ಅಥಾsತ್ಮಜಾಭ್ಯಾಂ ಸಹಿತಃ ಸಭಾರ್ಯ್ಯೋ ಯಯೌ
ಗಜಸ್ಯನ್ದನಪತ್ತಿಯುಕ್ತಯಾ ।
ಸ್ವಸೇನಯಾsಗ್ರೇ ಪ್ರಣಿಧಾಯ ಧಾತೃಜಂ
ವಸಿಷ್ಠಮಾಶ್ವೇವ ಸ ಯತ್ರ ಮೈಥಿಲಃ ॥೪.೩೧॥
ಈ ಸಂತಸದ ಸುದ್ದಿಯನ್ನು ಕೇಳಿದ ಕೂಡಲೇ ದಶರಥನು ಭರತ-ಶತ್ರುಘ್ನರು ಮತ್ತು ತನ್ನೆಲ್ಲಾ ಹೆಂಡಿರೊಡಗೂಡಿ,
ಆನೆ, ರಥ, ಕಾಲಾಳು ಇವರಿಂದ ಕೂಡಿದ ತನ್ನ ಸೇನೆಯೊಂದಿಗೆ ಬ್ರಹ್ಮದೇವರ ಮಾನಸ ಪುತ್ರನಾದ
ವಸಿಷ್ಠರನ್ನು ಮುಂದೆಮಾಡಿಕೊಂಡು ಮಿಥಿಲಾ ನಗರಕ್ಕೆ
ಹೊರಟನು.
‘ಸ ಮೈಥಿಲೇನಾತಿತರಾಂ ಸಮರ್ಚ್ಚಿತೋ ವಿವಾಹಯಾಮಾಸ ಸುತಂ ಮುದಮ್ಭರಃ ।
ಪುರೋಹಿತೋ ಗಾಧಿಸುತಾನುಮೋದಿತೋ ಜುಹಾವ ವಹ್ನಿಂ ವಿಧಿನಾ ವಸಿಷ್ಠಃ
॥೪.೩೨॥
ದಶರಥನು ಜನಕರಾಜನಿಂದ ಚೆನ್ನಾಗಿ ಅರ್ಚಿತನಾಗಿ, ಆನಂದದಿಂದ ತುಂಬಿ, ಮಗನ ಮದುವೆಗೆ ಕಾರಣನಾದನು.
ವಿಶ್ವಾಮಿತ್ರರಿಂದ ಪ್ರೇರಿತರಾದ ವಸಿಷ್ಠರೇ
ವಿಧಿಪೂರ್ವಕವಾಗಿ ಹೋಮ ಮಾಡಿ ಮದುವೆ
ನೆರವೇರಿಸಿದರು.
ತದಾ ವಿಮಾನಾವಲಿಭಿರ್ನ್ನಭಸ್ತಳಂ ದಿದೃಕ್ಷತಾಂ ಸಙ್ಕುಲಮಾಸ ನಾಕಿನಾಂ ।
ಸುರಾನಕಾ ದುನ್ದುಭಯೋ ವಿನೇದಿರೇ’ ಜಗುಶ್ಚ ಗನ್ಧರ್ವವರಾಃ ಸಹಸ್ರಶಃ
॥೪.೩೩॥
ಆಕಾಶದಲ್ಲಿ ವಿಮಾನಗಳ ಸಮೂಹವಿತ್ತು. ದುಂದುಭಿಗಳ ನಾದವಾಯಿತು. ಗಂಧರ್ವರೆಲ್ಲರೂ ಕೂಡಾ ಗಾನ ಮಾಡಿದರು.
[ಇಲ್ಲಿ ತದಾ ವಿಮಾನಾವಲಿ.......ವಿನೇದಿರೇ ಎನ್ನುವ ಶ್ಲೋಕಭಾಗವು
ಭಾಗವತದ ೭ನೆಯ ಸ್ಕಂಧದ, ಎಂಟನೆಯ ಅಧ್ಯಾಯದಲ್ಲಿನ
೩೭ನೆಯ ಶ್ಲೋಕವಾಗಿದೆ. ಅದನ್ನು ಯಥಾವತ್ತಾಗಿ ಇಲ್ಲಿ ಆಚಾರ್ಯರು
ಪ್ರಸ್ತುತಪಡಿಸಿದ್ದಾರೆ]
ವಿಜಾನಮಾನಾ ಜಗತಾಂ ಹಿ ಮಾತರಂ ಪುರಾSರ್ತ್ಥಿತುಂ ನಾsಯಯುರತ್ರ ದೇವತಾಃ ।
ತದಾ ತು ರಾಮಂ ರಮಯಾ ಯುತಂ ಪ್ರಭುಂ ದಿದೃಕ್ಷವಶ್ಚಕ್ರುರಲಂ ನಭಸ್ಥಳಮ್
॥೪.೩೪॥
ದೇವತೆಗಳೆಲ್ಲರಿಗೂ
ಸೀತೆ ಜಗನ್ಮಾತೆ ಎನ್ನುವುದು ಮೊದಲೇ ತಿಳಿದಿದ್ದುದರಿಂದ, ಅವರ್ಯಾರೂ ಕೂಡಾ ಸೀತಾ
ಸ್ವಯಂವರಕ್ಕೆ ಬಂದಿರಲಿಲ್ಲ. ಆದರೆ ರಾಮಚಂದ್ರ ಮತ್ತು ಸೀತೆಯರು ಸೇರಿದ ಕ್ಷಣದಲ್ಲಿ
ದೇವತೆಗಳೆಲ್ಲರೂ ಅವರನ್ನು ನೋಡ ಬಯಸಿ, ಆಕಾಶವನ್ನು ಅಲಂಕರಿಸಿದರು.
ಯಥಾ ಪುರಾ ಸಾಗರಜಾಸ್ವಯಂಬರೇ ಸುಮಾನಸಾನಾಮಭವತ್ ಸಮಾಗಮಃ ।
ತಥಾ ಹ್ಯಭೂತ್ ಸರ್ವದಿವೌಕಸಾಂ ತದಾ ತಥಾ ಮುನೀನಾಂ ಸಹಭೂಭೃತಾಂ ಭುವಿ
॥೪.೩೫॥
ಹಿಂದೆ ಹೇಗೆ
ಸಮುದ್ರರಾಜನ ಮಗಳಾಗಿ ಬಂದ
ಲಕ್ಷ್ಮೀದೇವಿಯ ಸ್ವಯಂವರದಲ್ಲಿ ದೇವತೆಗಳ
ಒಟ್ಟುಗೂಡುವಿಕೆ ಆಗಿತ್ತೋ, ಹಾಗೆಯೇ, ಇಲ್ಲಿ ಶ್ರೇಷ್ಠರಾದ ರಾಜರ, ಎಲ್ಲಾ ದೇವತೆಗಳ ಮತ್ತು
ಮುನಿಗಳ ಸಮಾಗಮವಾಯಿತು.
ಪ್ರಗೃಹ್ಯ ಪಾಣಿಂ ಚ ನೃಪಾತ್ಮಜಾಯಾ ರರಾಜ ರಾಜೀವಸಮಾನನೇತ್ರಃ ।
ಯಥಾ ಪುರಾ ಸಾಗರಜಾಸಮೇತಃ ಸುರಾಸುರಾಣಾಮಮೃತಾಬ್ಧಿಮನ್ಥನೇ ॥೪.೩೬॥
ಹೇಗೆ ಹಿಂದೆ
ಅಮೃತಮಥನ ಕಾಲದಲ್ಲಿ ನಾರಾಯಣನು ಲಕ್ಷ್ಮೀದೇವಿಯಿಂದ ಕೂಡಿ ಶೋಭಿಸಿದ್ದನೋ ಹಾಗೇ,
ಕಮಲದಳದಂತೆ ಸುಂದರವಾದ ಕಣ್ಣುಗಳುಳ್ಳ ರಾಮಚಂದ್ರನು ಸೀತೆಯ ಕೈಯನ್ನು ಹಿಡಿದು ಶೋಭಿಸಿದನು.
ಸ್ವಲಙ್ಕೃತಾಸ್ತತ್ರ ವಿಚೇರುರಙ್ಗನಾ ವಿದೇಹರಾಜಸ್ಯ ಚ ಯಾ ಹಿ ಯೋಷಿತಃ
।
ಮುದಾ ಸಮೇತಂ ರಮಯಾ ರಮಾಪತಿಂ ವಿಲೋಕ್ಯ ರಾಮಾಯ ದದೌ ಧನಂ ನೃಪಃ ॥೪.೩೭॥
ಜನಕರಾಜನ ಸ್ತ್ರೀಯರು
ಅಲಂಕೃತರಾಗಿ ತಿರುಗಾಡಿದರು. ರಾಮಚಂದ್ರನು
ರಮೆ ಸಮೇತ ಆನಂದದಿಂದ ಇರುವುದನ್ನು ನೋಡಿ
ಜನಕರಾಜನು ರಾಮನಿಗೆ ಧನವನ್ನು ನೀಡಿ
ಸತ್ಕರಿಸಿದನು.
ಪ್ರಿಯಾಣಿ ವಸ್ತ್ರಾಣಿ ರಥಾನ್ ಸಕುಞ್ಜರಾನ್ ಪರಾರ್ದ್ಧ್ಯರತ್ನಾನ್ಯಖಿಲಸ್ಯ
ಚೇಶಿತುಃ ।
ದದೌ ಚ ಕನ್ಯಾತ್ರಯಮುತ್ತಮಂ ಮುದಾ ತದಾ ಸ ರಾಮಾವರಜೇಭ್ಯ ಏವ ॥೪.೩೮॥
ಜನಕನು ಅವರಿಗೆ ಒಳ್ಳೆಯ ವಸ್ತ್ರಗಳನ್ನು, ರಥಗಳನ್ನು, ಆನೆಗಳನ್ನು, ಅತ್ಯಂತ ಶ್ರೇಷ್ಠವಾದ ಬೆಲೆಬಾಳುವ ರತ್ನಗಳನ್ನೂ ಕೊಟ್ಟನು. ಹಾಗೆಯೇ, ಅತ್ಯಂತ ಸಂತಸದಿಂದ
ರಾಮನ ಮೂರು ಜನ ತಮ್ಮಂದಿರಿಗೆ ತನ್ನ
ಮೂರು ಜನ ಕನ್ಯೆಯರನ್ನು ವಿವಾಹ ಮಾಡಿ ಕೊಟ್ಟನು.
ಮಹೋತ್ಸವಂ ತಂ ತ್ವನುಭೂಯ ದೇವತಾ ನರಾಶ್ಚ ಸರ್ವೇ ಪ್ರಯಯುರ್ಯ್ಯಥಾಗತಮ್
।
ಪಿತಾ ಚ ರಾಮಸ್ಯ ಸುತೈಃ ಸಮನ್ವಿತೋ ಯಯಾವಯೋದ್ಧ್ಯಾಂ ಸ್ವಪುರೀಂ ಮುದಾ
ತತಃ ॥೪.೩೯॥
ಹೀಗೆ ದೇವತೆಗಳು, ಮನುಷ್ಯರು, ಎಲ್ಲರೂ ಕೂಡಾ ಮಹೋತ್ಸವವನ್ನು ಅನುಭವಿಸಿ, ತಮ್ಮತಮ್ಮ ಊರಿಗೆ
ಹಿಂತಿರುಗಿದರು. ರಾಮಚಂದ್ರನ ತಂದೆಯಾದ ದಶರಥನು ತನ್ನ
ಮಕ್ಕಳೊಂದಿಗೆ ಕೂಡಿ, ಸಂತಸದಿಂದ ತನ್ನ ಪಟ್ಟಣವಾದ ಅಯೋಧ್ಯಾನಗರಿಯತ್ತ ಹೊರಟನು.
ತದನ್ತರೇ ಸೋsಥ ದದರ್ಶ ಭಾರ್ಗ್ಗವಂ ಸಹಸ್ರಲಕ್ಷಾಮಿತಭಾನುದೀಧಿತಿಮ್ ।
ವಿಭಾಸಮಾನಂ ನಿಜರಶ್ಮಿಮಣ್ಡಲೇ ಧನುರ್ದ್ಧರಂ ದೀಪ್ತಪರಶ್ವಧಾಯುಧಮ್
॥೪.೪೦॥
ವಿದೇಹದಿಂದ ಅಯೋಧ್ಯಾನಗರಿಯ ದಾರಿಯ ಮಧ್ಯದಲ್ಲಿ ದಶರಥನು ಎಣೆಯಿರದಷ್ಟು
ಕಾಂತಿಯುಳ್ಳ, ಸ್ವರೂಪಭೂತವಾಗಿರುವ ಕಾಂತಿಯಿಂದ ಶೋಭಿಸುತ್ತಿರುವ, ಹೊಳೆಯುವ ಕುಡಗೋಲು
ಮತ್ತು ಬಿಲ್ಲನ್ನು ಹಿಡಿದಿರುವ ಪರಶುರಾಮನನ್ನು
ಕಂಡನು.
ಅಜಾನತಾಂ ರಾಘವಮಾದಿಪೂರುಷಂ ಸಮಾಗತಂ ಜ್ಞಾಪಯಿತುಂ ನಿದರ್ಶನೈಃ ।
ಸಮಾಹ್ವಯನ್ತಂ ರಘುಪಂ ಸ್ಪೃಧೇವ ನೃಪೋ ಯಯಾಚೇ ಪ್ರಣಿಪತ್ಯ ಭೀತಃ ॥೪.೪೧॥
ರಾಮಚಂದ್ರನನ್ನು
ಆದಿಪೂರುಷ ಎಂದು ತಿಳಿಯದಿರುವವರಿಗೆ,
ದೃಷ್ಟಾಂತಗಳಿಂದ ನೆನಪಿಸಲು ಬಂದಿರುವ,
ಸ್ಪರ್ಧೆಯಿಂದ ರಾಮಚಂದ್ರನನ್ನು ಕರೆಯುವಂತೆ ಕಾಣುತ್ತಿರುವ ಪರಶುರಾಮನಿಗೆ ನಮಸ್ಕರಿಸಿದ ದಶರಥನು, ಭಯದಿಂದ ಅವನಲ್ಲಿ ಈ ರೀತಿ
ಬೇಡುತ್ತಾನೆ:
ನ ಮೇ ಸುತಂ ಹನ್ತುಮಿಹಾರ್ಹಸಿ ಪ್ರಭೋ ವಯೋಗತಸ್ಯೇತ್ಯುದಿತಃ ಸ
ಭಾರ್ಗ್ಗವಃ ।
ಸುತತ್ರಯಂ ತೇ ಪ್ರದದಾಮಿ ರಾಘವಂ ರಣೇ ಸ್ಥಿತಂ ದ್ರಷ್ಟುಮಿಹಾsಗತೋsಸ್ಮ್ಯಹಮ್ ॥೪.೪೨॥
“ಸರ್ವಸಮರ್ಥನಾದ ಪರಶುರಾಮನೇ, ನಾನು ಅತ್ಯಂತ ಮುದುಕನಾಗಿದ್ದೇನೆ. ಹೀಗಾಗಿ ನನ್ನ ಮಗನಾದ
ರಾಮಚಂದ್ರನನ್ನು ಕೊಲ್ಲಬೇಡ” ಎಂದು. ಈ ಮಾತನ್ನು ಕೇಳಿದ
ಪರಶುರಾಮನು ಹೇಳುತ್ತಾನೆ: “ಮೂರು ಜನ
ಮಕ್ಕಳನ್ನು ಬೇಕಿದ್ದರೆ ಕೊಡುತ್ತೇನೆ. ರಾಮಚಂದ್ರ ಮಾತ್ರ ಯುದ್ಧದಲ್ಲಿ ಭಾಗವಹಿಸಬೇಕು” ಎಂದು.
ಸ ಇತ್ಥಮುಕ್ತ್ವಾನೃಪತಿಂ ರಘೂತ್ತಮಂ ಭೃಗೂತ್ತಮಃ ಪ್ರಾಹ ನಿಜಾಂ ತನುಂ
ಹರಿಃ ।
ಅಭೇದಮಜ್ಞೇಷ್ವಭಿದರ್ಶಯನ್ ಪರಂ ಪುರಾತನೋsಹಂ ಹರಿರೇಷ ಇತ್ಯಪಿ ॥೪.೪೩॥
ಭೃಗು
ಕುಲದಲ್ಲಿ ಬಂದ ಪರಶುರಾಮನು ದಶರಥನಿಗೆ ಆ ರೀತಿಯಾಗಿ ಹೇಳಿ, ತನ್ನದೇ ದೇಹವಾಗಿರುವ ರಾಮಚಂದ್ರನನ್ನು ಕುರಿತು ಮಾತನಾಡುತ್ತಾನೆ. ದಡ್ಡರಿಗೂ ಕೂಡಾ ತಮ್ಮಲ್ಲಿರುವ ಅಭೇದವನ್ನು ತೋರಿಸಲು
ಹಾಗೂ ತಾನು ನಾರಾಯಣನೇ ಆಗಿದ್ದೇನೆ ಎಂದು ತೋರಿಸುವ ಸಲುವಾಗಿಯೂ
ಪರಶುರಾಮ ಈ ರೀತಿ ಹೇಳುತ್ತಾನೆ:
ಶೃಣುಷ್ವ ರಾಮ
ತ್ವಮಿಹೋದಿತಂ ಮಯಾ ಧನುರ್ದ್ಧ್ವಯಂ ಪೂರ್ವಮಭೂನ್ಮಹಾದ್ಭುತಮ್ ।
ಉಮಾಪತಿಸ್ತ್ವೇಕಮಧಾರಯತ್ ತತೋ ರಮಾಪತಿಶ್ಚಾಪರಮುತ್ತಮೋತ್ತಮಮ್ ॥೪.೪೪॥
ಪರಶುರಾಮ ಶ್ರೀರಾಮನನ್ನು ಕುರಿತು ಹೇಳುತ್ತಾನೆ: ಎಲೈ ರಾಮನೇ!
ನಾನು ಹೇಳುವುದನ್ನು ಕೇಳಿಸಿಕೋ. ಹಿಂದೆ ಅತ್ಯಂತ ಅದ್ಭುತವಾದ ಎರಡು ಧನುಸ್ಸುಗಳಿದ್ದವು (ಪಿನಾಕ ಮತ್ತು ಶಾರ್ಙ್ಗ). ಅದರಲ್ಲಿ ಒಂದನ್ನು ಸದಾಶಿವ ಹಿಡಿದುಕೊಂಡರೆ ಇನ್ನೊಂದನ್ನು ನಾರಾಯಣ ಹಿಡಿದನು.
ತದಾ ತು ಲೋಕಸ್ಯ ನಿದರ್ಶನಾರ್ತ್ಥಿಭಿಃ ಸಮರ್ತ್ಥಿತೌ ತೌ ಹರಿಶಙ್ಕರೌ ಸುರೈಃ ।
ರಣಸ್ಥಿತೌ ವಾಂ ಪ್ರಸಮೀಕ್ಷಿತುಂ ವಯಂ ಸಮರ್ತ್ಥಯಾಮೋsತ್ರ ನಿದರ್ಶನಾರ್ತ್ಥಿನಃ ॥೪.೪೫॥
ಆಗ ಲೋಕದ ದೃಷ್ಟಾಂತವನ್ನು ಬಯಸಿದವರಾದ ದೇವತೆಗಳು ಸದಾಶಿವ ಮತ್ತು ನಾರಾಯಣನನ್ನು ಕುರಿತು ಈ
ರೀತಿ ಬೇಡಿಕೊಳ್ಳುತ್ತಾರೆ: “ಯಾರು ಶ್ರೇಷ್ಠರು
ಎನ್ನುವ ವಿಚಾರದಲ್ಲಿ ದೃಷ್ಟಾಂತ ಬೇಕು ಎಂದು
ಬಯಸುವ ನಾವು, ಯುದ್ಧದಲ್ಲಿ ಇರುವ ನಿಮ್ಮನ್ನು ನೋಡಬಯಸುತ್ತೇವೆ” ಎಂದು.
ತತೋ ಹಿ ಯುದ್ಧಾಯ ರಮೇಶಶಙ್ಕರೌ ವ್ಯವಸ್ಥಿತೌ ತೇ ಧನುಷೀ
ಪ್ರಗೃಹ್ಯ ।
ಯತೋsನ್ತರಸ್ಯೈಷ ನಿಯಾಮಕೋ ಹರಿಸ್ತತೋ ಹರೋsಗ್ರೇsಸ್ಯ ಶಿಲೋಪಮೋsಭವತ್ ॥೪.೪೬॥
ತದನಂತರ ನಾರಾಯಣ ಮತ್ತು ಸದಾಶಿವರು ಬಿಲ್ಲುಗಳನ್ನು ಹಿಡಿದು
ಯುದ್ಧಕ್ಕೆ ನಿಲ್ಲುತ್ತಾರೆ. ಶಿವನ
ಹೃತ್ಕಮಲದಲ್ಲಿ ಪ್ರೇರಕನಾಗಿರುವವನು ನಾರಾಯಣನೇ
ಆಗಿರುವ ಕಾರಣದಿಂದ ನಾರಾಯಣನ ಮುಂದೆ ಸದಾಶಿವನು
ಕಲ್ಲಿನಂತಾದನು.
ಶಶಾಕ ನೈವಾಥ ಯದಾsಭಿವೀಕ್ಷಿತುಂ ಪ್ರಸ್ಪನ್ದಿತುಂ ವಾ
ಕುತ ಏವ ಯೋದ್ಧುಮ್ ।
ಶಿವಸ್ತದಾ ದೇವಗಣಾಃ ಸಮಸ್ತಾಃ ಶಶಂಸುರುಚ್ಚೈರ್ಜ್ಜಗತೋ ಹರೇರ್ಬಲಮ್
॥೪.೪೭॥
ಕಲ್ಲಿನಂತಾದ ಶಿವನು ಅಲುಗಾಡುವುದಕ್ಕಾಗಲೀ, ದಿಟ್ಟಿಸಿ ನೋಡುವುದಕ್ಕಾಗಲೀ ಸಮರ್ಥನಾಗಲಿಲ್ಲ. ಅಲುಗಾಡಲು ಸಾಧ್ಯವಾಗದ
ಮೇಲೆ ಯುದ್ಧಮಾಡುವುದು ಹೇಗೆ ಸಾಧ್ಯ? ಹೀಗಾಗಿ ದೇವತೆಗಳೆಲ್ಲರೂ
ಜಗತ್ತಿಗೆ ಪರಮಾತ್ಮನ ಬಲವೇ ಶ್ರೇಷ್ಠವೆಂದು ಹೇಳಿದರು.
[ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲೂ(೭೫. ೧೭, ೧೯) ಈ ಮಾತು ಬರುತ್ತದೆ. ಅಲ್ಲಿ ಹೇಳುತ್ತಾರೆ: ‘ತದಾ ತು
ಜೃಮ್ಭಿತಂ ಶೈವಂ ಧನುರ್ಭೀಮಪರಾಕ್ರಮಮ್ । ಹುಂಕಾರೇಣ ಮಹಾದೇವಃ ಸ್ತಮ್ಭಿತೋsಥ ತ್ರಿಲೋಚನಃ’ (ಅಂದರೆ: ಪರಮಾತ್ಮನ ಹುಂಕಾರದಿಂದಲೇ ಶಿವನ
ಧನುಸ್ಸು ಶಿಥಿಲಗೊಂಡಿತು ಮತ್ತು ಅದರಿಂದ ಶಿವನು ಸ್ತಂಭೀಭೂತನಾದನು). ‘ಜೃಮ್ಭಿತಂ ತದ್ ಧನುರ್ದೃಷ್ಟ್ವಾ ಶೈವಂ
ವಿಷ್ಣುಪರಾಕ್ರಮೈಃ । ಅಧಿಕಂ ಮೇನಿರೇ ವಿಷ್ಣುಂ ದೇವಾಃ ಸರ್ಷಿಗಣಾಸ್ತದಾ’ (ಅಂದರೆ: ದೇವತೆಗಳು
ಋಷಿಗಳು ಎಲ್ಲರೂ ಕೂಡಾ ವಿಷ್ಣುವೇ ಶ್ರೇಷ್ಠ
ಎನ್ನುವುದನ್ನು ತಿಳಿದರು)]
ಯದೀರಣೇನೈವ ವಿನೈಷ ಶಙ್ಕರಃ ಶಶಾಕ ನ ಪ್ರಶ್ವಸಿತುಂ ಚ ಕೇವಲಮ್ ।
ಕಿಮತ್ರ ವಕ್ತವ್ಯಮತೋ ಹರೇರ್ಬಲಂ ಹರಾತ್ ಪರಂ ಸರ್ವತ ಏವ ಚೇತಿ ॥೪.೪೮॥
ಯಾರ ಪ್ರೇರಣೆಯಿಲ್ಲದೇ
ಸದಾಶಿವನೇ ಉಸಿರಾಡಲು ಸಮರ್ಥನಾಗುವುದಿಲ್ಲವೋ, ಅಂತಹ ಭಗವಂತನ ಬಲವನ್ನು ಇನ್ನೇನೆಂದು ವರ್ಣಿಸುವುದು. ಭಗವಂತ ಕೇವಲ ರುದ್ರನಿಗಿಂತ ಉತ್ತಮನಷ್ಟೇ ಅಲ್ಲ, ಆತ ಸರ್ವೋತ್ತಮ.
ತತಃ ಪ್ರಣಮ್ಯಾsಶು ಜನಾರ್ದ್ದನಂ ಹರಃ
ಪ್ರಸನ್ನದೃಷ್ಟ್ಯಾ ಹರಿಣಾsಭಿವೀಕ್ಷಿತಃ ।
ಜಗಾಮ ಕೈಲಾಸಮಮುಷ್ಯ ತದ್ ಧನುಸ್ತ್ವಯಾ ಪ್ರಭಗ್ನಂ ಕಿಲ ಲೋಕಸನ್ನಿಧೌ
॥೪.೪೯॥
ತದನಂತರ ಸದಾಶಿವನು ನಾರಾಯಣನಿಗೆ ನಮಸ್ಕರಿಸಿ, ಪ್ರಸನ್ನವಾದ
ದೃಷ್ಟಿಯಿಂದ ಶ್ರೀಹರಿಯಿಂದ ನೋಡಲ್ಪಟ್ಟವನಾಗಿ
ಕೈಲಾಸಕ್ಕೆ ತೆರಳಿದನು. ಅವನ ಆ ಧನುಸ್ಸು ಇಂದು
ನಿನ್ನಿಂದ, ಲೋಕದ ಜನರ ಮುಂದೆ ಮುರಿಯಲ್ಪಟ್ಟಿತು.
ಧನುರ್ಯ್ಯದನ್ಯದ್ಧರಿಹಸ್ತಯೋಗ್ಯಂ ತತ್ಕಾರ್ಮ್ಮುಕಾತ್ ಕೋಟಿಗುಣಂ
ಪುನಶ್ಚ ।
ವರಂ ಹಿ ಹಸ್ತೇ ತದಿದಂ ಗೃಹೀತಂ ಮಯಾ ಗೃಹಾಣೈತದತೋ ಹಿ ವೈಷ್ಣವಮ್
॥೪.೫೦॥
ಪರಮಾತ್ಮನ ಹಸ್ತಕ್ಕೆ ಮಾತ್ರ ಯೋಗ್ಯವಾಗಿರುವ ಇನ್ನೊಂದು
ಬಿಲ್ಲಿದೆ. ಆ ಬಿಲ್ಲು ಶಿವಧನುಸ್ಸಿಗಿಂತ ಕೋಟಿಪಟ್ಟು ಬಲಿಷ್ಠವಾದುದು. ಆ ಧನುಸ್ಸನ್ನು ನಾನು ಹಿಡಿದಿದ್ದೇನೆ. ಅಂತಹ ಈ
ಬಿಲ್ಲನ್ನು ನೀನು ಹಿಡಿ ಎಂದು
ಪರಶುರಾಮನು ಶ್ರೀರಾಮನಿಗೆ ಹೇಳುತ್ತಾನೆ.
ಯದೀದಮಾಗೃಹ್ಯ ವಿಕರ್ಷಸಿ ತ್ವಂ ತದಾ ಹರಿರ್ನ್ನಾತ್ರ ವಿಚಾರ್ಯ್ಯಮಸ್ತಿ
।
ಇತಿ ಬ್ರುವಾಣಃ ಪ್ರದದೌ ಧನುರ್ವರಂ ಪ್ರದರ್ಶಯನ್ ವಿಷ್ಣುಬಲಂ ಹರಾದ್
ವರಮ್ ॥೪.೫೧॥
“ಒಂದು ವೇಳೆ ನೀನು
ಈ ಶಾರ್ಙ್ಗ ಧನುಸ್ಸನ್ನು ಹಿಡಿದು ಸೆಳೆದಲ್ಲಿ
ನೀನು ನಾರಾಯಣನೇ ಎನ್ನುವುದು ನಿರ್ಧಾರ. ಈ ವಿಚಾರದಲ್ಲಿ ಯಾರಿಗೂ ಸಂದೇಹವಿರದು”. ಈರೀತಿಯಾಗಿ ಹೇಳುವವನಾಗಿ,
ನಾರಾಯಣನ ಬಲವು ಸದಾಶಿವನಿಗಿಂತ ಉತ್ಕೃಷ್ಟವಾಗಿದೆ ಎಂದು ತೋರಿಸುತ್ತಾ ಪರಶುರಾಮನು
ಶ್ರೀರಾಮನಿಗೆ ಬಿಲ್ಲನ್ನು ನೀಡಿದನು.
ಪ್ರಗೃಹ್ಯ ತಚ್ಚಾಪವರಂ ಸ ರಾಘವಶ್ಚಕಾರ ಸಜ್ಯಂ ನಿಮಿಷೇಣ ಲೀಲಯಾ ।
ಚಕರ್ಷ ಸನ್ಧಾಯ ಶರಂ ಚ ಪಶ್ಯತಃ ಸಮಸ್ತಲೋಕಸ್ಯ ಚ ಸಂಶಯಂ ನುದನ್ ॥೪.೫೨॥
ಪರಶುರಾಮನ ಮಾತನ್ನು ಕೇಳಿದ ಶ್ರೀರಾಮನು, ತಕ್ಷಣ, ಅನಾಯಾಸವಾಗಿ
ಆ ಶಾರ್ಙ್ಗ ಧನುಸ್ಸನ್ನು ಹಿಡಿದು ಹೆದೆ ಏರಿಸಿದನು. ನೋಡುವ ಎಲ್ಲರ ಸಂಶಯವನ್ನು ಪರಿಹರಿಸತಕ್ಕವನಾಗಿ ಬಿಲ್ಲನ್ನು ಹೂಡಿ ಸೆಳೆದನು.
ಪ್ರ ದರ್ಶಿತೇ ವಿಷ್ಣುಬಲೇ ಸಮಸ್ತತೋ ಹರಾಚ್ಚ ನಿಃಸಙ್ಖ್ಯತಯಾ ಮಹಾಧಿಕೇ
।
ಜಗಾದ ಮೇಘೌಘಗಭೀರಯಾ ಗಿರಾ ಸ ರಾಘವಂ ಭಾರ್ಗ್ಗವ ಆದಿಪೂರುಷಃ ॥೪.೫೩॥
ವಿಷ್ಣು ಬಲವು ರುದ್ರ ಹಾಗೂ ಎಲ್ಲರಿಗಿಂತಲೂ ಎಣೆಯಿಲ್ಲದ್ದು ಎನ್ನುವುದು ತೋರಿಸಲ್ಪಡಲು, ನಾರಾಯಣ
ಸ್ವರೂಪನಾದ ಪರಶುರಾಮನು ಮೇಘದಂತೆ ಗಂಭೀರವಾದ
ಧ್ವನಿಯಿಂದ ಈ ರೀತಿ ಹೇಳಿದನು:
ಅಲಂ ಬಲಂ ತೇ ಜಗತೋsಖಿಲಾದ್ ವರಂ ಪರೋsಸಿ ನಾರಾಯಣ ಏವ ನಾನ್ಯಥಾ ।
ವಿಸರ್ಜ್ಜಯಸ್ವೇಹ ಶರಂ ತಪೋಮಯೇ ಮಹಾಸುರೇ ಲೋಕಮಯೇ ವರಾದ್ ವಿಭೋಃ
॥೪.೫೪॥
“ಖಂಡಿತವಾಗಿಯೂ ನೀನು ಇಡೀ ಪ್ರಪಂಚವನ್ನು ಮೀರಿಸುವಷ್ಟು
ಬಲವನ್ನು ಹೊಂದಿರುವ ಸರ್ವಶ್ರೇಷ್ಠ. ನೀನು
ನಾರಾಯಣನೇ ಹೊರತು ಬೇರೆ ಅಲ್ಲ. ಈ ಬಾಣವನ್ನು ತಪಸ್ಸಿನ ರೂಪದಲ್ಲಿರುವ, ಈ ಲೋಕವನ್ನೆಲ್ಲಾ
ವ್ಯಾಪಿಸಿರುವ ಅತುಲನೆಂಬ ರಾಕ್ಷಸನಲ್ಲಿ ಬಿಡು” ಎನ್ನುತ್ತಾನೆ ಪರಶುರಾಮ!
[ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಈ ರೀತಿಯ
ಮಾತುಗಳಿವೆ: ‘ಇಮಾಂ ವಾ ತ್ವದ್ಗತಿಂ ರಾಮ ತಪೋಬಲಸಮಾರ್ಜಿತಾಮ್ । ಲೋಕಾನಪ್ರತಿಮಾನ್ ವಾ ತೇ
ಹನಿಷ್ಯಾಮಿ ಯದೀಚ್ಚಸಿ’ (೭೬. ೭): ರಾಮ ಹೇಳುತ್ತಾನೆ: “ಪರಶುರಾಮ, ನಾನು ಹೂಡಿದ ಬಾಣ ಯಾವತ್ತೂ ವ್ಯರ್ಥವಾಗುವುದಿಲ್ಲ. ಹೀಗಾಗಿ
ಈ ಬಾಣವನ್ನು ಎತ್ತ ಬಿಡಲಿ? ನಿನ್ನ ತಪೋಬಲವನ್ನು ನಾಶ ಮಾಡಲೇ? ಅಥವಾ ನೀನು ಗಳಿಸಿದ ಲೋಕಗಳನ್ನು
ನಾಶ ಮಾಡಲೇ?” ಎಂದು. ಆಗ ಪರಶುರಾಮ ಹೇಳುತ್ತಾನೆ: ‘ಲೋಕಾಸ್ತ್ವಪ್ರತಿಮಾ
ರಾಮ ನಿರ್ಜಿತಾಸ್ತಪಸಾ ಮಯಾ । ಜಹಿ ತಾನ್ ಶರಮುಖ್ಯೇನ ಮಾ ಭೂತ್ ಕಾಲಸ್ಯ ಪರ್ಯಯಃ’(೭೬.೧೬) : ಈ ಅಪ್ರತಿಮವಾದ ಲೋಕ ನನ್ನಿಂದ ಗಳಿಸಲ್ಪಟ್ಟಿದೆ. ಆ ಲೋಕಗಳನ್ನು ಬೇಗ ಕೊಲ್ಲು! ‘ಸ ಹತಾನ್ ದೃಶ್ಯ ರಾಮೇಣ ಸ್ವಾನ್ ಲೋಕಾಂಸ್ತಪಸಾssರ್ಜಿತಾನ್ । ಜಾಮದಗ್ನ್ಯೋ ಜಗಾಮಾsಶು ಮಹೇಂದ್ರಂ
ಪರ್ವತೋತ್ತಮಮ್’ (೭೬.೨೨): ತಪಸ್ಸಿನಿಂದ ಗಳಿಸಿದ ಲೋಕದ ನಾಶವನ್ನು ನೋಡಿ ಪರಶುರಾಮನು ಮಹೇಂದ್ರಪರ್ವತಕ್ಕೆ
ತೆರಳಿದನು. ಇವಿಷ್ಟು ವಾಲ್ಮೀಕಿ ರಾಮಾಯಣದಲ್ಲಿ
ಬರುವ ಮಾತುಗಳು. ಇಲ್ಲಿ ‘ಲೋಕಗಳನ್ನು ಕೊಲ್ಲು’ ಎಂದು ಹೇಳಿರುವುದನ್ನು ಕಾಣುತ್ತೇವೆ. ಈ ಎಲ್ಲಾ
ಅಸ್ಪಷ್ಟವಾದ ಮಾತಿನ ಸ್ಫುಟವಾದ ವಿವರಣೆಯನ್ನು ಮುಂದೆ ಆಚಾರ್ಯರು ನೀಡಿದ್ದಾರೆ:]
ಪುರಾsತುಲೋ ನಾಮ ಮಹಾಸುರೋsಭವದ್ ವರಾತ್ ಸ ತು ಬ್ರಹ್ಮಣ ಆಪ ಲೋಕತಾಮ್ ।
ಪುನಶ್ಚ ತಂ ಪ್ರಾಹ ಜಗದ್ಗುರುರ್ಯ್ಯದಾ ಹರಿರ್ಜ್ಜಿತಃ ಸ್ಯಾದ್ಧಿ ತದೈವ
ವದ್ಧ್ಯಸೇ ॥೪.೫೫॥
ಹಿಂದೆ ಅತುಲನೆಂಬ ಮಹಾಸುರನಿದ್ದ. ಆತ ತಪಸ್ಸನ್ನು ಮಾಡಿ ಬ್ರಹ್ಮನಿಂದ ವರವನ್ನು ಪಡೆದಿದ್ದ. ‘ಎಂದು ಯುದ್ಧದಲ್ಲಿ
ನಾರಾಯಣ ಸೋಲುತ್ತಾನೋ, ಅಂದೇ ಆತನಿಗೆ ಸಾವು, ಅಲ್ಲಿಯ ತನಕ ಸಾವಿಲ್ಲ’
ಎನ್ನುವ ವರ ಅದಾಗಿತ್ತು. ಹೀಗಾಗಿ ಆತ
ವರಬಲದಿಂದ ಲೋಕವನ್ನೆಲ್ಲಾ ವ್ಯಾಪಿಸಿ ನಿಂತಿದ್ದ.
ಅತೋ ವಧಾರ್ತ್ಥಂ ಜಗದನ್ತಕಸ್ಯ ಸರ್ವಾಜಿತೋsಹಂ ಜಿತವದ್ ವ್ಯವಸ್ಥಿತಃ ।
ಇತೀರಿತೇ ಲೋಕಮಯೇ ಸ ರಾಘವೋ ಮುಮೋಚ ಬಾಣಂ ಜಗದನ್ತಕೇsಸುರೇ ॥೪.೫೬॥
“ಈರೀತಿ ಜಗತ್ತನ್ನೇ ನಾಶದೆಡೆಗೆ ದೂಡುತ್ತಿರುವ ಅತುಲನ ನಾಶಕ್ಕಾಗಿ,
ಯಾರಿಂದಲೂ ಸೋಲಿಸಲ್ಪಡದ ನಾನು ಸೋತವನಂತೆ ನಿಂತಿದ್ದೇನೆ” ಎಂದು ಪರಶುರಾಮನಿಂದ ಹೇಳಲ್ಪಟ್ಟಾಗ, ಶ್ರೀರಾಮನು, ಲೋಕವನ್ನೆಲ್ಲಾ ತುಂಬಿರುವ, ಮಿಥ್ಯಾಜ್ಞಾನವನ್ನು
ಜನರಲ್ಲಿ ಪ್ರಚೋದನೆ ಮಾಡುವ ಮೂಲಕ ಜಗತ್ತಿಗೆ ನಾಶಕ ಎನಿಸಿರುವ, ಪರಶುರಾಮನಲ್ಲೇ
ಸೇರಿಕೊಂಡಿರುವ ಅತುಲನತ್ತ ಬಾಣ
ಪ್ರಯೋಗಿಸಿದನು.
[ತನ್ನ ಪರಮಭಕ್ತನಾದ ಚತುರ್ಮುಖ ಬ್ರಹ್ಮ ಕೊಟ್ಟಿರುವ ವರ ಎಂದೂ
ಸುಳ್ಳಾಗದಂತೆ ನೋಡಿಕೊಳ್ಳಲು ಭಗವಂತ ಈ ಎಲ್ಲಾ ಕ್ರೀಡೆಗಳನ್ನಾಡುತ್ತಾನೆ. ಇಲ್ಲಿ ಸಾಮಾನ್ಯವಾಗಿ ನಮಗೆ ಬರುವ ಪ್ರಶ್ನೆ ಎಂದರೆ: ಈ ಅತುಲ ಪರಶುರಾಮನಲ್ಲಿ ಹೇಗೆ ಸೇರಿಕೊಂಡ ಎನ್ನುವುದು. ಈ ಪ್ರಶ್ನೆಗೆ ಆಚಾರ್ಯರು
ಮುಂದಿನ ಶ್ಲೋಕಗಳಲ್ಲಿ ಉತ್ತರ ನೀಡಿದ್ದಾರೆ:]
ಪುರಾ ವರೋsನೇನ ಶಿವೋಪಲಮ್ಭಿತೋ ಮುಮುಕ್ಷಯಾ
ವಿಷ್ಣುತನುಪ್ರವೇಶನಮ್ ।
ಸ ತೇನ ರಾಮೋದರಗೋ ಬಹಿರ್ಗ್ಗತಸ್ತದಾಜ್ಞಯೈವಾsಶು ಬಭೂವ ಭಸ್ಮಸಾತ್ ॥೪.೫೭॥
ಹಿಂದೆ, ಅತುಲನು ಮೋಕ್ಷವನ್ನು ಹೊಂದಬೇಕು ಎಂಬ ಬಯಕೆಯಿಂದ ಶಿವನನ್ನು ತಪಸ್ಸಿನಿಂದ ಒಲಿಸಿಕೊಂಡು,
“ನಾರಾಯಣನ ದೇಹ ಪ್ರವೇಶ ತನಗಾಗಬೇಕು” ಎನ್ನುವ ವರವನ್ನು ಕೇಳಿ ಪಡೆದಿದ್ದ. (ಜೀವಯೋಗ್ಯತೆಯುಳ್ಳವರಿಗೆ ಮಾತ್ರ
ಮೋಕ್ಷ ಸಿದ್ಧಿ ಎನ್ನುವುದು ಅವನಿಗೆಲ್ಲಿ ತಿಳಿದೀತು?) ಆ ತಪ ಬಲದಿಂದ
ಪರಶುರಾಮನ ದೇಹದೊಳಗೆ ಆತ ಸೇರಿಕೊಂಡಿದ್ದ. ಈರೀತಿ
ಸೇರಿಕೊಂಡಿದ್ದ ಅತುಲ ಪರಶುರಾಮನ ಆಜ್ಞೆಯಂತೆ (ಕ್ರೂರವಾದ ಬಾಣ ನನ್ನ ಹೊಟ್ಟೆಯತ್ತ
ಬರುತ್ತಿದೆ, ನೀನು ಹೊರಹೋಗು ಎನ್ನುವ ಆಜ್ಞೆಯಂತೆ)
ಹೊರಗಡೆ ಬಂದವನಾಗಿ, ರಾಮನ ಬಾಣದಿಂದ ಭಸ್ಮವಾಗುತ್ತಾನೆ. [ಮೇಲ್ನೋಟಕ್ಕೆ ಇದು ಶ್ರೀರಾಮ ಪರಶುರಾಮನ ಮೇಲೆ ಬಾಣಪ್ರಯೋಗಿಸಿದಂತೆ
ಕಾಣುತ್ತದೆ. ಆದರೆ ಹಿನ್ನೆಲೆ ತಿಳಿದಾಗ ಎಲ್ಲವೂ ಸ್ಪಷ್ಟವಾಗುತ್ತದೆ]
ಇತೀವ ರಾಮಾಯ ಸ ರಾಘವಃ ಶರಂ ವಿಕರ್ಷಮಾಣೋ ವಿನಿಹತ್ಯ ಚಾಸುರಮ್ ।
ತಪಸ್ತದೀಯಂ ಪ್ರವದನ್ ಮುಮೋದ ತದೀಯಮೇವ ಹ್ಯಭವತ್ ಸಮಸ್ತಮ್ ॥೪.೫೮॥
ಈರೀತಿಯಾಗಿ ಪರಶುರಾಮನಿಗೆಂಬಂತೆ ರಾಮಚಂದ್ರನು ಬಾಣವನ್ನು
ಎಳೆದು ಅಸುರನನ್ನು ಕೊಂದ. ‘ಅವನ ತಪಸ್ಸನ್ನು ಕೊಲ್ಲುತ್ತೇನೆ’ ಎಂದು ಹೇಳುತ್ತಾ, ತಪೋಮಯನಾದ ಅಸುರನನ್ನು ರಾಮಚಂದ್ರ ಸಂಹಾರ
ಮಾಡಿದ.
ನಿರನ್ತರಾನನ್ತವಿಬೋಧಸಾರಃ ಸ ಜಾನಮಾನೋsಖಿಲಮಾದಿಪೂರುಷಃ ।
ವದಞ್ಛೃಣೋತೀವ ವಿನೋದತೋ ಹರಿಃ ಸ ಏಕ ಏವ ದ್ವಿತನುರ್ಮ್ಮುಮೋದ ॥೪.೫೯॥
ಸಾಂದ್ರವಾಗಿರುವ, ಎಣೆಯಿರದ ಜ್ಞಾನದ ಸಾರವನ್ನು
ಹೊಂದಿರುವವನಾಗಿ, ಎಲ್ಲವನ್ನೂ ಕೂಡಾ ಬಲ್ಲವನಾದರೂ,
ಆದಿ ಪೂರುಷನಾದ ರಾಮಚಂದ್ರನು, ಒಬ್ಬನೇ ಎರಡು ದೇಹವುಳ್ಳವನಾಗಿ , ಒಂದು ದೇಹದಿಂದ ಹೇಳುತ್ತಾ,
ಇನ್ನೊಂದು ದೇಹದಿಂದ ಕೇಳುತ್ತಿದ್ದಾನೋ ಎಂಬಂತೆ
ಅಭಿನಯಿಸಿ, ಸಂತೋಷಗೊಳಿಸುತ್ತಿದ್ದ
ಮತ್ತು ತಾನೂ ಸಂತಸದಲ್ಲಿದ್ದ.
ಸ ಚೇಷ್ಟಿತಂ ಚೈವ ನಿಜಾಶ್ರಯಸ್ಯ ಜನಸ್ಯ ಸತ್ತತ್ವವಿಬೋಧಕಾರಣಮ್ ।
ವಿಮೋಹಕಂ ಚಾನ್ಯತಮಸ್ಯ ಕುರ್ವನ್ ಚಿಕ್ರೀಡ ಏಕೋsಪಿ ನರಾನ್ತರೇ ಯಥಾ ॥೪.೬೦॥
ಭಗವಂತ ತನ್ನ ಭಕ್ತರಿಗೆ ತತ್ತ್ವವನ್ನು ತಿಳಿಸತಕ್ಕ ಹಾಗೂ
ದುರ್ಜನರಿಗೆ ಮೋಹಕವಾದ ಕ್ರಿಯೆಗಳನ್ನು ತೋರಿಸುತ್ತಾ, ಒಬ್ಬನಾದರೂ ಇನ್ನೊಬ್ಬನಲ್ಲಿ ಯಾವ ರೀತಿ
ವ್ಯವಹಾರ ಮಾಡಬಹುದೋ ಹಾಗೇ ಮಾಡಿ, ತನ್ನ ಕ್ರೀಡಾಲೀಲೆಯನ್ನು ತೋರಿದ.
ತತಃ ಸ ಕಾರುಣ್ಯನಿಧಿರ್ನ್ನಿಜೇ ಜನೇ ನಿತಾನ್ತಮೈಕ್ಯಂ ಸ್ವಗತಂ
ಪ್ರಕಾಶಯನ್ ।
ದ್ವಿಧೇವ ಭೂತ್ವಾ ಭೃಗುವರ್ಯ್ಯ ಆತ್ಮನಾ ರಘೂತ್ತಮೇನೈಕ್ಯಮಗಾತ್
ಸಮಕ್ಷಮ್ ॥೪.೬೧॥
ತದನಂತರ, ತನ್ನ ಭಕ್ತರಲ್ಲಿ ಕಾರುಣ್ಯನಿಧಿಯಾಗಿ, ತನ್ನಲ್ಲಿರುವ
ಐಕ್ಯವನ್ನು ತೋರಿಸುತ್ತಾ, ಎರಡೇ ಎಂಬಂತಾಗಿ, ಎಲ್ಲರೂ ನೋಡುತ್ತಿರುವಾಗಲೇ ಒಂದಾಗಿಬಿಟ್ಟ. [ಶ್ರೀರಾಮ ಮತ್ತು ಪರಶುರಾಮ ಎನ್ನುವ ಭಗವಂತನ ಎರಡು
ರೂಪಗಳು ಒಂದಾಗಿ ಕಾಣಿಸಿತು]
ಸಮೇತ್ಯ ಚೈಕ್ಯಂ ಜಗತೋsಭಿಪಶ್ಯತಃ ಪ್ರಣುದ್ಯ ಶಙ್ಕಾಮಖಿಲಾಂ ಜನಸ್ಯ ।
ಪ್ರದಾಯ ರಾಮಾಯ ಧನುರ್ವರಂ ತದಾ ಜಗಾಮ ರಾಮಾನುಮತೋ ರಮಾಪತಿಃ ॥೪.೬೨॥
ಜಗತ್ತೆಲ್ಲಾ ನೋಡುತ್ತಿರುವಂತೆ ಐಕ್ಯವಾಗಿ, ಜನರ ಎಲ್ಲಾ
ಸಂದೇಹವನ್ನು ನಾಶಮಾಡಿ, ಮತ್ತೆ ಬೇರೆಬೇರೆಯಾದಂತೆ ತೋರಿ, ಆ ಧನುಸ್ಸನ್ನು ರಾಮನಿಗೆ
ಕೊಟ್ಟು, ಅವನಿಂದ ಅನುಮತಿಯನ್ನು ಪಡೆದು, ಪರಶುರಾಮ ಹೊರಟುಹೋಗುತ್ತಾನೆ.
[ಈ ಪ್ರಮೇಯವನ್ನು ವಾಲ್ಮೀಕಿಗಳೂ ಕೂಡಾ ಬಾಲಕಾಂಡದಲ್ಲಿ
ವಿವರಿಸಿದ್ದಾರೆ. ಆದರೆ ಅಲ್ಲಿ ಅದು ನಮಗೆ ಅರ್ಥವಾಗುವುದಿಲ್ಲ. ಅಲ್ಲಿ ಹೇಳುತ್ತಾರೆ: ‘ಗತೇ ರಾಮೇ ಪ್ರಶಾಂತಾತ್ಮಾ ರಾಮೋ
ದಾಶರಥಿರ್ಧನುಃ । ವರುಣಾಯಾSಪ್ರಮೇಯಾಯ ದದೌ ಹಸ್ತೇ ಸಸಾಯಕಮ್’ (೭೭.೧). ಪರಶುರಾಮ ಹೊರಟು ಹೋದ ನಂತರ
ಶ್ರೀರಾಮ ಧನುಸ್ಸನ್ನು ವರುಣನಿಗೆ ನೀಡುತ್ತಾನೆ. ವರುಣ ಧನುಸ್ಸನ್ನು ದೇವಲೋಕಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅದನ್ನು ಇಂದ್ರ ಅಗಸ್ತ್ಯರಿಗೆ ನೀಡುತ್ತಾನೆ, ಅಗಸ್ತ್ಯರು
ಮುಂದೆ ವನವಾಸಕಾಲದಲ್ಲಿ ಅರಣ್ಯದಲ್ಲಿ ಭೇಟಿಯಾದ ರಾಮಚಂದ್ರನಿಗೆ ಮರಳಿ ಧನುಸ್ಸನ್ನು
ನೀಡುತ್ತಾರೆ.]
ತತೋ ನೃಪೋsತ್ಯರ್ತ್ಥಮುದಾsಭಿಪೂರಿತಃ ಸುತೈಃ ಸಮಸ್ತೈಃ ಸ್ವಪುರೀಮವಾಪ ಹ ।
ರೇಮೇsಥ ರಾಮೋsಪಿ ರಮಾಸ್ವರೂಪಯ ತಯೈವ ರಾಜಾತ್ಮಜಯಾ ಹಿ ಸೀತಯಾ ॥೪.೬೩॥
ಯಥಾ ಪುರಾ ಶ್ರೀರಮಣಃ ಶ್ರಿಯಾ ತಯಾ ರತೋ ನಿತಾನ್ತಂ ಹಿ ಪಯೋಬ್ಧಿಮದ್ಧ್ಯೇ
।
ತಥಾ ತ್ವಯೋದ್ಧ್ಯಾಪುರಿಗೋ ರಘೂತ್ತಮೋsಪ್ಯುವಾಸ ಕಾಲಂ ಸುಚಿರಂ ರತಸ್ತಯಾ
॥೪.೬೪॥
ಆಮೇಲೆ ದಶರಥನು ಅತ್ಯಂತ ಸಂತೋಷದಿಂದ ಕೂಡಿದವನಾಗಿ, ಎಲ್ಲಾ
ಮಕ್ಕಳಿಂದ ಕೂಡಿಕೊಂಡು, ತನ್ನ ಪಟ್ಟಣವನ್ನು ಸೇರಿದನು. ರಾಮನೂ ಕೂಡಾ ಲಕ್ಷ್ಮೀಸ್ವರೂಪವಾಗಿರುವ
ಜನಕರಾಜನ ಮಗಳಾಗಿರುವ ಸೀತೆಯೊಂದಿಗೆ ಕ್ಷೀರಸಾಗರ
ಮಧ್ಯದಲ್ಲಿ ನಾರಾಯಣ ಯಾವ ರೀತಿ ಕ್ರೀಡಿಸಿದನೋ ಆ ರೀತಿ ಕ್ರೀಡಿಸಿದ. ಅಯೋಧ್ಯಾಪಟ್ಟಣದಲ್ಲಿ ಇದ್ದ ರಾಮಚಂದ್ರನು ಬಹಳ ದೀರ್ಘಕಾಲ ಸೀತೆಯ
ಜೊತೆಗೆ ವಾಸ ಮಾಡಿದ.
[ದೀರ್ಘಕಾಲ ಎಂದರೆ: ೧೨ ವರ್ಷಗಳ ಕಾಲ ವಾಸ ಮಾಡಿದ ಎಂದು
ಪಾದ್ಮಪುರಾಣದ ಉತ್ತರಖಂಡದಲ್ಲಿ(೨೪೨.೧೮೩) ಹೇಳಿದ್ದಾರೆ ‘ತತ್ರ ದ್ವಾದಶವರ್ಷಾಣಿ ಸೀತಯಾ
ಸಹ ರಾಘವಃ । ರಮಯಾಮಾಸ ಧರ್ಮಾತ್ಮಾ ನಾರಾಯಣ ಇವ ಶ್ರಿಯಾ’. ಸ್ಕಂದಪುರಾಣದ ಪಾತಾಳ ಖಂಡದಲ್ಲಿ(೩೬.೧೭) ‘ತತೋ
ದ್ವಾದಶವರ್ಷಾಣಿ ರೇಮೇ ರಾಮಸ್ತಯಾ ಸಹ’ ಎಂದಿದ್ದಾರೆ ]
ಇಮಾನಿ ಕರ್ಮ್ಮಾಣಿ ರಘೂತ್ತಮಸ್ಯ ಹರೇರ್ವಿಚಿತ್ರಾಣ್ಯಪಿ ನಾದ್ಭುತಾನಿ ।
ದುರನ್ತಶಕ್ತೇರಥ ಚಾಸ್ಯ ವೈಭವಂ ಸ್ವಕೀಯಕರ್ತ್ತವ್ಯತಯಾsನುವರ್ಣ್ಣ್ಯತೇ ॥೪.೬೫॥
ರಾಮಚಂದ್ರನ ಈ ಎಲ್ಲಾ ಕರ್ಮಗಳು ನಮಗೆ ವಿಚಿತ್ರ. ಆದರೆ ದೇವರಿಗೆ ಇದು ಅದ್ಭುತವಲ್ಲ. ಆದರೂ ಎಣೆಯಿರದ ಶಕ್ತಿ ಇರುವ ನಾರಾಯಣನ ವೈಭವದ ವರ್ಣನೆ ನಮ್ಮ ಕರ್ತವ್ಯ ಎನ್ನುವ ವಿಧಿಯಂತೆ ಭಗವಂತನ
ಗುಣಕರ್ಮಸಾಮರ್ಥ್ಯದ ವಿವರವು ಹೇಳಲ್ಪಟ್ಟಿದೆ.
॥ ಇತಿ
ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಾವತಾರೇ ಅಯೋದ್ಧ್ಯಾಪ್ರವೇಶೋ ನಾಮ ಚತುರ್ತ್ಥೋsದ್ಧ್ಯಾಯಃ ॥
[ಆದಿತಃ ಶ್ಲೋಕಾಃ – ೪೦೫+೬೫= ೪೭೦]
[ಉಪಸಂಹಾರ ವಾಕ್ಯದಲ್ಲಿ ‘ರಾಮಾವತಾರ’ ಎಂದಿದೆ. ಆದರೆ ಅವತಾರದ ವಿವರಣೆ ಮೂರನೇ ಅಧ್ಯಯದಲ್ಲೇ
ಬಂದಿರುವುದರಿಂದ ಇಲ್ಲಿ ‘ರಾಮಚರಿತೆ’ ಎಂದು ಹೇಳಬೇಕಿತ್ತಲ್ಲವೇ ಎನ್ನುವ ಪ್ರಶ್ನೆ ಬರುತ್ತದೆ.
ಆದರೆ ಹೃಷೀಕೇಶತೀರ್ಥರ ಮೂಲಪಾಠದಲ್ಲೇ
‘ರಾಮಾವತಾರ’ ಎಂದಿರುವುದನ್ನು ನಾವು ಕಾಣುತ್ತೇವೆ. ರಾಮನ ಕಥಾವತಾರದ ವಿವರಣೆ ಈ ಅಧ್ಯಾಯ ಎನ್ನುವ ಅರ್ಥದಲ್ಲಿ ಹೃಷೀಕೇಶತೀರ್ಥರು ಈ ರೀತಿ
ಹೇಳಿರಬಹುದು ಎಂದು ನಾವಿಲ್ಲಿ ತಿಳಿಯಬಹುದು]
No comments:
Post a Comment