ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 17, 2022

Mahabharata Tatparya Nirnaya Kannada 22: 41-46

 

ತಸ್ಮಾದ್ ಯಥಾಯೋಗ್ಯತಯಾ ಹರಿಣಾ ಧರ್ಮ್ಮವರ್ದ್ಧನಮ್ ।

ಕೃತಂ ತತ್ರಾಸನ್ನಿಧಾನಕಾರಣಂ ಕೇಶವೋSಬ್ರವೀತ್               ॥ ೨೨.೪೧॥

 

ಆ ಕಾರಣದಿಂದ ಅವರವರ ಯೋಗ್ಯತೆಗೆ ಅನುಗುಣವಾಗಿ ಪರಮಾತ್ಮನಿಂದ ಪುಣ್ಯದ ಅಭಿವೃದ್ಧಿಯು ಮಾಡಲ್ಪಟ್ಟಿತು. (ತಥಾಚ - ಅವರವರು ಅವರವರಿಗೆ ಬೇಕಾದಂತೆ ಸಾಧನೆಯನ್ನು ಮಾಡಬೇಕಾಗಿತ್ತು. ಆ ಸಾಧನೆ ಮಾಡಲು ಜೂಜು ಕಾರಣವಾಯಿತು. ಯುಧಿಷ್ಠಿರನಲ್ಲಿ ಏನು ಮಿಗಿಲಾದ ಪುಣ್ಯವಿತ್ತು, ಅದೆಲ್ಲವೂ ಅರ್ಜುನಾದಿಗಳಿಗೆ ವರ್ಗಾವಣೆಯಾಯಿತು. ಇನ್ನು ಭೀಷ್ಮ, ದ್ರೋಣ, ಧೃತರಾಷ್ಟ್ರರಲ್ಲಿ ಏನು ಅಧಿಕವಾದ ಪುಣ್ಯವಿತ್ತು, ಅದೂ ಕೂಡಾ ವರ್ಗಾವಣೆಯಾಯಿತು.  ಪಾಂಡವರಲ್ಲಿ ತಾರತಮ್ಯದಂತೆ ಭೀಮಸೇನನಿಗೆ ಅತ್ಯುತ್ಕಟವಾದ ಪುಣ್ಯ. ನಂತರ ದ್ರೌಪದಿ, ಆನಂತರ ಅರ್ಜುನ ಮೊದಲಾದವರಿಗೆ. ಇದೆಲ್ಲವುದಕ್ಕೂ ಕೂಡಾ ಜೂಜು ನಿಮಿತ್ತವಾಯಿತು). ಆ ದ್ಯೂತಸಭೆಯಲ್ಲಿ ತಾನು ಇಲ್ಲದಿರುವುದಕ್ಕೆ, ಯೋಗ್ಯತಾನುಸಾರ ಪುಣ್ಯ ಬರುವ ವಿಷಯದಲ್ಲಿ ಕಾರಣವನ್ನು ಶ್ರೀಕೃಷ್ಣನೇ  ಹೇಳಿರುವನು.

 

ಸಾಲ್ವಂ ಶ್ರುತ್ವಾ ಸಮಾಯಾತಂ ರೌಗ್ಮಿಣೇಯಾದಯೋ ಮಯಾ ।

ಪ್ರಸ್ಥಾಪಿತಾ ಹಿ ಭವತಾಂ ಸಕಾಶಾತ್ ತೇ ಯಯುಃ ಪುರೀಮ್ ।

ತದಾ ಸಾಲ್ವೋSಪಿ ಸೌಭೇನ ದ್ವಾಕಾಮರ್ದ್ದಯದ್ ಭೃಶಮ್ ॥ ೨೨.೪೨॥

 

ಸಾಲ್ವನನ್ನು  ಕೊಲ್ಲಲೇಬೇಕಾದ ಘಟನೆಯನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ:

'ಸಾಲ್ವನು ನಾವಿಲ್ಲದ ಸಮಯದಲ್ಲಿ ದ್ವಾರಕೆಗೆ ಬಂದಿದ್ದಾನೆ ಎನ್ನುವುದನ್ನು  ಕೇಳಿ, ನಿಮ್ಮೆದುರೇ ಪ್ರದ್ಯುಮ್ನ ಮೊದಲಾದವರು ನನ್ನಿಂದ ಕಳುಹಿಸಲ್ಪಟ್ಟರಷ್ಟೇ. ಪ್ರದ್ಯುಮ್ನಾದಿಗಳು ಪಟ್ಟಣವನ್ನು ಕುರಿತು ತೆರಳಿದರು. ಆಗ ಸಾಲ್ವನೂ ಕೂಡಾ ಸೌಭ ವಿಮಾನದಿಂದ ದ್ವಾರಕಾ ಪಟ್ಟಣವನ್ನು ಚೆನ್ನಾಗಿ ಹಾಳುಗೆಡವಿದ್ದ.  

 

ಪ್ರದ್ಯುಮ್ನ ಆಶು ನಿರಗಾದಥ ಸರ್ವಸೈನ್ಯೈರನ್ಯೈಶ್ಚ ಯಾದವಗಣೈಃ ಸಹಿತೋSನುಜೈಶ್ಚ ।

ಸಾಲ್ವೋSವಗಮ್ಯ ತನಯಂ ಮಮ ತದ್ವಿಮಾನಾತ್ ಪಾಪೋSವರುಹ್ಯ ರಥಮಾರುಹದತ್ರ ಯೋದ್ಧುಮ್ ॥೨೨.೪೩॥

 

ಪ್ರದ್ಯುಮ್ನನು ಕೂಡಲೇ ಯಾದವರಿಂದಲೂ, ಸಮಸ್ತ ಸೈನ್ಯದಿಂದಲೂ,  ಅನುಜರೊಂದಿಗೂ ಕೂಡಿ  ಹೊರಬಂದ. ಆಗ ವಿಮಾನದಲ್ಲಿದ್ದ ಪಾಪಿಷ್ಠನಾದ ಸಾಲ್ವನು ಪ್ರದ್ಯುಮ್ನ ಬಂದಿದ್ದಾನೆ ಎಂದು ತಿಳಿದು, ವಿಮಾನದಿಂದ ಕೆಳಗಿಳಿದು, ಯುದ್ಧ ಮಾಡಲು ರಥವನ್ನು ಏರಿದ. (ಪ್ರದ್ಯುಮ್ನನ ಮೇಲಿನ ಉಪೇಕ್ಷೆಯಿಂದ ವಿಮಾನದಿಂದ ಯುದ್ಧ ಮಾಡದೇ ರಥವನ್ನೇರಿ ಬಂದ).

 

ಕೃತ್ವಾ ಸುಯುದ್ಧಮಮುನಾ ಮಮ ಪುತ್ರಕೋsಸಾವಸ್ತ್ರಾಣಿ ತಸ್ಯ ವಿನಿವಾರ್ಯ್ಯ ಮಹಾಸ್ತ್ರಜಾಲೈಃ ।

ದತ್ತಂ ಮಯಾ ಶರಮಮೋಘಮಥಾSದದೇ ತಂ ಹನ್ತುಂ ನೃಪಂ ಕೃತಮತಿಸ್ತ್ವಶೃಣೋದ್ ವಚಃ ಖೇ ॥೨೨.೪೪॥

 

ಸಾಲ್ವನೊಂದಿಗೆ ನನ್ನ ಮಗ ಪ್ರದ್ಯುಮ್ನನು ಭಾರೀ ಯುದ್ಧವನ್ನು ಮಾಡಿ, ಅವನ ಅಸ್ತ್ರಗಳನ್ನು ತನ್ನ ಶ್ರೇಷ್ಠವಾದ ಅಸ್ತ್ರಗಳಿಂದ ತಡೆದು, ನನ್ನಿಂದ ಕೊಡಲ್ಪಟ್ಟ ಎಂದೂ ವ್ಯರ್ಥವಾಗದ ಬಾಣವನ್ನು ಸಾಲ್ವನನ್ನು ಕೊಲ್ಲಲು ನಿಶ್ಚಯಿಸಿ ತೆಗೆದುಕೊಂಡ. ಆಗ ಈ ರೀತಿ ಅಶರೀರವಾಣಿಯಾಯಿತು(ಆಗಸದಲ್ಲಿ ಮುಖ್ಯಪ್ರಾಣ ಮಾತನಾಡಿದ):

 

   ನಾರಾಯಣೇನ ಹಿ ಪುರಾ ಮನಸಾSಭಿಕ್ಲ್ ಪ್ತಂ ಕೃಷ್ಣಾವತಾರಮುಪಗಮ್ಯ ನಿಹನ್ಮಿ ಸಾಲ್ವಮ್ ।

   ಇತ್ಯೇವ ತೇನ ಹರಿಣಾSಪಿ ಸ ಭಾರ್ಗ್ಗವೇಣ ವಿದ್ರಾವಿತೋ ನ ನಿಹತಃ ಸ್ವಮನೋನುಸಾರಾತ್ ॥ ೨೨.೪೫॥

 

   ವದ್ಧ್ಯಸ್ತ್ವಯಾ ನಹಿ ತತೋSಯಮಯಂ ಚ ಬಾಣಶ್ಚಕ್ರಾಯುಧಸ್ಯ ದಯಿತೋ ನಿತರಾಮಮೋಘಃ ।

   ಮಾ ಮುಞ್ಚ ತೇನ ತಮಿಮಂ ವಿನಿವರ್ತ್ತಯೇSಹಂ ಸಾಲ್ವಂ ಹೃದಿ ಸ್ಥಿತ ಇತೀರಿತಮೀರಣೇನ ॥೨೨.೪೬॥

 

ಹಿಂದೆ ಸಾಕ್ಷಾತ್ ನಾರಾಯಣನು ‘ಕೃಷ್ಣಾವತಾರವನ್ನು ಹೊಂದಿ ಸಾಲ್ವನನ್ನು ಕೊಲ್ಲುತ್ತೇನೆ’ ಎಂದು ಮನಸ್ಸಿನಿಂದ ಸಂಕಲ್ಪ ಮಾಡಿದ್ದಾನೆ. ಅದರಿಂದ ತನ್ನ ಸಂಕಲ್ಪದಂತೆ ಪರಶುರಾಮನಿಂದ ಓಡಿಸಲ್ಪಟ್ಟನೇ ಹೊರತು ಸಂಹರಿಸಲ್ಪಡಲಿಲ್ಲ.  

ನಿನ್ನಿಂದ ಈ ಸಾಲ್ವನು ಕೊಲ್ಲಲ್ಪಡುವವನಲ್ಲ. (ನೀನು ಅವನನ್ನು ಕೊಲ್ಲಬಾರದು) ಈ ಬಾಣ ಕೃಷ್ಣನಿಗೆ ಅತ್ಯಂತ ಪ್ರೀತಿಪ್ರದವಾಗಿದ್ದು ಇದು ಎಂದೂ ವ್ಯರ್ಥವಾಗುವುದಿಲ್ಲ. ಅದರಿಂದ ಇವನನ್ನು ಕುರಿತು ಈ ಬಾಣವನ್ನು ಪ್ರಯೋಗಿಸಬೇಡ. ನಾನು ಸಾಲ್ವನ  ಮನಸ್ಸನ್ನು ಪ್ರೇರಣೆಮಾಡಿ ಹಿಂದಕ್ಕೆ ಕಳುಹಿಸುತ್ತೇನೆ ಎಂದು ಮುಖ್ಯಪ್ರಾಣನಿಂದ ಹೇಳಲ್ಪಟ್ಟಿತು.

 

[ಮಹಾಭಾರತದ ಸಭಾಪರ್ವದಲ್ಲಿ(೪೯, ೨೪-೨೮) ಈ ರೀತಿ ವಿವರಣೆಯನ್ನು ಕಾಣುತ್ತೇವೆ: ‘ತತಃ ಸ ಭೃಗುಶಾರ್ದೂಲಸ್ತಂ ಸೌಭಂ ಯೋಧಯನ್ ಪ್ರಭುಃ । ಸುಬನ್ಧುರಂ ರಥಂ ರಾಜನ್ನಾಸ್ಥಾಯಾ ಭರತರ್ಷಭ । ನಗ್ನಿಕಾನಾಂ ಕುಮಾರೀಣಾಂ ಗಾಯನ್ತಿನಾಮುಪಾಶೃುಣೋತ್ । ರಾಮ ರಾಮ ಮಹಾಬಾಹೋ ಭೃಗೂಣಾಂ ಕೀರ್ತಿವರ್ಧನ । ತ್ಯಜ ಶಾಸ್ತ್ರಾಣಿ ಸರ್ವಾಣಿ ನ ತ್ವಂ ಸೌಭಂ ವಧಿಷ್ಯತಿ । ಶಙ್ಖಚಕ್ರಗದಾಪಾಣಿರ್ದೇವಾನಾಮಭಯಙ್ಕರಃ । ಯುಧಿ ಪ್ರದ್ಯುಮ್ನಸಾಮ್ಬಾಭ್ಯಾಂ ಕೃಷ್ಣಃ ಸೌಭಂ ವಿಧಿಷ್ಯತಿ ।   ತಚ್ಛ್ರುತ್ವಾ ಪುರುಷವ್ಯಾಘ್ರಸ್ತತ ಏವ ವನಂ ಯಯೌ । ನ್ಯಸ್ಯ ಸರ್ವಾಣಿ ಶಸ್ತ್ರಾಣಿ ಕಾಲಾಕಾಙ್ಕ್ಷಿ ಮಹಾಯಶಾಃ’. ಭೀಷ್ಮಾಚಾರ್ಯರು ಶಿಶುಪಾಲನಿಗೆ ಉತ್ತರ ಕೊಡುವ ಸಂದರ್ಭದಲ್ಲಿ ಕೃಷ್ಣನ ಎಲ್ಲಾ ಅವತಾರಗಳನ್ನೂ ಹೇಳುತ್ತಾ ಈ ಮಾತನ್ನಾಡುತ್ತಾರೆ. ಪರಶುರಾಮ ಕೊಲ್ಲಲು ಬಂದಿದ್ದ. ಆಗ ‘ನೀನು ಸೌಭನನ್ನು ಕೊಲ್ಲಬೇಡ, ಅವನನ್ನು ಕೃಷ್ಣ ಕೊಲ್ಲುತ್ತಾನೆ’ ಎಂದು ಅಶರೀರವಾಣಿಯಾಯಿತು.  ವನಪರ್ವದಲ್ಲಿ(೨೨.೨೫) : ‘ಜಿತವಾನ್ ಜಾಮದಗ್ನ್ಯಂ ಯಃ ಕೋಟಿವರ್ಷಗಣಾನ್  ಬಹೂನ್ । ಸ ಏಷ ನಾನೈರ್ವಧ್ಯೋ  ಹಿ ತ್ವಾಮೃತೇ ನಾಸ್ತಿ ಕಶ್ಚನ’  ಎಂದು ಹೇಳಿದ್ದಾರೆ. ಇಲ್ಲಿ  ಪರಶುರಾಮನನ್ನು ಸಾಲ್ವ ಗೆದ್ದ ಎಂದು ಹೇಳಿದಂತೆ ಕಾಣುತ್ತದೆ ಆದರೆ ಅದರರ್ಥ-ಸಾಲ್ವನನ್ನು ಪರಶುರಾಮ ಸೋಲಿಸಲಿಲ್ಲ ಎಂದಷ್ಟೇ ಎನ್ನುವುದನ್ನು ನಾವಿಲ್ಲಿ ತಿಳಿಯಬೇಕು.]

No comments:

Post a Comment