ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, February 10, 2018

Mahabharata Tatparya Nirnaya Kannada 3.01-3.20

೩. ಸರ್ಗ್ಗಾನುಸರ್ಗ್ಗ-ಲಯ-ಪ್ರಾದುರ್ಭಾವ-ನಿರ್ಣ್ಣಯಃ

 

ಈ ಅಧ್ಯಾಯದ ಆರಂಭದಲ್ಲಿ ಬಂದಿರುವ ಮೂರು ಶ್ಲೋಕಗಳು ಕ್ರಮವಾಗಿ ವೇದವ್ಯಾಸರನ್ನು,ಶ್ರೀರಾಮನನ್ನು ಮತ್ತು ಶ್ರೀಕೃಷ್ಣರೂಪಿಯಾದ ಪರಮಾತ್ಮನನ್ನು ಸ್ತೋತ್ರ ಮಾಡುವ ಶ್ಲೋಕಗಳಾಗಿವೆ. ಇವು ಅತ್ಯಂತ ಕಾವ್ಯಾತ್ಮಕವಾಗಿದ್ದರೂ ಕೂಡಾ, ವೇದಾಂತದ ಪ್ರಮೇಯವನ್ನು ಅಷ್ಟೇ ಆಳವಾಗಿ ತಿಳಿಸುವಂತಹ ಶ್ಲೋಕಗಳಾಗಿವೆ.

 

̐  

ಜಯತ್ಯಜೋsಖಣ್ಡಗುಣೋರುಮಣ್ಡಲಃ ಸದೋದಿತೋ ಜ್ಞಾನಮರೀಚಿಮಾಲೀ ।

ಸ್ವಭಕ್ತಹಾರ್ದ್ದೋಚ್ಚತಮೋನಿಹನ್ತಾ ವ್ಯಾಸಾವತಾರೋ ಹರಿರಾತ್ಮಭಾಸ್ಕರಃ ೩.೦೧

 

ಮೊದಲ ಶ್ಲೋಕದಲ್ಲಿ ಆಚಾರ್ಯರು ವೇದವ್ಯಾಸರನ್ನು ಸೂರ್ಯನ ಹೋಲಿಕೆಯಿಂದ ಸ್ತೋತ್ರ ಮಾಡಿದ್ದಾರೆ. “ಹೇಗೆ ಸೂರ್ಯನಿಗೆ ಸದಾ ಮಂಡಲವಿರುತ್ತದೋ  ಹಾಗೇ, ವೇದವ್ಯಾಸರಿಗೆ ನಿತ್ಯವಾಗಿರುವ ಗುಣವೆಂಬ ಮಂಡಲವಿರುತ್ತದೆ. ಹೇಗೆ ಸೂರ್ಯ ಯಾವಾಗಲೂ ಬೆಳಗುತ್ತಿರುತ್ತಾನೋ ಹಾಗೇ, ಇವರು ಯಾವಾಗಲೂ ಜ್ಞಾನದಿಂದ ಕೂಡಿದ್ದು ಸದಾ ಸಜ್ಜನರಿಂದ ಪ್ರಾರ್ಥಿಸಲ್ಪಡುತ್ತಿರುತ್ತಾರೆ.  ಸೂರ್ಯನ ಕಿರಣ  ಪ್ರಾಕೃತವಾದದ್ದಾದರೆ, ವ್ಯಾಸರೂಪಿ ಭಗವಂತನ ಕಿರಣ ಜ್ಞಾನಮಯವಾದದ್ದಾಗಿದೆ.  ಸೂರ್ಯ  ಬಾಹ್ಯ ಕತ್ತಲೆಯನ್ನು ನೀಗಿದರೆ, ವ್ಯಾಸರು ಬಾಹ್ಯ ಕತ್ತಲೆಯ ಜೊತೆಗೆ ನಮ್ಮ ಹೃದಯದೊಳಗಿನ ಅಜ್ಞಾನವೆಂಬ ಕತ್ತಲನ್ನೂ ನಾಶ ಮಾಡುತ್ತಾರೆ. ಇಂತಹ ವೇದವ್ಯಾಸರು ‘ಉತ್ಕೃಷ್ಟ’ ಎನ್ನುವುದನ್ನು ನಾನು ತಿಳಿದಿದ್ದೇನೆ”  ಎಂದಿದ್ದಾರೆ ಆಚಾರ್ಯರು.    

[ಜಯಂತಿ ಎನ್ನುವ ಪದಕ್ಕೆ, ಜಯತು ಎನ್ನುವ ಪದಕ್ಕೆ, ಜಯ ಎನ್ನುವ ಪದಕ್ಕೆ ಉತ್ಕೃಷ್ಟರಾಗಲೀ ಎಂದು ಆಶೀರ್ವಾದ ಮಾಡುವ ಅರ್ಥವಲ್ಲ, ಅವರು ಉತ್ಕೃಷ್ಟರಾಗಿದ್ದಾರೆ  ಎಂದು ನಮಗೆ ತಿಳಿಯಲಿ ಎನ್ನುವ ಅರ್ಥ ಎಂದು ತಿಳಿಯುವುದು].

 

ಜಯತ್ಯಜೋSಕ್ಷೀಣಸುಖಾತ್ಮಬಿಮ್ಬಃ ಸ್ವೈಶ್ವರ್ಯ್ಯಕಾನ್ತಿಪ್ರತತಃ ಸದೋದಿತಃ ।

ಸ್ವಭಕ್ತಸನ್ತಾಪದುರಿಷ್ಟಹನ್ತಾ ರಾಮಾವತಾರೋ ಹರಿರೀಶಚನ್ದ್ರಮಾಃ ॥೩.೦೨

 

ಚಂದ್ರನ ಹೋಲಿಕೆಯೊಂದಿಗೆ ಶ್ರೀರಾಮಚಂದ್ರನನ್ನು ಆಚಾರ್ಯರು ಇಲ್ಲಿ ಸ್ತೋತ್ರ ಮಾಡಿದ್ದಾರೆ.  “ರಾಮನೆಂಬ ಚಂದ್ರ ಉತ್ಕೃಷ್ಟನಾಗಿದ್ದಾನೆ ಎಂದು ನನಗೆ ತಿಳಿಯಲಿ” ಎನ್ನುತ್ತಾರೆ ಆಚಾರ್ಯರು. “ಚಂದ್ರನಿಗೆ ಹುಟ್ಟೆಂಬುದಿದೆ, ಆದರೆ ಶ್ರೀರಾಮ ಅಜಃ (ಹುಟ್ಟಿಲ್ಲದವನು).  ಚಂದ್ರನಿಗೆ ಕ್ಷಯವಾಗುವ ಬಿಂಬವಿದೆ, ಆದರೆ ಅಕ್ಷಯವಾದ ಸುಖವೇ ಶ್ರೀರಾಮನ  ಬಿಂಬ.  ಳೆದುಕೊಳ್ಳುವ ಕಾಂತಿ ಚಂದ್ರನದ್ದಾದರೆ, ಶಾಶ್ವತ ಕಾಂತಿ ಶ್ರಿರಾಮನದು. ಸಜ್ಜನರಿಂದ ಪ್ರಾರ್ಥಿಸಲ್ಪಡುವ,   ತನ್ನ ಭಕ್ತರ ಸಂತಾಪವೆಂಬ ಬೇಗೆಯನ್ನು ನಿವಾರಣೆ ಮಾಡುವ ಶ್ರೀರಾಮಚಂದ್ರನು ಪ್ರೀತನಾಗಲಿ”  ಎಂದು ಆಚಾರ್ಯರು ಸ್ತೋತ್ರ ಮಾಡಿದ್ದಾರೆ.

 

ಜಯತ್ಯಸಙ್ಖ್ಯೋರುಬಲಾಮ್ಬುಪೂರೋ ಗುಣೋಚ್ಚರತ್ನಾಕರ ಆತ್ಮವೈಭವಃ ।

ಸದಾ ಸದಾತ್ಮಜ್ಞನದೀಭಿರಾಪ್ಯಃ ಕೃಷ್ಣಾವತಾರೋ ಹರಿರೇಕಸಾಗರಃ ॥೩.೦೩

 

ಕಡಲಿನ ಹೋಲಿಕೆಯೊಂದಿಗೆ ಆಚಾರ್ಯರು ಇಲ್ಲಿ ಶ್ರೀಕೃಷ್ಣನನ್ನು ಸ್ತೋತ್ರ ಮಾಡಿದ್ದಾರೆ.  ಯಾವ ರೀತಿ ಕಡಲಿನಲ್ಲಿ ಬಹಳ ನೀರು ತುಂಬಿರುತ್ತದೋ ಹಾಗೇ, ಶ್ರೀಕೃಷ್ಣ ಎಣಿಸಲಾಗದ ಅತ್ಯಂತ ಮಿಗಿಲಾದ ಬಲವನ್ನು ಹೊಂದಿದವನು. ಕಡಲಿನಲ್ಲಿ ರತ್ನಗಳಿರುವಂತೆ ಭಗವಂತನಲ್ಲಿ ಅನಂತ ಗುಣ ರತ್ನಗಳು ತುಂಬಿವೆ. ಹೇಗೆ ಕಡಲಿಗೆ ತನ್ನದೇ ಆದ  ವೈಭವವಿದೆಯೋ ಹಾಗೇ ಭಗವಂತನ ವೈಭವ.   ಹೇಗೆ ಕಡಲನ್ನು ಎಲ್ಲಾ ನದಿಗಳು ಬಂದು ಸೇರುತ್ತವೆಯೋ ಹಾಗೇ, ಶ್ರೀಕೃಷ್ಣನೆಂಬ ಅನಂತ ಸಾಗರವನ್ನು  ಆತ್ಮಜ್ಞಾನಿಗಳೆಂಬ ನದಿಗಳು ಸೇರಲ್ಪಡುತ್ತವೆ. ಇಂತಹ ಶ್ರೀಕೃಷ್ಣ ‘ಮಿಗಿಲು’  ಎಂದು ನನಗೆ ತಿಳಿಯಲಿ” ಎಂದು ಆಚಾರ್ಯರು ಸ್ತೋತ್ರ ಮಾಡಿದ್ದಾರೆ.

 

ಹೀಗೆ ಹೇಳಿ ಮಹಾಭಾರತದಲ್ಲಿನ, ನಿತ್ಯ ಪಾರಾಯಣ ಮಾಡುವ ಶ್ಲೋಕವನ್ನು ಆಚಾರ್ಯರು ಇಲ್ಲಿ ವಿವರಿಸುತ್ತಾರೆ:

 

‘ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ ।

‘ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇ’ ॥೩.೦೪

 

ಈ ಶ್ಲೋಕದಲ್ಲಿ ನಾರಾಯಣನಿಗೆ ನಮಸ್ಕಾರವಿದೆ.  ನರನಿಗೆ ನಮಸ್ಕಾರವಿದೆ, ನರೋತ್ತಮನಿಗೆ ನಮಸ್ಕಾರವಿದೆ. ದೇವಿಗೆ, ಸರಸ್ವತಿಗೆ, ವ್ಯಾಸರಿಗೆ ಹೀಗೆ ಆರು  ನಮಸ್ಕಾರವಿದೆ.

ಈ ಶ್ಲೋಕವನ್ನು  ಮಧ್ವಾಚಾರ್ಯರು ವಿವರಿಸಿ ಹೇಳುವ  ಮೊದಲು, ಇಲ್ಲಿ ಹೇಳಿರುವ ನರ ಮತ್ತು ನರೋತ್ತಮ ಇವರು ಯಾರು ಎನ್ನುವುದು ತಿಳಿದಿರಲಿಲ್ಲ. ದೇವಿ ಎನ್ನುವುದು ಸರಸ್ವತಿಗೆ ವಿಶೇಷಣವೋ ಅಥವಾ ಇನ್ನೇನೋ ಎನ್ನುವುದು ತಿಳಿದಿರಲಿಲ್ಲ. ವೇದವ್ಯಾಸರೇ ರಚಿಸಿರುವ ಗ್ರಂಥವಾಗಿರುವಾಗ ಅವರು ಏಕೆ ತನಗೇ ನಮಸ್ಕರಿಸುತ್ತಾರೆ  ಎನ್ನುವ ಪ್ರಶ್ನೆಗೆ ಉತ್ತರ ತಿಳಿಯದೇ ‘ವ್ಯಾಸ’ ಎನ್ನುವ ಪದವನ್ನೇ ತೆಗೆದು ‘ಚೈವ’ ಎಂದು ಸೇರಿಸಲಾಗಿತ್ತು.  ಆದರೆ ನಂತರ, ಆಚಾರ್ಯರು ಅದರ ಪಾಠಶುದ್ಧಿಯನ್ನು ಪ್ರಪಂಚಕ್ಕೆ ಕರುಣಿಸಿದರು.  ವೇದವ್ಯಾಸರು ‘ತನಗೆ ನಮಸ್ಕಾರ ಮಾಡಿ’ ಎಂದು ಇನ್ನೊಬ್ಬರಿಗೆ ಏಕೆ ಹೇಳಬಾರದು?  ತಂದೆಯೊಬ್ಬ ತನ್ನ ಮಗನಿಗೆ ಹೇಳುವಂತೆ ‘ನನಗೆ ನಮಸ್ಕಾರ ಮಾಡಿ, ನಂತರ ಗ್ರಂಥವನ್ನು ಓದಿ’  ಎಂದು ಹೇಳಿ, ಈ ಸಂಪ್ರದಾಯವನ್ನು ಹೇಳಿದರು ಎನ್ನುವುದು ಆಚಾರ್ಯರ ಅಭಿಪ್ರಾಯ.

ಇನ್ನು ನರ ಅಂದರೆ ಯಾರು? ನರೋತ್ತಮ ಅಂದರೆ ಯಾರು? ದೇವಿ ಅಂದರೆ ಯಾರು? ಏಕೆ ಇವರನ್ನೆಲ್ಲಾ ಸ್ತೋತ್ರ ಮಾಡಬೇಕು?  ಈ ಎಲ್ಲವುದಕ್ಕೂ ಆಚಾರ್ಯರು ಮುಂದೆ ವ್ಯಖ್ಯಾನ ನೀಡಿರುವುದನ್ನು ನಾವು ಕಾಣುತ್ತೇವೆ.

 

ಜಯೋ ನಾಮೇತಿಹಾಸೋsಯಂ ಕೃಷ್ಣದ್ವೈಪಾಯನೇರಿತಃ ।

ವಾಯುರ್ನ್ನರೋತ್ತಮೋ ನಾಮ ದೇವೀತಿ ಶ್ರೀರುದೀರಿತಾ ॥೩.೦೫

 

ನಾರಾಯಣೋ ವ್ಯಾಸ ಇತಿ ವಾಚ್ಯವಕ್ತೃಸ್ವರೂಪಕಃ ।

ಏಕಃ ಸ ಭಗವಾನುಕ್ತಃ ಸಾಧಕೇಶೋ ನರೋತ್ತಮಃ ॥೩.೦೬

 

ಉಪಸಾಧಕೋ ನರಶ್ಚೋಕ್ತೋ ದೇವೀ ಭಾಗ್ಯಾತ್ಮಿಕಾ ನೃಣಾಮ್ ।

ಸರಸ್ವತೀ ವಾಕ್ಯರೂಪಾ ತಸ್ಮಾನ್ನಮ್ಯಾ ಹಿ ತೇsಖಿಲಾಃ ।

ಕೃಷ್ಣೌ ಸತ್ಯಾ ಭೀಮಪಾರ್ತ್ಥೌ ಕೃಷ್ಣೇತ್ಯುಕ್ತಾ ಹಿ ಭಾರತೇ೩.೦೭

 

ವೇದವ್ಯಾಸರು ಹೇಳಿರುವ ಇತಿಹಾಸಕ್ಕೆ(ಮಹಾಭಾರತಕ್ಕೆ) ‘ಜಯ’ ಎಂದು ಹೆಸರು. ಅದರಿಂದಾಗಿ ‘ಜಯಮುದೀರಯೇ’ ಎಂದರೆ ಮಹಾಭಾರತವನ್ನು ಹೇಳುತ್ತೇನೆ ಎಂದರ್ಥ. ಇಲ್ಲಿ ಮುಖ್ಯಪ್ರಾಣನನ್ನು ನರೋತ್ತಮ ಎಂದೂ,  ಶ್ರೀಲಕ್ಷ್ಮಿಯನ್ನು ದೇವೀ ಎಂದೂ ಸ್ತೋತ್ರ ಮಾಡಲಾಗಿದೆ.

ನಾರಾಯಣ ಮತ್ತು ವ್ಯಾಸ ಇಬ್ಬರೂ ಕೂಡಾ ಒಬ್ಬನೇ (ಪರಮಾತ್ಮ). ಆದರೂ ಎರಡು ಬಾರಿ ನಮಸ್ಕಾರವೇಕೆ ಎಂದರೆ: (೧) ‘ವಾಚ್ಯತ್ವೇನ ನಮಸ್ಕಾರ’.  ಅಂದರೆ ಈ ಗ್ರಂಥದ ಪ್ರತಿಪಾದ್ಯ  ನಾರಾಯಣ ಎಂದು ನಮಸ್ಕಾರ ಹಾಗೂ (೨) ಈ ಗ್ರಂಥವನ್ನು ಜಗತ್ತಿಗೆ ನೀಡಿದವರು ವೇದವ್ಯಾಸರು ಎಂದು ಹೇಳಿ ವಕ್ತೃತ್ವೇನ ನಮಸ್ಕಾರ.

ಭಗವಂತನ ಅತ್ಯಂತ ಸಮೀಪದ ಶಕ್ತಿಯಾಗಿ , ನಮಗೆ ಉಸಿರನ್ನಿತ್ತು ಬದುಕಿಸಿ, ಪ್ರತೀಕ್ಷಣವೂ ಭಗವಂತನ ಚಿಂತನೆಗೆ ನಮ್ಮನ್ನು ಅಣಿಗೊಳಿಸುವ ಚಿತ್ತದ ಅಭಿಮಾನಿ ಹಾಗೂ ಇಡೀ ಜಗತ್ತಿನ ಗುರು ಮುಖ್ಯಪ್ರಾಣ(ಹನುಮಂತ).  ಸಾಧಕರಿಂದ ಸಾಧನೆ ಮಾಡಿಸುವವನು ಮತ್ತು  ಎಲ್ಲಾ ಸಾಧಕರಿಗಿಂತಲೂ ಮಿಗಿಲಾದ ಸಾಧಕನಾದ  ಮುಖ್ಯಪ್ರಾಣನಿಗೆ ನಮಸ್ಕಾರ.

‘ನರ’ ಉಪಸಾಧಕ.  ಏಕೆಂದರೆ ಶ್ರವಣ-ಮನನ-ನಿಧಿಧ್ಯಾಸನಕ್ಕೆ ಆತ ಅಭಿಮಾನಿ. ಅವನು ಮನಸ್ಸನ್ನು ಕೊಡದೇ ಹೋದರೆ, ಅವನ ಅನುಗ್ರಹ ಇಲ್ಲದೇ ಹೋದರೆ, ಸಾಧನೆ ಸಾಧ್ಯವಿಲ್ಲ.  ಆದ್ದರಿಂದ ಶೇಷನಿಗೆ(ನರನಿಗೆ) ನಮಸ್ಕಾರ.

[ಶಿವಶಕ್ತಿ ನನಗೆ ಅಧ್ಯಯನದ ತ್ರಾಣವನ್ನು ಕೊಡಲಿ.  ಶೇಷ ಶಕ್ತಿ ಮತ್ತು ಗರುಡಶಕ್ತಿ ವೇದಾರ್ಥ ಚಿಂತನೆಗೆ, ಪುರಾಣಗಳ ಚಿಂತನೆಗೆ ಬೇಕಾದ ಪ್ರತಿಭೆಯನ್ನು ಕೊಡಲಿ.  ಪ್ರಾಣಶಕ್ತಿ ಸ್ಮರಣಶಕ್ತಿ ಮತ್ತು ವಾಕ್ಪಟುತ್ವ  ದೃಢವಾಗಿ ನನ್ನಲ್ಲಿರುವಂತೆ ಮಾಡಲಿ.  ಅದಕ್ಕಾಗಿ ಆ ಗರುಡ-ಶೇಷ-ರುದ್ರ(ನರರು) ಮತ್ತು ಮುಖ್ಯಪ್ರಾಣನಿಗೆ(ನರೋತ್ತಮನಿಗೆ) ನಮಸ್ಕಾರ].

ಸಮಸ್ತ ವೇದ ಮಾನಿನಿಯಾದ ಶ್ರೀಲಕ್ಷ್ಮಿ ಈ ಗ್ರಂಥವನ್ನು ಕೇಳುವ ಭಾಗ್ಯ ಕರುಣಿಸುವವಳು. ಹಾಗಾಗಿ ಭಾಗ್ಯಪ್ರದಳಾದ ಶ್ರೀಲಕ್ಷ್ಮಿಗೆ ನಮಸ್ಕಾರ. ವಾಕ್ಯಾಭಿಮಾನಿನಿ ತಾಯಿ ಸರಸ್ವತಿಗೆ ನಮಸ್ಕಾರ. ವಾಗ್ದೇವತೆಯಾಗಿರುವಂತಹ ಸರಸ್ವತಿ-ಭಾರತೀಯರು ನಮ್ಮ ನಾಲಿಗೆಯಲ್ಲಿ  ಕುಳಿತು ನುಡಿಸಲಿ. ಇಂತಹ ಅದ್ಭುತವಾದ ಮಹಾಭಾರತವನ್ನು ರಚಿಸಿ ನಮಗೆ ನೀಡಿರುವ ಭಗವಂತನ ಅವತಾರವಾದ ವೇದವ್ಯಾಸರಿಗೆ ನಮಸ್ಕಾರ.

ಮಹಾಭಾರತವನ್ನು ಹೇಳುವ ಮೊದಲು ನಮಸ್ಕರಿಸಬೇಕಾದ ಇವರೆಲ್ಲರ ಪಾತ್ರವನ್ನೂ ಕೂಡಾ  ಮಹಾಭಾರತದ ಒಳಗೂ ನಾವು ಕಾಣುತ್ತೇವೆ.  ಶ್ರಿಮನ್ನಾರಾಯಣ ವೇದವ್ಯಾಸ ಮತ್ತು ಶ್ರೀಕೃಷ್ಣ ರೂಪದಿಂದ, ಶ್ರೀಲಕ್ಷ್ಮಿ(ದೇವೀ)  ಸತ್ಯಭಾಮೆ ರೂಪದಲ್ಲಿ, ನರೋತ್ತಮನಾದ ಪ್ರಾಣದೇವರು ಭೀಮ ರೂಪದಲ್ಲಿ, ನರನ ಆವೇಶರೂಪಿಯಾಗಿ ಅರ್ಜುನ ಮತ್ತು ದ್ರೌಪದಿ ರೂಪದಲ್ಲಿ ಸರಸ್ವತಿಯನ್ನು [ಭಾರತೀ ದೇವಿಯನ್ನು] ಮಹಾಭಾರತದಲ್ಲಿ  ನಾವು ಕಾಣುತ್ತೇವೆ. 

 

ಸರ್ವಸ್ಯ ನಿರ್ಣ್ಣಯಸುವಾಕ್ಯಸಮುದ್ಧೃತೀ ತು ಸ್ವದ್ಧ್ಯಾಯಯೋರ್ಹರಿಪದಸ್ಮರಣೇನ ಕೃತ್ವಾ ।

ಆನನ್ದತೀರ್ತ್ಥವರನಾಮವತೀ ತೃತೀಯಾ ಭೌಮೀ ತನುರ್ಮ್ಮರುತ ಆಹ ಕಥಾಃ ಪರಸ್ಯ ॥೩.೦೮

 

ಮೊದಲ ಅಧ್ಯಾಯದಲ್ಲಿ ಸರ್ವ  ಶಾಸ್ತ್ರ ನಿರ್ಣಯವನ್ನೂ , ಎರಡನೇ ಅಧ್ಯಾಯದಲ್ಲಿ ಪ್ರಶಸ್ತವಾದ ವಾಕ್ಯೋದ್ಧಾರ ವಿವರಣೆಯನ್ನೂ,  ಪರಮಾತ್ಮನ ಅಡಿದಾವರೆಯ  ನೆನಪಿನೊಂದಿಗೆ ಹೇಳಿ, ಆನಂದತೀರ್ಥ ಎಂಬ  ಶ್ರೇಷ್ಠವಾದ ಹೆಸರುಳ್ಳ, ಭೂಮಿಯಲ್ಲಿರುವ  ಮುಖ್ಯಪ್ರಾಣನ ರೂಪವು, ಮೂರನೇ ಅಧ್ಯಾಯದಲ್ಲಿ  ನಾರಾಯಣನ ಕಥೆಗಳನ್ನು ಹೇಳುತ್ತಿದೆ:

 

[ಈ ಅಧ್ಯಾಯದಲ್ಲಿ ಆಚಾರ್ಯರು ಸೂಕ್ಷ್ಮವಾಗಿ ಸೃಷ್ಟಿ, ಅನುಸರ್ಗ, ಪ್ರಳಯ, ಪ್ರಾದುರ್ಭಾವ ಈ ನಾಲ್ಕು ಸಂಗತಿಗಳನ್ನು ನಿರೂಪಣೆ ಮಾಡುತ್ತಿದ್ದಾರೆ.  ಮೊದಲು ಇಲ್ಲಿ ಸೃಷ್ಟಿಯ ನಿರೂಪಣೆ ಬರುತ್ತದೆ.  ಸೃಷ್ಟಿ  ನಿರೂಪಣೆ ಕ್ಲಿಷ್ಟವಾದ ವಿಷಯ. ಏಕೆಂದರೆ: ಪುರಾಣ, ವೇದ, ಉಪನಿಷತ್ತು, ಪಂಚರಾತ್ರ ಇವುಗಳಲ್ಲಿ ಸೃಷ್ಟಿಯ ವಿವರಣೆ ಬೇರೆಬೇರೆ ತರನಾಗಿ ಹೇಳಲ್ಪಟ್ಟಿದೆ.  ಹರಿವಂಶದಲ್ಲಿಯೂ ಸೃಷ್ಟಿಯ ವಿವರಣೆ ಇದೆ.  ಶಾಂತಿಪರ್ವ ಮತ್ತುಅನುಶಾಸನ ಪರ್ವಗಳಲ್ಲಿ ಸೃಷ್ಟಿಯ ವಿವರಣೆ  ಇದೆ.  ಆದರೆ ಇವೆಲ್ಲವೂ  ಒಂದೇ ತರನಾಗಿಲ್ಲ.  ಹೀಗಾಗಿ ಇಲ್ಲಿ ಆಚಾರ್ಯರು ಸಜ್ಜನರ ಪ್ರಜ್ಞಾಸೌಕರ್ಯಕ್ಕಾಗಿ ಈ ಅಧ್ಯಾಯವನ್ನು ರಚನೆ ಮಾಡಿ ಕೊಟ್ಟಿದ್ದಾರೆ. ಇಲ್ಲಿ ಬರುವ ಒಂದೊಂದು ಶ್ಲೋಕವನ್ನು ನೋಡುತ್ತಾ ಹೋದರೆ, ಅಲ್ಲಿರುವ ಮಾತುಗಳು, ಅದಕ್ಕೆ  ವಿರುದ್ಧವಾಗಿ ಪಂಚರಾತ್ರ ಸಂಹಿತೆ ಮತ್ತಿತರ ಶಾಸ್ತ್ರಗಳ  ಮಾತು  ಬಂದಾಗ ಅದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು, ಇತ್ಯಾದಿಯಾಗಿ ವಿಸ್ತಾರವಾದ ಅಧ್ಯಯನ ಮಾಡಲು ಸಾಧ್ಯ. ಆದರೆ ಇಲ್ಲಿ ನಾವು  ಕೇವಲ  ಶ್ಲೋಕ ಮತ್ತು ಅದರ ಬಾವಾರ್ಥವನ್ನಷ್ಟೇ ವಿವರಿಸುತ್ತಿದ್ದೇವೆ.  ಈ ಅಧ್ಯಾಯದಲ್ಲಿ ಶ್ಲೋಕಗಳ ಸಂಖ್ಯೆ ಬಹಳ ಕಡಿಮೆ. ಆದರೆ ಅತ್ಯಂತ ಅಗಾಧವಾದ ಅಂಶಗಳನ್ನು ಹೊಂದಿರುವ  ಅಧ್ಯಾಯ ಇದಾಗಿದೆ.  ಸಂಪೂರ್ಣ ವಿವರವನ್ನು, ವಿರೋಧ  ಪರಿಹಾರದೊಂದಿಗೆ ತಿಳಿಯ ಬಯಸುವವರಿಗೆ ಇನ್ನೂ ಆಳವಾದ ಅಧ್ಯಯನ ಅಗತ್ಯ]. 

 

ವ್ಯೂಢಶ್ಚತುರ್ದ್ಧಾ ಭಗವಾನ್ ಸ ಏಕೋ ಮಾಯಾಂ ಶ್ರಿಯಂ ಸೃಷ್ಟಿವಿಧಿತ್ಸಯಾssರ ।

ರೂಪೇಣ ಪೂರ್ವೇಣ ಸ ವಾಸುದೇವನಾಮ್ನಾ ವಿರಿಞ್ಚಂ ಸುಷುವೇ ಚ ಸಾsತಃ ॥೩.೦೯

 

ಆ ಒಬ್ಬನೇ ಆಗಿರುವ ಪರಮಾತ್ಮನು ನಾಲ್ಕು ರೂಪಗಳನ್ನು ತಳೆದ.  [ಇದನ್ನು ಪಂಚರಾತ್ರದಲ್ಲಿ ವ್ಯೂಹರೂಪ ಎಂದು ಕರೆಯುತ್ತಾರೆ. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ಎನ್ನುವ ನಾಲ್ಕು ರೂಪಗಳು]. ಅವನು ಸೃಷ್ಟಿಯನ್ನು ಮಾಡಬೇಕು ಎನ್ನುವ ಬಯಕೆಯಿಂದ ಮಾಯಾ ಎನ್ನುವ ಹೆಸರಿನ ಲಕ್ಷ್ಮೀ ದೇವಿಯನ್ನು ಸಮೀಪಿಸಿದ. ವಾಸುದೇವ ಮತ್ತು ಮಾಯಾ ಎನ್ನುವ ಮೊದಲ ರೂಪದ ದಾಂಪತ್ಯದಲ್ಲಿ  ಬ್ರಹ್ಮನ ಸೃಷ್ಟಿಯಾಯಿತು.

 

ಸಙ್ಕರ್ಷಣಾಚ್ಛಾಪಿ ಜಯಾತನೂಜೋ ಬಭೂವ ಸಾಕ್ಷಾದ್ ಬಲಸಂವಿದಾತ್ಮಾ ।

ವಾಯುರ್ಯ್ಯ ಏವಾಥ ವಿರಿಞ್ಚನಾಮಾ ಭವಿಷ್ಯ ಆದ್ಯೋ ನ ಪರಸ್ತತೋ ಹಿ॥೩.೧೦

 

ಸಂಕರ್ಷಣ ರೂಪಿ ಪರಮಾತ್ಮನಿಂದ ಜಯ ಎನ್ನುವ ಲಕ್ಷ್ಮೀದೇವಿಯ ಮಗನಾಗಿ ಬಲ ಹಾಗೂ ಜ್ಞಾನವೇ ಮೈವೆತ್ತು ಬಂದ ಮುಖ್ಯಪ್ರಾಣನು ಹುಟ್ಟಿದನು. ಇವನೇ ಮುಂದಿನ  ಬ್ರಹ್ಮ ಕೂಡಾ. ಅದರಿಂದಾಗಿ ಆತ ಎರಡನೇ ಮಗನಾಗಿ ಹುಟ್ಟಿದನು.

 

ಸೂತ್ರಂ ಸ ವಾಯುಃ ಪುರುಷೋ ವಿರಿಞ್ಚಃ ಪ್ರದ್ಯುಮ್ನತಶ್ಚಾಥ ಕೃತೌ ಸ್ತ್ರಿಯೌ ದ್ವೇ ।

ಪ್ರಜಜ್ಞತುರ್ಯ್ಯಮಳೇ ತತ್ರ ಪೂರ್ವಾ ಪ್ರಧಾನಸಙ್ಜ್ಞಾ ಪ್ರಕೃತಿರ್ಜ್ಜನಿತ್ರೀ ॥೩.೧೧

 

ಆ ಮುಖ್ಯಪ್ರಾಣನು ‘ಸೂತ್ರ’ ಎನ್ನುವ ಹೆಸರನ್ನು ಹೊಂದಿದ್ದಾನೆ. ಬ್ರಹ್ಮನು ‘ಪುರುಷ’ ಎನ್ನುವ ಹೆಸರನ್ನು ಹೊಂದಿದ್ದಾನೆ. [ಶಾಸ್ತ್ರದಲ್ಲಿ ಇವರಿಬ್ಬರ ಗುಹ್ಯನಾಮ ಪುರುಷ ಮತ್ತು ಸೂತ್ರ ಎಂಬುದಾಗಿದೆ. ಉಪನಿಷತ್ತು ಮೊದಲಾದವುಗಳಲ್ಲಿ ಈ ಗುಹ್ಯ ನಾಮದ ಬಳಕೆಯನ್ನು ಕಾಣುತ್ತೇವೆ.  ಹಾಗಾಗಿ ಇದನ್ನು ಮನದಲ್ಲಿಟ್ಟುಕೊಂಡು ಆ ಎಲ್ಲಾ ಶಾಸ್ತ್ರಗಳ ಚಿಂತನೆ ಮಾಡಬೇಕು]. ತದನಂತರ ಪ್ರದ್ಯುಮ್ನರೂಪಿ ಪರಮಾತ್ಮನಿಂದ ಕೃತಿ ಎನ್ನುವ ಲಕ್ಷ್ಮೀದೇವಿಯಲ್ಲಿ ಇಬ್ಬರು ಅವಳಿ-ಜವಳಿಯಾಗಿ ಹುಟ್ಟಿದರು. ಅವರಲ್ಲಿ ಮೊದಲನೆಯವಳು ‘ಪ್ರಧಾನ’ ಮತ್ತು ‘ಪ್ರಕೃತಿ’ ಎಂಬ ಹೆಸರುಳ್ಳ, ಎಲ್ಲರ ತಾಯಿಯಾಗಿರುವ ಸರಸ್ವತೀ ದೇವಿಯೇ ಆಗಿದ್ದಾಳೆ.   

 

ಶ್ರದ್ಧಾ ದ್ವಿತೀಯಾsಥ ತಯೋಶ್ಚ ಯೋಗೋ ಬಭೂವ ಪುಂಸೈವ ಚ ಸೂತ್ರನಾಮ್ನಾ ।

ಹರೇರ್ನ್ನಿಯೋಗಾದಥ ಸಮ್ಪ್ರಸೂತೌ ಶೇಷಃ ಸುಪರ್ಣ್ಣಶ್ಚ ತಯೋಃ ಸಹೈವ ॥೩.೧೨

 

ಎರಡನೆಯವಳನ್ನು ‘ಶ್ರದ್ಧಾ’ ಎಂದು ಕರೆಯುತ್ತಾರೆ. ಅವರಿಬ್ಬರು ಪುರುಷನೆಂಬ ಬ್ರಹ್ಮ್ಮ ಮತ್ತು  ಸೂತ್ರನೆಂಬ ಮುಖ್ಯಪ್ರಾಣನೊಂದಿಗೆ  ಜೊತೆಯಾದರು.  [ಅನಾಧಿಕಾಲದ ದಂಪತಿಗಳಿವರು].  ತದನಂತರ ಪರಮಾತ್ಮನ ಆಜ್ಞೆಯಿಂದ ಶೇಷದೇವ ಹಾಗೂ ಗರುಡದೇವ ಅವರಿಬ್ಬರಿಂದ  ಹುಟ್ಟಿದರು. [ಅಂದರೆ: ಬ್ರಹ್ಮದೇವರಿಂದಲೂ, ಮುಖ್ಯಪ್ರಾಣನಿಂದಲೂ ಏಕಕಾಲದಲ್ಲಿ ಗರುಡ-ಶೇಷರು ಹುಟ್ಟಿದರು].     

 

ಶೇಷಸ್ತಯೋರೇವ ಹಿ ಜೀವನಾಮಾ  ಕಾಲಾತ್ಮಕಃ ಸೋsಥ ಸುಪರ್ಣ್ಣ ಆಸೀತ್ ।

ತೌ ವಾಹನಂ ಶಯನಂ ಚೈವ ವಿಷ್ಣೋಃ ಕಾಲಾ ಜಯಾದ್ಯಾಶ್ಚ ತತಃ ಪ್ರಸೂತಾಃ ॥೩.೧೩

 

ಅವರಿಬ್ಬರಲ್ಲಿ ಶೇಷನು ‘ಜೀವ’ ಎಂಬ ಹೆಸರುಳ್ಳವನಾಗಿದ್ದಾನೆ. [ಈ ‘ಜೀವ’ ಎನ್ನುವ ಹೆಸರನ್ನು ಶೇಷನಿಗೆ ಪಂಚರಾತ್ರಾಗಮದಲ್ಲಿ ಬಳಸಿ ಹೇಳಿದ್ದಾರೆ]. ಇನ್ನು ಗರುಡ ‘ಕಾಲ’ ಎಂಬ ಹೆಸರಿನವನಾದನು. ಗರುಡ-ಶೇಷರು ಭಗವಂತನ ವಾಹನ ಮತ್ತು  ಹಾಸಿಗೆಯಾದರು.  [ಭಗವಂತ   ‘ಕಾಲ’ದ ಮೇಲೆಯೇ ಸವಾರಿ ಮಾಡುತ್ತಾನೆ ಮತ್ತು ಎಲ್ಲಾ ಜೀವರ ಅಂತರ್ಯಾಮಿಯಾಗಿದ್ದಾನೆ ಎನ್ನುವ ಸಂಕೇತಾರ್ಥ ಇಲ್ಲಿದೆ].

ತದನಂತರ ಜಯ ಮೊದಲಾದ ಎಂಟು ಮಂದಿ ದ್ವಾರಪಾಲಕರು ಅಲ್ಲಿಯೇ ಹುಟ್ಟಿದರು [ಜಯ, ವಿಜಯ, ನಂದ, ಸುನಂದ, ಚಂಡ, ಪ್ರಚಂಡ, ಕುಮುದ ಮತ್ತು ಕುಮುದಾಕ್ಷ ಈ ಎಂಟು ಮಂದಿ. ವಸ್ತುತಃ ಇವರು ಇಂದ್ರಾದಿ ದೇವತೆಗಳಿಗಿಂತ ಕಡಿಮೆ ಯೋಗ್ಯತೆಯವರು.  ಆದರೆ ಹುಟ್ಟಿದ್ದು ಮೊದಲು].

 

ಕಾಲಾ ಜಯಾದ್ಯಾ ಅಪಿ ವಿಷ್ಣುಪಾರ್ಷದಾ ಯಸ್ಮಾದಣ್ಡಾತ್ ಪರತಃ ಸಮ್ಪ್ರಸೂತಾಃ ।

ನೀಚಾಃ ಸುರೇಭ್ಯಸ್ತತ ಏವ ತೇsಖಿಲಾ ವಿಷ್ವಕ್ಸೇನೋ ವಾಯುಜಃ ಖೇನ ತುಲ್ಯಃ ॥೩.೧೪

 

ಜಯ-ವಿಜಯ ಮೊದಲಾದವರೂ ಕೂಡಾ ಕಾಲಾಭಿಮಾನಿಗಳೇ. ಅವರು ಪರಮಾತ್ಮನ ದ್ವಾರಪಾಲಕರು. [ಪಿಂಡಾಂಡದಲ್ಲೂ ಹಾಗೂ  ಬ್ರಹ್ಮಾಂಡದಲ್ಲೂ ಕೂಡಾ]. ಬ್ರಹ್ಮಾಂಡದಿಂದ ಹೊರಗಡೆ ಹುಟ್ಟಿದ ಇವರು  ತಾರತಮ್ಯದಲ್ಲಿ  ದೇವತೆಗಳಿಗಿಂತ ಕೆಳಗಿನವರೇ ಆಗಿದ್ದಾರೆ.

ಇವರೆಲ್ಲರನ್ನು ನಿಯಂತ್ರಿಸುವ ಒಬ್ಬ ಸೇನಾಧಿಪತಿ ಇದ್ದಾನೆ. ಅವನೇ ವಿಶ್ವಕ್ಸೇನ. [ಈತ ಮುಖ್ಯಪ್ರಾಣನಿಂದ ಹುಟ್ಟಿದವನು.  ಈತ ಗಣಪತಿಗೆ ಸಮನಾಗಿದ್ದು, ತಾರತಮ್ಯದ ಹದಿನೆಂಟನೇ ಕಕ್ಷೆಯಲ್ಲಿ ಬರುತ್ತಾನೆ.  ಮೇಲೆ ಹೇಳಿದ ಎಂಟು ಮಂದಿ ದ್ವಾರಪಾಲಕರು  ಹತ್ತೊಂಬತ್ತನೇ ಕಕ್ಷೆಯಲ್ಲಿ ಬರುತ್ತಾರೆ]. 

 

ವ್ಯೂಹಾತ್ ತೃತೀಯಾತ್ ಪುನರೇವ ವಿಷ್ಣೋರ್ದ್ದೇವಾಂಶ್ಚತುರ್ವರ್ಣ್ಣಗತಾನ್ ಸಮಸ್ತಾನ್ ।

ಸಙ್ಗೃಹ್ಯ ಬೀಜಾತ್ಮತಯಾsನಿರುದ್ಧೋ ನ್ಯಧತ್ತ ಶಾನ್ತ್ಯಾಂ ತ್ರಿಗುಣಾತ್ಮಿಕಾಯಾಮ್ ॥೩.೧೫

 

ಇವರೆಲ್ಲರ ಸೃಷ್ಟಿಯಾದ ಮೇಲೆ, ಪ್ರದ್ಯುಮ್ನ ರೂಪದ ನಾರಾಯಣನು, ನಾಲ್ಕು ವರ್ಣಾಭಿಮಾನಿಗಳಾಗಿರುವ ದೇವತೆಗಳನ್ನು ಸಂಗ್ರಹಿಸಿ ನೀಡಿದನು.  ಸೂಕ್ಷ್ಮರೂಪದ ಅವರನ್ನು ಅನಿರುದ್ಧನು ಸತ್ತ್ವ-ರಜಸ್ಸು-ತಮೋಗುಣಗಳನ್ನು ಸೃಷ್ಟಿಯಲ್ಲಿ ಪ್ರಯೋಗಿಸಬೇಕು ಎನ್ನುವ ಅಧಿಕಾರವಿರುವ ಶಾಂತಿದೇವಿಯಲ್ಲಿ ಇಟ್ಟನು. [ದೇವತೆಗಳಿಗೆ ಬಹಳ ಜನ್ಮವೆಂಬುದಿದೆ.  ಅದರಂತೆ ಚತುರ್ವರ್ಣಾಭಿಮಾನಿಗಳನ್ನಾಗಿ  ಮಾಡಿ, ಶಾಂತಿದೇವಿಯಲ್ಲಿ ಬೀಜರೂಪದಲ್ಲಿ ಇಟ್ಟನು.]

 

ತತೋ ಮಹತ್ತತ್ವತನುರ್ವಿರಿಞ್ಚಃ ಸ್ಥೂಲಾತ್ಮನೈವಾಜನಿ ವಾಕ್ ಚ ದೇವೀ ।

ತಸ್ಯಾಮಹಙ್ಕಾರತನುಂ ಸ ರುದ್ರಂ ಸಸರ್ಜ್ಜ ಬುದ್ಧಿಂ ಚ ತದರ್ದ್ಧದೇಹಾಮ್ ॥೩.೧೬

 

ತದನಂತರ, ಅನಿರುದ್ಧ ಹಾಗೂ ಶಾಂತಿದೇವಿಯಿಂದ ಮಹತತ್ತ್ವಾಭಿಮಾನಿಯಾದ ಬ್ರಹ್ಮದೇವನು ಸ್ಥೂಲವಾದ ದೇಹವನ್ನು ಹೊಂದಿ ಮರಳಿ ಹುಟ್ಟಿದನು. ಸರಸ್ವತಿದೇವಿಯು ವಾಕ್ ಅಭಿಮಾನಿನಿಯಾಗಿ ಹುಟ್ಟಿದಳು. [ತಥಾಚ: ದೇವತೆಗಳಿಗೆ ಬ್ರಹ್ಮಾಂಡದಲ್ಲಿ ಒಂದು ಖಾತೆ(portfolio) ಎನ್ನುವುದು ಇರಲಿಲ್ಲ. ಅವರ ಸ್ವರೂಪದ ಅಭಿವ್ಯಕ್ತಿ ಮೊದಲಾಯಿತು.  ಆಮೇಲೆ ತತ್ತ್ವದ ಅಭಿಮಾನಿಯಾಗಿ ಹುಟ್ಟಿದರು.   ಅದರಿಂದಾಗಿ ಮಹತತ್ತ್ವಕ್ಕೆ ಅಭಿಮಾನಿಯಾದ ಬ್ರಹ್ಮನು, ವಾಕ್ ತತ್ತ್ವಕ್ಕೆ ಅಭಿಮಾನಿನಿಯಾದ ಸರಸ್ವತಿಯು ಇಬ್ಬರೂ ಕೂಡಾ ಮತ್ತೆ ಹುಟ್ಟಿದರು].  ಸರಸ್ವತಿಯಲ್ಲಿ ಮಹತತ್ತ್ವಾಭಿಮಾನಿಯಾದ ಬ್ರಹ್ಮನು  ಅಹಂಕಾರವೇ ಶರೀರವಾಗಿ ಉಳ್ಳ ರುದ್ರನನ್ನೂ ಮತ್ತು ರುದ್ರನ  ಅರ್ಧದೇಹವೆನಿಸಿರುವ, ಬುದ್ಧಿ ಅಭಿಮಾನಿನಿಯಾದ ಉಮಾದೇವಿಯನ್ನೂ ಸೃಷ್ಟಿಮಾಡಿದನು. [ಅಹಂಕಾರ ಎಂದರೆ: ‘ನಾನು’ ಎನ್ನುವ ಪ್ರಜ್ಞೆ(awareness of self). ಈ ಪ್ರಜ್ಞೆಯನ್ನು ಮನುಷ್ಯರ ಮನಸ್ಸಿನಲ್ಲಿರಿಸುವವನು ರುದ್ರ. ರುದ್ರನ ಪತ್ನಿ ಉಮೆ.  ಇವರು ಅರ್ಧನಾರೀಶ್ವರರು.  ಹಾಗಾಗಿ ಬುದ್ಧಿ ಮತ್ತು ‘ನಾನು ಎನ್ನುವ ಪ್ರಜ್ಞೆ’  ಯಾವಾಗಲೂ ಜೊತೆಯಾಗಿಯೇ ಇರುತ್ತದೆ].

 

ಬುದ್ಧ್ಯಾಮುಮಾಯಾಂ ಸ ಶಿವಸ್ತ್ರಿರೂಪೋ ಮನಶ್ಚ ವೈಕಾರಿಕದೇವಸಙ್ಘಾನ್ ।

ದಶೇನ್ದ್ರಿಯಾಣ್ಯೇವ ಚ ತೈಜಸಾನಿ ಕ್ರಮೇಣ ಖಾದೀನ್ ವಿಷಯೈಶ್ಚ ಸಾರ್ದ್ಧಮ್ ॥೩.೧೭

 

ಬುದ್ಧಿ ಅಭಿಮಾನಿನಿಯಾದ ಉಮೆಯೊಂದಿಗೆ ಮೂರು ರೂಪವುಳ್ಳ ಶಿವನು ವೈಕಾರಿಕ  ಅಹಂಕಾರದಿಂದ ಮನಸ್ಸು ಮತ್ತು ಇಂದ್ರಿಯಾಭಿಮಾನಿ ದೇವತೆಗಳನ್ನು ;  ತೈಜಸ ಅಹಂಕಾರದಿಂದ ಇಂದ್ರಿಯಗಳನ್ನು  ಹಾಗೂ ತಾಮಸ ಅಹಂಕಾರದಿಂದ ಪಂಚಭೂತಗಳನ್ನು, ರೂಪ, ರಸ, ಗಂಧ ಸ್ಪರ್ಶಗಳ ಜೊತೆಗೆ ಸೃಷ್ಟಿ.ಮಾಡಿದನು. 

 

[ಭಾಗವತದ ಎರಡನೇ ಸ್ಕಂಧದ ಐದನೇ ಅಧ್ಯಾಯದಲ್ಲಿ ಮೇಲಿನ ಮಾತಿನ ವಿವರಣೆಯನ್ನು[1] ನಾವು  ಕಾಣಬಹುದು. ಅಲ್ಲಿ ಹೇಳುವಂತೆ: ಅಹಂಕಾರ ತತ್ತ್ವಕ್ಕೆ ಮೂರು ಮುಖಗಳು. ದ್ರವ್ಯ, ಕ್ರಿಯಾ ಮತ್ತು ಜ್ಞಾನ.  ದ್ರವ್ಯ ಎಂದರೆ ಪಂಚಭೂತಗಳು, ಜ್ಞಾನ ಎಂದರೆ ಜ್ಞಾನೇಂದ್ರಿಯಗಳು ಮತ್ತು ಕರ್ಮ ಎಂದರೆ ಕರ್ಮೇಂದ್ರಿಯಗಳು. ಅಹಂಕಾರ ತತ್ತ್ವದ ಸೃಷ್ಟಿಯಿಂದಾಗಿ ಆ ಕಲ್ಪದಲ್ಲಿ ಸೃಷ್ಟಿಯಾಗಬೇಕಾಗಿರುವ ಎಲ್ಲಾ ಜೀವಗಳಿಗೆ ನಾನುಎನ್ನುವ ಎಚ್ಚರ ಜಾಗೃತವಾಗುತ್ತದೆ.  ಈ ಸ್ಥಿತಿಯಲ್ಲಿ ಮನಸ್ಸಾಗಲೀ, ಇಂದ್ರಿಯಗಳಾಗಲೀ  ಇನ್ನೂ ಜಾಗೃತವಾಗಿರುವುದಿಲ್ಲ.  (ಹೇಗೆ ಗರ್ಭದಲ್ಲಿ  ಭ್ರೂಣ ಬೆಳೆಯುತ್ತದೋ ಹಾಗೇ ಈ ಸೃಷ್ಟಿ ಪ್ರಕ್ರಿಯೆ). ಅಹಂಕಾರ ತತ್ತ್ವದಿಂದ  ಮತ್ತೆ ಮೂರು ಮುಖದಲ್ಲಿ ಸೃಷ್ಟಿಯ ವಿಸ್ತಾರವಾಗುತ್ತದೆ.  ಅವುಗಳೆಂದರೆ ವೈಕಾರಿಕ ಅಹಂಕಾರತೈಜಸ ಅಹಂಕಾರ ಮತ್ತು ತಾಮಸ ಅಹಂಕಾರ.

ವೈಕಾರಿಕ ಅಹಂಕಾರ ಎಂದರೆ  ಸಾತ್ತ್ವಿಕ ಅಹಂಕಾರ. ಇದು ವಿವಿಧಕಾರಕ ಸೃಷ್ಟಿ.  ಅಂದರೆ ವಿವಿಧ ಕ್ರಿಯಾಕಾರಕರಾಗಿರುವ  ಮನಸ್ಸು ಮತ್ತು ಹತ್ತು ಇಂದ್ರಿಯಾಭಿಮಾನಿ ದೇವತೆಗಳ(ವೈಕಾರಿಕರ) ಸೃಷ್ಟಿ.  ವೈಕಾರಿಕ ಅಹಂಕಾರದ ಸೃಷ್ಟಿಯಿಂದಾಗಿ ಆ ಕಲ್ಪದಲ್ಲಿ ಸೃಷ್ಟಿಯಾಗಬೇಕಾಗಿರುವ ಎಲ್ಲಾ ಜೀವಗಳ ಲಿಂಗ ಶರೀರದಲ್ಲಿ ಸುಪ್ತವಾಗಿದ್ದ ಮನೋಮಯಕೋಶ ಜಾಗೃತವಾಗಿ ಜೀವಗಳಲ್ಲಿ ಮನಸ್ಸು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸಾತ್ತ್ವಿಕ ಅಹಂಕಾರ ನಿಯಾಮಕನಾದ ಶಿವನಿಂದ ಮನಸ್ಸು ಮತ್ತು ಈ ಕೆಳಗಿನ ಹತ್ತು ಇಂದ್ರಿಯಾಭಿಮಾನಿ ದೇವತೆಗಳ ಸೃಷ್ಟಿಯಾಯಿತು:

 (೧) ಕಿವಿಯ ಅಭಿಮಾನಿ ದಿಗ್ದೇವತೆತೆಗಳು. (ಪೂರ್ವದಿಕ್ಕಿಗೆ ಮಿತ್ರ, ಪಶ್ಚಿಮದಿಕ್ಕಿಗೆ    ವರುಣ, ಉತ್ತರ ದಿಕ್ಕಿಗೆ ಕುಬೇರ ಮತ್ತು ದಕ್ಷಿಣ ದಿಕ್ಕಿಗೆ ಯಮ ಅಭಿಮಾನಿ ದೇವತೆಗಳು. ಇವರೆಲ್ಲರ ಮುಖಂಡ ಹಾಗೂ  ಶ್ರೋತ್ರಾಭಿಮಾನಿ-ಸೋಮ). (೨) ಸ್ಪರ್ಶದ ದೇವತೆ ವಾಯು. ಇಲ್ಲಿ ವಾಯು ಎಂದರೆ ಪ್ರಧಾನ ವಾಯು(ಪ್ರಾಣ) ಅಲ್ಲ, ಸ್ಪರ್ಶ ಶಕ್ತಿಯನ್ನು ಕೊಡುವ ಅಹಂಪ್ರಾಣ.

(೩) ಕಣ್ಣಿನ ದೇವತೆ ಅರ್ಕ(ಸೂರ್ಯ). (೪)ನಾಲಿಗೆ ಅಥವಾ ರಸದ ಅಭಿಮಾನಿ ದೇವತೆ ಪ್ರಚೇತ(ವರುಣ).

 (೫) ಮೂಗಿನ ಅಥವಾ ಗಂಧದ ಅಭಿಮಾನಿ ದೇವತೆ ಅಶ್ವಿನೀದೇವತೆಗಳು.

(೬) ಬಾಯಿ ಅಥವಾ ವಾಗೀನ್ದ್ರಿಯದ ದೇವತೆ ವಹ್ನಿ(ಅಗ್ನಿ).

(೭) ಕೈಯ ಅಭಿಮಾನಿ ದೇವತೆ ಇಂದ್ರ.

 (೮) ಕಾಲಿನ ಅಭಿಮಾನಿ ದೇವತೆಯಾಗಿ ಸ್ವಯಂ ಭಗವಂತನೇ ಉಪೇಂದ್ರನಾಗಿ ಶಿವನಿಂದ ಹುಟ್ಟಿದ. ಇಂದ್ರ ಪುತ್ರ ಜಯಂತ ಕೂಡಾ ಕಾಲಿನ ಅಭಿಮಾನಿ ದೇವತೆ.

(೯) ದೇಹಕ್ಕೆ ಬೇಡವಾದುದನ್ನು ಹೊರ ಹಾಕುವ ಪಾಯುವಿನ ಅಭಿಮಾನಿ ಮಿತ್ರ ಹಾಗೂ

(೧೦) ಮೂತ್ರ ಮತ್ತು ರೇತಸ್ಸಿನ ವಿಸರ್ಜನೆ ಹಾಗೂ ರೇತಸ್ಸಿನ ಸ್ವೀಕಾರದ ಜನನೇಂದ್ರಿಯದ ಅಭಿಮಾನಿ, ಸಂತಾನ ದೇವತೆಯಾದ ದಕ್ಷಪ್ರಜಾಪತಿ.   ಹೀಗೆ ಹತ್ತು ಮಂದಿ ಅಭಿಮಾನಿ ದೇವತೆಗಳು ವೈಕಾರಿಕ ಅಹಂಕಾರದಿಂದ ಸೃಷ್ಟಿಯಾದರು.  ತೈಜಸ ಅಹಂಕಾರದಿಂದ ಹತ್ತು ಇಂದ್ರಿಯಗಳು ಜಾಗೃತಗೊಂಡವು. ಹೀಗೆ ಮುಂದೆ ನಿರ್ಮಾಣವಾಗುವ ಬ್ರಹ್ಮಾಂಡದಲ್ಲಿ ಹುಟ್ಟಿಬರುವ ಜೀವಗಳ ಚಿತ್ತ, ಮನಸ್ಸು, ಅಹಂಕಾರ, ಪಂಚಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು ಜಾಗೃತಗೊಂಡವು. ತಾಮಸ ಅಹಂಕಾರದಿಂದ ಆಕಾಶವೇ ಮೊದಲ್ಗೊಂಡು ಪಂಚಭೂತಗಳ ಸೃಷ್ಟಿಯಾಯಿತು. ಈ ಕುರಿತಾದ ಹೆಚ್ಚಿನ ವಿವರಣೆಯನ್ನು ಭಾಗವತದ ಎರಡನೇ ಸ್ಕಂಧದ ಐದು ಮತ್ತು ಆರನೇ ಅಧ್ಯಾಯದಲ್ಲಿ ಕಾಣಬಹುದು].

 

ಪುಂಸಃ ಪ್ರಕೃತ್ಯಾಂ ಚ ಪುನರ್ವಿರಿಞ್ಚಾಚ್ಛಿವೋsತಸ್ಮಾದಖಿಲಾಃ ಸುರೇಶಾಃ ।

ಜಾತಾಃ ಸಶಕ್ರಾಃ ಪುನರೇವ ಸೂತ್ರಾಚ್ಛ್ರದ್ಧಾ ಸುತಾನಾಪ ಸುರಪ್ರವೀರಾನ್ ॥೩.೧೮

 

ಶೇಷಂ ಶಿವಂ ಚೇನ್ದ್ರಮಥೇನ್ದ್ರತಶ್ಚ ಸರ್ವೇ ಸುರಾ ಯಜ್ಞಗಣಾಶ್ಚ ಜಾತಾಃ ।

ಪುನಶ್ಚ ಮಾಯಾ ತ್ರಿವಿಧಾ ಬಭೂವ ಸತ್ವಾದಿರೂಪೈರಥ ವಾಸುದೇವಾತ್  ॥೩.೧೯

 

ಸತ್ವಾತ್ಮಿಕಾಯಾಂ ಸ ಬಭೂವ ತಸ್ಮಾತ್ ಸ ವಿಷ್ಣುನಾಮೈವ ನಿರನ್ತರೋSಪಿ ।

ರಜಸ್ತನೌ ಚೈವ ವಿರಿಞ್ಚ ಆಸೀತ್ ತಮಸ್ತನೌ ಶರ್ವ ಇತಿ ತ್ರಯೋSಸ್ಮಾತ್ ॥೩.೨೦

 

ಮತ್ತೆ ಪುರುಷರೂಪಿಯಾದ ಬ್ರಹ್ಮದೇವರಿಂದ ಸರಸ್ವತೀದೇವಿಯಲ್ಲಿ ಶಿವನು ಹುಟ್ಟಿದನು.  ಅವನಿಂದ ದೇವತೆಗಳು ಎರಡನೇ ಬಾರಿ ಹುಟ್ಟಿದರು. ಮತ್ತೆ ಮೂರನೇ ಬಾರಿಗೆ ಮುಖ್ಯಪ್ರಾಣನಿಂದ ಭಾರತಿಯು ಸುರಶ್ರೇಷ್ಠರನ್ನು ಮಕ್ಕಳನ್ನಾಗಿ ಹೊಂದಿದಳು. [ದೇವಾನಾಂ ಬಹುದಾ ಜನಿಃ ಎನ್ನುವ ಮಾತಿನಂತೆ  ದೇವತೆಗಳಿಗೆ ಅನೇಕ ಹುಟ್ಟು ಎನ್ನುವುದನ್ನು ನಾವಿಲ್ಲಿ ಕಾಣುತ್ತಿದ್ದೇವೆ]. ಹೀಗೆ ಶೇಷ, ಶಿವ ಮತ್ತು ಇಂದ್ರ ಮತ್ತೆ ಹುಟ್ಟಿದರು. ಇಂದ್ರನಿಂದ ಯಜ್ಞಾಭಿಮಾನಿಗಳಾಗಿ ಎಲ್ಲಾ ದೇವತೆಗಳೂ ಹುಟ್ಟಿದರು. ಪುನಃ ಮಾಯೆಯು ಸತ್ತ್ವಗುಣ ಅಭಿಮಾನಿ ಶ್ರೀ, ರಜೋಭಿಮಾನಿ ಭೂ ಮತ್ತು ತಮೋ ಅಭಿಮಾನಿ ದುರ್ಗೆ ಎನ್ನುವ ಮೂರು ರೂಪವನ್ನು ತೆಗೆದುಕೊಂಡಳು. ನಾರಾಯಣನು ಸತ್ತ್ವಗುಣ ಅಭಿಮಾನಿನಿಯಾದ ಶ್ರೀದೇವಿಯಲ್ಲಿ ವಿಷ್ಣು ಎನ್ನುವ ಹೆಸರುಳ್ಳವನಾಗಿ ತಾನೇ ಹುಟ್ಟಿದನು.  ಭೂದೇವಿಯಲ್ಲಿ ಬ್ರಹ್ಮದೇವರು ಹುಟ್ಟಿದರು.  ತಮೋಗುಣ ಅಭಿಮಾನಿನಿಯಾದ ದುರ್ಗಾದೇವಿಯಲ್ಲಿ ಸದಾಶಿವನು ಹುಟ್ಟಿದನು. [ಇದಕ್ಕಾಗಿ ಪುರಾಣದಲ್ಲಿ ಮೋಹನಾರ್ಥಕ್ಕಾಗಿ ದೇವಿಯಿಂದ ಬ್ರಹ್ಮ-ವಿಷ್ಣು-ಮಹೇಶ್ವರರು  ಹುಟ್ಟಿದರು ಎಂದು ಹೇಳಲಾಗಿದೆ.  ಅದನ್ನು ಈ ಮೇಲಿನ  ಸ್ತರದಲ್ಲಿ ನೋಡಿದಾಗ ಯಾವುದೇ ಗೊಂದಲವಿಲ್ಲ]       

 



[1] ಬನ್ನಂಜೆ ಗೋವಿಂದಾಚಾರ್ಯ್ಯರ ಭಾಗವತ ಪ್ರವಚನದಿಂದ ಆಯ್ದ ಸಂಕ್ಷಿಪ್ತ ವಿವರಣೆ

No comments:

Post a Comment