ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 24, 2022

Mahabharata Tatparya Nirnaya Kannada 22: 60-67

[ಶಲ್ಯ-ಜರಾಸಂಧನ ಮಗಳಂದಿರನ್ನು ನಕುಲ-ಸಹದೇವರು ಮದುವೆಯಾದಮೇಲೆ ಅವರು ದ್ರೌಪದಿಯನ್ನು ಅತ್ತಿಗೆಯಂತೆ ನೋಡುತ್ತಿದ್ದರು ಎಂದು ಹಿಂದೆ ಹೇಳಿರುವುದನ್ನು ನೋಡಿದ್ದೇವೆ. ಇದೀಗ ಈ ಸಂಧರ್ಭದಲ್ಲಿ  ಧರ್ಮರಾಜನ ಮನಪರಿವರ್ತನೆಯ ಕುರಿತು ಹೇಳುತ್ತಾರೆ:]

 

ತತಃ ಪರಂ ಧರ್ಮ್ಮರಾಜೋ ನಿರ್ವಿಣ್ಣಃ ಸ್ವಕೃತೇನ ಹ ।

ಭ್ರಾತೃಭಾರ್ಯ್ಯಾಪದೇ ಕೃಷ್ಣಾಂ ಸ್ಥಾಪಯಾಮಾಸ ಸರ್ವದಾ    ॥೨೨.೬೦॥

 

ತದನಂತರ ಧರ್ಮರಾಜನು ತಾನು ಮಾಡಿದ ತಪ್ಪಿನ ಅರಿವಿನಿಂದ ನಿರ್ವಿಣ್ಣನಾಗಿ ದ್ರೌಪದಿಯನ್ನು ಸದಾ ತನ್ನ ತಮ್ಮನ ಹೆಂಡತಿ ಸ್ಥಾನದಲ್ಲಿ ಸ್ಥಾಪಿಸಿದನು.

 

ಊಷುರ್ವನೇ ಚ ತೇ ಪಾರ್ತ್ಥಾ ಮುನಿಶೇಷಾನ್ನಭೋಜಿನಃ ।

ಭುಕ್ತವತ್ಸ್ವೇವಾನುಜೇಷು ಭುಙ್ಕ್ತೇ ರಾಜಾ ಯುಧಿಷ್ಠಿರಃ              ॥೨೨.೬೧॥

 

ಅಲಙ್ಘ್ಯತ್ವಾತ್ ತದಾಜ್ಞಾಯಾ ಅನುಜಾಃ ಪೂರ್ವಭೋಜಿನಃ ।

ತಸ್ಯಾನನ್ತರಮೇವೈಕಾ ಭುಙ್ಕ್ತೇ ಸಾ ಪಾರ್ಷತಾತ್ಮಜಾ            ॥೨೨.೬೨॥

 

ಆ ಪಾಂಡವರು ಮುನಿಗಳು ಊಟಮಾಡಿದಮೇಲೆ ಉಳಿದ ಅನ್ನವನ್ನು ಊಟಮಾಡಿಕೊಂಡು ಕಾಡಿನಲ್ಲಿ ವಾಸಮಾಡಿದರು. ತಮ್ಮಂದಿರೆಲ್ಲರೂ ಊಟಮಾಡಿದ ಮೇಲೆ ಯುಧಿಷ್ಠಿರ ಊಟಮಾಡುತ್ತಿದ್ದ. ಅವನ ಆಜ್ಞೆಯನ್ನು ಮೀರಲಾಗದೇ ಇರುವುದರಿಂದ  ತಮ್ಮಂದಿರು ಮೊದಲೇ ಊಟಮಾಡುತ್ತಿದ್ದರು. ಯುಧಿಷ್ಠಿರನ ಊಟವಾದಮೇಲೆ ಕೊನೆಯಲಿ ದ್ರೌಪದೀದೇವಿ ಒಬ್ಬಳೇ ಊಟಮಾಡುತ್ತಿದ್ದಳು.

 

ಏವಂ ಸದಾ ವಿಷ್ಣುಪರಾಯಣಾನಾಂ ತತ್ಪ್ರಾಪಣಾನ್ನೈಕಭುಜಾಂ ಪ್ರಯಾತಃ ।

ಸಂವತ್ಸರಸ್ತತ್ರ ಜಗಾದ ಕೃಷ್ಣಾ ಭೀಮಾಜ್ಞಯಾ ಧರ್ಮ್ಮರಾಜಂ ಸುವೇತ್ರೀ ॥೨೨.೬೩॥

 

ಈರೀತಿಯಾಗಿ ವಿಷ್ಣುವಿನ ಭಕ್ತರಾದ, ಪರಮಾತ್ಮನ ನೈವೇದ್ಯವನ್ನು ಮಾತ್ರ ಊಟಮಾಡುತ್ತಿರುವ ಪಾಂಡವರ ವನವಾಸಕ್ಕೆ ಒಂದು ಸಂವತ್ಸರ ಕಳೆಯಿತು. ಆಗ ಭೀಮಸೇನನ ಅಣತಿಯನ್ನು ಪಡೆದ, ನೀತಿಯನ್ನು ಚೆನ್ನಾಗಿ ತಿಳಿದಿರುವ ದ್ರೌಪದಿಯು  ಧರ್ಮರಾಜನನ್ನು ಕುರಿತು ಹೇಳಿದಳು:

[ಪರಮಾತ್ಮನಿಗೆ ನೈವೇದ್ಯ ಮಾಡಿದ ಉತ್ಕೃಷ್ಟವಾದ ಅನ್ನವನ್ನು ‘ಪ್ರಾಪಣ’ ಎಂದು ಕರೆಯುತ್ತಾರೆ. ವರಾಹ ಪುರಾಣದಲ್ಲಿ ನಾವು ಈ ಪ್ರಯೋಗವನ್ನು ಕಾಣಬಹುದು. ‘ಏವಂ ತು ಭೋಜನಂ ದತ್ವಾ ವ್ಯಪನೀಯ ತು ಪ್ರಾಪಣಮ್’(೧೧.೪೭) ‘ತಾಮ್ರಪಾತ್ರೇಣ ವೈ ಭೂಮೇ ಪ್ರಾಪಣಂ ಯತ್  ಪ್ರದೀಯತೇ’ (೧೨೯.೪೪) ತಾಮ್ರದ ಪಾತ್ರೆಯಲ್ಲಿ ಅನ್ನವನ್ನು ಮಾಡಿ ಅದನ್ನು ದೇವರಿಗೆ ಸಮರ್ಪಣೆ ಮಾಡಿದರೆ ಅದನ್ನು ಪ್ರಾಪಣ ಎಂದು ಕರೆಯುತ್ತಾರೆ.]

 

ಅತಿಮಾರ್ದ್ದರವಯುಕ್ತತ್ವಾದ್ ಧರ್ಮ್ಮರಾಜಶ್ಚತುರ್ದ್ದಶೇ ।

ಅಪಿ ವರ್ಷೇ ಗುರುಭಯಾದ್ ರಾಜ್ಯಂ ನೇಚ್ಛೇದಿತಿ ಪ್ರಭುಃ ।

ಮಾರುತಿಃ ಪ್ರೇಷಯಾಮಾಸ ಕೃಷ್ಣಾಂ ಪ್ರಸ್ತಾವಹೇತವೇ ॥೨೨.೬೪॥

 

ಧರ್ಮರಾಜನು ಅತ್ಯಂತ ಮೃದುವಾದ್ದರಿಂದ ಹದಿನಾಲ್ಕನೇ ವರ್ಷದಲ್ಲೂ ಕೂಡಾ ಗುರು-ಹಿರಿಯರ ಭಯದಿಂದ ರಾಜ್ಯವನ್ನೇ ಬಯಸುವುದಿಲ್ಲ ಎಂದರಿತ ಭೀಮಸೇನನು ಅವನನ್ನು ಮಾತಿನಿಂದ ಎಚ್ಚರಿಸಲು, ಒಂದು ಪ್ರಸ್ತಾಪನೆ ಮಾಡಲು ದ್ರೌಪದಿಯನ್ನು ಯುಧಿಷ್ಠಿರನಲ್ಲಿಗೆ ಕಳುಹಿಸಿದ.

 

ಕ್ಷಮಾ ಸರ್ವತ್ರ ಧರ್ಮ್ಮೋ ನ ಪಾಪಹೇತುಶ್ಚ ದುರ್ಜ್ಜನೇ ।

ರಾಜ್ಞಾಂ ಸಾಮರ್ತ್ಥ್ಯಯುಕ್ತಾನಾಮಿತಿ ಸಂಸ್ಥಾಪ್ಯ ಶಾಸ್ತ್ರತಃ ॥೨೨.೬೫॥

 

‘ಎಲ್ಲೆಡೆ ಕ್ಷಮೆ ಎನ್ನುವುದು ಧರ್ಮವಲ್ಲ. ಸಜ್ಜನರು ಪಾಪ ಮಾಡಿದರೆ ಅಥವಾ ಸಣ್ಣ-ಪುಟ್ಟ ತಪ್ಪು ಮಾಡಿದರೆ ಸಹನೆ ಮಾಡಬೇಕು- ಅದು ಧರ್ಮ. ಆದರೆ ದುರ್ಜನರಲ್ಲಿ ಕ್ಷಮೆಯನ್ನು ಮಾಡಿದರೆ ಅದು ಪಾಪಕ್ಕೇ ಕಾರಣವಾಗುತ್ತದೆ. ವಿಶೇಷವಾಗಿ ಬಲಿಷ್ಠರಾಗಿರುವ ರಾಜರಂತೂ ದುರ್ಜನರಲ್ಲಿ  ಸಹನೆ ಮಾಡಲೇ ಬಾರದು’ ಹೀಗೆ ಶಾಸ್ತ್ರದಿಂದ ಸ್ಥಾಪಿಸಿ ದ್ರೌಪದಿಯನ್ನು ಭೀಮ ಕಳುಹಿಸಿದನು.

 

ಹತ್ವಾ ಚತುರ್ದ್ದಶೇ ವರ್ಷೇ ಧಾರ್ತ್ತರಾಷ್ಟ್ರಾನರಾಜ್ಯದಾನ್ ।

ಕರ್ತ್ತುಂ ರಾಜ್ಯಂ ಪುರೋ ಗನ್ತಾ ಭವಾನೀತ್ಯಗ್ರಜೇನ ಹ ॥೨೨.೬೬॥

 

ಕಾರಯನ್ ಸತ್ಯಶಪಥಂ ವಿವಾದಸ್ಯ ಕ್ರಮೇಚ್ಛಯಾ ।

ಆದಿಶತ್ ಪ್ರಥಮಂ ಕೃಷ್ಣಾಂ ಭೀಮಃ ಸಾ ನೃಪಮಬ್ರವೀತ್ ॥೨೨.೬೭॥

 

‘ಕಡೇಗೆ ಹದಿನಾಲ್ಕನೇ ವರ್ಷದಲ್ಲಿ ರಾಜ್ಯ ಕೊಡದ ದುರ್ಯೋಧನಾದಿಗಳನ್ನು ಕೊಂದು ರಾಜ್ಯವನ್ನು ಆಳಲು ನಾನು ಯುದ್ಧಕ್ಕೆ ತೆರಳುತ್ತೇನೆ’ ಎಂದು ಧರ್ಮರಾಜನಿಂದ ಸತ್ಯ ಶಪಥವನ್ನು ಮಾಡಿಸಲು ಬಯಸಿ, ಒಂದು ವಿವಾದಕ್ಕೆ ಪೀಠಿಕೆಯಾಗಿ ಮೊದಲು ಭೀಮಸೇನ ದ್ರೌಪದಿಗೆ ಹೇಳಿದ. ಅವಳು ಧರ್ಮರಾಜನನ್ನು ಕುರಿತು ಹೇಳಿದಳು: 

No comments:

Post a Comment