ಪ್ರೀತಿಂ ವಿಧಿತ್ಸುರಗಮದ್ ಭವನಂ ನಿಜಸ್ಯ ಕುಮ್ಭೋದ್ಭವಸ್ಯ
ಪರಮಾದರತೋsಮುನಾ ಚ ।
ಸಮ್ಪೂಜಿತೋ
ಧನುರನೇನ ಗೃಹೀತಮಿನ್ದ್ರಾಚ್ಛಾರ್ಙ್ಗಂ ತದಾದಿಪುರುಷೋ ನಿಜಮಾಜಹಾರ॥೫.೨೨॥
ತನ್ನ ಭಕ್ತನಾದ ಅಗಸ್ತ್ಯರಿಗೆ ಪ್ರಿಯವನ್ನು ಉಂಟುಮಾಡುವುದಕ್ಕಾಗಿ
ಅವರ ಮನೆಗೆ ಹೋಗುತ್ತಾನೆ ಶ್ರೀರಾಮಚಂದ್ರ. ಅಗಸ್ತ್ಯರಿಂದ
ಅತ್ಯಂತ ಭಕ್ತಿಯಿಂದ ಪೂಜಿತನಾದ ರಾಮಚಂದ್ರನು,
ಇಂದ್ರನಿಂದ ಅವರು ಪಡೆದ, ತನ್ನದೇ ಆದ
ಶಾರ್ಙ್ಗ ಧನುಸ್ಸನ್ನು ಪಡೆಯುತ್ತಾನೆ.
ಪಾದ್ಮಪುರಾಣದ ಸೃಷ್ಟಿಖಂಡದಲ್ಲಿ(೩೮.೨೧) ಹೇಳುವಂತೆ: ಅಗಸ್ತ್ಯರು ರಾಮಚಂದ್ರನಲ್ಲಿ ಹೀಗೆ ಹೇಳುತ್ತಾರೆ: ಸ್ವಾಗತಂ ತೇ ರಘುಶ್ರೇಷ್ಠ ಜಗದ್ವಂದ್ಯ ಸನಾತನ । ದರ್ಶನಾತ್ ತವ ಕಾಕುತ್ಸ್ಥ ಪೂತೋsಹಂ ಮುನಿಭಿಃ ಸಹ’ ಎಂದು. (“ನಿನಗೆ ಸ್ವಾಗತ, ನಿನ್ನ ದರ್ಶನದಿಂದ ನಾನು
ಪೂತನಾಗಿದ್ದೇನೆ” ಎಂದು) ಇದು ‘ಪರಮಾದರತ’ ಎನ್ನುವುದಕ್ಕೆ
ವ್ಯಾಖ್ಯಾನವಾಗುತ್ತದೆ. ವಾಲ್ಮೀಕಿ ರಾಮಾಯಣದ
ಅರಣ್ಯಕಾಂಡದಲ್ಲಿ (೧೨.೩೨)(೧೨.೩೨) ‘ದತ್ತೋ ಮಮ ಮಹೇನ್ದ್ರೇಣ’ ಎಂದಿದೆ. “ನಾನು ಇಂದ್ರನಿಂದ ಪಡೆದ
ಈ ಧನುಸ್ಸನ್ನು ನಿನಗೆ ಕೊಡುತ್ತಿದ್ದೇನೆ” ಎಂದು ಅಗಸ್ತ್ಯರು ಹೇಳುತ್ತಾರೆ. ಮುಂದಿನ ಶ್ಲೋಕದಲ್ಲಿ ಆಚಾರ್ಯರು ಶಾರ್ಙ್ಗ ಧನುಸ್ಸಿನ ಪರಂಪರೆಯನ್ನು
ವಿವರಿಸುವುದನ್ನು ನಾವು ಕಾಣುತ್ತೇವೆ.
ಆತ್ಮಾರ್ತ್ಥಮೇವ ಹಿ ಪುರಾ ಹರಿಣಾ ಪ್ರದತ್ತಮಿನ್ದ್ರೇ ತದಿನ್ದ್ರ ಉತ
ರಾಮಕರಾರ್ತ್ಥಮೇವ ।
ಪ್ರಾದಾದಗಸ್ತ್ಯಮುನಯೇ ತದವಾಪ್ಯ ರಾಮೋ ರಕ್ಷನ್ನೃಷೀನವಸದೇವ ಸ
ದಣ್ಡಕೇಷು ॥೫.೨೩॥
ಈ ಶಾರ್ಙ್ಗ
ಧನುಸ್ಸು, ಹಿಂದೆ ತನಗಾಗಿಯೇ ರಾಮಚಂದ್ರನಿಂದ ಇಂದ್ರನಿಗೆ
ಕೊಡಲ್ಪಟ್ಟಿತ್ತು. ಇಂದ್ರ ಆ ಧನುಸ್ಸು
ಮರಳಿ ರಾಮಚಂದ್ರನಿಗೆ ಸೇರಬೇಕು ಎಂದೇ
ಅಗಸ್ತ್ಯರಿಗೆ ಕೊಟ್ಟ. ರಾಮಚಂದ್ರನು ಅದನ್ನು ಹೊಂದಿ,
ಋಷಿಗಳನ್ನು ರಕ್ಷಿಸುತ್ತಾ, ದಂಡಕದಲ್ಲಿಯೇ ವಾಸ
ಮಾಡಿದ.
ಕಾಲೇ ತದೈವ ಖರದೂಷಣಯೋರ್ಬಲೇನ ರಕ್ಷಃಸ್ವಸಾ ಪತಿನಿಮಾರ್ಗ್ಗಣತತ್ಪರಾssಸೀತ್ ।
ವ್ಯಾಪಾದಿತೇ ನಿಜಪತೌ ಹಿ ದಶಾನನೇನ ಪ್ರಾಮಾದಿಕೇನ ವಿಧಿನಾsಭಿಸಸಾರ ರಾಮಮ್ ॥೫.೨೪॥
ಅದೇ ಕಾಲದಲ್ಲಿ, ಖರ ಹಾಗೂ ದೂಷಣರ ಬೆಂಬಲದಿಂದ ಶೂರ್ಪಣಖಿಯು
ಗಂಡನನ್ನು ಹುಡುಕುತ್ತಿದ್ದಳು. ಹಿಂದೆ ರಾವಣನು
ತನ್ನ ಮರವಿನ ತಪ್ಪಿನಿಂದ ಆಕೆಯ ಗಂಡನನ್ನು
ಕೊಂದಿದ್ದನು. ಅಂತಹ ಶೂರ್ಪಣಖಿಯು ರಾಮನ ಎದುರು ಬಂದಳು.
[ಸ್ವಸಾರಂ ಕಾಲಕೇಯಾಯ ದಾನವೇನ್ದ್ರಾಯ ರಾಕ್ಷಸೀಮ್ । ದದೌ ಶೂರ್ಪಣಖಂ ನಾಮ ವಿದ್ಯುಜ್ಜಿಹ್ವಾಯ ನಾಮತಃ ಎಂದು ವಾಲ್ಮೀಕಿ
ರಾಮಾಯಣದ ಉತ್ತರಕಾಂಡದಲ್ಲಿದೆ(೧೨.೨). ಕಾಲಕೇಯ ರಾಕ್ಷಸರ ಗಣದಲ್ಲಿ ಇದ್ದ ವಿದ್ಯುಜ್ಜಿಹ್ವ ಎನ್ನುವ ದಾನವನಿಗೆ ರಾವಣ ತನ್ನ ತಂಗಿ ಶೂರ್ಪಣಖಿಯನ್ನು
ಕೊಟ್ಟು ಮದುವೆ ಮಾಡಿಸಿದ್ದ. ಆದರೆ ಯುದ್ಧ ಕಾಲದಲ್ಲಿ ಮರೆವಿನಿಂದ ರಾವಣನೇ ಆತನನ್ನು ಕೊಂದಿದ್ದ].
ಸಾsನುಜ್ಞಯೈವ ರಜನೀಚರಭರ್ತ್ತುರುಗ್ರಾ ಭ್ರಾತೃದ್ವಯೇನ
ಸಹಿತಾ ವನಮಾವಸನ್ತೀ ।
ರಾಮಂ ಸಮೇತ್ಯ ಭವ ಮೇ ಪತಿರಿತ್ಯವೋಚದ್ ಭಾನುಂ ಯಥಾ ತಮ ಉಪೇತ್ಯ
ಸುಯೋಗಕಾಮಮ್ ॥೫.೨೫॥
ಅವಳು ರಾವಣನ ಅನುಜ್ಞೆಯಿಂದ, ಅತ್ಯಂತ ಉಗ್ರಳಾಗಿ,
ಖರ-ದೂಷಣರಿಂದ ಕೂಡಿಕೊಂಡು ದಂಡಕಾರಣ್ಯದಲ್ಲಿ ಬಹಳ ಕಾಲದಿಂದ ವಾಸ ಮಾಡುತ್ತಿದ್ದಳು. ಇಂತಹ ಶೂರ್ಪಣಖಿಯು ದಂಡಕಾರಣ್ಯಕ್ಕೆ ಬಂದ ಶ್ರೀರಾಮನ ಬಳಿ ಬಂದು, ನನ್ನ
ಗಂಡನಾಗು ಎಂದು ಅವನನ್ನು ಕೇಳಿದಳು. ಆಕೆಯ ಈ ಕೋರಿಕೆ ಕತ್ತಲು ಸೂರ್ಯನ ಬಳಿ ಹೋಗಿ ‘ನಾನು ನಿನ್ನನ್ನು ಮದುವೆಯಾಗಬೇಕು’ ಎಂದು ಕೇಳಿದರೆ
ಅದು ಎಷ್ಟು ಅಸಹ್ಯವೋ ಅಷ್ಟೇ ಅಸಹ್ಯವಾಗಿತ್ತು.
ತಾಂ ತತ್ರ ಹಾಸ್ಯಕಥಯಾ ಜನಕಾಸುತಾಗ್ರೇ ಗಚ್ಛಾನುಜಂ ಮ ಇಹ ನೇತಿ ವಚಃ ಸ
ಉಕ್ತ್ವಾ ।
ತೇನೈವ ದುಷ್ಟಚರಿತಾಂ ಹಿ ವಿಕರ್ಣ್ಣನಾಸಾಂ ಚಕ್ರೇ
ಸಮಸ್ತರಜನೀಚರನಾಶಹೇತೋಃ ॥೫.೨೬॥
ಸಮಸ್ತ ದುಷ್ಟ ರಾಕ್ಷಸರ ನಾಶಕ್ಕೆ ಹೇತುವಾಗಿ,
ಶೂರ್ಪಣಖಿಯನ್ನು ಸೀತೆಯ ಎದುರು ಹಾಸ್ಯದಲ್ಲಿ
ಮಾತನಾಡಿಸಿದ ಶ್ರೀರಾಮ, “ನನಗೆ ನೀನು ಬೇಡ, ನನ್ನ ತಮ್ಮನ ಬಳಿ ಹೋಗು” ಎಂದು ಹೇಳಿ, ಆ ಲಕ್ಷ್ಮಣನಿಂದಲೇ ದುಷ್ಟವಾದ ಚರಿತ್ರೆಯುಳ್ಳ ಆಕೆಯ
ಮೂಗು-ಕಿವಿಗಳನ್ನು ಕತ್ತರಿಸಿದ.
[ರಾಮ ಯಾವ ರೀತಿ ಹಾಸ್ಯದಿಂದ ಮಾತನಾಡಿದ ಎನ್ನುವುದನ್ನು
ರಾಮಾಯಣದ ಅರಣ್ಯಕಾಂಡದಲ್ಲಿ(೧೮.೨-೪) ವರ್ಣಿಸಿದ್ದಾರೆ: ‘ಕೃತದಾರೋsಸ್ಮಿ ಭವತಿ ಭಾರ್ಯೇಯಂ ದಯಿತಾ ಮಮ । ತ್ವದ್ವಿಧಾನಾಂ ತು ನಾರೀಣಾಂ
ಸುದುಃಖಾ ಸಸಪತ್ನತಾ । ಅನುಜಸ್ತ್ವೇಷ ಮೇ ಭ್ರಾತಾ ಶೀಲವಾನ್ ಪ್ರಿಯದರ್ಶನಃ । ಶ್ರೀಮಾನಕೃದಾರಶ್ಚ ಲಕ್ಷ್ಮಣೋ ನಾಮ ವೀರ್ಯವಾನ್ । ಅಪೂರ್ವಭಾರ್ಯಯಾ ಚಾರ್ಥೀ ತರುಣಃ ಪ್ರಿಯದರ್ಶನಃ । ಅನುರೂಪಶ್ಚ ತೇ ಭರ್ತಾ ರೂಪಸ್ಯಾಸ್ಯ
ಭವಿಷ್ಯತಿ’ (“ಇವಳು ನನ್ನ ಪ್ರೀತಿಯ ಹೆಂಡತಿ. ಈಕೆ ನಿನ್ನಂತಹ
ಶ್ರೇಷ್ಠ ಹೆಣ್ಣುಮಗಳಿಗೆ ಸವತಿಯಾಗಿರಬಾರದು.
ನನ್ನ ತಮ್ಮನಾದ ಲಕ್ಷ್ಮಣನು ಶೀಲವಂತನೂ, ಪ್ರಿಯದರ್ಶನನೂ, ಬಲ-ಪರಾಕ್ರಮದಲ್ಲಿ ಸಂಪನ್ನನೂ
ಆಗಿರುವನು. ಅವನೊಂದಿಗೆ ಪತ್ನಿಯೂ ಇಲ್ಲಾ! ಅಪೂರ್ವ ಗುಣಗಳಿಂದ
ಸಂಪನ್ನನಾದ ಈತ ತರುಣನಾಗಿದ್ದಾನೆ. ಮನೋಹರವಾದ ರೂಪವಿರುವ ಆತನಿಗೆ
ಪತ್ನಿಯ ಬಯಕೆ ಇದ್ದರೆ ನಿನಗೆ ಯೋಗ್ಯ ಪತಿಯಾಗಬಹುದು!”).
‘ಅನೃತಂ ನೋಕ್ತಪೂರ್ವಂ ಮೇ ನಚ ವಕ್ಷ್ಯೇ ಕದಾಚನ’ ಎಂದು ರಾಮ
ಹೇಳಿರುತ್ತಾನೆ. ಅಂದರೆ ನಾನು ಹಾಸ್ಯಕ್ಕಾದರೂ ಕೂಡಾ ಸುಳ್ಳು ಹೇಳುವುದಿಲ್ಲಾ ಎಂದರ್ಥ. ರಾಮಾಯಣದ ಅರಣ್ಯಕಾಂಡದಲ್ಲಿ(೧೮.೧೩) ಒಂದು ಮಾತಿದೆ. ‘ಮನ್ಯತೇ ತದ್ವಚಸ್ತಥ್ಯಂ ಪರಿಹಾಸಾವಿಚಕ್ಷಣಾ’ ‘ಅವಳಿಗೆ ರಾಮ ಹಾಸ್ಯ
ಮಾಡುತ್ತಿರುವುದು ಎಂದು ಗೊತ್ತಾಗಲಿಲ್ಲ. ಅವನ ಮಾತನ್ನು ಆಕೆ ಸತ್ಯ ಎಂದುಕೊಂಡಳು’. ಹಾಗಿದ್ದರೆ
ಇಲ್ಲಿ ರಾಮಚಂದ್ರ ಸುಳ್ಳು ಹೇಳಿದಂತಾಯಿತಲ್ಲಾ ಎಂದರೆ:
ಅವಳ ಈ ಮೂರ್ಖತನವನ್ನು ತೋರಿಸುವುದಕ್ಕಾಗಿಯೇ ಶ್ರೀರಾಮ ಆ ರೀತಿ ಹೇಳಿರುತ್ತಾನೆ. ಪಾದ್ಮಪುರಾಣದ(೨೪೨.೨೪೩) ಉತ್ತರಖಂಡದಲ್ಲಿ ಹೇಳುತ್ತಾರೆ: ‘ಇತ್ಯುಕ್ತ್ವಾ ರಾಕ್ಷಸೀಂ ಸೀತಾಂ ಗ್ರಸಿತುಂ ವೀಕ್ಷ್ಯ ಚೋದ್ಯತಾಂ । ಶ್ರೀರಾಮಃ
ಖಡ್ಗಮುದ್ಯಮ್ಯ ನಾಸಾಕರ್ಣೌ ಪ್ರಚಿಚ್ಛಿದೇ’ ಅಂದರೆ: ಸೀತೆಯನ್ನು ತಿಂದು ನಾವಿಬ್ಬರು
ಮದುವೆಯಾಗೋಣ ಎನ್ನುವ ಮೂರ್ಖತನವನ್ನು ಶೂರ್ಪಣಖಿ ಪ್ರದರ್ಶನ ಮಾಡಲು, ಲಕ್ಷ್ಮಣನ ಮುಖೇನ ಆಕೆಯ
ಕಿವಿ-ಮೂಗನ್ನು ಶ್ರೀರಾಮ ಕತ್ತರಿಸಿದ ಎಂದು. ರಾಮಾಯಣದ
ಅರಣ್ಯಕಾಂಡದಲ್ಲಿ(೧೮.೨೦-೨೧) ಶ್ರೀರಾಮ ಕೊನೆಯದಾಗಿ ಏನು ಹೇಳಿದ ಎನ್ನುವ ವಿವರವಿದೆ: ‘ಇಮಾಂ ವಿರೂಪಾಮಸತೀಮತಿಮತ್ತಾಂ
ಮಹೋದರೀಮ್ । ರಾಕ್ಷಸೀಂ ಪುರುಷವ್ಯಾಘ್ರ ವಿರೂಪಯಿತುಮರ್ಹಸಿ । ಇತ್ಯುಕ್ತೋ
ಲಕ್ಷ್ಮಣಸ್ತಸ್ಯಾಃ ಕ್ರುದ್ಧೋ ರಾಮಸ್ಯ ಪಶ್ಯತಃ
। ಉದ್ಧೃತ್ಯ ಖಡ್ಗಂ ಚಿಚ್ಛೇದ ಕರ್ಣನಾಸೆ ಮಹಾಬಲಃ’
“ಎಲೈ ಲಕ್ಷ್ಮಣನೇ, ಕುರೂಪಿ, ಉನ್ಮತ್ತೆ ಮತ್ತು
ದೊಡ್ಡಹೊಟ್ಟೆಯುಳ್ಳ ಈ ರಾಕ್ಷಸಿಯನ್ನು ಅಂಗಹೀನಳನ್ನಾಗಿ ಮಾಡು” ಎಂದು ಶ್ರೀರಾಮ ಆದೇಶಿಸುತ್ತಾನೆ. ರಾಮನ ಆದೇಶದಂತೆ, ಕ್ರೋಧದಿಂದ ಲಕ್ಷ್ಮಣನು ಶೂರ್ಪಣಖಿಯ ಕಿವಿ ಮೂಗನ್ನು
ತನ್ನ ಖಡ್ಗದಿಂದ ಕತ್ತರಿಸುತ್ತಾನೆ. ಈ ಎಲ್ಲವನ್ನು ಸಮಷ್ಟಿಯಾಗಿ ನೋಡಿದಾಗ ಎಲ್ಲವೂ
ಸ್ಪಷ್ಟವಾಗುತ್ತದೆ.
ತತ್ಪ್ರೇರಿತಾನ್ ಸಪದಿ ಭೀಮಬಲಾನ್ ಪ್ರಯಾತಾಂಸ್ತಸ್ಯಾಃ ಖರತ್ರಿಶಿರದೂಷಣಮುಖ್ಯಬನ್ಧೂನ್ ।
ಜಘ್ನೇ ಚತುರ್ದ್ದಶಸಹಸ್ರಮವಾರಣೀಯಕೋದಣ್ಡಪಾಣಿರಖಿಲಸ್ಯ
ಸುಖಂ ವಿಧಾತುಮ್ ॥೫.೨೭॥
ತಕ್ಷಣ, ಶೂರ್ಪಣಖಿಯಿಂದ ಪ್ರೇರೇಪಿತರಾಗಿ, ತನ್ನತ್ತ, ಹದಿನಾಕು ಸಾವಿರ ಸೇನೆಯೊಡಗೂಡಿ ಬಂದಿರುವ, ಮಹಾಬಲಿಷ್ಠರಾದ
ಖರ, ತ್ರಿಶಿರ, ದೂಷಣ, ಮೊದಲಾದ ಆಕೆಯ ಮುಖ್ಯ ಬಂಧುಗಳನ್ನು, ಎಲ್ಲಾ ಸಜ್ಜನರಿಗೆ
ಸುಖವನ್ನುಂಟುಮಾಡಲು, ಯಾರಿಗೂ ತಡೆಯಲಾಗದ ಶಕ್ತಿ ಇರುವ ಶ್ರೀರಾಮನು, ಕೋದಂಡಪಾಣಿಯಾಗಿ ನಿಂತು ನಿಗ್ರಹಿಸಿದನು.
ದತ್ತೇsಭಯೇ ರಘುವರೇಣ ಮಾಹಾಮುನೀನಾಂ ದತ್ತೇ ಭಯೇ ಚ ರಜನೀಚರಮಣ್ಡಲಸ್ಯ ।
ರಕ್ಷಃಪತಿಃ
ಸ್ವಸೃಮುಖಾದವಿಕಮ್ಪನಾಚ್ಚ ಶ್ರುತ್ವಾ ಬಲಂ ರಘುಪತೇಃ ಪರಮಾಪ ಚಿನ್ತಾಮ್ ॥೫.೨೮॥
ಖರ-ದೂಷಣಾದಿಗಳನ್ನು ಕೊಂದ ಶ್ರೀರಾಮಚಂದ್ರ, ಎಲ್ಲಾ ಮಹಾಮುನಿಗಳಿಗೆ ರಕ್ಷಣೆಯ ಅಭಯವನ್ನು ನೀಡುತ್ತಿರಲು,
ರಾಕ್ಷಸರ ಸಮೂಹಕ್ಕೆ ಭಯವುಂಟಾಗುತ್ತದೆ. ಈ ವಿಷಯವನ್ನು ತನ್ನ ತಂಗಿಯಾದ
ಶೂರ್ಪಣಖಿ ಮತ್ತು ಅಕಂಪನ ಎಂಬ ರಾಕ್ಷಸನಿಂದ ಕೇಳಿ ತಿಳಿದ ರಾವಣನು ಚಿಂತಿತನಾಗುತ್ತಾನೆ.
[ಇಲ್ಲಿ ಆಚಾರ್ಯರು ರಾಕ್ಷಸನನ್ನು ಅವಿಕಂಪನ ಎಂದು
ಕರೆದಿದ್ದಾರೆ. ಆದರೆ ವಾಲ್ಮೀಕಿ ರಾಮಾಯಣದ ಅರಣ್ಯಕಾಂಡದಲ್ಲಿ(೩೧.೧) ಅಕಂಪನ ಎಂದಿದೆ. (‘ತ್ವರಮಾಣಸ್ತತೋ ಗತ್ವಾ ಜನಸ್ಥಾನಾದಕಂಪನಃ । ಪ್ರವಿಶ್ಯ ಲಙ್ಕಾಂ ವೇಗೇನ ರಾವಣಂ ವಾಕ್ಯಮಬ್ರವೀತ್’ ಅಂದರೆ:
‘ಅಕಂಪನ ಎನ್ನುವ ರಾಕ್ಷಸ ಅತಿವೇಗವಾಗಿ ಲಂಕೆಗೆ ತೆರಳಿ ರಾವಣನಿಗೆ ವಿಷಯ ತಿಳಿಸಿದನು’ ಎಂದರ್ಥ) ಹೀಗಾಗಿ ಆಚಾರ್ಯರು ಅವಿಕಂಪನ ಎಂದು ಹೇಳುವಲ್ಲಿ ಬೇರೆ
ಉದ್ದೇಶವಿದೆ. ಅವನು ‘ಅವಿರಿವ ಕಂಪಮಾನಃ’ .
ಅಂದರೆ: ‘ಅಕಂಪನ ಎನ್ನುವ ರಾಕ್ಷಸ, ಹೇಗೆ
ಕಟುಕನನ್ನು ನೋಡಿ ಮೇಕೆ ಹೆದರುತ್ತದೋ ಆರೀತಿ
ಹೆದರಿ, ಗಡಗಡ ನಡುಗುತ್ತಾ
ರಾವಣನಿದ್ದಲ್ಲಿಗೆ ಬಂದ’ ಎಂದು ಹೇಳುವ
ಉದ್ದೇಶದಿಂದ ಆಚಾರ್ಯರು ಅವಿಕಂಪನ ಮತ್ತು ಅಕಂಪನ
ಎರಡಕ್ಕೂ ಮಧ್ಯದಲ್ಲಿ ಪದ ಪ್ರಯೋಗಿಸಿ ಹೇಳಿದ್ದಾರೆ].
ಸ ತ್ವಾಶು
ಕಾರ್ಯ್ಯಮವಮೃಶ್ಯ ಜಗಾಮ ತೀರೇ ಕ್ಷೇತ್ರಂ ನದೀನದಪತೇಃ ಶ್ರವಣಂ ಧರಿತ್ರ್ಯಾಃ ।
ಮಾರೀಚಮತ್ರ ತಪಸಿ ಪ್ರತಿವರ್ತ್ತಮಾನಂ ಭೀತಂ ಶರಾದ್ ರಘುಪತೇರ್ನ್ನಿತರಾಂ ದದರ್ಶ॥೫.೨೯॥
ಚಿಂತಿತನಾದ ರಾವಣನು ಕೂಡಲೇ ಏನು ಮಾಡಬೇಕು ಎನ್ನುವುದನ್ನು
ಯೋಚಿಸಿ, ಸಮುದ್ರತೀರದ ಕ್ಷೇತ್ರವಾಗಿರುವ
ಗೋಕರ್ಣಕ್ಕೆ ತೆರಳುತ್ತಾನೆ. ಅಲ್ಲಿ
ತಪಸ್ಸಿನಲ್ಲಿ ಇರುವ, ಮೊದಲೇ ರಾಮಚಂದ್ರನ ಬಾಣದಿಂದ ಬಹಳ ಹೆದರಿದ್ದ ಮಾರೀಚನನ್ನು ಕಾಣುತ್ತಾನೆ.
ತೇನಾರ್ತ್ಥಿತಃ
ಸಪದಿ ರಾಘವವಞ್ಚನಾರ್ತ್ಥೇ ಮಾರೀಚ ಆಹ
ಶರವೇಗಮಮುಷ್ಯ ಜಾನನ್ ।
ಶಕ್ಯೋ
ನ ತೇ ರಘುವರೇಣ ಹಿ ವಿಗ್ರಹೋsತ್ರ ಜಾನಾಮಿ ಸಂಸ್ಪರ್ಶಮಸ್ಯ ಶರಸ್ಯ ಪೂರ್ವಮ್ ॥೫.೩೦॥
ರಾಮಚಂದ್ರನಿಗೆ ಮೋಸ ಮಾಡಬೇಕು ಎನ್ನುವ ಉದ್ದೇಶದಿಂದ ರಾವಣನಿಂದ
ಪ್ರಾರ್ಥಿತನಾದ ಮಾರೀಚನು, ರಾಮಚಂದ್ರನ ಬಾಣದ ವೇಗವನ್ನು
ತಿಳಿದವನಾಗಿರುವುದರಿಂದ ರಾವಣನಿಗೆ
ಹೇಳುತ್ತಾನೆ: “ನಿನಗೆ ರಾಮಚಂದ್ರನೊಂದಿಗೆ ವಿರೋಧವು ಶಕ್ಯವಲ್ಲ, ಈ ವಿಚಾರದಲ್ಲಿ ರಾಮಚಂದ್ರನ ಬಾಣದ ಸ್ಪರ್ಶವನ್ನು ನಾನು
ತಿಳಿದಿದ್ದೇನೆ” ಎಂದು.
[ಇಲ್ಲಿ ಆಚಾರ್ಯರು ‘ಸಂಸ್ಪರ್ ಶಮಸ್ಯ ಶರಸ್ಯ’ ಎಂದು
ಬಿಡಿಸಿ ಹೇಳಿದಂತೆ ಕಾಣುತ್ತದೆ. ಈ ರೀತಿ ಹೇಳಿದಾಗ, ಮಾರೀಚ ತನ್ನ ಹಿಂದಿನ ನೆನಪಿನಿಂದ, ಭಯದಲ್ಲಿ
ತೊದಲಿ ಮಾತನಾಡಿರುವುದು ಅಭಿವ್ಯಕ್ತವಾಗುತ್ತದೆ. ಇದಕ್ಕೆ ಪೂರಕವಾಗಿ ವನಪರ್ವದಲ್ಲಿ(೨೭೮.೬೩) ಈ
ತರಹದ ಒಂದು ಮಾತಿದೆ. ‘ತತ್ರಾಭ್ಯಗಚ್ಛನ್ಮಾರೀಚಂ ಪೂರ್ವಾಮಾತ್ಯಂ ದಶಾನನಃ । ಪುರಾ ರಾಮಭಯಾದೇವ ತಾಪಸಂ
ಪ್ರಿಯಜೀವಿತಮ್’ ಒಂದು ಕಾಲದಲ್ಲಿ ಮಾರೀಚ ರಾವಣನ ಅಮಾತ್ಯನಾಗಿದ್ದ. ಆಮೇಲೆ ಆ ಪದವಿಯನ್ನು ಬಿಟ್ಟು, ರಾಮನ
ಭಯದಿಂದ ತಪಸ್ಸಿಗೆ ಕುಳಿತಿದ್ದ. (ರಾಮನ ಭಯದಿಂದ ತಪಸ್ಸಿಗೆ ಕುಳಿತಿದ್ದ ವಿನಃ ಸ್ವಭಾವದ
ಬದಲಾವಣೆಯಿಂದ ತಪಸ್ಸು ಮಾಡುತ್ತಿರಲಿಲ್ಲ)].
ಇತ್ಯುಕ್ತವನ್ತಮಥ ರಾವಣ ಆಹ ಖಡ್ಗಂ ನಿಷ್ಕೃಷ್ಯ ಹನ್ಮಿ ಯದಿ ಮೇ ನ ಕರೋಷಿ ವಾಕ್ಯಮ್ ।
ತಚ್ಛುಶ್ರುವಾನ್ ಭಯಯುತೋsಥ ನಿಸರ್ಗ್ಗತಶ್ಚ ಪಾಪೋ ಜಗಾಮ ರಘುವರ್ಯ್ಯ
ಸಕಾಶಮಾಶು ॥೫.೩೧॥
ಈ ರೀತಿಯಾಗಿ ಹೇಳಿದ ಮಾರೀಚನಿಗೆ ರಾವಣನು ತನ್ನ ಕತ್ತಿಯನ್ನು
ಸೆಳೆದು ಹೇಳುತ್ತಾನೆ: “ಒಂದು ವೇಳೆ, ನೀನು ನನ್ನ ಮಾತನ್ನು
ನಡೆಸಿಕೊಡುವುದಿಲ್ಲವೆಂದರೆ, ನಿನ್ನನ್ನು ಕೊಲ್ಲುತ್ತೇನೆ” ಎಂದು. ಅದನ್ನು ಕೇಳಿ ಭಯದಿಂದ ಕೂಡಿದ,
ಸ್ವಾಭಾವಿಕವಾಗಿ ಪಾಪಿಷ್ಠನೇ ಆಗಿರುವ
ಮಾರೀಚನು ರಾಮಚಂದ್ರನಿದ್ದಲ್ಲಿಗೆ ಹೊರಟನು.
[ಕೆಲವರು ಮಾರೀಚ ಒಳ್ಳೆಯವನೇ, ಆದರೆ ರಾವಣನಿಂದಾಗಿ ಆತ ಕೆಟ್ಟ
ಕೆಲಸ ಮಾಡಿದ ಎಂದು ಭಾವಿಸುತ್ತಾರೆ. ಆದರೆ ಇಲ್ಲಿ ಆಚಾರ್ಯರು
ಸ್ಪಷ್ಟವಾಗಿ ‘ನಿಸರ್ಗತಶ್ಚ ಪಾಪಃ’ ಎಂದು
ಹೇಳುವುದರ ಮುಖೇನ ಆತ ಸ್ವಾಭಾವಿಕವಾಗಿ ಪಾಪಿಯೇ
ಆಗಿದ್ದ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ]
ಸ
ಪ್ರಾಪ್ಯ ಹೈಮಮೃಗತಾಂ ಬಹುರತ್ನಚಿತ್ರಃ ಸೀತಾಸಮೀಪ
ಉರುಧಾ ವಿಚಚಾರ ಶೀಘ್ರಮ್ ।
ನಿರ್ದ್ದೋಷನಿತ್ಯವರಸಂವಿದಪಿ
ಸ್ಮ ದೇವೀ ರಕ್ಷೋವಧಾಯ ಜನಮೋಹಕೃತೇ ತಥಾsಹ ॥೫.೩೨॥
ಮಾರೀಚನು ಬಂಗಾರದ ಬಣ್ಣದ ಜಿಂಕೆಯ ಆಕಾರವನ್ನು ಹೊಂದಿ, ಬಹಳ
ರತ್ನಮಯವಾದ ಚುಕ್ಕೆಗಳೊಂದಿಗೆ ಚೆನ್ನಾಗಿ ಕಾಣಿಸುತ್ತಾ,
ಸೀತಾದೇವಿಯ ಸಮೀಪದಲ್ಲಿ ಓಡಾಡುತ್ತಾನೆ.
ದೋಷವಿಲ್ಲದ, ಉತ್ಕೃಷ್ಟವಾದ, ನಿರಂತರವಾದ ಪ್ರಜ್ಞೆಯನ್ನು
ಹೊಂದಿದ್ದರೂ ಕೂಡಾ ಸೀತೆಯು ದುಷ್ಟ ರಾಕ್ಷಸರ
ವದಕ್ಕಾಗಿ, ದುರ್ಜನರನ್ನು
ಮೋಹಗೊಳಿಸುವುದಕ್ಕೆಂದೇ ಈ ರೀತಿ ಹೇಳುತ್ತಾಳೆ:
[ರಾಮಾಯಣದ ಅರಣ್ಯಕಾಂಡದಲ್ಲಿ(೪೨.೧೯) ಈ ಪ್ರಸಂಗವನ್ನು ನಾವು
ಕಾಣುತ್ತೇವೆ: ‘ಮನೋಹರಃ ಸ್ನಿಗ್ಧವರ್ಣೋ
ರತ್ನೈರ್ನಾನಾವಿದೈರ್ಯುತಃ । ಕ್ಷಣೇನ ರಾಕ್ಷಸೋ ಜಾತೋ ಮೃಗಃ ಪರಮಶೋಭನಃ’ (ಬಹಳ ಮನೋಹರ ಮತ್ತು
ಸ್ನಿಗ್ಧವಾಗಿತ್ತು. ನಾನಾಪ್ರಕಾರದ ಚುಕ್ಕೆಗಳಿಂದ ವಿಭೂಷಿತವಾಗಿ ಕಾಣುತಿತ್ತು. ಈ ರೀತಿಯ
ಜಿಂಕೆಯ ಆಕಾರವನ್ನು ಮಾರೀಚನು ಹೊಂದಿದನು) ‘ನಾನಾವರ್ಣವಿಚಿತ್ರಾಞ್ಗೋ ರತ್ನಬಿನ್ದುಸಮಾಚಿತಃ’ (೪೩.೧೩) ಎಂದು ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವುದನ್ನು ಆಚಾರ್ಯರು
ಇಲ್ಲಿ ಬಹುರತ್ನಚಿತ್ರಃ ಎಂದು ವರ್ಣಿಸಿದ್ದಾರೆ.
ನಾರಸಿಂಹ ಪುರಾಣದಲ್ಲಿ (೪೯.೭೧) ಭಾವಿಕರ್ಮವಶಾದ್ ರಾಮಮುವಾಚ ಪತಿಮಾತ್ಮನಃ ಎಂದು ಹೇಳಿದ್ದಾರೆ. ಅಂದರೆ: ‘ಮುಂದೆ ಆಗಬೇಕಾದ ಕಾರ್ಯಕ್ಕಾಗಿ ಸೀತೆಯು
ಆ ರೀತಿ ಹೇಳಿದಳು’ ಎಂದರ್ಥ. ಅಂದರೆ ಸೀತಾದೇವಿಗೆ ರಾಕ್ಷಸರ ಮಾಯೆಯ ಕುರಿತು ಮೊದಲೇ ತಿಳಿದಿತ್ತು]
ದೇವೇಮಮಾಶು ಪರಿಗೃಹ್ಯ ಚ ದೇಹಿ ಮೇ ತ್ವಂ ಕ್ರೀಡಾಮೃಗಂ ತ್ವಿತಿ ತಯೋದಿತ ಏವ ರಾಮಃ ।
ಅನ್ವಕ್
ಸಸಾರ ಹ ಶರಾಸನಬಾಣಪಾಣಿರ್ಮ್ಮಾಯಾಮೃಗಂ ನಿಶಿಚರಂ ನಿಜಘಾನ ಜಾನನ್ ॥೫.೩೩॥
“ದೇವಾ, ಆಟವಾಡುವುದಕ್ಕಾಗಿ ಈ ಮೃಗವನ್ನು ಹಿಡಿದುಕೊಡು” ಎಂದು
ಅವಳಿಂದ ಹೇಳಲ್ಪಟ್ಟ ಶ್ರೀರಾಮಚಂದ್ರನು, ಎಲ್ಲವನ್ನೂ ತಿಳಿದೇ, ಆ ಮಾಯಾ ಜಿಂಕೆಯ ಹಿಂದೆ ಬಿಲ್ಲು ಬಾಣಗಳನ್ನು ಕೈಯಲ್ಲಿ
ಹಿಡಿದು ಹೊರಟು ಹೋಗಿ, ರಾಕ್ಷಸ ಮಾರೀಚನನ್ನು
ಕೊಲ್ಲುತ್ತಾನೆ.
[ಆಚಾರ್ಯರ ಮೇಲಿನ ವಿವರಣೆಗೆ ಪೂರಕವಾದ ಮಾತನ್ನು ನಾವು
ವನಪರ್ವದಲ್ಲಿ(೨೭೯.೨೧) ಕಾಣಬಹುದು: ‘ನಿಶಾಚರಂ
ವಿಧಿತ್ವಾ ತಂ ರಾಘವಃ ಪ್ರತಿಭಾನವಾನ್ । ಅಮೋಘಂ ಶರಮಾದಾಯ ಜಘಾನ ಮೃಗರೂಪಿಣಮ್’]
ತೇನಾsಹತಃ ಶರವರೇಣ ಭೃಷಂ ಮಮಾರ ವಿಕ್ರುಶ್ಯ ಲಕ್ಷ್ಮಣಮುರುವ್ಯಥಯಾ ಸ ಪಾಪಃ ।
ಶ್ರುತ್ವೈವ ಲಕ್ಷ್ಮಣಮಚೂಚುದದುಗ್ರವಾಕ್ಯೈಃ ಸೋsಪ್ಯಾಪ ರಾಮಪಥಮೇವ ಸಚಾಪಬಾಣಃ ॥೫.೩೪॥
ರಾಮಚಂದ್ರನಿಂದ ಉತ್ಕೃಷ್ಟವಾದ ಬಾಣದಿಂದ ಚೆನ್ನಾಗಿ, ಹೊಡೆಯಲ್ಪಟ್ಟವನಾಗಿ,
ಅತ್ಯಂತ ನೋವಿನಿಂದ, ಆ ಪಾಪಿಷ್ಠನಾದ ಮಾರೀಚನು
ಸಾಯುತ್ತಾನೆ. ಆದರೆ ಸಾಯುವ ಮೊದಲು ಲಕ್ಷ್ಮಣನನ್ನು
ಕೂಗಿ ಕರೆದು ಸಾಯುತ್ತಾನೆ! ಅದನ್ನು ಕೇಳಿ
ಸೀತೆಯು ಲಕ್ಷ್ಮಣನನ್ನು ಉಗ್ರವಾದ ಮಾತುಗಳಿಂದ ಪ್ರಚೋದನೆ ಮಾಡಿದಳು. ಆಗ ಲಕ್ಷ್ಮಣನು ಬಿಲ್ಲು ಬಾಣಗಳನ್ನು ಹಿಡಿದು ರಾಮನ ದಾರಿಯಲ್ಲೇ
ಸಾಗಿದ.
[ಸೀತೆ ಅದೆಷ್ಟು ಉಗ್ರವಾದ ಮಾತನ್ನಾಡಿದಳು ಎನ್ನುವುದನ್ನು ರಾಮಾಯಣದ
ಅರಣ್ಯಕಾಂಡದಲ್ಲಿ(೪೫.೨೪) ವಿವರಿಸಿದ್ದಾರೆ: ‘ಸುದುಷ್ಟಸ್ತ್ವಂ ವನೇ ರಾಮಮೇಕಮೇಕೋsನುಗಚ್ಛಸಿ । ಮಮ ಹೇತೋಃ ಪ್ರತಿಚ್ಛನ್ನಃ
ಪ್ರಯುಕ್ತೋ ಭರತೇನ ವಾ’ ಯಾವುದೋ ದುಷ್ಟ ಭಾವನೆಯಿಂದಲೇ ನೀನು ರಾಮನೊಂದಿಗಿರುವೆ ಎನ್ನುವುದು ತಿಳಿಯುತ್ತಿದೆ.
ನನ್ನನ್ನು ಪಡೆಯಲು ನೀನು ಹೀಗೆ ಬಂದಿರುವೆ ಅನಿಸುತ್ತಿದೆ. ಅಥವಾ ಭರತನೇ ನಿನಗೆ ಹೇಳಿ
ಕಳುಹಿಸಿರಬೇಕು! ಇತ್ಯಾದಿಯಾದ ಉಗ್ರವಾದ ಮಾತನ್ನಾಡುತ್ತಾಳೆ ಸೀತೆ!]
ಯಾಂಯಾಂ ಪರೇಶ ಉರುಧೈವ ಕರೋತಿ ಲೀಲಾಂ ತಾನ್ತಾಂ ಕರೋತ್ಯನು ತಥೈವ ರಮಾsಪಿ ದೇವೀ ।
ನೈತಾವತಾsಸ್ಯ ಪರಮಸ್ಯ ತಥಾ ರಮಾಯಾ ದೋಷೋsಣುರಪ್ಯನುವಿಚಿನ್ತ್ಯ ಉರುಪ್ರಭೂ ಯತ್ ॥೫.೩೫॥
ನಾರಾಯಣನು ಯಾವಯಾವ ತರಹದ ಲೀಲೆಯನ್ನು ಬಹಳಬಹಳವಾಗಿ ಮಾಡಿ
ತೋರುತ್ತಾನೋ, ಲಕ್ಷ್ಮೀದೇವಿಯೂ ಕೂಡಾ, ಅದನ್ನೇ
ಅನುಸರಿಸುತ್ತಾಳೆ. ಹೀಗಾಗಿ ಉತ್ಕೃಷ್ಟರಾದ ರಾಮಚಂದ್ರ
ಮತ್ತು ಲಕ್ಷ್ಮೀದೇವಿಯರಲ್ಲಿ ಯಾವುದೇ ದೋಷ ಚಿಂತನೆ ಮಾಡಲೇ ಬಾರದು.
ಕ್ವಾಜ್ಞಾನಮಾಪದಪಿ ಮನ್ದಕಟಾಕ್ಷಮಾತ್ರಸರ್ಗ್ಗಸ್ಥಿತಿಪ್ರಳಯಸಂಸೃತಿಮೋಕ್ಷಹೇತೋಃ
।
ದೇವ್ಯಾ ಹರೇಃ ಕಿಮು ವಿಡಮ್ಬನಮಾತ್ರಮೇತದ್ ವಿಕ್ರೀಡತೋಃ
ಸುರನರಾದಿವದೇವ ತಸ್ಮಾತ್॥೫.೩೬॥
ಮೆಲುವಾದ ಹುಬ್ಬು ಅಲ್ಲಾಡಿಸುವುದರಿಂದಲೇ, ಕಡೆಗಣ್ಣ
ಹುಬ್ಬನ್ನು ತೋರುವುದರಿಂದಲೇ ಸೃಷ್ಟಿ, ಸ್ಥಿತಿ, ಪ್ರಳಯ ಸಂಸಾರ, ಮೋಕ್ಷ ಇದಕ್ಕೆಲ್ಲಾ
ಕಾರಣವಾಗಿರುವ ಲಕ್ಷ್ಮೀನಾರಾಯಣರಿಗೆ ಅಜ್ಞಾನ
ಎಲ್ಲಿಂದ? ಆಪತ್ತಾದರೂ ಎಲ್ಲಿಂದ? ಇದೊಂದು ವಿಡಂಬನೆ ಅಷ್ಟೇ. ದೇವತೆಗಳಂತೆ, ಮನುಷ್ಯರಂತೆ ಅವರು ಲೀಲಾ ನಾಟಕವನ್ನಾಡುತ್ತಾರೆ ಅಷ್ಟೇ.
ದೇವ್ಯಾಃ
ಸಮೀಪಮಥ ರಾವಣ ಆಸಸಾದ ಸಾsದೃಶ್ಯತಾಮಗಮದಪ್ಯವಿಷಹ್ಯಶಕ್ತಿಃ ।
ಸೃಷ್ಟ್ವಾssತ್ಮನಃ ಪ್ರತಿಕೃತಿಂ ಪ್ರಯಯೌ ಚ ಶೀಘ್ರಂ ಕೈಲಾಸಮರ್ಚ್ಚಿತಪದಾ ನ್ಯವಸಚ್ಛಿವಾಭ್ಯಾಮ್ ॥೫.೩೭॥
ತದನಂತರ ರಾವಣನು
ಸೀತಾದೇವಿಯ ಬಳಿಗೆ ಬಂದ. ಲಕ್ಷ್ಮೀರೂಪಳಾದ ಸೀತಾದೇವಿ
ರಾವಣನನ್ನು ಕೊಲ್ಲಬಲ್ಲ ಶಕ್ತಿಯುಳ್ಳವಳಾಗಿದ್ದರೂ ಕೂಡಾ, ಹಾಗೆ ಮಾಡದೇ ಅಲ್ಲಿಂದ
ಅದೃಶ್ಯಳಾಗುತ್ತಾಳೆ. ಆದರೆ ಅದೃಶ್ಯವಾಗುವ ಮುನ್ನ ತನ್ನ
ಪ್ರತಿಕೃತಿಯನ್ನು ಸೃಷ್ಟಿಸಿ ತೆರಳುತ್ತಾಳೆ. ಹೀಗೆ ಅದೃಶ್ಯಳಾದ ಸೀತಾದೇವಿಯು
ಪಾರ್ವತೀ ಮತ್ತು ರುದ್ರರಿಂದ ಪೂಜಿತಳಾಗಿ ಕೈಲಾಸಕ್ಕೆ ತೆರಳುತ್ತಾಳೆ.
[ಕೂರ್ಮಪುರಾಣದಲ್ಲಿ ಈ ಘಟನೆಯನ್ನು ಸ್ಪಷ್ಟವಾಗಿ
ವಿವರಿಸಿದ್ದಾರೆ: ‘ಅಥಾವಸಥ್ಯಾದ್ ಭಗವಾನ್
ಹವ್ಯವಾಹೋ ಮಹೇಶ್ವರಃ । ಆವಿರಾಸೀತ್ ಸುದೀಪ್ತಾತ್ಮ ತೇಜಸಾ
ನಿರ್ದಹನ್ನಿವಾ । ಸೃಷ್ಟ್ವಾ ಮಾಯಾಮಯೀಂ ಸೀತಾಂ ಸ ರಾವಣವದೇಚ್ಛಯಾ । ಸೀತಾಮಾದಾಯ ರಾಮೇಷ್ಟಾಂ
ಪಾವಕೋsನ್ತರಧೀಯತ’ ರಾಮ ಹೋದ ಮೇಲೆ ಮಹೇಶ್ವರನು ಅಲ್ಲಿ ಆವಿರ್ಭವಿಸಿದ. ರಾವಣನನ್ನು ಕೊಲ್ಲಬೇಕೆಂಬ
ಬಯಕೆಯಿಂದ ಮಾಯಾಮಯಿಯಾದ ಸೀತೆಯನ್ನು ಆತ ಸೃಷ್ಟಿಸಿದ. ನಂತರ ರಾಮನ ಪ್ರಿಯೆಯಾದ ಸೀತೆಯನ್ನು
ಕರೆದುಕೊಂಡು ಪಾವಕನು(ಅಗ್ನಿಯು) ಅಂತರ್ಧಾನನಾದ. (ಇಲ್ಲಿ ಮಹೇಶ್ವರ ಎನ್ನುವ ವಿಶೇಷಣದಿಂದ ಅಗ್ನಿಯನ್ನು
ಸಂಬೋಧಿಸಿದ್ದಾರೆ. ಆ ಮಹೇಶ್ವರಃ ಎನ್ನುವುದು
ಸದಾಶಿವನನ್ನು ಹೇಳುತ್ತದೆ. ಹೀಗಾಗಿ ಹವ್ಯವಾಹಃ ಎಂದರೆ ಹವ್ಯವಾಹನ ಅಂತರ್ಗತನಾದ ಸದಾಶಿವ ಎಂದರ್ಥ).
ಬ್ರಹ್ಮವೈವರ್ತದಲ್ಲೂ(ಪ್ರಥಮಖಂಡ-೧೪.೩೦-೫) ಕೂಡಾ ಈ ಘಟನೆಯ ವಿವರವಿದೆ. ‘ಸೀತಾಪಹಾರಕಾಲೋsಯಂ
ತವೈವ ಸಮುಪಸ್ಥಿತಃ । ಮತ್ಪ್ರಸೂಂ ಮಯೀ ಸನ್ನ್ಯಸ್ಯ
ಚ್ಛಾಯಾಂ ರಕ್ಷಾನ್ತಿಕೆऽಧುನ ...’
ರಾವಣ ವಧೆ ಆದ ನಂತರ
ನಿಜವಾದ ಸೀತೆ ರಾಮನ ಪಕ್ಕದಲ್ಲಿ ಕಾಣಿಸಿಕೊಂಡಳು ಎಂದು ಬ್ರಹ್ಮವೈವರ್ತದಲ್ಲಿ(೧೪.೪೮) ಹೇಳಿದ್ದಾರೆ: ‘ ಹುತಾಷನಸ್ತತ್ರ ಕಾಲೇ ವಾಸ್ತವೀಮ್
ಜಾನಕೀಮ್ ದದೌ’.
ಪ್ರತಿಕೃತಿ ಸೃಷ್ಟಿ ಎನ್ನುವುದು ವಾಲ್ಮೀಕಿ
ರಾಮಾಯಣದಲ್ಲಿ ಬಹಳ ಸೂಚ್ಯವಾಗಿದೆ ಮತ್ತು ಅದು
ದರ್ಶನ ಭಾಷೆಯಲ್ಲಿ ಹೇಳಲ್ಪಟ್ಟ ಕಾವ್ಯವಾಗಿದೆ. (ಎಲ್ಲರಿಗೆ ಹೇಗೆ ಕಾಣಿಸಿತು ಎಂದು ಹೇಳಲ್ಪಟ್ಟಿದೆ). ಆದರೆ ಎಲ್ಲಾ
ಶಾಸ್ತ್ರಗಳನ್ನು ಒಟ್ಟಿಗೆ ಸೇರಿಸಿ ನೋಡಿದಾಗ ಈ
ಅದ್ಭುತ ವಿಷಯ ತಿಳಿಯುತ್ತದೆ.]
ತಸ್ಯಾಸ್ತು
ತಾಂ ಪ್ರತಿಕೃತಿಂ ಪ್ರವಿವೇಶ ಶಕ್ರೋ ದೇವ್ಯಾಶ್ಚ ಸನ್ನಿಧಿಯುತಾಂ ವ್ಯವಹಾರಸಿದ್ಧ್ಯೈ ।
ಆದಾಯ ತಾಮಥ
ಯಯೌ ರಜನೀಚರೇನ್ದ್ರೋ ಹತ್ವಾ ಜಟಾಯುಷಮುರುಶ್ರಮತೋ ನಿರುದ್ಧಃ॥೫.೩೮॥
ಅವಳ ಪ್ರತಿಕೃತಿಯನ್ನು ಇಂದ್ರ ಪ್ರವೇಶ ಮಾಡಿ ವ್ಯವಹಾರ
ಸಿದ್ಧಿ ನೀಡಿದ. ರಾವಣನನ್ನು ಮೋಹಗೊಳಿಸುವಂತಹ
ಸೀತಾದೇವಿಯ ಅದೇ ರೂಪ, ಅದೇ ಲಾವಣ್ಯ ಇರುವುದಕ್ಕಾಗಿ ಲಕ್ಷ್ಮೀದೇವಿಯೇ ಆ ಪ್ರತಿಕೃತಿಯಲ್ಲಿ ಸನ್ನಿಧಾನವಿತ್ತಳು. ಇಂತಹ ಸೀತಾದೇವಿಯ ತದ್ರೂಪವನ್ನು ರಾವಣನು ಲಂಕೆಗೆ
ಹೊತ್ತೊಯ್ದ. ಹೀಗೆ ಹೋಗುತ್ತಿರುವಾಗ ಜಟಾಯು
ಆತನನ್ನು ತಡೆದ. ಅಂತಹ ಜಟಾಯುವನ್ನು ಕೊಂದು, ಲಂಕಾಪಟ್ಟಣಕ್ಕೆ ರಾವಣ ತೆರಳಿದ.
ಮಾರ್ಗ್ಗೇ ವ್ರಜನ್ತಮಭಿಯಾಯ ತತೋ ಹನೂಮಾನ್ ಸಂವಾರಿತೋ
ರವಿಸುತೇನ ಚ ಜಾನಮಾನಃ ।
ದೈವಂ ತು ಕಾರ್ಯ್ಯಮಥ ಕೀರ್ತ್ತಿಮಭೀಪ್ಸಮಾನೋ ರಾಮಸ್ಯ
ನೈನಮಹನದ್ ವಚನಾದ್ಧರೇಶ್ಚ ॥೫.೩೯॥
ರಾವಣ ಸೀತೆಯೊಂದಿಗೆ ತೆರಳುತ್ತಿದ್ದಾಗ ಮಾರ್ಗದಲ್ಲಿ
ರಾವಣನನ್ನು ಕಂಡ ಹನುಮಂತ ಆತನತ್ತ ಮುನ್ನುಗ್ಗುತ್ತಾನೆ, ಆದರೆ ಸುಗ್ರೀವನಿಂದ ತಡೆಯಲ್ಪಡುತ್ತಾನೆ.
ಆಗ ಎಲ್ಲವನ್ನೂ ತಿಳಿದೇ, ದೇವತೆಗಳ ಕಾರ್ಯ ಆಗಬೇಕಿರುವುದರಿಂದ ಹನುಮಂತ ಅಲ್ಲೇ ನಿಲ್ಲುತ್ತಾನೆ. ರಾವಣ ಸಂಹಾರ ಕೀರ್ತಿ ತನ್ನೊಡೆಯನಾದ
ಶ್ರೀರಾಮಚಂದ್ರನಿಗೇ ಸಲ್ಲಬೇಕು ಎನ್ನುವ ಸಂಕಲ್ಪದಿಂದ, ಅಷ್ಟೇ ಅಲ್ಲ, ರಾಮಾವತಾರಕ್ಕೆ ಮೊದಲೇ
ಭಗವಂತ ತಾನು ರಾವಣನನ್ನು ಸಂಹರಿಸುವುದಾಗಿ ಹೇಳಿರುವುದರಿಂದ ಹನುಮಂತ ರಾವಣನನ್ನು ಕೊಲ್ಲಲಿಲ್ಲ. (ಲೋಕದ ನೀತಿಯಂತೆ ಹನುಮಂತ ಮುನ್ನುಗ್ಗಿದರೂ ಕೂಡಾ,
ಮೇಲಿನ ಕಾರಣದಿಂದ, ಸುಗ್ರೀವನಿಂದ ತಡೆಯಲ್ಪಟ್ಟು ಅಲ್ಲೇ ನಿಂತ).
ಪ್ರಾಪ್ಯೈವ
ರಾಕ್ಷಸ ಉತಾsತ್ಮಪುರೀಂ ಸ ತತ್ರ ಸೀತಾಕೃತಿಂ ಪ್ರತಿನಿಧಾಯ ರರಕ್ಷ ಚಾಥ ।
ರಾಮೋsಪಿ ತತ್ತು ವಿನಿಹತ್ಯ ಸುದುಷ್ಟರಕ್ಷಃ ಪ್ರಾಪ್ಯಾsಶ್ರಮಂ ಸ್ವದಯಿತಾಂ ನಹಿ ಪಶ್ಯತೀವ ॥೫.೪೦॥
ರಾವಣನು ತನ್ನ ಪಟ್ಟಣವಾದ ಲಂಕೆಯನ್ನು ಹೊಂದಿ, ಸೀತಾಕೃತಿಯನ್ನೇ
ಇಟ್ಟು ರಕ್ಷಿಸಿದ (ಆಕೆಯನ್ನು ಸಾಕ್ಷಾತ್
ಸೀತೆ ಎಂದೇ ತಿಳಿದು ರಕ್ಷಿಸಿದ). ಇತ್ತ ದುಷ್ಟ ಮಾರೀಚನನ್ನು ಕೊಂದ ಶ್ರೀರಾಮನು ತನ್ನ
ಆಶ್ರಮಕ್ಕೆ ಹಿಂದಿರುಗಿ ಬಂದು, ಅಲ್ಲಿ ತನ್ನ ಪ್ರಿಯೆಯಾದ ಸೀತೆಯನ್ನು ಕಾಣದವನಂತೆ
ತೋರಿಸಿಕೊಂಡ.
ಅನ್ವೇಷಮಾಣ ಇವ ತಂ ಚ ದದರ್ಶ ಗೃಧ್ರಂ ಸೀತಾರಿರಕ್ಷಿಷುಮಥೋ
ರಿಪುಣಾ ವಿಶಸ್ತಮ್ ।
ಮನ್ದಾತ್ಮಚೇಷ್ಟಮಮುನೋಕ್ತಮರೇಶ್ಚ ಕರ್ಮ್ಮ ಶ್ರುತ್ವಾ ಮೃತಂ ತಮದಹತ್ ಸ್ವಗತಿಂ ತಥಾsದಾತ್ ॥೫.೪೧॥
ಕಾಣದೇ ಹುಡುಕುತ್ತಿದ್ದಾನೋ ಎಂಬಂತೆ ಸಾಗಿ, ಸೀತೆಯನ್ನು
ರಕ್ಷಿಸಲು ಬಯಸಿ, ರಾವಣನಿಂದ ಕೊಲ್ಲಲ್ಪಟ್ಟ ಜಟಾಯುವನ್ನು ಶ್ರೀರಾಮ ಕಂಡ. ಜಟಾಯುವಿಗೆ ಆ ಸಮಯದಲ್ಲಿ
ಇನ್ನೇನು ಸಾಯುವ ಕಾಲ ಸಮೀಪಿಸಿತ್ತು. ಅವನ ಕ್ರಿಯೆಗಳೆಲ್ಲವೂ ಅತ್ಯಂತ
ಮಂದವಾಗಿತ್ತು. ಅಂತಹ ಜಟಾಯುವಿನಿಂದ ಹೇಳಲ್ಪಟ್ಟ
ಶತ್ರುವಾದ ರಾವಣನ ಕಾರ್ಯವನ್ನು ಶ್ರೀರಾಮ ಕೇಳಿದ. ವಿಷಯವನ್ನು ತಿಳಿಸಿ ಜಟಾಯು ಪ್ರಾಣಬಿಟ್ಟ. ಆಗ ಶ್ರೀರಾಮ ಆ ಜಟಾಯುವಿಗೆ ತಾನೇ ಸಂಸ್ಕಾರ ಮಾಡಿ, ಅವನಿಗೆ ತನ್ನ ಸ್ಥಾನವಾದ ಮೋಕ್ಷವನ್ನು ಕರುಣಿಸಿದ.
ಅನ್ಯತ್ರ ಚೈವ ವಿಚರನ್ ಸಹಿತೋsನುಜೇನ ಪ್ರಾಪ್ತಃ ಕರೌ ಸ ಸಹಸಾsಥ ಕವನ್ಧನಾಮ್ನಃ ।
ಧಾತುರ್ವರಾದಖಿಲಜಾಯಿನ ಉಜ್ಝಿತಸ್ಯ ಮೃತ್ಯೋಶ್ಚ
ವಜ್ರಪತನಾದತಿಕುಞ್ಚಿತಸ್ಯ ॥೫.೪೨॥
ತಮ್ಮನಾದ ಲಕ್ಷ್ಮಣನೊಂದಿಗೆ ಕೂಡಿಕೊಂಡು, ಎಲ್ಲೆಡೆ
ತಿರುಗಾಡುತ್ತಾ (ಸೀತಾದೇವಿಯನ್ನು ಹುಡುಕುತ್ತಿರುವವನಂತೆ) ಮುಂದುವರಿಯುತ್ತಿರುವಾಗ, ಬ್ರಹ್ಮನ
ವರದಿಂದ ಎಲ್ಲರನ್ನೂ ಗೆಲ್ಲುವವನಾಗಿದ್ದ, ಅವಧ್ಯನಾಗಿರುವ
ಕವಂಧನೆಂಬ ಹೆಸರಿನ ರಾಕ್ಷಸನ ಬಾಹುಗಳನ್ನು ಶ್ರೀರಾಮ ಹೊಂದಿದ. ಇಂದ್ರನ ವಜ್ರಪಾತದಿಂದ ಕವಂಧ ಅತ್ಯಂತ ಕುಗ್ಗಿ ಹೋಗಿದ್ದ. ಅವನ ತಲೆ ಆತನ
ಹೊಟ್ಟೆಯೊಳಗಡೆ ಸೇರಿಕೊಂಡಿತ್ತು. ಆರೀತಿಯಾಗಿರುವ ಕವಂಧ ತನ್ನ ಉದ್ದವಾದ ಕೈಗಳಿಂದ
ಶ್ರೀರಾಮನನ್ನು ಹಿಡಿದುಕೊಂಡ.
ಛಿತ್ವಾsಸ್ಯ ಬಾಹುಯುಗಳಂ ಸಹಿತೋsನುಜೇನ ತಂ ಪೂರ್ವವತ್ ಪ್ರತಿವಿಧಾಯ ಸುರೇನ್ದ್ರಭೃತ್ಯಮ್ ।
ನಾಮ್ನಾ ದನುಂ ತ್ರಿಜಟಯೈವ ಪುರಾsಭಿಜಾತಂ ಗನ್ಧರ್ವಮಾಶು ಚ ತತೋsಪಿ ತದರ್ಚ್ಚಿತೋsಗಾತ್ ॥೫.೪೩॥
ಕವಂಧ ಮೂಲತಃ ದನು ನಾಮಕ ಗಂಧರ್ವ. ಹುಟ್ಟಿದ್ದು ತ್ರಿಜಟೆ ಎನ್ನುವ ರಾಕ್ಷಸಿಯಲ್ಲಿ. ಅಂತಹ ಕವಂಧನ ಎರಡು ಕೈಗಳನ್ನು ತಮ್ಮನಿಂದ ಕೂಡಿಕೊಂಡು
ಕತ್ತರಿಸಿ, ಕುಬೇರ ಭೃತ್ಯನಾದ ಕವನ್ಧನನ್ನು ಹಿಂದಿನಂತೆಯೇ ಮಾಡಿ, ಅವನಿಂದ ಪೂಜಿಸಲ್ಪಟ್ಟ
ರಾಮಚಂದ್ರ ಮುಂದೆ ತೆರಳಿದ.
[ರಾಮಾಯಣದ ಅರಣ್ಯಕಾಂಡದಲ್ಲಿ(೭೧.೭) ‘ಪುತ್ರಂ
ದನೋಸ್ತ್ವಂ ವಿದ್ಧಿ’ ಎಂದಿದೆ. ಅಂದರೆ ‘ದನುವಿನ ಮಗ ಎಂದು ತಿಳಿ’ ಎಂದರ್ಥ. ಆದರೆ ಅದು ಅಪಪಾಠ. ಏಕೆಂದರೆ ಅರಣ್ಯಕಾಂಡದಲ್ಲೇ ಮುಂದೆ(೭೧.೨೬) ‘ವಾಕ್ಯಂ ದನುರನುತ್ತಮಮ್ ಪ್ರೋವಾಚ’ ಎಂದಿದೆ. ಹೀಗಾಗಿ ಕವಂಧ ದನುವಿನ ಪುತ್ರನಲ್ಲ, ತ್ರಿಜಟೆಯ ಪುತ್ರ. ಇನ್ನು ಅರಣ್ಯಕಾಂಡದಲ್ಲಿ(೭೦.೯) ‘ದಕ್ಷಿಣೋ ದಕ್ಷಿಣಂ ಬಾಹುಮಸಕ್ತಮಸಿನಾ ತತಃ । ಚಿಚ್ಛೇದ ರಾಮೋ ವೇಗೇನ ಸವ್ಯಂ ಧೀರಸ್ತು ಲಕ್ಷ್ಮಣಃ’ ಎಂದಿದ್ದಾರೆ. ಭಾರತದ ವನಪರ್ವದಲ್ಲಿ(೨೮೦.೩೭) ಬಲ ಬಾಹುವನ್ನು
ಲಕ್ಷ್ಮಣ ಕತ್ತರಿಸಿದ ಎಂದು ಹೇಳಿದರೆ, ವಾಲ್ಮೀಕಿ ರಾಮಾಯಣದಲ್ಲಿ ಎಡಬಾಹುವನ್ನು ರಾಮ ಕತ್ತರಿಸಿದ
ಎಂದಿದೆ. ಇದಕ್ಕೆ ಆಚಾರ್ಯರು ‘ಇದು ವ್ಯತ್ಯಸ್ತ
ಕಥನ ಶೈಲಿ, ಆದ್ದರಿಂದ ಬಲತೋಳನ್ನು ರಾಮ ಕತ್ತರಿಸಿದ ಎಂದೇ ತಿಳಿಯತಕ್ಕದ್ದು ಎಂದಿದ್ದಾರೆ.
ಬ್ರಹ್ಮದೇವರ ವರದಿಂದ ಕವಂಧ ಅವಧ್ಯನಾಗಿದ್ದ ಎನ್ನುವುದನ್ನು
ಅರಣ್ಯಕಾಂಡದಲ್ಲಿ(೭೧.೮) ನಾವು ಕಾಣುತ್ತೇವೆ. ‘ಅಹಂ ಹಿ ತಪಸೋಗ್ರೇಣ ಪಿತಾಮಹಮತೋಷಯಮ್
। ಧೀರ್ಘಮಾಯುಃ ಸ ಮೇ ಪ್ರಾದಾತ್ ’ ನಾನು
ಧೀರ್ಘಾಯುಷ್ಯವಂತನಾಗಿದ್ದೇನೆ, ಹೀಗಿರುವಾಗ ನನಗೆ
ಇಂದ್ರ ಏನು ಮಾಡುತ್ತಾನೆ? ಈ ರೀತಿಯಾಗಿ
ಬುದ್ಧಿಯನ್ನು ಹೊಂದಿ, ಇಂದ್ರನನ್ನು ಕುರಿತು ಯುದ್ಧಕ್ಕೆ ತೆರಳಿದೆ. ಅವನ ಬಾಹುವಿನಿಂದ
ಪ್ರಯೋಗಿಸಲ್ಪಟ್ಟ ವಜ್ರದಿಂದ ನನ್ನ ಮೊಣಕಾಲು ಮತ್ತು ತಲೆ ಎರಡೂ ಕೂಡಾ ಉದರದೊಳಗಡೆ ಸೇರಿತು ಎಂದು
ಕವಂಧ ಹೇಳುತ್ತಾನೆ. ಈ ಘಟನೆಯನ್ನು ‘ವಜ್ರಪತನಾದತಿಕುಞ್ಚಿತಸ್ಯ’ ಎಂದು
ಆಚಾರ್ಯರು ಸಾರಸಂಗ್ರಹ ಮಾಡಿ ಹೇಳಿದ್ದಾರೆ].
ದೃಷ್ಟ್ವಾ
ತಮೇವ ಶಬರೀ ಪರಮಂ ಹರಿಂ ಚ ಜ್ಞಾತ್ವಾ ವಿವೇಶ ದಹನಂ ಪುರತೋsಸ್ಯ ತಸ್ಯೈ ।
ಪ್ರಾದಾತ್
ಸ್ವಲೋಕಮಿಮಮೇವ ಹಿ ಸಾ ಪ್ರತೀಕ್ಷ್ಯ ಪೂರ್ವಂ ಮತಙ್ಗವಚನೇನ ವನೇsತ್ರಸಾsಭೂತ್ ॥೫.೪೪॥
ಯಾವ ಶಬರಿಯು ಆ ದುರ್ಗಮವಾದ ಕಾಡಿನಲ್ಲಿ ಮತಂಗ ಋಷಿಯ
ವಚನದಿಂದಾಗಿ ಭಯವಿಲ್ಲದೇ ಭಗವಂತನ ದರ್ಶನಕ್ಕಾಗಿ ಕಾದಿದ್ದಳೋ, ಅವಳು ಶ್ರೀರಾಮನೇ ನಾರಾಯಣ ಎನ್ನುವ
ಸತ್ಯವನ್ನು ತಿಳಿದು, ಆತನ ಎದುರೇ ಬೆಂಕಿಯನ್ನು
ಪ್ರವೇಶ ಮಾಡುತ್ತಾಳೆ. ಆಗ ಶ್ರೀರಾಮನು ಶಬರಿಗೆ ತನ್ನ
ಲೋಕವಾದ ವೈಕುಂಠವನ್ನು ಕರುಣಿಸುತ್ತಾನೆ.
[ರಾಮಾಯಣದ ಅರಣ್ಯಕಾಂಡದಲ್ಲಿ(೭೪.೩೩) ಹೇಳುವಂತೆ: ‘ಅನುಜ್ಞಾತಾ ತು ರಾಮೇಣ ಹುತ್ವಾsತ್ಮಾನಂ ಹುತಾಶನೇ । ಜ್ವಲತ್ಪಾವಕಸಙ್ಕಾಶಾ ಸ್ವರ್ಗಮೇವ ಜಗಾಮ ಸಾ’ ಅಂದರೆ: ರಾಮನಿಂದ
ಅನುಜ್ಞಾತಳಾಗಿ, ಬೆಂಕಿಯಲ್ಲಿ ಪ್ರವೇಶಮಾಡಿ, ಸ್ವರ್ಗಕ್ಕೆ ತೆರಳಿದಳು ಎಂದರ್ಥ. ಆದರೆ ಇಲ್ಲಿ
ಆಚಾರ್ಯರು: ‘ಇಮಂಶ ಲೋಕಂ’ ಎಂದಿದ್ದಾರೆ. ಅಂದರೆ:
ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವ ಸ್ವರ್ಗಲೋಕದ ಅರ್ಥ ಇಂದ್ರಲೋಕ ಎಂದಲ್ಲ, ನಾರಾಯಣನ ಲೋಕವನ್ನೇ ಅಲ್ಲಿ ಹೇಳಿದ್ದಾರೆ
ಎನ್ನುವುದನ್ನು ಆಚಾರ್ಯರು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಮೋಕ್ಷವನ್ನೇ ಕರುಣಿಸಿದ ಎನ್ನುವುದಕ್ಕೆ ಪ್ರಮಾಣವನ್ನು
ಪಾದ್ಮಪುರಾಣದಲ್ಲಿ (ಉತ್ತರಖಂಡ ೨೪೨.೨೭೦) ಕಾಣಬಹುದು.: ‘ಫಲಾನ್ಯಾಸ್ವಾದ್ಯ ಕಾಕುಸ್ತ್ಥಸ್ತಸೈ ಮುಕ್ತಿಂ ದದೌ ಪರಾಮ್’ ಫಲಗಳನ್ನು ಆಸ್ವಾದನೆ ಮಾಡಿದ ರಾಮಚಂದ್ರನು ಅವಳಿಗೆ
ಮುಕ್ತಿಯನ್ನು ಕರುಣಿಸಿದನು].
[ಶಬರಿಗೆ ಏಕೆ ಈ ಜನ್ಮ ಬಂತು? ಅವಳ ಹುಟ್ಟು, ಪೂರ್ವೋತ್ತರಗಳೇನು ಎನ್ನುವುದನ್ನು
ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ:]
ಶಾಪಾದ್ ವರಾಪ್ಸರಸಮೇವ ಹಿ ತಾಂ ವಿಮುಚ್ಯ ಶಚ್ಯಾ ಕೃತಾತ್
ಪತಿಪುರಸ್ತ್ವತಿದರ್ಪ್ಪಹೇತೋಃ ।
ಗತ್ವಾ ದದರ್ಶ ಪವನಾತ್ಮಜಮೃಶ್ಯಮೂಕೇ ಸ ಹ್ಯೇಕ ಏನಮವಗಚ್ಛತಿ
ಸಮ್ಯಗೀಶಮ್ ॥೫.೪೫॥
ತನ್ನ ಗಂಡನ ಎದುರುಗಡೆ ಅತ್ಯಂತ ದರ್ಪವನ್ನು ತೋರಿಸಿದ ಕಾರಣ,
ಶಚೀದೇವಿಯಿಂದ ಕೊಡಲ್ಪಟ್ಟ ಶಾಪದಿಂದ,
ಶಬರ(ಬೇಡತಿ)ಯೋನಿಯನ್ನು ಹೊಂದಿದ್ದ, ಮೂಲತಃ ಅಪ್ಸರಶ್ರೇಷ್ಠ ಸ್ತ್ರೀಯಾಗಿರುವ
ಶಬರಿಯನ್ನು ಬಂಧಮುಕ್ತಗೊಳಿಸಿದ^ ಶ್ರೀರಾಮ,
ಅಲ್ಲಿಂದ ಮುಂದೆ ಸಾಗಿ, ಋಶ್ಯಮೂಕ ಪರ್ವತದಲ್ಲಿ ಹನುಮಂತನನ್ನು ಕಂಡ.
ಹನುಮಂತನ ಕುರಿತು ಹೇಳುತ್ತಾ ಆಚಾರ್ಯರು ಇಲ್ಲಿ ಹೇಳುತ್ತಾರೆ:
“ಅವನಲ್ಲವೇ ಚೆನ್ನಾಗಿ ನಾರಾಯಣನನ್ನು ತಿಳಿದವನು” ಎಂದು.
[^ತಾತ್ಪರ್ಯ ಇಷ್ಟು: ಇಂದ್ರನ ಎದುರುಗಡೆ ಅತ್ಯಂತ ದರ್ಪವನ್ನು
ತೋರಿದ, ಅಪ್ಸರ ಶ್ರೇಷ್ಠಳಾಗಿದ್ದ ಆಕೆಗೆ ಶಚೀದೇವಿ
ಶಾಪ ನೀಡುತ್ತಾಳೆ. ಅದರಿಂದಾಗಿ ಆಕೆ ಬೇಡತಿಯಾಗಿ
ಹುಟ್ಟುತ್ತಾಳೆ. ಇಂತಹ ಶಬರಿ ರಾಮನ ದರ್ಶನದಿಂದ ಮುಕ್ತಿಯನ್ನು ಪಡೆಯುತ್ತಾಳೆ]
No comments:
Post a Comment