ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, May 12, 2023

Mahabharata Tatparya Nirnaya Kannada 27-67-76

 

ವಿದ್ರಾಪ್ಯಮಾಣಾಂ ಪೃತನಾಂ ನಿರೀಕ್ಷ್ಯ ಗುರೋಃ ಸುತೇನಾಭ್ಯಗಮತ್ ತ್ವರಾವಾನ್ ।

ಧೃಷ್ಟದ್ಯುಮ್ನಸ್ತಂ ಸ ಊಚೇ ಸುಪಾಪಂ ಹನಿಷ್ಯೇ ತ್ವಾಮದ್ಯ ಯುದ್ಧೇ ಗುರುಘ್ನಮ್ ॥೨೭.೬೭ ॥

 

ಇತ್ಯುಕ್ತೋ ದರ್ಶಯಾಮಾಸ ಪಾರ್ಷತಃ ಖಡ್ಗಮುತ್ತಮಮ್ ।

ಅಯಂ ತವ ಪಿತುರ್ಹನ್ತಾ ವದಿಷ್ಯತಿ ತವೋತ್ತರಮ್ ॥೨೭.೬೮ ॥

 

ಇತ್ಯುಕ್ತ್ವಾ ಧನುರಾದಾಯ ವವರ್ಷ ಚ ಶರಾನ್ ಬಹೂನ್ ।

ತಯೋಃ ಸಮಭವದ್ ಯುದ್ಧಂ ತುಮುಲಂ ರೋಮಹರ್ಷಣಮ್ ॥೨೭.೬೯ ॥

 

ಅಶ್ವತ್ಥಾಮನಿಂದ ಓಡಿಸಲ್ಪಡುತ್ತಿರುವ ಸೇನೆಯನ್ನು ನೋಡಿ, ವೇಗವಾಗಿ ಧೃಷ್ಟದ್ಯುಮ್ನನು ಅಶ್ವತ್ಥಾಮನನ್ನು ಎದುರುಗೊಂಡನು. ಆಗ, ‘ಈ ಯುದ್ಧದಲ್ಲಿ ಗುರುದ್ರೋಹಿಯಾಗಿರುವ, ಅತ್ಯಂತ ಪಾಪಿಷ್ಠನಾಗಿರುವ ನಿನ್ನನ್ನು ಕೊಲ್ಲುತ್ತೇನೆ’- ಎಂದು ಅಶ್ವತ್ಥಾಮನಿಂದ ಹೇಳಲ್ಪಟ್ಟ ಧೃಷ್ಟದ್ಯುಮ್ನನು, ಉತ್ತಮವಾದ ಕತ್ತಿಯನ್ನು ತೋರಿಸಿ, ‘ನಿನ್ನ ಅಪ್ಪನನ್ನು ಕೊಂದ ಈ ಖಡ್ಗ ನಿನ್ನ ಪ್ರಶ್ನೆಗೆ ಉತ್ತರ ಹೇಳುವುದು’  ಎಂದು ಹೇಳಿ, ಬಿಲ್ಲನ್ನು ಧರಿಸಿ ಬಹಳ ಬಾಣಗಳನ್ನು ಬಿಟ್ಟನು. ಅವರಿಬ್ಬರ ನಡುವೆ ರೋಮಾಂಚನಕಾರಿ ಯುದ್ಧ ನಡೆಯಿತು.

 

ತತ್ರ ಪಾರ್ಷತಂ ದ್ರೌಣಿಃ ಕ್ಷಣೇನ ವಿರಥಾಯುಧಮ್ ।

ಕೃತ್ವಾSನ್ತಾಯ ಶರಾಂಸ್ತೀಕ್ಷ್ಣಾನ್ ಮುಮೋಚ ನಚ ತಸ್ಯ ತೇ ॥೨೭.೭೦ ॥

 

ತ್ವಚಂ ಚ ಚಿಚ್ಛಿದುರ್ದ್ದೌಣಿಃ ಖಡ್ಗಹಸ್ತೋSಭಿಜಗ್ಮಿವಾನ್ ।

ಖಡ್ಗೇನ ಸಾಸ್ತ್ರೈಃ ಶಸ್ತ್ರೈರಪ್ಯನಿರ್ಭಿಣ್ಣತ್ವಚಂ ತದಾ ॥೨೭.೭೧ ॥

 

ಮೌರ್ವ್ಯಾ ಮಮನ್ಥ ಧನುಷಃ ಪಾತಯಿತ್ವಾ ಧರಾತಳೇ ।

ಆಕೃಷ್ಯಮಾಣಂ ಪಾರ್ಷತಂ ದೃಷ್ಟ್ವಾ ಕೃಷ್ಣಪ್ರಚೋದಿತಃ ॥೨೭.೭೨ ॥

 

ಪಾರ್ತ್ಥೋ ಭೀಮಶ್ಚೋಭಯತಃ ಶರೈರಭಿನಿಜಘ್ನತುಃ ।

ಸ ತಾಭ್ಯಾಂ ವಜ್ರಸದೃಶೈಃ ಶರೈರಭಿಹತೋ ಭೃಶಮ್  ॥೨೭.೭೩ ॥

 

ವಿಸೃಜ್ಯ ಪಾರ್ಷತಂ ಸ್ವೀಯಮಾರುರೋಹ ರಥಂ ಪುನಃ ।

ಜಗಾಮ ಚ ತತೋSನ್ಯತ್ರ ಪಾಞ್ಚಾಲ್ಯೋSಪಿ ರಥಂ ಪುನಃ ॥೨೭.೭೪ ॥

 

ಆರು̐ಹ್ಯಾನ್ಯಂ ಸ್ವಾತ್ತಧನ್ವಾ ಕೃತವರ್ಮ್ಮಾಣಮಭ್ಯಯಾತ್ ।

ತಯೋರಾಸೀತ್ ಸುತುಮುಲಂ ಯುದ್ಧಮದ್ಭುತದರ್ಶನಮ್ ॥೨೭.೭೫ ॥

 

ಅಲ್ಲಿ ಧೃಷ್ಟದ್ಯುಮ್ನನನ್ನು ಅಶ್ವತ್ಥಾಮನು ರಥ ಮತ್ತು  ಆಯುಧ ಹೀನನನ್ನಾಗಿ ಮಾಡಿ, ಅವನನ್ನು ಸಾಯಿಸಲು ಚೂಪಾದ ಬಾಣಗಳನ್ನು ಬಿಟ್ಟ. ಆದರೆ ಆ ಬಾಣಗಳು ಧೃಷ್ಟದ್ಯುಮ್ನನ ಚರ್ಮವನ್ನೂ ಛೇದಿಸಲಿಲ್ಲ. ಆಗ ಕೊಪಗೊಂಡ ಅಶ್ವತ್ಥಾಮ ರಥದಿಂದಿಳಿದು,  ಖಡ್ಗದಿಂದ, ಅಸ್ತ್ರದಿಂದ, ಶಸ್ತ್ರದಿಂದಲೂ ಸೀಳಲ್ಪಡದ ಚರ್ಮವುಳ್ಳ ಧೃಷ್ಟದ್ಯುಮ್ನನನ್ನು ಭೂಮಿಯಲ್ಲಿ ಬೀಳಿಸಿ, ತನ್ನ ಬಿಲ್ಲಿನ ನೇಣನ್ನು ಅವನ ಕುತ್ತಿಗೆಗೆ ಹಾಕಿ ಎಳೆಯಲು ಪ್ರಾರಂಭಿಸಿದ. ಹಾಗೆ ಎಳೆದುಕೊಂಡು ಬರುತ್ತಿರಲು, ಕೃಷ್ಣನಿಂದ ಪ್ರಚೋದಿಸಲ್ಪಟ್ಟ ಅರ್ಜುನ ಮತ್ತು ಭೀಮಸೇನ ಎರಡೂ ಕಡೆಯಿಂದ ವಜ್ರಸದೃಶವಾಗಿರುವ ಬಾಣಗಳಿಂದ ಅಶ್ವತ್ಥಾಮನನ್ನು ಹೊಡೆದರು.  ಹೀಗೆ ಹೊಡೆಯಲ್ಪಟ್ಟ ಅಶ್ವತ್ಥಾಮನು ಧೃಷ್ಟದ್ಯುಮ್ನನನ್ನು ಬಿಟ್ಟು, ರಥವನ್ನೇರಿದ. ಧೃಷ್ಟದ್ಯುಮ್ನನೂ ಕೂಡಾ ಎದ್ದು, ಸ್ವಲ್ಪ ಚೇತರಿಸಿಕೊಂಡು ಇನ್ನೊಂದು ರಥವನ್ನೇರಿ, ಬಿಲ್ಲನ್ನು ಹಿಡಿದು, ಕೃತವರ್ಮನನ್ನು ಹೊಂದಿದ. ಅವರಿಬ್ಬರ ನಡುವೆ ಅದ್ಭುತವಾದ, ಭಯಂಕರ ಯುದ್ಧವಾಯಿತು.

 

ತತ್ರ ನಾತಿಪ್ರಯತ್ನೇನ ಪಾಞ್ಚಾಲ್ಯೋ ವಿರಥಾಯುಧಮ್ ।

ಚಕಾರ ಕೃತವರ್ಮ್ಮಾಣಂ ತಮಪೋವಾಹ ಗೌತಮಃ ॥೨೭.೭೬ ॥

 

ಆ ಯುದ್ಧದಲ್ಲಿ ಧೃಷ್ಟದ್ಯುಮ್ನನು ಕೃತವರ್ಮನನ್ನು ಯಾವುದೇ ಪ್ರಯತ್ನವಿಲ್ಲದೇ ರಥಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ ಮಾಡಿದ. ಆಗ ಕೃಪಾಚಾರ್ಯರು ಕೃತವರ್ಮನನ್ನು ತನ್ನ ರಥದಲ್ಲಿರಿಕೊಂಡು  ಬೇರೆಡೆಗೆ ಕರೆದುಕೊಂಡು ಹೋದರು.


No comments:

Post a Comment