ದೇಹೇsಪಿ ಯತ್ರ ಪವನೋsತ್ರ ಹರಿರ್ಯ್ಯತೋsಸೌ ತತ್ರೈವ ವಾಯುರಿತಿ ವೇದವಚಃ ಪ್ರಸಿದ್ಧಮ್ ।
ಕಸ್ಮಿನ್
ನ್ವಹಂ ತ್ವಿತಿ ತಥೈವ
ಹಿ ಸೋsವತಾರೇ ತಸ್ಮಾತ್ ಸ ಮಾರುತಿಕೃತೇ ರವಿಜಂ ರರಕ್ಷ ॥೫.೪೬॥
ದೇಹದಲ್ಲಿರುವಂತೆ ಮುಖ್ಯಪ್ರಾಣನೆಲ್ಲಿರುತ್ತಾನೋ ನಾರಾಯಣನೂ
ಕೂಡಾ ಅಲ್ಲಿಯೇ ಇರುತ್ತಾನೆ. ‘ಕಸ್ಮಿನ್ ನ್ವಹಂ’ ಎನ್ನುವ ವೇದವಚನವೂ ಕೂಡಾ ಇದನ್ನೇ ಹೇಳುತ್ತದೆ. ಮೂಲ
ರೂಪದಲ್ಲಿ ಹೇಗೋ ಅವತಾರ ರೂಪದಲ್ಲಿಯೂ ಕೂಡಾ ಹಾಗೇ.
ಹನುಮಂತನ ಮೇಲಿನ ಪ್ರೀತಿಯಿಂದ ಸೂರ್ಯನಿಂದ ಹುಟ್ಟಿದ ಸುಗ್ರೀವನನ್ನು ಶ್ರೀರಾಮ ರಕ್ಷಿಸುತ್ತಾನೆ.
[‘ಕಸ್ಮಿನ್ ನ್ವಹಂ’ ಎನ್ನುವ ಮಾತು
ಪ್ರಶ್ನೋಪನಿಷತ್ತಿನಲ್ಲಿ(೬.೩) ಬರುತ್ತದೆ: ‘ಕಸ್ಮಿನ್
ನ್ವಹಮುತ್ಕ್ರಾನ್ತ ಉತ್ಕ್ರಾನ್ತೋ ಭವಿಷ್ಯಾಮಿ । ಕಸ್ಮಿನ್ ವಾ ಪ್ರತಿಷ್ಠಿತೇ ಪ್ರತಿಷ್ಠಾಸ್ಯಾಮೀತಿ । ಸ ಪ್ರಾಣಮಸೃಜತ’ ಯಾರು ದೇಹದಿಂದ
ಹೊರ ಹೋದ ಕೂಡಲೇ ನಾನು ಹೊರ ಹೋಗುತ್ತೇನೋ, ಯಾರು ಇದ್ದರೆ ನಾನು ಇರುತ್ತೇನೋ, ಅಂತಹ
ಒಡನಾಡಿಯನ್ನು ಸೃಷ್ಟಿಮಾಡಬೇಕು ಎಂದು ಸಂಕಲ್ಪಮಾಡಿ, ಭಗವಂತ ಮುಖ್ಯಪ್ರಾಣನನ್ನು
ಸೃಷ್ಟಿಸಿದನಂತೆ].
ಏವಂ ಸ ಕೃಷ್ಣತನುರರ್ಜ್ಜುನಮಪ್ಯರಕ್ಷದ್ ಭೀಮಾರ್ತ್ಥಮೇವ ತದರಿಂ
ರವಿಜಂ ನಿಹತ್ಯ ।
ಪೂರ್ವಂ ಹಿ ಮಾರುತಿಮವಾಪ ರವೇಃ ಸುತೋsಯಂ ತೇನಾಸ್ಯ ವಾಲಿನಮಹನ್ ರಘುಪಃ ಪ್ರತೀಪಮ್॥೫.೪೭॥
ಕೃಷ್ಣಾವತಾರದಲ್ಲಿ, ಭೀಮನಿಗಾಗಿ (ಇಂದ್ರಪುತ್ರ) ಅರ್ಜುನನ ಶತ್ರುವಾಗಿರುವ
(ಸೂರ್ಯಪುತ್ರ) ಕರ್ಣನನ್ನು ಕೊಂದು, ಅರ್ಜುನನನ್ನು ಭಗವಂತ ರಕ್ಷಿಸಿದ. ರಾಮಾವತಾರದಲ್ಲಿ (ಸೂರ್ಯಪುತ್ರನಾದ) ಸುಗ್ರೀವ ಮೊದಲೇ ಹನುಮಂತನ ಸಖ್ಯವನ್ನು ಗಳಿಸಿದ್ದ
ಕಾರಣದಿಂದ ಸುಗ್ರೀವನ ಶತ್ರುವಾದ (ಇಂದ್ರಪುತ್ರ) ವಾಲಿಯನ್ನು ಶ್ರೀರಾಮ ಕೊಂದ.
ಏವಂ ಸುರಾಶ್ಚ ಪವನಸ್ಯ ವಶೇ ಯತೋSತಃ ಸುಗ್ರೀವಮತ್ರ ತು ಪರತ್ರ ಚ ಶಕ್ರಸೂನುಮ್ ।
ಸರ್ವೇ ಶ್ರಿತಾ ಹನುಮತಸ್ತದನುಗ್ರಹಾಯ ತತ್ರಾಗಮದ್ ರಘುಪತಿಃ ಸಹ
ಲಕ್ಷ್ಮಣೇನ ॥೫.೪೮॥
ದೇವತೆಗಳು ಸದಾ
ಮುಖ್ಯಪ್ರಾಣನ ವಶದಲ್ಲಿರುತ್ತಾರೆ. ಆ ಕಾರಣದಿಂದಲೇ ರಾಮಾವತಾರದಲ್ಲಿ ಸುಗ್ರೀವನನ್ನು ಆಶ್ರೈಸಿದ್ದ
ಎಲ್ಲಾ ದೇವತೆಗಳು, ಮುಂದಿನ ಅವತಾರವಾದ ಕೃಷ್ಣಾವತಾರದಲ್ಲಿ ಅರ್ಜುನನನ್ನು ಆಶ್ರಯಿಸಿದರು.
(ರಾಮಾವತಾರ ಕಾಲದಲ್ಲಿ ಹನುಮಂತನಾಗಿ ಮುಖ್ಯಪ್ರಾಣ
ಸುಗ್ರೀವನ ಜೊತೆಗಿದ್ದರೆ, ಕೃಷ್ಣಾವತಾರದಲ್ಲಿ ಭೀಮನಾಗಿ ಅರ್ಜುನನೊಂದಿಗಿದ್ದ).
ಹನುಮಂತನಿಂದ ಸುಗ್ರೀವನಿಗೆ ಅನುಗ್ರಹ ಮಾಡಲೆಂದೇ, ಲಕ್ಷ್ಮಣನಿಂದ ಕೂಡಿ, ಶ್ರೀರಾಮಚಂದ್ರ ಋಶ್ಯಮೂಕ ಪರ್ವತಕ್ಕೆ ಬಂದ.
‘ಯತ್ಪಾದಪಙ್ಕಜರಜಃ ಶಿರಸಾ ಬಿಭರ್ತ್ತಿ ಶ್ರೀರಬ್ಜಜಶ್ಚ ಗಿರಿಶಃ
ಸಹ ಲೋಕಪಾಲೈಃ’ ।
ಸರ್ವೇಶ್ವರಸ್ಯ ಪರಮಸ್ಯ ಹಿ ಸರ್ವಶಕ್ತೇಃ ‘ಕಿಂ ತಸ್ಯ
ಶತ್ರುಹನನೇ ಕಪಯಃ ಸಹಾಯಾಃ’ ॥೫.೪೯॥
ಭಾಗವತದ ಒಂಬತ್ತನೆಯ ಸ್ಕಂಧದ ಒಂಬತ್ತನೆಯ ಅಧ್ಯಾಯದಲ್ಲಿ ಬರುವ
ಎರಡು ಶ್ಲೋಕಗಳ ತಾತ್ಪರ್ಯವನ್ನು ಇಲ್ಲಿ
ಆಚಾರ್ಯರು ನೀಡಿದ್ದಾರೆ. ಯಾವ ಪರಮಾತ್ಮನ ಪಾದಕಮಲದ ದೂಳನ್ನು
ಲಕ್ಷ್ಮೀದೇವಿಯು, ಬ್ರಹ್ಮದೇವರು, ರುದ್ರದೇವರು, ಇಂದ್ರಾದಿಗಳಿಂದ ಕೂಡಿ, ಶಿರಸ್ಸಿನಲ್ಲಿ
ಧರಿಸುತ್ತಾರೋ, ಅಂತಹ ಸರ್ವಶಕ್ತಿಯಾದ, ಎಲ್ಲರಿಗಿಂತಲೂ ಮಿಗಿಲಾದ, ಎಲ್ಲರ ಒಡೆಯನಾದ ನಾರಾಯಣನಿಗೆ
ರಾವಣ ಸಂಹಾರದಲ್ಲಿ ಕಪಿಗಳು ಸಹಾಯಕರಾಗಬೇಕೇ?
ಸಮಾಗತೇ ತು ರಾಘವೇ ಪ್ಲವಙ್ಗಮಾಃ ಸಸೂರ್ಯ್ಯಜಾಃ ।
ವಿಪುಪ್ಲುವುರ್ಭಯಾರ್ದ್ದಿತಾ ನ್ಯವಾರಯಚ್ಚ ಮಾರುತಿಃ ॥೫.೫೦॥
ರಾಮನು ಬರುತ್ತಿರಲು,
ಸುಗ್ರೀವನಿಂದ ಒಡಗೂಡಿದ ಕಪಿಗಳು ಭಯಗೊಂಡು ಹಾರುತ್ತಾ ಓಡಿದರು. ಭಯಗೊಂಡ ಅವರನ್ನು ಹನುಮಂತ ತಡೆದ.
[ನರಸಿಂಹ ಪುರಾಣದಲ್ಲಿ(೫೦.೩-೪) ಹೇಳುವಂತೆ: ‘...ಉತ್ಪಪಾತ
ಭಯತ್ರಸ್ತ ಋಶ್ಯಮೂಕಾದ್ ವನಾನ್ತರಮ್ । ....’ ಕಪಿಗಳೆಲ್ಲರೂ
ಋಶ್ಯಮೂಕದಿಂದಲೇ ಹಾರಿ ಓಡಲಾರಂಭಿಸಿದ್ದರು].
ಸಂಸ್ಥಾಪ್ಯಾsಶು ಹರೀನ್ದ್ರಾನ್ ಜಾನನ್
ವಿಷ್ಣೋರ್ಗ್ಗುಣಾನನನ್ತಾನ್ ಸಃ ।
ಸಾಕ್ಷಾದ್ ಬ್ರಹ್ಮಪಿತಾsಸಾವಿತ್ಯೇನೇನಾಸ್ಯ ಪಾದಯೋಃ ಪೇತೇ ॥೫.೫೧॥
ಆಗ ಹನುಮಂತನು ಪರಮಾತ್ಮನ ಅನಂತ ಗುಣಗಳನ್ನು ತಿಳಿದು, ಎಲ್ಲಾ
ಕಪಿಗಳನ್ನೂ ತಡೆದು, ಇವನು ಬ್ರಹ್ಮನ ತಂದೆಯೇ ಹೌದು ಎಂದು ರಾಮಚಂದ್ರನ ಪಾದಕ್ಕೆ ನಮಸ್ಕರಿಸಿದನು.
॥ ಇತಿ
ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ರಾಮಚರಿತೇ ಹನೂಮದ್ದರ್ಶನಂ ನಾಮ ಪಞ್ಚಮೋsದ್ಧ್ಯಾಯಃ ॥
[ಆದಿತಃ ಶ್ಲೋಕಾಃ – ೪೭೦+೫೧=೫೨೧]
*********
No comments:
Post a Comment