[ಈ ಸಮಯದಲ್ಲಿ ದ್ವಾರಕೆಯಲ್ಲಿ ಏನು ನಡೆಯುತ್ತಿತ್ತು ಎನ್ನುವುದನ್ನು ವಿವರಿಸುತ್ತಾರೆ:]
ಕೃಷ್ಣೋsಪಿ ಗತ್ವಾ ದ್ವಾರವತೀಂ
ಸರಾಮಃ ಸತ್ಯಾಪಿತುರ್ವಧಕರ್ತ್ತಾರಮೇವ ।
ಶತಧನ್ವಾನಂ
ಹನ್ತುಮೈಚ್ಛತ್ ಸ ಚೈವ ಯಯಾಚೇsಕ್ರೂರಂ ಕೃತವರ್ಮ್ಮಾನುಯುಕ್ತಮ್ ॥೨೦.೨೯॥
ಇತ್ತ ದ್ವಾರಕಾ ಪಟ್ಟಣಕ್ಕೆ ತೆರಳಿದ ಶ್ರೀಕೃಷ್ಣನು, ಬಲರಾಮನಿಂದ
ಕೂಡಿಕೊಂಡು ಸತ್ಯಭಾಮೆಯ ತಂದೆಯಾದ ಸತ್ರಾಜಿತನ ಕೊಲೆಮಾಡಿರುವ ಶತಧನ್ವನನ್ನು ಕೊಲ್ಲಲು ಬಯಸಿದನು.
ಶತಧನ್ವನಾದರೋ, ಕೃತವರ್ಮನಿಂದ ಕೂಡಿರುವ ಅಕ್ರೂರನನ್ನು ರಕ್ಷಣೆಗಾಗಿ ಬೇಡಿದನು.
ತಾವಬ್ರೂತಾಂ
ಸರ್ವಲೋಕೈಕಕರ್ತ್ತುರ್ನ್ನಾsವಾಂ ವಿರೋಧಂ ಮನಸಾsಪಿ ಕುರ್ವಃ ।
ಕೃಷ್ಣಸ್ಯ ಸರ್ವೇಶಿತುರಿತ್ಯನೂಕ್ತ
ಆರುಹ್ಯ ಚಾಶ್ವೀಂ ಭಯತಃ ಪರಾದ್ರವತ್ ॥೨೦.೩೦॥
ಆಗ ಕೃತವರ್ಮ ಹಾಗೂ ಅಕ್ರೂರ ಹೇಳುತ್ತಾರೆ: ‘ಸಮಸ್ತ ಲೋಕದ ಸೃಷ್ಟಿ-ಸ್ಥಿತಿ-ಲಯಗಳನ್ನೂ ಮಾಡುವ ನಾರಾಯಣನ ವಿರೋಧವನ್ನು ನಾವಿಬ್ಬರು ಮನಸ್ಸಿನಿಂದಲೂ ಚಿಂತಿಸಲಾರೆವು’ ಎಂದು. ಈ ರೀತಿಯಾಗಿ ಹೇಳಲ್ಪಟ್ಟವನಾದ ಶತಧನ್ವ, ಭಯದಿಂದ ಹೆಣ್ಣು ಕುದುರೆಯನ್ನು ಏರಿ ಅಲ್ಲಿಂದ ಓಡಿದನು.
ಅನ್ವೇವ ತಂ ಕೃಷ್ಣರಾಮೌ
ರಥೇನ ಯಾತೌ ಶತಂ ಯೋಜನಾನಾಂ ದಿನೇನ ।
ಗತ್ವಾ ಮೃತಾಯಾಂ
ಬಡಬಾಯಾಂ ಪದೈವ ಸ ಪ್ರಾದ್ರವತ್ ಕೃಷ್ಣ ಏನಂ ಪದಾsಗಾತ್ ॥೨೦.೩೧॥
ಅವನನ್ನು ಅನುಸರಿಸಿ ಕೃಷ್ಣ-ರಾಮರು ರಥದಲ್ಲಿ ತೆರಳಿದರು. ಒಂದು ದಿವಸದಲ್ಲಿಯೇ ನೂರು ಯೋಜನಗಳ ತನಕ ಓಡಿ, ಅದಕ್ಕಿಂತ ಮುಂದೆ ಓಡಲಾಗದೇ, ಎದೆಯೊಡೆದು ಸತ್ತ
ಕುದುರೆಯಿರುತ್ತಿರಲು, ಶತಧನ್ವ ಕಾಲ್ಗಳಿಂದಲೇ ಓಡಲಾರಮ್ಭಿಸಿದ. ಆಗ ಶ್ರೀಕೃಷ್ಣನು
ರಥದಿಂದ ಇಳಿದು ಕಾಲ್ಗಳಿಂದಲೇ ಅವನನ್ನು
ಅನುಸರಿಸಿದ.
[ಆ ಕುದುರೆಯ ಹೆಸರು ‘ಹೃದಯಾ’ ಎಂದು, ಅದು ದಿನಕ್ಕೆ ನೂರು ಯೋಜನಾ ಓಡುವಷ್ಟು
ಸಮರ್ಥವಾಗಿತ್ತಂತೆ, ವಿಷ್ಣುಪುರಾಣದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ, ಅವನ ಚಾಟಿ ಏಟನ್ನು
ಸಹಿಸಲಾಗದೇ, ಬಾಯಲ್ಲಿ ನೊರೆಯನ್ನು ಕಕ್ಕುತ್ತಾ, ಎದೆಯೊಡೆದು ಪ್ರಾಣಬಿಟ್ಟಿತಂತೆ ಆ ಹೆಣ್ಣು
ಕುದುರೆ. ಬ್ರಹ್ಮಾಂಡ ಪುರಾಣದ
ಉಪೋದ್ಗತಪಾದದಲ್ಲೂ(೭೧.೭೨) ಈ ವಿವರ ಕಾಣಸಿಗುತ್ತದೆ: ‘ವಿಖ್ಯಾತಾ ಹೃದಯಾ ನಾಮ ಶತಯೋಜನಗಾಮಿನೀ । ಭೋಜಸ್ಯ ಬಡಬಾ
ದಿವ್ಯಾ ಯಯಾ ಕೃಷ್ಣಮಯೋಧಯತ್’]
ಛಿತ್ವಾ ಶಿರಸ್ತಸ್ಯ
ಚಕ್ರೇಣ ಕೃಷ್ಣೋ ಜಾನನ್ನಕ್ರೂರೇ ಮಣಿಮೇನೇನ ದತ್ತಮ್ ।
ಅಪ್ಯಜ್ಞವಲ್ಲೋಕವಿಡಮ್ಬನಾಯ
ಪರೀಕ್ಷ್ಯ ವಾಸೋsತ್ರ ನೇತ್ಯಾಹ ರಾಮಮ್ ॥೨೦.೩೨॥
ಶತಧನ್ವನ ಕತ್ತನ್ನು ಕೃಷ್ಣ ಚಕ್ರದಿಂದ ಕತ್ತರಿಸಿ, ಅಕ್ರೂರನಲ್ಲಿ ಈ ಶತಧನ್ವನಿಂದ ಮಣಿಯು
ಕೊಡಲ್ಪಟ್ಟಿತು ಎಂದು ತಿಳಿದವನಾದರೂ, ಅರಿಯದವನಂತೆ, ಲೋಕದ ವಿಡಂಬನೆಗಾಗಿ ಶತಧನ್ವನ ಬಟ್ಟೆಗಳನ್ನೆಲ್ಲಾ
ಪರೀಕ್ಷೆ ಮಾಡಿ, ಬಲರಾಮನ ಬಳಿ ಬಂದು ಮಣಿ ಇಲ್ಲವೆಂದು ಹೇಳಿದ.
No comments:
Post a Comment