ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 18, 2020

Mahabharata Tatparya Nirnaya Kannada 17154_17163


ಅಥಾಪರೇ ಚ ಯಾದವಾ ವಿಜಿತ್ಯ ತದ್ಬಲಂ ಯಯುಃ ।
ಪುರೈವ ರುಗ್ಮಿಪೂರ್ವಕಾಃ ಪ್ರಜಗ್ಮುರಚ್ಯುತಂ ಪ್ರತಿ ॥೧೭.೧೫೪॥

ಉಳಿದ ಯಾದವರೂ ಕೂಡಾ ಜರಾಸಂಧ ಶಿಶುಪಾಲರ ಸೈನ್ಯವನ್ನು ಗೆದ್ದು, ಅಲ್ಲಿಂದ ಹೊರಟರು. ಆದರೆ ಅದಕ್ಕೂ ಮೊದಲೇ ರುಗ್ಮಿ ಮೊದಲಾದವರೆಲ್ಲರೂ  ಪರಮಾತ್ಮನನ್ನು ಹಿಂಬಾಲಿಸಿ ತೆರಳಿದ್ದರು.

ಸಹೈಕಲವ್ಯಪೂರ್ವಕೈಃ ಸಮೇತ್ಯ ಭೀಷ್ಮಕಾತ್ಮಜಃ ।
ಹರಿಂ ವವರ್ಷ ಸಾಯಕೈಃ ಸ ಸಿಂಹವನ್ನ್ಯವರ್ತ್ತತ ॥೧೭.೧೫೫॥

ಏಕಲವ್ಯ ಮೊದಲಾದವರಿಂದ ಕೂಡಿಕೊಂಡ ಭೀಷ್ಮಕನ ಮಗನಾದ ರುಗ್ಮಿಯು ಬಾಣಗಳಿಂದ ಪರಮಾತ್ಮನನ್ನು ಪೀಡಿಸಲು ಹೋದ. ಆಗ ಪರಮಾತ್ಮ ಸಿಂಹದಂತೆ ಅವನತ್ತ ತಿರುಗಿದ.

ಅಕ್ಷೋಹಿಣೀತ್ರಯಂ ಹರಿಸ್ತದಾ ನಿಹತ್ಯ ಸಾಯಕೈಃ ।
ಅವಾಹನಾಯುಧಂ ವ್ಯಧಾನ್ನಿಷಾದಪಂ ಶರೈಃ ಕ್ಷಣಾತ್ ॥೧೭.೧೫೬॥

ಶ್ರೀಹರಿಯು ಮೂರು ಅಕ್ಷೋಹಿಣಿ ಪರಿಮಿತವಾದ ಸೇನೆಯನ್ನು ಬಾಣಗಳಿಂದ ಕೊಂದು, ಬೇಡರ ಒಡೆಯನಾಗಿರುವ ಏಕಲವ್ಯನನ್ನು ಕ್ಷಣದಲ್ಲಿ ವಾಹನಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದನು.

ಶರಂ ಶರೀರನಾಶಕಂ ಸಮಾದದಾನಮೀಶ್ವರಮ್ ।
ಸ ಏಕಲವ್ಯ ಆಶು ತಂ ವಿಹಾಯ ದುದ್ರುವೇ ಭಯಾತ್ ॥೧೭.೧೫೭॥

ಶರೀರವನ್ನೇ ನಾಶಮಾಡುವ ಉಗ್ರವಾದ ಬಾಣವನ್ನು ಕೈಗೆತ್ತಿಕೊಳ್ಳುತ್ತಿರುವ ಈಶ್ವರನನ್ನು ಕಂಡ ಆ ಏಕಲವ್ಯನು, ಕೂಡಲೇ  ರಣಾಂಗಣವನ್ನು ಬಿಟ್ಟು, ಭಯದಿಂದ ಓಡಿದನು.

ಧನುರ್ಭೃತಾಂ ವರೇ ಗತೇ ರಣಂ ವಿಹಾಯ ಭೂಭೃತಃ ।
ಕರೂಶರಾಜಪೂರ್ವಕಾಃ ಕ್ಷಣಾತ್ ಪ್ರದುರ್ದುವುರ್ಭಯಾತ್ ॥೧೭.೧೫೮॥

ಧನುಶ್ಕರಲ್ಲೇ ಅಗ್ರಗಣ್ಯನಾಗಿರುವ ಏಕಲವ್ಯನು ಯುದ್ಧರಂಗವನ್ನು ಬಿಟ್ಟು ಹೋಗುತ್ತಿರಲು, ದಂತವಕ್ರ ಮೊದಲಾಗಿರುವ ರಾಜರೆಲ್ಲರೂ ಕೂಡಾ, ಭಯದಿಂದ ಓಡಿ ಹೋದರು. 

ಅಥಾsಸಸಾದ ಕೇಶವಂ ರುಷಾ ಸ ಭೀಷ್ಮಕಾತ್ಮಜಃ ।
ಶರಾಮ್ಬುಧಾರ ಆಶು ತಂ ವಿವಾಹನಂ ವ್ಯಧಾದ್ಧರಿಃ ॥೧೭.೧೫೯॥

ಅವರು ಹೋದಮೇಲೆ, ರುಗ್ಮಿಯು ಬಾಣಗಳ ಮಳೆಗರೆಯುತ್ತಾ, ಪರಮಾತ್ಮನ ಎದುರು ಬಂದ. ಶ್ರೀಕೃಷ್ಣ ಕೂಡಲೇ ಅವನ ರಥವನ್ನು ಕತ್ತರಿಸಿದ. 

ಚಕರ್ತ್ತ ಕಾರ್ಮ್ಮುಕಂ ಪುನಃ ಸ ಖಡ್ಗಚರ್ಮ್ಮಭೃದ್ಧರೇಃ ।
ರಥಂ ಸಮಾರುಹಚ್ಛರೈಶ್ಚಕರ್ತ್ತ ಖಡ್ಗಮೀಶ್ವರಃ ॥೧೭.೧೬೦॥

ಪರಮಾತ್ಮನು ರುಗ್ಮಿಯ ಬಿಲ್ಲನ್ನು ಕತ್ತರಿಸಿದ. ಆಗ ಆತ ಕತ್ತಿ ಗುರಾಣಿಗಳನ್ನು ಹಿಡಿದು ಪರಮಾತ್ಮನ ರಥವನ್ನು ಏರಿದ. ಈರೀತಿ ಬಂದ ರುಗ್ಮಿಯ ಖಡ್ಗವನ್ನು ಶ್ರೀಕೃಷ್ಣ ತನ್ನ ಬಾಣದಿಂದ ಕತ್ತರಿಸಿದ.

ಶರೈರ್ವಿತಸ್ತಿಮಾತ್ರಕೈರ್ವಿಧಾಯ ತಂ ನಿರಾಯುಧಮ್ ।
ಪ್ರಿಯಾವಚಃ ಪ್ರಪಾಲಯನ್ ಜಘಾನ ನೈನಮಚ್ಯುತಃ ॥೧೭.೧೬೧॥

ದ್ವಾದಷಾಂಗುಲ ಪರಿಮಿತವಾದ ಬಾಣಗಳಿಂದ ಅವನನ್ನು ನಿರಾಯುಧನನ್ನಾಗಿ ಮಾಡಿದ ಶ್ರೀಕೃಷ್ಣ, ರುಗ್ಮಿಣಿಯ ಮಾತನ್ನು ಕೇಳುತ್ತಾ, ಅವನನ್ನು ಕೊಲ್ಲಲಿಲ್ಲ.

[ರುಗ್ಮಿಣಿ ಶ್ರೀಕೃಷ್ಣನಿಗೆ ಹೇಳಿದ ಮಾತನ್ನು ಭಾಗವತದಲ್ಲಿ(೧೦.೫೯.೩೫) ವಿವರಿಸಲಾಗಿದೆ.  ಯೋಗೇಶ್ವರಾಪ್ರಮೇಯಾತ್ಮನ್  ದೇವದೇವ  ಜಗತ್ಪತೇ । ಹನ್ತುಂ ನಾರ್ಹಸಿ ಕಲ್ಯಾಣ ಭ್ರಾತರಂ ಮೇ ಮಹಾಭುಜ’]

ನಿಬದ್ಧ್ಯ ಪಞ್ಚಚೂಳಿನಂ ವಿಧಾಯ ತಂ ವ್ಯಸರ್ಜ್ಜಯತ್ ।
ಜಗಜ್ಜನಿತ್ರಯೋರಿದಂ ವಿಡಮ್ಬನಂ ರಮೇಶಯೋಃ ॥೧೭.೧೬೨॥

ಪರಮಾತ್ಮನು ಅವನನ್ನು ಕಟ್ಟಿಹಾಕಿ, ಐದು ಜುಟ್ಟುಗಳನ್ನು ಇಟ್ಟು, ಅಲ್ಲಿಂದ ಕಳುಹಿಸಿದ. ಇದು ಜಗತ್ತಿನ ತಂದೆ-ತಾಯಿಗಳಾದ ಲಕ್ಷ್ಮೀ-ನಾರಾಯಣರ  ವಿಡಮ್ಬನವಾಗಿದೆ.
[ಈ ಹಿನ್ನೆಲೆಯನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ: ೬೦.೨೬) ಹೇಳಲಾಗಿದೆ. ‘ರುಗ್ಮಿಣಂ ಪತಿತಂ ದೃಷ್ಟ್ವಾ ವ್ಯದ್ರವಂತ ನರಾಧಿಪಾಃ’ ಇನ್ನು ಭಾಗವತದಲ್ಲೂ(೧೦.೫೯.೩೮) ಈ ಕುರಿತು ಹೇಳಿದ್ದಾರೆ: ‘ಚೈಲೇನ ಬಧ್ವಾ ತಮಸಾಧುಕಾರಿಣಂ ಸಷ್ಮಶ್ರುಕೇಶಾನ್ ಪ್ರವಪನ್ ವ್ಯರೂಪಯತ್’ ‘ಜನಿತ್ರ’ ಎನ್ನುವ ಶಬ್ದವನ್ನು ಋಗ್ವೇದ ಸಂಹಿತ(೧.೧೬೩.೪)ದಲ್ಲಿಯೂ ಕಾಣುತ್ತೇವೆ.  ಯತ್ರ ತ ಆಹುಃ  ಪರಮಂ ಜನಿತ್ರಮ್]

ಸದೈಕಮಾನಸಾವಪಿ ಸ್ವಧರ್ಮ್ಮಶಾಸಕೌ ನೃಣಾಮ್ ।
ರಮಾ ಹರಿಶ್ಚ ತತ್ರ ತೌ ವಿಜಹ್ರತುರ್ಹಿ ರುಗ್ಮಿಣಾ ॥೧೭.೧೬೩॥

ಯಾವಾಗಲೂ ಒಂದೇ ರೀತಿಯ ಮನೋಧರ್ಮವುಳ್ಳವರಾದರೂ ಕೂಡಾ, ಸಜ್ಜನರಿಗೆ ತಮ್ಮ ಧರ್ಮವನ್ನು ತೋರಿಸಲೋಸುಗ ಲಕ್ಷ್ಮೀನಾರಾಯಣರು ಆ ಯುದ್ಧಾಂಗಣದಲ್ಲಿ ರುಗ್ಮಿಯಿಂದ ಕೂಡಿಕೊಂಡು ವಿಹಾರ ಮಾಡಿದರಷ್ಟೇ.
[ಲಕ್ಷ್ಮೀ-ನಾರಾಯಣರ ಮನೋಧರ್ಮ ಬೇರೆಬೇರೆ ಅಲ್ಲ. ಕೃಷ್ಣನಿಗೆ ರುಗ್ಮಿಯನ್ನು ಕೊಲ್ಲಬೇಕು ಎಂದಿದ್ದರೆ ರುಗ್ಮಿಣಿ ತಡೆಯುತ್ತಿರಲಿಲ್ಲ. ಆದರೂ ಕೂಡಾ ತಡೆದಳು, ಏಕೆಂದರೆ: ಅದೊಂದು ವಿಡಂಬನೆ ಮತ್ತು ಜನರ ಸ್ವಧರ್ಮ ಪ್ರದರ್ಶನ ಅಷ್ಟೇ]

No comments:

Post a Comment