ಪಾಣ್ಡವಾನಾಂ ಚ ಯಾ ಭಾರ್ಯ್ಯಾಃ
ಪುತ್ರಾ ಅಪಿ ಹಿ ಸರ್ವಶಃ ।
ಅನ್ವೇವ ಪಾಣ್ಡವಾನ್
ಯಾತಾ ವನಮತ್ರೈವ ಚ ಸ್ಥಿತಾಃ ॥೨೨.೫೪॥
ಪಾಂಡವರ ಉಳಿದ ಹೆಂಡಿರು, ಮಕ್ಕಳೂ ಕೂಡಾ ಪಾಂಡವರನ್ನು ಅನುಸರಿಸಿ ಕಾಡಿಗೆ ಹೋಗಿ ಅಲ್ಲೇ ಇದ್ದರು.
ಧೃಷ್ಟದ್ಯುಮ್ನಸ್ತತಃ
ಕೃಷ್ಣಾಂ ಸಾನ್ತ್ವಯಿತ್ತ್ವೈವ ಕೇಶವಮ್ ।
ಪ್ರಣಮ್ಯ ಸಮನುಜ್ಞಾತೋ
ಭಾಗಿನೇಯೈಃ ಪುರಂ ಯಯೌ ॥೨೨.೫೫॥
ಧೃಷ್ಟದ್ಯುಮ್ನನು ತಂಗಿಯಾದ ದ್ರೌಪದಿಯನ್ನು ಸಮಾಧಾನಗೊಳಿಸಿ, ಶ್ರೀಕೃಷ್ಣನಿಗೆ
ನಮಸ್ಕರಿಸಿ, ಅವನ ಅಣತಿಯನ್ನು ಪಡೆದು, ತನ್ನ
ಸೋದರಳಿಯರಿಂದ ಕೂಡಿಕೊಂಡು (ದ್ರೌಪದಿಯ ಐದು ಮಂದಿ ಮಕ್ಕಳೊಂದಿಗೆ) ಪಾಂಚಾಲ ನಗರಕ್ಕೆ ತೆರಳಿದನು.
ಧೃಷ್ಟಕೇತುಶ್ಚ ಭಗಿನೀಂ
ಕಾಶಿರಾಜಃ ಸುತಾಮಪಿ ।
ಪುರಂ ಯಯತುರಾದಾಯ
ಕುನ್ತ್ಯೈವಾನ್ಯಾಃ ಸಹ ಸ್ಥಿತಾಃ ॥೨೨.೫೬॥
ಧರ್ಮರಾಜನ ಹೆಂಡತಿ ದೇವಕಿ, ಅವಳ ಅಣ್ಣ ಶಿಶುಪಾಲನ ಮಗನಾದ ಧೃಷ್ಟಕೇತುವು ತನ್ನ ತಂಗಿ
ದೇವಕಿಯನ್ನು, ಕಾಶಿರಾಜನು ಕಾಳಿ ಎಂಬ ಭೀಮಸೇನನ ಹೆಂಡತಿಯಾದ ತನ್ನ ಮಗಳನ್ನೂ ಕರೆದುಕೊಂಡು
ಪಟ್ಟಣಕ್ಕೆ ತೆರಳಿದರು. ಉಳಿದ ಹೆಂಡತಿಯರು ಕುಂತಿಯ ಜೊತೆಗೇ (ವಿದುರನ ಮನೆಯಲ್ಲೇ) ಇದ್ದರು.
[ಮಹಾಭಾರತದ ವನಪರ್ವದಲ್ಲಿ(೨೨.೫೦) ಈ ಕುರಿತು ಹೇಳಿದ್ದಾರೆ: ‘ಧೃಷ್ಟಕೇತುಃ ಸ್ವಸಾರಂ ಚ
ಸಮಾದಾಯಾಥ ಚೇದಿರಾಟ್ । ಜಗಾಮ ಪಾಣ್ಡವಾನ್ ದೃಷ್ಟ್ವಾ ರಮ್ಯಾಂ ಶುಕ್ತಿಮತೀಂ ಪುರೀಮ್’]
ಪಾರ್ವತೀ ನಕುಲಸ್ಯಾSಸೀದ್
ಭಾರ್ಯ್ಯಾ ಪೂರ್ವಂ ತಿಲೋತ್ತಮಾ ।
ಪೂರ್ವೋಕ್ತೇ ಚೈವ
ಯಮಯೋರ್ಭಾರ್ಯ್ಯೇ ಕುನ್ತ್ಯಾ ಹಿ ವಾರಿತಾಃ ॥೨೨.೫೭॥
ತಿಲೋತ್ತಮಾ ಎನ್ನುವ ಅಪ್ಸರೆ ನಕುಲನ ಹೆಂಡತಿಯಾಗಿದ್ದಳು. (ಅವಳು ಪರ್ವತ ಪ್ರದೇಶದಲ್ಲಿ ಹುಟ್ಟಿ ಬಂದಿದ್ದರಿಂದ ಅವಳನ್ನು
ಪಾರ್ವತೀ ಎಂದು ಕರೆಯುತ್ತಿದ್ದರು). ಅವಳೂ ಮತ್ತು ಈ ಹಿಂದೆ ಹೇಳಿದ ನಕುಲ-ಸಹದೇವರ ಪತ್ನಿಯರಾದ ಶಲ್ಯನ ಮಗಳು ಮತ್ತು ಜರಾಸಂಧನ ಮಗಳು, ಈ ಮೂವರೂ ಕೂಡಾ ಕುಂತಿಯಿಂದ ತಡೆಯಲ್ಪಟ್ಟು ಅಲ್ಲೇ ವಾಸಮಾಡಿದರು.
ಸುಭದ್ರಾಮಭಿಮನ್ಯುಂ ಚ
ರಥಮಾರೋಪ್ಯ ಕೇಶವಃ ।
ಪಾಣ್ಡವಾನಭ್ಯನುಜ್ಞಾಯ
ಸಭಾರ್ಯ್ಯಃ ಸ್ವಪುರಿಂ ಯಯೌ ॥೨೨.೫೮॥
ಸುಭದ್ರೆ-ಅಭಿಮನ್ಯುವನ್ನೂ ಕೃಷ್ಣನು ರಥವನ್ನೇರಿಸಿಕೊಂಡು ಪಾಂಡವರಿಗೆ ಹೋಗಿ ಬರುತ್ತೇನೆ
ಎಂದು ಹೇಳಿ ಸತ್ಯಭಾಮೆಯಿಂದ ಕೂಡಿಕೊಂಡು ದ್ವಾರಕಾಪಟ್ಟಣಕ್ಕೆ ತೆರಳಿದನು.
ಕಞ್ಚಿತ್ ಕಾಲಂ
ದ್ರೌಪದೇಯಾ ಉಷ್ಯ ಪಾಞ್ಚಾಲಕೇ ಪುರೇ ।
ಯಯುರ್ದ್ದ್ವಾರಾವತೀ ಮೇವ
ತತ್ರೋಷುಃ ಕೃಷ್ಣಲಾಳಿತಾಃ ॥೨೨.೫೯॥
ದ್ರೌಪದಿಯ ಮಕ್ಕಳು ತಮ್ಮ ತಾತನಾದ ಪಾಂಚಾಲಪುರಿಯಲ್ಲಿ ಕೆಲವು ಕಾಲ ವಾಸಮಾಡಿ,
ದ್ವಾರಕಾಪಟ್ಟಣಕ್ಕೆ ತೆರಳಿದರು. ಅಲ್ಲಿ ಕೃಷ್ಣನಿಂದ ಪೋಷಿತರಾಗಿ ವಾಸಮಾಡಿದರು.
[ಭಾಗವತದಲ್ಲಿ(೧೦.೮೭.೧೧) ಈ ವಿವರ ಕಾಣಸಿಗುತ್ತದೆ : ‘ಸುಭದ್ರಾಮಭಿಮನ್ಯುಂ ಚ ರಥಮಾರೋಪ್ಯ ಕೇಶವಃ । ಆಜಗಾಮ ವನಾದ್ ರಾಜನ್ ಪುರೀಂ ದ್ವಾರವತೀಂ ಪ್ರಭುಃ’ ಈ ವಿವರವನ್ನು ಮಹಾಭಾರತದಲ್ಲಿ ಹೇಳಿಲ್ಲವಾದರೂ, ಇದನ್ನು ನಾವು ಜೋಡಿಸಿಕೊಂಡು ಸಮಷ್ಟಿಯಾಗಿ ನೋಡಬೇಕು. ಇನ್ನು ದ್ರೌಪದಿಯ ಮಕ್ಕಳು ದ್ವಾರಕಾಪಟ್ಟಣದಲ್ಲಿ ವಾಸಮಾಡಿದ ವಿವರ ನೇರವಾಗಿ ವನಪರ್ವದಲ್ಲಿ ಹೇಳಿಲ್ಲ. ಅಲ್ಲಿ ಧೃಷ್ಟದ್ಯುಮ್ನನ ಜೊತೆಗೆ ಪಾಂಚಾಲ ದೇಶಕ್ಕೆ ಹೋದರು ಎಂದಷ್ಟೇ ಹೇಳಿದ್ದಾರೆ. ಆದರೆ ದ್ರೌಪದಿ-ಸತ್ಯಭಾಮಾ ಸಂವಾದಪರ್ವದಲ್ಲಿ(ವನಪರ್ವ: ೨೩೬.೧೦-೧೨) ಸ್ತ್ರೀಧರ್ಮದ ನಿರೂಪಣೆ ಇದೆ. ಅಲ್ಲಿ ಸತ್ಯಭಾಮೆ ಒಂದು ಮಾತನ್ನು ಹೇಳುತ್ತಾಳೆ: ‘ ಪುತ್ರಸ್ತೇ ಪ್ರತಿವಿನ್ಧ್ಯಶ್ಚ ಸುತಸೋಮಸ್ತಥಾವಿಧಃ । ಆರ್ಜುನಿಃ ಶ್ರುತಕೀರ್ತಿಶ್ಚ ಶತಾನೀಕಶ್ಚ ನಾಕುಲಿಃ । ಸಹದೇವಾಚ್ಚ ಯೋ ಜಾತಃ ಶ್ರುತಕರ್ಮಾ ತವಾSತ್ಮಜಃ । ಸರ್ವೇ ಕುಶಲಿನೋ ವೀರಾಃ ಕೃತಾಸ್ತ್ರಾಶ್ಚ ಸುತಾಸ್ತವ । ಅಭಿಮನ್ಯುರಿವ ಪ್ರೀತಾ ದ್ವಾರವತ್ಯಾಂ ರತಾ ಭೃಶಮ್ । ತ್ವಮಿವೈಷಾಂ ಸುಭದ್ರಾ ಚ ಪ್ರೀತ್ಯಾ ಸರ್ವಾತ್ಮನಾ ಸ್ಥಿತಾ’ – ದ್ರೌಪದೀ, ನಿನ್ನ ಐದೂ ಮಂದಿ ಮಕ್ಕಳು ನಮ್ಮ ಮನೆಯಲ್ಲಿ ಚೆನ್ನಾಗಿ ವಾಸಮಾಡುತ್ತಿದ್ದಾರೆ. ಅವರನ್ನು ಸುಭದ್ರೆ ನೋಡಿಕೊಳ್ಳುತ್ತಿದ್ದಾಳೆ. ನೀನು ಯಾವ ಚಿಂತೆಯನ್ನೂ ಮಾಡಬೇಡ ಎಂದು ಇಲ್ಲಿ ಹೇಳುವುದನ್ನು ಕಾಣುತ್ತೇವೆ]
No comments:
Post a Comment