ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 8, 2018

Mahabharata Tatparya Nirnaya Kannada 4.01-4.30

೪. ರಾಮಾವತಾರೇ ಅಯೋದ್ಧ್ಯಾ ಪ್ರವೇಶಃ

̐  ॥

ಅಥಾಭ್ಯವರ್ದ್ಧಂಶ್ಚತುರಾಃ ಕುಮಾರಾ ನೃಪಸ್ಯ ಗೇಹೇ ಪುರುಷೋತ್ತಮಾದ್ಯಾಃ ।

ನಿತ್ಯಪ್ರವೃದ್ಧಸ್ಯ ಚ ತಸ್ಯ ವೃದ್ಧಿರಪೇಕ್ಷ್ಯ ಲೋಕಸ್ಯ ಹಿ ಮನ್ದದೃಷ್ಟಿಮ್ ॥೪.೦೧

 

ಅವತಾರ ನಂತರ ರಾಮಚಂದ್ರನೇ ಮೊದಲಾಗಿರುವ ನಾಲ್ಕು ಜನ ಬಾಲಕರು ದಶರಥನ ಮನೆಯಲ್ಲಿ ಬೆಳೆದರು. ಯಾವಾಗಲೂ ಬೆಳೆದಿರುವ ಭಗವಂತನ  ಬೆಳವಣಿಗೆಯು ಲೋಕದ ಜನರ ಮುಂದೆ ದರ್ಶನವನ್ನು ಅಪೇಕ್ಷಿಸಿಯಷ್ಟೆ .

[ಕರ್ಮದಿಂದ ಅವನು ಬೆಳೆಯುವುದೂ ಇಲ್ಲ, ಕುಗ್ಗುವುದೂ ಇಲ್ಲ.  ಬೆಳವಣಿಗೆಯಂತೆ  ಜನ ಕಂಡರು ಅಷ್ಟೇ.  ವಸ್ತುತಃ ದೇವರಿಗೆ ಯಾವ ಬೆಳವಣಿಗೆಯೂ ಇಲ್ಲ].

 

ನಿರೀಕ್ಷ್ಯ ನಿತ್ಯಂ ಚತುರಃ ಕುಮಾರಾನ್  ಪಿತಾ ಮುದಂ ಸನ್ತತಮಾಪ ಚೋಚ್ಚಮ್ ।

ವಿಶೇಷತೋ ರಾಮಮುಖೇನ್ದುಬಿಮ್ಬಮವೇಕ್ಷ್ಯ ರಾಜಾ ಕೃತಕೃತ್ಯ ಆಸೀತ್         ೪.೦೨

 

ತಂದೆಯಾದ ದಶರಥನು ನಾಲ್ಕು ಮಕ್ಕಳನ್ನು ನೋಡಿ ನಿರಂತರವಾಗಿ, ಉತ್ಕೃಷ್ಟವಾದ ಆನಂದವನ್ನು ಹೊಂದಿದನು. ವಿಶೇಷವಾಗಿ ರಾಮನ ಮುಖದಿಂದ ಚಂದ್ರನ ಬಿಂಬವನ್ನು  ನೋಡಿ  ಧನ್ಯನಾದನು. [ಇದನ್ನು ವಾಲ್ಮೀಕಿ  ರಾಮಾಯಣದ ಬಾಲಕಾಂಡದಲ್ಲಿ (೧೮.೨೪) ಈ ರೀತಿ ಹೇಳಿದ್ದಾರೆ:  “ತೇಷಾಂ ಕೇತುರಿವ ಜ್ಯೇಷ್ಠೋ ರಾಮೋ ರತಿಕರಃ ಪಿತುಃ ಬಭೂವ ಭೂಯಃ-”  ಎಂದು.  ಅಂದರೆ ಅವರಲ್ಲಿ ಧ್ವಜದಂತೆ ಇರುವ, ಉತ್ಕೃಷ್ಟನಾಗಿರುವ ರಾಮನು ಬಹಳ ಹೆಚ್ಚು ಆನಂದವನ್ನು ಕೊಡುವವನಾದನು.    “ತೇಷಾಮಪಿ ಮಹಾತೇಜಾ ರಾಮಃ ಸತ್ಯಪರಾಕ್ರಮಃ  ಇಷ್ಟಃ ಸರ್ವಸ್ಯ ಲೋಕಸ್ಯ ಶಶಾಙ್ಕ ಇವ ನಿರ್ಮಲಃ”(೧೮.೨೬) :  ಸತ್ಯಪರಾಕ್ರಮಿಯಾದ ಶ್ರೀರಾಮಚಂದ್ರನು ಮಹಾತೇಜಸ್ವಿಯಾಗಿದ್ದು, ಎಲ್ಲರಿಗೂ ವಿಶೇಷ ಪ್ರಿಯನಾಗಿದ್ದನು.  ಎಲ್ಲರಿಗೂ ಆನಂದ ನೀಡುವವನಾದುದರಿಂದ ಆತನ ಹೆಸರು ರಾಮ ಎಂದಾಯಿತು].

 

ತನ್ಮಾತರಃ ಪೌರಜನಾ ಅಮಾತ್ಯಾ ಅನ್ತಃಪುರಾ ವೈಷಯಿಕಾಶ್ಚ ಸರ್ವೇ ।

ಅವೇಕ್ಷಮಾಣಾಃ ಪರಮಂ ಪುಮಾಂಸಂ ಸ್ವಾನನ್ದತೃಪ್ತಾ ಇವ ಸಮ್ಬಭೂವುಃ ॥೦೪.೦೩

 

ಅವನ ತಾಯಂದಿರು,  ಪುರಜನರು,  ಮಂತ್ರಿ ಮೊದಲಾದವರು,  ಅಂತಃಪುರದಲ್ಲಿರುವವರು. ದೇಶದಲ್ಲಿರುವವರು, ಹೀಗೆ ಎಲ್ಲರೂ  ಉತ್ಕೃಷ್ಟನಾದ ನಾರಾಯಣನನ್ನು ನೋಡಿ ಮೊಕ್ಷಾನಂದವನ್ನು ಹೊಂದಿದವರೋ ಎಂಬಂತೆ ತೃಪ್ತರಾಗಿದ್ದರು.  [ಈ ವಿಷಯವನ್ನು ಬಹಳ ಒತ್ತು ಕೊಟ್ಟು ಹೇಳಿರುವುದನ್ನು ವಾಲ್ಮೀಕಿ ರಾಮಾಯಣದಲ್ಲಿ ನಾವು ಕಾಣುತ್ತೇವೆ].

 

ತತಃ ಸುವಂಶೇ ಶಶಿನಃ ಪ್ರಸೂತೋ ಗಾಧೀತಿ ಶಕ್ರಸ್ತನುಜೋsಸ್ಯ ಚಾsಸೀತ್ ।

ವರೇಣ ವಿಪ್ರತ್ವಮವಾಪ ಯೋsಸೌ ವಿಶ್ವಸ್ಯ ಮಿತ್ರಂ ಸ ಇಹಾsಜಗಾಮ ॥೪.೦೪

 

ತದನಂತರ ಖ್ಯಾತವಾದ ಚಂದ್ರವಂಶದಲ್ಲಿ ಹುಟ್ಟಿದ, ಗಾಧೀಯ ಮಗನಾದ, ಬ್ರಹ್ಮದೇವರ ವರದಿಂದ ಬ್ರಾಹ್ಮಣನಾದ, ಇಡೀ ಪ್ರಪಂಚಕ್ಕೆ ಮಿತ್ರನಾಗಿರುವ ವಿಶ್ವಾಮಿತ್ರರು ಅಲ್ಲಿಗೆ ಬಂದರು.

[ಇಂದ್ರನೇ ಗಾಧೀ ಎನ್ನುವ ರಾಜರ್ಷಿಯಾಗಿ ಹುಟ್ಟಿದ್ದ. ಕುಶನಾಭನ ಮಗ ಗಾಧೀ, ಗಾಧೀಯ ಮಗ ವಿಶ್ವಾಮಿತ್ರ. ಗಾಧೀಯ ತಂದೆ  ಕುಶನಾಭ, ಕುಶಾಂಭು ಮತ್ತು ಕುಶಿಕ ಎನ್ನುವ ಮೂರು ಹೆಸರಿನಿಂದ ಕರೆಯಲ್ಪಡುತ್ತಿದ್ದನು].

 

ತೇನಾರ್ತ್ಥಿತೋ ಯಜ್ಞರಿರಕ್ಷಯೈವ ಕೃಚ್ಛ್ರೇಣ ಪಿತ್ರಾsಸ್ಯ ಭಯಾದ್ ವಿಸೃಷ್ಟಃ ।

ಜಗಾಮ ರಾಮಃ ಸಹ ಲಕ್ಷ್ಮಣೇನ ಸಿದ್ಧಾಶ್ರಮಂ ಸಿದ್ಧಜನಾಭಿವನ್ದ್ಯಃ ॥೪.೦೫

 

ವಿಶ್ವಾಮಿತ್ರರಿಂದ ಯಜ್ಞವನ್ನು ರಕ್ಷಣೆ ಮಾಡಬೇಕೆಂದು ಪ್ರಾರ್ಥಿಸಲ್ಪಟ್ಟವನಾಗಿ, ತಂದೆ ದಶರಥನಿಂದ ಬಹಳ ಕಷ್ಟದಿಂದ ಹಾಗೂ ಭಯದಿಂದ ಕಳುಹಿಸಿಕೊಟ್ಟವನಾದ ಶ್ರೀರಾಮನು, ಲಕ್ಷ್ಮಣನಿಂದ ಕೂಡಿ, ಮುಕ್ತರಿಂದಲೂ ವಂಧ್ಯನಾಗಿ, ಸಿದ್ಧಾಶ್ರಮಕ್ಕೆ ತೆರಳಿದನು. [ವಿಶ್ವಾಮಿತ್ರರು ಇದ್ದ ಆಶ್ರಮದ ಹೆಸರು ಸಿದ್ಧಾಶ್ರಮ ಎಂದಾಗಿತ್ತು. ವಾಲ್ಮೀಕಿ ರಾಮಾಯಣದಲ್ಲಿ ಮತ್ತು  ಸಂಗ್ರಹ ರಾಮಾಯಣದಲ್ಲಿ ಹೇಳುವಂತೆ: ಬಹಳ ಜನ ಇಲ್ಲಿ ತಪಸ್ಸು ಮಾಡಿ ಮೋಕ್ಷದ ಸಿದ್ಧಿಯನ್ನು ಹೊಂದಿರುವುದರಿಂದ ಈ ಆಶ್ರಮಕ್ಕೆ ಸಿದ್ಧಾಶ್ರಮ ಎನ್ನುವ ಹೆಸರು ಬಂದಿತು].

 

ಅನುಗ್ರಹಾರ್ತ್ಥಂ ಸ ಋಷೇರವಾಪ ಸಲಕ್ಷ್ಮಣೋsಸ್ತ್ರಂ ಮುನಿತೋ ಹಿ ಕೇವಲಮ್ ।

ವವನ್ದಿರೇ ಬ್ರಹ್ಮಮುಖಾಃ ಸುರೇಶಾಸ್ತಮಸ್ತ್ರರೂಪಾಃ ಪ್ರಕಟಾಃ ಸಮೇತ್ಯ ॥೪.೦೬

 

ರಾಮಚಂದ್ರನು ವಿಶ್ವಾಮಿತ್ರನ ಅನುಗ್ರಹಕ್ಕಾಗಿ ಲಕ್ಷ್ಮಣನಿಂದ ಕೂಡಿಕೊಂಡು, ವಿಶ್ವಾಮಿತ್ರನಿಂದ ಅಸ್ತ್ರವನ್ನು ಹೊಂದಿದನು. ಆಗ ಬ್ರಹ್ಮನೇ ಮೊದಲಾದ ಅಸ್ತ್ರಾಭಿಮಾನಿಗಳು ಪ್ರಕಟರಾಗಿ, ರಾಮಚಂದ್ರನಿಗೆ ನಮಸ್ಕರಿಸಿ, ತಮಗೇನು ಆಜ್ಞೆ ಎಂದು ಕೇಳಿದರು.  [ನಾನು ಬೇಕೆನಿಸಿದಾಗ ನಿಮ್ಮನ್ನು ಕರೆಯುತ್ತೇನೆ ಎಂದು ಹೇಳಿ ಶ್ರೀರಾಮಚಂದ್ರ ಈ ಎಲ್ಲಾ ಅಸ್ತ್ರಾಭಿಮಾನಿ ದೇವತೆಗಳನ್ನು ಕಳುಹಿಸಿ ಕೊಟ್ಟ ಎಂದು ವಾಲ್ಮೀಕಿ ರಾಮಾಯಣದಲ್ಲಿ ವಿವರಿಸಿದ್ದಾರೆ].

 

ಅಥೋ ಜಘಾನಾsಶು ಶರೇಣ ತಾಟಕಾಂ ವರಾದ್ ವಿಧಾತುಸ್ತದನನ್ಯವದ್ಧ್ಯಾಮ್ ।

ರರಕ್ಷ ಯಜ್ಞಂ ಚ ಮುನೇರ್ನ್ನಿಹತ್ಯ ಸುಬಾಹುಮೀಶಾನಗಿರಾ ವಿಮೃತ್ಯುಮ್ ॥೪.೦೭

 

ಅಸ್ತ್ರೋಪದೇಶವನ್ನು ಪಡೆದ ನಂತರ, ರಾಮಚಂದ್ರನಲ್ಲದೆ ಬೇರೆಯವರಿಂದ ಕೊಲ್ಲಲಿಕ್ಕಾಗದಂತೆ ಬ್ರಹ್ಮದೇವರಿಂದ ವರ ಪಡೆದಿದ್ದ  ತಾಟಕೆಯನ್ನು ಶ್ರೀರಾಮಚಂದ್ರ ಕೇವಲ ಒಂದೇ ಬಾಣದಿಂದ ಕೊಲ್ಲುತ್ತಾನೆ. [ಈ ತಾಟಕೆ ಸುಂದ  ಎನ್ನುವವನ ಹೆಂಡತಿ. ಕಾಲಕ್ರಮೇಣ ಇವಳು ನರಭಕ್ಷಕಳಾಗುತ್ತಾಳೆ. ಆಗ ಅವಳಿಗೆ ಬುದ್ಧಿ ಹೇಳಲೆಂದು ಅಗಸ್ತ್ಯರು ಬರುತ್ತಾರೆ.  ಆದರೆ  ತಾಟಕೆ ಅವರನ್ನೇ ತಿನ್ನಲು ಹೋಗುತ್ತಾಳೆ. ಇದರಿಂದ ಕೋಪಗೊಂಡ ಅಗಸ್ತ್ಯರು ಆಕೆಗೆ ಶಾಪ ಕೊಡುತ್ತಾರೆ.  ಈ ಶಾಪದಿಂದಾಗಿ ಸಮೃದ್ಧವಾಗಿದ್ದ ಕರೂಶ ಮತ್ತು ಮಲದದೇಶವೆಂಬ ಆ ಪ್ರದೇಶ ಬರಡಾಗುತ್ತದೆ. ಅಲ್ಲಿ ತಾಟಕೆ ರಾಕ್ಷಸೀರೂಪವನ್ನು ಹೊಂದಿ ನೆಲೆಸುತ್ತಾಳೆ.  ಇಂತಹ ತಾಟಕೆಯನ್ನು ಶ್ರೀರಾಮ ಕೊಲ್ಲುತ್ತಾನೆ].

ತದನಂತರ ಯಜ್ಞದ ವಾಟಿಕೆಗೆ ಬಂದು, ರುದ್ರದೇವರ ವರದಿಂದ ವಿಮೃತ್ಯುವಾಗಿದ್ದ ಸುಬಾಹುವನ್ನು ಕೊಂದು, ವಿಶ್ವಾಮಿತ್ರನ ಯಜ್ಞವನ್ನು ರಕ್ಷಿಸುತ್ತಾನೆ.

 

ಶರೇಣ ಮಾರೀಚಮಥಾರ್ಣ್ಣವೇsಕ್ಷಿಪದ್ ವಚೋ ವಿರಿಞ್ಚಸ್ಯ ತು ಮಾನಯಾನಃ ।

ಅವದ್ಧ್ಯತಾ ತೇನ ಹಿ ತಸ್ಯ ದತ್ತಾ ಜಘಾನ ಚಾನ್ಯಾನ್ ರಜನೀಚರಾನಥ ॥೪.೦೮

 

ತದನಂತರ ಬ್ರಹ್ಮನ ಮಾತನ್ನು ಗೌರವಿಸುವವನಾಗಿ ಶ್ರೀರಾಮ ಬಾಣದಿಂದ ಮಾರೀಚನನ್ನು ಸಮುದ್ರದಲ್ಲಿ ಬೀಳಿಸುತ್ತಾನೆ. ಬ್ರಹ್ಮನಿಂದ  ಮಾರೀಚನಿಗೆ ಅವಧ್ಯತ್ವವು ಕೊಡಲ್ಪಟ್ಟಿತ್ತು. ಉಳಿದ ಎಲ್ಲಾ ರಾಕ್ಷಸರನ್ನೂ ಕೂಡಾ ರಾಮ ಕೊಲ್ಲುತ್ತಾನೆ.  [ಸುಂದ ಮತ್ತು ತಾಟಕೆ ದಾಂಪತ್ಯದಲ್ಲಿ ಹುಟ್ಟಿದವನು ಮಾರೀಚ ಎಂದು ಬ್ರಹ್ಮಪುರಾಣದ ಉಪೋದ್ಗತ ಭಾಗದಲ್ಲಿ(೫.೨೬) ಹೇಳಿದ್ದಾರೆ.  ‘ಪವನಾಸ್ತ್ರೇಣ ಮಹತಾ ಮಾರೀಚಂತು ನಿಶಾಚರಂ’ ಎಂದು ಪಾದ್ಮ ಪುರಾಣದ ಉತ್ತರಖಂಡಲ್ಲಿ(೨೪೨. ೧೨೮) ಹೇಳಿದ್ದಾರೆ.  ಅಂದರೆ ವಾಯು ಅಸ್ತ್ರದಿಂದ ಮಾರೀಚನನ್ನು ಹೊಡೆದ ಎಂದರ್ಥ.  ಆದರೆ  ಸ ತೇನ ಪರಮಾಸ್ತ್ರೇಣ ಮಾನವೇನ ಸಮಾಹಿತಃ ಎಂದು ಬಾಲಕಾಂಡದಲ್ಲಿ(೩೦.೧೭)) ಹೇಲಲಾಗಿದೆ. ಅಂದರೆ  ಮಾನವಾಸ್ತ್ರದಿಂದ ಹೊಡೆದ ಎಂದರ್ಥ.  ಇದರ ನಿರ್ಣಯಯವನ್ನು ಹೇಳುತ್ತಾ  ಇಲ್ಲಿ ಆಚಾರ್ಯರು  ‘ಶರೇಣ’  ಎಂದಷ್ಟೇ ಹೇಳಿದರೆ,  ಹಿಂದೆ ಪಞ್ಚಾತ್ಮಕೋ ಮಾರುತ ಏವ ಬಾಣಾಃ ॥೩.೭೪॥ ಎಂದು ಹೇಳಿದ್ದಾರೆ. ಹೀಗಾಗಿ ಕೇವಲ ‘ಶರೇಣ’  ಅಂದರೆ ಪವನಾಸ್ತ್ರ ಎಂದೇ ಅರ್ಥ.  ಇನ್ನು ಮನುಃ ಅಂದರೆ ಮುಖ್ಯವಾಗಿ ಮುಖ್ಯಪ್ರಾಣನೇ ಆಗಿರುವುದರಿಂದ  ಇಲ್ಲಿ ಮಾನವಾಸ್ತ್ರ ಎಂದರೂ ಕೂಡಾ ಪವನಾಸ್ತ್ರ ಎಂದೇ ಅರ್ಥ.  ಹೀಗಾಗಿ ಇಲ್ಲಿ ಯಾವ ಗೊಂದಲವೂ ಇಲ್ಲ]. 

 

ತದಾ ವಿದೇಹೇನ ಸುತಾಸ್ವಯಂಬರೋ ವಿಘೋಷಿತೋ ದಿಕ್ಷು ವಿದಿಕ್ಷು ಸರ್ವಶಃ ।

ನಿಧಾರ್ಯ್ಯ ತದ್ ಗಾಧಿಸುತಾನುಯಾಯೀ ಯಯೌ ವಿದೇಹಾನನುಜಾನುಯಾತಃ ॥೪.೦೯

 

ಅದೇ ಸಮಯದಲ್ಲಿ ಮಗಳ ಸ್ವಯಂವರವು ದಿಕ್ಕು-ವಿದಿಕ್ಕುಗಳಲ್ಲಿ ಜನಕರಾಜನಿಂದ ಘೋಷಿಸಲ್ಪಟ್ಟಿತ್ತು.  ಅಲ್ಲಿಗೆ ಹೋಗಬೇಕು ಎಂದು ನಿಶ್ಚಯಿಸಿದ ಶ್ರೀರಾಮ,  ವಿಶ್ವಾಮಿತ್ರರನ್ನು ಅನುಸರಿಸಿ, ಲಕ್ಷ್ಮಣನಿಂದ ಅನುಸರಿಸಲ್ಪಟ್ಟವನಾಗಿ ವಿದೇಹ ರಾಜ್ಯದತ್ತ (ಇಂದಿನ ನೇಪಾಳ) ತೆರಳಿದನು.  

[ಪಾದ್ಮ ಪುರಾಣದ ಉತ್ತರ ಖಂಡದಲ್ಲಿ(೨೪೨.೧೩೩)   ‘ವಾಜಪೇಯಂ ಕ್ರತುಂ ಯಷ್ಟುಮಾರೇಭೇ ಮುನಿಸತ್ತಮೈಃ’ ಎಂದಿದ್ದಾರೆ. ಅಂದರೆ ಯಜ್ಞ ನೋಡಲೆಂದು ಹೋದರು ಎಂದರ್ಥ. ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲೂ(೩೧.೬) ಕೂಡಾ ಯಜ್ಞ ನೋಡಲು ಹೋದರು ಎಂದಿದ್ದಾರೆ. (ಮೈಥಿಲಸ್ಯ  ನರಶ್ರೇಷ್ಠ ಜನಕಸ್ಯ  ಭವಿಷ್ಯತಿ ಯಜ್ಞಃ ಪರಮಧರ್ಮೀಷ್ಠಸ್ತಸ್ಯ ಯಾಸ್ಯಾಮಹೇ ವಯಮ್) ಆದರೆ ಇಲ್ಲಿ ಆಚಾರ್ಯರು ‘ಸ್ವಯಮ್ಬರಕ್ಕೆ ಹೊರಟರು’ ಎಂದಷ್ಟೇ ಹೇಳಿದ್ದಾರೆ.  ಇದಕ್ಕೆ ಕಾರಣ ಇಷ್ಟು: ಸ್ವಯಮ್ಬರ ಎನ್ನುವುದು ಹೃದಯ, ಯಜ್ಞ ಎನ್ನುವುದು ಹೊರಗಡೆಯ ನೆಪ. ಅದರಿಂದಾಗಿ ಆಚಾರ್ಯರು ನಿಜವಾದ ಉದ್ದೇಶವನ್ನು ಹೇಳಿದರು. ಹೀಗಾಗಿ ಇಲ್ಲಿ ಯಾವ  ವಿರೋಧವೂ ಇಲ್ಲ].

 

ಅಥೋ ಅಹಲ್ಯಾಂ ಪತಿನಾsಭಿಶಪ್ತಾಂ ಪ್ರಧರ್ಷಣಾದಿನ್ದ್ರಕೃತಾಚ್ಛಿಲೀಕೃತಾಮ್ ।

ಸ್ವದರ್ಶನಾನ್ಮಾನುಷತಾಮುಪೇತಾಂ ಸುಯೋಜಯಾಮಾಸ ಸ ಗೌತಮೇನ ॥೪.೧೦

 

ತದನಂತರ ಇಂದ್ರ ಮಾಡಿದ ಬಲಾತ್ಕಾರದಿಂದ, ಪತಿಯಿಂದ ಶಾಪಗ್ರಸ್ಥಳಾದ, ಅದರಿಂದಲೇ ಕಲ್ಲಿನಂತಾಗಿರುವ ಅಹಲ್ಯೆಯನ್ನು, ತನ್ನ ದರ್ಶನದಿಂದ,  ಮನುಷ್ಯ ದೃಷ್ಟಿಗೋಚರಳನ್ನಾಗಿಸಿ ,  ಗೌತಮನೊಂದಿಗೆ ಒಟ್ಟುಗೂಡಿಸಿದನು.  

[ಇಲ್ಲಿ ‘ಇಂದ್ರ ಬಲತ್ಕಾರ ಮಾಡಿದ’ ಎಂದು ಹೇಳಿದ್ದಾರೆ. ಆದರೆ ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ(೪೮.೨೦) ‘ಮತಿಂ ಚಕಾರ ದುರ್ಮೇಧಾ  ದೇವರಾಜಕುತೂಹಲಾತ್’  ಎಂದಿದೆ.  ಅಂದರೆ ಇಂದ್ರನಲ್ಲಿ ಭೋಗದ ಕುತೂಹಲದಿಂದ ಸಮಾಗಮವನ್ನು ಅಹಲ್ಯೆ ಬಯಸಿದಳು ಎಂದರ್ಥ. ತದನಂತರ(೪೮.೨೧) ಅಲ್ಲಿ ಆಕೆ ಹೇಳುತ್ತಾಳೆ:  ಕೃತಾರ್ಥಾSಸ್ಮಿ ಸುರಶ್ರೇಷ್ಠ ಗಚ್ಛ ಶೀಘ್ರಮಿತಃ ಪ್ರಭೋ  (ಸಮಾಗಮದಿಂದ ಕೃತಾರ್ಥಳಾದೆನು ಸ್ವಾಮಿ, ಬೇಗ ಇಲ್ಲಿಂದ ಹೊರಡಿ) ಎಂದು.  ಹೀಗಿರುವಾಗ ಏಕೆ ಆಚಾರ್ಯರು ಇಲ್ಲಿ ‘ಇಂದ್ರ ಬಲತ್ಕಾರ ಮಾಡಿದ’ ಎಂದು ಹೇಳಿದ್ದಾರೆ?  ಈ ಪ್ರಶ್ನೆಗೆ ಉತ್ತರ ಸರಳ!  ಅಹಲ್ಯೆಗೆ ಆ ರೀತಿ ಮನಸ್ಸು ಬಂದಿತು ಎಂದರೆ, ಆ ಮನಸ್ಸನ್ನು ಪ್ರಚೋದನೆ ಮಾಡಿದವನೂ ಇಂದ್ರನೇ.  ಹೀಗಾಗಿ ಇಂದ್ರನ ಮನೋಭಿಮಾನಿತ್ವವನ್ನು ಪುರಾಣಗಳು ದರ್ಶನ ಭಾಷೆಯಲ್ಲಿ ಹೇಳಿದರೆ, ಅದನ್ನು ಸಮಾಧಿ ಭಾಷೆಯಲ್ಲಿ ಇಲ್ಲಿ ಆಚಾರ್ಯರು ಬಿಡಿಸಿ ಹೇಳಿದ್ದಾರೆ ಅಷ್ಟೇ.  ಇದನ್ನು ವಾಲ್ಮೀಕೀ ರಾಮಾಯಣದ ಉತ್ತರಕಾಂಡದಲ್ಲೇ(೩೦.೩೦)  ನಾವು ಕಾಣಬಹುದು.  ಅಲ್ಲಿ ಬ್ರಹ್ಮದೇವರು ಇಂದ್ರನಿಗೆ ಹೇಳುತ್ತಾರೆ:  ‘ಸಾ ತ್ವಯಾ ಧರ್ಷಿತಾ ಶಕ್ರ ಕಾಮಾರ್ತೇನ ಸಮನ್ಯುನಾ’    (“ಎಲೈ ಶಕ್ರನೇ, ಕಾಮಾರ್ತನಾದ ನಿನ್ನಿಂದ ಅವಳು ಬಲಾತ್ಕಾರಿತಳಾಗಿದ್ದಾಳೆ”) ಎಂದು.  ಅಲ್ಲಿ(೩೦.೪೦) ಅಹಲ್ಯೆ:  ‘ಅಜ್ಞಾನಾದ್ ಧರ್ಷಿತಾ ನಾಥ ತ್ವದ್ರೂಪೇಣ ದಿವೌಕಸಾ’ ಎಂದು ಅದೇ ಮಾತಿನಲ್ಲಿ ಹೇಳುತ್ತಾಳೆ.  ಹೀಗಾಗಿ ಉತ್ತರಕಾಂಡ ಮತ್ತು ಬಾಲಕಾಂಡಕ್ಕೂ ನಡುವೆ ಬರಬಹುದಾದ ವಿರೋಧವನ್ನು  ಆಚಾರ್ಯರು ಈ ರೀತಿ ಪರಿಹಾರ ಮಾಡಿ ತೋರಿಸಿದ್ದಾರೆ].

 

ಬಲಂ ಸ್ವಭಕ್ತೇರಧಿಕಂ ಪ್ರಕಾಶಯನ್ನನುಗ್ರಹಂ ಚ ತ್ರಿದಶೇಷ್ವತುಲ್ಯಮ್ ।

ಅನನ್ಯಭಕ್ತಾಂ ಚ ಸುರೇಶಕಾಙ್ಕ್ಷಯಾ ವಿಧಾಯ ನಾರೀಂ  ಪ್ರಯಯೌ ತಯಾsರ್ಚ್ಚಿತಃ ॥೪.೧೧

 

ಹೀಗೆ ರಾಮಚಂದ್ರನು ಭಗವದ್ಭಕ್ತಿಯ ಉತ್ಕೃಷ್ಟವಾದ ಬಲವನ್ನು ತೋರುತ್ತಾ, ದೇವತೆಗಳಲ್ಲಿ  ಎಣೆಯಿರದ  ಅನುಗ್ರಹವನ್ನು ತೋರಿಸುತ್ತಾ, ಇಂದ್ರನ ಇಚ್ಛೆಯಂತೆ^  ಕೇವಲ ವಿಷ್ಣು ಭಕ್ತೆಯಾಗಿರುವ ಅಹಲ್ಯೆಯನ್ನು ಎಲ್ಲರಿಗೂ ಕಾಣುವ ಹೆಣ್ಣನ್ನಾಗಿಸಿ, ಆಕೆಗೆ ವಿದಾಯ ಹೇಳಿ, ಅವಳಿಂದ ಪೂಜಿತನಾಗಿ ಮುಂದೆ ತೆರಳಿದನು.
[^ಅತಿರಿಕ್ತವಾಗಿ ತಪಸ್ಸು ಮಾಡುತ್ತಿದ್ದ ಗೌತಮನಿಗೆ ಬುದ್ಧಿಬರಬೇಕು ಎನ್ನುವ ದೇವತೆಗಳ ಸಂಕಲ್ಪವನ್ನು ಈಡೇರಿಸುವುದಕ್ಕಾಗಿ  ಇಂದ್ರ ಆ ರೀತಿ ಮಾಡಿದ್ದ.
 ಆದರೆ ತದನಂತರ ತನ್ನ ಕಾರಣದಿಂದ ಶಾಪಗ್ರಸ್ಥಳಾದ ಅಹಲ್ಯೆ ಉದ್ಧಾರವಾಗಬೇಕು ಎನ್ನುವ ಇಚ್ಚೆ ಆತನಿಗಿತ್ತು].

 

ಶ್ಯಾಮಾವದಾತೇ ಜಗದೇಕಸಾರೇ ಸ್ವನನ್ತಚನ್ದ್ರಾಧಿಕಕಾನ್ತಿಕಾನ್ತೇ ।

ಸಹಾನುಜೇ ಕಾರ್ಮ್ಮುಕಬಾಣಪಾಣೌ ಪುರೀಂ ಪ್ರವಿಷ್ಟೇ ತುತುಷುರ್ವಿದೇಹಜಾಃ ॥೪.೧೨

 

ನೀಲಿ ಬಣ್ಣದ, ಜಗತ್ತಿನ ಸೌಂದರ್ಯ ಸಾರವೆಲ್ಲವನ್ನೂ ಒಳಗೊಂಡಿರುವ, ಅನಂತ ಚಂದ್ರರ ಕಾಂತಿಗಿಂತಲೂ   ಮಿಗಿಲಾಗಿರುವ, ಮನೋಹರನಾಗಿರುವ ರಾಮಚಂದ್ರನು, ತನ್ನ ತಮ್ಮನಾದ ಲಕ್ಷ್ಮಣನಿಂದ ಒಡಗೂಡಿಕೊಂಡು, ಬಿಲ್ಲು ಬಾಣಗಳನ್ನು ಹಿಡಿದು, ಪಟ್ಟಣವನ್ನು ಪ್ರವೇಶ ಮಾಡಲು, ವಿದೇಹ ದೇಶದ ಜನರು ಅತ್ಯಂತ ಸಂತಸವನ್ನು ಹೊಂದಿದರು.

ಪಪುರ್ನ್ನಿತಾನ್ತಮ್ ಸರಸಾಕ್ಷಿಭೃಙ್ಗೈರ್ವರಾನನಾಬ್ಜಂ ಪುರುಷೋತ್ತಮಸ್ಯ।

ವಿದೇಹನಾರೀನರವರ್ಯ್ಯಸಙ್ಘಾ ಯಥಾ ಮಹಾಪೂರುಷಿಕಾಸ್ತದಙ್ಘ್ರಿಮ್ ॥೪.೧೩

 

ವಿದೇಹ ದೇಶದ ಹೆಣ್ಣುಮಕ್ಕಳು, ಗಂಡುಮಕ್ಕಳು, ಹಾಗೂ ಎಲ್ಲರೂ ಕೂಡಾ, ತಮ್ಮ ಪ್ರೇಮ ತುಂಬಿದ ಕಣ್ಣುಗಳೆಂಬ ದುಂಬಿಗಳಿಂದ ರಾಮಚಂದ್ರನ ಉತ್ಕೃಷ್ಟವಾದ ಮುಖಕಮಲವೆಂಬ  ಮಕರಂದವನ್ನು ಚೆನ್ನಾಗಿ ಹೀರಿದರು. ಪರಮಾತ್ಮನ ಭಕ್ತರು ಪರಮಾತ್ಮನ ಪಾದದಲ್ಲೇ ಹೇಗೆ ದೃಷ್ಟಿ ನೆಟ್ಟಿರುತ್ತಾರೋ  ಹಾಗೇ,  ಅವರೆಲ್ಲರೂ ರಾಮಚಂದ್ರನ ಮುಖದಲ್ಲೇ ತಮ್ಮ ದೃಷ್ಟಿಯನ್ನು ನೆಟ್ಟಿದ್ದರು.

 

ತಥಾ ವಿದೇಹಃ ಪ್ರತಿಲಭ್ಯ ರಾಮಂ ಸಹಸ್ರನೇತ್ರಾವರಜಂ ಗವಿಷ್ಠಮ್ ।

ಸಮರ್ಚ್ಚಯಾಮಾಸ ಸಹಾನುಜಂ ತಮೃಷಿಂ ಚ ಸಾಕ್ಷಾಜ್ಜ್ವಲನಪ್ರಕಾಶಮ್ ೪.೧೪

 

ಜನಕನು ಇಂದ್ರನ  ತಮ್ಮನಾಗಿರುವ ಉಪೇಂದ್ರನನ್ನು ಹೇಗೋ, ಹಾಗೇ, ಅವನ ಅವತಾರವಾಗಿರುವ, ತನ್ನ ತಮ್ಮನಿಂದ ಕೂಡಿಕೊಂಡಿರುವ ಶ್ರೀರಾಮಚಂದ್ರನನ್ನು ಮತ್ತು ಅವರೊಂದಿಗಿರುವ, ಬೆಂಕಿಯಂತೆ ಬೆಳಗುತ್ತಿರುವ ವಿಶ್ವಾಮಿತ್ರನನ್ನು ಪೂಜಿಸಿದನು.  [ಹೇಗೆ ಅಣ್ಣನಾದ ಇಂದ್ರನು(ಸಹಸ್ರನೇತ್ರಾವರಜಂ) ತನ್ನ ತಮ್ಮನಾದ ವಾಮನರೂಪಿ ಭಗವಂತನನ್ನು ಪೂಜಿಸುತ್ತಾನೋ ಹಾಗೇ, ವಯಸ್ಸಿನಲ್ಲಿ ಹಿರಿಯನಾದ ಜನಕನು ಶ್ರೀರಾಮಚಂದ್ರನನ್ನು ಪೂಜಿಸಿದನು]. 

 

ಮೇನೇ ಚ ಜಾಮಾತರಮಾತ್ಮಕನ್ಯಾಗುಣೋಚಿತಂ ರೂಪನವಾವತಾರಮ್ ।

ಉವಾಚ ಚಾಸ್ಮೈ ಋಷಿರುಗ್ರತೇಜಾಃ ಕುರುಷ್ವ ಜಾಮಾತರಮೇನಮಾಶ್ವಿತಿ ॥೪.೧೫

 

ಆ ಕ್ಷಣದಲ್ಲೇ, ಅಸದೃಶ ಗುಣಲಕ್ಷಣವುಳ್ಳ ಶ್ರೀರಾಮಚಂದ್ರನೇ ತನ್ನ ಕನ್ಯೆಗೆ ಯೋಗ್ಯನಾಗಿರುವ ವರ ಎಂಬುದಾಗಿ ಜನಕನು ಅಂದುಕೊಂಡನು. ಅದೇ ಸಮಯದಲ್ಲಿ ಉಗ್ರತೇಜನಾದ ವಿಶ್ವಾಮಿತ್ರನು “ಇವನನ್ನು ಅಳಿಯನನ್ನಾಗಿ ಮಾಡಿಕೋ” ಎಂದು ಜನಕನಿಗೆ ಹೇಳಿದನು.

 

ಸ ಆಹ ಚೈನಂ ಪರಮಂ ವಚಸ್ತೇ ಕರೋಮಿ ನಾತ್ರಾಸ್ತಿ ವಿಚಾರಣಾ ಮೇ।

ಶೃಣುಷ್ವ ಮೇsಥಾಪಿ ಯಥಾ ಪ್ರತಿಜ್ಞಾ ಸುತಾಪ್ರದಾನಾಯ ಕೃತಾ ಪುರಸ್ತಾತ್ ॥೪.೧೬

 

ವಿಶ್ವಾಮಿತ್ರರ ಮಾತನ್ನು ಕೇಳಿದ ಜನಕನು ಅವರನ್ನು ಕುರಿತು ಈ ರೀತಿ ಹೇಳುತ್ತಾನೆ: “ನಿಮ್ಮ ಉತ್ಕೃಷ್ಟವಾದ ಮಾತನ್ನು ನಾನು ನಡೆಸಿಕೊಡುತ್ತೇನೆ.  ಈ ವಿಚಾರದಲ್ಲಿ ಯಾವುದೇ ಸಂದೇಹ ಬೇಡ.  ಆದರೆ ಮಗಳನ್ನು ಕೊಡುವ ಕುರಿತು ನಾನು ಈ  ಹಿಂದೆ ಮಾಡಿದ ಪ್ರತಿಜ್ಞೆಯೊಂದಿದೆ.  ಅದನ್ನು ಕೇಳು:”  ಎಂದು.

 

ತಪೋ ಮಯಾ ಚೀರ್ಣ್ಣಮುಮಾಪತೇಃ ಪುರಾ ವರಾಯುಧಾವಾಪ್ತಿಧೃತೇನ ಚೇತಸಾ ।

ಸ ಮೇ ದದೌ ದಿವ್ಯಮಿದಂ ಧನುಸ್ತದಾ ಕಥಞ್ಚನಾಚಾಲ್ಯಮೃತೇ ಪಿನಾಕಿನಮ್ ॥೪.೧೭

 

ನನ್ನಿಂದ ಈ ಹಿಂದೆ ಒಳ್ಳೆಯ ಆಯುಧವನ್ನು ಪಡೆಯಬೇಕು ಎಂಬ ಮನಸ್ಸಿನಿಂದ ಶಿವನನ್ನು ಕುರಿತು ತಪಸ್ಸು ನಡೆಸಲ್ಪಟ್ಟಿದೆ. ಅವನಾದರೋ  ನನಗೆ ಈ ಉತ್ಕೃಷ್ಟವಾದ ಧನುಸ್ಸನ್ನು ಕೊಟ್ಟ. ಹೀಗೆ ಸದಾಶಿವನನ್ನು ಬಿಟ್ಟು, ಒಂದು ಚೂರೂ ಅಲುಗಾಡಿಸಲು ಅಸಾಧ್ಯವಾದ ಈ ಧನುಸ್ಸನ್ನು ನಾನು ಶಿವನಿಂದ ವರವಾಗಿ ಪಡೆದೆ.

[ವಾಲ್ಮೀಕಿ ರಾಮಾಯಣದಲ್ಲಿ ಈ ಕುರಿತು ಬೇರೆ ರೀತಿಯಾದ  ಮಾತುಗಳು  ಬರುತ್ತದೆ. ಬಾಲಕಾಂಡದಲ್ಲಿ(೬೬.೮, ೧೨)  ಹೇಳುವಂತೆ: ‘ದೇವರಾತ ಇತಿ ಖ್ಯಾತೋ ನಿಮೇಃ  ಷಷ್ಠೋ  ಮಹೀಪತಿಃ ನ್ಯಾಸೋsಯಂ ತಸ್ಯ ಭಗವನ್ ಹಸ್ತೇ ದತ್ತೋ ಮಹಾತ್ಮನಾ’   (ನಿಮಿಯಿಂದ ಆರನೇ ರಾಜ  ದೇವರಾತ.  ಈ ಬಿಲ್ಲು ಏನಿದೆ,  ಅದು ಅವನಿಗೆ ಕೊಟ್ಟ ನ್ಯಾಸ.  ಇಟ್ಟುಕೊಳ್ಳಲು ಕೊಟ್ಟಿರುವ, ಮುಂದೆ ಹಿಂತಿರುಗಿಸಬೇಕಾದ  ವಸ್ತುವನ್ನು ನ್ಯಾಸ ಎನ್ನುತ್ತಾರೆ).  ತದೇತದ್ ದೇವದೇವಸ್ಯ ಧನೂರತ್ನಂ ಮಹಾತ್ಮನಃ ನ್ಯಾಸಭೂತಂ ತದಾ ನ್ಯಸ್ತಮಸ್ಮಾಕಂ ಪೂರ್ವಜೇ ವಿಭೋ    (ಶಂಕರನು ನನ್ನ ಪೂರ್ವಜನಾದ ದೇವರಾತನಲ್ಲಿ ನ್ಯಾಸರೂಪದಲ್ಲಿ ನೀಡಿದ ಧನುಸ್ಸು ಇದಾಗಿದೆ ಎಂದು ಅಲ್ಲಿ ಜನಕ ರಾಜನೇ  ಹೇಳಿದ್ದಾನೆ).   ಅಯೋಧ್ಯಾಕಾಂಡದಲ್ಲಿ(೧೧೮.೩೯) ಹೇಳುವಂತೆ:   ಮಹಾಯಜ್ಞೇ  ತದಾ ತಸ್ಯ ವರುಣೇನ  ಮಹಾತ್ಮನ ದತ್ತಂ ಧನುರ್ವರಂ  ಪ್ರೀತ್ಯಾ  ತೂಣೀ  ಚಾಕ್ಷಯಸಾಯಕೌ  (ಇಲ್ಲಿ ವರುಣ ಕೊಟ್ಟ ಧನುಸ್ಸು ಎಂದು ಹೇಳಿದ್ದಾರೆ. ವರುಣ ಎಂಬ ಶಬ್ದಕ್ಕೆ ‘ವೃಣೀತೆ ವರಾಣಿ’ ಎಂಬ ಅರ್ಥವಿಟ್ಟುಕೊಂಡರೆ, ವರವನ್ನು ಕರುಣಿಸುವ ಶಿವ ಎಂಬ ಅರ್ಥ ಕೂಡುತ್ತದೆ).

ಎಲ್ಲವನ್ನೂ ಸಮಷ್ಟಿಯಾಗಿ ನೋಡಿದಾಗ ನಮಗೆ ತಿಳಿಯುವುದು ಇಷ್ಟು: ಹಿಂದೆ ದೇವರಾತ ಎಂಬ ರಾಜನಲ್ಲಿ ಶಿವ ನ್ಯಾಸವಾಗಿ ಇಟ್ಟಿದ್ದ ಪಿನಾಕವೆಂಬ ಶಿವಧನುಸ್ಸನ್ನು  ಜನಕರಾಜ  ಶತ್ರು ಸಂಹಾರಕ್ಕಾಗಿ ತಪಸ್ಸು ಮಾಡಿ ಪಡೆದಿರುತ್ತಾನೆ.

ತಪಸ್ಸು ಎನ್ನುವುದನ್ನು  ಇಲ್ಲಿ ಮಹಾಯಜ್ಞ ಎಂದು ಕರೆದಿರುವುದು ವಿಶೇಷ.  ಜನಕನ ತಪಸ್ಸಿಗೆ ಮೆಚ್ಚಿ, ವರಗಳನ್ನು ಕರುಣಿಸುವ ಶಿವನು, ತನ್ನದೇ ಆದ ಈ ಅದ್ಭುತ ಪಿನಾಕವನ್ನು ಶತ್ರುನಾಶಕ್ಕಾಗಿ ಜನಕನಿಗೆ ನೀಡಿರುತ್ತಾನೆ (ಧನುಸ್ಸಿನ ಸನ್ನಿಧಾನವೇ ಅವನಿಗೆ ರಕ್ಷೆಯಾಗಿತ್ತು). ಶಿವನನ್ನು ಹೊರತುಪಡಿಸಿ, ಅವನಿಗಿಂತ ಕಿರಿಯರಾದವರು ಯಾರೂ ಅದನ್ನು ಎತ್ತಲಾರರು ಎಂಬ ಮಾತನ್ನು ಶಿವನೇ ಜನಕನಿಗೆ ಹೇಳಿರುತ್ತಾನೆ. ಆದರೆ ಜನಕ ತನ್ನ ಮಗಳಾದ ಸೀತೆ ಅದನ್ನು ಲೀಲೆಯಿಂದ ಎತ್ತುವುದನ್ನು ಕಂಡು, ತನ್ನ ಮಗಳನ್ನು ವರಿಸುವ ಗಂಡು ಇದನ್ನು ಹೆದೆಯೇರಿಸುವವನೇ ಆಗಿರಬೇಕೆಂದು ಪ್ರತಿಜ್ಞೆ ಮಾಡಿರುತ್ತಾನೆ. ಕೂರ್ಮಪುರಾಣದಲ್ಲಿ(೨೧.೨೧) ಹೇಳುವಂತೆ: ‘ಪ್ರೀತಶ್ಚ ಭಗವಾನೀಶಸ್ತ್ರಿಶೂಲೀ  ನೀಲಲೋಹಿತಃ ಪ್ರದದೌ ಶತ್ರುನಾಶಾರ್ಥಂ ಜನಕಾಯಾದ್ಭುತಂ ಧನುಃ’.  ತಥಾಚ: ಪಿನಾಕ ಧನುಸ್ಸು ನ್ಯಾಸರೂಪದಲ್ಲಿ ದೇವರಾತನಿಗೆ ಕೊಡಲ್ಪಟ್ಟಿತ್ತು.  ದೇವರಾತನ ನಂತರ ಅದು ಸದಾಶಿವನಲ್ಲಿಗೆ ಹಿಂದಿರುಗಬಾರದು ಎಂದು ಜನಕ ತಪಸ್ಸು ಮಾಡಿ ಮತ್ತೆ ಆ ಧನುಸ್ಸನ್ನು ಶಿವನಿಂದ ಪಡೆದಿದ್ದ. ಹೀಗೆ ಬೇರೆಬೇರೆ ಕಡೆ ಹೇಳಿದ ವಿಷಯಗಳನ್ನು ಒಗ್ಗೂಡಿಸಿ, ಯಾವುದೇ ವಿರೋಧವಿಲ್ಲದೆ,  ‘ತಪೋ ಮಯಾ ಚೀರ್ಣಂ’ ಎಂದು ಆಚಾರ್ಯರು ಇಲ್ಲಿ ನಿರ್ಣಯ ನೀಡಿದ್ದಾರೆ.   

 

ನ ದೇವದೈತ್ಯೋರಗದೇವಗಾಯಕಾ ಅಲಂ ಧನುಶ್ಚಾಲಯಿತುಂ ಸವಾಸವಾಃ ।

ಕುತೋ ನರಾಸ್ತದ್ವರತೋ ಹಿ ಕಿಙ್ಕರಾಃ ಸಹಾನಸೈವಾತ್ರ ಕೃಷನ್ತಿ ಕೃಚ್ಛ್ರತಃ ॥೪.೧೮

 

ದೇವತೆಗಳು, ದೈತ್ಯರು, ನಾಗರು, ಗಂಧರ್ವರು, ಇಂದ್ರನಿಂದ ಕೂಡಿದ ಯಾರೂ ಕೂಡಾ ಈ ಧನುಸ್ಸನ್ನು ಅಲುಗಾಡಿಸಲು ಸಮರ್ಥರಲ್ಲ.  ಅವರಿಂದಲೇ ಅಸಾಧ್ಯವಾಗಿರುವಾಗ ಇನ್ನು ಮನುಷ್ಯರ ಮಾತೇನು?  ಆದರೆ  ಶಿವನ ವರದಿಂದ ಈ ಎಲ್ಲಾ ಕಿಂಕರರು(ಜನಕ ರಾಜನ ಆಸ್ಥಾನ ಸೇವಕರು) ಈ ಬಿಲ್ಲನ್ನು ಗಾಡಿಯಿಂದ ಕೂಡಿಕೊಂಡು ಕಷ್ಟಪಟ್ಟು ಎಳೆದುಕೊಂಡು ಬರಬಲ್ಲರು.

 

ಅಧಾರ್ಯ್ಯಮೇತದ್ ಧನುರಾಪ್ಯ ಶಙ್ಕರಾದಹಂ ನೃಣಾಂ ವೀರ್ಯ್ಯಪರೀಕ್ಷಣೇ ಧೃತಃ ।

ಸುತಾರ್ತ್ಥಮೇತಾಂ ಚಕರ ಪ್ರತಿಜ್ಞಾಂ ದದಾಮಿ ಕನ್ಯಾಂ ಯ ಇದಂ ಹಿ ಪೂರಯೇತ್ ॥೪.೧೯

 

ಯಾರಿಗೂ ಧರಿಸಲಾಗದ ಈ ಧನುಸ್ಸನ್ನು ನಾನು ಸದಾಶಿವನಿಂದ  ಪಡೆದು,  ಮನುಷ್ಯರ ವೀರ್ಯವನ್ನು ಪರೀಕ್ಷೆ ಮಾಡುವುದರಲ್ಲಿ ಆಸಕ್ತನಾಗಿದ್ದೇನೆ. ಯಾರು ಈ ಬಿಲ್ಲನ್ನು ಹೆದೆಯೇರಿಸಿ ಬಾಣವನ್ನು ಹೂಡುತ್ತಾನೋ, ಅವನಿಗೆ ನನ್ನ ಮಗಳನ್ನು ಕೊಡುತ್ತೇನೆ  ಎನ್ನುವ ಪ್ರತಿಜ್ಞೆಯನ್ನು ಮಗಳಿಗಾಗಿ ಈ ಹಿಂದೆ ನಾನು ಮಾಡಿದ್ದೇನೆ”  ಎನ್ನುತ್ತಾನೆ ಜನಕ.

 

ಇತೀರಿತಾಂ ಮೇ ಗಿರಮಭ್ಯವೇತ್ಯ ದಿತೇಃಸುತಾ ದಾನವಯಕ್ಷರಾಕ್ಷಸಾಃ ।

ಸಮೇತ್ಯ ಭೂಪಾಶ್ಚ ಸಮೀಪಮಾಶು ಪ್ರಗೃಹ್ಯ ತಚ್ಚಾಲಯಿತುಂ ನ ಶೇಕುಃ ॥೪.೨೦

 

ಈ ರೀತಿಯಾದ ನನ್ನ ಪ್ರತಿಜ್ಞೆಯನ್ನು ತಿಳಿದ ದೈತ್ಯರು, ದಾನವರು, ಯಕ್ಷರು,  ರಾಕ್ಷಸರು ಮತ್ತು  ಮನುಷ್ಯರಾಜರೂ ಕೂಡಾ ಈ ಬಿಲ್ಲಿರುವಲ್ಲಿಗೆ  ಬಂದು, ಅದನ್ನು ಹಿಡಿದು, ಅದನ್ನು ಆಲುಗಾಡಿಸಲೂ ಸಾಧ್ಯವಾಗದೇ  ಹಿಂದಿರುಗಿದ್ದಾರೆ. 

 

ಸಂಸ್ವಿನ್ನಗಾತ್ರಾಃ ಪರಿವೃತ್ತನೇತ್ರಾ ದಶಾನನಾದ್ಯಾಃ ಪತಿತಾ ವಿಮೂರ್ಚ್ಛಿತಾಃ ।

ತಥಾsಪಿ ಮಾಂ ಧರ್ಷಯಿತುಂ ನ ಶೇಕುಃ  ಸುತಾಕೃತೇ ತೇ ವಚನಾತ್ ಸ್ವಯಮ್ಭುವಃ ॥೪.೨೧

 

ಎಲ್ಲರೂ ಕೂಡಾ ಧನುಸ್ಸನ್ನು ಎತ್ತಲು ಹೋಗಿ ಬೆವರಿಳಿದ ಮೈನವರಾದರು.  ಆದರೆ  ಬ್ರಹ್ಮನ ವರದಿಂದಾಗಿ ನನ್ನನ್ನು ಬಲಾತ್ಕಾರ ಮಾಡಲು ಅವರ್ಯಾರೂ ಸಮರ್ಥರಾಗಲಿಲ್ಲ.

 

ಪುರಾ ಹಿ ಮೇsಧಾತ್ ಪ್ರಭುರಬ್ಜಜೋ ವರಂ ಪ್ರಸಾದಿತೋ ಮೇ ತಪಸಾ ಕಥಞ್ಚನ ।

ಬಲಾನ್ನ ತೇ ಕಶ್ಚಿದುಪೈತಿ ಕನ್ಯಕಾಂ ತದಿಚ್ಛುಭಿಸ್ತೇ ನಚ ಧರ್ಷಣೇತಿ ॥೪.೨೨

 

ಹಿಂದೆ ನನ್ನ ತಪಸ್ಸಿಗೆ ಮೆಚ್ಚಿ  ಸಮರ್ಥನಾದ ಬ್ರಹ್ಮದೇವರು ನನಗೆ ವರವನ್ನು ನೀಡಿದರು: “ನಿನ್ನ ಕನ್ಯೆಯನ್ನು ಬಲಾತ್ಕಾರವಾಗಿ ಒಬ್ಬನೂ ಹೊಂದಲಾರ. ಅವಳನ್ನು ಬಯಸುವವರು ನಿನ್ನನ್ನೂ ಕೂಡಾ ಬಲಾತ್ಕಾರ ಮಾಡಲು ಸಾಧ್ಯವಿಲ್ಲ”  ಎಂಬ ವರವನ್ನು ನಾನು ಪಡೆದೆ.

[ಈ ಮಾತನ್ನು ವಾಲ್ಮೀಕಿ ರಾಮಾಯಣದಲ್ಲಿ ಹೀಗೆ ಹೇಳಿದ್ದಾರೆ:   ‘ತತೋ ದೇವಗಣಾನ್ ಸರ್ವಾನ್ ತಪಸಾsಹಂ ಪ್ರಸಾದಯಮ್’ (ಬಾಲಕಾಂಡ ೬೬.೨೩). ಅಂದರೆ: “ನಾನು ಎಲ್ಲಾ ದೇವಗಣಗಳನ್ನೂ ಕೂಡಾ ತಪಸ್ಸಿನಿಂದ ಪ್ರಸನ್ನಗೊಳಿಸಿದೆ” ಎಂದರ್ಥ.  ಇಲ್ಲಿ ‘ದೇವಗಣಾನ್’ ಅಂದರೆ: ಸಮಸ್ತ ದೇವಗಣಾಧಿಪತಿಯಾದ ಬ್ರಹ್ಮ ಎಂದೇ ಅರ್ಥ].

 

ತತಸ್ತು ತೇ ನಷ್ಟಮದಾ ಇತೋ ಗತಾಃ ಸಮಸ್ತಶೋ ಹ್ಯಸ್ತನ ಏವ ಪಾರ್ತ್ಥಿವಾಃ ।

ತತೋ ಮಮಾಯಂ ಪ್ರತಿಪೂರ್ಯ್ಯ ಮಾನಸಂ ವೃಣೋತು ಕನ್ಯಾಮಯಮೇವ ಮೇsರ್ತ್ಥಿತಃ ॥೪.೨೩

 

“ಅದರಿಂದ, ನಿನ್ನೆ ದಿವಸವಷ್ಟೇ ಎಲ್ಲಾ ರಾಜರೂ ಕೂಡಾ ತಮ್ಮ ಬಲದ ಬಗೆಗಿನ ಭ್ರಾಂತಿಯನ್ನು ಕಳೆದುಕೊಂಡು  ಇಲ್ಲಿಂದ ಹೊರಟು ಹೋದರು. ಹೀಗಾಗಿ, ನನಗೆ ಬೇಕಾದ ಇವನೇ(ಶ್ರೀರಾಮ) ನನ್ನ ಮನಸ್ಸಿನ ಇಷ್ಟವನ್ನು ಪೂರೈಸಿ, ಸೀತೆಯನ್ನು ಹೊಂದಲಿ”  ಎನ್ನುತ್ತಾನೆ ಜನಕರಾಜ.

 

ತಥೇತಿ ಚೋಕ್ತೇ ಮುನಿನಾ ಸ ಕಿಙ್ಕರೈರನನ್ತಭೋಗೋಪಮಮಾಶ್ವಥಾsನಯತ್ ।

ಸಮೀಕ್ಷ್ಯ ತದ್ ವಾಮಕರೇಣ ರಾಘವಃ ಸಲೀಲಮುದ್ಧೃತ್ಯ ಹಸನ್ನಪೂರಯತ್ ॥೪.೨೪

 

“ಹಾಗೆಯೇ ಆಗಲಿ” ಎಂದು  ವಿಶ್ವಾಮಿತ್ರನಿಂದ ಹೇಳಲ್ಪಪಡುತ್ತಿರಲು , ಜನಕರಾಜನು ತನ್ನ  ದಾಸರಿಂದ, ಶೇಷನ ಶರೀರದಂತೆ ಇರುವ ಬಿಲ್ಲನ್ನು ತರಿಸಿದ.  ಅದನ್ನು ನೋಡಿ ಶ್ರೀರಾಮಚಂದ್ರನು ಮುಗುಳ್ನಕ್ಕು, ತನ್ನ ಎಡಗೈಯಿಂದ ಅನಾಯಾಸವಾಗಿ  ಆ ಬಿಲ್ಲನ್ನು ಎತ್ತಿ, ಬಿಲ್ಲಿನ ಒಂದು ತುದಿಯ ದಾರವನ್ನು ಇನ್ನೊಂದು ತುದಿಗೆ ಬರುವಂತೆ ಎಳೆದ. 

 

ವಿಕೃಷ್ಯಮಾಣಂ ತದನನ್ತರಾಧಸಾ ಪರೇಣ ನಿಃಸೀಮಬಲೇನ ಲೀಲಯಾ

ಅಭಜ್ಯತಾಸಹ್ಯಮಮುಷ್ಯ ತದ್ ಬಲಂ ಪ್ರಸೋಢುಮೀಶಂ ಕುತ ಏವ ತದ್ ಭವೇತ್ ॥೪.೨೫

 

ಉತ್ಕೃಷ್ಟನಾದ, ಎಣೆಯಿರದ ಬಲವುಳ್ಳ ನಾರಾಯಣನಿಂದ, ಯಾವುದೇ ಆಯಾಸವಿಲ್ಲದೇ  ಎಳೆಯಲ್ಪಟ್ಟಾಗ, ಯಾರಿಗೂ ಸಹಿಸಲಸಾಧ್ಯವಾದ ಬಲವನ್ನು ಸಹಿಸದ ಆ ಬಿಲ್ಲು ಮುರಿದು ಹೋಯಿತು.  ನಾರಾಯಣನ ಬಲವನ್ನು ಸಹಿಸಲು ಆ ಬಿಲ್ಲು ಹೇಗೆ ಸಮರ್ಥವಾದೀತು?

 

ಸ ಮದ್ಧ್ಯತಸ್ತತ್ ಪ್ರವಿಭಜ್ಯ ಲೀಲಯಾ ಯಥೇಕ್ಷುದಣ್ಡಮ್ ಶತಮನ್ಯುಕುಞ್ಜರಃ ।

ವಿಲೋಕಯನ್ ವಕ್ತ್ರಮೃಷೇರವಸ್ಥಿತಃ ಸಲಕ್ಷ್ಮಣಃ ಪೂರ್ಣ್ಣತನುರ್ಯ್ಯಥಾ ಶಶೀ ॥೪.೨೬

 

ಹೇಗೆ ಐರಾವತವು ಕಬ್ಬಿನ ಜಲ್ಲೆಯನ್ನು ಮುರಿಯುತ್ತದೋ ಹಾಗೇ,  ಆ ಬಿಲ್ಲನ್ನು ಮುರಿದ ರಾಮಚಂದ್ರನು, ಪೂರ್ಣವಾಗಿರುವ ಮಂಡಲವುಳ್ಳ ಚಂದ್ರನಂತೆ ಕಾಣುತ್ತಿದ್ದ.  ಆತ ಮುಗುಳ್ನಗೆಯೊಂದಿಗೆ  ಋಷಿಯ ಮುಖವನ್ನು ನೋಡುತ್ತಾ ನಿಂತ.

 

ತಮಬ್ಜನೇತ್ರಂ ಪೃಥುತುಙ್ಗವಕ್ಷಸಂ ಶ್ಯಾಮಾವದಾತಂ ಚಲಕುಣ್ಡಲೋಜ್ಜ್ವಲಮ್ ।

ಶಶಕ್ಷತೋತ್ಥೋಪಮಚನ್ದನೋಕ್ಷಿತಂ ದದರ್ಶ ವಿದ್ಯುದ್ವಸನಂ ನೃಪಾತ್ಮಜಾ ॥೪.೨೭

 

ಸೀತೆಯು ತಾವರೆಯ ದಳದಂತೆ ಕಣ್ಣುಳ್ಳ,  ಅಗಲವಾದ ಎತ್ತರವಾದ ಎದೆಯುಳ್ಳ, ನೀಲಿಯ ಬಣ್ಣದ ಅಲುಗಾಡುತ್ತಿರುವ ಕರ್ಣ-ಕುಂಡಲದಿಂದ ಶೋಭಿಸುತ್ತಿರುವ, ಮೊಲದ ರಕ್ತದ ಬಣ್ಣದ  ಚಂದನದಿಂದ ಬಳಿಯಲ್ಪಟ್ಟ, ಮಿಂಚಿನಂತಹ ಬಟ್ಟೆಯುಳ್ಳ ಅವನನ್ನು ನೋಡಿದಳು.

 

ಅಥೋ ಕರಾಭ್ಯಾಂ ಪ್ರತಿಗೃಹ್ಯ ಮಾಲಾಮಮ್ಲಾನಪದ್ಮಾಂ ಜಲಜಾಯತಾಕ್ಷೀ ।

ಉಪೇತ್ಯ ಮನ್ದಂ ಲಳಿತೈಃ ಪದೈಸ್ತಾಂ ತದಂಸ ಆಸಜ್ಯ ಚ ಪಾರ್ಶ್ವತೋsಭವತ್ ॥೪.೨೮

 

ಆನಂತರ, ಕಮಲದಂತೆ ಕಣ್ಣುಳ್ಳ ಆ ಚಲುವೆಯಾದ ಸೀತಾದೇವಿಯು,  ಎಂದೂ ಬಾಡದ ತಾವರೆಗಳುಳ್ಳ ಮಾಲೆಯನ್ನು ಕೈಗಳಿಂದ ಹಿಡಿದು, ಮನೋಹರವಾದ ಪಾದಗಳನ್ನಿಡುತ್ತಾ ನಿಧಾನವಾಗಿ ಬಂದು,  ಮಾಲೆಯನ್ನು ಶ್ರೀರಾಮನ ಭುಜದಲ್ಲಿ ಹಾಕಿ, ಪಕ್ಕದಲ್ಲಿ ನಿಂತಳು.

 

ತತಃ ಪ್ರಮೋದೋ ನಿತರಾಂ ಜನಾನಾಂ ವಿದೇಹಪುರ್ಯ್ಯಾಮಭವತ್ ಸಮನ್ತಾತ್ ।

ರಾಮಂ ಸಮಾಲೋಕ್ಯ ನರೇನ್ದ್ರಪುತ್ರ್ಯಾ ಸಮೇತಮಾನನ್ದನಿಧಿಂ ಪರೇಶಮ್ ॥೪.೨೯

 

ವಿದೇಹಪಟ್ಟಣದಲ್ಲಿನ ಎಲ್ಲಾ ಜನರಿಗೆ ರಾಮಚಂದ್ರ ಸೀತೆಯೊಡಗೂಡಿದ ವಿಷಯ ತಿಳಿದು  ನಿರತಿಶಯವಾದ ಆನಂದವಾಯಿತು.

 

ಲಕ್ಷ್ಮ್ಯಾ ಸಮೇತೇ ಪ್ರಕಟಂ ರಮೇಶೇ ಸಮ್ಪ್ರೇಷಯಾಮಾಸ ತದಾssಶು ಪಿತ್ರೇ ।

ವಿದೇಹರಾಜೋ ದಶದಿಗ್ರಥಾಯ ಸ ತನ್ನಿಶಮ್ಯಾsಶು ತುತೋಷ ಭೂಮಿಪಃ ॥೪.೩೦

 

ಹೀಗೆ  ಲಕ್ಷೀ ಸಮೇತನಾಗಿ ಶ್ರೀರಾಮಚಂದ್ರ ಎಲ್ಲರಿಗೂ ಕಾಣಿಸಿಕೊಂಡ [ಭಗವಂತ ಸದಾ ಲಕ್ಷ್ಮೀಸಮೇತನಾಗಿಯೇ ಇರುತ್ತಾನೆ. ಆದರೆ ಅದು ಇಲ್ಲಿ ಎಲ್ಲರಿಗೂ ಕಾಣಿಸಿತು ಅಷ್ಟೆ. ಇದನ್ನು  ‘ಪ್ರಕಟಮ್’ ಎನ್ನುವ ಪದ ಪ್ರಯೋಗದೊಂದಿಗೆ  ಆಚಾರ್ಯರು  ಸೂಚಿಸಿದ್ದಾರೆ].  ಆಗ ವಿದೇಹ ರಾಜನು ದಶರಥನಿಗಾಗಿ ದೂತರನ್ನು ಕಳುಹಿಸಿದನು.  ದಶರಥನಾದರೋ ಈ ಸುದ್ಧಿಯನ್ನು ಕೇಳಿ ಬಹಳ ಸಂತಸಪಟ್ಟನು. 

No comments:

Post a Comment