ಏತೇ ಹಿ ದೇವಾಃ ಪುನರಣ್ಡಸೃಷ್ಟಾವಶಕ್ನುವನ್ತೋ ಹರಿಮೇತ್ಯ ತುಷ್ಟುವುಃ
।
ತ್ವಂ ನೋ ಜಗಚ್ಚಿತ್ರವಿಚಿತ್ರಸರ್ಗ್ಗನಿಸ್ಸೀಮಶಕ್ತಿಃ ಕುರು
ಸನ್ನಿಕೇತಮ್ ॥೩.೨೧॥
ಹೀಗೆ ಎಲ್ಲಾ ದೇವತೆಗಳ ಸೂಕ್ಷ್ಮ ಮತ್ತು ಸ್ಥೂಲ ರೂಪದ
ಸೃಷ್ಟಿಯಾಯಿತು. ಹೀಗೆ ಹುಟ್ಟಿದ ದೇವತೆಗಳು
ಬ್ರಹ್ಮಾಂಡವನ್ನು ಸೃಷ್ಟಿ ಮಾಡಲು ಶಕ್ತಿ ಇಲ್ಲದವರಾಗಿ ಪರಮಾತ್ಮನನ್ನು ಸ್ತೋತ್ರ
ಮಾಡುತ್ತಾರೆ. “ನೀನು ನಮ್ಮ ಜಗತ್ತಿನ
ಚಿತ್ರ-ವಿಚಿತ್ರವಾದ ಸೃಷ್ಟಿಯಲ್ಲಿ ನಿಸ್ಸೀಮ ಶಕ್ತಿ ಉಳ್ಳವನಾಗಿ ನಿನ್ನ ಸನ್ನಿಧಾನ ಮಾಡು” ಎಂದು ದೇವತೆಗಳು ಸ್ತೋತ್ರ ಮಾಡುತ್ತಾರೆ. [ಈ ಕುರಿತಾದ ಹೆಚ್ಚಿನ
ವಿವರಣೆಯನ್ನು ಭಾಗವತದ ಮೂರನೇ ಸ್ಕಂಧದ ಆರನೇ ಅಧ್ಯಾಯದಲ್ಲಿ ಕಾಣಬಹುದು]
ಇತಿ ಸ್ತುತಸ್ತೈಃ ಪುರುಷೋತ್ತಮೋsಸೌ ಸ ವಿಷ್ಣುನಾಮಾ ಶ್ರಿಯಮಾಪ ಸೃಷ್ಟಯೇ ।
ಸುಷಾವ ಸೈವಾಣ್ಡಮಧೋಕ್ಷಜಸ್ಯ ಶುಷ್ಮಂ ಹಿರಣ್ಯಾತ್ಮಕಮ್ಬುಮದ್ಧ್ಯೇ ॥೩.೨೨॥
ಈ ರೀತಿಯಾಗಿ ಆ ಎಲ್ಲಾ ದೇವತೆಗಳಿಂದ ಕೊಂಡಾಡಲ್ಪಟ್ಟ
ನಾರಾಯಣನು, ವಿಷ್ಣು ಎಂಬ ಹೆಸರುಳ್ಳವನಾಗಿ, ಸೃಷ್ಟಿಗಾಗಿ
ಲಕ್ಷ್ಮೀದೇವಿಯನ್ನು ಹೊಂದಿದನು. ಅವಳು ಪರಮಾತ್ಮನ ಬಂಗಾರದ ಬಣ್ಣವನ್ನು ತಳೆದಿರುವ
ರೇತಸ್ಸಿನಂತೆ ಇರುವ ಬ್ರಹ್ಮಾಂಡವನ್ನು ಹೆತ್ತಳು.
[ಇಲ್ಲಿಯ ತನಕ ಮೂಲಭೂತವಾದ ಸೃಷ್ಟಿಯ ವಿವರಣೆಯನ್ನು ನೋಡಿದೆವು.
ಇನ್ನು ಮುಂದೆ ಅನುಸರ್ಗ. ಅಂದರೆ ಮೊದಲೇ ಆಗಿರುವ ಮೂಲಭೂತವಾದ ಸೃಷ್ಟಿಯನ್ನು
ಅನುಸರಿಸಿ ಮಾಡುವ ಸೃಷ್ಟಿವಿಸ್ತಾರ].
ತಸ್ಮಿನ್ ಪ್ರವಿಷ್ಟಾ ಹರಿಣೈವ ಸಾರ್ದ್ಧಂ ಸರ್ವೇ ಸುರಾಸ್ತಸ್ಯ ಬಭೂವ
ನಾಭೇಃ ।
ಲೋಕಾತ್ಮಕಂ ಪದ್ಮಮಮುಷ್ಯ ಮದ್ಧ್ಯೇ ಪುನರ್ವಿರಿಞ್ಚೋsಜನಿ ಸದ್ಗುಣಾತ್ಮಾ ॥೩.೨೩॥
ಆ ಬ್ರಹ್ಮಾಂಡದಲ್ಲಿ ಪರಮಾತ್ಮನ ಜೊತೆಗೇ ಎಲ್ಲಾ ದೇವತೆಗಳೂ
ಪ್ರವೇಶ ಮಾಡಿದರು. ಆ ಬ್ರಹ್ಮಾಂಡದಲ್ಲಿ ಪರಮಾತ್ಮನ ಹೊಕ್ಕುಳಿನಿಂದ ಲೋಕ ಎನ್ನುವ ತಾವರೆಯು
ಅರಳಿತು. ಅದರ ಮಧ್ಯದಲ್ಲಿ ಎಲ್ಲಾ ಗುಣಗಳ ನೆಲೆ
ಇರುವ ಬ್ರಹ್ಮದೇವನು ಹುಟ್ಟಿದನು. [ಇಂತಹ ವಿರಾಟ
ರೂಪವನ್ನು ನೋಡಲು ನಮಗೆ ಸಾಧ್ಯವಿಲ್ಲ. ಅದಕ್ಕಾಗಿ ಅದರ ನೆನಪಿಗಾಗಿ ಭಗವಂತನ
ಹೊಕ್ಕುಳಿನಲ್ಲಿ ಒಂದು ಕಮಲ ಮತ್ತು ಆ ಕಮಲದಲ್ಲಿ ಬ್ರಹ್ಮದೇವರು ಇರುವಂತೆ ನಾವು ಭಗವಂತನ ಪದ್ಮನಾಭ
ರೂಪವನ್ನು ಚಿಂತನೆ ಮಾಡುತ್ತೇವೆ].
No comments:
Post a Comment