೫. ಶ್ರೀರಾಮಚರಿತೆ ಹನೂಮದ್ದರ್ಶನಮ್
ಐದನೇ ಅಧ್ಯಾಯದಲ್ಲಿ
ಮಧ್ವಾಚಾರ್ಯರು ಅಯೋಧ್ಯಾಕಾಂಡ ಮತ್ತು ಅರಣ್ಯಕಾಂಡದ ಕಥೆಯನ್ನು ಸಂಗ್ರಹಿಸಿ ನೀಡಿದ್ದಾರೆ.
ಓ̐ ॥
ಇತ್ಥಂ ವಿಶ್ವೇಶ್ವರೇsಸ್ಮಿನ್ನಖಿಲಜಗದವಸ್ಥಾಪ್ಯ ಸೀತಾಸಹಾಯೇ
ಭೂಮಿಷ್ಠೇ ಸರ್ವಲೋಕಾಸ್ತುತುಷುರನುದಿನಂ ವೃದ್ಧಭಕ್ತ್ಯಾ
ನಿತಾನ್ತಮ್ ।
ರಾಜಾ ರಾಜ್ಯಾಭಿಷೇಕೇ ಪ್ರಕೃತಿಜನವಚೋ ಮಾನಯನ್ನಾತ್ಮನೋsರ್ತ್ಥ್ಯಂ
ದಧ್ರೇ ತನ್ಮನ್ಥರಾಯಾಃ ಶ್ರುತಿಪಥಮಗಮದ್ ಭೂಮಿಗಾಯಾ ಅಲಕ್ಷ್ಮ್ಯಾಃ
॥೦೫.೦೧॥
ಈ ರೀತಿಯಾಗಿ ಸೀತೆಯಿಂದೊಡಗೂಡಿದ ನಾರಾಯಣನು
ಅಯೋಧ್ಯಾಪಟ್ಟಣದಲ್ಲಿರತಕ್ಕ ಜನರನ್ನು ರಂಜಿಸುತ್ತಾ ಆವಾಸಮಾಡುತ್ತಿರಲು, ಎಲ್ಲಾ ಪ್ರಜೆಗಳೂ
ಕೂಡಾ ನಿರಂತರವಾಗಿ ರಾಮಚಂದ್ರನಲ್ಲಿ
ಬೆಳೆಯುತ್ತಿರುವ ಭಕ್ತಿಯಿಂದ ಅತ್ಯಂತ
ಸಂತಸಪಟ್ಟರು. ಆಗ ರಾಜನಾದ ದಶರಥನು ತನಗೂ ಅಪೇಕ್ಷಣೀಯವಾದ ಶ್ರೀರಾಮಚಂದ್ರನ ರಾಜ್ಯಾಭಿಷೇಕದ ವಿಷಯದಲ್ಲಿ ದೇಶದ ಜನರು ಮತ್ತು
ಪ್ರಕೃತಿಯ (ಪ್ರಕೃತಿ= ರಾಜ್ಯದ ಅಂಗಗಳು: ಪುರೋಹಿತ, ಅಮಾತ್ಯರು, ಶ್ರೇಣಿಗಳು,
ವರ್ತಕರು.. ಇವರೆಲ್ಲರ) ಮಾತನ್ನು ಗೌರವಿಸುವವನಾಗಿ, ರಾಮನಿಗೆ ಅಭಿಷೇಕ ಮಾಡಬೇಕು ಎನ್ನುವ
ನಿರ್ಧಾರವನ್ನು ಮಾಡಿದನು. ಈ ವಿಷಯ ಭೂಮಿಯಲ್ಲಿರುವ ಅಲಕ್ಷ್ಮೀ
ಮಂಥರೆಯ ಕಿವಿಗೆ ಬಿತ್ತು.
[ಮಂಥರೆ ಕಲಿಯ ಪತ್ನಿ. ಆಕೆ ಕೈಕೇಯಿಯ ದಾಸಿಯಾಗಿ ಭೂಮಿಯಲ್ಲಿ ಹುಟ್ಟಿದ್ದಳು. ಆಕೆ ಏಕೆ ಈ ರೀತಿ ದಾಸಿಯಾಗಿ ಹುಟ್ಟಿದಳು ಎನ್ನುವುದನ್ನು ಆಚಾರ್ಯರು
ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ:]
ಪೂರ್ವಂ ಕ್ಷೀರಾಬ್ಧಿಜಾತಾ ಕಥಮಪಿ ತಪಸೈವಾಪ್ಸರಸ್ತ್ವಂ ಪ್ರಯಾತಾ
ತಾಂ ನೇತುಂ ತತ್ ತಮೋsನ್ಧಂ ಕಮಲಜನಿರುವಾಚಾsಶು ರಾಮಾಭಿಷೇಕಮ್ ।
ಭೂತ್ವಾ ದಾಸೀ ವಿಲುಮ್ಪ ಸ್ವಗತಿಮಪಿ ತತಃ ಕರ್ಮ್ಮಣಾ ಪ್ರಾಪ್ಸ್ಯಸೇ
ತ್ವಂ
ಸೇತ್ಯುಕ್ತಾ ಮನ್ಥರಾssಸೀತ್ ತದನು ಕೃತವತ್ಯೇವ ಚೈತತ್ ಕುಕರ್ಮ್ಮ ॥೫.೦೨॥
ತಪಸ್ಸಿನಿಂದ ಅಪ್ಸರೆಯಾಗಿದ್ದ ಮಂಥರೆ, ಮೊದಲು ಕ್ಷೀರ
ಸಮುದ್ರದಲ್ಲಿದ್ದಳು. ಅವಳನ್ನು ಅಂಧಂತಮಸ್ಸಿಗೆ ಕೊಂಡೊಯ್ಯಲು ಬ್ರಹ್ಮದೇವರು: “ನೀನು ದಾಸಿಯಾಗಿ ರಾಮನ ಅಭಿಷೇಕವನ್ನು
ಹಾಳುಗೆಡಹು. ಅದರಿಂದ ನೀನು ನಿನ್ನ ಗತಿಯನ್ನು ಹೊಂದುತ್ತೀಯಾ” ಎಂದು ಶಾಪ ನೀಡಿದ್ದರು. ಈ ರೀತಿಯಾಗಿ ಪಿತಾಮಹನಿಂದ ಹೇಳಲ್ಪಟ್ಟ ಅವಳು ಮಂಥರೆಯಾಗಿ ಭೂಮಿಯಲ್ಲಿ
ಹುಟ್ಟಿದಳು. ಹುಟ್ಟಿದಮೇಲೆ, ಈರೀತಿಯಾದ ಕೆಟ್ಟ ಕೆಲಸವನ್ನು ಮಾಡಿಯೇ ತೀರಿದಳು.
[ಈ ಮೇಲಿನ ವಿಷಯವನ್ನು ನಾವು ಮಹಾಭಾರತದ ವನಪರ್ವದ
ರಾಮೋಪಾಖ್ಯಾನದಲ್ಲಿ(ವನಪರ್ವ: ೨೭೭.೧೨-೩)
ಕಾಣುತ್ತೇವೆ. ಅಲ್ಲಿ ಹೇಳುವಂತೆ: ‘ಮಂಥರಾ ನಾಮ ಕಾರ್ಯಾರ್ಥಮಪ್ಸರಾಃ ಪ್ರೇಷಿತಾ
ಸುರೈಃ । ದಾಸೀ ಕಾಚನ ಕೈಕೇಯ್ಯೆ
ದತ್ತಾ ಕೇಕಯಭೂಭೃತಾ’ ‘ತೇಷಾಂ ಸಮಕ್ಷಂ ಗಾಂಧರ್ವೀಮ್
ದುಂದುಭೀಂ ನಾಮ ನಾಮತಃ । ಶಶಾಸ ವರದೋ ದೇವೋ ಗಚ್ಛ ಕಾರ್ಯಾರ್ಥಸಿದ್ಧಯೇ । ಪಿತಾಮಹವಚಃ ಶ್ರುತ್ತ್ವಾ ಗಂಧರ್ವೀ ದುಂದುಭಿ ತತಃ । ಮಂಥರಾ ಮಾನುಷೇ ಲೋಕೇ ಕುಬ್ಜಾ ಸಮಭವತ್ ತದಾ’ (ಅವಳ ಹೆಸರು
ದುಂದುಭಿ. ಬ್ರಹ್ಮವರದಿಂದ ಆಕೆ ಗಂಧರ್ವೆಯಾದಳು
ಮತ್ತು ಮುಂದೆ ಈ ಮನುಷ್ಯ ಲೋಕದಲ್ಲಿ ಮಂಥರೆಯಾಗಿ ಹುಟ್ಟಿದಳು).
ತದ್ವಾಕ್ಯಾತ್ ಕೈಕಯೀ ಸಾ ಪತಿಗವರಬಲಾದಾಜಹಾರೈವ ರಾಜ್ಯಂ
ರಾಮಸ್ತದ್ಗೌರವೇಣ ತ್ರಿದಶಮುನಿಕೃತೇsರಣ್ಯಮೇವಾsವಿವೇಶ ।
ಸೀತಾಯುಕ್ತೋsನುಜೇನ ಪ್ರತಿದಿನಸುವಿವೃದ್ಧೋರುಭಕ್ತ್ಯಾ
ಸಮೇತಃ
ಸಂಸ್ಥಾಪ್ಯಾಶೇಷಜನ್ತೂನ್ ಸ್ವವಿರಹಜಶುಚಾ ತ್ಯಕ್ತಸರ್ವೇಷಣಾರ್ತ್ಥಾನ್
॥೫.೦೩॥
ಮಂಥರೆಯ ಮಾತಿನಿಂದ ಪ್ರೇರೇಪಿತಳಾದ ಆ ಕೈಕೇಯಿಯು,
ಬಹಳ ಹಿಂದೆ ಗಂಡ ತನಗೆ ಕೊಟ್ಟ ವರ ಬಲದಿಂದ
ರಾಜ್ಯವನ್ನು ಸೆಳೆದಳು. ಶ್ರೀರಾಮನು ಅವಳ
ಮೇಲಿನ ಗೌರವದಿಂದ, ರಾಜನ ಮೇಲಿನ ಗೌರವದಿಂದ,
ದೇವತೆಗಳು ಮತ್ತು ಮುನಿಗಳ ಸಲುವಾಗಿ,
ಪ್ರತಿದಿನವೂ ಕೂಡಾ ಬೆಳೆಯುತ್ತಿರುವ ಭಕ್ತಿಯುಳ್ಳ
ಲಕ್ಷ್ಮಣನಿಂದ ಕೂಡಿಕೊಂಡು, ವಿರಹದ
ದುಃಖದಿಂದ ತಮ್ಮೆಲ್ಲಾ ಬಯಕೆಗಳನ್ನು ಬಿಟ್ಟು ತನ್ನೊಡನೆ ಬಂದ ಎಲ್ಲಾ ತರಹದ ಪ್ರಾಣಿಗಳಿಗೆ “ನನ್ನ ಹಿಂದೆ ಬರಬೇಡಿ”
ಎಂದು ಹೇಳಿ, ಅರಣ್ಯವನ್ನು ಪ್ರವೇಶ ಮಾಡಿದನು.
[ಪತಿ ನೀಡಿದ ವರವನ್ನು ಯಾವ ರೀತಿ ಮಂಥರೆ ಕೈಕೇಯಿಗೆ ನೆನಪಿಸಿದಳು ಎನ್ನುವುದನ್ನು
ಅಗ್ನಿಪುರಾಣದಲ್ಲಿ(೬.೧೪-೫) ವಿವರಿಸಿದ್ದಾರೆ:. ಅಲ್ಲಿ ಮಂಥರೆ ಈ ರೀತಿ ಹೇಳುತ್ತಾಳೆ: ದೇವಾಸುರೇ
ಪುರಾ ಯುದ್ಧೇ ಶಂಬರೇಣ ಹತಾಃ ಸುರಾಃ । ರಾತ್ರೌ
ಭರ್ತಾ ಗತಸ್ತತ್ರ ರಕ್ಷಿತೋ ವಿದ್ಯೆಯಾ ತ್ವಯ । (ದೇವಾಸುರ ಯುದ್ಧದಲ್ಲಿ ಇಂದ್ರನಿಗೆ
ಸಹಾಯಕನಾಗಿ ದಶರಥ ಹೋಗಿದ್ದಾಗ, ಒಂದು ರಾತ್ರಿಯಲ್ಲಿ ಅವರು ದಾಳಿ ಮಾಡಿದಾಗ ಅವರನ್ನು ನೀನು
ರಕ್ಷಿಸಿದೆ). ವರದ್ವಯಂ ತದಾ ಪ್ರಾದಾದ್
ಯಾಚೆದಾನೀಂ ನೃಪಂ ಚ ತತ್ । (ಆಗ ನ್ಯಾಸವಾಗಿಟ್ಟ ಆ ಎರಡು ವರವನ್ನು ಈಗ ಕೇಳು). ರಾಮಸ್ಯ ಚ ವನೇ ವಾಸಂ ನವವರ್ಷಾಣಿ ಪಂಚ ಚ। ಯೌವರಾಜ್ಯಂ ಚ ಭರತೇ ತದಿದಾನೀಂ ಪ್ರದಾಸ್ಯತೀ. (ಶ್ರೀರಾಮ ಹದಿನಾಕು
ವರ್ಷ ವನವಾಸಕ್ಕೆ ಹೋಗಬೇಕು ಮತ್ತು ಭರತ ಯುವರಾಜನಾಗಬೇಕು ಎನ್ನುವ ವರ) ಈ ರೀತಿ ಮಂಥರೆಯಿಂದ ಕೈಕೇಯಿ ಪ್ರೇರೇಪಿತಳಾಗಿ ವರವನ್ನು
ಕೇಳಿ ರಾಜ್ಯವನ್ನು ಸೆಳೆದಳು].
ವೃಕ್ಷಾನ್ ಪಶ್ವಾದಿಕೀಟಾನ್ ಪಿತರಮಥ ಸಖೀನ್ ಮಾತೃಪೂರ್ವಾನ್ ವಿಸೃಜ್ಯ
ಪ್ರೋತ್ಥಾಂ ಗಙ್ಗಾಂ ಸ್ವಪಾದಾದ್ಧರ ಇವ ಗುಹೇನಾರ್ಚ್ಚಿತಃ ಸೋsಥ ತೀರ್ತ್ತ್ವಾ ।
ದೇವಾರ್ಚ್ಚ್ಯಸ್ಯಾಪಿ ಪುತ್ರಾದೃಷಿಗಣಸಹಿತಾತ್ ಪ್ರಾಪ್ಯ ಪೂಜಾಂ
ಪ್ರಯಾತಃ
ಶೈಲೇಶಂ ಚಿತ್ರಕೂಟಂ ಕತಿಪಯದಿನಾನ್ಯತ್ರ ಮೋದನ್ನುವಾಸ ॥೫.೦೪॥
ಮೇಲಿನ ಶ್ಲೋಕದಲ್ಲಿ ಹೇಳಿದ ‘ಅಶೇಷಜಂತು’ ಎನ್ನುವ ಪದವನ್ನು ಈ
ಶ್ಲೋಕದಲ್ಲಿ ಬಿಡಿಸಿ ಹೇಳಿದ್ದಾರೆ: ಪಶು ಮೊದಲಾದ
ಪ್ರಾಣಿಗಳು, ಕೀಟಗಳು, ವೃಕ್ಷಗಳು, ತಂದೆ-ತಾಯಂದಿರು, ಗೆಳೆಯರು, ಹೀಗೆ ಎಲ್ಲರನ್ನೂ ಬಿಟ್ಟು, ಸರಯೂ ನದಿ ತೀರದಿಂದ
ಹೊರಟು, ತನ್ನ ಪಾದದಿಂದಲೇ ಹುಟ್ಟಿದ ಗಂಗೆಯ
ತೀರಕ್ಕೆ ಬಂದು, ಗುಹನಿಂದ ಶ್ರೀರಾಮ ಪೂಜೆಗೊಂಡ.
ತದನಂತರ ಗಂಗೆಯನ್ನು ದಾಟಿ, ಬೃಹಸ್ಪತಿಯ ಮಗನಾದ, ಋಷಿಗಳ ಗಣಗಳಿಂದ ಕೂಡಿರುವ
ಭರದ್ವಾಜರಿಂದ ಪೂಜೆಯನ್ನು ಹೊಂದಿ, ಶ್ರೇಷ್ಠವಾದ ಬೆಟ್ಟವಾದ ಚಿತ್ರಕೂಟವನ್ನು ತಲುಪಿ, ಕೆಲವು
ದಿನಗಳ ಕಾಲ ಅಲ್ಲಿ ಸಂತೋಷದಿಂದ ವಾಸ ಮಾಡಿದ.
[ಶ್ರೀರಾಮ ಕಾಡಿನತ್ತ ಹೊರಟಾಗ ಯಾವ ರೀತಿ ಎಲ್ಲರೂ ಶೋಕಿಸಿದರು ಎನ್ನುವುದನ್ನು ವಾಲ್ಮೀಕಿ ರಾಮಾಯಣದಲ್ಲಿ
ಸುಂದರವಾಗಿ ವಿವರಿಸಿದ್ದಾರೆ. ಅಯೋಧ್ಯಾ
ಕಾಂಡದಲ್ಲಿ(೪೧.೧೦) ಹೇಳುವಂತೆ: ವ್ಯಸೃಜನ್ ಕವಳಾನ್ ನಾಗಾ ಗಾವೋ ವತ್ಸಾನ್ ನ ಪಾಯಯನ್ (ಆನೆಗಳು ಊಟವನ್ನು ಬಿಟ್ಟವು. ಹಸುಗಳು ಕರುಗಳಿಗೆ ಹಾಲು ಉಣಿಸಲಿಲ್ಲ) ಪುತ್ರಂ ಪ್ರಥಮಜಂ ಲಬ್ದ್ವಾ
ಜನನೀ ನಾಭ್ಯನಂದತ (ಆಗ ತಾನೇ ಹುಟ್ಟಿದ ಮೊದಲ ಗಂಡು ಮಗುವನ್ನು ನೋಡಿ ತಾಯಿಗೆ
ಸಂತೋಷವೇ ಆಗಲಿಲ್ಲ)].
ಏತಸ್ಮಿನ್ನೇವ ಕಾಲೇ
ದಶರಥನೃಪತಿಃ ಸ್ವರ್ಗ್ಗತೋsಭೂದ್ ವಿಯೋಗಾದ್
ರಾಮಸ್ಯೈವಾಥ ಪುತ್ರೌ
ವಿಧಿಸುತಸಹಿತೈರ್ಮ್ಮತ್ರಿಭಿಃ ಕೇಕಯೇಭ್ಯಃ ।
ಆನೀತೌ ತಸ್ಯ ಕೃತ್ವಾ ಶ್ರುತಿಗಣವಿಹಿತಪ್ರೇತಕಾರ್ಯ್ಯಾಣಿ ಸದ್ಯಃ
ಶೋಚನ್ತೌ ರಾಮಮಾರ್ಗ್ಗಂ ಪುರಜನಸಹಿತೌ ಜಗ್ಮತುರ್ಮ್ಮಾತೃಭಿಶ್ಚ ॥೫.೦೫॥
ಇದೇ ಕಾಲದಲ್ಲಿ
ದಶರಥನು ರಾಮನ ವಿಯೋಗ ದುಃಖವನ್ನು ತಡೆಯಲಾಗದೇ ಪರಲೋಕವನ್ನು ಹೊಂದಿದನು. ವಸಿಷ್ಠರಿಂದ ಕೂಡಿರುವ ಮಂತ್ರಿಗಳು ಮೊದಲಾದವರಿಂದ ಕೇಕಯ
ದೇಶದಿಂದ ಕರೆಸಲ್ಪಟ್ಟ ದಶರಥನ ಇನ್ನಿಬ್ಬರು ಮಕ್ಕಳಾಗಿರುವ ಭರತ-ಶತ್ರುಘ್ನರು, ವೇದದಲ್ಲಿ ವಿಧಿಸಲ್ಪಟ್ಟ ಪ್ರೇತ ಕಾರ್ಯ ಇತ್ಯಾದಿಯನ್ನು
ತಮ್ಮ ತಂದೆಗಾಗಿ ಮಾಡಿ, ದುಃಖಿಸುತ್ತಾ , ಹಳ್ಳಿ
ಮತ್ತು ಪಟ್ಟಣದ ಜನರ ಜೊತೆಯಲ್ಲಿ, ತಾಯಿಯಂದಿರ ಜೊತೆಗೂ ಕೂಡಿ, ರಾಮನ ಮಾರ್ಗವನ್ನು ಅನುಸರಿಸಿ ತೆರಳಿದರು.
ಧಿಕ್-ಕುರ್ವನ್ತೌ ನಿತಾನ್ತಂ ಸಕಲದುರಿತಗಾಂ ಮನ್ಥರಾಂ ಕೈಕಯೀಂ ಚ
ಪ್ರಾಪ್ತೌ ರಾಮಸ್ಯ ಪಾದೌ ಮುನಿಗಣಸಹಿತೌ ತತ್ರ ಚೋವಾಚ ನತ್ವಾ ।
ರಾಮಂ ರಾಜೀವನೇತ್ರಂ ಭರತ ಇಹ ಪುನಃ ಪ್ರೀತಯೇsಸ್ಮಾಕಮೀಶ
ಪ್ರಾಪ್ಯಾsಶು ಸ್ವಾಮಯೋದ್ಧ್ಯಾಮವರಜಸಹಿತಃ
ಪಾಲಯೇಮಾಂ ಧರಿತ್ರೀಮ್ ॥೫.೦೬॥
ಸಕಲ ದುರಿತವನ್ನು ತಂದೊಡ್ಡಿದ ಮಂಥರೆ ಮತ್ತು ಕೈಕಯಿಯನ್ನು
ಚೆನ್ನಾಗಿ ಬಯ್ಯುತ್ತಾ , ಅವರನ್ನು
ಧಿಕ್ಕರಿಸುತ್ತಾ , ಮುನಿಗಳಿಂದ
ಸಹಿತವಾಗಿ, ರಾಮನಿದ್ದ ಸ್ಥಳವನ್ನು ಅವರು ಸೇರಿದರು. ಅಲ್ಲಿ ಭರತನು ತಾವರೆಯ ಕಣ್ಗಳುಳ್ಳ
ಶ್ರೀರಾಮಚಂದ್ರನಿಗೆ ನಮಸ್ಕರಿಸಿ ಈ ರೀತಿ
ಹೇಳುತ್ತಾನೆ: “ಓ ಒಡೆಯನೇ, ನಮ್ಮ ಸಂತಸಕ್ಕಾಗಿ ನಿನ್ನದೇ ಆಗಿರುವ ಅಯೋಧ್ಯಾಪಟ್ಟಣವನ್ನು ನಿನ್ನ
ತಮ್ಮನಿಂದ ಕೂಡಿಕೊಂಡು ಹೊಂದಿ, ಅಯೋಧ್ಯೆಯಲ್ಲಿದ್ದುಕೊಂಡು ಈ ಭೂಮಿಯನ್ನು ಪಾಲಿಸು” ಎಂದು.
ಇತ್ಯುಕ್ತಃ ಕರ್ತ್ತುಮೀಶಃ ಸಕಲಸುರಗಣಾಪ್ಯಾಯನಂ ರಾಮದೇವಃ
ಸತ್ಯಾಂ ಕರ್ತ್ತುಂ ಚ ವಾಣೀಮವದದತಿತರಾಂ ನೇತಿ ಸದ್ಭಕ್ತಿನಮ್ರಮ್ ।
ಭೂಯೋಭೂಯೋsರ್ತ್ಥಯನ್ತಂ
ದ್ವಿಗುಣಿತಶರದಾಂಸಪ್ತಕೇ ತ್ವಭ್ಯತೀತೇ
ಕರ್ತ್ತೈತತ್ ತೇ ವಚೋsಹಂ ಸುದೃಢಮೃತಮಿದಂ ಮೇ ವಚೋ ನಾತ್ರ ಶಙ್ಕಾ ॥೫.೦೭॥
ಭರತನ ಮಾತನ್ನು ಕೇಳಿದಾಗ, ಆ ಮಾತನ್ನು ನೆರವೇರಿಸಲು
ಸಮರ್ಥನಾಗಿದ್ದರೂ, ಎಲ್ಲಾ ದೇವತೆಗಳಿಗೆ ಸಂತಸವನ್ನು ನೀಡಲು, ‘ತಾನು ಹದಿನಾಕು
ವರ್ಷ ಕಾಡಿನಲ್ಲಿರುತ್ತೇನೆ’ ಎಂದು ಈ ಹಿಂದೆ
ತಂದೆಗೆ ಕೊಟ್ಟ ಮಾತನ್ನು ಸತ್ಯವಾಗಿರಿಸಲು ಮತ್ತು ‘ರಾವಣನನ್ನು ಕೊಲ್ಲುತ್ತೇನೆ’ ಎನ್ನುವ ತನ್ನ
ವಾಣಿಯನ್ನು ಸತ್ಯವನ್ನಾಗಿ ಮಾಡುವುದಕ್ಕಾಗಿ “ಹಿಂದಿರುಗಿ ಬರಲು ಸಾಧ್ಯವಿಲ್ಲ” ಎಂದು ಸದ್ಭಕ್ತಿನಮ್ರನಾದ ಭರತನನ್ನು ಕುರಿತು ಶ್ರೀರಾಮ
ಹೇಳಿದನು. ಶ್ರೀರಾಮಚಂದ್ರನ ಮಾತನ್ನು ಕೇಳಿ ಭರತ ಮತ್ತೆಮತ್ತೆ ಬೇಡಲು, “ಹದಿನಾಕು ವರ್ಷ ಕಳೆದ ಮೇಲೆ ನಿನ್ನ ಮಾತನ್ನು ನೆರವೇರಿಸುತ್ತೇನೆ, ಇದು ನನ್ನ ಮಾತು. ಇದರಲ್ಲಿ ಸಂದೇಹವೇ
ಇಲ್ಲಾ” ಎಂದು ಹೇಳುತ್ತಾನೆ
ರಾಮಚಂದ್ರ.
ಶ್ರುತ್ವೈತದ್ ರಾಮವಾಕ್ಯಂ ಹುತಭುಜಿ ಪತನೇ ಸ ಪ್ರತಿಜ್ಞಾಂ ಚ ಕೃತ್ವಾ
ರಾಮೋಕ್ತಸ್ಯಾನ್ಯಥಾತ್ವೇ ನತು ಪುರಮಭಿವೇಕ್ಷ್ಯೇsಹಮಿತ್ಯೇವ ತಾವತ್ ।
ಕೃತ್ವಾsನ್ಯಾಂ ಸ ಪ್ರತಿಜ್ಞಾಮವಸದಥ ಬಹಿರ್ಗ್ಗ್ರಾಮಕೇ
ನನ್ದಿನಾಮ್ನೀ
ಶ್ರೀಶಸ್ಯೈವಾಸ್ಯ ಕೃತ್ವಾ ಶಿರಸಿ ಪರಮಕಂ ಪೌರಟಂ ಪಾದಪೀಠಮ್ ॥೫.೦೮॥
ಶ್ರೀರಾಮಚಂದ್ರನ ಮಾತನ್ನು ಕೇಳಿದ ಭರತನು, “ಒಂದು ವೇಳೆ
ಹದಿನಾಕು ವರ್ಷಗಳ ನಂತರ ಹಿಂದಿರುಗಿ ಬರದೇ ಇದ್ದಲ್ಲಿ ನಾನು ಬೆಂಕಿಯಲ್ಲಿ ಬೀಳುತ್ತೇನೆ” ಎಂದು
ಪ್ರತಿಜ್ಞೆ ಮಾಡುತ್ತಾನೆ. ಅಷ್ಟೇ ಅಲ್ಲದೆ, ‘ಅಲ್ಲಿಯ ತನಕ ತಾನು
ಅಯೋಧ್ಯಾಪಟ್ಟಣವನ್ನು ಪ್ರವೇಶ ಮಾಡುವುದಿಲ್ಲ’
ಎನ್ನುವ ಇನ್ನೊಂದು ಪ್ರತಿಜ್ಞೆಯನ್ನೂ
ಮಾಡುತ್ತಾನೆ. ತದನಂತರ ಅಯೋಧ್ಯೆಯ
ಹೊರವಲಯದಲ್ಲಿರುವ ನಂದಿ ಎನ್ನುವ ಹೆಸರಿನ ಗ್ರಾಮದಲ್ಲಿ ನಾರಾಯಣನ ಬಂಗಾರಮಯವಾದ ಪಾದುಕೆಗಳನ್ನು
ತನ್ನ ತಲೆಯಮೇಲೆ ಇಟ್ಟುಕೊಂಡು ವಾಸಮಾಡುತ್ತಾನೆ.
ಸಮಸ್ತಪೌರಾನುಗತೇsನುಜೇ ಗತೇ ಸ ಚಿತ್ರಕೂಟೇ ಭಗವಾನುವಾಸ
ಹ ।
ಅಥಾsಜಗಾಮೇನ್ದ್ರಸುತೋsಪಿ ವಾಯಸೋ ಮಹಾಸುರೇಣಾsತ್ಮಗತೇನ ಚೋದಿತಃ
॥೫.೦೯॥
ಹೀಗೆ ಭರತಾದಿಗಳು ಹಿಂದಿರುಗಲು, ಶ್ರೀರಾಮಚಂದ್ರನು ಅಲ್ಲಿಂದ ಮುಂದೆ ನಡೆದು, ಚಿತ್ರಕೂಟ ಎನ್ನುವ ಸ್ಥಳಕ್ಕೆ ಬಂದು ಅಲ್ಲಿ ವಾಸಮಾಡಲಾರಂಭಿಸಿದನು. ಆಗ ಕಾಗೆಯ ರೂಪದಲ್ಲಿದ್ದು, ತನ್ನೊಳಗಿದ್ದ ‘ಕುರಂಗ’ ಎನ್ನುವ ಮಹಾಸುರನಿಂದ ಪ್ರಚೋದಿತನಾದ ಇಂದ್ರನ ಮಗ ಜಯಂತ ಅಲ್ಲಿಗೆ
ಬರುತ್ತಾನೆ.
ಸ ಆಸುರಾವೇಶವಶಾದ್ ರಮಾಸ್ತನೇ ಯದಾ ವ್ಯಧಾತ್ ತುಣ್ಡಮಥಾಭಿವೀಕ್ಷಿತಃ ।
ಜನಾರ್ದ್ದನೇನಾsಶು ತೃಣೇ ಪ್ರಯೋಜಿತೇ ಚಚಾರ ತೇನ
ಜ್ವಲತಾsನುಯಾತಃ ॥೫.೧೦॥
ಕುರಂಗನ ಆವೇಶದಿಂದ ಕೂಡಿಕೊಂಡ, ಕಾಗೆಯ ರೂಪದಲ್ಲಿದ್ದ
ಜಯಂತನು ಸೀತೆಯ ಕುಚವನ್ನು ತನ್ನ ಕೊಕ್ಕಿನಿಂದ
ಕುಕ್ಕಲು ಪ್ರಯತ್ನಿಸಿದನು. ಇದನ್ನು ನೋಡಿದ ರಾಮಚಂದ್ರನು ಅವನತ್ತ ಹುಲ್ಲುಕಡ್ಡಿಯೊಂದನ್ನು
ಎಸೆಯುತ್ತಾನೆ. ಉರಿಯುತ್ತಿರುವ ಆ
ಹುಲ್ಲುಕಡ್ಡಿಯಿಂದ ಹಿಂಬಾಲಿಸಲ್ಪಟ್ಟವನಾಗಿ
ಜಯಂತ ಸಂಚರಿಸಿದನು.
ಸ್ವಯಮ್ಭುಶರ್ವೇನ್ದ್ರಮುಖಾನ್ತ್ಸುರೇಶ್ವರಾನ್ ಜಿಜೀವಿಷುಸ್ತಾಞ್ಛರಣಂ
ಗತೋsಪಿ ।
ಬಹಿಷ್ಕೃತಸ್ತೈರ್ಹರಿಭಕ್ತಿಭಾವತೋ ಹ್ಯಲಙ್ಘ್ಯಶಕ್ತ್ಯಾ ಪರಮಸ್ಯ
ಚಾಕ್ಷಮೈಃ ॥೫.೧೧॥
ಬದುಕುವ ಆಸೆಯಿಂದ ಜಯಂತನು ಬ್ರಹ್ಮ, ರುದ್ರ,
ಇಂದ್ರ, ಮೊದಲಾದ ಎಲ್ಲಾ ದೇವತೆಗಳನ್ನು ಶರಣು ಹೊಂದಿದರೂ, ಅವರೆಲ್ಲರೂ ಪರಮಾತ್ಮನ ಅಲಂಗನೀಯವಾದ ಶಕ್ತಿಯಿಂದ ಮತ್ತು ಪರಮಾತ್ಮನಲ್ಲಿ
ಭಕ್ತಿ ಇರುವವರಾದ್ದರಿಂದ, ಅಸುರನಿಂದ ಪ್ರಚೋದಿತನಾಗಿ ಭಗವಂತನ ವಿರುದ್ಧ ನಡೆದ ಜಯಂತನಿಗೆ
ಅವರ ಸಹಾಯ ಸಿಗುವುದಿಲ್ಲ. ಹೀಗೆ ಆತ
ಎಲ್ಲರಿಂದ
ಬಹಿಷ್ಕರಿಸಲ್ಪಟ್ಟವನಾಗುತ್ತಾನೆ.
ಪುನಃ ಪ್ರಯಾತಃ ಶರಣಂ ರಘೂತ್ತಮಂ ವಿಸರ್ಜ್ಜಿತಸ್ತೇನ ನಿಹತ್ಯ ಚಾಸುರಮ್
।
ತದಕ್ಷಿಗಂ ಸಾಕ್ಷಿಕಮಪ್ಯವದ್ಧ್ಯಂ ಪ್ರಸಾದತಶ್ಚನ್ದ್ರವಿಭೂಷಣಸ್ಯ
॥೫.೧೨॥
ಯಾರಿಂದಲೂ ರಕ್ಷಣೆ ಸಿಗದ ಜಯಂತ ಕೊನೆಗೆ ಶ್ರೀರಾಮಚಂದ್ರನನ್ನೇ
ಶರಣು ಹೊಂದುತ್ತಾನೆ. ರುದ್ರನ ಅನುಗ್ರಹದಿಂದ
ಅವಧ್ಯನಾಗಿದ್ದು, ಜಯಂತನ(ಎಲ್ಲಾ ಕಾಗೆಗಳ) ಕಣ್ಣಿನಲ್ಲಿ ಸೇರಿರುವ ಕುರಂಗನನ್ನು, ಆ ಕಣ್ಣಿನ
ಜೊತೆಗೇ ಸಂಹರಿಸಿದ ಶ್ರೀರಾಮಚಂದ್ರ, ಕಾಗೆ ರೂಪಿಯಾದ ಜಯಂತನನ್ನು ಬಿಡುಗಡೆ ಮಾಡುತ್ತಾನೆ.
ಸ ವಾಯಸಾನಾಮಸುರೋsಖಿಲಾನಾಂ ವರಾದುಮೇಶಸ್ಯ ಬಭೂವ
ಚಾಕ್ಷಿಗಃ ।
ನಿಪಾತಿತೋsಸೌ ಸಹ ವಾಯಸಾಕ್ಷಿಭಿಸ್ತೃಣೇನ
ರಾಮಸ್ಯ ಬಭೂವ ಭಸ್ಮಸಾತ್॥೫.೧೩॥
ಶಿವನ ವರಬಲದಿಂದ ಆ ಅಸುರನು ಎಲ್ಲಾ ಕಾಗೆಗಳ ಕಣ್ಣಿನಲ್ಲಿ
ಸೇರಿಕೊಂಡಿದ್ದನು. ಅಂತಹ ಕುರಂಗನು ರಾಮನಿಂದ ಅಭಿಮಂತ್ರಿತವಾದ ಹುಲ್ಲಿನಿಂದ, ಎಲ್ಲಾ
ಕಾಗೆಗಳ ಕಣ್ಣುಗಳಿಂದ ಕೂಡಿಕೊಂಡು ಬೀಳಿಸಲ್ಪಟ್ಟು, ಭಸ್ಮವಾಗುತ್ತಾನೆ.
ದದುರ್ಹಿ ತಸ್ಮೈ ವಿವರಂ ಬಲಾರ್ತ್ಥಿನೋ ಯದ್ ವಾಯಸಾಸ್ತೇನ
ತದಕ್ಷಿಪಾತನಮ್ ।
ಕೃತಂ ರಮೇಶೇನ ತದೇಕನೇತ್ರಾ ಬಭೂವುರನ್ಯೇsಪಿ ತು ವಾಯಸಾಃ ಸದಾ ॥೫.೧೪॥
ಬಲದ ಆಸೆಯಿಂದ ಕಾಗೆಗಳಿಗೂ ಮತ್ತು ಕುರಂಗನಿಗೂ ಮೊದಲೇ ಒಂದು
ಒಪ್ಪಂದವಾಗಿತ್ತು. ತಮಗೆ ಬಲ ಬೇಕು ಎನ್ನುವ
ಬಯಕೆಯಿಂದ ಅವು ಕುರಂಗನಿಗೆ ತಮ್ಮ ದೇಹದಲ್ಲಿರಲು ಅವಕಾಶವನ್ನು ಕೊಟ್ಟಿದ್ದವು. ಜಯಂತನೂ ಕೂಡಾ, ಬಲ
ಬೇಕು ಎನ್ನುವ ಲೋಭದಿಂದ ಕಾಗೆಯಾಗಿ ಹುಟ್ಟಿದ್ದ. ಆ ಕಾರಣದಿಂದ ಜಯಂತನನ್ನು ಮಾಧ್ಯಮವಾಗಿಟ್ಟುಕೊಂಡು,
ಎಲ್ಲಾ ಕಾಗೆಗಳ ಒಂದು ಕಣ್ಣನ್ನು ಭಗವಂತ ಕಿತ್ತುಬಿಟ್ಟ. ಹೀಗಾಗಿ ಎಲ್ಲಾ ಕಾಗೆಗಳಿಗೆ ಒಂದೇ
ಕಣ್ಣಾಯಿತು.
[ಆನಂತರ ಹುಟ್ಟುವ ಕಾಗೆಗಳಿಗೂ ಏಕೆ ಆ ಶಿಕ್ಷೆ ಎನ್ನುವ ಪ್ರಶ್ನೆಗೆ ಆಚಾರ್ಯರು ಮುಂದಿನ
ಶ್ಲೋಕದಲ್ಲಿ ಉತ್ತರಿಸಿದ್ದಾರೆ]
ಭವಿಷ್ಯತಾಮಪ್ಯಥ ಯಾವದೇವ ದ್ವಿನೇತ್ರತಾ ಕಾಕಕುಲೋದ್ಭವಾನಾಮ್ ।
ತಾವತ್ ತದಕ್ಷ್ಯಸ್ಯ ಕುರಙ್ಗನಾಮ್ನಃ ಶಿವೇನ ದತ್ತಂ ದಿತಿಜಸ್ಯ
ಚಾಕ್ಷಯಮ್ ॥೫.೧೫॥
“ಎಲ್ಲಾ ಕಾಲದ
ಕಾಗೆಗಳ ಕಣ್ಣಿನಲ್ಲೂ ನೀನಿರು” ಎಂದು ಶಿವ ಕುರಂಗನಿಗೆ ವರವನ್ನು ನೀಡಿದ್ದನು.
ಕಾಗೆಗಳಿಗೆ ಎಲ್ಲಿಯ ತನಕ ಎರಡು ಕಣ್ಣು ಇರುತ್ತದೋ,
ಅಲ್ಲಿಯತನಕ ಕಣ್ಣಿನ ಒಳಗಡೆ ಇರುವ
ಕುರಂಗನಿಗೆ ನಾಶ ಇಲ್ಲದಿರುವಿಕೆಯ ವರ ಕೊಡಲ್ಪಟ್ಟಿತ್ತು. [ಈ ಕಾರಣದಿಂದಲೇ ಶ್ರೀರಾಮ ಎಲ್ಲಾ ಕಾಗೆಗಳ ಒಂದು
ಕಣ್ಣನ್ನು ತೆಗೆದು, ಎಲ್ಲಾ ಕಾಗೆಗಳಿಗೂ ಒಂದೇ ಕಣ್ಣು ಇರುವಂತೆ ಮಾಡಿ, ಕುರಂಗನನ್ನು ಸಂಹಾರ
ಮಾಡುತ್ತಾನೆ]
ಅತಃ ಪುನರ್ಭಾವಮಮುಷ್ಯ ಹಿನ್ವನ್ ಭವಿಷ್ಯತಶ್ಚೈಕದೃಶಶ್ಚಕಾರ ।
ಸ ವಾಯಸಾನ್ ರಾಘವ ಆದಿಪೂರುಷಸ್ತತೋ ಯಯೌ ಶಕ್ರಸುತಸ್ತದಾಜ್ಞಯಾ॥೫.೧೬॥
ಕುರಂಗನ ಮರು ಹುಟ್ಟನ್ನು ನಾಶಮಾಡುವುದಕ್ಕಾಗಿ, ಆದಿಪೂರುಷನಾದ
ನಾರಾಯಣನು, ಮುಂದೆ ಹುಟ್ಟುವ ಕಾಗೆಗಳಿಗೂ ಒಂದೇ
ಕಣ್ಣು ಇರುವಂತೆ ಮಾಡಿದನು. ತದನಂತರ ಇಂದ್ರಸುತನಾದ
ಜಯಂತನು ದೇವರಲ್ಲಿ ಕ್ಷಮೆ ಕೋರಿ, ದೇವರ ಅನುಮತಿಯನ್ನು ಪಡೆದು, ಅಲ್ಲಿಂದ ಮರಳುತ್ತಾನೆ.
[ಈ ಕಥೆ ರಾಮಾಯಣದ ಸುಂದರಕಾಂಡದಲ್ಲಿ ಬರುತ್ತದೆ. “ನಿಮ್ಮಿಬ್ಬರ ನಡುವೆ ನಡೆದ, ಯಾರಿಗೂ ಗೊತ್ತಿರದ ಒಂದು
ಘಟನೆಯನ್ನು ಹೇಳಿ” ಎಂದು ಹನುಮಂತ ಕೇಳಿಕೊಂಡಾಗ, ಈ ಮೇಲಿನ ಕಥೆ ಹೇಳಲ್ಪಡುತ್ತದೆ. ಆದರೆ ಅಲ್ಲಿ ಈ ಘಟನೆ ಯಾವ ಕಾಲಘಟ್ಟದಲ್ಲಿ ನಡೆದಿರುವುದು
ಎನ್ನುವುದು ಸ್ಪಷ್ಟವಾಗುವುದಿಲ್ಲ. ಆದರೆ ಆಚಾರ್ಯರು ಇಲ್ಲಿ ಕಾಲನಿರ್ಣಯದೊಂದಿಗೆ ನಮಗೆ
ವಿವರವನ್ನು ನೀಡಿದ್ದಾರೆ. ಪಾದ್ಮಪುರಾಣದ ಉತ್ತರ ಖಂಡದಲ್ಲಿ(೨೪೨.೧೯೫-೬) ಈ
ರೀತಿ ಹೇಳಿದ್ದಾರೆ: ‘ಕದಾಚಿದಙ್ಕೇ ವೈದೇಹ್ಯಾಃ ಶೇತೇ ರಾಮೋ ಮಹಾಮನಾಃ ।
ಐನ್ದ್ರಿಃ ಕಾಕಃ ಸಮಾಗಮ್ಯ
ತಸ್ಮಿನ್ನೇವ ಚಚಾರ ಹ । ಸ ದೃಷ್ಟ್ವಾ ಜಾನಕೀಮ್ ತತ್ರ ಕಂದರ್ಪಶರಪೀಡಿತಃ । ವಿದದಾರ ನಖೈಸ್ತೀಕ್ಷ್ಣೈಃ ಪೀನೋನ್ನತಪಯೋದರಮ್ । ತಮ್ ದೃಷ್ಟ್ವಾ
ವಾಯಸಂ ರಾಮಸ್ತೃಣಂ ಜಗ್ರಾಹ ಪಾಣಿನಾ । ಬ್ರಹ್ಮಣೋsಸ್ತ್ರೇಣ ಸಂಯೋಜ್ಯ ಚಿಕ್ಷೇಪ
ಧರಣೀಧರಃ’ (ಸೀತೆಯ ಒಡಗೂಡಿ ರಾಮ ಮಲಗಿದ್ದಾಗ ಇಂದ್ರನ ಮಗ ಕಾಗೆಯಾಗಿ ಅಲ್ಲೇ
ಹಾರುತ್ತಾ ಬಂದ. ಕುರಂಗನ ಆವೇಶದಿಂದ ಸೀತೆಯನ್ನು ನೋಡಿ
ಕಾಮನ ಬಾಣಕ್ಕೆ ಆತ ತುತ್ತಾದ. ಅವಳ ಸ್ತನವನ್ನು
ತನ್ನ ಕೂರುಗುರುಗಳಿಂದ ಪರುಚಿದ. ಇದನ್ನು ನೋಡಿದ
ಶ್ರೀರಾಮ ಅಲ್ಲೇ ಇದ್ದ ಹುಲ್ಲು ಕಡ್ಡಿಗೆ ಬ್ರಹ್ಮಾಸ್ತ್ರವನ್ನು
ಸಂಯೋಗಮಾಡಿ ಅವನ ಮೇಲೆ ಪ್ರಯೋಗಿಸಿದ).
ರಾಮಾಯಣದ ಸುಂದರಕಾಂಡದಲ್ಲಿ(೩೮.೧೫) ‘ತತೋ ಮಾಂಸಸಮಾಯುಕ್ತೋ ವಾಯಸಃ ಪರ್ಯತುಂಡಯತ್’ ಎಂದಿದೆ. (ಮಾಂಸಾಪೇಕ್ಷೆಯಿಂದ ‘ಕೊಕ್ಕನ್ನು ಚುಚ್ಚಿದ’)
ಪಾದ್ಮಪುರಾಣದ ಉತ್ತರ ಖಂಡದಲ್ಲಿ(೨೪೨.೧೯೫-೭) ಹೇಳುವಂತೆ : ‘ಬ್ರಹ್ಮಾಣಮಿನ್ದ್ರಂ
ರುದ್ರಂ ಚ
ಯಮಂ ವರುಣಮೇವ ಚ। ಶರಣಾರ್ಥೀ ಜಗಾಮಾsಶು ವಾಯಸಃ ಶಸ್ತ್ರಪೀಡಿತಃ। ತಂ ದೃಷ್ಟ್ವಾ ವಾಯಸಂ
ಸರ್ವೇ ರುದ್ರಾದ್ಯಾ ದೇವದಾನವಾಃ । ನ ಶಕ್ತಾಃ ಸ್ಮೋ ವಯಂ ತ್ರಾತುಮಿತಿ ಪ್ರಾಹುರ್ಮನೀಷಿಣಃ । ಅಥ ಪ್ರೋವಾಚ ಭಗವಾನ್ ಬ್ರಹ್ಮಾ ತ್ರಿಭುವನೇಶ್ವರಃ। ಭೋಭೋ ಬಲಿಭುಜಾಂ ಶ್ರೇಷ್ಠ ತಮೇವ ಶರಣಂ ವ್ರಜ । ಸ ಏವ ರಕ್ಷಕಃ
ಶ್ರೀಮಾನ್ ಸರ್ವೇಷಾಂ ಕರುಣಾನಿಧಿಃ’.
ಶಸ್ತ್ರವನ್ನು ತಾಳಲಾರದೆ ಆ ಕಾಗೆ ಬ್ರಹ್ಮ, ರುದ್ರ, ಇಂದ್ರ,
ಯಮ, ವರುಣರ ಬಳಿಸಾರಿತು. ತಿಳುವಳಿಕೆಯುಳ್ಳ
ಅವರೆಲ್ಲರೂ ಈ ಕಾಗೆಯನ್ನು ನೋಡಿ, "ನಮ್ಮ ಕೈಯಲ್ಲಿ ಇದು ಆಗದ
ಮಾತು. ನಾವು ನಿನ್ನನ್ನು
ರಕ್ಷಿಸಲಾರೆವು", ಎಂದು ಹೇಳಿಬಿಟ್ಟರು. ಆದರೆ ಬ್ರಹ್ಮ ಮಾತ್ರ ಪಾರಾಗುವ ಉಪಾಯವನ್ನು ಹೇಳಿದ. "ಅಯ್ಯೋ ಕಾಗೆಯೇ! ಹೋಗು, ಆ ಕರುಣಾನಿಧಿಯಾದ ಸೀತಾಪತಿಯನ್ನೇ ಶರಣು ಹೊಂದು.
ಅವನಲ್ಲವೇ ಎಲ್ಲರ ರಕ್ಷಕ" ಎಂದು. ಹರಿಭಕ್ತಿಯೇ ಸ್ವಭಾವವಾಗಿ ಉಳ್ಳವರು ದೇವತೆಗಳು.
ಆದ್ದರಿಂದಲೇ ಅವರು ಭಗವಂತನ ದಾಸರು. ದಾಸರಾದ್ದರಿಂದಲೆ ಅವನ ಶಸ್ತ್ರವನ್ನು ತಡೆಯಲು ಅಸಮರ್ಥರು.
ನರಸಿಂಹ ಪುರಾಣದಲ್ಲಿ(೪೯.೧೧): ‘ತತೋsಸೌ ಸರ್ವದೆವೈಸ್ತು ದೇವಲೋಕಾದ್
ಭಹೀಷ್ಕೃತಃ’ ಎಂದಿದೆ (
ಆತ ದೇವತೆಗಳಿಂದ ಬಹಿಷ್ಕರಿಸಲ್ಪಟ್ಟವನಾಗುತ್ತಾನೆ). ಸುಂದರಕಾಂಡದಲ್ಲಿ(೩೮.೩೬) ಹೇಳುತ್ತಾರೆ: ‘ದತ್ವಾ ಸ ದಕ್ಷಿಣಂ ನೇತ್ರಂ
ಪ್ರಾಣೇಭ್ಯಃ ಪರಿರಕ್ಷತಃ’ (ಆತ ತನ್ನ ಬಲ ಕಣ್ಣನ್ನು ಕೊಟ್ಟು ಪ್ರಾಣವನ್ನು ಉಳಿಸಿಕೊಂಡ). ಈ ಎಲ್ಲವನ್ನೂ ಆಚಾರ್ಯರು ಸಂಗ್ರಹಿಸಿ ನಿರ್ಣಯ ನೀಡಿದ್ದಾರೆ].
ರಾಮೋsಥ ದಣ್ಡಕವನಂ ಮುನಿವರ್ಯ್ಯನೀತೋ ಲೋಕಾನನೇಕಶ ಉದಾರಬಲೈರ್ನ್ನಿರಸ್ತಾನ್
।
ಶ್ರುತ್ವಾ ಖರಪ್ರಭೃತಿಭಿರ್ವರತೋ ಹರಸ್ಯ ಸರ್ವೈರವದ್ಧ್ಯತನುಭಿಃ ಪ್ರಯಯೌ ಸಭಾರ್ಯ್ಯಃ ॥೫.೧೭॥
ಇದಾದ ಮೇಲೆ, ಶಿವನ ವರದಿಂದ ಅವಧ್ಯರಾದ, ಬಹಳ ಶ್ರೇಷ್ಠ ಬಲವುಳ್ಳ ಖರ ಮೊದಲಾದ ದೈತ್ಯರಿಂದ ಲೋಕವೆಲ್ಲವೂ
ನಾಶ ಹೊಂದುತ್ತಿದೆ ಎಂದು ಕೇಳಿ, ಮುನಿಗಳಿಂದ ಪ್ರಾರ್ಥಿತನಾದ ಶ್ರೀರಾಮಚಂದ್ರ ದಂಡಕ
ವನಕ್ಕೆ ತೆರಳುತ್ತಾನೆ.
[ಮುನಿಗಳೆಲ್ಲಾ
ಬಂದು “ನಮಗೆ ನೀನೇ ಒಡೆಯ. ಖರ ದೂಷಣ ಮೊದಲಾದ ದೈತ್ಯರು ನಮಗೆ
ಕಾಟಕೊಡುತ್ತಿದ್ದಾರೆ. ಅವರನ್ನೆಲ್ಲಾ ಕೊಂದು ನೀನು ನಮ್ಮನ್ನು ರಕ್ಷಿಸಬೇಕು. ಅದಕ್ಕಾಗಿಯೇ ನೀನು
ಬಂದಿರುವುದು ಕೂಡಾ” ಎಂದು ಪ್ರಾರ್ಥಿಸಲು, ಶ್ರೀರಾಮಚಂದ್ರ ದೈತ್ಯ ನಾಶಕ್ಕಾಗಿ ದಂಡಕಾರಣ್ಯಕ್ಕೆ
ತೆರಳುತ್ತಾನೆ].
ಆಸೀಚ್ಚ
ತತ್ರ ಶರಭಙ್ಗ ಇತಿ ಸ್ಮ ಜೀರ್ಣ್ಣೋ ಲೋಕಂ ಹರೇರ್ಜ್ಜಿಗಮಿಷುರ್ಮ್ಮುನಿರುಗ್ರತೇಜಾಃ ।
ತೇನಾsದರೋಪಹೃತಸಾರ್ಘ್ಯಸಪರ್ಯ್ಯಯಾ ಸಃ ಪ್ರೀತೋ ದದೌ ನಿಜಪದಂ ಪರಮಂ ರಮೇಶಃ॥೫.೧೮॥
ದಂಡಕಾರಣ್ಯದಲ್ಲಿ, ಶರಭಂಗ ಎನ್ನುವ, ಅತ್ಯಂತ ಮುದಿಯಾದ,
ಪರಮಾತ್ಮನ ಲೋಕವನ್ನು ಸೇರಬೇಕು ಎಂದು ಬಯಸುವ, ಉಗ್ರವಾದ ತಪಸ್ಸು ಮಾಡಿರುವ ಮುನಿಯೊಬ್ಬ ಇದ್ದನು.
ಅವನಿಂದ ಭಕ್ತಿಯಿಂದ ಕೊಡಲ್ಪಟ್ಟ, ಅರ್ಘ್ಯದಿಂದ ಕೂಡಿದ ಪೂಜೆಯಿಂದ ಪ್ರೀತನಾದ ನಾರಾಯಣನು ಆತನಿಗೆ
ಉತ್ತಮ ಲೋಕವನ್ನು ಕೊಟ್ಟನು.
ಧರ್ಮ್ಮೋ
ಯತೋsಸ್ಯ ವನಗಸ್ಯ ನಿತಾನ್ತಶಕ್ತಿಹ್ರಾಸೇ ಸ್ವಧರ್ಮ್ಮಕರಣಸ್ಯ
ಹುತಾಶನಾದೌ ।
ದೇಹಾತ್ಯಯಃ ಸ ತತ ಏವ ತನುಂ ನಿಜಾಗ್ನೌ ಸನ್ತ್ಯಜ್ಯ ರಾಮಪುರತಃ ಪ್ರಯಯೌ ಪರೇಶಮ್ ॥೫.೧೯॥
ಶರಭಂಗ ಶ್ರೀರಾಮನ ಮುಂದೆ, ತಾನು ಇಲ್ಲಿಯ ತನಕ ಹೋಮಮಾಡಿಕೊಂಡು
ಬಂದ ಅಗ್ನಿಯಲ್ಲಿ ತನ್ನ ದೇಹವನ್ನು ಬಿಟ್ಟು ಭಗವಂತನನ್ನು ಸೇರುತ್ತಾನೆ.
[ಕಾಡಿನಲ್ಲಿರುವ ಒಬ್ಬ ಋಷಿಯು ತನ್ನ ಧರ್ಮವಾಗಿರುವ ಜಪ-ತಪಸ್ಸು
ಮೊದಲಾದವುಗಳನ್ನು ಮಾಡುವಾಗ, ಅತ್ಯಂತ ಶಕ್ತಿ-ಹ್ರಾಸವಾಗಲು, ಬೆಂಕಿಯಲ್ಲಿ ಬಿದ್ದು, ಪ್ರಾಣವನ್ನು
ಬಿಡುವುದು ಧರ್ಮಸಮ್ಮತವೇ ಆಗಿದೆ. ಆ ಕಾರಣದಿಂದಲೇ ಶರಭಂಗ ರಾಮನ ಎದುರು
ಅಗ್ನಿಪ್ರವೇಶಿಸುತ್ತಾನೆ. ವಾಲ್ಮೀಕಿ ರಾಮಾಯಣದಲ್ಲಿ ಈ ಸಂಗತಿ ಬರುತ್ತದೆ. ಮಹಾಭಾರತದಲ್ಲಿಯೂ
ಕೂಡಾ ಈ ಘಟನೆಯ ಉಲ್ಲೇಖವಿದೆ. ಪದ್ಮಪುರಾಣದ ಉತ್ತರಖಂಡದಲ್ಲಿ(೨೪೨.೨೨೨) ಹೇಳುವಂತೆ: ‘ಸ
ತು ದೃಷ್ಟ್ವಾsಥ ಕಾಕುತ್ಸ್ಥಂ
ಸದ್ಯಃ ಸಙ್ಕ್ಷೀಣಕಲ್ಮಷಃ । ಪ್ರಯಯೌ ಬ್ರಹ್ಮಲೋಕಂ
ತು ಗಂಧರ್ವಾಪ್ಸರಸಾನ್ವಿತಮ್’ (ಶರಭಂಗನು, ಕಾಕುತ್ಸ್ಥ ರಾಮನನ್ನು ನೋಡಿ, ಎಲ್ಲಾ ಕೊಳೆಗಳನ್ನು ಕಳೆದುಕೊಂಡವನಾಗಿ ಬ್ರಹ್ಮಲೋಕವನ್ನು ಸೇರಿದನು, ಗಂಧರ್ವ – ಅಪ್ಸರೆಯರ ಜೊತೆಗೆ)].
ರಾಮೋsಪಿ ತತ್ರ ದದೃಶೇ ಧನದಸ್ಯ ಶಾಪಾದ್ ಗನ್ಧರ್ವಮುರ್ವಶಿರತೇರಥ
ಯಾತುಧಾನೀಮ್ ।
ಪ್ರಾಪ್ತಂ
ದಶಾಂ ಸಪದಿ ತುಮ್ಬುರುನಾಮಧೇಯಂ ನಾಮ್ನಾ ವಿರಾಧಮಪಿ ಶರ್ವವರಾದವದ್ಧ್ಯಮ್ ॥೫.೨೦॥
ತುಂಬುರು ಎನ್ನುವ ಗಂಧರ್ವ, ಹಿಂದೆ ಊರ್ವಶಿಯನ್ನು
ಹೊಂದಿದುದರಿಂದ, ಕುಬೇರನ ಶಾಪಕ್ಕೊಳಗಾಗಿ, ವಿರಾಧ
ಎನ್ನುವ ಹೆಸರಿನ ದೈತ್ಯನಾಗಿ ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದ. ಯಾರಿಂದಲೂ ವಧ್ಯನಾಗದಂತಹ
ವರವನ್ನು ಶಿವನಿಂದ ಪಡೆದಿರುವ ಆತನನ್ನು ಶ್ರೀರಾಮಚಂದ್ರ ಕಾಣುತ್ತಾನೆ.
ಭಙ್ಕ್ತ್ವಾsಸ್ಯ ಬಾಹುಯುಗಳಂ ಬಿಲಗಂ ಚಕಾರ
ಸಮ್ಮಾನಯನ್ ವಚನಮಮ್ಬುಜಜನ್ಮನೋsಸೌ ।
ಪ್ರಾದಾಚ್ಚ
ತಸ್ಯ ಸುಗತಿಂ ನಿಜಗಾಯಕಸ್ಯ ಭಕ್ಷಾರ್ತ್ಥಮಂಸಕಮಿತೋsಪಿ ಸಹಾನುಜೇನ ॥೫.೨೧॥
ದುಷ್ಟ ದೈತ್ಯನಾದ ವಿರಾಧನ ಎರಡು ತೋಳುಗಳನ್ನು ಕತ್ತರಿಸಿ, ಬ್ರಹ್ಮನ ಮಾತನ್ನು
ಗೌರವಿಸುತ್ತಾ, ಶ್ರೀರಾಮಚಂದ್ರ ಆತನನ್ನು ಬಿಲದಲ್ಲಿ ಹೂತುಹಾಕಿದ. [ಬಿಲದಲ್ಲಿ ಹೂತು, ಸುಟ್ಟರೆ
ಮಾತ್ರ ಮೃತ್ಯು ಎನ್ನುವ ಬ್ರಹ್ಮದೇವರ ವರ ಆತನಿಗಿತ್ತು]. ತನ್ನನ್ನು ತಿನ್ನಬೇಕು ಎಂದು ಬಂದಿದ್ದರೂ ಕೂಡಾ, ತನ್ನ
ಗಾಯಕ ಎನ್ನುವ ಪ್ರೀತಿಯಿಂದ ಅವನಿಗೆ ಒಳ್ಳೆಯ ಗತಿಯನ್ನು ನೀಡಿದ.
[ರಾಮಾಯಣದ ಅರಣ್ಯಕಾಂಡದಲ್ಲಿ(೪.೧೬) ಈ ಕಥೆ ಬರುತ್ತದೆ. ವಿರಾಧನನ್ನು ಬಿಲದಲ್ಲಿ ಹೂಳಲು ತಯಾರಿ ನಡೆಸಿದಾಗ
ಆತ ತನ್ನ ವೃತ್ತಾಂತವನ್ನು ಶ್ರೀರಾಮಚಂದ್ರನಿಗೆ ವಿವರಿಸುತ್ತಾನೆ. ಅಲ್ಲಿ ವಿರಾಧ
ಹೇಳುತ್ತಾನೆ: ‘ಅಪಿ ಶಾಪಾದಹಂ ಘೋರಾಂ ಪ್ರವಿಷ್ಟೋ ರಾಕ್ಷಸೀಮ್ ತನುಮ್ । ತುಂಬುರುರ್ನಾಮ ಗಂಧರ್ವಃ
ಶಪ್ತೋ ವೈಶ್ರವಣೇನ ಹಿ’ ಎಂದು. (“ಶಾಪದಿಂದ ನಾನು ಈ ರೀತಿ ದೈತ್ಯನಾಗಿ ಹುಟ್ಟಬೇಕಾಯಿತು. ನಾನು ತುಂಬುರು ಎನ್ನುವ ಗಂಧರ್ವ. ಕುಬೇರ ನನಗೆ ರಾಕ್ಷಸನಾಗಿ
ಹುಟ್ಟುವಂತೆ ಶಪಿಸಿದ್ದನು” ಎಂದು). ಅಲ್ಲಿ
ವಿರಾಧನೇ ಹೇಳುತ್ತಾನೆ : (೪.೧೯): ‘ಇತಿ
ವೈಶ್ರವಣೋ ರಾಜಾ ರಂಭಾಸಕ್ತಂ ಪುರಾsನಘ । ಅನುಪಸ್ಥೀಯಮಾನೋ ಮಾಂ
ಸಙ್ಕ್ರುದ್ಧೋ ವ್ಯಾಜಹಾರ ಹ’ ಎಂದು. (“ಹಿಂದೆ
ರಂಭಾಸಕ್ತನಾಗಿದ್ದೆ. ಅದರಿಂದಾಗಿ ಕರೆದಾಗ ತಡಮಾಡಿ ಹೋಗುತ್ತಿದ್ದೆ. ಸರಿಯಾಗಿ ಕರ್ತವ್ಯಕ್ಕೆ
ಹಾಜರಾಗುತ್ತಿರಲಿಲ್ಲ” ಎಂದು). ಇದರ ಒಟ್ಟು ಅರ್ಥ ಇಷ್ಟು:
ಹಿಂದೆ ತುಂಬುರ ರಂಭಾಸಕ್ತನಾಗಿದ್ದ.
ಆಮೇಲೆ ಊರ್ವಶೀಸಕ್ತನಾಗಿ ಕರ್ತವ್ಯಚ್ಯುತಿ ಮಾಡಿದ. ಇದರಿಂದ ಕುಬೇರನ ಶಾಪಕ್ಕೊಳಗಾಗಿ ದೈತ್ಯನಾಗಿದ್ದ].
No comments:
Post a Comment