ಸುರಾಸುರಾಣಾಮುದಧಿಂ ವಿಮಥ್ನತಾಂ ದಧಾರ ಪೃಷ್ಠೇನ ಗಿರಿಂ ಸ ಮನ್ದರಮ್ ।
ವರಪ್ರದಾನಾದಪರೈರಧಾರ್ಯ್ಯಂ ಹರಸ್ಯ ಕೂರ್ಮ್ಮೋ ಬೃಹದಣ್ಡವೋಢಾ ॥೩.೪೬॥
ಎರಡು ಸಲ ಸಮುದ್ರ ಮಥನವಾಗಿದೆ. ಈ ರೀತಿಯ ಮಥನದಲ್ಲಿ
ದೇವತೆಗಳು ಹಾಗೂ ದೈತ್ಯರು ಸಮುದ್ರವನ್ನು ಕಡೆಯಬೇಕಾದರೆ, ಅವರ ಸಹಾಯಕ್ಕಾಗಿ
ಬೆನ್ನಿನಲ್ಲಿ ಮಂದರ ಪರ್ವತವನ್ನು ಭಗವಂತ ಕೂರ್ಮರೂಪಿಯಾಗಿ ಹೊತ್ತಿದ್ದಾನೆ. ಶಿವನ ವರದಿಂದಾಗಿ* ಉಳಿದವರಿಗೆ ಎತ್ತಲು ಅಸಾಧ್ಯವಾದ
ಮಂದರವನ್ನು, ಭಗವಂತ ಸ್ವಯಂ ಹೊತ್ತು ತಂದ. [*ಪುರಾಣಗಳಲ್ಲಿ
ಹೇಳುವಂತೆ: ಮಂದರ ಪರ್ವತದ ಅಭಿಮಾನಿ ದೇವತೆಗೆ ಶಿವ ವರವನ್ನು ನೀಡಿದ್ದ. ಈ ವರದಂತೆ ದೈತ್ಯ-ದೇವತೆ
ಇತ್ಯಾದಿ ಯಾರಿಂದಲೂ ಮಂದರವನ್ನು ಎತ್ತುವುದು ಅಸಾಧ್ಯ. ಅಷ್ಟು ಭಾರ ಆ ಪರ್ವತ. ಹೀಗಿರುವಾಗ ಭಗವಂತನೇ ಬಂದು ಮಂದರವನ್ನು
ಎತ್ತುತ್ತಾನೆ. ಆ ಕಾಲದಲ್ಲಿ ಪರ್ವತವನ್ನು
ಎತ್ತಲು ಹೋಗಿ ಸೋತ ಇಂದ್ರಾದಿ ದೇವತೆಗಳನ್ನು ಸಂತೈಸಿದ ಭಗವಂತ, ಗರುಡ ವಾಹನನಾಗಿ ಮಂದರವನ್ನು
ಎತ್ತಿ ತಂದು ಕ್ಷೀರಸಾಗರದಲ್ಲಿಡುತ್ತಾನೆ. ಇಡೀ
ಬ್ರಹ್ಮಾಂಡವನ್ನು ಹೊತ್ತ ಭಗವಂತನಿಗೆ ಮಂದರ ಪರ್ವತ
ಯಾವ ಲೆಕ್ಕ ಎನ್ನುವ ಧ್ವನಿ ಇಲ್ಲಿದೆ].
[(**)ಇದು ಸಮುದ್ರಮಥನದ ಕಥೆ. ಕಡೆಯಲು ಇಲ್ಲಿ ಮಂದರವನ್ನೇ
ಕಡೆಗೋಲಾಗಿ ಬಳಸಲಾಯಿತು. ಮಂದರ ಪರ್ವತ ಕಡಲಲ್ಲಿ ಮುಳುಗಿಹೋಗದಂತೆ ಎತ್ತಿ ಹಿಡಿದವ ಕೂರ್ಮರೂಪಿ
ಭಗವಂತ. ಈ ಮಥನ ನಡೆದಿರುವುದು ಭೂಮಿಯಲ್ಲಿ ಅಲ್ಲ. ಇಲ್ಲಿ ಸಮುದ್ರ ಎಂದರೆ ಅದು ಕ್ಷೀರ
ಸಮುದ್ರ. ಸೂಕ್ಷ್ಮಪ್ರಪಂಚದಲ್ಲಿ
ಸೂಕ್ಷ್ಮಜೀವಿಗಳಿಂದ ನಡೆದ ಮಥನವಿದು.
ಈ ಸಮುದ್ರ ಮಥನವನ್ನು
ನಮ್ಮ ಪಿಂಡಾಂಡದಲ್ಲಿ ಅನ್ವಯ ಮಾಡಿ
ನೋಡಿದರೆ: ಇದು ನಮ್ಮ ಹೃದಯ ಸಮುದ್ರದಲ್ಲಿ
ನಡೆಯಬೇಕಾದ ಶಾಸ್ತ್ರಗಳ ಮಥನ. ನಾವು
ನಮ್ಮ ಕುಂಡಲಿಯಲ್ಲಿನ ವಾಸುಕಿಯನ್ನು ಮನಸ್ಸೆಂಬ ಮಂದರ ಪರ್ವತಕ್ಕೆ ಸುತ್ತಿ ಮಥನ ಮಾಡಬೇಕು. ಹೀಗೆ
ಮಥನ ಮಾಡುವಾಗ ಮನಸ್ಸು ಕುಸಿಯದಂತೆ ಭಗವಂತನ ಆಶ್ರಯ ಪಡೆಯಬೇಕು. ಈ ರೀತಿ ಶಾಸ್ತ್ರಗಳ ಮಥನ ಮಾಡಿದಾಗ ಮೊದಲು ಬರುವುದು ಸಂಶಯ/ಅಪನಂಬಿಕೆ
ಎನ್ನುವ ವಿಷ. ಹೃದಯದಲ್ಲಿನ ಈ ವಿಷವನ್ನು
ಮೊದಲು ಹೊರಕ್ಕೆ ತೆಗೆಯಬೇಕು. ಆನಂತರ ಅಧ್ಯಾತ್ಮದ ಅಮೃತಕ್ಕಾಗಿ ಮಥನ ನಮ್ಮೊಳಗಿರುವ
ದೇವಾಸುರರಿಂದ ನಿರಂತರ ನಡೆಯಬೇಕು.
ಇದು ಎಂದೋ ನಡೆದು ಹೋದ ಸಮುದ್ರ ಮಥನವಷ್ಟೇ ಅಲ್ಲ. ಅನುದಿನ
ನಮ್ಮೊಳಗೆ ನಡೆಯಬೇಕಾದ ಮಥನ. ಇದನ್ನೇ ಪುರಂದರದಾಸರು “ಏಳು ಸಮುದ್ರ ಮಥನವ ಮಾಡು ಓ
ಶೇಷಶಯನನೇ” ಎಂದಿದ್ದಾರೆ. ನಮ್ಮ ದೇಹದೊಳಗೆ ಏಳು ಸಮುದ್ರಗಳಿವೆ.
ಇವೇ ಏಳು ಶಕ್ತಿಚಕ್ರಗಳು(spiritual centers/ನಿರ್ನಾಳ ಗ್ರಂಥಿಗಳು). ಇದರಲ್ಲಿ
ಮೊದಲನೆಯದ್ದು ನಮ್ಮ ಮಲ-ಮೂತ್ರದ್ವಾರದ ಮಧ್ಯದಲ್ಲಿರುವ 'ಮೂಲಾಧಾರ ಚಕ್ರ'. ಇದೇ 'ಉಪ್ಪಿನ ಸಮುದ್ರ'. ಎರಡನೆಯದ್ದು ಹೊಕ್ಕುಳಿನಿಂದ ಸ್ವಲ್ಪ ಕೆಳಗಿರುವ 'ಸ್ವಾಧಿಷ್ಠಾನಚಕ್ರ'; ಇದು 'ಕಬ್ಬಿನಹಾಲಿನ ಸಮುದ್ರ'. ಇದು ಬದುಕಿನಲ್ಲಿ ಐಹಿಕ ಸುಖದ ಖುಷಿ
ಕೊಡುವ ಚಕ್ರ. ಇದಕ್ಕೂ ಮೇಲೆ ಹೊಕ್ಕುಳಿನ ಭಾಗದಲ್ಲಿ 'ಮಣಿಪೂರ ಚಕ್ರವಿದೆ. ಇದು ಕಾಮದ
ಅಮಲಿನ ಸುಖ ಕೊಡುವ 'ಸುರ ಸಮುದ್ರ'. ಇದಕ್ಕೂ ಮೇಲೆ 'ಅನಾಹತ ಚಕ್ರ'. ಇದನ್ನೇ ತುಪ್ಪ/ಬೆಣ್ಣೆಯ ಸಮುದ್ರ
ಅಥವಾ ಹೃದಯ ಸಮುದ್ರ ಎನ್ನುತ್ತಾರೆ. ಇಲ್ಲಿಂದ ಮೇಲೆ ಅಧ್ಯಾತ್ಮದ ವಿಶ್ವ (Spiritual
world) ತೆರೆದುಕೊಳ್ಳುತ್ತದೆ. ಮೊತ್ತ ಮೊದಲು ಭಕ್ತಿಯ ನವನೀತವನ್ನು ಹೃದಯದಲ್ಲಿ ತುಂಬಿ
ಭಗವಂತನಿಗೋಸ್ಕರ ಕಾಯುವ ಸಾಧನೆ ಪ್ರಾರಂಭವಾಗುವುದೇ ಇಲ್ಲಿಂದ. ಇನ್ನೂ ಮೇಲಕ್ಕೆ ಹೋದರೆ 'ವಿಶುದ್ಧಿಚಕ್ರ'. ಇದು ಮೊಸರಿನ ಸಮುದ್ರ. ಇಲ್ಲಿ
ಜ್ಞಾನಿಯು ತ್ರಿಕಾಲದರ್ಶಿಯಾಗುತ್ತಾನೆ. ಅದರಿಂದಾಚೆಗೆ ಕ್ಷೀರಸಾಗರ ಅಥವಾ ಆಜ್ಞಾಚಕ್ರ. ಇದು
ಭ್ರೂ- ಮಧ್ಯದಲ್ಲಿ ಭಗವಂತನನ್ನು ಕಾಣುವಂತಹದ್ದು. ಇದೇ ಕ್ಷೀರಶಾಯಿಯಾದ ಭಗವಂತನ ದರ್ಶನ. ಇದರಿಂದಾಚೆಗೆ ಸಹಸ್ರಾರ ಅಥವಾ ಅಮೃತಸಾಗರ. ಇವು ಮನುಷ್ಯನ
ಬದುಕನ್ನು ನಿರ್ಧರಿಸುವ ಏಳು ಮಹಾಸಮುದ್ರಗಳು. ಇಂತಹ ಅಂತರಂಗದ ಸಮುದ್ರದಲ್ಲಿ ನೆಲೆಸಿ ನಮ್ಮನ್ನು
ಎತ್ತರಕ್ಕೇರಿಸುವ ಭಗವಂತ ಮಹೋದಧಿಶಯಃ. ನಮ್ಮೊಳಗಿನ ದೇವಾಸುರರಿಂದ ಮಥನ ನಡೆದು, ವಿಷ ಕಳೆದು ಅಮೃತ
ಬರಲು ನಮಗೆ ಈ ಭಗವಂತನ ನೆರವು ಬೇಕು. ಕೂರ್ಮನಾಗಿ, ಮೂಲಾಧಾರನಾಗಿ ನಿಂತು ಆತ ನಡೆಸಬೇಕು. ಸಪ್ತಸಾಗರಗಳ ಮಥನ ನಡೆದಾಗ ಅಲ್ಲಿ ಅಮೃತಕಲಶ ಹಿಡಿದು ಧನ್ವಂತರಿ
ಮೇಲೆದ್ದು ಬರುತ್ತಾನೆ].
ವರಾದಜೇಯತ್ವಮವಾಪ ದೈತ್ಯರಾಟ್ ಚತುರ್ಮ್ಮುಖಸ್ಯೈವ ಬಲಿರ್ಯ್ಯದಾ ತದಾ ।
ಅಜಾಯತೇನ್ದ್ರಾವರಜೋsದಿತೇಃ ಸುತೋ ಮಹಾನಜೋsಪ್ಯಬ್ಜಭವಾದಿಸಂಸ್ತುತಃ ॥೩.೪೭॥
ದೈತ್ಯರ ಒಡೆಯನಾದ ಬಲಿಯು ಚತುರ್ಮುಖನ ವರದಿಂದ ಅಜೇಯತ್ವವನ್ನು
ಹೊಂದಿದಾಗ, ಭಗವಂತ ಅದಿತಿಯಲ್ಲಿ ಇಂದ್ರನ ತಮ್ಮನಾಗಿ ಹುಟ್ಟಿದನು. ಹುಟ್ಟಿದೊಡನೆ ದೇವತೆಗಳಿಂದ ಸಂಸ್ತುತನಾದನು.
ಸ ವಾಮನಾತ್ಮಾsಸುರಭೂಭೃತೋsಧ್ವರಂ ಜಗಾಮ ಗಾಂ ಸನ್ನಮಯನ್ ಪದೇಪದೇ ।
ಜಹಾರ ಚಾಸ್ಮಾಚ್ಛಲತಸ್ತ್ರಿವಿಷ್ಟಪಂ ತ್ರಿಭಿಃ ಕ್ರಮೈಸ್ತಚ್ಚ ದದೌ ನಿಜಾಗ್ರಜೇ ॥೩.೪೮॥
ಈ ರೀತಿ ಅವತರಿಸಿದ
ನಾರಾಯಣನು ವಟುವಿನ ವೇಷವನ್ನು ಧರಿಸಿ,
ಬಲಿಯು ಯಜ್ಞ ನೆಡೆಸುತ್ತಿದ್ದಲ್ಲಿಗೆ ಭೂಮಿಯನ್ನೇ
ಭಾಗಿಸುತ್ತಾ ತೆರಳಿದನು. ಅವನಲ್ಲಿ ದಾನದ ನೆಪವೊಡ್ಡಿ, ಮೂರು ಹೆಜ್ಜೆಗಳಿಂದ ಮೂರು ಲೋಕವನ್ನು
ಪಡೆದ ಭಗವಂತ, ಅದನ್ನು ತನ್ನ ಅಣ್ಣನಾದ ಇಂದ್ರನಿಗಾಗಿ ನೀಡಿದನು.
ಪಿತಾಮಹೇನಾಸ್ಯ ಪುರಾ ಹಿ ಯಾಚಿತೋ ಬಲೇಃ ಕೃತೇ ಕೇಶವ ಆಹ ಯದ್ ವಚಃ ।
ನಾಯಾಚ್ಞಯಾsಹಂ ಪ್ರತಿಹನ್ಮಿ ತಂ ಬಲಿಂ ಶುಭಾನನೇತ್ಯೇವ ತತೋsಭ್ಯಯಾಚತ ॥೩.೪೯॥
ದೇವರು ಏಕೆ ದಾನವನ್ನು ಕೇಳಿ ಬಲಿಯನ್ನು ನಿಗ್ರಹಿಸಿದ?
ಬಲಾತ್ಕಾರದಿಂದ ಸೋಲಿಸಿ ಏಕೆ ತೆಗೆದುಕೊಳ್ಳಲಿಲ್ಲ
ಎನ್ನುವ ಪ್ರಶ್ನೆಗೆ ಆಚಾರ್ಯರು ಇಲ್ಲಿ ಉತ್ತರಿಸಿದ್ದಾರೆ. ಈ ರೀತಿ ಮಾಡಲು ಕಾರಣ ಪ್ರಹ್ಲಾದ. ಪ್ರಹ್ಲಾದ ಭಗವಂತನಲ್ಲಿ “ನನ್ನ ವಂಶದ ಮೇಲೆ ನಿನ್ನ ಅನುಗ್ರಹ ಇರಲಿ” ಎಂದು ಕೇಳಿಕೊಂಡಿದ್ದರಿಂದ, ಬಲಿ ತಪ್ಪು ಮಾಡಿದ್ದರೂ ಕೂಡಾ
ಆತನನ್ನು ನಿಗ್ರಹಿಸಿ ತುಳಿಯಲಿಲ್ಲ. ಬದಲಿಗೆ ಆತನಲ್ಲಿ ಭಿಕ್ಷೆ ಬೇಡುವ ನೆಪದಿಂದ ಆತನ ತಲೆಯ ಮೇಲೆ
ತನ್ನ ಪಾದವನ್ನಿತ್ತು ಅನುಗ್ರಹಿಸಿದ. ಇದು ಭಗವಂತನ ಭಕ್ತೋದ್ಧಾರಕ ಪರಿ.
[(**)ಈ ರೀತಿ ಇಂದ್ರ ಪದವಿಯನ್ನು ಆಕ್ರಮಿಸಿ ಕುಳಿತಿದ್ದ
ಬಲಿಯನ್ನು ಕೆಳಗಿಳಿಸಿ, ಇಂದ್ರನಿಗೆ ಪದವಿಯನ್ನು ಮರಳಿ ನೀಡಿದ ಭಗವಂತ, ಬಲಿಗೆ ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿಯನ್ನು ಅನುಗ್ರಹಿಸಿದ.
ಇಲ್ಲಿ ನಮಗೆ ತಿಳಿಯುವುದೇನೆಂದರೆ ಬಲಿಗೆ ಇಂದ್ರ ಪದವಿಯೇರುವ ಅರ್ಹತೆ ಇದ್ದಿದ್ದರೂ ಕೂಡಾ, ಸರದಿಗೂ ಮುನ್ನ ಪದವಿಯನ್ನು ಅಪಹರಿಸಿದ್ದು ಆತ ಮಾಡಿದ ತಪ್ಪಾಗಿತ್ತು.
ಬಲಿ ಭಗವಂತನ ಪಾದವನ್ನಿಡಲು ತನ್ನ ತಲೆಯನ್ನೇ ಕೊಟ್ಟ.
ಮನಃಪೂರ್ವಕವಾಗಿ ಸಂತೋಷದಿಂದ ಭಗವಂತನಿಗೆ ತನ್ನನ್ನು ತಾನು ಅರ್ಪಿಸಿಕೊಂಡ. ಇದು ಭಕ್ತಿಯ ಕೊನೇಯ
ಮಜಲಾದ ಆತ್ಮನಿವೇದನ. ಈ ರೀತಿ ತನ್ನಲ್ಲಿ ಭಗವಂತನನ್ನು ಕಂಡು ತನ್ನನ್ನು ಭಗವಂತನಿಗೆ
ಅರ್ಪಿಸಿಕೊಂಡ ಬಲಿಗೆ ಇಂದ್ರ ಪದವಿ ದೊಡ್ಡ ಉಡುಗೊರೆ ಅಲ್ಲ. ಭಗವಂತ ಬಲಿಯ ಭಕ್ತಿಗೆ ಒಲಿದ ಮತ್ತು
ಬಲಿಗೆ ಇದರಿಂದಾಗಿ ಭಗವಂತನ ಲೋಕ ಪ್ರಾಪ್ತಿಯಾಗುವಂತಾಯಿತು. ಮೇಲ್ನೋಟಕ್ಕೆ ಭಗವಂತ ಇಂದ್ರ
ಪದವಿಯನ್ನು ಕಿತ್ತುಕೊಂಡಂತೆ ಕಂಡರೂ ಕೂಡಾ, ಭಗವಂತ
ಬಲಿಗೆ ಎಲ್ಲವನ್ನೂ ಕೊಟ್ಟು ಉದ್ಧಾರ
ಮಾಡುವುದನ್ನು ನಾವು ಕಾಣುತ್ತೇವೆ. ಭಗವಂತ ಕಷ್ಟ ಕೊಡುವುದರಲ್ಲೂ ಉದ್ಧಾರದ ಹೆಜ್ಜೆ ಇದೆ. ಹೀಗಾಗಿ
ಭಗವಂತನ ಪ್ರತಿಯೊಂದು ಹೆಜ್ಜೆಯಲ್ಲೂ ನಾವು ಉದ್ಧಾರದ ಮಜಲನ್ನು ನೋಡಬೇಕೇ ಹೊರತು, ಭಗವಂತ ನನಗೇಕೆ ಕಷ್ಟ ಕೊಟ್ಟ ಎಂದು ಯೋಚಿಸಬಾರದು. ಕಷ್ಟದಲ್ಲೂ ಉದ್ಧಾರದ
ಮೆಟ್ಟಿಲಿದೆ ಎನ್ನುವ ಸತ್ಯವನ್ನು ತಿಳಿದು ನಾವು ಮುನ್ನಡೆಯಬೇಕು.
ಬಲಿ ಚಕ್ರವರ್ತಿಯ ಕಥೆಯನ್ನು ನಾವು ಸ್ವಲ್ಪ ಆಳವಾಗಿ
ವಿಶ್ಲೇಷಿಸಿದರೆ ಇದರ ಹಿಂದಿರುವ ಆಧ್ಯಾತ್ಮಿಕ ಗುಹ್ಯ
ತಿಳಿಯುತ್ತದೆ. ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು.
ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ
ಬಲಿಷ್ಠರಾಗಬೇಕು. ಉಪಾಸನೆಯಲ್ಲಿ ಪ್ರಮುಖವಾಗಿ ಮೂರು ಹೆಜ್ಜೆಗಳಿವೆ. ಮೊದಲನೆಯದು: ಭಗವಂತನ ಪುಟ್ಟ
(ವಾಮನ) ಮೂರ್ತಿಯನ್ನು ದೇವರು ಎಂದು ಪೀಠದಲ್ಲಿ ಆರಾಧಿಸುವುದು; ಎರಡನೆಯದು:
ಉಪಾಸನೆ ಮಾಡುತ್ತಾ-ಮಾಡುತ್ತಾ ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೇ, ಇಡೀ
ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ: ಭಗವಂತ ಸರ್ವಾಂತರ್ಯಾಮಿ, ಆತ
ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆ
ಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಮತ್ತು ಆಗ ಭಗವಂತನ ಪೂರ್ಣಾನುಗ್ರಹ ನಮ್ಮ ಮೇಲಾಗುತ್ತದೆ. ಈ ಮೇಲಿನ ಮೂರು ವಿಕ್ರಮಗಳಿಂದ ಸದಾ ನಮ್ಮನ್ನು ಉದ್ಧರಿಸುವವನು ತ್ರಿವಿಕ್ರಮನಾದ ವಾಮನ ರೂಪಿ
ಭಗವಂತ].
ಬಭೂವಿರೇ ಚನ್ದ್ರಲಲಾಮತೋ ವರಾತ್ ಪುರಾ ಹ್ಯಜೇಯಾ ಅಸುರಾ ಧರಾತಳೇ ।
ತೈರರ್ದ್ದಿತಾ ವಾಸವನಾಯಕಾಃ ಸುರಾಃ ಪುರೋ ನಿಧಾಯಾಬ್ಜಜಮಸ್ತುವನ್
ಹರಿಮ್ ॥೩.೫೦॥
ಆರು ಅವತಾರಗಳ ನಿರೂಪಣೆಯ ನಂತರ ಪರಶುರಾಮಾವತಾರದ
ನಿರೂಪಣೆಯನ್ನು ಇಲ್ಲಿ ಮಾಡಿದ್ದಾರೆ: ಬಹಳ ಹಿಂದೆ ರುದ್ರ ದೇವನ ವರದಿಂದ
ಅಜೇಯರಾಗಿರುವ ದೈತ್ಯರು ಭೂಮಿಯಲ್ಲಿ ಹುಟ್ಟಿದರು. ಅವರಿಂದ ಪೀಡಿತರಾಗಿರುವ ಇಂದ್ರನೇ ಮೊದಲಾದ ದೇವತೆಗಳು
ಬ್ರಹ್ಮದೇವರನ್ನು ಮುಂದಿಟ್ಟುಕೊಂಡು ನಾರಾಯಣನನ್ನು ಸ್ತೋತ್ರಮಾಡಿದರು.
ವಿರಿಞ್ಚಸೃಷ್ಟೈರ್ನ್ನಿತರಾಮವದ್ಧ್ಯೌ ವರಾದ್ ವಿಧಾತುರ್ದ್ದಿತಿಜೌ ಹಿರಣ್ಯಕೌ ।
ತಥಾ ಹಯಗ್ರೀವ ಉದಾರವಿಕ್ರಮಸ್ತ್ವಯಾ ಹತಾ ಬ್ರಹ್ಮಪುರಾತನೇನ ॥೩.೫೧॥
ದೇವತೆಗಳು ನಾರಾಯಣನನ್ನು ಸ್ತೋತ್ರ ಮಾಡುತ್ತಾ ಹೇಳುತ್ತಾರೆ: ಬ್ರಹ್ಮದೇವರ ವರದಿಂದ,
ಬ್ರಹ್ಮದೇವರಿಂದ ಸೃಷ್ಟರಾಗಿರುವ ಯಾವ ಮನುಷ್ಯರಿಂದಾಗಲೀ,
ಯಾವ ದೇವತೆಗಳಿಂದಾಗಲೀ ಖಂಡಿತವಾಗಿ
ವಧ್ಯರಲ್ಲದ ದೈತ್ಯರಾಗಿರುವ ಹಿರಣ್ಯಕಶಿಪು,
ಹಿರಣ್ಯಾಕ್ಷರು, ಹಾಗೇ ಪರಾಕ್ರಮಿಯಾದ ಕುದುರೆ ಮೋರೆಯ ದೈತ್ಯ, ಇತ್ಯಾದಿ ರಾಕ್ಷಸರು ಬ್ರಹ್ಮನಿಗಿಂತಲೂ ಹಿರಿಯನಾದ ನಿನ್ನಿಂದ
ಕೊಲ್ಲಲ್ಪಟ್ಟಿದ್ದಾರೆ.
ಸ ಚಾಸುರಾನ್ ರುದ್ರವರಾದವದ್ಧ್ಯಾನಿಮಾನ್ ಸಮಸ್ತೈರಪಿ ದೇವದೇವ ।
ನಿಃಸೀಮಶಕ್ತ್ಯೈವ ನಿಹತ್ಯ ಸರ್ವಾನ್ ಹೃದಮ್ಬುಜೇ ನೋ ನಿವಸಾಥ ಶಶ್ವತ್ ॥೩.೫೨॥
ಅಂತಹ ನೀನು,
ರುದ್ರನ ವರಬಲದಿಂದಾಗಿ ಬೇರೊಬ್ಬರಿಂದ
ಕೊಲ್ಲಲಾಗದಂತಹ ಈ ಎಲ್ಲಾ ರಾಕ್ಷಸರನ್ನು,
ಎಲ್ಲರಿಗೂ ಮಿಗಿಲಿರುವ ನಿನ್ನ ಶಕ್ತಿಯಿಂದ ಕೊಂದು, ನಮ್ಮ ಹೃದಯಕಮಲದಲ್ಲಿ ನಿರಂತರವಾಗಿ
ವಾಸಮಾಡು.
ಇತ್ಯಾದರೋಕ್ತಸ್ತ್ರಿದಶೈರಜೇಯಃ ಸ ಶಾರ್ಙ್ಗಧನ್ವಾsಥ ಭೃಗುದ್ವಹೋsಭೂತ್ ।
ರಾಮೋ ನಿಹತ್ಯಾಸುರಪೂಗಮುಗ್ರಂ ನದಾನನಾದಿರ್ವಿದಧೇsಸೃಜೈವ ॥೩.೫೩॥
ಈ ರೀತಿಯಾಗಿ ದೇವತೆಗಳಿಂದ ಸ್ತುತಿಸಲ್ಪಟ್ಟ, ಅಜೇಯನಾದ ಶಾರ್ಙ್ಗಧಾರಿ ನಾರಾಯಣನು, ಭೃಗುವಿನ ಕುಲದಲ್ಲಿ ರಾಮ ಎನ್ನುವ ಹೆಸರಿನಿಂದ ಅವತರಿಸಿದನು.
ಕ್ಷತ್ರಿಯರ ವೇಷದಲ್ಲಿ ಇರುವ ಉಗ್ರರಾಗಿರುವ ದೈತ್ಯರನ್ನು ಕೊಂದು, ರಕ್ತದಿಂದಲೇ(ಸಮಂತಪಂಚಕವೆಂಬ) ತೀರ್ಥಗಳನ್ನು ನಿರ್ಮಾಣ
ಮಾಡಿದನು. [ರಕ್ತದಿಂದಲೇ ತೀರ್ಥವನ್ನು ನಿರ್ಮಾಣ ಮಾಡಿದನು ಎನ್ನುವುದರ ಅರ್ಥ ರಕ್ತ-ತೀರ್ಥ ನಿರ್ಮಾಣ ಅಲ್ಲ. ಅದೊಂದು ಆಲಂಕಾರಿಕ ಮಾತು. ಉದಾಹರಣೆಗೆ ‘ರಕ್ತ ಬಸಿದು ನಾನು ದುಡಿಯುತ್ತೇನೆ’ ಅಂದರೆ
–ಕಷ್ಟಪಡುತ್ತೇನೆ ಅಂತ ಹೇಗೆ ಅರ್ಥವೋ, ಹಾಗೇ ಇದೂ ಕೂಡಾ.
ಕ್ಷತ್ರಿಯರು ನಾನಾ ವಿಧದ ಆಯುಧಗಳನ್ನು ಉಪಯೋಗಿಸಿ ಯುದ್ಧ
ಮಾಡುವುದನ್ನು ನಾವು ತಿಳಿದಿದ್ದೇವೆ. ಆದರೆ ಯಾರೂ ಕೊಡಲಿಯನ್ನು ತಮ್ಮ ಆಯುಧವಾಗಿ ಬಳಸಿರುವುದು
ಕಂಡು ಬರುವುದಿಲ್ಲ. ಸಾಮಾನ್ಯವಾಗಿ ಕೊಡಲಿ ಬಳಕೆ ಮರ ಕಡಿಯಲಿಕ್ಕಾಗಿ. ಋಷಿ-ಮುನಿಗಳು ಯಜ್ಞದ ಸಮಿದೆಗಾಗಿ ಕೊಡಲಿಯನ್ನು ಬಳಸುತ್ತಿದ್ದರು. ಬ್ರಾಹ್ಮಣ ವಂಶದಲ್ಲಿ ಅವತರಿಸಿ ಬಂದ ಪರಶುರಾಮ ಇದೇ ಕೊಡಲಿಯನ್ನು ತನ್ನ
ಆಯುಧವನ್ನಾಗಿಸಿಕೊಂಡು ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿದ. ಪರುಶುರಾಮ
ಅವತಾರದ ವಿಸ್ತಾರವಾದ ವಿವರಣೆಯನ್ನು ವ್ಯಾಸರು ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಅಧ್ಯಾಯಗಳಲ್ಲಿ
ನೀಡಿದ್ದಾರೆ].
ತತಃ ಪುಲಸ್ತ್ಯಸ್ಯ ಕುಲೇ ಪ್ರಸೂತೌ ತಾವಾದಿದೈತ್ಯೌ ಜಗದೇಕಶತ್ರೂ ।
ಪರೈರವದ್ಧ್ಯೌ ವರತಃ ಪುರಾ ಹರೇಃ ಸುರೈರಜೈಯೌ ಚ ವರಾದ್ ವಿಧಾತುಃ ॥೩.೫೪॥
ತದನಂತರ ಆದಿದೈತ್ಯರು ಪರಮಾತ್ಮನ ವರದಿಂದ, ಬೇರೊಬ್ಬರಿಂದ
ಅವಧ್ಯರೆನಿಸಿ ಪುಲಸ್ಯನಲ್ಲಿ ಹುಟ್ಟಿದರು. ಬ್ರಹ್ಮದೇವರ ವರದಿಂದ ಅವರನ್ನು ಯಾರಿಂದಲೂ ಜಯಿಸಲು ಸಾಧ್ಯವಾಗುತ್ತಿರಲಿಲ್ಲ.
ಸರ್ವೈರಜೇಯಃ ಸ ಚ ಕುಮ್ಭಕರ್ಣ್ಣಃ ಪುರಾತನೇ ಜನ್ಮನಿ ಧಾತುರೇವ ।
ವರಾನ್ನರಾದೀನೃತ ಏವ ರಾವಣಸ್ತದಾತನಾತ್ ತೌ ತ್ರಿದಶಾನಬಾಧತಾಮ್ ॥೩.೫೫॥
ಕುಂಭಕರ್ಣನು ಬ್ರಹ್ಮದೇವರ ವರದಿಂದ ಎಲ್ಲರಿಂದಲೂ ಅಜೇಯನೆನಿಸಿದ್ದನು. ರಾವಣನು ಮನುಷ್ಯರನ್ನು
ಬಿಟ್ಟು ಎಲ್ಲರಿಂದ ಅವಧ್ಯ-ಅಜೇಯನಾಗಿ ಇದ್ದನು. ಇವರಿಬ್ಬರೂ ದೇವತೆಗಳನ್ನು ಅತಿಯಾಗಿ ಪೀಡಿಸುತ್ತಿದ್ದರು.
ತದಾsಬ್ಜಜಂ ಶೂಲಿನಮೇವ ಚಾಗ್ರತೋ ನಿಧಾಯ
ದೇವಾಃ ಪುರುಹೂತಪೂರ್ವಕಾಃ ।
ಪಯೋಮ್ಬುಧೌ ಭೋಗಿಪಭೋಗಶಾಯಿನಂ
ಸಮೇತ್ಯ ಯೋಗ್ಯಾಂ ಸ್ತುತಿಮಭ್ಯಯೋಜಯನ್ ॥೩.೫೬॥
ಈ ರೀತಿ ರಾವಣ-ಕುಂಭಕರ್ಣರಿಂದ ಪೀಡಿತರಾದ ಇಂದ್ರ ಮೊದಲಾದ
ದೇವತೆಗಳು ಬ್ರಹ್ಮ-ರುದ್ರರನ್ನು ಮುಂದೆ
ಇಟ್ಟುಕೊಂಡು, ಕ್ಷೀರಸಾಗರದಲ್ಲಿ ಹಾವಿನ ಮೇಲೆ ಮಲಗಿರುವ ಪರಮಾತ್ಮನನ್ನು ಸೇರಿ ಯೋಗ್ಯವಾದ ಸ್ತೋತ್ರವನ್ನು ಮಾಡಿದರು.
ತ್ವಮೇಕ ಈಶಃ ಪರಮಃ ಸ್ವತನ್ತ್ರಸ್ತ್ವಮಾದಿರನ್ತೋ
ಜಗತೋ ನಿಯೋಕ್ತಾ ।
ತ್ವದಾಜ್ಞಯೈವಾಖಿಲಮಮ್ಬುಜೋದ್ಭವಾ ವಿತೇನಿರೇsಗ್ರ್ಯಾಶ್ಚರಮಾಶ್ಚ ಯೇsನ್ಯೇ ॥೩.೫೭॥
ನೀನೊಬ್ಬನೇ ಸ್ವತಂತ್ರನಾದ ಒಡೆಯ. ಈ ಜಗತ್ತಿಗೆ ನೀನೇ ಮೊದಲು,
ನೀನೇ ಅಂತ. ಜಗತ್ತಿನ ಪ್ರೇರಕನು
ನೀನು. ನಿನ್ನ ಆಜ್ಞೆಯಿಂದಲೇ ಎಲ್ಲಾ
ಬ್ರಹ್ಮಂದಿರು ಎಲ್ಲಾ ಬ್ರಹ್ಮಾಂಡವನ್ನು
ನಿರ್ಮಿಸುತ್ತಾರೆ. ಮುಂದೆ ಬರುವವರಾಗಲೀ, ಹಿಂದೆ
ಆಗಿ ಹೋದವರಾಗಲೀ, ಈಗ ಇರುವವರು ಯಾರೇ ಆಗಿರಲೀ.
ಮನುಷ್ಯಮಾನಾತ್ ತ್ರಿಶತಂ ಸಷಷ್ಟಿಕಂ ದಿವೌಕಸಾಮೇಕಮುಶನ್ತಿ ವತ್ಸರಮ್ ।
ದ್ವಿಷಟ್ಸಹಸ್ರೈರಪಿ ತೈಶ್ಚತುರ್ಯ್ಯುಗಂ ತ್ರೇತಾದಿಭಿಃ ಪಾದಶ ಏವ ಹೀನೈಃ ॥೩.೫೮॥
ಮನುಷ್ಯ ಮಾನದ
೩೬೦ ವರ್ಷಗಳು ದೇವತೆಗಳಿಗೆ ಒಂದು ವರುಷ . ದೇವತೆಗಳ ಮಾನದ ೧೨೦೦೦ ವರ್ಷಗಳು
ಮನುಷ್ಯ ಮಾನದಲ್ಲಿ ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳೆಂಬ ನಾಲ್ಕು
ಯುಗಗಳಾಗುತ್ತವೆ. ಒಂದು ಯುಗದಿಂದ ಇನ್ನೊಂದು ಯುಗಕ್ಕೆ
ಅದು ಕ್ರಮೇಣ ೧/೪ ರಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತಾ ಬರುತ್ತದೆ.
[೧ ಮಾನವವರ್ಷ= ದೇವತೆಗಳ ೧ ದಿನ (ಉತ್ತರಾಯಣ ಹಗಲು ಮತ್ತು
ದಕ್ಷಿಣಾಯಣ ರಾತ್ರಿ)
೩೬೦ ಮಾನವವರ್ಷ(ಮಾ. ವ.)=ದೇವತೆಗಳ ೩೬೦ ದಿನ=೧ ದೇವ ವರ್ಷ(ದೇ.
ವ.)
೧೨೦೦೦ ದೇ.ವ. = ೪ ಯುಗಗಳು= ೧೨೦೦೦x ೩೬೦= ೪೩, ೨೦,೦೦೦ ಮಾ.
ವ.
ಕೃತಯುಗ= ೪೮೦೦ ದೇ. ವ.= ೪೮೦೦ x ೩೬೦ = ೧೭,೨೮,೦೦೦ ಮಾ. ವ.
ತ್ರೇತಾಯುಗ= ೩೬೦೦ ದೇ. ವ = ೩೬೦೦x ೩೬೦= ೧೨,೯೬, ೦೦೦ ಮಾ.
ವ.
ದ್ವಾಪರಯುಗ= ೨೪೦೦ ದೇ. ವ = ೨೪೦೦x ೩೬೦ = ೮,೬೪,೦೦೦ ಮಾ. ವ.
ಕಲಿಯುಗ= ೧೨೦೦ ದೇ. ವ = ೧೨೦೦x ೩೬೦= ೪,೩೨,೦೦೦ ಮಾ. ವ.
ಯುಗ ಸಂಧಿ ಕಾಲಗಳು(ಪೂರ್ವೋತ್ತರ ಸಂಧಿಕಾಲ) ಹೀಗಿವೆ:
ಕೃತ: ೮೦೦ ದೇ.
ವ. =೨,೮೮,೦೦೦ ಮಾ. ವ.
ತ್ರೇತಾ: ೬೦೦ ದೇ. ವ. = ೨,೧೬,೦೦೦ ಮಾ. ವ.
ದ್ವಾಪರ : ೪೦೦ ದೇ. ವ. = ೧,೪೪,೦೦೦ ಮಾ. ವ.
ಕಲಿ: ೨೦೦ ದೇ. ವ. = ೭೨,೦೦೦ ಮಾ.ವ.]
ಸಹಸ್ರವೃತ್ತಂ ತದಹಃ ಸ್ವಯಮ್ಭುವೋ ನಿಶಾ ಚ ತನ್ಮಾನಮಿತಂ ಶರಚ್ಛತಮ್ ।
ತ್ವದಾಜ್ಞಯಾ ಸ್ವಾನನುಭೂಯ ಭೋಗಾನುಪೈತಿ ಸೋsಪಿ
ತ್ವರಿತಸ್ತ್ವದನ್ತಿಕಮ್ ॥೩.೫೯॥
ಸಾವಿರ ವರ್ಷಗಳು ಈ ರೀತಿ ಕಳೆದರೆ ಅದು ಬ್ರಹ್ಮದೇವರ ಒಂದು
ಹಗಲು. ರಾತ್ರಿಯೂ ಕೂಡಾ ಅಷ್ಟೇ. “ನಿನ್ನ ಆಜ್ಞೆಯಿಂದ ಇಂತಹ ಅಹೋ-ರಾತ್ರಿಗಳನ್ನೊಳಗೊಂಡ ನೂರು
ವರ್ಷಗಳ ಕಾಲ ಅನುಭವಿಸುವ ಬ್ರಹ್ಮದೇವರು, ಬೇಗ
ನಿನ್ನ ಬಳಿಗೆ ಬರುತ್ತಾರೆ” ಎಂದು ದೇವತೆಗಳು
ಸ್ತುತಿಸಿದ್ದಾರೆ.
[ಬ್ರಹ್ಮದೇವರ ಹಗಲು= ೪೩, ೨೦,೦೦೦x೧೦೦೦=೪೩೨,೦೦,೦೦,೦೦೦ ಮಾ.
ವ.
ಬ್ರಹ್ಮದೇವರ ಒಂದು ದಿನ= ೮೬೪ ,೦೦,೦೦,೦೦೦ ಮಾ. ವ.
ಬ್ರಹ್ಮದೇವರ ನೂರು ವರ್ಷಗಳು=
೮೬೪ ,೦೦,೦೦,೦೦೦x೩೬೦x೧೦೦=೩೧,೧೦೪,೦೦,೦೦,೦೦೦,೦೦೦ ಮಾ.ವ.]
ಹೀಗಾಗಿ ಬ್ರಹ್ಮದೇವರ ಆಯಸ್ಸು (ಪರಕಾಲ) ಮೂವತ್ತೊಂದು ಸಾವಿರದ
ನೂರಾ ನಾಲ್ಕು ಸಾವಿರ ಕೋಟಿ) ಮಾನವ ವರ್ಷಗಳು].
ತ್ವಯಾ ಪುರಾ ಕರ್ಣ್ಣಪುಟಾದ್ ವಿನಿರ್ಮ್ಮಿತೌ ಮಹಾಸುರೌ ತೌ ಮಧುಕೈಟಭಾಖ್ಯೌ ।
ಪ್ರಭಞ್ಜನಾವೇಶವಶಾತ್ ತವಾsಜ್ಞಯಾ ಬಲೋದ್ಧತಾವಾಶು ಜಲೇ ವ್ಯವರ್ದ್ಧತಾಮ್ ॥೩.೬೦॥
ನಿನ್ನಿಂದ ಹಿಂದೆ ಕರ್ಣಪುಟದಿಂದ ನಿರ್ಮಿಸಲ್ಪಟ್ಟ ಮಧುಕೈಟಭ
ಎನ್ನುವ ಹೆಸರಿನ ಅಸುರರು, ಮುಖ್ಯಪ್ರಾಣನ ಆವೇಶದಿಂದ ದೇವತೆಗಳನ್ನು ಹಿಂಸೆ ಮಾಡಲಾರಂಭಿಸಿದರು.
ನಿನ್ನ ಆಜ್ಞೆಯಂತೆ ಬಲದಿಂದ ಉದ್ಧತರಾಗಿ ಪ್ರಳಯಜಲದಲ್ಲಿ ಬೆಳೆದರು.
ತ್ವದಾಜ್ಞಯಾ ಬ್ರಹ್ಮವರಾದವದ್ಧ್ಯೌ ಚಿಕ್ರೀಡಿಷಾಸಮ್ಭವಯಾ ಮುಖೋದ್ಗತಾನ್ ।
ಸ್ವಯಮ್ಭುವೋ ವೇದಗಣಾನಹಾರ್ಷತಾಂ ತದಾsಭವಸ್ತ್ವಂ ಹಯಶೀರ್ಷ ಈಶ್ವರಃ ॥೩.೬೧॥
ನಿನ್ನ ಆಜ್ಞೆಯಿಂದ ಹಾಗೂ ಬ್ರಹ್ಮ ವರದಿಂದ
ಅವಧ್ಯರಾಗಿರುವ ಅವರು, ಕ್ರೀಡಿಸುವ ಇಚ್ಚೆಯಿಂದ
ಬ್ರಹ್ಮನ ಮುಖದಿಂದ ಹೊರಬಂದ ವೇದಾಭಿಮಾನಿ ದೇವತೆಗಳನ್ನು ಅಪಹರಿಸಿದರು. ಆಗ ನೀನು ಹಯಗ್ರೀವನಾದೆ.
ಆಹೃತ್ಯ ವೇದಾನಖಿಲಾನ್ ಪ್ರದಾಯ ಸ್ವಯಮ್ಭುವೇ ತೌ ಚ ಜಘನ್ಥ ದಸ್ಯೂ ।
ನಿಷ್ಪೀಡ್ಯ ತಾವೂರುತಳೇ ಕರಾಭ್ಯಾಂ ತನ್ಮೇದಸೈವಾsಶು ಚಕರ್ತ್ಥ ಮೇದಿನೀಮ್ ॥೩.೬೨॥
ಅಪಹರಿಸಲ್ಪಟ್ಟ ಎಲ್ಲಾ ವೇದಗಳನ್ನು ಬ್ರಹ್ಮನಿಗಿತ್ತು, ಆ
ಕಳ್ಳರನ್ನು ಕೊಂದೆ. ಅವರನ್ನು ನಿನ್ನ ತೊಡೆಯ ಪ್ರದೇಶದಲ್ಲಿಟ್ಟು , ಕೈಗಳಿಂದ ಹೊಸಕಿ ಹಾಕಿ, ಅವರ ಕೊಬ್ಬಿನಿಂದ ಭೂಮಿಯನ್ನು ಮಾಡಿದೆ.
ಏವಂ ಸುರಾಣಾಂ ಚ ನಿಸರ್ಗ್ಗಜಂ ಬಲಂ ತಥಾsಸುರಾಣಾಂ ವರದಾನಸಮ್ಭವಮ್ ।
ವಶೇ ತವೈತದ್ ದ್ವಯಮಪ್ಯತೋ ವಯಂ ನಿವೇದಯಾಮಃ ಪಿತುರೇವ ತೇsಖಿಲಮ್ ॥೩.೬೩॥
“ಹೀಗೆ ದೇವತೆಗಳ ಸ್ವಾಭಾವಿಕವಾದ ಬಲ ಮತ್ತು ದೈತ್ಯರಲ್ಲಿನ
ವರಬಲ, ಇವೆರಡೂ ಕೂಡಾ ನಿನ್ನ ವಶದಲ್ಲಿ ಇದೆ. ಆ ಕಾರಣದಿಂದ ತಂದೆಯೆನಿಸಿಕೊಂಡಿರುವ ನಿನಗೆ ಎಲ್ಲವನ್ನೂ
ಒಪ್ಪಿಸುತ್ತೇವೆ” ಎಂದು
ಸ್ತುತಿಸಿದ ದೇವತೆಗಳು ಈಗ ಭಗವಂತನಿಂದ ತಮಗೆ ಏನು
ಬೇಕು ಎನ್ನುವುದನ್ನು ಕೇಳುತ್ತಾರೆ:
ಇಮೌ ಚ ರಕ್ಷೋಧಿಪತೀ ವರೋದ್ಧತೌ ಜಹಿ ಸ್ವವೀರ್ಯ್ಯೇಣ ನೃಷು ಪ್ರಭೂತಃ ।
ಇತೀರಿತೇ ತೈರಖಿಲೈಃ ಸುರೇಶ್ವರೈರ್ಬಭೂವ ರಾಮೋ ಜಗತೀಪತಿಃ ಪ್ರಭುಃ
॥೩.೬೪॥
“ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪುಗಳು ವರದಿಂದ ಅವದ್ಯರಾದ ರಾವಣ-ಕುಂಭಕರ್ಣರಾಗಿದ್ದಾರೆ. ಅವರನ್ನು ಮನುಷ್ಯರಲ್ಲಿ ಹುಟ್ಟಿದವನಾಗಿ, ನಿನ್ನ ಪರಾಕ್ರಮದಿಂದ ಸಂಹರಿಸು” ಎಂದು ದೇವತೆಗಳು
ಪ್ರಾರ್ಥಿಸುತ್ತಾರೆ. ಈ ರೀತಿಯಾಗಿ ಎಲ್ಲಾ
ದೇವತೆಗಳಿಂದ ಪ್ರಾರ್ಥಿಸಲ್ಪಟ್ಟವನಾಗಿ ಜಗದೊಡೆಯನಾದ ನಾರಾಯಣನು ರಾಮಚಂದ್ರನಾಗಿ ಅವತರಿಸಿದನು.
No comments:
Post a Comment