ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 24, 2022

Mahabharata Tatparya Nirnaya Kannada 22: 60-67

[ಶಲ್ಯ-ಜರಾಸಂಧನ ಮಗಳಂದಿರನ್ನು ನಕುಲ-ಸಹದೇವರು ಮದುವೆಯಾದಮೇಲೆ ಅವರು ದ್ರೌಪದಿಯನ್ನು ಅತ್ತಿಗೆಯಂತೆ ನೋಡುತ್ತಿದ್ದರು ಎಂದು ಹಿಂದೆ ಹೇಳಿರುವುದನ್ನು ನೋಡಿದ್ದೇವೆ. ಇದೀಗ ಈ ಸಂಧರ್ಭದಲ್ಲಿ  ಧರ್ಮರಾಜನ ಮನಪರಿವರ್ತನೆಯ ಕುರಿತು ಹೇಳುತ್ತಾರೆ:]

 

ತತಃ ಪರಂ ಧರ್ಮ್ಮರಾಜೋ ನಿರ್ವಿಣ್ಣಃ ಸ್ವಕೃತೇನ ಹ ।

ಭ್ರಾತೃಭಾರ್ಯ್ಯಾಪದೇ ಕೃಷ್ಣಾಂ ಸ್ಥಾಪಯಾಮಾಸ ಸರ್ವದಾ    ॥೨೨.೬೦॥

 

ತದನಂತರ ಧರ್ಮರಾಜನು ತಾನು ಮಾಡಿದ ತಪ್ಪಿನ ಅರಿವಿನಿಂದ ನಿರ್ವಿಣ್ಣನಾಗಿ ದ್ರೌಪದಿಯನ್ನು ಸದಾ ತನ್ನ ತಮ್ಮನ ಹೆಂಡತಿ ಸ್ಥಾನದಲ್ಲಿ ಸ್ಥಾಪಿಸಿದನು.

 

ಊಷುರ್ವನೇ ಚ ತೇ ಪಾರ್ತ್ಥಾ ಮುನಿಶೇಷಾನ್ನಭೋಜಿನಃ ।

ಭುಕ್ತವತ್ಸ್ವೇವಾನುಜೇಷು ಭುಙ್ಕ್ತೇ ರಾಜಾ ಯುಧಿಷ್ಠಿರಃ              ॥೨೨.೬೧॥

 

ಅಲಙ್ಘ್ಯತ್ವಾತ್ ತದಾಜ್ಞಾಯಾ ಅನುಜಾಃ ಪೂರ್ವಭೋಜಿನಃ ।

ತಸ್ಯಾನನ್ತರಮೇವೈಕಾ ಭುಙ್ಕ್ತೇ ಸಾ ಪಾರ್ಷತಾತ್ಮಜಾ            ॥೨೨.೬೨॥

 

ಆ ಪಾಂಡವರು ಮುನಿಗಳು ಊಟಮಾಡಿದಮೇಲೆ ಉಳಿದ ಅನ್ನವನ್ನು ಊಟಮಾಡಿಕೊಂಡು ಕಾಡಿನಲ್ಲಿ ವಾಸಮಾಡಿದರು. ತಮ್ಮಂದಿರೆಲ್ಲರೂ ಊಟಮಾಡಿದ ಮೇಲೆ ಯುಧಿಷ್ಠಿರ ಊಟಮಾಡುತ್ತಿದ್ದ. ಅವನ ಆಜ್ಞೆಯನ್ನು ಮೀರಲಾಗದೇ ಇರುವುದರಿಂದ  ತಮ್ಮಂದಿರು ಮೊದಲೇ ಊಟಮಾಡುತ್ತಿದ್ದರು. ಯುಧಿಷ್ಠಿರನ ಊಟವಾದಮೇಲೆ ಕೊನೆಯಲಿ ದ್ರೌಪದೀದೇವಿ ಒಬ್ಬಳೇ ಊಟಮಾಡುತ್ತಿದ್ದಳು.

 

ಏವಂ ಸದಾ ವಿಷ್ಣುಪರಾಯಣಾನಾಂ ತತ್ಪ್ರಾಪಣಾನ್ನೈಕಭುಜಾಂ ಪ್ರಯಾತಃ ।

ಸಂವತ್ಸರಸ್ತತ್ರ ಜಗಾದ ಕೃಷ್ಣಾ ಭೀಮಾಜ್ಞಯಾ ಧರ್ಮ್ಮರಾಜಂ ಸುವೇತ್ರೀ ॥೨೨.೬೩॥

 

ಈರೀತಿಯಾಗಿ ವಿಷ್ಣುವಿನ ಭಕ್ತರಾದ, ಪರಮಾತ್ಮನ ನೈವೇದ್ಯವನ್ನು ಮಾತ್ರ ಊಟಮಾಡುತ್ತಿರುವ ಪಾಂಡವರ ವನವಾಸಕ್ಕೆ ಒಂದು ಸಂವತ್ಸರ ಕಳೆಯಿತು. ಆಗ ಭೀಮಸೇನನ ಅಣತಿಯನ್ನು ಪಡೆದ, ನೀತಿಯನ್ನು ಚೆನ್ನಾಗಿ ತಿಳಿದಿರುವ ದ್ರೌಪದಿಯು  ಧರ್ಮರಾಜನನ್ನು ಕುರಿತು ಹೇಳಿದಳು:

[ಪರಮಾತ್ಮನಿಗೆ ನೈವೇದ್ಯ ಮಾಡಿದ ಉತ್ಕೃಷ್ಟವಾದ ಅನ್ನವನ್ನು ‘ಪ್ರಾಪಣ’ ಎಂದು ಕರೆಯುತ್ತಾರೆ. ವರಾಹ ಪುರಾಣದಲ್ಲಿ ನಾವು ಈ ಪ್ರಯೋಗವನ್ನು ಕಾಣಬಹುದು. ‘ಏವಂ ತು ಭೋಜನಂ ದತ್ವಾ ವ್ಯಪನೀಯ ತು ಪ್ರಾಪಣಮ್’(೧೧.೪೭) ‘ತಾಮ್ರಪಾತ್ರೇಣ ವೈ ಭೂಮೇ ಪ್ರಾಪಣಂ ಯತ್  ಪ್ರದೀಯತೇ’ (೧೨೯.೪೪) ತಾಮ್ರದ ಪಾತ್ರೆಯಲ್ಲಿ ಅನ್ನವನ್ನು ಮಾಡಿ ಅದನ್ನು ದೇವರಿಗೆ ಸಮರ್ಪಣೆ ಮಾಡಿದರೆ ಅದನ್ನು ಪ್ರಾಪಣ ಎಂದು ಕರೆಯುತ್ತಾರೆ.]

 

ಅತಿಮಾರ್ದ್ದರವಯುಕ್ತತ್ವಾದ್ ಧರ್ಮ್ಮರಾಜಶ್ಚತುರ್ದ್ದಶೇ ।

ಅಪಿ ವರ್ಷೇ ಗುರುಭಯಾದ್ ರಾಜ್ಯಂ ನೇಚ್ಛೇದಿತಿ ಪ್ರಭುಃ ।

ಮಾರುತಿಃ ಪ್ರೇಷಯಾಮಾಸ ಕೃಷ್ಣಾಂ ಪ್ರಸ್ತಾವಹೇತವೇ ॥೨೨.೬೪॥

 

ಧರ್ಮರಾಜನು ಅತ್ಯಂತ ಮೃದುವಾದ್ದರಿಂದ ಹದಿನಾಲ್ಕನೇ ವರ್ಷದಲ್ಲೂ ಕೂಡಾ ಗುರು-ಹಿರಿಯರ ಭಯದಿಂದ ರಾಜ್ಯವನ್ನೇ ಬಯಸುವುದಿಲ್ಲ ಎಂದರಿತ ಭೀಮಸೇನನು ಅವನನ್ನು ಮಾತಿನಿಂದ ಎಚ್ಚರಿಸಲು, ಒಂದು ಪ್ರಸ್ತಾಪನೆ ಮಾಡಲು ದ್ರೌಪದಿಯನ್ನು ಯುಧಿಷ್ಠಿರನಲ್ಲಿಗೆ ಕಳುಹಿಸಿದ.

 

ಕ್ಷಮಾ ಸರ್ವತ್ರ ಧರ್ಮ್ಮೋ ನ ಪಾಪಹೇತುಶ್ಚ ದುರ್ಜ್ಜನೇ ।

ರಾಜ್ಞಾಂ ಸಾಮರ್ತ್ಥ್ಯಯುಕ್ತಾನಾಮಿತಿ ಸಂಸ್ಥಾಪ್ಯ ಶಾಸ್ತ್ರತಃ ॥೨೨.೬೫॥

 

‘ಎಲ್ಲೆಡೆ ಕ್ಷಮೆ ಎನ್ನುವುದು ಧರ್ಮವಲ್ಲ. ಸಜ್ಜನರು ಪಾಪ ಮಾಡಿದರೆ ಅಥವಾ ಸಣ್ಣ-ಪುಟ್ಟ ತಪ್ಪು ಮಾಡಿದರೆ ಸಹನೆ ಮಾಡಬೇಕು- ಅದು ಧರ್ಮ. ಆದರೆ ದುರ್ಜನರಲ್ಲಿ ಕ್ಷಮೆಯನ್ನು ಮಾಡಿದರೆ ಅದು ಪಾಪಕ್ಕೇ ಕಾರಣವಾಗುತ್ತದೆ. ವಿಶೇಷವಾಗಿ ಬಲಿಷ್ಠರಾಗಿರುವ ರಾಜರಂತೂ ದುರ್ಜನರಲ್ಲಿ  ಸಹನೆ ಮಾಡಲೇ ಬಾರದು’ ಹೀಗೆ ಶಾಸ್ತ್ರದಿಂದ ಸ್ಥಾಪಿಸಿ ದ್ರೌಪದಿಯನ್ನು ಭೀಮ ಕಳುಹಿಸಿದನು.

 

ಹತ್ವಾ ಚತುರ್ದ್ದಶೇ ವರ್ಷೇ ಧಾರ್ತ್ತರಾಷ್ಟ್ರಾನರಾಜ್ಯದಾನ್ ।

ಕರ್ತ್ತುಂ ರಾಜ್ಯಂ ಪುರೋ ಗನ್ತಾ ಭವಾನೀತ್ಯಗ್ರಜೇನ ಹ ॥೨೨.೬೬॥

 

ಕಾರಯನ್ ಸತ್ಯಶಪಥಂ ವಿವಾದಸ್ಯ ಕ್ರಮೇಚ್ಛಯಾ ।

ಆದಿಶತ್ ಪ್ರಥಮಂ ಕೃಷ್ಣಾಂ ಭೀಮಃ ಸಾ ನೃಪಮಬ್ರವೀತ್ ॥೨೨.೬೭॥

 

‘ಕಡೇಗೆ ಹದಿನಾಲ್ಕನೇ ವರ್ಷದಲ್ಲಿ ರಾಜ್ಯ ಕೊಡದ ದುರ್ಯೋಧನಾದಿಗಳನ್ನು ಕೊಂದು ರಾಜ್ಯವನ್ನು ಆಳಲು ನಾನು ಯುದ್ಧಕ್ಕೆ ತೆರಳುತ್ತೇನೆ’ ಎಂದು ಧರ್ಮರಾಜನಿಂದ ಸತ್ಯ ಶಪಥವನ್ನು ಮಾಡಿಸಲು ಬಯಸಿ, ಒಂದು ವಿವಾದಕ್ಕೆ ಪೀಠಿಕೆಯಾಗಿ ಮೊದಲು ಭೀಮಸೇನ ದ್ರೌಪದಿಗೆ ಹೇಳಿದ. ಅವಳು ಧರ್ಮರಾಜನನ್ನು ಕುರಿತು ಹೇಳಿದಳು: 

Wednesday, April 20, 2022

Mahabharata Tatparya Nirnaya Kannada 22: 54-59

 

ಪಾಣ್ಡವಾನಾಂ ಚ ಯಾ ಭಾರ್ಯ್ಯಾಃ ಪುತ್ರಾ ಅಪಿ ಹಿ ಸರ್ವಶಃ ।

ಅನ್ವೇವ ಪಾಣ್ಡವಾನ್ ಯಾತಾ ವನಮತ್ರೈವ ಚ ಸ್ಥಿತಾಃ ॥೨೨.೫೪॥

 

ಪಾಂಡವರ ಉಳಿದ ಹೆಂಡಿರು, ಮಕ್ಕಳೂ ಕೂಡಾ ಪಾಂಡವರನ್ನು ಅನುಸರಿಸಿ ಕಾಡಿಗೆ ಹೋಗಿ ಅಲ್ಲೇ  ಇದ್ದರು.

 

ಧೃಷ್ಟದ್ಯುಮ್ನಸ್ತತಃ ಕೃಷ್ಣಾಂ ಸಾನ್ತ್ವಯಿತ್ತ್ವೈವ ಕೇಶವಮ್ ।

ಪ್ರಣಮ್ಯ ಸಮನುಜ್ಞಾತೋ ಭಾಗಿನೇಯೈಃ ಪುರಂ ಯಯೌ         ॥೨೨.೫೫॥

 

ಧೃಷ್ಟದ್ಯುಮ್ನನು ತಂಗಿಯಾದ ದ್ರೌಪದಿಯನ್ನು ಸಮಾಧಾನಗೊಳಿಸಿ, ಶ್ರೀಕೃಷ್ಣನಿಗೆ ನಮಸ್ಕರಿಸಿ, ಅವನ ಅಣತಿಯನ್ನು ಪಡೆದು, ತನ್ನ ಸೋದರಳಿಯರಿಂದ ಕೂಡಿಕೊಂಡು (ದ್ರೌಪದಿಯ ಐದು ಮಂದಿ ಮಕ್ಕಳೊಂದಿಗೆ) ಪಾಂಚಾಲ ನಗರಕ್ಕೆ ತೆರಳಿದನು.

 

ಧೃಷ್ಟಕೇತುಶ್ಚ ಭಗಿನೀಂ ಕಾಶಿರಾಜಃ ಸುತಾಮಪಿ ।

ಪುರಂ ಯಯತುರಾದಾಯ ಕುನ್ತ್ಯೈವಾನ್ಯಾಃ ಸಹ ಸ್ಥಿತಾಃ           ॥೨೨.೫೬॥

 

ಧರ್ಮರಾಜನ ಹೆಂಡತಿ ದೇವಕಿ, ಅವಳ ಅಣ್ಣ ಶಿಶುಪಾಲನ ಮಗನಾದ ಧೃಷ್ಟಕೇತುವು ತನ್ನ ತಂಗಿ ದೇವಕಿಯನ್ನು, ಕಾಶಿರಾಜನು ಕಾಳಿ ಎಂಬ ಭೀಮಸೇನನ ಹೆಂಡತಿಯಾದ ತನ್ನ ಮಗಳನ್ನೂ ಕರೆದುಕೊಂಡು ಪಟ್ಟಣಕ್ಕೆ ತೆರಳಿದರು. ಉಳಿದ ಹೆಂಡತಿಯರು ಕುಂತಿಯ ಜೊತೆಗೇ (ವಿದುರನ ಮನೆಯಲ್ಲೇ) ಇದ್ದರು.

[ಮಹಾಭಾರತದ ವನಪರ್ವದಲ್ಲಿ(೨೨.೫೦) ಈ ಕುರಿತು ಹೇಳಿದ್ದಾರೆ: ‘ಧೃಷ್ಟಕೇತುಃ ಸ್ವಸಾರಂ ಚ ಸಮಾದಾಯಾಥ ಚೇದಿರಾಟ್ । ಜಗಾಮ ಪಾಣ್ಡವಾನ್ ದೃಷ್ಟ್ವಾ ರಮ್ಯಾಂ ಶುಕ್ತಿಮತೀಂ ಪುರೀಮ್’]

 

ಪಾರ್ವತೀ ನಕುಲಸ್ಯಾSಸೀದ್ ಭಾರ್ಯ್ಯಾ ಪೂರ್ವಂ ತಿಲೋತ್ತಮಾ ।

ಪೂರ್ವೋಕ್ತೇ ಚೈವ ಯಮಯೋರ್ಭಾರ್ಯ್ಯೇ ಕುನ್ತ್ಯಾ ಹಿ ವಾರಿತಾಃ ॥೨೨.೫೭॥

 

ತಿಲೋತ್ತಮಾ ಎನ್ನುವ ಅಪ್ಸರೆ ನಕುಲನ ಹೆಂಡತಿಯಾಗಿದ್ದಳು. (ಅವಳು ಪರ್ವತ  ಪ್ರದೇಶದಲ್ಲಿ ಹುಟ್ಟಿ ಬಂದಿದ್ದರಿಂದ ಅವಳನ್ನು ಪಾರ್ವತೀ ಎಂದು ಕರೆಯುತ್ತಿದ್ದರು). ಅವಳೂ ಮತ್ತು ಈ ಹಿಂದೆ ಹೇಳಿದ  ನಕುಲ-ಸಹದೇವರ ಪತ್ನಿಯರಾದ ಶಲ್ಯನ ಮಗಳು ಮತ್ತು  ಜರಾಸಂಧನ ಮಗಳು, ಈ ಮೂವರೂ ಕೂಡಾ  ಕುಂತಿಯಿಂದ ತಡೆಯಲ್ಪಟ್ಟು ಅಲ್ಲೇ ವಾಸಮಾಡಿದರು.

 

ಸುಭದ್ರಾಮಭಿಮನ್ಯುಂ ಚ ರಥಮಾರೋಪ್ಯ ಕೇಶವಃ ।

ಪಾಣ್ಡವಾನಭ್ಯನುಜ್ಞಾಯ ಸಭಾರ್ಯ್ಯಃ ಸ್ವಪುರಿಂ ಯಯೌ ॥೨೨.೫೮॥

 

ಸುಭದ್ರೆ-ಅಭಿಮನ್ಯುವನ್ನೂ ಕೃಷ್ಣನು ರಥವನ್ನೇರಿಸಿಕೊಂಡು ಪಾಂಡವರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಸತ್ಯಭಾಮೆಯಿಂದ ಕೂಡಿಕೊಂಡು ದ್ವಾರಕಾಪಟ್ಟಣಕ್ಕೆ ತೆರಳಿದನು.

 

ಕಞ್ಚಿತ್ ಕಾಲಂ ದ್ರೌಪದೇಯಾ ಉಷ್ಯ ಪಾಞ್ಚಾಲಕೇ ಪುರೇ ।

ಯಯುರ್ದ್ದ್ವಾರಾವತೀ ಮೇವ ತತ್ರೋಷುಃ ಕೃಷ್ಣಲಾಳಿತಾಃ ॥೨೨.೫೯॥

 

ದ್ರೌಪದಿಯ ಮಕ್ಕಳು ತಮ್ಮ ತಾತನಾದ ಪಾಂಚಾಲಪುರಿಯಲ್ಲಿ ಕೆಲವು ಕಾಲ ವಾಸಮಾಡಿ, ದ್ವಾರಕಾಪಟ್ಟಣಕ್ಕೆ ತೆರಳಿದರು. ಅಲ್ಲಿ ಕೃಷ್ಣನಿಂದ ಪೋಷಿತರಾಗಿ ವಾಸಮಾಡಿದರು.

[ಭಾಗವತದಲ್ಲಿ(೧೦.೮೭.೧೧) ಈ ವಿವರ ಕಾಣಸಿಗುತ್ತದೆ : ‘ಸುಭದ್ರಾಮಭಿಮನ್ಯುಂ ಚ ರಥಮಾರೋಪ್ಯ ಕೇಶವಃ । ಆಜಗಾಮ ವನಾದ್ ರಾಜನ್ ಪುರೀಂ ದ್ವಾರವತೀಂ ಪ್ರಭುಃ’  ಈ ವಿವರವನ್ನು ಮಹಾಭಾರತದಲ್ಲಿ ಹೇಳಿಲ್ಲವಾದರೂ, ಇದನ್ನು ನಾವು ಜೋಡಿಸಿಕೊಂಡು ಸಮಷ್ಟಿಯಾಗಿ ನೋಡಬೇಕು. ಇನ್ನು ದ್ರೌಪದಿಯ ಮಕ್ಕಳು ದ್ವಾರಕಾಪಟ್ಟಣದಲ್ಲಿ ವಾಸಮಾಡಿದ ವಿವರ ನೇರವಾಗಿ ವನಪರ್ವದಲ್ಲಿ ಹೇಳಿಲ್ಲ. ಅಲ್ಲಿ ಧೃಷ್ಟದ್ಯುಮ್ನನ ಜೊತೆಗೆ ಪಾಂಚಾಲ ದೇಶಕ್ಕೆ ಹೋದರು ಎಂದಷ್ಟೇ ಹೇಳಿದ್ದಾರೆ. ಆದರೆ ದ್ರೌಪದಿ-ಸತ್ಯಭಾಮಾ ಸಂವಾದಪರ್ವದಲ್ಲಿ(ವನಪರ್ವ: ೨೩೬.೧೦-೧೨) ಸ್ತ್ರೀಧರ್ಮದ ನಿರೂಪಣೆ ಇದೆ. ಅಲ್ಲಿ ಸತ್ಯಭಾಮೆ ಒಂದು ಮಾತನ್ನು ಹೇಳುತ್ತಾಳೆ: ‘ ಪುತ್ರಸ್ತೇ ಪ್ರತಿವಿನ್ಧ್ಯಶ್ಚ ಸುತಸೋಮಸ್ತಥಾವಿಧಃ ।  ಆರ್ಜುನಿಃ ಶ್ರುತಕೀರ್ತಿಶ್ಚ ಶತಾನೀಕಶ್ಚ ನಾಕುಲಿಃ । ಸಹದೇವಾಚ್ಚ  ಯೋ ಜಾತಃ ಶ್ರುತಕರ್ಮಾ ತವಾSತ್ಮಜಃ । ಸರ್ವೇ ಕುಶಲಿನೋ ವೀರಾಃ ಕೃತಾಸ್ತ್ರಾಶ್ಚ ಸುತಾಸ್ತವ । ಅಭಿಮನ್ಯುರಿವ ಪ್ರೀತಾ ದ್ವಾರವತ್ಯಾಂ ರತಾ ಭೃಶಮ್ । ತ್ವಮಿವೈಷಾಂ ಸುಭದ್ರಾ ಚ ಪ್ರೀತ್ಯಾ ಸರ್ವಾತ್ಮನಾ ಸ್ಥಿತಾ’ – ದ್ರೌಪದೀ, ನಿನ್ನ ಐದೂ ಮಂದಿ ಮಕ್ಕಳು ನಮ್ಮ ಮನೆಯಲ್ಲಿ ಚೆನ್ನಾಗಿ ವಾಸಮಾಡುತ್ತಿದ್ದಾರೆ. ಅವರನ್ನು ಸುಭದ್ರೆ ನೋಡಿಕೊಳ್ಳುತ್ತಿದ್ದಾಳೆ. ನೀನು ಯಾವ ಚಿಂತೆಯನ್ನೂ ಮಾಡಬೇಡ ಎಂದು ಇಲ್ಲಿ ಹೇಳುವುದನ್ನು ಕಾಣುತ್ತೇವೆ]

Monday, April 18, 2022

Mahabharata Tatparya Nirnaya Kannada 22: 47-53

 

ಶ್ರುತ್ವಾ ವಚಃ ಸ ಪವನಸ್ಯ ಶರಂ ತ್ವಮೋಘಂ ಸಞ್ಜಹ್ರ ಆಶು ಸ ಚ ಸಾಲ್ವಪತಿಃ ಸ್ವಸೌಭಮ್ ।

ಆರುಹ್ಯ ಬಾಲಕಲಹೇನ ಕಿಮತ್ರ ಕಾರ್ಯ್ಯಂ ಕೃಷ್ಣೇನ ಸಙ್ಗರ ಇತಿ ಪ್ರಯಯೌ ಸ್ವದೇಶಮ್ ॥೨೨.೪೭॥

 

ಪ್ರದ್ಯುಮ್ನನು ಮುಖ್ಯಪ್ರಾಣನ ಮಾತನ್ನು ಕೇಳಿ ವ್ಯರ್ಥವಾಗದ ಆ ಬಾಣವನ್ನು ಪ್ರಯೋಗಿಸದೇ ಹಿಂದೆ ಸೆಳೆದು ಬತ್ತಳಿಕೆಯಲ್ಲಿಟ್ಟುಕೊಂಡನು. ಆ ಸಾಲ್ವಪತಿಯಾದರೋ, ಸೌಬವೆಂಬ ವಿಮಾನವನ್ನೇರಿ ‘ಬಾಲಕನ ಜೊತೆಗೆ ಯುದ್ಧಮಾಡುವುದರಿಂದ ಏನು ಪ್ರಯೋಜನ, ಯುದ್ಧ ಮಾಡುವುದಾದರೆ ಕೃಷ್ಣನೊಂದಿಗೇ ಯುದ್ಧ ಮಾಡುತ್ತೇನೆ’ ಎಂದುಕೊಂಡು ತನ್ನ ದೇಶಕ್ಕೆ ತೆರಳಿದನು.

 

  ಪ್ರದ್ಯುಮ್ನಸಾಮ್ಬಗದಸಾರಣಚಾರುದೇಷ್ಣಾಃ ಸೇನಾಂ ನಿಹತ್ಯ ಸಹ ಮನ್ತ್ರಿಗಣೈಸ್ತದೀಯಾಮ್ ।

  ಆಹ್ಲಾದಿನಃ ಸ್ವಪುರಮಾಯಯುರಪ್ಯಹಂ ಚ ತತ್ರಾಗಮಂ ಸಪದಿ ತೈಃ ಶ್ರುತವಾನಶೇಷಮ್ ॥೨೨.೪೮॥

 

ಪ್ರದ್ಯುಮ್ನ, ಸಾಮ್ಬ, ಗದ, ಸಾರಣ, ಚಾರುದೇಷ್ಣ, ಇವರೆಲ್ಲರೂ ಮಂತ್ರಿ ಮೊದಲಾದವರ ಸಮೂಹದಿಂದ ಕೂಡಿದ ಸಾಲ್ವನ ಸೇನೆಯನ್ನು ನಾಶಮಾಡಿ, ಸಂತೋಷಪಡುತ್ತಾ ಪಟ್ಟಣಕ್ಕೆ ಮರಳಿದರು. ನಾನೂ ಕೂಡಾ ಅದೇ ಸಮಯಕ್ಕೆ ಅಲ್ಲಿಗೆ ತೆರಳಿದೆ. ಕೂಡಲೇ ಅವರಿಂದ ನಡೆದ ಎಲ್ಲಾ ಘಟನೆಗಳನ್ನೂ ಕೇಳಿದೆ.

 

 ಯಸ್ಮಿಞ್ಛರೇ ಕರಗತೇ ವಿಜಯೋ ದ್ಧ್ರುವಃ ಸ್ಯಾನ್ಮತ್ತೇಜಸಾ ತದನುಸಙ್ಗ್ರಹಣಾತ್ ಸುತಾನ್ಮೇ ।

 ಯಾತಂ ನಿಶಮ್ಯ ರಿಪುಮಾತ್ಮಪುರೀಂ ಚ ಭಗ್ನಾಂ ದೃಷ್ಟ್ವೈವ ತೇನ ತದನುಬ್ರಜನಂ ಕೃತಂ ಮೇ ॥೨೨.೪೯॥

 

ಯಾವ ಬಾಣವು ಕೈಯಲ್ಲಿ ಇರಲು ಗೆಲುವು ಖಚಿತವೋ ಅಂತಹ ಬಾಣವನ್ನು ನನ್ನ ತೇಜಸ್ಸಿನಿಂದ  ತನ್ನಲ್ಲಿ ಇಟ್ಟುಕೊಂಡ ನನ್ನ ಮಗನಿಂದ ಸಾಲ್ವ ಹೊರಟುಹೋದ ಎಂದು ಕೇಳಿ, ಹಾಳಾಗಿರುವ  ದ್ವಾರಕಾ ಪಟ್ಟಣವನ್ನು ಸರಿಪಡಿಸುವಂತೆ ಆಜ್ಞೆಮಾಡಿ, ನಾನು ಸಾಲ್ವನನ್ನು ಹಿಂಬಾಲಿಸಿ ಹೋದೆ.

 

ತಂ ಸಾಗರೋಪರಿಗಸೌಭಗತಂ ನಿಶಾಮ್ಯ ಮುಕ್ತೇ ಚ ತೇನ ಮಯಿ ಶಸ್ತ್ರಮಹಾಸ್ತ್ರವರ್ಷೇ ।

ತಂ ಸನ್ನಿವಾರ್ಯ್ಯ ತು ಮಯಾ ಶರಪೂಗವಿದ್ಧೋ ಮಾಯಾ ಯುಯೋಜ ಮಯಿ ಪಾಪತಮಃ ಸ ಸಾಲ್ವಃ ॥೨೨.೫೦॥

 

ಸಾಗರದ ಮೇಲ್ಗಡೆ ನೆಲೆಗೊಂಡ ಸೌಭವೆಂಬ ವಿಮಾನದಲ್ಲಿ ಇರುವ ಸಾಲ್ವನನ್ನು ಕಂಡು, ಅವನಿಂದ ನನ್ನಲ್ಲಿ ಶಸ್ತ್ರಗಳೂ, ಮಹತ್ತಾದ ಅಸ್ತ್ರಗಳ ಮಳೆಗರೆಯಲು, ಅದನ್ನು ತಡೆದು ನನ್ನಿಂದ  ಬಾಣಗಳ ಸಮೂಹದಿಂದ ಹೊಡೆಯಲ್ಪಟ್ಟ ಪಾಪಿಷ್ಟನಾದ ಆ ಸಾಲ್ವನು, ವಿಧವಿಧವಾದ ಕುಟಿಲ ಪ್ರಯೋಗಗಳನ್ನು(ಐನ್ದ್ರಜಾಲಿಕ ಮಾಯೆಗಳನ್ನು) ಮಾಡಲು ಆರಂಭಿಸಿದ.

 

ತಾಃ ಕ್ರೀಡಯಾ ಕ್ಷಣಮಹಂ ಸಮರೇ ನಿಶಾಮ್ಯ ಜ್ಞಾನಾಸ್ತ್ರತಃ ಪ್ರತಿವಿಧೂಯ ಬಹೂಂಶ್ಚ ದೈತ್ಯಾನ್ ।

ಹತ್ವಾSSಶು ತಂ ಚ ಗಿರಿವರ್ಷಿಣಮಾಶು ಸೌಭಂ ವಾರ್ದ್ಧೌ ನ್ಯಪಾತಯಮರೀನ್ದ್ರವಿಭಿನ್ನಬನ್ಧಮ್ ॥೨೨.೫೧॥

 

ಆ ಎಲ್ಲಾ ಮಾಯೆಗಳನ್ನು ಅನಾಯಾಸವಾಗಿ ಕ್ಷಣಮಾತ್ರದಲ್ಲಿ, ಕ್ರೀಡಾಮಾತ್ರವಾಗಿ, ಜ್ಞಾನಾಸ್ತ್ರದಿಂದ ನಾಶಮಾಡಿ, ಬಹಳ ಜನ ದೈತ್ಯರನ್ನು ಕೊಂದು, ನನ್ನ ಮೇಲೆ ಗಿರಿಶ್ರೇಷ್ಠಗಳನ್ನು ವರ್ಷಿಸತಕ್ಕ ಆ ಸಾಲ್ವನನ್ನು ಸಮುದ್ರದಲ್ಲಿ ಬೀಳಿಸಿದೆನು. ಚಕ್ರದಲ್ಲೇ ಶ್ರೇಷ್ಠವಾಗಿರುವ ಸುದರ್ಶನದ ಪ್ರಯೋಗದಿಂದ ಒಡಕುಂಟಾಡ ವಿಮಾನ ಕೆಳಗೆ ಬಿದ್ದಿತು.  

 

ತಂ ಸ್ಯನ್ದನಸ್ಥಿತಮಥೋ ವಿಭುಜಂ ವಿಧಾಯ ಬಾಣೇನ ತದ್ರಥವರಂ ಗದಯಾ ವಿಭಿದ್ಯ ।

ಚಕ್ರೇಣ ತಸ್ಯ ಚ ಶಿರೋ ವಿನಿಕೃತ್ಯ ಧಾತೃಶರ್ವಾದಿಭಿಃ ಪ್ರತಿನುತಃ ಸ್ವಪುರೀಮಗಾಂ ಚ ॥೨೨.೫೨॥

 

ವಿಮಾನ ನಾಶವಾದ ನಂತರ ರಥದಲ್ಲಿ ಕುಳಿತ ಸಾಲ್ವನ ತೊಳ್ಗಳನ್ನು ಬಾಣದಿಂದ ಕತ್ತರಿಸಿ, ಅವನ ಶ್ರೇಷ್ಠವಾದ ರಥವನ್ನು ಗದೆಯಿಂದ  ಪುಡಿಪುಡಿಮಾಡಿ, ಚಕ್ರದಿಂದ ಸಾಲ್ವನ ತಲೆಯನ್ನು ಕತ್ತರಿಸಿ, ಬ್ರಹ್ಮ ರುದ್ರ ಮೊದಲಾದವರಿಂದ ಸ್ತುತಿಸಲ್ಪಟ್ಟವನಾಗಿ ನನ್ನ ಪಟ್ಟಣವಾದ ದ್ವಾರಕೆಗೆ ತೆರಳಿದೆ.

 

   ತಸ್ಮಾದಿದಂ ವ್ಯಸನಮಾಸ ಹಿ ವಿಪ್ರಕರ್ಷಾನ್ಮೇ ಕಾರ್ಯ್ಯತಸ್ತ್ವಿತಿ ನಿಗದ್ಯ ಪುನಶ್ಚ ಪಾರ್ತ್ಥಾನ್ ।

   ಕೃಷ್ಣಾಂ ಚ ಸಾನ್ತ್ವಯಿತುಮತ್ರ ದಿನಾನ್ಯುವಾಸ ಸತ್ಯಾ ಚ ಸೋಮಕಸುತಾಮನುಸಾನ್ತ್ವಯನ್ತೀ ॥೨೨.೫೩॥

 

ಹೀಗೆ ಸಾಲ್ವಕಾರ್ಯಕ್ಕಾಗಿ ನಾನು ನಿಮ್ಮಿಂದ ದೂರವಿದ್ದುದರಿಂದ ನಿಮಗೆ ಕಷ್ಟವಾಯಿತು’. ಈರೀತಿಯಾಗಿ  ಹೇಳಿದ ಶ್ರೀಕೃಷ್ಣ ದ್ರೌಪದಿಯನ್ನು ಸಮಾಧಾನ ಮಾಡಲು ಕೆಲವು ದಿನಗಳ ಪರ್ಯಂತ ಅಲ್ಲೇ ವಾಸಮಾಡಿದ. ಸತ್ಯಭಾಮೆಯೂ ಕೂಡಾ ದ್ರೌಪದಿಯನ್ನು ಸಾಂತ್ವನಗೊಳಿಸಲು ಅಲ್ಲೇ ಆವಾಸಮಾಡಿದಳು.

Sunday, April 17, 2022

Mahabharata Tatparya Nirnaya Kannada 22: 41-46

 

ತಸ್ಮಾದ್ ಯಥಾಯೋಗ್ಯತಯಾ ಹರಿಣಾ ಧರ್ಮ್ಮವರ್ದ್ಧನಮ್ ।

ಕೃತಂ ತತ್ರಾಸನ್ನಿಧಾನಕಾರಣಂ ಕೇಶವೋSಬ್ರವೀತ್               ॥ ೨೨.೪೧॥

 

ಆ ಕಾರಣದಿಂದ ಅವರವರ ಯೋಗ್ಯತೆಗೆ ಅನುಗುಣವಾಗಿ ಪರಮಾತ್ಮನಿಂದ ಪುಣ್ಯದ ಅಭಿವೃದ್ಧಿಯು ಮಾಡಲ್ಪಟ್ಟಿತು. (ತಥಾಚ - ಅವರವರು ಅವರವರಿಗೆ ಬೇಕಾದಂತೆ ಸಾಧನೆಯನ್ನು ಮಾಡಬೇಕಾಗಿತ್ತು. ಆ ಸಾಧನೆ ಮಾಡಲು ಜೂಜು ಕಾರಣವಾಯಿತು. ಯುಧಿಷ್ಠಿರನಲ್ಲಿ ಏನು ಮಿಗಿಲಾದ ಪುಣ್ಯವಿತ್ತು, ಅದೆಲ್ಲವೂ ಅರ್ಜುನಾದಿಗಳಿಗೆ ವರ್ಗಾವಣೆಯಾಯಿತು. ಇನ್ನು ಭೀಷ್ಮ, ದ್ರೋಣ, ಧೃತರಾಷ್ಟ್ರರಲ್ಲಿ ಏನು ಅಧಿಕವಾದ ಪುಣ್ಯವಿತ್ತು, ಅದೂ ಕೂಡಾ ವರ್ಗಾವಣೆಯಾಯಿತು.  ಪಾಂಡವರಲ್ಲಿ ತಾರತಮ್ಯದಂತೆ ಭೀಮಸೇನನಿಗೆ ಅತ್ಯುತ್ಕಟವಾದ ಪುಣ್ಯ. ನಂತರ ದ್ರೌಪದಿ, ಆನಂತರ ಅರ್ಜುನ ಮೊದಲಾದವರಿಗೆ. ಇದೆಲ್ಲವುದಕ್ಕೂ ಕೂಡಾ ಜೂಜು ನಿಮಿತ್ತವಾಯಿತು). ಆ ದ್ಯೂತಸಭೆಯಲ್ಲಿ ತಾನು ಇಲ್ಲದಿರುವುದಕ್ಕೆ, ಯೋಗ್ಯತಾನುಸಾರ ಪುಣ್ಯ ಬರುವ ವಿಷಯದಲ್ಲಿ ಕಾರಣವನ್ನು ಶ್ರೀಕೃಷ್ಣನೇ  ಹೇಳಿರುವನು.

 

ಸಾಲ್ವಂ ಶ್ರುತ್ವಾ ಸಮಾಯಾತಂ ರೌಗ್ಮಿಣೇಯಾದಯೋ ಮಯಾ ।

ಪ್ರಸ್ಥಾಪಿತಾ ಹಿ ಭವತಾಂ ಸಕಾಶಾತ್ ತೇ ಯಯುಃ ಪುರೀಮ್ ।

ತದಾ ಸಾಲ್ವೋSಪಿ ಸೌಭೇನ ದ್ವಾಕಾಮರ್ದ್ದಯದ್ ಭೃಶಮ್ ॥ ೨೨.೪೨॥

 

ಸಾಲ್ವನನ್ನು  ಕೊಲ್ಲಲೇಬೇಕಾದ ಘಟನೆಯನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ:

'ಸಾಲ್ವನು ನಾವಿಲ್ಲದ ಸಮಯದಲ್ಲಿ ದ್ವಾರಕೆಗೆ ಬಂದಿದ್ದಾನೆ ಎನ್ನುವುದನ್ನು  ಕೇಳಿ, ನಿಮ್ಮೆದುರೇ ಪ್ರದ್ಯುಮ್ನ ಮೊದಲಾದವರು ನನ್ನಿಂದ ಕಳುಹಿಸಲ್ಪಟ್ಟರಷ್ಟೇ. ಪ್ರದ್ಯುಮ್ನಾದಿಗಳು ಪಟ್ಟಣವನ್ನು ಕುರಿತು ತೆರಳಿದರು. ಆಗ ಸಾಲ್ವನೂ ಕೂಡಾ ಸೌಭ ವಿಮಾನದಿಂದ ದ್ವಾರಕಾ ಪಟ್ಟಣವನ್ನು ಚೆನ್ನಾಗಿ ಹಾಳುಗೆಡವಿದ್ದ.  

 

ಪ್ರದ್ಯುಮ್ನ ಆಶು ನಿರಗಾದಥ ಸರ್ವಸೈನ್ಯೈರನ್ಯೈಶ್ಚ ಯಾದವಗಣೈಃ ಸಹಿತೋSನುಜೈಶ್ಚ ।

ಸಾಲ್ವೋSವಗಮ್ಯ ತನಯಂ ಮಮ ತದ್ವಿಮಾನಾತ್ ಪಾಪೋSವರುಹ್ಯ ರಥಮಾರುಹದತ್ರ ಯೋದ್ಧುಮ್ ॥೨೨.೪೩॥

 

ಪ್ರದ್ಯುಮ್ನನು ಕೂಡಲೇ ಯಾದವರಿಂದಲೂ, ಸಮಸ್ತ ಸೈನ್ಯದಿಂದಲೂ,  ಅನುಜರೊಂದಿಗೂ ಕೂಡಿ  ಹೊರಬಂದ. ಆಗ ವಿಮಾನದಲ್ಲಿದ್ದ ಪಾಪಿಷ್ಠನಾದ ಸಾಲ್ವನು ಪ್ರದ್ಯುಮ್ನ ಬಂದಿದ್ದಾನೆ ಎಂದು ತಿಳಿದು, ವಿಮಾನದಿಂದ ಕೆಳಗಿಳಿದು, ಯುದ್ಧ ಮಾಡಲು ರಥವನ್ನು ಏರಿದ. (ಪ್ರದ್ಯುಮ್ನನ ಮೇಲಿನ ಉಪೇಕ್ಷೆಯಿಂದ ವಿಮಾನದಿಂದ ಯುದ್ಧ ಮಾಡದೇ ರಥವನ್ನೇರಿ ಬಂದ).

 

ಕೃತ್ವಾ ಸುಯುದ್ಧಮಮುನಾ ಮಮ ಪುತ್ರಕೋsಸಾವಸ್ತ್ರಾಣಿ ತಸ್ಯ ವಿನಿವಾರ್ಯ್ಯ ಮಹಾಸ್ತ್ರಜಾಲೈಃ ।

ದತ್ತಂ ಮಯಾ ಶರಮಮೋಘಮಥಾSದದೇ ತಂ ಹನ್ತುಂ ನೃಪಂ ಕೃತಮತಿಸ್ತ್ವಶೃಣೋದ್ ವಚಃ ಖೇ ॥೨೨.೪೪॥

 

ಸಾಲ್ವನೊಂದಿಗೆ ನನ್ನ ಮಗ ಪ್ರದ್ಯುಮ್ನನು ಭಾರೀ ಯುದ್ಧವನ್ನು ಮಾಡಿ, ಅವನ ಅಸ್ತ್ರಗಳನ್ನು ತನ್ನ ಶ್ರೇಷ್ಠವಾದ ಅಸ್ತ್ರಗಳಿಂದ ತಡೆದು, ನನ್ನಿಂದ ಕೊಡಲ್ಪಟ್ಟ ಎಂದೂ ವ್ಯರ್ಥವಾಗದ ಬಾಣವನ್ನು ಸಾಲ್ವನನ್ನು ಕೊಲ್ಲಲು ನಿಶ್ಚಯಿಸಿ ತೆಗೆದುಕೊಂಡ. ಆಗ ಈ ರೀತಿ ಅಶರೀರವಾಣಿಯಾಯಿತು(ಆಗಸದಲ್ಲಿ ಮುಖ್ಯಪ್ರಾಣ ಮಾತನಾಡಿದ):

 

   ನಾರಾಯಣೇನ ಹಿ ಪುರಾ ಮನಸಾSಭಿಕ್ಲ್ ಪ್ತಂ ಕೃಷ್ಣಾವತಾರಮುಪಗಮ್ಯ ನಿಹನ್ಮಿ ಸಾಲ್ವಮ್ ।

   ಇತ್ಯೇವ ತೇನ ಹರಿಣಾSಪಿ ಸ ಭಾರ್ಗ್ಗವೇಣ ವಿದ್ರಾವಿತೋ ನ ನಿಹತಃ ಸ್ವಮನೋನುಸಾರಾತ್ ॥ ೨೨.೪೫॥

 

   ವದ್ಧ್ಯಸ್ತ್ವಯಾ ನಹಿ ತತೋSಯಮಯಂ ಚ ಬಾಣಶ್ಚಕ್ರಾಯುಧಸ್ಯ ದಯಿತೋ ನಿತರಾಮಮೋಘಃ ।

   ಮಾ ಮುಞ್ಚ ತೇನ ತಮಿಮಂ ವಿನಿವರ್ತ್ತಯೇSಹಂ ಸಾಲ್ವಂ ಹೃದಿ ಸ್ಥಿತ ಇತೀರಿತಮೀರಣೇನ ॥೨೨.೪೬॥

 

ಹಿಂದೆ ಸಾಕ್ಷಾತ್ ನಾರಾಯಣನು ‘ಕೃಷ್ಣಾವತಾರವನ್ನು ಹೊಂದಿ ಸಾಲ್ವನನ್ನು ಕೊಲ್ಲುತ್ತೇನೆ’ ಎಂದು ಮನಸ್ಸಿನಿಂದ ಸಂಕಲ್ಪ ಮಾಡಿದ್ದಾನೆ. ಅದರಿಂದ ತನ್ನ ಸಂಕಲ್ಪದಂತೆ ಪರಶುರಾಮನಿಂದ ಓಡಿಸಲ್ಪಟ್ಟನೇ ಹೊರತು ಸಂಹರಿಸಲ್ಪಡಲಿಲ್ಲ.  

ನಿನ್ನಿಂದ ಈ ಸಾಲ್ವನು ಕೊಲ್ಲಲ್ಪಡುವವನಲ್ಲ. (ನೀನು ಅವನನ್ನು ಕೊಲ್ಲಬಾರದು) ಈ ಬಾಣ ಕೃಷ್ಣನಿಗೆ ಅತ್ಯಂತ ಪ್ರೀತಿಪ್ರದವಾಗಿದ್ದು ಇದು ಎಂದೂ ವ್ಯರ್ಥವಾಗುವುದಿಲ್ಲ. ಅದರಿಂದ ಇವನನ್ನು ಕುರಿತು ಈ ಬಾಣವನ್ನು ಪ್ರಯೋಗಿಸಬೇಡ. ನಾನು ಸಾಲ್ವನ  ಮನಸ್ಸನ್ನು ಪ್ರೇರಣೆಮಾಡಿ ಹಿಂದಕ್ಕೆ ಕಳುಹಿಸುತ್ತೇನೆ ಎಂದು ಮುಖ್ಯಪ್ರಾಣನಿಂದ ಹೇಳಲ್ಪಟ್ಟಿತು.

 

[ಮಹಾಭಾರತದ ಸಭಾಪರ್ವದಲ್ಲಿ(೪೯, ೨೪-೨೮) ಈ ರೀತಿ ವಿವರಣೆಯನ್ನು ಕಾಣುತ್ತೇವೆ: ‘ತತಃ ಸ ಭೃಗುಶಾರ್ದೂಲಸ್ತಂ ಸೌಭಂ ಯೋಧಯನ್ ಪ್ರಭುಃ । ಸುಬನ್ಧುರಂ ರಥಂ ರಾಜನ್ನಾಸ್ಥಾಯಾ ಭರತರ್ಷಭ । ನಗ್ನಿಕಾನಾಂ ಕುಮಾರೀಣಾಂ ಗಾಯನ್ತಿನಾಮುಪಾಶೃುಣೋತ್ । ರಾಮ ರಾಮ ಮಹಾಬಾಹೋ ಭೃಗೂಣಾಂ ಕೀರ್ತಿವರ್ಧನ । ತ್ಯಜ ಶಾಸ್ತ್ರಾಣಿ ಸರ್ವಾಣಿ ನ ತ್ವಂ ಸೌಭಂ ವಧಿಷ್ಯತಿ । ಶಙ್ಖಚಕ್ರಗದಾಪಾಣಿರ್ದೇವಾನಾಮಭಯಙ್ಕರಃ । ಯುಧಿ ಪ್ರದ್ಯುಮ್ನಸಾಮ್ಬಾಭ್ಯಾಂ ಕೃಷ್ಣಃ ಸೌಭಂ ವಿಧಿಷ್ಯತಿ ।   ತಚ್ಛ್ರುತ್ವಾ ಪುರುಷವ್ಯಾಘ್ರಸ್ತತ ಏವ ವನಂ ಯಯೌ । ನ್ಯಸ್ಯ ಸರ್ವಾಣಿ ಶಸ್ತ್ರಾಣಿ ಕಾಲಾಕಾಙ್ಕ್ಷಿ ಮಹಾಯಶಾಃ’. ಭೀಷ್ಮಾಚಾರ್ಯರು ಶಿಶುಪಾಲನಿಗೆ ಉತ್ತರ ಕೊಡುವ ಸಂದರ್ಭದಲ್ಲಿ ಕೃಷ್ಣನ ಎಲ್ಲಾ ಅವತಾರಗಳನ್ನೂ ಹೇಳುತ್ತಾ ಈ ಮಾತನ್ನಾಡುತ್ತಾರೆ. ಪರಶುರಾಮ ಕೊಲ್ಲಲು ಬಂದಿದ್ದ. ಆಗ ‘ನೀನು ಸೌಭನನ್ನು ಕೊಲ್ಲಬೇಡ, ಅವನನ್ನು ಕೃಷ್ಣ ಕೊಲ್ಲುತ್ತಾನೆ’ ಎಂದು ಅಶರೀರವಾಣಿಯಾಯಿತು.  ವನಪರ್ವದಲ್ಲಿ(೨೨.೨೫) : ‘ಜಿತವಾನ್ ಜಾಮದಗ್ನ್ಯಂ ಯಃ ಕೋಟಿವರ್ಷಗಣಾನ್  ಬಹೂನ್ । ಸ ಏಷ ನಾನೈರ್ವಧ್ಯೋ  ಹಿ ತ್ವಾಮೃತೇ ನಾಸ್ತಿ ಕಶ್ಚನ’  ಎಂದು ಹೇಳಿದ್ದಾರೆ. ಇಲ್ಲಿ  ಪರಶುರಾಮನನ್ನು ಸಾಲ್ವ ಗೆದ್ದ ಎಂದು ಹೇಳಿದಂತೆ ಕಾಣುತ್ತದೆ ಆದರೆ ಅದರರ್ಥ-ಸಾಲ್ವನನ್ನು ಪರಶುರಾಮ ಸೋಲಿಸಲಿಲ್ಲ ಎಂದಷ್ಟೇ ಎನ್ನುವುದನ್ನು ನಾವಿಲ್ಲಿ ತಿಳಿಯಬೇಕು.]