ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, November 30, 2017

Mahabharata Tatparya Nirnaya Kannada 1.88 - 1.100

ಮುಕ್ತಿರ್ನ್ನಿತ್ಯಾ ತಮಶ್ಚೈವ ನಾsವೃತ್ತಿಃ ಪುನರೇತಯೋಃ

ದೇವಾನಾಂ ನಿರಯೋ ನಾಸ್ತಿ ತಮಶ್ಚಾಪಿ ಕಥಞ್ಚನ ॥೧.೮೮

 

ಮುಕ್ತಿಗೆ ಒಮ್ಮೆ ಹೋದರೆ ಮತ್ತೆ ಹಿಂದೆ ಬರುವ ಪ್ರಶ್ನೆ ಇಲ್ಲ.  ಹಾಗೇ,  ಅಂಧಂತಮಸ್ಸಿಗೆ ಹೋದರೆ  ವಾಪಾಸು ಬರುವುದಿಲ್ಲ. ಇವೆರಡರಿಂದಲೂ ಹಿಂತಿರುಗಿ ಬರಲು ಆಗುವುದೇ ಇಲ್ಲ. ದೇವತೆಗಳಿಗೆ ನರಕವಾಗಲೀ, ಅಂಧಂತಮಸ್ಸಾಗಲೀ ಇಲ್ಲ.

 

ನಾಸುರಾಣಾಂ ತಥಾ ಮುಕ್ತಿಃ ಕದಾಚಿತ್ ಕೇನಚಿತ್ ಕ್ವಚಿತ್ ।

ಮಾನುಷಾಣಾಂ ಮದ್ಧ್ಯಮಾನಾಂ ನೈವೈತದ್ ದ್ವಯಮಾಪ್ಯತೇ ॥೧.೮೯

 

ಅಸುರರಾದವರಿಗೆ ಮುಕ್ತಿ ಇಲ್ಲ.  ಈ ತನಕ ಆಗಿಲ್ಲ, ಮುಂದೆಯೂ ಆಗುವುದಿಲ್ಲ. ಯಾವುದೇ ಕಾರಣದಿಂದಲೂ ಆಗುವುದಿಲ್ಲ(ಎಂದೆಂದಿಗೂ). ಮಧ್ಯಮ ಮನುಷ್ಯರಿಗೆ ಅಂಧಂತಮಸ್ಸೂ ಆಗುವುದಿಲ್ಲ, ಸುಖರೂಪವಾಗಿರುವ ಮೋಕ್ಷವೂ ಲಭಿಸುವುದಿಲ್ಲ.

 

ಅಸುರಾಣಾಂ ತಮಃಪ್ರಾಪ್ತಿಸ್ತದಾ ನಿಯಮತೋ ಭವೇತ್ ।

ಯದಾ ತು ಜ್ಞಾನಿಸದ್ಭಾವೇ ನೈವ ಗೃಹ್ಣನ್ತಿ ತತ್ ಪರಮ್ ॥೧.೯೦

 

ಅಸುರರಿಗೆ  ಅಂಧನ್ತಮಸ್ಸು ಕಟ್ಟಿಟ್ಟ ಬುತ್ತಿ. ಯಾವಾಗ ಒಬ್ಬ ಅಸುರ ಜ್ಞಾನಿಯ ಸಮ್ಮುಖದಲ್ಲಿಯೂ ಕೂಡಾ ಪರಮಾತ್ಮನ ಜ್ಞಾನವನ್ನು ತೆಗೆದುಕೊಳ್ಳುವುದೇ ಇಲ್ಲವೋ,  ಆಗ ಅವನಿಗೆ  ಅಂಧನ್ತಮಸ್ಸು ಪ್ರಾಪ್ತಿಯಾಗುತ್ತದೆ.[ಉದಾಹರಣೆಗೆ: ದುರ್ಯೋಧನ. ಸ್ವಯಂ ಶ್ರೀಕೃಷ್ಣ ಬಂದು ಹೇಳಿದರೂ ಆತ ಕೇಳಲಿಲ್ಲ, ವೇದವ್ಯಾಸರು ಬಂದು ಹೇಳಿದರೂ ಕೇಳಲಿಲ್ಲ, ಧೃತರಾಷ್ಟ್ರ ಹೇಳಿದರೂ ಕೇಳಲಿಲ್ಲ. ಇಂತವರಿಗೆ ಅಂಧನ್ತಮಸ್ಸು ಪ್ರಾಪ್ತಿಯಾಗುತ್ತದೆ].

 

ತದಾ ಮುಕ್ತಿಶ್ಚ ದೇವಾನಾಂ ಯದಾ ಪ್ರತ್ಯಕ್ಷಗೋ ಹರಿಃ ।

ಸ್ವಯೋಗ್ಯಯೋಪಾಸನಯಾ ತನ್ವಾ ತದ್ಯೋಗ್ಯಯಾ ತಥಾ ॥೧.೯೧

 

ತಮ್ಮ ಯೋಗ್ಯತೆಗೆ ತಕ್ಕನಾದ ದೇಹದಿಂದ, ತಮ್ಮ ಯೋಗ್ಯತೆಗೆ ತಕ್ಕನಾಗಿ ಪರಮಾತ್ಮನ  ಉಪಾಸನೆ ಮಾಡುವುದರಿಂದ ದೇವತೆಗಳಿಗೆ  ಮುಕ್ತಿ ಪ್ರಾಪ್ತಿಯಾಗುತ್ತದೆ.

 

ಸರ್ವೈರ್ಗ್ಗುಣೈರ್ಬ್ರಹ್ಮಣಾ ತು ಸಮುಪಾಸ್ಯೋ ಹರಿಃ ಸದಾ ।

ಆನನ್ದೋ ಜ್ಞಃ ಸದಾತ್ಮೇತಿ ಹ್ಯುಪಾಸ್ಯೋ ಮಾನುಷೈರ್ಹರಿಃ ॥೧.೯೨

 

ಎಲ್ಲಾ ಜೀವರಿಗೂ ಭಗವಂತನನ್ನು ಆತನ  ಎಲ್ಲಾ ಗುಣಗಳಿಂದ [ಮಹಾಭಾರತದಂತಹ ಗ್ರಂಥದಲ್ಲಿ ಹೇಳಿರುವ ಸಮಸ್ತ ಗುಣಗಳಿಂದ]   ಉಪಾಸನೆ ಮಾಡಲು ಸಾಧ್ಯವಿಲ್ಲ.  ಎಲ್ಲಾ ಗುಣಗಳಿಂದ ಪರಮಾತ್ಮನು ಕೇವಲ ಚತುರ್ಮುಖನಿಂದ ಉಪಾಸ್ಯನಾಗಿದ್ದಾನೆ. ಇನ್ನು ಮನುಷ್ಯರಿಂದ ಭಗವಂತ ಆನಂದ ಸ್ವರೂಪನೆಂದೂ, ಜ್ಞಾನಸ್ವರೂಪನೆಂದೂ, ದೋಷ ಇಲ್ಲದವನೆಂದೂ, ಎಲ್ಲರ ಅಂತರ್ಯಾಮಿ ಎಂದೂ ಉಪಾಸನೆ ಮಾಡಲ್ಪಡಬೇಕಾದವನು.

[ಮಹಾಭಾರತ ಪರಮಾತ್ಮನ  ಗುಣಗಳನ್ನು ಹೇಳುವ ಗ್ರಂಥ.  ಅಲ್ಲಿ ಆದಿಪರ್ವದಿಂದ ಹಿಡಿದು, ಅಂತಿಮವಾಗಿರುವ ಸ್ವರ್ಗಾರೋಹಣಪರ್ವದ ತನಕ ಪರಮಾತ್ಮನ  ಅನೇಕ  ಸ್ತೋತ್ರಗಳು ಬರುತ್ತವೆ.  ಇದರಲ್ಲಿ ಮುಖ್ಯವಾಗಿರುವುದು ವಿಷ್ಣುಸಹಸ್ರನಾಮ ಸ್ತೋತ್ರ. ಅಲ್ಲಿ ಬರುವ ಪರಮಾತ್ಮನ ಒಂದೊಂದು ನಾಮದಲ್ಲೂ ಭಗವಂತನ ನೂರಾರು  ಗುಣವರ್ಣನೆ ಅಡಕವಾಗಿದೆ.  ಹೀಗೆ  ಮಹಾಭಾರತದಲ್ಲಿ ಅಡಕವಾಗಿರುವ  ಎಲ್ಲಾ ಗುಣಗಳನ್ನು ಒಬ್ಬ ಸಾಮಾನ್ಯ ಮನುಷ್ಯ ಅರ್ಥೈಸಿಕೊಂಡು  ಉಪಾಸನೆ ಮಾಡುವುದು ಸಾಧ್ಯವಿಲ್ಲ.  ಆ ಯೋಗ್ಯತೆ ಇರುವುದು ಕೇವಲ ಬ್ರಹ್ಮ ಮತ್ತು ಮುಖ್ಯಪ್ರಾಣರಿಗೆ ಮಾತ್ರ. ಅದರಿಂದಾಗಿ ಮಹಾಭಾರತದ ಮುಖ್ಯ ಅಧಿಕಾರಿ ಚತುರ್ಮುಖನಾಗಿದ್ದಾನೆ.  ನಾವು ಅಧಮಾಧಿಕಾರಿಗಳೆನಿಸುತ್ತೇವೆ].

[ನಾವು ಮಹಾಭಾರತವನ್ನು ತಿಳಿದುಕೊಳ್ಳುತ್ತೇವೆ,  ಆದರೆ ಪೂರ್ತಿಯಾಗಿ ಅಲ್ಲ. ಗೀತಾಭಾಷ್ಯದಲ್ಲಿ ಆಚಾರ್ಯ ಮಧ್ವರು  ಹೇಳುವಂತೆ:  ಸರ್ವಪ್ರಾಣಿ ನಾಮಾವಗಾಹ್ಯನವಗಾಹ್ಯರೂಪಾಂ..... ಎಲ್ಲರೂ ಮಹಾಭಾರತವನ್ನು ತಿಳಿದುಕೊಳ್ಳುತ್ತಾರೆ,  ಆದರೆ ಯಾರಿಗೂ ಎಲ್ಲವನ್ನೂ ತಿಳಿದುಕೊಳ್ಳಲು ಆಗುವುದಿಲ್ಲ.  ರಮ್ಯವಾದ ಕಥೆ, ಅಲ್ಲಿ ಹೇಳಿರುವ ಜೀವನ್ಮೌಲ್ಯಗಳು, ದ್ರೌಪದಿಯ ಸೌಂದರ್ಯ, ಭೀಮನ ಬಲ, ಅರ್ಜುನನ ಸಹನೆ, ಸಹದೇವನ ನೀತಿ, ನಕುಲನ ಸೌಂದರ್ಯ, ಧರ್ಮರಾಜನ ಧರ್ಮ, ಇವುಗಳನ್ನೆಲ್ಲ ತಿಳಿದುಕೊಳ್ಳುವುದು ಸಾಧ್ಯ.  ಆದರೆ  ಇಡೀ ಜಗತ್ತಿನ ವ್ಯವಸ್ಥೆ, ಸೃಷ್ಟಿಕ್ರಮ, ಇತ್ಯಾದಿಗಳೆಲ್ಲವನ್ನು ತಿಳಿದುಕೊಳ್ಳವುದು ಕಷ್ಟ. ಆದ್ದರಿಂದ ಭಾರತ  ಎಲ್ಲರಿಗೂ ಅರ್ಥವಾಗುತ್ತದೆ. ಆದರೆ  ಯಾರಿಗೂ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಮಹಾಭಾರತದ ರೀತಿಯೇ ಹಾಗೆ.  ಇದನ್ನು ಆಚಾರ್ಯರು “ಬ್ರಹ್ಮಾಪಿ ತನ್ನಜಾನಾತಿ ಈಷತ್ ಸರ್ವೋಪಿ  ಜಾನತಿ..” ಎಂದು ತಮ್ಮ ಗೀತಾಭಾಷ್ಯದಲ್ಲಿ ಹೇಳಿದ್ದಾರೆ.  ಯಾರಿಗೂ ಸಂಪೂರ್ಣ ತಿಳಿದಿಲ್ಲ, ಸ್ವಲ್ಪ-ಸ್ವಲ್ಪ ಎಲ್ಲರಿಗೂ ತಿಳಿದಿದೆ.  ಅಷ್ಟು ಗಹನವಾದುದು  ಈ ಮಹಾಭಾರತ.  ಏಕೆ ಹೀಗೆ ಅಂದರೆ: ಪರಮಾತ್ಮನ ಗುಣಗಳನ್ನು ಎಲ್ಲರಿಗೂ ಸಂಪೂರ್ಣ ತಿಳಿಯಲು ಸಾಧ್ಯವಿಲ್ಲ, ಆದರೆ ಮಹಾಭಾರತ ಎಲ್ಲಾ ಗುಣಗಳನ್ನೂ ಹೇಳುತ್ತದೆ. ಅದರಿಂದಾಗಿ ಎಲ್ಲಾ ಗುಣಗಳಿಂದ ಬ್ರಹ್ಮದೇವರು ಉಪಾಸನೆ ಮಾಡುತ್ತಾರೆ. ಹಾಗಾಗಿ ನಿಜವಾದ ಅಧಿಕಾರಿ ಮಹಾಭಾರತಕ್ಕೆ ಬ್ರಹ್ಮದೇವರು.   ಮಂದಾಧಿಕಾರಿಗಳು ನಾವೆಲ್ಲರು. ಸಾಮಾನ್ಯ ಮನುಷ್ಯರು ಮಹಾಭಾರತದಿಂದ ಪರಮಾತ್ಮನನ್ನು ಯಾವ ರೀತಿ ಉಪಾಸನೆ ಮಾಡಬೇಕು ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ವಿವರಿಸಲಾಗಿದೆ].

 

ಯಥಾಕ್ರಮಂ ಗುಣೋದ್ರೇಕಾತ್ ತದನ್ಯೈರಾ ವಿರಿಞ್ಚತಃ ।

ಬ್ರಹ್ಮತ್ವಯೋಗ್ಯಾ ಋಜವೋ ನಾಮ ದೇವಾಃ ಪೃಥಗ್ ಗಣಾಃ ॥೧.೯೩

 

ತೈರೇವಾಪ್ಯಂ ಪದಂ ತತ್ತು ನೈವಾನ್ಯೈಃ ಸಾಧನೈರಪಿ ।

ಏವಂ ಸರ್ವಪದಾನಾಂ ಚ ಯೋಗ್ಯಾಃ ಸನ್ತಿ ಪೃಥಗ್ ಗಣಾಃ ॥೧.೯೪

 

ತಸ್ಮಾದನಾದ್ಯನನ್ತಂ ಹಿ ತಾರತಮ್ಯಂ ಚಿದಾತ್ಮನಾಮ್ ।

ತಚ್ಚ ನೈವಾನ್ಯಥಾ ಕರ್ತ್ತುಂ ಶಕ್ಯಂ ಕೇನಾಪಿ ಕುತ್ರಚಿತ್ ॥೧.೯೫

 

ಮನುಷ್ಯರಿಂದ ಹಿಡಿದು  ಬ್ರಹ್ಮನ ತನಕ ಅವರವರಿಗೆ ಎಷ್ಟೆಷ್ಟು  ಗುಣಗಳಿಂದ ಉಪಾಸನೆ ಮಾಡಲಿಕ್ಕೆ ಸಾಧ್ಯವೋ  ಅಷ್ಟಷ್ಟು ಗುಣಗಳಿಂದ ಉಪಾಸನೆ ಮಾಡಬೇಕು.

ಮಹಾಭಾರತಕ್ಕೆ ಬ್ರಹ್ಮದೇವರು ಮುಖ್ಯ  ಅಧಿಕಾರಿ ಎಂದು ಈ ಹಿಂದೆ ನೋಡಿದ್ದೇವೆ. ಇಂತಹ ಬ್ರಹ್ಮದೇವರು ಯಾರು? ಯಾರು ಈ ಪದವಿಯನ್ನು ಪಡೆಯಬಹುದು? ಎಂದರೆ: ಬ್ರಹ್ಮ ಪದವಿಗೆ ಯೋಗ್ಯವಾಗಿರುವ ಒಂದು ಗಣ ಇದೆ.  ಅದನ್ನು ಋಜುಗಣ ಎಂದು ಕರೆಯುತ್ತಾರೆ.  ಆ ಪದವಿಯ ಯೋಗ್ಯತೆ ಇರವವರೇ ಬೇರೆ.  ಅವರು ಮಾತ್ರ ಆ ಪದವಿಯನ್ನು ಹೊಂದುತ್ತಾರೆ.  ಆ ಯೋಗ್ಯತೆ ಇಲ್ಲದವರು ಎಷ್ಟೇ ಪ್ರಯತ್ನಪಟ್ಟರೂ ಕೂಡಾ ಆ ಸ್ಥಾನವನ್ನು ಹೊಂದಲು ಸಾಧ್ಯವಿಲ್ಲ. ಈ ರೀತಿ  ಬ್ರಹ್ಮಪದವಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ದೇವತೆಯ ಪದವಿಗೂ ಆಯಾ ಪದವಿಗೆ ಯೋಗ್ಯರಾದ ಜೀವಿಗಳ ಸಮೂಹವೇ ಬೇರೆ ಇರುತ್ತದೆ.  ಉದಾಹರಣೆಗೆ: ಸದಾಶಿವನಾಗಲು ಯೋಗ್ಯನಾಗಿರುವ ಜೀವರ ಗಣ ಪ್ರತ್ಯೇಕವಾಗಿರುತ್ತದೆ.  ಗರುಡಪದವಿಗೆ ಯೋಗ್ಯರಾಗಿರುವ ಜೀವರ ಸಮೂಹ ಪ್ರತ್ಯೇಕ.  ಅವರೆಲ್ಲ  ಆಯಾ ಪದವಿಗೆ ಬಂದು, ಆಯಾ ಸಾಧನೆಗಳನ್ನು ಮಾಡಿ, ಪರಮಾತ್ಮನ ಸೇವೆಯನ್ನು ಸಲ್ಲಿಸಿ, ಮುಕ್ತರಾಗುತ್ತಾರೆ.

ಆದ್ದರಿಂದ ಜೀವರಲ್ಲಿ ತಾರತಮ್ಯ(hierarchy) ಇದ್ದೇ ಇದೆ.  ನೀವು ಏನೇ ಮಾಡಿದರೂ ತಾರತಮ್ಯವನ್ನು ಅಲ್ಲಗಳೆಯುವುದಾಗಲೀ, ಮುರಿಯುವುದಾಗಲೀ ಸಾಧ್ಯವಿಲ್ಲ. ಅದು ಸ್ವಭಾವ.  ಆ ಸ್ವಭಾವವನ್ನು ಬದಲಿಸಲು ಸಾಧ್ಯವೇ ಇಲ್ಲ.

 

ಅಯೋಗ್ಯಮಿಚ್ಛನ್ ಪುರುಷಃ ಪತತ್ಯೇವ ನ ಸಂಶಯಃ ।

ತಸ್ಮಾದ್ ಯೋಗ್ಯಾನುಸಾರೇಣ ಸೇವ್ಯೋ ವಿಷ್ಣುಃ ಸದೈವ ಹಿ ॥೧.೯೬

 

ಯಾವುದೇ ಒಬ್ಬ ಜೀವನು ತನಗೆ ಯೋಗ್ಯ ಅಲ್ಲದ್ದನ್ನು ಬಯಸಿದರೆ  ನಿಶ್ಚಯವಾಗಿ ಬೀಳುತ್ತಾನೆ.  ಇದರಲ್ಲಿ ಯಾವುದೇ ಸಂಶಯವಿಲ್ಲ.  ಆ ಕಾರಣದಿಂದ ಅವರವರ ಯೋಗ್ಯತೆಗನುಗುಣವಾಗಿ ನಾರಾಯಣನು ಸೇವ್ಯನಾಗಿದ್ದಾನೆ. ಹೀಗಾಗಿ “ನಮನಮ್ಮ ಗುಣಕ್ಕೆ ಅನುಸಾರವಾಗಿ, ನಮ್ಮನಮ್ಮ ಯೋಗ್ಯತೆಗೆ ಅನುಗುಣವಾಗಿ ದೇವರನ್ನು ಪ್ರೀತಿಸುತ್ತೇನೆ, ಭಕ್ತಿ ಮಾಡುತ್ತೇನೆ” ಎನ್ನುವ ಸಂಕಲ್ಪ ನಮ್ಮಲ್ಲಿರಬೇಕು.

[ಇದು ಇಡೀ ಮಹಾಭಾರತ ರಾಮಾಯಣಗಳಲ್ಲೂ ಗೋಚರವಾಗುತ್ತದೆ. ಉದಾಹರಣೆಗೆ ‘ಶಂಭೂಕ’.  ಅವನು ತಪಸ್ಸನ್ನಾಚರಿಸಿದ್ದು  ಪಾರ್ವತಿಯನ್ನು ಕುರಿತು. ಉದ್ದೇಶ:  ರುದ್ರ ಪದವಿ ಪಡೆಯುವುದು. [ಅರ್ಥಾತ್ ತಾನು ಪಾರ್ವತಿಯ ಗಂಡನಾಗಬೇಕು ಎಂಬ ಬಯಕೆ !].  ಇದು ಎಂತಹ ದ್ರೋಹ? ಅವನಿಗೆ ಅಯೋಗ್ಯವಾದ ಪದವಿಯ ಬಯಕೆ. ಅದರಿಂದಾಗಿ ಶ್ರೀರಾಮನಿಂದ ಆತ  ಮರಣಹೊಂದಿದ.  ಹೀಗಾಗಿ ಯೋಗ್ಯತೆಗನುಗುಣವಾಗಿ ಸೇವೆಯನ್ನು ಮಾಡಬೇಕು. ”ನನ್ನ ಯೋಗ್ಯತೆಗೆ ಅನುಸಾರವಾದ ಕರ್ಮಗಳನ್ನು ಮಾಡಿಸು” ಎಂದು ದೇವರಲ್ಲಿ ಶರಣಾದರೆ ನಮ್ಮ ಯೋಗ್ಯತೆಯ ಅರಿವು ನಮಗಾಗಿ, ಮೋಕ್ಷದ ಮಾರ್ಗ ಗೋಚರವಾಗುತ್ತದೆ.  ಇದನ್ನು ಬಿಟ್ಟು ಯೋಗ್ಯವಲ್ಲದ್ದನ್ನು ಬಯಸಿದರೆ  ನಮ್ಮ ಪಾಡೂ ಶಂಭೂಕನ ಪಾಡೇ ಆಗುತ್ತದೆ].

 

ಅಚ್ಛಿದ್ರಸೇವನಾಚ್ಚೈವ ನಿಷ್ಕಾಮತ್ವಾಚ್ಚ ಯೋಗ್ಯತಃ ।

ದ್ರಷ್ಟುಂ ಶಕ್ಯೋ ಹರಿಃ ಸರ್ವೈರ್ನ್ನಾನ್ಯಥಾ ತು ಕಥಞ್ಚನ ॥೧.೯೭

 

ತಪ್ಪುಗಳಿಲ್ಲದ ಸೇವನೆಗಳಿಂದ, ಯಾವುದೇ ಕಾಮನೆ ಇಲ್ಲದೇ ಮಾಡುವ, ತನಗೆ ಯೋಗ್ಯವಾದ ಸೇವನೆಯಿಂದ ಪರಮಾತ್ಮನು ಕಾಣಲು ಶಕ್ಯನಾಗಿದ್ದಾನೆ. 

[ಮಹಾಭಾರತದಲ್ಲೇ ನೋಡಿದರೆ ದುರ್ಯೋಧನ-ಜರಾಸಂಧರಂತಹ ದುಷ್ಟರಿಗೂ ಶ್ರೀಕೃಷ್ಣನ ದರ್ಶನವಾಗಿದೆ.  ಆದರೆ ಇವರಿಗೆ ಮೋಕ್ಷ ಪ್ರಾಪ್ತಿಯಾಯಿತು ಎಂದು ಎಲ್ಲೂ ಯಾರೂ ಹೇಳುವುದಿಲ್ಲ. ಅವರೆಲ್ಲರೂ ಕೂಡಾ ಅಂಧಂತಮಸ್ಸನ್ನೇ  ಹೊಂದಿ  ದುಃಖದಿಂದ ಇರುತ್ತಾರೆ  ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳುವುದನ್ನು ನಾವು ಕಾಣುತ್ತೇವೆ.  ಆದರೆ ದೇವರನ್ನು ನೋಡಿದಾಕ್ಷಣ ಮುಕ್ತಿ ಪ್ರಾಪ್ತಿಯಾಗುತ್ತದೆ  ಎನ್ನುತ್ತದೆ  ಉಪನಿಷತ್ತು. ಯದಾ ಪಶ್ಯಃ ಪಶ್ಯತೇ ರುಗ್ಮ ವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್ .. (ಮುಂಡಕ ೩.೧.೩).  ಇಲ್ಲಿ ಭಗವಂತನನ್ನು ಯಾವ ರೀತಿ ನೋಡಿದರೆ ಮುಕ್ತಿ ಎನ್ನುವುದನ್ನೂ ನಾವು ಅರಿತುಕೊಳ್ಳಬೇಕು. ಪರಮಾತ್ಮ ಕೇವಲ ತೋರಿದರೆ ಪ್ರಯೋಜನವಿಲ್ಲ. ಅವನು ಗುಣಪೂರ್ವಕವಾಗಿ ನಮಗೆ ತೋರಬೇಕು. ಆಗ ಅವನಲ್ಲಿ ನಮಗೆ ಭಕ್ತಿ ಬರುತ್ತದೆ. ಭಕ್ತಿಯಿಂದಾಗಿ ದೇವರ ಅನುಗ್ರಹವಾಗುತ್ತದೆ. ಅನುಗ್ರಹದಿಂದ ಮಾತ್ರ ಮುಕ್ತಿಸಾಧ್ಯ. ಇಲ್ಲಿ ಇತಿಹಾಸ ಪುರಾಣಗಳು ಉಪನಿಷತ್ತಿಗೆ ವಿರುದ್ಧವಾಗಿ ಇಲ್ಲ ಎನ್ನುವ ವಿಷಯವೂ ನಮಗೆ ತಿಳಿಯುತ್ತದೆ].

 

ನಿಯಮೋsಯಂ ಹರೇರ್ಯಸ್ಮಾನ್ನೋಲ್ಲಙ್ಘ್ಯಃ ಸರ್ವಚೇತನೈಃ ।

ಸತ್ಯಸಙ್ಕಲ್ಪತೋ ವಿಷ್ಣುರ್ನ್ನಾನ್ಯಥಾ ಚ ಕರಿಷ್ಯತಿ ॥೧.೯೮

 

ಈ ಎಲ್ಲಾ ನಿಯಮಗಳು ಅನಾದಿಕಾಲದಿಂದ ಇದೆ. ಭಕ್ತಿಯನ್ನು ಬಿಟ್ಟು ಬೇರೆ ಯಾವುದರಿಂದಲೂ ಪರಮಾತ್ಮ ಅನುಗ್ರಹಿಸಲು ಸಾಧ್ಯವಿಲ್ಲ. ಲೋಕದಲ್ಲಿ ಒಂದನ್ನು ಸಾಧನೆ ಮಾಡಲು ಹತ್ತು ಹಲವಾರು ಮಾರ್ಗಗಳಿರಬಹುದು. ಆದರೆ ಪರಮಾತ್ಮನನ್ನು ಒಲಿಸಿಕೊಳ್ಳಬೇಕಾದರೆ ಇದು ಒಂದೇ ಮಾರ್ಗ.  ಪರಮಾತ್ಮನ ಸಂಕಲ್ಪ ಯಾವಾಗಲೂ ಒಂದೇ ರೀತಿಯಾಗಿರುತ್ತದೆ.  ಅದು ಬೇರೆಬೇರೆ ರೀತಿಯಾಗಿ ಇರುವುದಿಲ್ಲ.

 [ದಾನ ಮಾಡಿದರೆ ಮುಕ್ತಿ ಸಿಗುತ್ತದೆ ಎನ್ನುವ ಮಾತಿದೆ.  ಗಂಗೆಯಲ್ಲಿ ಮುಳುಗಿದರೆ  ಮುಕ್ತಿ, ತಪಸ್ಸು ಮಾಡಿದರೆ ಮುಕ್ತಿ, ಯಜ್ಞ ಮಾಡಿದರೆ ಮುಕ್ತಿ,.. ಇತ್ಯಾದಿಯಾಗಿ ಮೋಕ್ಷಕ್ಕೆ ಹಲವಾರು ದಾರಿಗಳನ್ನು ಹೇಳುವುದನ್ನು ನಾವು ಕಾಣುತ್ತೇವೆ.  ಆದರೆ ಇಲ್ಲಿ ಭಕ್ತಿಪೂರ್ವಕ ಸೇವನೆ ಮತ್ತು ಅನುಗ್ರಹದಿಂದ ಮಾತ್ರ ಮುಕ್ತಿ ಎನ್ನಲಾಗಿದೆ. ಯಾವುದು ಸರಿ?  ಈ ಪ್ರಶ್ನೆಗೆ ಆಚಾರ್ಯರು ಮುಂದಿನ ಶ್ಲೋಕದಲ್ಲಿ ಉತ್ತರ ನೀಡಿದ್ದಾರೆ].

 

ದಾನತೀರ್ತ್ಥತಪೋಯಜ್ಞಪೂರ್ವಾಃ ಸರ್ವೇsಪಿ ಸರ್ವದಾ ।

ಅಙ್ಗಾನಿ ಹರಿಸೇವಾಯಾಂ ಭಕ್ತಿಸ್ತ್ವೇಕಾ ವಿಮುಕ್ತಯೇ

ಭವಿಷ್ಯತ್ಪರ್ವವಚನಮಿತ್ಯೇತದಖಿಲಂ ಪರಮ್ ॥೧.೯೯

 

ದಾನ, ತೀರ್ಥಸ್ನಾನ, ತಪಸ್ಸು, ಯಜ್ಞ ಇತ್ಯಾದಿ ಎಲ್ಲವೂ  ಪರಮಾತ್ಮನ ಭಕ್ತಿಗೆ ಪೋಷಕವಾಗಿ ಮುಕ್ತಿಯನ್ನು ಕೊಡುತ್ತವೆಯೇ ವಿನಃ ಅನ್ಯತಾ ಅಲ್ಲ.  ಭಕ್ತಿಯೇ ಮೂಲತಃ ಮುಕ್ತಿಗೆ ಮಾರ್ಗ.  ಉದಾಹರಣೆಗೆ: ದಾನ ಮಾಡಿದರೆ ಶಾಸ್ತ್ರ ಓದುವ ಒಳ್ಳೆ ಬುದ್ಧಿ ಬರುತ್ತದೆ.  ತೀರ್ಥ ಕ್ಷೇತ್ರ ಮೊದಲಾದವುಗಳಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಜ್ಞಾನವನ್ನು ಪಡೆದುಕೊಳ್ಳುವ ಯೋಗ್ಯತೆ ಉಂಟಾಗುತ್ತದೆ.  ಜಪ ಮಾಡಿದರೆ ಪಾಪ ನಾಶವಾಗಿ ಜ್ಞಾನವನ್ನು ಪಡೆಯುವ ಪುಣ್ಯ ಬರುತ್ತದೆ. ಯಜ್ಞವೂ ಕೂಡಾ ಜ್ಞಾನ-ಭಕ್ತಿಗೆ ಪೂರಕ.  ಹೀಗೆ  ಇವೆಲ್ಲವೂ ಕೂಡಾ ಪರಮಾತ್ಮನ ಭಕ್ತಿಗೆ ಅಂಗಗಳು. “ಭಕ್ತಿಸ್ತ್ವೇಕಾ ವಿಮುಕ್ತಯೇ” ಎನ್ನುವ ಭವಿಷ್ಯತ್ ಪರ್ವದ ವಚನ ಪರಮಾತ್ಮನ ಭಕ್ತಿಯಿಂದಲೇ ಮುಕ್ತಿ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ.

 

[ವೇದದಲ್ಲಿ ನಾಲ್ಕು ಭಾಗಗಳಿವೆ. ಸಂಹಿತಾ, ಬ್ರಾಹ್ಮಣಾ, ಆರಣ್ಯಕಾ, ಉಪನಿಷತ್ತು. ಇದರಲ್ಲಿ ಸಂಹಿತೆ ಎನ್ನುವುದು ಬ್ರಹ್ಮಚಾರಿಗಳಿಗೆ.  ಬ್ರಾಹ್ಮಣ ಅನ್ನುವುದು ಗ್ರಹಸ್ಥರಿಗೆ.  ವಾನಪ್ರಸ್ಥರಿಗೆ  ಆರಣ್ಯಕ.  ಯತಿಗಳಿಗೆ ಉಪನಿಷತ್ತು. ಕೆಲವರು ಸಂಹಿತೆಯಲ್ಲಿ ‘ಭಗವಂತನ ಭಕ್ತಿಯಿಂದಲೇ ಮುಕ್ತಿ’ ಎನ್ನುವುದನ್ನು ಹೇಳಿಲ್ಲ ಎಂದು ಹೇಳುತ್ತಿದ್ದರು. ಅಂತವರು  ಸಂಹಿತೆಯನ್ನು ಪ್ರತ್ಯೇಕ  ಭಾಗವಾಗಿ ನೋಡುತ್ತಿದ್ದರು. ಇನ್ನು ಕೆಲವರು ಉಪನಿಷತ್ತನ್ನು ಒಪ್ಪುತ್ತಿರಲಿಲ್ಲ! ಅದು  ಭಗವಂತನನ್ನು ತಿಳಿಸುವ ಗ್ರಂಥ ಅಲ್ಲ ಎಂದು ಅವರು ಹೇಳಿದ್ದರು. ನಂತರ  ಸಾಯಣರು, ಅವರಿಂದ ಪ್ರಭಾವಿತರಾದ ಪಶ್ಚಿಮದ ಚಿಂತಕರು ವೇದಕ್ಕೆ ಭಾಷ್ಯ ಬರೆಯುವಾಗ ಸಂಹಿತೆಗೂ ಉಪನಿಷತ್ತಿಗೂ ಸಂಬಂಧವಿಲ್ಲ, ಸಂಹಿತೆಗೂ ಮಹಾಭಾರತಕ್ಕೂ  ಸಂಬಂಧವಿಲ್ಲ ಎಂದು ಹೇಳಿದರು.  ಇವೆಲ್ಲವನ್ನೂ ಅಂದೇ  ಗ್ರಹಿಸಿದ್ದ ಆಚಾರ್ಯರು ಇಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸುವುದನ್ನು ಮುಂದಿನ ಶ್ಲೋಕಗಳಲ್ಲಿ ಕಾಣುತ್ತೇವೆ. 

ಸಂಹಿತೆಯಲ್ಲಿಯೂ ಕೂಡಾ ಸತ್ವ-ರಜಸ್ಸು-ತಮೋ ಗುಣಗಳ ಉಲ್ಲೇಖವಿದೆ. ಸಂಹಿತೆಯ ಮಂತ್ರಗಳು ಎಂದರೆ ಯಾರೋ ದನ-ಕುರಿ ಕಾಯುವವರು ಬರೆದ ಜಾನಪದ ಹಾಡುಗಳಲ್ಲ.  ಅದು ಶಾಸ್ತ್ರ. ಆ ಶಾಸ್ತ್ರ ಏನನ್ನು ಹೇಳಿದೆಯೋ ಅದನ್ನೇ ಗೀತೆ ಹೇಳಿರುವುದು. ಇವೆಲ್ಲವನ್ನು ಸಮಷ್ಟಿಯಾಗಿ ಮಹಾಭಾರತ ಕಥೆಗಳ ಮೂಲಕ  ಪ್ರಾಯೋಗಿಕವಾಗಿ ನಿರೂಪಿಸುತ್ತದೆ(Practical presentation).  ಹೀಗಾಗಿ ಮಹಾಭಾರತಕ್ಕೂ ವೇದಕ್ಕೂ ವಿರೋಧವಿಲ್ಲ ಎನ್ನುವುದನ್ನು ಪ್ರಮಾಣ ಸಹಿತ ಆಚಾರ್ಯರು ನಿರೂಪಿಸಿದ್ದಾರೆ]

 

ಶೃಣ್ವೇ ವೀರ ಉಗ್ರಮುಗ್ರಂ ದಮಾಯನ್ನನ್ಯಮನ್ಯಮತಿನೇನೀಯಮಾನಃ

ಏಧಮಾನದ್ವಿಳುಭಯಸ್ಯ ರಾಜಾ ಚೋಷ್ಕೂಯತೇ ವಿಶ ಇನ್ದ್ರೋ ಮನುಷ್ಯಾನ್ ॥೧.೧೦೦

 

ಇದು ಋಗ್ವೇದದ ೬ನೇ ಮಂಡಲದ ೪೭ನೆಯ ಸೂಕ್ತದ ೧೬ನೆಯ ಋಕ್.  ಇಲ್ಲಿ ಹೇಳುತ್ತಾರೆ:  “ಓ ನರಸಿಂಹನೇ, ನೀನು ಅತ್ಯಂತ ಉಗ್ರರಾಗಿರುವ ರಾಕ್ಷಸರನ್ನು ನಿಗ್ರಹಿಸುತ್ತಾ, ಉಳಿದವರನ್ನು ಮೇಲಕ್ಕೆ ಕೊಂಡೊಯ್ಯುತ್ತಾ, ಮನುಷ್ಯರೆಂಬುವವರನ್ನು ಈ ಸಂಸಾರದಲ್ಲಿ ಪರಿವರ್ತನೆ ಮಾಡುತ್ತಾ ಇರುತ್ತೀಯಾ” ಎಂದು. ಸಾತ್ವಿಕರು ಯೋಗ್ಯತೆಗಿಂತ ಹೆಚ್ಚು ಪುಣ್ಯ ಮಾಡಿದರೆ ಅವರ ಅಧಿಕವಾದ ಪುಣ್ಯವನ್ನೂ ಭಗವಂತ ನಾಶ ಮಾಡುತ್ತಾನೆ.  ಹಾಗೆಯೇ ತಾಮಸರು ಯೋಗ್ಯತೆಗೆ ಮೀರಿ ಪಾಪವನ್ನು ಮಾಡಿದರೆ ಅವರನ್ನೂ ಕೂಡಾ ಆತ ನಿಗ್ರಹಿಸುತ್ತಾನೆ. ಯಾರ ಯೋಗ್ಯತೆ ಎಷ್ಟೋ  ಅದಕ್ಕೆ ಅನುಕೂಲವಾದ ಫಲವನ್ನು ದೇವರು ಕೊಡುತ್ತಾನೆ.

[ಈ ಅಂಶವನ್ನು ಗಮನದಲ್ಲಿಟ್ಟುಕೊಂಡು  ಮಹಾಭಾರತವನ್ನು ನೋಡಿದರೆ ಆಗ  ಇಲ್ಲಿ ಹೇಳಿರುವ ಮಾತು ಅರ್ಥವಾಗುತ್ತದೆ.  ಉದಾಹರಣೆಗೆ ಯೋಗ್ಯತೆಗಿಂತ ಹೆಚ್ಚು ಪುಣ್ಯಮಾಡಿದ ಧರ್ಮರಾಜನ ಪುಣ್ಯವನ್ನು ಭಗವಂತ ಕಸಿದ.   ಯೋಗ್ಯತೆಯನ್ನು ಮೀರಿ ಪುಣ್ಯ ಮಾಡಿದ ಗಾಂಧಾರಿಯ ಪುಣ್ಯವನ್ನೂ ಆತ  ಕಸಿದ.  ಕರ್ಣ- ಬಲರಾಮರು ತಮ್ಮ   ಯೋಗ್ಯತೆಯನ್ನು  ಮೀರಿ ಮಾಡಿದ ಪುಣ್ಯವನ್ನು ಕಸಿದುಕೊಂಡ ಭಗವಂತ,  ಉಳಿದವರು ಪುಣ್ಯ ಮಾಡುವಂತೆ ಮಾಡಿದ. ಅರ್ಜುನ ಮೊದಲಾದವರಿಗೆಲ್ಲ ಮುಕ್ತಿ ಕೊಟ್ಟ  ಆತ, ದುರ್ಯೋಧನ ಮೊದಲಾದ ಉಗ್ರರನ್ನು ನಿಗ್ರಹಿಸಿದ. ದೇವರು ಎಂದೆಂದಿಗೂ  ಪಕ್ಷಪಾತಿ ಅಲ್ಲ. ಆತ ಸ್ವಭಾವಕ್ಕೆ ಅನುಕೂಲವಾದ ಫಲವನ್ನಷ್ಟೇ ಕೊಡುತ್ತಾನೆ. ಸ್ವತಂತ್ರನಾದ ಭಗವಂತ ಸೃಷ್ಟಿ ಎನ್ನುವ ತೋಟ ನಿರ್ಮಿಸಿ, ಅಲ್ಲಿ ಒಬ್ಬ ತೋಟಗಾರನಂತೆ, ಜೀವ ಎನ್ನುವ ಬೀಜವನ್ನು ಬಿತ್ತಿ ಬೆಳೆಸುತ್ತಾನೆ. ಅದರಿಂದ ಕಹಿಯಾದ, ಹುಳಿಯಾದ ಅಥವಾ ಸಿಹಿಯಾದ ಹಣ್ಣು ಜೀವ ಸ್ವಭಾವದಂತೆ ಅಭಿವ್ಯಕ್ತವಾಗುತ್ತದೆ. ಆದ್ದರಿಂದ ಕೆಟ್ಟಕೆಲಸ(ಕಹಿ) ಒಳ್ಳೆಯಕೆಲಸ(ಸಿಹಿ) ಎನ್ನುವುದು ನಮ್ಮ ಸ್ವಭಾವವನ್ನವಲಂಬಿಸಿದೆಯೇ  ಹೊರತು ಭಗವಂತನನ್ನಲ್ಲ. ತೋಟಗಾರ ಎಂದೂ ಮೆಣಸಿನ ಗಿಡಕ್ಕೆ ಖಾರವಾದ ನೀರನ್ನು ಹರಿಸುವುದಿಲ್ಲ. ಎಲ್ಲಾ ಗಿಡದಂತೆ ಆ ಗಿಡವನ್ನೂ ಪೋಷಿಸಿ ಬೆಳೆಸುತ್ತಾನೆ. ಆದರೆ ಅದು ಖಾರವಾದ ಹಣ್ಣನ್ನು ತನ್ನ ಸ್ವಭಾವದಂತೆ ಕೊಡುತ್ತದೆ. ದೇವರು ಎಂದೆಂದಿಗೂ ಕೂಡಾ  ಜೀವರ ಸ್ವಭಾವವನ್ನು ಬದಲಿಸುವುದಿಲ್ಲ ].

1 comment: