ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, May 13, 2020

Mahabharata Tatparya Nirnaya Kannada 17146_17153


ಜರಾಸುತಾದಯೋ ರುಷಾ ತಮಭ್ಯಯುಃ ಶರೋತ್ತಮೈಃ ।
ವಿಧಾಯ ತಾನ್ ನಿರಾಯುಧಾನ್ ಜಗಾಮ ಕೇಶವಃ ಶನೈಃ ॥೧೭.೧೪೬॥

ಜರಾಸಂಧ ಮೊದಲಾದವರು ಸಿಟ್ಟಿನಿಂದ,  ಉತ್ಕೃಷ್ಟ ಬಾಣಗಳನ್ನು ಹೂಡಿ, ಶ್ರೀಕೃಷ್ಣನನ್ನು ಎದುರುಗೊಂಡರು. ಕೃಷ್ಣನು ಅವರನ್ನು ನಿರಾಯುಧರನ್ನಾಗಿ ಮಾಡಿ, ನಿಧಾನವಾಗಿ ಮುನ್ನಡೆದನು.

ಪುನರ್ಗ್ಗೃಹೀತಕಾರ್ಮ್ಮುಕಾನ್ ಹರಿಂ ಪ್ರಯಾತುಮುದ್ಯತಾನ್ ।
ನ್ಯವಾರಯದ್ಧಲಾಯುಧೋ ಬಲಾದ್ ಬಲೋರ್ಜ್ಜಿತಾಗ್ರಣೀಃ ॥೧೭.೧೪೭॥

ಪುನಃ ಬಿಲ್ಲುಗಳನ್ನು ಎತ್ತಿಕೊಂಡು ಪರಮಾತ್ಮನತ್ತ ತೆರಳಲು ಸಿದ್ಧರಾದ ಜರಾಸಂಧಾದಿಗಳನ್ನು,  ಬಲದಲ್ಲಿ ಶ್ರೇಷ್ಠರಾಗಿರುವವರನ್ನೇ ಸೈನಿಕರನ್ನಾಗಿ ಹೊಂದಿರುವ ಬಲರಾಮನು ತನ್ನ  ಸೈನ್ಯದೊಂದಿಗೆ  ಕೂಡಿಕೊಂಡು ತಡೆದನು.

ತದಾ ಸಿತಃ ಶಿರೋರುಹೋ ಹರೇರ್ಹಲಾಯುಧಸ್ಥಿತಃ ।
ಪ್ರಕಾಶಮಾವಿಶದ್ ಬಲಂ ವಿಜೇತುಮತ್ರ ಮಾಗಧಮ್ ॥೧೭.೧೪೮॥

ಆಗ ಬಲರಾಮನಲ್ಲಿರತಕ್ಕ ಪರಮಾತ್ಮನ ಶುಕ್ಲಕೇಶವು ಈ ಯುದ್ಧದಲ್ಲಿ ಜರಾಸಂಧನನ್ನು ಗೆಲ್ಲಲು ಅವನಿಗೆ  ಬಲವನ್ನು ಪ್ರಕಾಶಗೊಳಿಸಿತು. [ಪರಮಾತ್ಮನ ವಿಶೇಷ ಆವೇಶ ಬಲರಾಮನಲ್ಲಿ ಇದ್ದದ್ದರಿಂದ ಅವನಿಗೆ  ಜರಾಸಂಧನನ್ನು ಗೆಲ್ಲಲು ಸಾಧ್ಯವಾಯಿತು]

ಸ ತಸ್ಯ ಮಾಗಧೋ ರಣೇ ಗದಾನಿಪಾತಚೂರ್ಣ್ಣಿತಃ ।
ಪಪಾತ ಭೂತಳೇ ಬಲೋ ವಿಜಿತ್ಯ ತಂ ಯಯೌ ಪುರೀಮ್ ॥೧೭.೧೪೯॥

ಜರಾಸಂಧನು ಬಲರಾಮನ ಗದಾಪ್ರಹಾರದಿಂದ ಭೂಮಿಯಲ್ಲಿ ಬಿದ್ದ. ಹೀಗೆ ಬಲರಾಮನು ಜರಾಸಂಧನನ್ನು ಗೆದ್ದು, ದ್ವಾರಕಾ ಪಟ್ಟಣದತ್ತ ತೆರಳಿದನು.

ವರೋರುವೇಷಸಂವೃತೋsಥ ಚೇದಿರಾಟ್ ಸಮಭ್ಯಯಾತ್ ।
ತಮಾಸಸಾರ ಸಾತ್ಯಕಿರ್ನ್ನದನ್ ಮೃಗಾಧಿಪೋ ಯಥಾ ॥೧೭.೧೫೦॥

ಸ್ವಲ್ಪಕಾಲ ಕಳೆದ ನಂತರ, ಮದುಮಗನ ವೇಷದಿಂದ ಕೂಡಿರುವ ಶಿಶುಪಾಲನು ಯುದ್ಧಕ್ಕೆ ಬಂದನು. ಸಾತ್ಯಕಿಯು  ಗರ್ಜಿಸುವ ಸಿಂಹವೋ ಎಂಬಂತೆ ಅವನನ್ನು ಎದುರುಗೊಂಡ.

ಚಿರಂ ಪ್ರಯುದ್ಧ್ಯ ತಾವುಭೌ ವರಾಸ್ತ್ರಶಸ್ತ್ರವರ್ಷಿಣೌ ।
ಕ್ರುಧಾ ನಿರೀಕ್ಷ್ಯ ತಸ್ಥತುಃ ಪರಸ್ಪರಂ ಸ್ಫುರತ್ತನೂ ॥೧೭.೧೫೧॥

ಉತ್ಕೃಷ್ಟವಾದ ಅಸ್ತ್ರಗಳ ಹಾಗೂ ಶಸ್ತ್ರಗಳ ಮಳೆಗರೆಯುತ್ತಿರುವ ಆ ಶಿಶುಪಾಲ-ಸಾತ್ಯಕಿ, ನಿರಂತರವಾಗಿ ಬಹಳಕಾಲ ಯುದ್ಧಮಾಡಿ, ಪರಸ್ಪರ ಗೆಲ್ಲಲಾಗದೇ, ಸಿಟ್ಟಿನಿಂದ ಒಬ್ಬರನ್ನೊಬ್ಬರು ನೋಡಿಕೊಂಡೇ ಕೆಲವುಕಾಲ ಕಳೆದರು.

ಸಮಾನಭಾವಮಕ್ಷಮೀ ಶಿನೇಃ ಸುತಾತ್ಮಜಃ ಶರಮ್ ।
ಅಥೋದ್ಬಬರ್ಹ ತತ್ಕ್ಷಣಾದ್ ಬಲಾನ್ಮುಮೋಚ ವಕ್ಷಸಿ ॥೧೭.೧೫೨॥

ಶಿನಿಯ ಮಗನಾದ ಸತ್ಯಕನ ಮಗನಾಗಿರುವ ಸಾತ್ಯಕಿಯು, ತಮ್ಮಿಬ್ಬರ ನಡುವೆ ಸಮಾನತೆಯನ್ನು ಸಹಿಸದೇ, ಬಾಣವೊಂದನ್ನು ತೆಗೆದ. ಆ ಕ್ಷಣದಲ್ಲಿ ತನ್ನೆಲ್ಲಾ ಬಲವನ್ನು ಬಳಸಿದ ಆತ,  ಆ ಬಾಣವನ್ನು ಶಿಶುಪಾಲನ  ಎದೆಯಲ್ಲಿ ನೆಟ್ಟ.

ಸ ತೇನ ತಾಡಿತೋsಪತದ್ ವಿಸಜ್ಞಕೋ ನೃಪಾತ್ಮಜಃ ।
ವಿಜಿತ್ಯ ತಂ ಸ ಸಾತ್ಯಕಿರ್ಯ್ಯಯೌ ಪ್ರಹೃಷ್ಟಮಾನಸಃ ॥೧೭.೧೫೩॥

ಶಿಶುಪಾಲನಾದರೋ ಆ ಬಾಣದಿಂದ ಹೊಡೆಯಲ್ಪಟ್ಟವನಾಗಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದ. ಸಾತ್ಯಕಿಯು ಶಿಶುಪಾಲನನ್ನು ಗೆದ್ದು, ಸಂತಸಗೊಂಡ ಮನಸ್ಸಿನವನಾಗಿ ಅಲ್ಲಿಂದ ತೆರಳಿದ.

No comments:

Post a Comment