ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 22, 2020

Mahabharata Tatparya Nirnaya Kannada 2001_2004

೨೦. ಖಾಣ್ಡವದಾಹಃ

ಓಂ  

ಯಜ್ಞೋರುದಾನನರದೇವವನ್ದ್ಯತಾಪ್ರಶ್ನರ್ಷಿಪೂಜಾಸು ಯುಧಿಷ್ಠಿರೋsಭೂತ್ ।

ಧರ್ಮ್ಮಾನುಶಾಸ್ತಿಹರಿತತ್ವಶಂಸನಸ್ವರಾಷ್ಟ್ರರಕ್ಷಾದಿಷು ಭೀಮ ಆಸೀತ್ ॥೨೦.೦೧॥

 

ಯುಧಿಷ್ಠಿರನು ಯಜ್ಞ, ದಾನ, ರಾಜರು ಬಂದಾಗ ಅವರನ್ನು ಎದುರುಗೊಳ್ಳುವುದು, ಋಷಿಗಳೊಂದಿಗೆ ತತ್ವವಿಚಾರ, ಋಷಿಗಳ ಪೂಜೆ, ಇವುಗಳಲ್ಲಿ ತನ್ನನ್ನು ತೊಡಗಿಸಿಕೊಂಡನು. ಧರ್ಮದ ಅನುಶಾಸನ, ಪರತತ್ತ್ವದ ಚಿಂತನ ಮತ್ತು ರಾಷ್ಟ್ರರಕ್ಷಣೆಯ ಕಾರ್ಯದಲ್ಲಿ ಭೀಮಸೇನನಿದ್ದನು.   

 

ಸ್ತ್ರೀಧರ್ಮ್ಮಸಂಶಾಸನಭೃತ್ಯಕೋಶರಕ್ಷಾವ್ಯಯಾದೌ ಗುಣದೋಷಚಿನ್ತನೇ ।

ಅನ್ತಃಪುರಸ್ಥಸ್ಯ ಜನಸ್ಯ ಕೃಷ್ಣಾ ತ್ವಾಸೀದ್ಧರೇರ್ದ್ಧರ್ಮ್ಮನಿದರ್ಶನೀ ಚ ॥೨೦.೦೨॥

 

ದ್ರೌಪದಿಯು ಸ್ತ್ರೀಧರ್ಮಸಂಶಾಸನ (ಹೆಣ್ಣುಮಕ್ಕಳು ಹೇಗಿರಬೇಕು ಇತ್ಯಾದಿ ಧರ್ಮವನ್ನು ಹೇಳುವುದರಲ್ಲಿ), ಭೃತ್ಯರ ಪೋಷಣೆ, ಕೋಶರಕ್ಷಣೆ, ಯಾವ ರೀತಿ ಖರ್ಚು ಮಾಡಬೇಕು ಎನ್ನುವುದರಲ್ಲಿ, ಗುಣದೋಷ ಚಿಂತನೆ(ಯಾರ ಗುಣ ಹೇಗೆ, ಯಾರ ದೋಷ ಏನು, ಅದನ್ನು ಹೇಗೆ ಸರಿಪಡಿಸಬೇಕು ಎನ್ನುವ) ಇತ್ಯಾದಿ ವಿಷಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಪರಮಾತ್ಮನನ್ನು ಯಾವರೀತಿ ಒಲಿಸಿಕೊಳ್ಳಬೇಕು ಎನ್ನುವ ತತ್ವವನ್ನು ಅಂತಃಪುರದಲ್ಲಿರತಕ್ಕ ಜನರಿಗೆ ಉಪದೇಶಿಸುತ್ತಿದ್ದಳು.

[ಮಹಾಭಾರತದ ವನಪರ್ವದಲ್ಲಿ ಬರುವ ಸ್ತ್ರೀಧರ್ಮಪರ್ವದಲ್ಲಿ ಇಲ್ಲಿ ಹೇಳಿದ ‘ಸ್ತ್ರೀಧರ್ಮಸಂಶಾಸನ’ ಕುರಿತಾದ ಅದ್ಭುತ ವಿಷಯವನ್ನು ದ್ರೌಪದೀ-ಸತ್ಯಭಾಮಾ ಸಂವಾದ ರೂಪದಲ್ಲಿ ನಾವು ಕಾಣಬಹುದು.  ‘ಕ್ಷೇತ್ರಾದ್ ವನಾದ್ ವಾ ಗ್ರಾಮಾದ್  ವಾ ಭರ್ತಾರಂ  ಗೃಹಮಾಗತಮ್ । ಅಭ್ಯುತ್ಥಾಯಾಭಿನನ್ದಾಮಿ ಆಸನೇನೋದಕೇನ ಚ । ಪ್ರಮೃಷ್ಟಭಾಣ್ಡಾ ಮೃಷ್ಟಾನ್ನಾ ಕಾಲೇ ಭೋಜನದಾಯಿನೀ’ (ವನಪರ್ವ ೨೩೪.೩೬), ಕ್ಷೇತ್ರದಿಂದಾಗಲೀ, ಕಾಡಿನಿಂದಾಗಲೀ, ಹೀಗೆ ಎಲ್ಲಿಂದಲೇ ಆಗಲಿ, ಗಂಡ ಮನೆಗೆ ಬಂದರೆ ಎದ್ದು ನಾನೇ ಅವನನ್ನು ಎದುರುಗೊಳ್ಳುತ್ತೇನೆ, ಆಸನ ನೀಡಿ, ನೀರನ್ನುಕೊಟ್ಟು ಅವನನ್ನು ಸಂತೋಷಗೊಳಿಸುತ್ತೇನೆ, ಚೆನ್ನಾಗಿರುವ ಪಾತ್ರೆಯಲ್ಲಿ, ಒಳ್ಳೆಯ ಅನ್ನ, ಇತ್ಯಾದಿಗಳಿಂದ ಕಾಲಕ್ಕೆ ಸರಿಯಾಗಿ ಊಟವನ್ನು ಕೊಡುತ್ತೇನೆ. ‘ಯಚ್ಚ ಭರ್ತಾ ನ ಪಿಬತಿ ಯಚ್ಚ ಭರ್ತಾ ನ ಸೇವತೇ । ಯಚ್ಚ ನಾಶ್ನಾತಿ ಮೇ ಭರ್ತಾ ತತ್ ಸರ್ವಂ  ವರ್ಜಯಾಮ್ಯಹಮ್’ (೩೩) ಯಾವುದನ್ನು ಗಂಡ ಕುಡಿಯುವುದಿಲ್ಲವೋ, ಯಾವುದನ್ನು ಗಂಡ ತಿನ್ನುವುದಿಲ್ಲವೋ, ನಾನೂ ಅದನ್ನು ತಿನ್ನುವುದಿಲ್ಲ. (ಹೇಗೆ ತಾನು ತನ್ನ ಗಂಡಂದಿರೊಂದಿಗೆ ಸಂತೋಷವಾಗಿದ್ದೇನೆ ಎನ್ನುವುದನ್ನು ದ್ರೌಪದಿ ವಿವರಿಸುತ್ತಾ ಹೇಳಿದ ಮಾತುಗಳಿವು). ‘ಶತಂ ದಾಸೀಸಹಸ್ರಾಣಿ ಕೌನ್ತೇಯಸ್ಯ  ಮಹಾತ್ಮನಃ (೪೮)  ‘ತಾಸಾಂ ನಾಮ ಚ ರೂಪಂ ಚ ಭೋಜನಾಚ್ಛಾದನಾನಿ  ಚ । ಸರ್ವಾಸಾಮೇವ  ವೇದಾಹಂ ಕರ್ಮ ಚೈವ ಕೃತಾಕೃತಂ’ (೫೦) ಲಕ್ಷ ಮಂದಿ ದಾಸ-ದಾಸಿಯರ ನಾಮ, ರೂಪ, ಅವರು ಏನನ್ನು ಊಟ ಮಾಡುತ್ತಾರೆ, ಏನನ್ನು ಹೊದ್ದುಕೊಳ್ಳುತ್ತಾರೆ-ಎಲ್ಲವನ್ನೂ ನಾನು ಬಲ್ಲವಳಾಗಿದ್ದೆ. ‘ಅಂತಃಪುರಾಣಾಂ ಸರ್ವೇಷಾಂ ಭೃತ್ಯಾನಾಂ ಚೈವ ಸರ್ವಶಃ । ಆಗೋಪಲಾವಿಪಾಲೇಭ್ಯಃ ಸರ್ವಂ ವೇದ ಕೃತಾಕೃತಮ್ । ಸರ್ವಂ ರಾಜ್ಞಃ ಸಮುದಯಮಾಯಂ ಚ ವ್ಯಯಮೇವಚ । ಏಕಾsಹಂ ವೇದ್ಮಿ ಕಲ್ಯಾಣಿ  ಪಾಣ್ಡವಾನಾಂ ಯಶಸ್ವಿನಿ ।  ಮಯಿ ಸರ್ವಂ ಸಮಾಸಜ್ಯ ಕುಟುಮ್ಬಂ ಭರತರ್ಷಭಾಃ ।  ಉಪಾಸನರತಾಃ ಸರ್ವೇ ಘಟಯಂತಿ ವರಾನನೇ’ (೫೫-೫೬), ‘ ಅಧೃಷ್ಯಂ ವರುಣಸ್ಯೇವ ನಿಧಿಪೂರ್ಣಮಿವೋದಧಿಮ್ । ಏಕಾsಹಂ ವೇದ್ಮಿ ಕೋಶಂ ವೈ ಪತೀನಾಂ ಧರ್ಮಚಾರಿಣಾಂ । ಅನಿಶಾಯಾಂ ನಿಶಾಯಾಂ ಚ ವಿಹಾಯ ಕ್ಷುತ್ಪಿಪಾಸಯೋಃ । ಆರಾಧಯಂತ್ಯಾಃ  ಕೌರವ್ಯಾಂಸ್ತುಲ್ಯಾ ರಾತ್ರಿರಹಶ್ಚ ಮೇ’  (೫೮-೫೯) ಅಂತಃಪುರಕ್ಕೆ ಸಂಬಂಧಪಟ್ಟ ಗೋಪಾಲಕರಿರಲಿ, ಕುರಿ-ಮೇಕೆ ಇತ್ಯಾದಿಗಳನ್ನು ಸಾಕಿಕೊಂಡಿರುವ ಅವಿಪಾಲಕರಿರಲಿ, ಅವರೆಲ್ಲ ಏನು ಮಾಡುತ್ತಿದ್ದರು ಎನ್ನುವುದು ನನಗೆ ಗೊತ್ತಿರುತ್ತಿತ್ತು. ರಾಜ ಏನು ಮಾಡಲು ಹೊರಟಿದ್ದಾನೆ, ಅವನಿಗೆ ಎಷ್ಟು ಆದಾಯವಿದೆ, ಎಷ್ಟು ಖರ್ಚಿದೆ. ಎಲ್ಲರಲ್ಲಿರುವ  ಬೇರೆಬೇರೆ ತರದ ಸ್ವತ್ತುಗಳ ವಿವರ ನನಗೊಬ್ಬಳಿಗೇ ಗೊತ್ತಿತ್ತು. ನನಗೆ ಹಗಲೂ ಮತ್ತು ರಾತ್ರಿ ಎರಡೂ ಒಂದೇ ಆಗಿತ್ತು’].

 

ಭೀಭತ್ಸುರಾಸೀತ್ ಪರರಾಷ್ಟ್ರಮರ್ದ್ದನೇ ತೇನಾನಿಯಮ್ಯಾಂಸ್ತು ಜರಾಸುತಾದೀನ್ ।

ಸ ಕೀಚಕಾದೀಂಶ್ಚ ಮಮರ್ದ್ದ ಭೀಮಸ್ತಸ್ಯೈವ ತೇ ಬಲತೋ ನಿತ್ಯಭೀತಾಃ ॥೨೦.೦೩॥

 

ಅರ್ಜುನನು ಬೇರೆ ರಾಷ್ಟ್ರದವರನ್ನು ಯಾವ ರೀತಿ ಮರ್ದನ ಮಾಡಬೇಕು ಎನ್ನುವುದರಲ್ಲಿ ನಿಯುಕ್ತನಾಗಿದ್ದ. ಅರ್ಜುನನಿಂದ ನಿಗ್ರಹಿಸಲಾಗದ ಜರಾಸಂಧ, ಕೀಚಕ ಮೊದಲಾದವರನ್ನು ಭೀಮಸೇನನೇ ನಿಗ್ರಹಿಸಿದ. ಭೀಮಸೇನನ ಬಲದಿಂದಲೇ ಅವರು ಯಾವಾಗಲೂ ಹೆದರಿಕೊಂಡಿದ್ದರು.

 

ರಾಷ್ಟ್ರೇಷು ಭೀಮೇನ ವಿಮರ್ದ್ದಿತೇಷು ಜಿತಾಶ್ಚ ಯುದ್ಧೇಷು ನಿರುದ್ಯಮಾಸ್ತೇ ।

ಬಭೂವುರಾಸೀದ್ಧರಿಧರ್ಮ್ಮನಿಷ್ಠಃ  ಪ್ರಾಯೇಣ ಲೋಕಶ್ಚ ತದೀಯಶಾಸನಾತ್ ॥೨೦.೦೪॥

 

ಭೀಮಸೇನನಿಂದ ಶತ್ರುರಾಷ್ಟ್ರಗಳು ನಿಗ್ರಹಕ್ಕೆ ಒಳಗಾಗಲು, ಯುದ್ಧದಲ್ಲಿ ಸೋತ ಜರಾಸಂಧಾದಿಗಳು ಯಾವುದೇ ಕೆಲಸವನ್ನು ಮಾಡದವರಾದರು(ಜರಾಸಂಧ, ಕೀಚಕ, ಇವರೆಲ್ಲಾ ಪ್ರಕಟವಾಗಿ ಜನರಿಗೆ ತೊಂದರೆಯಾಗುವ ಯಾವ ಕೆಲಸವನ್ನೂ ಮಾಡುವಂತಿರಲಿಲ್ಲ). ಆ ಸಂದರ್ಭದಲ್ಲಿ ಲೋಕವು ಹೆಚ್ಚಾಗಿ ಭೀಮಸೇನನ ಆಡಳಿತದಿಂದ ಪರಮಾತ್ಮನ ಧರ್ಮದಲ್ಲಿಯೇ ರತವಾಯಿತು.

[ಮಹಾಭಾರತದ ಆದಿಪರ್ವದಲ್ಲಿ(೧೭೮.೭) ಹೇಳುವಂತೆ: ‘ತತಃ ಪ್ರಭೃತಿ ರಕ್ಷಾಂಸಿ ತತ್ರ ಸೌಮ್ಯಾನಿ ಭಾರತ । ನಗರೇ ಪ್ರತ್ಯದೃಶ್ಯನ್ತ ನರೈರ್ನಗರವಾಸಿಭಿಃ’ ಬಕಾಸುರನ ಸಂಹಾರ ಸಂದರ್ಭದಲ್ಲಿ ಹೇಳಿರುವ ಮಾತು ಇದಾಗಿದೆ: ‘ಅಂದಿನಿಂದ ಎಲ್ಲಾ ರಾಕ್ಷಸರು ಭಯಗೊಂಡು ಸೌಮ್ಯರಾದರು’. ಅದೇ ರೀತಿ ಈಗಲೂ ಕೂಡಾ ಎನ್ನುವುದು ಆಚಾರ್ಯರ ಮಾತಿನಿಂದ ತಿಳಿಯುತ್ತದೆ].


No comments:

Post a Comment