ಸ ತಸ್ಯ
ದೃಷ್ಟಿಮಾತ್ರತೋ ಬಭೂವ ಭಸ್ಮಸಾತ್ ಕ್ಷಣಾತ್ ।
ಸ ಏವ
ವಿಷ್ಣುರವ್ಯಯೋ ದದಾಹ ತಂ ಹಿ ವಹ್ನಿವತ್ ॥೧೭.೧೩೨॥
ಕಾಲಯವನನು ಮುಚುಕುನ್ದನ ದೃಷ್ಟಿಮಾತ್ರದಿಂದ ಕ್ಷಣದಲ್ಲಿ ಭಸ್ಮವಾಗಿ ಹೋದ. [ಮುಚುಕುನ್ದ ಪಡೆದಿದ್ದು ದೇವತೆಗಳ ವರ. ಕಾಲಯವನ ಪಡೆದಿದ್ದು
ರುದ್ರನ ವರ. ಹೀಗಿರುವಾಗ ಮುಚುಕುನ್ದನಿಂದ ಕಾಲಯವನ ಹೇಗೆ ಭಸ್ಮವಾದ? ದೇವತೆಗಳ ವರದ ಮುಂದೆ
ರುದ್ರನ ವರ ಹೇಗೆ ಸೋತಿತು ಎಂದರೆ:] ‘ದೇವತೆಗಳಿಗೆ ವರವನ್ನು ನೀಡಿದ್ದ ನಾಶವಿಲ್ಲದ ಆ ವಿಷ್ಣುವೇ ಬೆಂಕಿಯಂತೆ ಕಾಲಯವನನನ್ನು ಸುಟ್ಟ’
ಎನ್ನುವ ನಿರ್ಣಯವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ.
[ಈ ವಿಷಯವನ್ನು ಹರಿವಂಶದಲ್ಲೂ(ವಿಷ್ಣುಪರ್ವಣಿ ೫೭.೫೫) ಸ್ಪಷ್ಟವಾಗಿ ಹೇಳಿರುವುದನ್ನು
ಕಾಣಬಹುದು: ‘ದದಾಹ ಪಾವಕಸ್ತಂ ತು
ಶುಷ್ಕಂ ವೃಕ್ಷಮಿವಾಶನಿಃ’ ]
ವರಾಚ್ಛಿವಸ್ಯ
ದೈವತೈರವಧ್ಯದಾನವಾನ್ ಪುರಾ ।
ಹರೇರ್ವರಾನ್ನಿಹತ್ಯ
ಸ ಪ್ರಪೇದ ಆಶ್ವಿಮಂ ವರಮ್ ॥೧೭.೧೩೩॥
ಶಿವನ ವರದಿಂದ ದೇವತೆಗಳಿಂದ ಕೊಲ್ಲಲು ಸಾಧ್ಯವಾಗದ ದಾನವರನ್ನು, ಶ್ರೀಹರಿಯಿಂದ ತಾನು ಪಡೆದ
ವರಬಲದಿಂದ ಮುಚುಕುನ್ದ ಕೊಂದನು. ಯುದ್ಧಾನಂತರ ಮುಚುಕುನ್ದನು ಕೂಡಲೇ ಮೇಲೆ ಹೇಳಿದ ವರವನ್ನು ದೇವತೆಗಳಿಂದ
ಹೊಂದಿದನು.
[ಶಿವನ ವರದಿಂದ ದೈತ್ಯರು ಅವಧ್ಯರಾಗಿದ್ದರು. ಅವರನ್ನು ದೇವತೆಗಳಿಂದ
ಕೊಲ್ಲಲಾಗುತ್ತಿರಲಿಲ್ಲ. ಮುಚುಕುನ್ದ ನಾರಾಯಣನ ವರಬಲದಿಂದ ಕೊಲ್ಲಬಲ್ಲವನಾಗಿದ್ದ. ಹಾಗಾಗಿ
ದೇವತೆಗಳು ಅವನನ್ನು ಬಳಸಿಕೊಂಡರು. ಆದರೆ ಯುದ್ಧಾನಂತರ ಬಹಳ ಬಳಲಿದ್ದ ಮುಚುಕುನ್ದ ದೇವತೆಗಳಲ್ಲಿ ವರವನ್ನು
ಬೇಡಿದ:]
ಸುದೀರ್ಘಸುಪ್ತಿಮಾತ್ಮನಃ
ಪ್ರಸುಪ್ತಿಭಙ್ಗಕೃತ್ ಕ್ಷಯಮ್ ।
ಸ್ವದೃಷ್ಟಿಮಾತ್ರತಸ್ತತೋ
ಹತಃ ಸ ಯಾವನಸ್ತದಾ ॥೧೭.೧೩೪॥
ತನಗೆ ಧೀರ್ಘವಾದ ನಿದ್ದೆಯನ್ನೂ ಹಾಗೂ ನಿದ್ರಿಸುತ್ತಿರುವಾಗ, ದೃಷ್ಟಿಮಾತ್ರದಿಂದಲೇ ನಿದ್ರೆಯನ್ನು
ಭಂಗ ಮಾಡಿದವನ ಸಾವನ್ನೂ ಆತ ವರವಾಗಿ ಕೇಳಿ
ಪಡೆದಿದ್ದ. ಆ ಕಾರಣದಿಂದ, ಕಾಲಯವನನು ಮುಚುಕುನ್ದನ
ದೃಷ್ಟಿಮಾತ್ರದಿಂದ ಕೊಲ್ಲಲ್ಪಟ್ಟನು.
ಅತಶ್ಚ
ಪುಣ್ಯಮಾಪ್ತವಾನ್ ಸುರಪ್ರಸಾದತೋsಕ್ಷಯಮ್ ।
ಸ
ಯೌವನಾಶ್ವಜೋ ನೃಪೋ ನ ದೇವತೋಷಣಂ ವೃಥಾ ॥೧೭.೧೩೫॥
ಹೀಗೆ ಕಾಲಯವನನನ್ನು ಕೊಂದದ್ದರಿಂದ, ಕೃಷ್ಣನ ಕಾರ್ಯದಲ್ಲಿ ತೊಡಗಿದ ಪುಣ್ಯ ಮುಚುಕುನ್ದನಿಗೆ ಬಂತು.
ಇದೆಲ್ಲವೂ ದೇವತೆಗಳ ಅನುಗ್ರಹದಿಂದಲೇ ನಡೆಯಿತು. ಹೀಗೆ ಮುಚುಕುನ್ದ ಎಂದೂ ಬರಿದಾಗದ ಪುಣ್ಯವನ್ನು
ಹೊಂದಿದ.
[ಇದರ ತಾತ್ಪರ್ಯ: ದೇವತೆಗಳನ್ನು ಸಂತೋಷಪಡಿಸುವುದು ಯಾವತ್ತೂ ವ್ಯರ್ಥವಾಗುವುದಿಲ್ಲ. ವರ್ತಮಾನದಲ್ಲಿ
ನಮ್ಮ ಕರ್ಮದಿಂದ ಬೇರೆ ತೋರಿದರೂ, ಒಟ್ಟಿನಲ್ಲಿ ಒಳ್ಳೆಯದಂತೂ
ಆಗೇ ಆಗುತ್ತದೆ]
ತತೋ ಹರಿಂ
ನಿರೀಕ್ಷ್ಯ ಸ ಸ್ತುತಿಂ ವಿಧಾಯ ಚೋತ್ತಮಾಮ್ ।
ಹರೇರನುಜ್ಞಯಾ
ತಪಶ್ಚಚಾರ ಮುಕ್ತಿಮಾಪ ಚ ॥೧೭.೧೩೬॥
ಕಾಲಯವನ ಭಸ್ಮವಾದ ನಂತರ ಮುಚುಕುನ್ದ ಪರಮಾತ್ಮನನ್ನು ಕಂಡು, ಉತ್ಕೃಷ್ಟವಾದ ಸ್ತೋತ್ರವನ್ನು
ಮಾಡಿದ. ಪರಮಾತ್ಮನ ಅನುಜ್ಞೆಯಿಂದ ತಪಸ್ಸನ್ನು
ಮಾಡಿ, ಮುಕ್ತಿಯನ್ನು ಹೊಂದಿದ ಕೂಡಾ.
ತತೋ
ಗುಹಾಮುಖಾದ್ಧರಿರ್ವಿನಿಸ್ಸೃತೋ ಜರಾಸುತಮ್ ।
ಸಮಸ್ತಭೂಪಸಂವೃತಂ
ಜಿಗಾಯ ಬಾಹುನೇಶ್ವರಃ ॥೧೭.೧೩೭॥
ತದನಂತರ ಗುಹೆಯಿಂದ ಹೊರಬಂದ ಕೃಷ್ಣನು, ಎಲ್ಲಾ ರಾಜರಿಂದ ಕೂಡಿಕೊಂಡ ಜರಾಸಂಧನನ್ನು ಕೇವಲ
ತನ್ನ ಕೈಗಳಿಂದ ಹೊಡೆದೋಡಿಸಿದನು. ಅವನು ಸರ್ವಸಮರ್ಥನಲ್ಲವೇ? ಇದರಲ್ಲೇನು ಅಚ್ಚರಿ?
ತಳೇನ
ಮುಷ್ಟಿಭಿಸ್ತಥಾ ಮಹೀರುಹೈಶ್ಚ ಚೂರ್ಣ್ಣಿತಾಃ ।
ನಿಪೇತುರಸ್ಯ ಸೈನಿಕಾಃ
ಸ್ವಯಂ ಚ ಮೂರ್ಚ್ಛಿತೋsಪತತ್ ॥೧೭.೧೩೮॥
ಕೈತಳದಿಂದ, ಮುಷ್ಠಿಯಿಂದ, ಮರಗಳಿಂದಲೂ
ಕೂಡಾ ಹೊಡೆಯಲ್ಪಟ್ಟ ಜರಾಸಂಧನ ಸೈನಿಕರು ಚೂರ್ಣೀಕೃತರಾಗಿ ಬಿದ್ದರು. ಜರಾಸಂಧನೂ ಕೂಡಾ ಮೂರ್ಛಿತನಾಗಿ ಬಿದ್ದ.
ಸಸಾಲ್ವಪೌಣ್ಡ್ರಚೇದಿಪಾನ್
ನಿಪಾತ್ಯ ಸರ್ವಭೂಭುಜಃ ।
ಸ ಪುಪ್ಲುವೇ
ಜನಾರ್ದ್ದನಃ ಕ್ಷಣೇನ ತಾಂ ಕುಶಸ್ಥಲೀಮ್ ॥೧೭.೧೩೯॥
ಸಾಲ್ವ, ಪೌಣ್ಡ್ರ, ಶಿಶುಪಾಲ, ಇವರೆಲ್ಲರನ್ನೊಳಗೊಂಡ ಸಮಸ್ತ ರಾಜರನ್ನೂ
ಕೂಡಾ ಬೀಳಿಸಿದ ಶ್ರೀಕೃಷ್ಣ, ಕ್ಷಣಮಾತ್ರದಲ್ಲಿ
ತನ್ನ ನಗರವಾದ ದ್ವಾರಕೆಯನ್ನು ಕುರಿತು ಹಾರಿದ.
No comments:
Post a Comment