಮನಾ ಭೃಶಮ್ । ವಿಚಿಂತ್ಯಾsಪ್ತಂ ದ್ವಿಜಂ ಕಞ್ಚಿತ್ ಕೃಷ್ಣಾಯ ಪ್ರಾಹಿಣೋದ್ ದ್ರುತಮ್’ [೧೦.೫೭.೨೩-೨೪]  ಬಂಧುಗಳೆಲ್ಲರೂ ರುಗ್ಮಿಣಿಯನ್ನು ಶ್ರೀಕೃಷ್ಣನಿಗೆ ಕೊಡಬೇಕು ಎಂದು ಇಚ್ಛೆಪಡುತ್ತಿದ್ದಾರೆ, ಆದರೆ ರುಗ್ಮಿ ಒಬ್ಬ ಮಾತ್ರ ತಡೆದಿದ್ದಾನೆ. ಏಕೆಂದರೆ, ಅವನಿಗೆ ರುಗ್ಮಿಣಿಯನ್ನು   ಚೇದಿರಾಜನಾದ ಶಿಶುಪಾಲನಿಗೇ ಕೊಡಬೇಕು ಎನ್ನುವ ಚಿಂತನೆ. ಅದನ್ನು ತಿಳಿದ ಕಪ್ಪುಕಣ್ಣಿನ ನೋಟದವಳಾದ ರುಗ್ಮಿಣಿಯು ಬಹಳ ಸಂಕಟಪಟ್ಟು, ಒಬ್ಬ ಆಪ್ತ ದ್ವಿಜನನ್ನು ಶ್ರೀಕೃಷ್ಣನಿದ್ದಲ್ಲಿಗೆ ಕಳುಹಿಸಿಕೊಡುತ್ತಾಳೆ]

ನಿಶಮ್ಯ ತದ್ವಚೋ ಹರಿಃ ಕ್ಷಣಾದ್ ವಿದರ್ಭಕಾನಗಾತ್ ।
ತಮನ್ವಯಾದ್ಧಲಾಯುಧಃ ಸಮಸ್ತಯಾದವೈಃ ಸಹ ॥೧೭.೧೪೩॥

ಪರಮಾತ್ಮನು ಬ್ರಾಹ್ಮಣನ ಮೂಲಕವಾಗಿ ಬಂದ ಅವಳ ಮಾತನ್ನು ಕೇಳಿ, ಒಂದು ಕ್ಷಣದಲ್ಲಿಯೇ ವಿದರ್ಭದೇಶಕ್ಕೆ (ಇಂದಿನ ನಾಗಪುರಕ್ಕೆ) ಬಂದನು. ಬಲರಾಮನು ಎಲ್ಲಾ ಯಾದವರಿಂದ ಕೂಡಿಕೊಂಡು ಶ್ರೀಕೃಷ್ಣನನ್ನು ಅನುಸರಿಸಿದನು.
[ಇಲ್ಲಿ ಕ್ಷಣಾತ್  ಎಂದು ಆಚಾರ್ಯರು ಹೇಳಿದ್ದಾರೆ. ಭಾಗವತದಲ್ಲಿ ಈ ಕುರಿತ ವಿವರಣೆ ಕಾಣಸಿಗುತ್ತದೆ:   ‘ಆನರ್ತಾದೇಕರಾತ್ರೇಣ ವಿದರ್ಭಾನಗಮದ್ಧಯೈಃ’ [೧೦.೫೮.೬], ‘ಶ್ರುತ್ವೈತದ್ ಭಗವಾನ್ ರಾಮೋ ವಿಪಕ್ಷೀಯನೃಪೋದ್ಯಮಾನ್ । ಕೃಷ್ಣಂ ಚೈಕಂ ಗತಂ ಹರ್ತುಂ  ಕನ್ಯಾಂ ಕಲಹಶಙ್ಕಿತಃ । ಬಲೇನ ಮಹತಾ ಸಾರ್ಧಂ ಭಾರ್ತೃಸ್ನೇಹಪರಿಪ್ಲುತಃ । ತ್ವರಿತಃ ಕುಣ್ಡಿನಂ ಪ್ರಾಯಾದ್  ಗಜಾಶ್ವರಥಪತ್ತಿಭಿಃ’(೫೮.೨೦-೨೧)]

ಸಮಸ್ತರಾಜಮಣ್ಡಲಂ ಪ್ರಯಾನ್ತಮೀಕ್ಷ್ಯ ಕೇಶವಮ್ ।
ಸುಯತ್ತಮಾತ್ತಕಾರ್ಮುಕಂ ಬಭೂವ ಕನ್ಯಕಾವನೇ ॥೧೭.೧೪೪॥

ಕೇಶವನು ಬರುತ್ತಿದ್ದಾನೆಂದು ತಿಳಿದು, ಎಲ್ಲಾ ರಾಜರ ಸಮೂಹವು ಪ್ರಯತ್ನಪಟ್ಟು, ಬಿಲ್ಲುಬಾಣಗಳನ್ನು ಹಿಡಿದು, ಗೌರೀ ದೇವಸ್ಥಾನದ ಹತ್ತಿರ ನಿಂತರು.
[ಆ ಕಾಲದಲ್ಲಿ ಮದುವೆಗೆ ಸಿದ್ಧವಾಗಿರುವ ವಧು, ಮದುವೆ ಪೂರ್ವದಲ್ಲಿ ಪಾರ್ವತಿಯನ್ನು ಪೂಜಿಸುವುದು ಒಂದು ಸಂಪ್ರದಾಯವಾಗಿತ್ತು. ಇಲ್ಲಿ ದೇವಸ್ಥಾನ ನಗರದ ಹೊರಭಾಗದಲ್ಲಿದ್ದುದರಿಂದ ವಧು ಅಲ್ಲಿಗೆ ಹೋಗಿ ಬರಬೇಕಾಗಿತ್ತು]

ಪುರಾ ಪ್ರದಾನತಃ ಸುರೇಕ್ಷಣಚ್ಛಲಾದ್ ಬಹಿರ್ಗ್ಗತಾಮ್ ।
ರಥೇ ನ್ಯವೇಶಯದ್ಧರಿಃ ಪ್ರಪಶ್ಯತಾಂ ಚ ಭೂಭೃತಾಮ್ ॥೧೭.೧೪೫॥

ಮದುವೆಗಿಂತ ಮೊದಲು, ದೇವತೆಯನ್ನು ಕಾಣುವ ನೆಪದಿಂದ ಹೊರಗಡೆ ಬಂದ ರುಗ್ಮಿಣಿಯನ್ನು ಎಲ್ಲಾ ರಾಜರು ನೋಡುತ್ತಿರುವಾಗಲೇ ಪರಮಾತ್ಮನು ತನ್ನ ರಥದಲ್ಲಿ ಕೂರಿಸಿಕೊಂಡ.
[ಹರಿವಂಶದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ:  ಶ್ವೋಭಾವಿನಿ ವಿವಾಹೇ ಚ ರುಗ್ಮಿಣೀ  ನಿರ್ಯಯೌ ಬಹಿಃ  । ಚತುರ್ಯುಜಾ ರಥೇನೈಂದ್ರೇ ದೇವತಾಯತನೇ ಶುಭೇ । ಇಂದ್ರಾಣಿಮರ್ಚಯಿಷ್ಯಂತೀ ಕೃತಕೌತುಕಮಙ್ಗಲಾ ।  ದೀಪ್ಯಮಾನೇನ ವಪುಷಾ ಬಲೇನ  ಮಹಾತಾssವೃತಾ’ (ವಿಷ್ಣುಪರ್ವಣಿ ೫೯.೩೩-೩೪), ಮದುವೆಯ ಮುಂಚಿನ ದಿನ  ರುಗ್ಮಿಣಿಯು ನಾಲ್ಕು ಕುದುರೆಗಳು ಕೂಡಿದ ರಥದಲ್ಲಿ  ಕುಳಿತು ಶಚಿಯನ್ನು ಅರ್ಚಿಸುವವಳಾಗಿ ಬಂದಳು.
ಭಾಗವತದಲ್ಲಿ ಹೇಳುವಂತೆ:   ‘ಕನ್ಯಾ ಚಾನ್ತಃಪುರಾತ್ ಪ್ರಾಗಾತ್  ಭಟೈರ್ಗುಪ್ತಾsಮ್ಬಿಕಾಲಯಮ್ । ಪದ್ಭ್ಯಾಮ್ ವಿನಿರ್ಯಯೌ ದ್ರಷ್ಟುಂ ಭವಾನ್ಯಾಃ ಪಾದಪಙ್ಕಜಮ್’(೧೦.೫೮.೪೦) ಭಟರಿಂದ ರಕ್ಷಿತಳಾಗಿ ಅಂಬಿಕಾವನಕ್ಕೆ ಆಕೆ ನಡೆದುಕೊಂಡು ಹೋದಳು.
ಒಟ್ಟಿನಲ್ಲಿ ಇಲ್ಲಿ ಹೇಳಿರುವ ವಿಷಯ ಇಷ್ಟು: ಹರಿವಂಶದಲ್ಲಿ ಹೇಳಿರುವುದು ಊರಿನಿಂದ ದೂರವಿರುವ  ದೇವಸ್ಥಾನಕ್ಕೆ ಆಕೆ ರಥದಲ್ಲಿ ಬಂದಿರುವ ವಿಷಯವನ್ನು. ಸಮೀಪದಲ್ಲೇ ಇರುವ ಪಾರ್ವತೀ ಹಾಗೂ   ಶಚೀ ದೇವಸ್ಥಾನದ ನಡುವೆ ಆಕೆ ನಡೆದುಕೊಂಡು ಹೋದಳು ಎನ್ನುವುದನ್ನು ಭಾಗವತ ಹೇಳಿದೆ. ಈ ಮಾತನ್ನು ಭಾಗವತವೇ ಸ್ಪಷ್ಟವಾಗಿ ಹೇಳಿರುವುದನ್ನೂ ನಾವು ಕಾಣಬಹುದು. ‘ಮುನಿವ್ರತಮಥ ತ್ಯಕ್ತ್ವಾ ನಿಶ್ಚಕ್ರಾಮಾಮ್ಬಿಕಾಗೃಹಾತ್ । ಉಪಕಣ್ಠೇ ಸುರೇಶಸ್ಯ ಪೌಲೋಮ್ಯಾಶ್ಚ  ನಿಕೇತನಮ್[೫೮.೫೯] ಮೌನ ವ್ರತವನ್ನು ಬಿಟ್ಟು, ಪಾರ್ವತೀ ದೇವಸ್ಥಾನದಿಂದ ಹೊರ ಬಂದಳು. ಅಲ್ಲೇ ಇರುವ ಶಚೀ ದೇವಸ್ಥಾನಕ್ಕೆ ಅವರು ಹೊರಟಿದ್ದರು].

Saturday, May 2, 2020

Mahabharata Tatparya Nirnaya Kannada 17132_17139


ಸ ತಸ್ಯ ದೃಷ್ಟಿಮಾತ್ರತೋ ಬಭೂವ ಭಸ್ಮಸಾತ್ ಕ್ಷಣಾತ್ ।
ಸ ಏವ ವಿಷ್ಣುರವ್ಯಯೋ ದದಾಹ ತಂ ಹಿ ವಹ್ನಿವತ್ ॥೧೭.೧೩೨॥

ಕಾಲಯವನನು ಮುಚುಕುನ್ದನ ದೃಷ್ಟಿಮಾತ್ರದಿಂದ ಕ್ಷಣದಲ್ಲಿ ಭಸ್ಮವಾಗಿ ಹೋದ.  [ಮುಚುಕುನ್ದ ಪಡೆದಿದ್ದು ದೇವತೆಗಳ ವರ. ಕಾಲಯವನ ಪಡೆದಿದ್ದು ರುದ್ರನ ವರ. ಹೀಗಿರುವಾಗ ಮುಚುಕುನ್ದನಿಂದ ಕಾಲಯವನ ಹೇಗೆ ಭಸ್ಮವಾದ? ದೇವತೆಗಳ ವರದ ಮುಂದೆ ರುದ್ರನ ವರ ಹೇಗೆ ಸೋತಿತು ಎಂದರೆ:] ‘ದೇವತೆಗಳಿಗೆ ವರವನ್ನು ನೀಡಿದ್ದ ನಾಶವಿಲ್ಲದ ಆ ವಿಷ್ಣುವೇ ಬೆಂಕಿಯಂತೆ ಕಾಲಯವನನನ್ನು ಸುಟ್ಟ’ ಎನ್ನುವ ನಿರ್ಣಯವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ. 

[ಈ ವಿಷಯವನ್ನು ಹರಿವಂಶದಲ್ಲೂ(ವಿಷ್ಣುಪರ್ವಣಿ ೫೭.೫೫) ಸ್ಪಷ್ಟವಾಗಿ ಹೇಳಿರುವುದನ್ನು ಕಾಣಬಹುದು: ‘ದದಾಹ ಪಾವಕಸ್ತಂ  ತು ಶುಷ್ಕಂ  ವೃಕ್ಷಮಿವಾಶನಿಃ’ ]

ವರಾಚ್ಛಿವಸ್ಯ ದೈವತೈರವಧ್ಯದಾನವಾನ್ ಪುರಾ ।
ಹರೇರ್ವರಾನ್ನಿಹತ್ಯ ಸ ಪ್ರಪೇದ ಆಶ್ವಿಮಂ ವರಮ್ ॥೧೭.೧೩೩॥

ಶಿವನ ವರದಿಂದ ದೇವತೆಗಳಿಂದ ಕೊಲ್ಲಲು ಸಾಧ್ಯವಾಗದ ದಾನವರನ್ನು, ಶ್ರೀಹರಿಯಿಂದ ತಾನು ಪಡೆದ ವರಬಲದಿಂದ ಮುಚುಕುನ್ದ ಕೊಂದನು. ಯುದ್ಧಾನಂತರ ಮುಚುಕುನ್ದನು ಕೂಡಲೇ ಮೇಲೆ ಹೇಳಿದ ವರವನ್ನು ದೇವತೆಗಳಿಂದ ಹೊಂದಿದನು.
[ಶಿವನ ವರದಿಂದ ದೈತ್ಯರು ಅವಧ್ಯರಾಗಿದ್ದರು. ಅವರನ್ನು ದೇವತೆಗಳಿಂದ ಕೊಲ್ಲಲಾಗುತ್ತಿರಲಿಲ್ಲ. ಮುಚುಕುನ್ದ ನಾರಾಯಣನ ವರಬಲದಿಂದ ಕೊಲ್ಲಬಲ್ಲವನಾಗಿದ್ದ. ಹಾಗಾಗಿ ದೇವತೆಗಳು ಅವನನ್ನು ಬಳಸಿಕೊಂಡರು. ಆದರೆ ಯುದ್ಧಾನಂತರ ಬಹಳ ಬಳಲಿದ್ದ ಮುಚುಕುನ್ದ ದೇವತೆಗಳಲ್ಲಿ ವರವನ್ನು ಬೇಡಿದ:] 

ಸುದೀರ್ಘಸುಪ್ತಿಮಾತ್ಮನಃ ಪ್ರಸುಪ್ತಿಭಙ್ಗಕೃತ್ ಕ್ಷಯಮ್ ।
ಸ್ವದೃಷ್ಟಿಮಾತ್ರತಸ್ತತೋ ಹತಃ ಸ ಯಾವನಸ್ತದಾ ॥೧೭.೧೩೪॥

ತನಗೆ ಧೀರ್ಘವಾದ ನಿದ್ದೆಯನ್ನೂ ಹಾಗೂ ನಿದ್ರಿಸುತ್ತಿರುವಾಗ, ದೃಷ್ಟಿಮಾತ್ರದಿಂದಲೇ ನಿದ್ರೆಯನ್ನು ಭಂಗ ಮಾಡಿದವನ  ಸಾವನ್ನೂ ಆತ ವರವಾಗಿ ಕೇಳಿ ಪಡೆದಿದ್ದ. ಆ ಕಾರಣದಿಂದ,  ಕಾಲಯವನನು ಮುಚುಕುನ್ದನ ದೃಷ್ಟಿಮಾತ್ರದಿಂದ ಕೊಲ್ಲಲ್ಪಟ್ಟನು.

ಅತಶ್ಚ ಪುಣ್ಯಮಾಪ್ತವಾನ್ ಸುರಪ್ರಸಾದತೋsಕ್ಷಯಮ್ ।
ಸ ಯೌವನಾಶ್ವಜೋ ನೃಪೋ ನ ದೇವತೋಷಣಂ ವೃಥಾ ॥೧೭.೧೩೫॥

ಹೀಗೆ ಕಾಲಯವನನನ್ನು ಕೊಂದದ್ದರಿಂದ, ಕೃಷ್ಣನ ಕಾರ್ಯದಲ್ಲಿ ತೊಡಗಿದ ಪುಣ್ಯ ಮುಚುಕುನ್ದನಿಗೆ ಬಂತು. ಇದೆಲ್ಲವೂ ದೇವತೆಗಳ ಅನುಗ್ರಹದಿಂದಲೇ ನಡೆಯಿತು. ಹೀಗೆ ಮುಚುಕುನ್ದ ಎಂದೂ ಬರಿದಾಗದ ಪುಣ್ಯವನ್ನು ಹೊಂದಿದ. 
[ಇದರ ತಾತ್ಪರ್ಯ: ದೇವತೆಗಳನ್ನು ಸಂತೋಷಪಡಿಸುವುದು ಯಾವತ್ತೂ ವ್ಯರ್ಥವಾಗುವುದಿಲ್ಲ. ವರ್ತಮಾನದಲ್ಲಿ ನಮ್ಮ  ಕರ್ಮದಿಂದ ಬೇರೆ ತೋರಿದರೂ, ಒಟ್ಟಿನಲ್ಲಿ ಒಳ್ಳೆಯದಂತೂ ಆಗೇ ಆಗುತ್ತದೆ]

ತತೋ ಹರಿಂ ನಿರೀಕ್ಷ್ಯ ಸ ಸ್ತುತಿಂ ವಿಧಾಯ ಚೋತ್ತಮಾಮ್ ।
ಹರೇರನುಜ್ಞಯಾ ತಪಶ್ಚಚಾರ ಮುಕ್ತಿಮಾಪ ಚ ॥೧೭.೧೩೬॥

ಕಾಲಯವನ ಭಸ್ಮವಾದ ನಂತರ ಮುಚುಕುನ್ದ ಪರಮಾತ್ಮನನ್ನು ಕಂಡು, ಉತ್ಕೃಷ್ಟವಾದ ಸ್ತೋತ್ರವನ್ನು ಮಾಡಿದ.  ಪರಮಾತ್ಮನ ಅನುಜ್ಞೆಯಿಂದ ತಪಸ್ಸನ್ನು ಮಾಡಿ, ಮುಕ್ತಿಯನ್ನು ಹೊಂದಿದ ಕೂಡಾ.

ತತೋ ಗುಹಾಮುಖಾದ್ಧರಿರ್ವಿನಿಸ್ಸೃತೋ ಜರಾಸುತಮ್ ।
ಸಮಸ್ತಭೂಪಸಂವೃತಂ ಜಿಗಾಯ ಬಾಹುನೇಶ್ವರಃ ॥೧೭.೧೩೭॥

ತದನಂತರ ಗುಹೆಯಿಂದ ಹೊರಬಂದ ಕೃಷ್ಣನು, ಎಲ್ಲಾ ರಾಜರಿಂದ ಕೂಡಿಕೊಂಡ ಜರಾಸಂಧನನ್ನು ಕೇವಲ ತನ್ನ ಕೈಗಳಿಂದ ಹೊಡೆದೋಡಿಸಿದನು.  ಅವನು ಸರ್ವಸಮರ್ಥನಲ್ಲವೇ? ಇದರಲ್ಲೇನು ಅಚ್ಚರಿ?


ತಳೇನ ಮುಷ್ಟಿಭಿಸ್ತಥಾ ಮಹೀರುಹೈಶ್ಚ ಚೂರ್ಣ್ಣಿತಾಃ ।
ನಿಪೇತುರಸ್ಯ ಸೈನಿಕಾಃ ಸ್ವಯಂ ಚ ಮೂರ್ಚ್ಛಿತೋsಪತತ್ ॥೧೭.೧೩೮॥

ಕೈತಳದಿಂದ, ಮುಷ್ಠಿಯಿಂದ, ಮರಗಳಿಂದಲೂ ಕೂಡಾ ಹೊಡೆಯಲ್ಪಟ್ಟ ಜರಾಸಂಧನ ಸೈನಿಕರು ಚೂರ್ಣೀಕೃತರಾಗಿ  ಬಿದ್ದರು. ಜರಾಸಂಧನೂ ಕೂಡಾ ಮೂರ್ಛಿತನಾಗಿ ಬಿದ್ದ.

ಸಸಾಲ್ವಪೌಣ್ಡ್ರಚೇದಿಪಾನ್ ನಿಪಾತ್ಯ ಸರ್ವಭೂಭುಜಃ ।
ಸ ಪುಪ್ಲುವೇ ಜನಾರ್ದ್ದನಃ ಕ್ಷಣೇನ ತಾಂ ಕುಶಸ್ಥಲೀಮ್ ॥೧೭.೧೩೯॥

ಸಾಲ್ವ, ಪೌಣ್ಡ್ರ, ಶಿಶುಪಾಲ, ಇವರೆಲ್ಲರನ್ನೊಳಗೊಂಡ ಸಮಸ್ತ ರಾಜರನ್ನೂ ಕೂಡಾ ಬೀಳಿಸಿದ ಶ್ರೀಕೃಷ್ಣ,  ಕ್ಷಣಮಾತ್ರದಲ್ಲಿ ತನ್ನ ನಗರವಾದ ದ್ವಾರಕೆಯನ್ನು ಕುರಿತು ಹಾರಿದ.