ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, February 12, 2018

Mahabharata Tatparya Nirnaya Kannada 3.24-3.39

ತಸ್ಮಾತ್ ಪುನಃ ಸರ್ವಸುರಾಃ ಪ್ರಸೂತಾಸ್ತೇ ಜಾನಮಾನಾ ಅಪಿ ನಿರ್ಣ್ಣಯಾಯ ।

ನಿಸ್ಸೃತ್ಯ ಕಾಯಾದುತ ಪದ್ಮಯೋನೇಃ ಸಮ್ಪ್ರಾವಿಶನ್ ಕ್ರಮಶೋ ಮಾರುತಾನ್ತಾಃ ॥೩.೨೪

 

ಅದರಿಂದ ಮತ್ತೆ ಎಲ್ಲಾ ದೇವತೆಗಳೂ ಹುಟ್ಟಿದರು.  ಅವರು ನಮ್ಮಲ್ಲಿ ಯಾರು ಉತ್ತಮರು ಎಂದು ತಿಳಿದಿದ್ದರೂ , ನಿರ್ಣಯಕ್ಕಾಗಿ ಬ್ರಹ್ಮದೇವರ ದೇಹದಿಂದ ಕ್ರಮವಾಗಿ ಹೊರಬಂದು, ಮುಖ್ಯಪ್ರಾಣನೇ ಕಡೆಯಲ್ಲಿ ಬರುವಂತೆ ಮಾಡಿದರು. ನಂತರ ಪುನಃ ದೇಹವನ್ನು ಪ್ರವೇಶಿಸುವಾಗ ಕೂಡಾ  ಮುಖ್ಯಪ್ರಾಣ ದೇವರೇ ಕೊನೆಗೆ ಪ್ರವೇಶ ಮಾಡಿದರು.

[ದೇವತೆಗಳಿಗೆಲ್ಲಾ ಯಾರು ಶ್ರೇಷ್ಠ ಎನ್ನುವ ವಿವಾದ ಹುಟ್ಟಿಕೊಂಡಿತು. ಅದರಿಂದ ಯಾರು ಹೋದರೆ ಈ ದೇಹ ಇರುವುದಿಲ್ಲವೋ ಅವನು ಮಿಗಿಲು ಮತ್ತು  ಯಾರು ಬಂದರೆ ಮಾತ್ರ ಈ ದೇಹ ಏಳುತ್ತದೋ ಅವನು ಮಿಗಿಲು ಎಂದು ಹೇಳುವ  ಕಥೆಯನ್ನು ನಾವು ಉಪನಿಷತ್ತುಗಳಲ್ಲಿ ಕೇಳುತ್ತೇವೆ. ಅದೇ ಮಾತನ್ನು ಆಚಾರ್ಯರು ಇಲ್ಲಿ ಉಲ್ಲೇಖಿಸಿದ್ದಾರೆ. ಇದು ಸೃಷ್ಟಿ ವಿಸ್ತಾರದ ಐದನೇ ಅಥವಾ ಆರನೇ ಹಂತದಲ್ಲಿ ನಡೆದಿರುವುದು ಎಂದು ನಾವು ಅನುಸಂಧಾನ ಮಾಡಬೇಕು]. 

 

ಪಪಾತ ವಾಯೋರ್ಗ್ಗಮನಾಚ್ಛರೀರಂ ತಸ್ಯೈವ ಚಾsವೇಶತ ಉತ್ಥಿತಂ ಪುನಃ ।

ತಸ್ಮಾತ್ ಸ ಏಕೋ ವಿಬುಧಪ್ರಧಾನ ಇತ್ಯಾಶ್ರಿತಾ ದೇವಗಣಾಸ್ತಮೇವ  ೩.೨೫

 

ಹರೇರ್ವಿರಿಞ್ಚಸ್ಯ ಚ ಮದ್ಧ್ಯಸಂಸ್ಥಿತೇಸ್ತದನ್ಯದೇವಾಧಿಪತಿಃ ಸ ಮಾರುತಃ  ।

ತತೋ ವಿರಿಞ್ಚೋ ಭುವನಾನಿ ಸಪ್ತ ಸಸಪ್ತಕಾನ್ಯಾಶು ಚಕಾರ ಸೋsಬ್ಜಾತ್ ೩.೨೬

 

ಮುಖ್ಯಪ್ರಾಣನ ತೆರಳುವಿಕೆಯಿಂದ ಶರೀರ ಬಿದ್ದಿತು ಮತ್ತು ಅವನ ಆವೇಶದಿಂದಲೇ ಮತ್ತೆ ಆ ಶರೀರ ಎದ್ದಿತು.  ಆ ಕಾರಣದಿಂದ ಮುಖ್ಯಪ್ರಾಣನೇ ದೇವತೆಗಳಲ್ಲಿ ಉತ್ತಮನು ಎಂದು ತಿಳಿದ ಎಲ್ಲಾ ದೇವತೆಗಳ ಸಮೂಹವು ಅವನನ್ನೇ ಆಶ್ರಯಿಸಿದರು[1].

ಅದೇ ಶರೀರದಲ್ಲಿ ಬ್ರಹ್ಮದೇವರಿದ್ದರು, ಪರಮಾತ್ಮನೂ ಇದ್ದ.  ಅವರಿಬ್ಬರೂ ಹೊರಬಂದ ಮೇಲೆ ಮುಖ್ಯಪ್ರಾಣ ಹೊರ ಬಂದಿರುವುದೋ ಅಥವಾ ಅವರಿಂದ ಮೊದಲೋ? ಈ ರೀತಿ ಪ್ರಶ್ನೆಗೆ ಇಲ್ಲಿ ಆಚಾರ್ಯರು ಉತ್ತರ ನೀಡಿದ್ದಾರೆ. ಪರಮಾತ್ಮ ಮತ್ತು ಬ್ರಹ್ಮದೇವರು  ತಟಸ್ಥವಾಗಿದ್ದರು. ಇದರಿಂದ ಅವರಿಬ್ಬರನ್ನು ಬಿಟ್ಟು ಉಳಿದ ದೇವತೆಗಳ ಅಧಿಪತಿ ಮುಖ್ಯಪ್ರಾಣ ಎನ್ನುವುದು ನಿರ್ಣಯವಾಯಿತು.

ಶ್ರೇಷ್ಠತೆಯ ನಿರ್ಣಯ ಆದ ಮೇಲೆ ಬ್ರಹ್ಮದೇವರು ಈ ತಾವರೆಯಿಂದ ಹದಿನಾಲ್ಕು ಲೋಕಗಳ ವಿಂಗಡಣೆ ಮಾಡಿದರು.

 

ತಸ್ಮಾಚ್ಚ ದೇವಾ ಋಷಯಃ ಪುನಶ್ಚ ವೈಕಾರಿಕಾದ್ಯಾಃ ಸಶಿವಾ ಬಭೂವುಃ  ।

ಅಗ್ರೇ ಶಿವೋsಹಮ್ಭವ ಏವ ಬುದ್ಧೇರುಮಾ ಮನೋಜೌ ಸಹ ಶಕ್ರಕಾಮೌ ॥೩.೨೭

 

ಗುರುರ್ಮ್ಮನುರ್ದ್ದಕ್ಷ ಉತಾನಿರುದ್ಧಃ ಸಹೈವ ಪಶ್ಚಾನ್ಮನಸಃ ಪ್ರಸೂತಾಃ ।

ಚಕ್ಷುಃಶ್ರುತಿಭ್ಯಾಂ ಸ್ಪರ್ಶಾತ್ ಸಹೈವ ರವಿಃ ಶಶೀ ಧರ್ಮ್ಮ ಇಮೇ ಪ್ರಸೂತಾಃ ॥೩.೨೮

 

ಬ್ರಹ್ಮದೇವರಿಂದ ಮತ್ತೆ ವೈಕಾರಿಕಾ ಅಹಂಕಾರದಿಂದ ಹುಟ್ಟಿದ ದೇವತೆಗಳು ಹಾಗೂ ಸದಾಶಿವ ಎಲ್ಲರೂ ಮತ್ತೆ ಹುಟ್ಟಿದರು.   

ಮೊದಲು ಬ್ರಹ್ಮದೇವರ ‘ನಾಮದೇಹ’ ಎನ್ನುವ ಪ್ರಜ್ಞೆಯಿಂದ ಸದಾಶಿವನು ಹುಟ್ಟಿದನು. ಬುದ್ಧಿಯಿಂದ ಪಾರ್ವತೀ ದೇವಿ ಹುಟ್ಟಿದಳು. ಮನಸ್ಸಿನಿಂದ ಇಂದ್ರ ಹಾಗೂ ಕಾಮರು ಹುಟ್ಟಿದರು. ಇವರಲ್ಲದೇ ಬೃಹಸ್ಪತಿ, ಸ್ವಾಯಂಭುವ ಮನು, ದಕ್ಷ ಪ್ರಜಾಪತಿ, ಅನಿರುದ್ಧ ಇವರೆಲ್ಲರೂ ಬ್ರಹ್ಮನ ಮನಸ್ಸಿನಿಂದಲೇ ಹುಟ್ಟಿದವರು.

ಕಣ್ಣಿನಿಂದ ಸೂರ್ಯ, ಕಿವಿಯಿಂದ ಚಂದ್ರ, ಚರ್ಮದಿಂದ ಧರ್ಮ, ಹೀಗೆ  ಇವರೆಲ್ಲರೂ ಕೂಡಾ ಬ್ರಹ್ಮದೇವರಿಂದ ಹುಟ್ಟಿದರು.

 

ಜಿಹ್ವಾ̐ಭವೋ ವಾರಿಪತಿರ್ನ್ನಸೋಶ್ಚ ನಾಸತ್ಯದಸ್ರೌ ಕ್ರಮಶಃ ಪ್ರಸೂತಾಃ ।

ತತಃ ಸನಾದ್ಯಾಶ್ಚ ಮರೀಚಿಮುಖ್ಯಾ ದೇವಾಶ್ಚ ಸರ್ವೇ ಕ್ರಮಶಃ ಪ್ರಸೂತಾಃ ॥೩.೨೯

 

ಬ್ರಹ್ಮದೇವರ ನಾಲಿಗೆಯಿಂದ ವರುಣ, ಮೂಗಿನ ಹೊರಳೆಯಿಂದ ನಾಸತ್ಯ ಮತ್ತು ದಸ್ರೌ (ಅಶ್ವಿನೀದೇವತೆಗಳು) ಕ್ರಮವಾಗಿ ಹುಟ್ಟಿದರು. 

ಆಮೇಲೆ ಸನಕ ಸನಂದನ ಮೊದಲಾದವರು, ಪ್ರವಹವಾಯು ಮೊದಲಾದ ದೇವತೆಗಳು, ಹೀಗೆ ಎಲ್ಲರೂ ಹುಟ್ಟಿದರು.

 [ತಥಾಚ: ಮೊದಲನೆಯದು ನಾರಾಯಣನ ಸ್ವಗತ ಸೃಷ್ಟಿ. ಆಮೇಲೆ ಮೂರು ಜನರ ಸೃಷ್ಟಿ.  ತದನಂತರ ಬ್ರಹ್ಮಾಂಡದ ಹೊರಗಡೆಯ ದೇವತೆಗಳ ಸೃಷ್ಟಿ. ಆಮೇಲೆ ಚತುರ್ಮುಖನಿಂದ ಸೃಷ್ಟಿ. ನಂತರ ವಾಯುವಿನಿಂದ ಸೃಷ್ಟಿ, ತದನಂತರ  ಗರುಡ-ಶೇಷ-ರುದ್ರ ಅವರಿಂದ ಸೃಷ್ಟಿ. ನಂತರ ಇಂದ್ರನಿಂದ ಸೃಷ್ಟಿ.  ಅದಾದ ಮೇಲೆ   ಪುರಾಣಪ್ರಪಂಚದಲ್ಲಿ ಕಾಣುವ ದಿತಿ-ಕಾಶ್ಯಪ ಇವರೆಲ್ಲರಿಂದ ಸೃಷ್ಟಿ.  ಹೀಗೆ ಅನೇಕ ಮಜಲುಗಳಲ್ಲಿ ಸೃಷ್ಟಿ ವಿಸ್ತಾರ ಹೊಂದುತ್ತದೆ.  ಇದರ ಸಂಕ್ಷಿಪ್ತ ಚಿತ್ರಣ ಹೀಗಿದೆ:

ನಾರಾಯಣನಿಂದ ಸೃಷ್ಟಿ:

೧. ವಾಸುದೇವಃ+ಮಾಯ= ಜೀವಮಾನೀ, ಕಾಲಮಾನೀ, ಪುರುಷ ನಾಮಕ ವಿರಿಂಚಃ

೨. ಸಂಕರ್ಷಣಃ+ಜಯ= ಜೀವಮಾನೀ, ಕಾಲಮಾನೀ, ಸೂತ್ರ ನಾಮಕ ವಾಯುಃ

೩.ಪ್ರದ್ಯಮ್ನಃ+ಕೃತಿಃ= ೧.ಪ್ರಕೃತಿ ಮಾನಿನಿ ಸರಸ್ವತಿ; ೨. ಜೀವಶ್ರದ್ಧಾಮಾನಿನಿ ಭಾರತಿ

೪. ಅನಿರುದ್ಧಃ+ಶಾಂತಿಃ = ೧. ಮಹತತ್ತ್ವಮಾನೀ, ಚಿತ್ತಮಾನೀ, ಸ್ಥೂಲಾತ್ಮ ವಿರಿಂಚಃ; ೨. ವಾಙ್ಮಯಮಾನಿನಿ ಸರಸ್ವತಿ

೫.ವಾಸುದೇವಃ +ಸತ್ತ್ವಮಾನಿನಿ ಮಾಯ (ಶ್ರೀಃ)= ವಿಷ್ಣುಃ    ಸ್ಥಿತಿಹೇತುಃ

   ವಾಸುದೇವಃ +ರಜೋಮಾನಿನಿ ಮಾಯ (ಭೂಃ)=ಬ್ರಹ್ಮಗತೋ ಬ್ರಹ್ಮನಾಮ ನಾರಾಯಣಃ   ಸೃಷ್ಟ

   ವಾಸುದೇವಃ +ತಮೋಮಾನಿನಿ ಮಾಯ(ದುರ್ಗಾ)= ಶರ್ವಗತಃ ಶರ್ವನಾಮ ನಾರಾಯಣಃ   ಸಂಹರ್ತ

೬. ವಿಷ್ಣುಃ+ಶ್ರೀಃ =ನಾಭೀಕಮಲಸಂಭವೋ ಜಗಸೃಷ್ಟ ವಿರಿಂಚಃ

ಚತುರ್ಮುಖನಿಂದ ಸೃಷ್ಟಿ:

೧. ಜೀವಕಾಲಮಾನೀ ವಿರಿಂಚಃ+ ಪ್ರಕೃತಿಮಾನಿನಿ  ಸರಸ್ವತಿ =ಜೀವಮಾನೀ ಶೇಷಃ(ವಾರುಣೀ ಚ)

೨. ಮಹನ್ಮಾನಿ  ಚಿತ್ತ ಮಾನೀ ವಿರಿಂಚಃ+ ವಾಙ್ಮಯಮಾನಿನಿ ಸರಸ್ವತಿ=     

೧.ಅಹಂಕಾರಮಾನೀ ರುದ್ರಃ      

೨.ಬುದ್ಧಿಮಾನೀ ಉಮಾ

೩. ಜೀವಕಾಲಮಾನೀ ವಿರಿಂಚಃ+ ಪ್ರಕೃತಿಮಾನಿನಿ  ಸರಸ್ವತಿ=ಸ್ಥೂಲತನುಃ ಶಿವಃ(ಉಮಾ ಚ)

೪. ನಾಭೀಪದ್ಮಜೋ ವಿರಿಂಚಃ+(ಸರಸ್ವತಿ)=    

೧. ಅಂಡಾದ್ ಬಹಿಃ ಸರ್ವ ಸುರಾಃ  (ಬ್ರಹ್ಮಾಂಡದ ಹೊರಗಿನ)

೨. ಅಂಡಾಂತಃ ಶಿವಾದ್ಯಃ ಸರ್ವ ಸುರಾಃ  (ಬ್ರಹ್ಮಾಂಡದ ಒಳಗೆ)

ಮುಖ್ಯಪ್ರಾಣನಿಂದ(ವಾಯುವಿನಿಂದ) ಸೃಷ್ಟಿ:

೧. ಜೀವಕಾಲಮಾನೀ ವಾಯುಃ+ ಜೀವಶ್ರದ್ಧಾಮಾನಿನಿ ಭಾರತಿ= ೧. ಕಾಲಮಾನೀ ಗರುಡಃ ೨.ವಿಶ್ವಕ್ಸೇನಃ

 ೩.ಜೀವಮಾನೀ ಶೇಷಃ, ಕಾಲಮಾನೀ ಶಿವಃ, ಮನೋಮಾನೀ ಇಂದ್ರಃ

ಗರುಡನಿಂದ ಸೃಷ್ಟಿ:

೧.ಕಾಲಮಾನೀ ಗರುಡಃ +(ಸುಪರ್ಣಿ)= ಕಾಲ ನಾಮ ವಿಷ್ಣುಪಾರ್ಷದಾಶ್ಚತ್ವಾರಃ

ಶೇಷನಿಂದ ಸೃಷ್ಟಿ:

೧. ಜೀವಮಾನೀ  ಶೇಷಃ + (ವಾರುಣಿ)= ಜೀವ ಹೃದಯ ದ್ವಾರಪಾಲ, ವೈಕುಂಠಬಾಹ್ಯದ್ವಾರಪಾಲ ಜಯ-ವಿಜಯಾದಿ   ಸಮೇತರಾದ ಎಂಟು ಮಂದಿ.

ಶಿವನಿಂದ ಸೃಷ್ಟಿ:

೧. ಚಿತ್ತಮಾನೀ ವಿರಿಂಚ ಜಾತಃ ಸಾತ್ತ್ವಿಕಾಹಂಕಾರಮಾನೀ ಶಿವಃ+ (ಸಾತ್ತ್ವಿಕ ಬುದ್ಧಿಮಾನೀನ್ಯುಮಾ)=

೧. ಮನಃ,      ೨. ಇಂದ್ರಿಯಾಮಾನೀ ದೇವತೆಗಳು  (ವೈಕಾರಿಕರು)

೨. ರಾಜಸ ಅಹಂಕಾರಮಾನೀ ಶಿವಃ+ (ರಾಜಸ ಬುದ್ಧಿಮಾನೀನ್ಯುಮಾ)= ೧. ದಶ ಇಂದ್ರಿಯಗಳು   (ತೈಜಸ)

೩. ತಾಮಸ ಅಹಂಕಾರ ಶಿವಃ+ (ತಾಮಸ  ಬುದ್ಧಿಮಾನೀನ್ಯುಮಾ) = ೧. ಪಂಚ ತನ್ಮಾತ್ರೆಗಳು ೨. ಪಂಚಭೂತಗಳು      ೩.ತದಭಿಮಾನೀದೇವಾಃ

೪.ಜೀವಮಾನೀವಿರಿಂಚಜಾತಃ ಶಿವಃ+ (ಉಮಾ)= ಸರ್ವದೇವಾಃ

ಇಂದ್ರನಿಂದ ಸೃಷ್ಟಿ:

ಇಂದ್ರ+ಶಚಿ= ತತೋsವಾರ ಯಜ್ಞಾಮಾನೀ ಸುರಾಃ   (ಯಜ್ಞಾಭಿಮಾನೀಗಳಾದ ಎಲ್ಲಾ ದೇವತೆಗಳು)

ತತೋsದಿತಿ ಕಶ್ಯಪಾಭ್ಯಾಂ ಪುನರ್ದೇವತಾಸೃಸ್ಟಿಃ ತತ ಉತ್ತರಂ ಕಾಮಾತ್ ಸರ್ವಸೃಷ್ಟಿರೀತಿ ಕ್ರಮಃ * ]

  

ತತೋsಸುರಾದ್ಯಾ ಋಷಯೋ ಮನುಷ್ಯಾ ಜಗದ್ ವಿಚಿತ್ರಂ ಚ ವಿರಿಞ್ಚತೋsಭೂತ್ ।

ಉಕ್ತಕ್ರಮಾತ್ ಪೂರ್ವಭವಸ್ತು ಯೋಯಃ ಶ್ರೇಷ್ಠಃ ಸಸ ಹ್ಯಾಸುರಕಾನೃತೇ ಚ  ॥೩.೩೦

 

ಪೂರ್ವಸ್ತು ಪಶ್ಚಾತ್ ಪುನರೇವ ಜಾತೋ ನಾಶ್ರೇಷ್ಠತಾಮೇತಿ ಕಥಞ್ಚಿದಸ್ಯ ।

ಗುಣಾಸ್ತು ಕಾಲಾತ್ ಪಿತೃಮಾತೃದೋಷಾತ್ ಸ್ವಕರ್ಮ್ಮತೋ ವಾsಭಿಭವಂ ಪ್ರಯಾನ್ತಿ ॥೩.೩೧

 

ತದನಂತರ ಅಸುರರು, ಋಷಿಗಳು, ಮನುಷ್ಯರು, ಮೊದಲಾದ ಚಿತ್ರ-ವಿಚಿತ್ರವಾದ ಈ ಪ್ರಪಂಚವು ಬ್ರಹ್ಮದೇವರಿಂದ ಹುಟ್ಟಿತು. ಕಾಶ್ಯಪಾದಿಗಳಿಂದ ಸೃಷ್ಟಿ ಆಗುವ ಮೊದಲು,  ಪರಮಾತ್ಮನಿಂದ ಹಾಗೂ ಬ್ರಹ್ಮದೇವರಿಂದ ಹುಟ್ಟುವಾಗ ಅನುಕ್ರಮವಾಗಿ ಯಾರು ಮೊದಲು ಹುಟ್ಟಿದರೋ  ಅವರು ಶ್ರೇಷ್ಠರು. [ಮಧ್ಯದಲ್ಲಿ ಸೃಷ್ಟಿ ಆಗಿರುವ ದೈತ್ಯರನ್ನು, ದ್ವಾರಪಾಲಕರನ್ನು  ಬಿಟ್ಟು].  ಬ್ರಹ್ಮದೇವರ ಮತ್ತು ಪರಮಾತ್ಮನ ಸೃಷ್ಟಿಯಲ್ಲಿ ಯಾರು ಮೊದಲು ಹುಟ್ಟಿರುತ್ತಾರೋ, ಅವರು ನಂತರ ಮರಳಿ ಹುಟ್ಟಿದಾಗ  ಶ್ರೇಷ್ಠತೆಯನ್ನು ಕಳೆದುಕೊಳ್ಳುವುದಿಲ್ಲ.  [ಉದಾಹರಣೆಗೆ ಉಪೇಂದ್ರ.  ಇವನು ಇಂದ್ರನ ನಂತರ ಹುಟ್ಟಿದವನು.  ಆದರೆ ಉಪೇಂದ್ರ ಇಂದ್ರನಿಗಿಂತ ಚಿಕ್ಕವನಲ್ಲ].

ಅವತಾರದಲ್ಲಿಯೂ ಈ ತಾರತಮ್ಯ ಅನ್ವಯವಾಗುತ್ತದೆ. ಆದರೆ ಅಲ್ಲಿ ಕೆಲವು ವ್ಯತ್ಯಾಸಗಳನ್ನು ಕಾಣುತ್ತೇವೆ. ಉದಾಹರಣೆಗೆ  ಬ್ರಹ್ಮದೇವರ ಸೃಷ್ಟಿಯಲ್ಲಿ  ಇಂದ್ರ ಮೊದಲು ಹುಟ್ಟಿದರೆ,  ನಂತರ ಹುಟ್ಟಿರುವುದು ವಸುಗಳು. ಆದರೆ ಅವತಾರದಲ್ಲಿ ಭೀಷ್ಮನಾಗಿ ವಸು ಹುಟ್ಟಿರುತ್ತಾನೆ.  ಇಂದ್ರ ಅರ್ಜುನನಾಗಿ ಹುಟ್ಟಿ, ಭೀಷ್ಮ-ದ್ರೋಣರಿಂದ  ವಿದ್ಯೆಯನ್ನು ಕಲಿಯುತ್ತಾನೆ.  ಆಗ ಅವನಿಗೆ ಸಂಪೂರ್ಣ ಅರಿವು ಇದ್ದಿರುವುದಿಲ್ಲ. ಹೀಗಿರುವಾಗ ವಸುವಿಗಿಂತ ಶ್ರೇಷ್ಠನಾಗಿರುವ ಇಂದ್ರನ ಆ ಶ್ರೇಷ್ಠತೆ  ಆಗ ಎಲ್ಲಿ ಹೋಯಿತು ಎನ್ನುವ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ  ಆಚಾರ್ಯರು ಇಲ್ಲಿ ಉತ್ತರಿಸುತ್ತಾ ಹೇಳುತ್ತಾರೆ: “ಯಾವುದೇ ಸ್ವಾಭಾವಿಕ ಗುಣಗಳು ಕಾಲದ ಪ್ರಭಾವದಿಂದಲೋ, ತಂದೆ-ತಾಯಿಗಳ ದೋಷದಿಂದಲೋ, ತನ್ನ ಕರ್ಮದಿಂದಲೋ ಮರೆಯಾಗುತ್ತದೆ.  ಕಾಲ ಬಂದಾಗ ಮತ್ತೆ ಅಭಿವ್ಯಕ್ತವಾಗುತ್ತದೆ” ಎಂದು. 

 

ಲಯೋ ಭವೇದ್ ವ್ಯುತ್ಕ್ರಮತೋ ಹಿ ತೇಷಾಂ ತತೋ ಹರಿಃ ಪ್ರಳಯೇ ಶ್ರೀಸಹಾಯಃ ।

ಶೇತೇ ನಿಜಾನನ್ದಮಮನ್ದಸಾನ್ದ್ರಸನ್ದೋಹಮೇಕೋsನುಭವನ್ನನನ್ತಃ ॥೩.೩೨

 

ಸೃಷ್ಟಿ ಹೇಗೆ ಆಯಿತೋ ಅದರ ವ್ಯುತ್ಕ್ರಮದಲ್ಲಿ  ಲಯವಾಗುತ್ತದೆ.  ಅಂದರೆ ಕಡೆಯಲ್ಲಿ ಹುಟ್ಟಿದವರು ಮೊದಲು ಲಯವನ್ನು ಹೊಂದುತ್ತಾರೆ ಮತ್ತು ಮೊದಲು ಹುಟ್ಟಿದವರು ಕಡೆಯಲ್ಲಿ ಲಯವನ್ನು ಹೊಂದುತ್ತಾರೆ. ಲಯವಾದಮೇಲೆ, ಪರಮಾತ್ಮನು ಲಕ್ಷ್ಮೀದೇವಿಯಿಂದ ಒಡಗೂಡಿ, ದಟ್ಟವಾಗಿರುವ ತನ್ನ ಸ್ವಾಭಾವಿಕ ಆನಂದವನ್ನು ಅನುಭವಿಸುತ್ತಾ ಮಲಗಿರುತ್ತಾನೆ.

 

ಅನನ್ತಶೀರ್ಷಾಸ್ಯಕರೋರುಪಾದಃ ಸೋsನನ್ತಮೂರ್ತ್ತಿಃ ಸ್ವಗುಣಾನನನ್ತಾನ್ ।

ಅನನ್ತಶಕ್ತಿಃ ಪರಿಪೂರ್ಣ್ಣಭೋಗೋ ಭುಞ್ಜನ್ನಜಸ್ರಂ ನಿಜರೂಪ ಆಸ್ತೇ ॥೩.೩೩

 

ಎಣಿಸಲು ಬಾರದ ತಲೆ, ಮುಖ, ಕೈ, ಕಾಲುಗಳನ್ನುಳ್ಳ, ಎಣಿಸಲಾರದಷ್ಟು ರೂಪಗಳನ್ನು ಹೊಂದಿದ ಪರಮಾತ್ಮನು, ಎಣೆಯಿರದಷ್ಟು ಸ್ವರೂಪ ಸುಖವನ್ನು ಅನುಭವಿಸುತ್ತಾ, ಸ್ವಾಭಾವಿಕ ರೂಪವುಳ್ಳವನಾಗಿ, ಪರಿಪೂರ್ಣ ಭೋಗದಲ್ಲಿರುತ್ತಾನೆ. 

 

ಏವಂ ಪುನಃ ಸೃಜತೇ ಸರ್ವಮೇತದನಾದ್ಯನನ್ತೋ ಹಿ ಜಗತ್ಪ್ರವಾಹಃ

ನಿತ್ಯಾಶ್ಚ ಜೀವಾಃ ಪ್ರಕೃತಿಶ್ಚ ನಿತ್ಯಾ ಕಾಲಶ್ಚ ನಿತ್ಯಃ ಕಿಮು ದೇವದೇವಃ ॥೩.೩೪

 

ಒಂದು ಲಯದ ನಂತರ ಇದೇ ರೀತಿಯಾಗಿ ಭಗವಂತ ಪ್ರಪಂಚವನ್ನು ಮರಳಿ ಸೃಷ್ಟಿ ಮಾಡುತ್ತಾನೆ.  ಈ ರೀತಿಯಾದ ಜಗತ್ತು ಅದೆಷ್ಟು ಆಗಿ ಹೋಗಿದೆಯೋ.  [ಹೀಗಾಗಿ ಭಗವಂತ ಅನಂತ ಕೋಟಿ ಬ್ರಹ್ಮಾಂಡ ನಾಯಕ]

ಜೀವರು ನಿತ್ಯರು.  ಪ್ರಕೃತಿಯೂ ನಿತ್ಯಳು.  ಕಾಲವೂ ನಿತ್ಯ.  ದೇವರು ನಿತ್ಯರಲ್ಲಿ ನಿತ್ಯ. [ಇದನ್ನೇ ಉಪನಿಷತ್ತು ‘ನಿತ್ಯೋ ನಿತ್ಯಾನಾಂ’ ಎಂದು ಪರಮಾತ್ಮನನ್ನು ಕುರಿತು  ಹೇಳುತ್ತದೆ.  ಅಂದರೆ ನಿತ್ಯವಾದ ಪದಾರ್ಥಗಳಲ್ಲಿಯೂ ಸ್ವತಂತ್ರವಾಗಿ ನಿತ್ಯನಾದವನು ಆ ಪರಮಾತ್ಮ. ]

 

ಯಥಾ ಸಮುದ್ರಾತ್ ಸರಿತಃ ಪ್ರಜಾತಾಃ ಪುನಸ್ತಮೇವ ಪ್ರವಿಶನ್ತಿ ಶಶ್ವತ್ ।

ಏವಂ ಹರೇರ್ನ್ನಿತ್ಯಜಗತ್ಪ್ರವಾಹಸ್ತಮೇವ ಚಾಸೌ ಪ್ರವಿಶತ್ಯಜಸ್ರಮ್ ॥೩.೩೫

 

ಯಾವ ರೀತಿಯಾಗಿ ಕಡಲಿನಿಂದ ನದಿಗಳು ಹೊರಬಂದು ಮತ್ತೆ ಪುನಃ ಅದನ್ನೇ ಹೊಕ್ಕುತ್ತವೋ ಹಾಗೆಯೇ, ಪರಮಾತ್ಮನಿಂದ ಯಾವಾಗಲೂ ಜಗತ್ತಿನ ಪ್ರವಾಹ ಹೊರಗಡೆ ಬರುತ್ತದೆ. ಈ ಪ್ರಪಂಚವು ಮತ್ತೆ ಅವನನ್ನೇ ಹೊಕ್ಕುತ್ತದೆ.

 

 

ಏವಂ ವಿದುರ್ಯ್ಯೇ ಪರಮಾಮನನ್ತಾಮಜಸ್ಯ ಶಕ್ತಿಂ ಪುರುಷೋತ್ತಮಸ್ಯ ।

ತಸ್ಯ ಪ್ರಸಾದಾದಥ ದಗ್ಧದೋಷಾಸ್ತಮಾಪ್ನುವನ್ತ್ಯಾಶು ಪರಂ ಸುರೇಶಮ್ ॥೩.೩೬

 

ಈ ರೀತಿಯಾಗಿ ಯಾರು ಪುರುಷೋತ್ತಮನಾಗಿರುವ, ಎಂದೂ ಹುಟ್ಟದ ಪರಮಾತ್ಮನ ಉತ್ಕೃಷ್ಟವಾದ, ಕೊನೆ ಇರದ ಸಾಮರ್ಥ್ಯವನ್ನು ತಿಳಿದಿದ್ದಾರೋ, ಅವರು ಪರಮಾತ್ಮನ  ಅನುಗ್ರಹದಿಂದ ತಮ್ಮ ದೋಷವನ್ನು ಕಳೆದುಕೊಂಡು ಉತ್ಕೃಷ್ಟನಾದ ಪರಮಾತ್ಮನನ್ನು ಸೇರುತ್ತಾರೆ. 

 

 

ದೇವಾನಿಮಾನ್ ಮುಕ್ತಸಮಸ್ತದೋಷಾನ್ ಸ್ವಸನ್ನಿಧಾನೇ ವಿನಿವೇಶ್ಯ ದೇವಃ ।

ಪುನಸ್ತದನ್ಯಾನಧಿಕಾರಯೋಗ್ಯಾಂಸ್ತತ್ತದ್ಗಣಾನೇವ ಪದೇ ನಿಯುಙ್ಕ್ತೇ ॥೩.೩೭

 

ಈ ಎಲ್ಲಾ ದೇವತೆಗಳು ತಮ್ಮೆಲ್ಲಾ ದೋಷಗಳನ್ನು ಕಳೆದುಕೊಂಡ ಮೇಲೆ ಅವರನ್ನು ಭಗವಂತ ತನ್ನ ಸನ್ನಿಧಾನದಲ್ಲಿಯೇ ಇಟ್ಟು, ಮತ್ತೆ  ಬೇರೆಯೇ ಆಗಿರುವ, ಅದೇ ಯೋಗ್ಯತೆ ಉಳ್ಳ, ಅದೇ ಗಣದಲ್ಲಿ ಇರುವ ಜೀವರನ್ನು, ಅದೇ ಪದವಿಯಲ್ಲಿ ನಿಯೋಗಿಸುತ್ತಾನೆ. [ಉದಾಹರಣೆಗೆ: ಬ್ರಹ್ಮದೇವರ ಪದವಿಗೆ ಯೋಗ್ಯರಾದ ಜೀವಗಣವನ್ನು ಬ್ರಹ್ಮನನ್ನಾಗಿ ಮಾಡುತ್ತಾನೆ,  ಇಂದ್ರ ದೇವರ ಪದವಿಗೆ ಯೋಗ್ಯರಾದ ಜೀವಗಣವನ್ನು  ಇಂದ್ರನನ್ನಾಗಿ ಮಾಡುತ್ತಾನೆ, ಇತ್ಯಾದಿ]

 

ಪುನಶ್ಚ ಮಾರೀಚತ ಏವ ದೇವಾ ಜಾತಾ ಅದಿತ್ಯಾಮಸುರಾಶ್ಚ ದಿತ್ಯಾಮ್ ।

ಗಾವೋ ಮೃಗಾಃ ಪಕ್ಷ್ಯುರಗಾದಿಸತ್ವಾ ದಾಕ್ಷಾಯಣೀಷ್ವೇವ ಸಮಸ್ತಶೋsಪಿ ॥೩.೩೮

 

ಇಂದ್ರನ ಸೃಷ್ಟಿಯ ನಂತರ ಪುನಃ ದೇವತೆಗಳು ಕಾಶ್ಯಪರಿಂದ ಅದಿತಿಯಲ್ಲಿ ಹುಟ್ಟಿದರು. [ಅದಿತಿಯ ಮಕ್ಕಳು ಆದಿತ್ಯರು ಎಂದು ಕರೆಯುಲ್ಪಡುತ್ತಾರೆ]  ದೈತ್ಯರು  ದಿತಿಯಲ್ಲಿ ಹುಟ್ಟಿದರು.  [ದಿತಿಯ ಮಕ್ಕಳನ್ನು  ದೈತ್ಯರು ಎನ್ನುತ್ತಾರೆ].

ದಕ್ಷನ ಮಕ್ಕಳಲ್ಲಿ ಹಸು ಮೊದಲಾದ ಪ್ರಾಣಿಗಳು, ಬೇರೆ-ಬೇರೆ ಮೃಗಗಳು,  ಪಕ್ಷಿ , ಹಾವು ಮೊದಲಾದ ಎಲ್ಲಾ ಪ್ರಾಣಿಗಳೂ ಹುಟ್ಟಿದವು. [ಇದರ ವಿಸ್ತಾರವಾದ ವಿವರಣೆಯನ್ನು  ಭಾಗವತದ ಆರನೇ ಸ್ಕಂಧದ ಆರನೇ ಅಧ್ಯಾಯದಲ್ಲಿ ಕಾಣಬಹುದು]

 

ತತಃ ಸ ಮಗ್ನಾಮಲಯೋ ಲಯೋದಧೌ ಮಹೀಂ ವಿಲೋಕ್ಯಾsಶು ಹರಿರ್ವರಾಹಃ ।

ಭೂತ್ವಾ ವಿರಿಞ್ಚಾರ್ತ್ಥ ಇಮಾಂ ಸಶೈಲಾಮುದ್ಧೃತ್ಯ ವಾರಾಮುಪರಿ ನ್ಯಧಾತ್ ಸ್ಥಿರಮ್ ॥೩.೩೯

 

ಬ್ರಹ್ಮಾಂಡ, ದೇವತೆಗಳು, ಹೀಗೆ ಎಲ್ಲರೂ ಸೃಷ್ಟಿಯಾದ ಮೇಲೆ, ನಾಶವೇ ಇಲ್ಲದಂತಹ ನಾರಾಯಣನು ಪ್ರಳಯಸಮುದ್ರದಲ್ಲಿ ಭೂಮಿ ಮುಳುಗಿರುವುದನ್ನು ಕಂಡು, ವರಾಹರೂಪಿಯಾಗಿ,  ಬ್ರಹ್ಮನಿಗಾಗಿ,  ಬೆಟ್ಟದಿಂದ ಕೂಡಿರುವ ಈ ಭೂಮಿಯನ್ನು ಎತ್ತಿ, ನೀರಿನ ಮೇಲೆ ಗಟ್ಟಿಯಾಗಿ ಇಟ್ಟನು.

[ಇದು ಮೊದಲನೆಯ ಅವತಾರ.  ಬೇರೆಬೇರೆ ಪುರಾಣಗಳಲ್ಲಿ ದಶಾವತಾರ  ಕಾಲಕ್ರಮಾನುಗುಣವಾಗಿ ನಿರೂಪಿತವಾಗಿದೆ ಎಂದೇನೂ ಇಲ್ಲ. ಕಥಾ ಸೌಕರ್ಯಕ್ಕಾಗಿ ಮುಂದೆ-ಹಿಂದೆ ಆಗಿದೆ. ಅದರಿಂದ ಆ ಕ್ರಮದ ನಿರ್ಣಯವನ್ನೂ ಆಚಾರ್ಯರು ಇಲ್ಲಿ  ಮಾಡುತ್ತಿದ್ದಾರೆ ಎನ್ನುವುದನ್ನು ಓದುಗರು ತಿಳಿಯತಕ್ಕದ್ದು].

 



[1] ಪ್ರಶ್ನೋಪನಿಷತ್ತಿನ ಎರಡನೇ ಅಧ್ಯಾಯದಲ್ಲಿ(ಶ್ಲೋಕ ೨-೪) ಈ ಕಥೆಯ ವಿವರಣೆ ಇದೆ. ಅಷ್ಟೇ ಅಲ್ಲದೇ ಈ ವಿವರಣೆಯನ್ನು ಇತರ  ಉಪನಿಷತ್ತಿನಲ್ಲೂ ನಾವು ಕಾಣಬಹುದು.

No comments:

Post a Comment