ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 18, 2018

Mahabharata Tatparya Nirnaya Kannada 3.40-3.45

 

ಅಥಾಬ್ಜನಾಭಪ್ರತಿಹಾರಪಾಲೌ ಶಾಪಾತ್ ತ್ರಿಶೋ ಭೂಮಿತಳೇsಭಿಜಾತೌ ।

ದಿತ್ಯಾಂ ಹಿರಣ್ಯಾವಥ ರಾಕ್ಷಸೌ ಚ ಪೈತೃಷ್ವಸೇಯೌ ಚ ಹರೇಃ ಪರಸ್ತಾತ್ ॥೩.೪೦

 

ವರಾಹ ಅವತಾರ ಎರಡು ಬಾರಿ ಆಗಿದ್ದು,  ಇಲ್ಲಿ ಎರಡನೇ ವರಾಹ ಅವತಾರವನ್ನು ಆಚಾರ್ಯರು ಹೇಳಿದ್ದಾರೆ.  ಪರಮಾತ್ಮನ ದ್ವಾರಪಾಲಕರಾಗಿರುವ ಜಯ-ವಿಜಯರು ಶಾಪದಿಂದ ಭೂಮಿಯಲ್ಲಿ ಮೂರು ಬಾರಿ ಹುಟ್ಟಿದರು. ಮೊದಲನೆಯ ಬಾರಿ ದಿತಿಯಲ್ಲಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಾಗಿ,   ಎರಡನೇ ಸಲ  ರಾವಣ-ಕುಂಭಕರ್ಣರಾಗಿ, ಕಡೇ ಅವತಾರದಲ್ಲಿ  ಅಂದರೆ ಪರಮಾತ್ಮನ ಕೃಷ್ಣಾವತಾರದಲ್ಲಿ  ಕೃಷ್ಣನಿಗೆ ಅತ್ತೆಯ ಮಕ್ಕಳಾಗಿ(ಶಿಶುಪಾಲ-ದಂತವಕ್ರರಾಗಿ) ಹುಟ್ಟಿದರು.

 

ಹತೋ ಹಿರಣ್ಯಾಕ್ಷ ಉದಾರವಿಕ್ರಮೋ ದಿತೇಃ ಸುತೋ ಯೋsವರಜಃ ಸುರಾರ್ತ್ಥೇ

ಧಾತ್ರಾsರ್ತ್ಥಿತೇನೈವ ವರಾಹರೂಪಿಣಾ ಧರೋದ್ಧೃತೌ ಪೂರ್ವಹತೋsಬ್ಜಜೋದ್ಭವಃ ॥೩.೪೧

 

ದಿತಿಯ ಮಗನಾಗಿರುವ, ಪರಾಕ್ರಮಿಯೂ ಆದ ಹಿರಣ್ಯಕಶಿಪುವಿನ  ತಮ್ಮನಾಗಿರುವ ಹಿರಣ್ಯಾಕ್ಷನು ದೇವತೆಗಳಿಗಾಗಿ ಕೊಲ್ಲಲ್ಪಟ್ಟನು. ಮೊದಲು ಬ್ರಹ್ಮನಿಂದ ಹುಟ್ಟಿರುವ ಹಿರಣ್ಯಾಕ್ಷನನ್ನು ಭಗವಂತ ಚತುರ್ಮುಖನ ಪ್ರಾರ್ಥನೆಯಂತೆ  ವರಾಹರೂಪದಿಂದ ಭೂಮಿಯನ್ನು ರಕ್ಷಿಸುತ್ತಾ ಕೊಂದನು.

[ವರಾಹ ಅವತಾರದ ಕುರಿತು ಭಾಗವತ ತಾತ್ಪರ್ಯ ನಿರ್ಣಯದಲ್ಲಿ ಆಚಾರ್ಯರ ವಿವರಣೆಯನ್ನು ಕಾಣಬಹುದು.  ಈ ಅವತಾರದ  ಕುರಿತಾಗಿ  ಶ್ರೀ ಬನ್ನಂಜೆ ಗೋವಿಂದಾಚಾರ್ಯ್ಯರ ಪ್ರವಚನದ ತುಣುಕನ್ನು(**) ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ:  ಭಗವಂತ ಎರಡು ಬಾರಿ ವರಾಹ ಅವತಾರದಲ್ಲಿ ಕಾಣಿಸಿದ್ದು, ಮೊದಲ  ವರಾಹ  ಅವತಾರ ಸ್ವಾಯಂಭುವ ಮನ್ವಂತರದಲ್ಲಿ  ನಡೆದ ಮೊತ್ತ ಮೊದಲ ಭಗವಂತನ  ಅವತಾರ. ಆನಂತರ ವೈವಸ್ವತ ಮನ್ವಂತರದಲ್ಲಿ ಮತ್ತೆ ಎರಡನೇ ಬಾರಿ   ವರಾಹನಾಗಿ ಭಗವಂತ ಅವತಾರವೆತ್ತುತ್ತಾನೆ.  ಸ್ವಾಯಂಭುವ ಮನ್ವಂತರದಲ್ಲಿ ಚತುರ್ಮುಖ ಬ್ರಹ್ಮನಿಂದ  ಸೃಷ್ಟಿಯಾದ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಎನ್ನುವ  ಆದಿದೈತ್ಯರೇ ಮರಳಿ ವೈವಸ್ವತ ಮನ್ವಂತರದಲ್ಲಿ ಅದೇ ಹೆಸರಿನಿಂದ ದಿತಿ-ಕಾಶ್ಯಪರಲ್ಲಿ ಹುಟ್ಟಿ ಬರುತ್ತಾರೆ.  ಭಗವಂತ ಆದಿದೈತ್ಯ ಹಿರಣ್ಯಾಕ್ಷನನ್ನು ಕೊಲ್ಲುವುದಕ್ಕಾಗಿ  ವರಾಹ ಅವತಾರ ತಾಳಿದರೆ, ದಿತಿ-ಕಾಶ್ಯಪರ ಪುತ್ರ ಹಿರಣ್ಯಾಕ್ಷನ ವಧೆಗಾಗಿ  ವೈವಸ್ವತ ಮನ್ವಂತರದಲ್ಲಿ ಮರಳಿ ಅದೇ ರೂಪದಿಂದ ಕಾಣಿಸಿಕೊಂಡ.  ಮೊದಲ ವರಾಹ ಅವತಾರದಲ್ಲಿ ಭಗವಂತ ಹಿರಣ್ಯಾಕ್ಷನನ್ನು ತನ್ನ ಕೋರೆ ದಾಡೆಗಳಿಂದ ಸೀಳಿ ಕೊಂದರೆ, ಎರಡನೇ ಬಾರಿ ಆತನ ಕಿವಿಯ ಮರ್ಮಸ್ಥಾನಕ್ಕೆ ಮುಷ್ಟಿಯಿಂದ ಗುದ್ದಿ  ಕೊಂದ ಎನ್ನುವ ವಿವರವನ್ನು ನಾವು ಭಾಗವತದಲ್ಲಿ ಕಾಣುತ್ತೇವೆ.  ಈ ಎರಡರ ನಡುವಿನ ವ್ಯತ್ಯಾಸ ತಿಳಿಯದೇ ಇದ್ದಾಗ ವರಾಹ ಅವತಾರ ಗೊಂದಲವಾಗುತ್ತದೆ. ಇದನ್ನು ಸ್ಪಷ್ಟಪಡಿಸುತ್ತಾ ಆಚಾರ್ಯ ಮಧ್ವರು ಹೇಳುತ್ತಾರೆ:  ಪ್ರಥಮಂ ದಂಷ್ಟ್ರೀಯ ಹತಃ, ದ್ವಿತಿಯಾತ್ ಕರ್ಣ ತಾಡನಾತ್ಎಂದು.  ಇನ್ನೊಂದು ಮುಖ್ಯ ವಿಷಯ ಏನೆಂದರೆ: ಸ್ವಾಯಂಭುವ ಮನ್ವಂತರದಲ್ಲಿ ತಳೆದ ವರಾಹವೇ ವೈವಸ್ವತ ಮನ್ವಂತರದಲ್ಲಿ ಬಂದಿದ್ದೇ ಹೊರತು, ಮೊದಲ ಅವತಾರ ಸಮಾಪ್ತಿಮಾಡಿ ಭಗವಂತ ಇನ್ನೊಮ್ಮೆ ವರಾಹನಾಗಿ ಅವತರಿಸಿ ಬಂದಿರುವುದಲ್ಲ. ಹೀಗಾಗಿ ವರಾಹ ಅವತಾರವನ್ನು ಎರಡು ಬಾರಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.

ದೈತ್ಯಎನ್ನುವ ಪದವನ್ನು ನಾವು ಕೇವಲ ದಿತಿಯ ಮಕ್ಕಳು ಎಂದಷ್ಟೇ ತಿಳಿದಾಗ ನಮಗೆ ಮತ್ತೆ ಗೊಂದಲವಾಗುತ್ತದೆ. ದೈತ್ಯ ಎನ್ನುವುದಕ್ಕೆ ದಿತಿಯ ಮಕ್ಕಳು ಎನ್ನುವುದು ಒಂದು ಅರ್ಥ. ಆದರೆ ಕೇವಲ ಅದೇ ಅರ್ಥದಲ್ಲಿ ಅದನ್ನು ಶಾಸ್ತ್ರಕಾರರು ಬಳಸುವುದಿಲ್ಲ.  ಆ ಶಬ್ದಕ್ಕೆ ಬೇರೊಂದು ವ್ಯುತ್ಪತ್ತಿ ಕೂಡಾ ಇದೆ.  ಉದಾಹರಣೆಗೆ:  ಶ್ರೀಕೃಷ್ಣನನ್ನು ವಾಸುದೇವ ಎಂದು ಕರೆಯುತ್ತಾರೆ.  ಅಲ್ಲಿ ವಾಸುದೇವ ಎಂದರೆ ವಸುದೇವನ ಮಗ ಎನ್ನುವುದು ಒಂದು ಅರ್ಥ.  ಆದರೆ ವಸುದೇವನ ಮಗನಾಗಿ ಹುಟ್ಟುವ ಮೊದಲು, ಸೃಷ್ಟಿಯ ಆದಿಯಲ್ಲೇ ಭಗವಂತ ವಾಸುದೇವ ರೂಪ ಧರಿಸಿರುವುದು ನಮಗೆಲ್ಲಾ ತಿಳಿದೇ ಇದೆ.  ಹೀಗೆ ಒಂದು ಶಬ್ದ ಒಂದು ವಿಶಿಷ್ಠ ಅರ್ಥದಲ್ಲಿ ಈಗ ಬಳಕೆಯಲ್ಲಿದ್ದರೂ ಸಹ, ಅದನ್ನು ಪ್ರಾಚೀನ ಕಾಲದಲ್ಲಿ ಬೇರೊಂದು ಅರ್ಥದಲ್ಲಿ ಬಳಸಿರುವ ಸಾಧ್ಯತೆಯನ್ನೂ ನಾವು ಸಂದರ್ಭಕ್ಕನುಗುಣವಾಗಿ ತಿಳಿದುಕೊಳ್ಳಬೇಕು. ದಿತಿ, ಅದಿತಿ ಎನ್ನುವ ಪದಗಳಿಗೆ ಅನೇಕ ಅರ್ಥಗಳಿವೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ:  ಸರ್ವಂ ವಾ ಅತ್ತೀತಿ ತದದಿತೇರದಿತಿತ್ವಮ್”.  ಇಲ್ಲಿ ದಿತಿಅಂದರೆ ತುಂಡರಿಸುವ ಅಥವಾ ನಾಶಮಾಡುವ  ಸ್ವಭಾವ.  ಅಂತಹ ಸ್ವಭಾವ  ಉಳ್ಳವರು ದೈತ್ಯರು. ಅಂದರೆ ಲೋಕಕಂಟಕರು ಎಂದರ್ಥ.  ಸೃಷ್ಟಿಯ ಆದಿಯಲ್ಲೇ  ಇಂತಹ ಲೋಕಕಂಟಕರ ಸೃಷ್ಟಿಯಾಗಿತ್ತು . ಸ್ವಾಯಂಭುವ ಮನ್ವಂತರದ ಆದಿದೈತ್ಯರಿಗೂ ಮತ್ತು ವೈವಸ್ವತ ಮನ್ವಂತರದ ದಿತಿಯ ಮಕ್ಕಳಿಗೂ ಇದ್ದ ಇನ್ನೊಂದು ವ್ಯತ್ಯಾಸ ಏನೆಂದರೆ: ವೈವಸ್ವತ ಮನ್ವಂತರದಲ್ಲಿನ  ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಲ್ಲಿ ಪುಣ್ಯಜೀವಿಗಳಾದ ಜಯ-ವಿಜಯರಿದ್ದಂತೆ (ನಾಲ್ಕು ಜೀವಗಳು ಎರಡು ಶರೀರದಲ್ಲಿ) ಆದಿ ದೈತ್ಯರಲ್ಲಿ ಇರಲಿಲ್ಲ.

ಎರಡು ಬಾರಿ ಭಗವಂತ ವರಾಹ ಅವತಾರ ತಾಳಲು ಕಾರಣ ಮಾತ್ರ ಒಂದೇ ಆಗಿರುವುದು ಈ ಅವತಾರದ ವಿಶೇಷ.  ಭೂಮಿ ತನ್ನ ಕಕ್ಷೆಯಿಂದ ಜಾರಿದಾಗ ಅದನ್ನು ರಕ್ಷಿಸಿ, ಮರಳಿ ಕಕ್ಷೆಯಲ್ಲಿಡಲು ಭಗವಂತನ ವರಾಹ ಅವತಾರವಾಗಿದೆ. ಸ್ವಾಯಂಭುವ ಮನ್ವಂತರದಲ್ಲಿ ಯಾರೂ ಭೂಮಿಯನ್ನು ಕಕ್ಷೆಯಿಂದ ಜಾರಿಸಿರಲಿಲ್ಲ. ಅದು ತನ್ನಷ್ಟಕ್ಕೇ ತಾನು ಜಾರಿದಾಗ ಭಗವಂತ  ಅದನ್ನು ರಕ್ಷಿಸಿದ.  ಹೀಗೆ ರಕ್ಷಿಸುವಾಗ ತಡೆದ ಆದಿದೈತ್ಯ ಹಿರಣ್ಯಾಕ್ಷನನ್ನು ಭಗವಂತ ವರಾಹ ರೂಪದಲ್ಲಿ, ಕೊರೆದಾಡೆಗಳಿಂದ ತಿವಿದು ಸಂಹಾರ ಮಾಡಿದ. ಎರಡನೇ ಬಾರಿ ವೈವಸ್ವತ ಮನ್ವಂತರದಲ್ಲಿ ಹಿರಣ್ಯಾಕ್ಷನೇ  ಭೂಮಿಯನ್ನು ಕಕ್ಷೆಯಿಂದ ಜಾರಿಸಿ ನಾಶ ಮಾಡಲು ಪ್ರಯತ್ನಿಸಿದಾಗ, ಭಗವಂತ ಮರಳಿ ವರಾಹ ಅವತಾರಿಯಾಗಿ ಬಂದು ಹಿರಣ್ಯಾಕ್ಷನ ಕಿವಿಯ ಮೂಲಕ್ಕೆ ಗುದ್ದಿ ಆತನನ್ನು ಕೊಂದು  ಭೂಮಿಯನ್ನು ರಕ್ಷಿಸಿ ಮರಳಿ ಕಕ್ಷೆಯಲ್ಲಿಟ್ಟ.  ವಿಶೇಷ ಏನೆಂದರೆ ಈ ರೀತಿ ಎರಡು ಬಾರಿ ಭೂಮಿ ಕಕ್ಷೆಯಿಂದ ಜಾರಿದ ವಿಷಯವನ್ನು ಇಂದು ವಿಜ್ಞಾನ ಕೂಡಾ ಒಪ್ಪುತ್ತದೆ. ರಷ್ಯನ್ ವಿಜ್ಞಾನಿ ವಿಲಿಕೋವಸ್ಕಿ(Velikovsky) ತನ್ನ “Worlds in collision”  ಎನ್ನುವ ಪುಸ್ತಕದಲ್ಲಿ ಹೇಳುತ್ತಾನೆ : ವೈಜ್ಞಾನಿಕವಾಗಿ ಎರಡು ಬಾರಿ ಭೂಮಿ ತನ್ನಕಕ್ಷೆಯಿಂದ ಜಾರಿದ್ದು ನಿಜ, ಆದರೆ ನಮಗೆ ಅದು ಏಕೆ ಎನ್ನುವುದು ತಿಳಿದಿಲ್ಲಎಂದು. ಆತ ಅಲ್ಲಿ ಭಾಗವತವನ್ನು ಉಲ್ಲೇಖಿಸಿ ಹೇಳುತ್ತಾನೆ: ಭಾರತದ ಋಷಿಗಳು ಈ ವಿಚಾರವನ್ನು ತಿಳಿದಿದ್ದರುಎಂದು.   (ಇಂದು ನಾವು ಇಂತಹ ಅಪೂರ್ವ ಅಧ್ಯಾತ್ಮ ವಿಜ್ಞಾನವನ್ನು ಬಿಟ್ಟು ಪಾಶ್ಚ್ಯಾತ್ಯ ವಿಜ್ಞಾನಕ್ಕೆ ಮರುಳಾಗಿ ಬದುಕುತ್ತಿರುವುದು ದುರಾದೃಷ್ಟಕರ).

ಇಲ್ಲಿ ಭಗವಂತ ಏಕೆ ವರಾಹರೂಪವನ್ನೇ ತೊಟ್ಟ ? ಬೇರೆ ರೂಪ ಏಕೆ ತೊಡಲಿಲ್ಲ ಎನ್ನುವುದು ಕೆಲವರ ಪ್ರಶ್ನೆ.  ಈ ರೀತಿ ಪ್ರಶ್ನಿಸುವ ಮೊದಲು ನಾವು ತಿಳಿಯಬೇಕಾದ ವಿಷಯ ಏನೆಂದರೆ:  ಭಗವಂತ ತಾನು ಯಾವ ರೂಪದಲ್ಲಿ ಬರಬೇಕು ಎನ್ನುವುದನ್ನು ಆತನೇ ನಿರ್ಧರಿಸುತ್ತಾನೆ.  ಅದು ಅವನ ಇಚ್ಛೆ.  ಭಗವಂತನ ವರಾಹ ರೂಪ ಎಲ್ಲರಿಗೂ ಹೊರಗಣ್ಣಿಗೆ ಕಾಣಿಸಿಕೊಂಡ ರೂಪವಲ್ಲ. ಈ ರೂಪವನ್ನು ಚತುರ್ಮುಖ, ಸ್ವಾಯಂಭುವ ಮನು, ಹಿರಣ್ಯಾಕ್ಷ ಕಂಡಿದ್ದಾರೆ.  ಅದೇ ರೂಪವನ್ನು ಜ್ಞಾನಿಗಳು ಧ್ಯಾನದಲ್ಲಿ ಕಂಡು ನಮಗೆ ವರಾಹಎಂದು ವಿವರಿಸಿದ್ದಾರೆ.

ವರಾಹ ಅವತಾರಕ್ಕೆ ಸಂಬಂಧಿಸಿ ಒಂದು ತಪ್ಪು ಕಲ್ಪನೆ  ಸಾಮಾನ್ಯ ಜನರಲ್ಲಿದೆ.  ಅದೇನೆಂದರೆ:  ಭಾರತೀಯರು ಭೂಮಿ ಚಪ್ಪಟೆಯಾಗಿದೆ ಎಂದು ತಿಳಿದಿದ್ದರು ಮತ್ತು ವರಾಹ ಅವತಾರಕ್ಕೆ ಯಾವುದೇ ವೈಜ್ಞಾನಿಕ ಪುಷ್ಟೀಕರಣ ಇಲ್ಲ ಎಂದು. ಇದಕ್ಕೆ ಒಂದು ಕಾರಣವೂ ಇದೆ.  ಅದೇನೆಂದರೆ: ಭಗವಂತನ ಈ ಅವತಾರವನ್ನು ಕಕ್ಷೆ, ಗುರುತ್ವಾಕರ್ಷಣ ಶಕ್ತಿ, ಇತ್ಯಾದಿ ವಿಷಯದ ಅರಿವಿಲ್ಲದ ಚಿಕ್ಕ ಮಕ್ಕಳಿಗೆ ವಿವರಿಸುವಾಗ, ಅವರ ತಿಳುವಳಿಕೆಗಾಗಿ ಸರಳೀಕರಣ ಮಾಡಿ  ಹಿರಣ್ಯಾಕ್ಷ ಭೂಮಿಯನ್ನು  ಚಾಪೆಯಂತೆ ಮಡಚಿ ಬಗಲಿನಲ್ಲಿಟ್ಟುಕೊಂಡು ಹೋದಎಂದು ವಿವರಿಸಿದ್ದಾರೆ. ಆದರೆ ಅದೇ ನಿಜವಲ್ಲ. ನಮ್ಮ ಪ್ರಾಚೀನ ಋಷಿಗಳಿಗೆ ಭೂಮಿಯ ಆಕಾರದ ಬಗ್ಗೆ, ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಪೂರ್ಣ ತಿಳುವಳಿಕೆ ಇತ್ತು. ಅದು ಇಂದಿನ ಪಾಶ್ಚ್ಯಾತ್ಯರು ಕಂಡುಕೊಂಡ ಹೊಸ ವಿಚಾರವೇನೂ ಅಲ್ಲ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಆರ್ಯಭಟ  ಆಕೃಷ್ಟಿ ಶಕ್ತಿಶ್ಚ ಮಹೀ”  ಎಂದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಿರುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಭೂಮಿಯನ್ನು ಭೂಗೋಲಎಂದು ಕರೆದಿದ್ದ ನಮ್ಮ ಪ್ರಾಚೀನ ಋಷಿಗಳು, ಭೂಮಿ ದುಂಡಗಿದೆ ಎಂದು ತಿಳಿದಿದ್ದರು ಎನ್ನುವುದು ಅವರು ಬಳಸಿರುವ ಗೋಲಎನ್ನುವ ಪದದಿಂದಲೇ ತಿಳಿಯುತ್ತದೆ.  ದುರಾದೃಷ್ಟವಶಾತ್ ಇಂದು ನಮಗೆ ನಮ್ಮ ಪೂರ್ವಿಕರು ಕೊಟ್ಟ ಅಪೂರ್ವ ವಿಜ್ಞಾನದ ಬಗ್ಗೆ ಯಾವುದೇ ತಿಳುವಳಿಕೆ/ಗೌರವ ಇಲ್ಲ.  ಭೂಮಿಯಲ್ಲಿ ಅಪಾನಶಕ್ತಿ(ಗುರುತ್ವಾಕರ್ಷಣ ಶಕ್ತಿ) ಇರುವುದರಿಂದ ಅದು ತನ್ನ ಕಕ್ಷೆಯಲ್ಲಿ, ಭೌತಿಕವಾಗಿ, ನಿರಾಲಂಬವಾಗಿ ನಿಂತಿದೆ.  ಇಂತಹ ಪ್ರಕೃತಿಸತ್ಯ ಹಿಂದೆ ಋಷಿಗಳಿಗೆ ಸ್ಫುರಣವಾಗುತ್ತಿತ್ತು. ಭಾರತದ ಗಣಿತಪದ್ಧತಿ (ಜ್ಯೋತಿಷ್ಯ ಶಾಸ್ತ್ರ) ಸಂಪೂರ್ಣ ಭೂಮಿಯ ಹಾಗೂ ಗ್ರಹಗೋಲಗಳ ಚಲನೆಗೆ ಅನುಗುಣವಾಗಿದೆ. ಇದು ಇಂದಿನ ಪಾಶ್ಚ್ಯಾತ್ಯ ಗಣಿತದಿಂದ ಬಂದಿದ್ದಲ್ಲ. ಸುಮಾರು ೫೦೦೦ ವರ್ಷಗಳ ಹಿಂದೆ ಮಹಾಭಾರತ ಯುದ್ಧದ ಸಮಯದಲ್ಲಿ ಹದಿಮೂರು ದಿನಗಳ ಅಂತರದಲ್ಲಿ ಎರಡು ಗ್ರಹಣ ಸಂಭವಿಸುತ್ತದೆ ಹಾಗೂ ಅದು ಯುದ್ಧ ಮತ್ತು ಯುದ್ಧದ ಪರಿಣಾಮ(ಸರ್ವನಾಶ)ವನ್ನು ಸೂಚಿಸುತ್ತದೆ ಎಂದು ವೇದವ್ಯಾಸರು ಯುದ್ಧಕ್ಕೂ ಮೊದಲೇ ಧೃತರಾಷ್ಟ್ರನಿಗೆ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಪ್ರಾಚೀನ ಕಾಲದಿಂದಲೂ ಭಾರತದ ಜ್ಯೋತಿಷ್ಯಶಾಸ್ತ್ರ ಕರಾರುವಕ್ಕಾಗಿ ಗ್ರಹಣ ಸಂಭವಿಸುವ ಕಾಲವನ್ನು ಗುರುತಿಸುವ ಗಣಿತವಾಗಿತ್ತು. ಹೀಗಾಗಿ ಭಾರತೀಯರು ಎಂದೂ ಭೂಮಿ ಚಪ್ಪಟೆಯಾಗಿದೆ ಎಂದು ತಿಳಿದಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ವರಾಹ ಅವತಾರದಲ್ಲಿ ಬರುವ ಇನ್ನೊಂದು ಸಂಶಯ ಎಂದರೆ:  ಅಲ್ಲಿ ಭೂಮಿ ಕಕ್ಷೆಯಿಂದ ಕಳಚಿಕೊಂಡು  ನೀರಿನಲ್ಲಿ ಮುಳುಗುವ ಪ್ರಸಂಗ ಬಂದಾಗ ವರಾಹ ಅವತಾರವಾಯಿತು ಎನ್ನುತ್ತಾರೆ.  ಇಲ್ಲಿ ಎಲ್ಲರಿಗೂ ಬರುವ ಸರ್ವೇ ಸಾಮಾನ್ಯ ಪ್ರಶ್ನೆ ಎಂದರೆ: ಸಮುದ್ರಗಳಿರುವುದು ಭೂಮಿಯ ಮೇಲೆ.  ಹೀಗಿರುವಾಗ ಅನೇಕ ಸಮುದ್ರಗಳಿರುವ ಇಂತಹ  ಭೂಮಿ ಮುಳುಗುವ ಇನ್ನೊಂದು ಸಮುದ್ರ ಎಲ್ಲಿದೆಎನ್ನುವುದು. ಈ ರೀತಿ ಪ್ರಶ್ನೆ ಮಾಡುವವರಿಗೆ ಪ್ರಳಯ ಸಮುದ್ರದ ಕಲ್ಪನೆ ಇರುವುದಿಲ್ಲ. ಶಾಸ್ತ್ರಕಾರರು ಎಂದೂ ಭೂಮಿ ನೀರಿನ ಸಮುದ್ರದಲ್ಲಿ ಮುಳುಗುವ ಪರಿಸ್ಥಿತಿ ಬಂತು ಎಂದು ಹೇಳಲಿಲ್ಲ. ಬದಲಾಗಿ ಅವರು ಕಾರಣೋದಕಎಂದಿದ್ದಾರೆ. ಅಂದರೆ ನೀರು ಯಾವುದರಿಂದ ಮುಂದೆ ನಿಷ್ಪನ್ನವಾಗುತ್ತದೋ ಅದಕ್ಕೆ ಕಾರಣೀಭೂತವಾದ ಮೂಲದ್ರವ್ಯ ವಾತಾವರಣದಲ್ಲಿ ತುಂಬಿರುವ ಸ್ಥಿತಿ. ಸೃಷ್ಟಿ ಪೂರ್ವದಲ್ಲಿ ಸೃಷ್ಟಿಗೆ ಬೇಕಾದ ಸಮಸ್ತ ಮೂಲದ್ರವ್ಯಗಳೂ ಪರಮಾಣು ಸಮುದ್ರ ರೂಪದಲ್ಲಿದ್ದು, ಸೃಷ್ಟಿಕರ್ತ ನಾರಾಯಣ ಆ ಪ್ರಳಯಸಮುದ್ರದಲ್ಲಿ ಪವಡಿಸಿದ್ದ ಎನ್ನುವ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.  ವರಾಹ ಅವತಾರ ಆಗುವಾಗ ಪೂರ್ಣಪ್ರಮಾಣದ ಸ್ಥೂಲ ಪ್ರಪಂಚ ನಿರ್ಮಾಣ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು.

 ನಮಗೆ ತಿಳಿದಂತೆ ಭೂಮಿ ತನ್ನ ಕಕ್ಷೆಯಿಂದ ಸ್ವಲ್ಪ ಜಾರಿದರೂ ಸಾಕು.  ಅದು ಇತರ ಗ್ರಹ-ಗೋಲಗಳಿಗೆ ಡಿಕ್ಕಿ ಹೊಡೆದು ನಾಶವಾಗಿ ಹೋಗುತ್ತದೆ.  ವಿಶ್ವದ ರಚನೆ ಯಶಸ್ವಿಯಾಗಬಾರದು ಎಂದು ಬಯಸಿದವನು ಹಿರಣ್ಯಾಕ್ಷ. ಆದರೆ ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು ವಿಶ್ವ ರಚನೆ ಮಾಡಿದ ವಿಶ್ವಕರ್ಮ ಆ ಭಗವಂತ.

ಗಾಯತ್ತ್ರಿ ಮಂತ್ರದಲ್ಲಿ ತತ್ಸವಿತುರ್ವರೇಣ್ಯಮ್ಎನ್ನುವಲ್ಲಿನ ವರೇಣ್ಯಮ್ಎನ್ನುವ ಪದದ ಅರ್ಥ ಹಾಗೂ ವರಾಹ ಎನ್ನುವ ಪದದ ಅರ್ಥ ಒಂದೇ ಆಗಿದೆ.  ವರೇಣ್ಯಂ/ವರಾಹ ಎಂದರೆ ಎಲ್ಲರೂ ಆಶ್ರಯಿಸಬೇಕಾದ, ಎಲ್ಲಕ್ಕಿಂತ ಹಿರಿದಾದ ಶಕ್ತಿ ಎಂದರ್ಥ. ವೈದಿಕ ಸಂಸ್ಕೃತದಲ್ಲಿ ಮೋಡವನ್ನೂ ಕೂಡಾ ವರಾಹ ಎಂದು ಕರೆಯುತ್ತಾರೆ.  ಮೋಡವೂ ಕೂಡಾ ಎತ್ತರದಲ್ಲಿರುತ್ತದೆ ಮತ್ತು ನಾವೆಲ್ಲರೂ ಅದನ್ನು ಆಶ್ರಯಿಸಿಕೊಂಡೇ ಬದುಕುತಿದ್ದೇವೆ. ಹಾಗಾಗಿ ಮೋಡಕ್ಕೆ ಆ ಹೆಸರು. ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು ನಮಗೆಲ್ಲರಿಗೂ ರಕ್ಷಣೆ ನೀಡಿರುವ ಭಗವಂತ ಜ್ಞಾನಿಗಳಿಗೆ  ಕಾಣಿಸಿಕೊಂಡ ರೂಪದಲ್ಲೇ  ಹಂದಿ ಇರುವುದರಿಂದ ಅದಕ್ಕೂ ವರಾಹ ಎನ್ನುವ ಹೆಸರು ಬಂತೇ ವಿನಃ ಈ ಪದದ ವ್ಯತ್ಪತ್ತಿಗೂ ಮತ್ತು ಆ ಪ್ರಾಣಿಗೂ ಯಾವುದೇ ಸಂಬಂಧವಿಲ್ಲ.  ಕೇವಲ ರೂಪ ಸಾಮ್ಯದಿಂದ ಆ ಪ್ರಾಣಿಗೂ ವರಾಹ  ಎನ್ನುವ ಹೆಸರು ಬಂತು ಅಷ್ಟೇ].

   

ಅಥೋ ವಿಧಾತುರ್ಮ್ಮುಖತೋ ವಿನಿಃಸೃತಾನ್ ವೇದಾನ್ ಹಯಾಸ್ಯೋ ಜಗೃಹೇsಸುರೇನ್ದ್ರಃ ।

ನಿಹತ್ಯ ತಂ ಮತ್ಸ್ಯವಪುರ್ಜ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ ॥೩.೪೨

 

ತದನಂತರ ಬ್ರಹ್ಮನ ಮುಖದಿಂದ ಹೊರಬಂದ ವೇದಗಳನ್ನು ಕುದುರೆಯ ಮೋರೆ ಇರುವ ದೈತ್ಯನು [ಹಯಗ್ರೀವಾಸುರನು] ಕಿತ್ತುಕೊಂಡನು.  ಅವನನ್ನು ಭಗವಂತ ಮತ್ಸ್ಯಾವತಾರಿಯಾಗಿ  ಕೊಂದು, ಮನುಗಳನ್ನೂ ಹಾಗೂ  ಮುನಿಗಳನ್ನು ರಕ್ಷಿಸಿ, ವೇದಗಳನ್ನು ಬ್ರಹ್ಮದೇವರ ವಶಕ್ಕೆ ಕೊಟ್ಟನು.

 

ಮನ್ವನ್ತರಪ್ರಳಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವದೇವಃ ।

ವೈವಸ್ವತಾಯೋತ್ತಮಸಂವಿದಾತ್ಮಾ ವಿಷ್ಣೋಃ ಸ್ವರೂಪಪ್ರತಿಪತ್ತಿರೂಪಾಮ್ ॥೩.೪೩

 

ಚಾಕ್ಷುಷ ಮನ್ವಂತರದ ಪ್ರಳಯದಲ್ಲಿ ಮತ್ಸ್ಯಾವತಾರವನ್ನು ತಳೆದ, ಜ್ಞಾನವೇ ಮೈವೆತ್ತು ಬಂದಿರುವ, ದೇವತೆಗಳಿಗೂ ದೇವನಾದ ಪರಮಾತ್ಮನು,  ವೈವಸ್ವತಮನುವಿಗೆ ನಾರಾಯಣನ ಸ್ವರೂಪವನ್ನು ಯಥಾರ್ಥವಾಗಿ ತಿಳಿಸುವ ವಿದ್ಯೆಯನ್ನಿತ್ತನು. 

[ಕೆಲವೊಂದು ಕಡೆ  ‘ಕಲ್ಪ‘  ಎನ್ನುವ ಪದವನ್ನು ವಿಶೇಷ ಅರ್ಥದಲ್ಲಿ ಬಳಸುತ್ತಾರೆ.  ಉದಾಹರಣೆಗೆ:  ಪುರಾಣದಲ್ಲಿ ಆಸೀದತೀತ ಕಲ್ಪ ಎಂದೂ,  ಬ್ರಾಹ್ಮ್ಮೋ ನೈಮಿತ್ತಿಕೋ ಲಯಃ  ಎಂತಲೂ ಹೇಳಲಾಗಿದೆ.  ಈ ರೀತಿಯ ಮಾತುಗಳನ್ನು   ಹೇಳಿದಾಗ ಗೊಂದಲವಾಗುತ್ತದೆ.  ಆದರೆ  ಅಲ್ಲಿ ‘ಕಲ್ಪ’ ಎಂದರೆ ಮನ್ವಂತರ ಎಂದು ಸ್ಪಷ್ಟಪಡಿಸಿ  ಆಚಾರ್ಯರು  ನಮ್ಮ ಗೊಂದಲ ಪರಿಹರಿಸುತ್ತಾರೆ.]

[(**)ಸ್ವಾಯಂಭುವ ಮನ್ವಂತರದಲ್ಲಿ ನಡೆದ ವರಾಹ ಅವತಾರವನ್ನು ಭಗವಂತ ಸಮಾಪ್ತಿಗೊಳಿಸದೇ ಇರುವುದರಿಂದ ಇದು ದಶಾವತಾರಗಳಲ್ಲಿ ಮೊದಲನೇ ಅವತಾರವೆಂದು ಪರಿಗಣಿಸಿದ್ದಾರೆ ಎನ್ನುವುದನ್ನು ಈ ಹಿಂದೆ ನೋಡಿದ್ದೆವು. ಆದರೆ ಈ ರೀತಿ ನೋಡಿದರೆ ಅನುಕ್ರಮವಾಗಿ ಮತ್ಸ್ಯಾವತಾರಕ್ಕೂ ಮೊದಲು ಕೂರ್ಮಾವತಾರವನ್ನು ಹೇಳಬೇಕಾಗುತ್ತದೆ. ಏಕೆಂದರೆ ಮೊದಲ ಕೂರ್ಮಾವತಾರವಾಗಿರುವುದು ರೈವತ ಮನ್ವಂತರದಲ್ಲಾದರೆ, ವೈವಸ್ವತ ಮನ್ವಂತರದಲ್ಲಿ ಎರಡನೇ ಬಾರಿ ಭಗವಂತ ಕೂರ್ಮರೂಪಿಯಾಗಿ ಬಂದಿರುವುದನ್ನು ನಾವು ಕಾಣುತ್ತೇವೆ. ಹೀಗೆ ನೋಡಿದಾಗ ಇನ್ನೊಂದು ಸಮಸ್ಯೆ ಬರುತ್ತದೆ. ಅದೇನೆಂದರೆ ಭಾಗವತದ ಎಂಟನೇ ಸ್ಕಂಧದಲ್ಲಿ ಹೇಳುವಂತೆ: ಮತ್ಸ್ಯಾವತಾರ ಕೂರ್ಮಾವತಾರಕ್ಕಿಂತ ಮೊದಲು ಕಲ್ಪಾದಿಯಲ್ಲೇ ಒಮ್ಮೆ ನಡೆದಿದೆ.  ಹೀಗಾಗಿ ನಾವು ಅನುಕ್ರಮದಲ್ಲಿ ನೋಡುವಾಗ ಹಿಂದೆ ನಡೆದ ಅವತಾರವನ್ನು ತೆಗೆದುಕೊಂಡು ಹೇಳಿದರೆ ಸರಿ ಹೊಂದುವುದಿಲ್ಲ. ಈ ಮಾತಿಗೆ ವರಾಹ ಅವತಾರ ಮಾತ್ರ ಅಪವಾದ. ಏಕೆಂದರೆ: ಕೆಲವೊಮ್ಮೆ ಭಗವಂತ ತನ್ನ ಅವತಾರ ರೂಪವನ್ನು ಮೂಲ ರೂಪದಲ್ಲಿ ಅಂತರ್ಭಾವಗೊಳಿಸಿಬಿಡುತ್ತಾನೆ.  ಆಗ ನಾವು ಅವತಾರ ಸಮಾಪ್ತಿಯಾಯಿತು ಎನ್ನುತ್ತೇವೆ.  ಆದರೆ ಈ ಹಿಂದೆ ಹೇಳಿದಂತೆ: ಸ್ವಾಯಂಭುವ ಮನ್ವಂತರದಲ್ಲಿ ನಡೆದ ವರಾಹ ಅವತಾರವನ್ನು ಭಗವಂತ ಸಮಾಪ್ತಿಗೊಳಿಸಿಲ್ಲ. ಆದರೆ ಕಲ್ಪಾದಿಯಲ್ಲಿ ನಡೆದ ಮತ್ಸ್ಯಾವತಾರ, ರೈವತ ಮನ್ವಂತರದಲ್ಲಿ ನಡೆದ ಕೂರ್ಮಾವತಾರವನ್ನು ಭಗವಂತ ಸಮಾಪ್ತಿಗೊಳಿಸಿ, ಮರಳಿ ವೈವಸ್ವತ ಮನ್ವಂತರದಲ್ಲಿ ಅದೇ ರೂಪದಿಂದ ಅವತರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನೋಡಿದಾಗ: ಚಾಕ್ಷುಷ ಮನ್ವಂತರ ಮತ್ತು ವೈವಸ್ವತ  ಮನ್ವಂತರದ ಸಂಧಿಕಾಲದಲ್ಲಿ ನಡೆದ ಮತ್ಸ್ಯಾವತಾರದ ನಂತರ  ವೈವಸ್ವತ ಮನ್ವಂತರದಲ್ಲಿ ಕೂರ್ಮಾವತಾರವಾಗಿದೆ. ಈ ಅನುಕ್ರಮಣಿಕೆಯಲ್ಲಿ ನೋಡಿದಾಗ, ಈ ಮನ್ವಂತರದಲ್ಲಿ  ಮೊದಲು  ಮತ್ಸ್ಯಾವತಾರವಾಗಿದ್ದು, ಆನಂತರ ಕೂರ್ಮಾವತಾರವಾಗಿರುವುದನ್ನು ನಾವು ಕಾಣಬಹುದು.

ಇಲ್ಲಿ ಚತುರ್ಮುಖನ ಬಾಯಿಯಿಂದ ವೇದ ಕೆಳಕ್ಕೆ ಜಾರಿತು ಮತ್ತು ಅದನ್ನು ಅಸುರ ಅಪಹರಿಸಿದಎನ್ನುವ ಮಾತನ್ನು ಕೆಲವರು ಗೊಂದಲ ಮಾಡಿಕೊಳ್ಳುತ್ತಾರೆ. ವೇದ ಈ ರೀತಿ ಜಾರಿ ಬೀಳುವ ವಸ್ತು ಅಥವಾ ಪುಸ್ತಕವೇ ಇತ್ಯಾದಿ ಪ್ರಶ್ನೆ ಕೆಲವರದ್ದು.   ಈ ಮಾತು  ಅರ್ಥವಾಗಬೇಕಾದರೆ ಭಾಗವತದ  ಒಂದನೇ ಸ್ಕಂಧದಲ್ಲಿ ವಿವರಿಸಿದ ಪುರಾಣದ ಮೂರು ಭಾಷೆ ಮತ್ತು ನಿರೂಪಣೆಯ ಏಳು ವಿಧ ನಮಗೆ ತಿಳಿದಿರಬೇಕಾಗುತ್ತದೆ.  ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಇಲ್ಲಿ ವೇದಗಳ ಅಪಹಾರ ಎಂದರೆ ವೇದಾಭಿಮಾನಿ ದೇವತೆಗಳ ಅಪಹಾರ].

 

ಅಥೋ ದಿತೇರ್ಜ್ಜ್ಯೇಷ್ಠಸುತೇನ ಶಶ್ವತ್ ಪ್ರಪೀಡಿತಾ ಬ್ರಹ್ಮವರಾತ್ ಸುರೇಶಾಃ ।

ಹರಿಂ ವಿರಿಞ್ಚೇನ ಸಹೋಪಜಗ್ಮುರ್ದ್ದೌರಾತ್ಮ್ಯಮಸ್ಯಾಪಿ ಶಶಂಸುರಸ್ಮೈ                        ೩.೪೪

 

ತದನಂತರ ಬ್ರಹ್ಮದೇವರ ವರದ ಬಲದಿಂದ,  ದಿತಿಯ ಹಿರಿಯ ಮಗನಾದ ಹಿರಣ್ಯಕಶಿಪುವಿಂದ ಪೀಡಿತರಾದ ದೇವತೆಗಳೆಲ್ಲರೂ,  ಬ್ರಹ್ಮದೇವರ ಜೊತೆಗೆ ಪರಮಾತ್ಮನಿದ್ದಲ್ಲಿಗೆ ತೆರಳಿ,  ಆತನಲ್ಲಿ   ಹಿರಣ್ಯಕಶಿಪುವಿನ ದುಷ್ಟತನದ ಕುರಿತು  ಹೇಳಿದರು. 

 

ಅಭಿಷ್ಟುತಸ್ತೈರ್ಹರಿರುಗ್ರವೀರ್ಯ್ಯೋ ನೃಸಿಂಹರೂಪೇಣ ಸ ಆವಿರಾಸೀತ್ ।

ಹತ್ವಾ ಹಿರಣ್ಯಂ ಚ ಸುತಾಯ ತಸ್ಯ ದತ್ವಾsಭಯಂ ದೇವಗಣಾನತೋಷಯತ್             ೩.೪೫

 

ದೇವತೆಗಳಿಂದ ಸ್ತುತಿಸಲ್ಪಟ್ಟ ನಾರಾಯಣನು, ಉಗ್ರವೀರ್ಯ ನರಸಿಂಹ ರೂಪದಿಂದ ಕಂಬದಲ್ಲಿ ಮೂಡಿ ಬಂದು, ಹಿರಣ್ಯಕಶಿಪುವನ್ನು ಕೊಂದು, ಅವನ ಮಗನಾದ ಪ್ರಹ್ಲಾದನಿಗೆ ಅಭಯವನ್ನಿತ್ತು, ದೇವತಾ ಸಮೂಹವನ್ನು ಪ್ರೀತಗೊಳಿಸಿದನು.

[(**)ಭಗವಂತ ಏಕೆ ಈ ರೀತಿ ಭಯಂಕರ ರೂಪಿಯಾಗಿ ಬಂದ ಎಂದರೆ:  ಅದು ಅವನಿಗೆ ಅನಿವಾರ್ಯವಾಗಿತ್ತು. ಇದು ಆತನ ಭಕ್ತರೇ ತಂದಿಟ್ಟ ಪರಿಸ್ಥಿತಿ.  ಹಿರಣ್ಯಕಶಿಪು  ಘೋರ ತಪಸ್ಸು ಮಾಡಿ ಚತುರ್ಮುಖನಲ್ಲಿ ವರವನ್ನು ಬೇಡಿದ್ದ: ನನ್ನನ್ನು ಯಾರೂ ಯಾವ ಆಯುಧದಿಂದಲೂ ಕೊಲ್ಲಬಾರದು, ಹಗಲೂ ಕೊಲ್ಲಬಾರದು, ರಾತ್ರಿಯೂ ಕೊಲ್ಲಬಾರದು.  ದೇವತೆಗಳು-ಮನುಷ್ಯರು ಅಥವಾ ಪ್ರಾಣಿಗಳಿಂದ ನನಗೆ ಸಾವು ಬರಬಾರದು. ಕೆಳಗೆ, ಒಳಗೆ, ಭೂಮಿಯ ಮೇಲೆ, ಆಕಾಶದಲ್ಲಿ ನಾನು ಸಾಯಬಾರದುಎನ್ನುವ ವರವದು. ಈ ಕಾರಣಕ್ಕಾಗಿಯೇ ಭಗವಂತ ಪ್ರಾಣಿಯ ಮುಖವಿರುವ, ಆದರೆ ಮನುಷ್ಯ ದೇಹವಿರುವ ನರಸಿಂಹನಾಗಿ ಬರಬೇಕಾಯಿತು. ಒಳಗೂ ಅಲ್ಲ, ಹೊರಗೂ ಅಲ್ಲ- ಹೊಸ್ತಿಲಲ್ಲಿ; ಹಗಲೂ ಅಲ್ಲ, ರಾತ್ರಿಯೂ ಅಲ್ಲ- ಮುಸ್ಸಂಜೆಯಲ್ಲಿ, ಭೂಮಿಯ ಮೇಲೂ ಅಲ್ಲ, ಆಕಾಶದಲ್ಲೂ ಅಲ್ಲ-ತೊಡೆಯಮೇಲೆ; ಯಾವುದೇ ಆಯುಧ ಬಳಸದೇ ತನ್ನ ಕೈ ಉಗುರಿನಿಂದ ಹಿರಣ್ಯಾಕ್ಷನ ಉದರವನ್ನು ಸೀಳಿ ಕೊಂದ ಭಗವಂತ.  ಚತುರ್ಮುಖ ಕೊಟ್ಟ ವರಕ್ಕೆ ಯಾವುದೇ ಭಂಗ ಬಾರದಂತೆ  ಅದನ್ನು  ಉಳಿಸಿ, ದುಷ್ಟ ಸಂಹಾರ ಮಾಡಿದ ಭಗವಂತನ ವಿಶಿಷ್ಟ ರೂಪ ಈ ನರಸಿಂಹ ರೂಪ.]

No comments:

Post a Comment