ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, June 15, 2019

Mahabharata Tatparya Nirnaya Kannada 1319_1325


ಸುತಸ್ಯ ಮಾತೃವಶ್ಯತಾಂ ಪ್ರದರ್ಶ್ಯ ಧರ್ಮ್ಮಮೀಶ್ವರಃ
ಬಭಞ್ಜ ತೌ ದಿವಿಸ್ಪೃಶೌ ಯಮಾರ್ಜ್ಜುನೌ ಸುರಾತ್ಮಜೌ ॥೧೩.೧೯

‘ಮಗನು ತಾಯಿಯ ಸೆರೆಯಾಗಬೇಕು’ ಎನ್ನುವ ಲೋಕನಿಯಮವನ್ನು ತೋರಿಸಿದ ಭಗವಂತ, ಕುಬೇರನ ಮಕ್ಕಳಾಗಿರುವ, ಅವಳಿಮರಗಳ ರೂಪದಲ್ಲಿ ಬೆಳೆದುನಿಂತಿರುವ, ಗಗನಚುಂಬಿಯಾಗಿರುವ, ಮತ್ತೀಮರಗಳ  ಮಧ್ಯ ಸಾಗಿ ಆ ಮರಗಳನ್ನು ಮುರಿದನು.

ಪುರಾ ಧುನಿಶ್ಚುಮುಸ್ತಥಾsಪಿ ಪೂತನಾಸಮನ್ವಿತೌ ।
ಅನೋಕ್ಷಸಂಯುತೌ ತಪಃ ಪ್ರಚಕ್ರತುಃ ಶಿವಾಂ ಪ್ರತಿ ।
ತಯಾ ವರೋsಪ್ಯವದ್ಧ್ಯತಾ ಚತುರ್ಷು ಚ ಪ್ರಯೋಜಿತಃ ॥೧೩.೨೦

ಹಿಂದೆ ಧುನಿ ಮತ್ತು ಚುಮು ಎನ್ನುವ ಅಸುರರಿಬ್ಬರು ಪೂತನೆ ಮತ್ತು ಶಕಟಾಸುರನೊಂದಿಗೆ  ಕೂಡಿಕೊಂಡು ಪಾರ್ವತಿಯನ್ನು ಕುರಿತು ತಪಸ್ಸನ್ನು ಮಾಡಿದ್ದರು.  ಹೀಗೆ ತಪಸ್ಸು ಮಾಡಿದ ಈ ನಾಲ್ವರು ‘ಅವಧ್ಯತ್ವದ’ ವರವನ್ನು ಪಡೆದಿದ್ದರು.

ಅನನ್ತರಂ ತೃಣೋದ್ಭೃಮಿಸ್ತಪೋsಚರದ್ ವರಂ ಚ ತಮ್ ।
ಅವಾಪ ತೇ ತ್ರಯೋ ಹತಾಃ ಶಿಶುಸ್ವರೂಪವಿಷ್ಣುನಾ ॥೧೩.೨೧

ಧುನಿಶ್ಚುಮುಶ್ಚ ತೌ ತರೂ ಸಮಾಶ್ರಿತೌ ನಿಸೂದಿತೌ ।
ತರುಪ್ರಭಙ್ಗತೋsಮುನಾ ತರೂ ಚ ಶಾಪಸಮ್ಭವೌ ॥೧೩.೨೨॥

ಪುರಾ ಹಿ ನಾರದಾನ್ತಿಕೇ ದಿಗಮ್ಬರೌ ಶಶಾಪ ಸಃ ।
ಧನೇಶಪುತ್ರಕೌ ದ್ರುತಂ ತರುತ್ವಮಾಪ್ನುತಂ ತ್ವಿತಿ ॥೧೩.೨೩॥


ಧುನಿ ಮತ್ತು ಚುಮು ಅವಧ್ಯತ್ವದ ವರವನ್ನು ಪಡೆದಮೇಲೆ, ತೃಣಾವರ್ತನೂ  ಕೂಡಾ ತಪಸ್ಸು ಮಾಡಿ ಅವಧ್ಯತ್ವದ ವರವನ್ನು ಹೊಂದಿದನು. ಆ ಮೂವರು(ಪೂತನೆ, ಶಕಟಾಸುರ ಮತ್ತು  ತೃಣಾವರ್ತ) ಮಗುವಿನ ರೂಪದಲ್ಲಿರುವ ಕೃಷ್ಣನಿಂದ ಕೊಲ್ಲಲ್ಪಟ್ಟರು.
ಮತ್ತೀಮರದಲ್ಲಿ ಸೇರಿಕೊಂಡಿದ್ದ ಧುನಿ ಮತ್ತು ಚುಮು ಇಬ್ಬರನ್ನೂ ಶ್ರೀಕೃಷ್ಣ ಮರವನ್ನುಕಿತ್ತು ಸಂಹಾರಮಾಡಿದ. ಕೃಷ್ಣನಿಂದ ನಾಶವಾದ ಮರದಲ್ಲಿ ಧುನಿ ಮತ್ತು ಚುಮು ಅಲ್ಲದೇ ಶಾಪದಿಂದ ಹುಟ್ಟಿದ ಇನ್ನಿಬ್ಬರಿದ್ದರು. (ಅವರೇ ನಾರದರಿಂದ ಶಾಪಗ್ರಸ್ಥರಾದ ಕುಬೇರನ ಮಕ್ಕಳಾದ ನಳಕೂಬರ-ಮಣಿಗ್ರೀವ)
ಹಿಂದೆ ನಾರದರ ಸಮೀಪದಲ್ಲಿ ಬತ್ತಲೆಯಾಗಿ ಓಡಾಡಿದ ಕುಬೇರನ ಇಬ್ಬರು ಮಕ್ಕಳನ್ನು ‘ಶೀಘ್ರದಲ್ಲಿಯೇ ಮರವಾಗಿ ಹುಟ್ಟಿ’ ಎಂದು  ನಾರದರು ಶಪಿಸಿದ್ದರು.

ತತೋ ಹಿ ತೌ ನಿಜಾಂ ತನುಂ ಹರೇಃ ಪ್ರಸಾದತಃ ಶುಭೌ ।
ಅವಾಪತುಃ ಸ್ತುತಿಂ ಪ್ರಭೋರ್ವಿಧಾಯ ಜಗ್ಮತುರ್ಗ್ಗೃಹಮ್ ॥೧೩.೨೪॥

ಇದೀಗ ಕೃಷ್ಣನ ಅನುಗ್ರಹದಿಂದ ಸಾತ್ವಿಕರಾಗಿರುವ  ಈ ಇಬ್ಬರು ಕುಬೇರನ ಮಕ್ಕಳು, ತಮ್ಮ ನಿಜ ಶರೀರವನ್ನು ಹೊಂದಿ, ನಾರಾಯಣನ ಸ್ತೋತ್ರವನ್ನು ಮಾಡಿ, ತಮ್ಮ ಮನೆಯನ್ನು ಕುರಿತು ತೆರಳಿದರು.(ಶ್ರೀಕೃಷ್ಣ ಮತ್ತೀಮರವನ್ನು ಕಿತ್ತು, ಅಸುರರಾದ ಧುನಿ ಮತ್ತು ಚುಮುವನ್ನು ಕೊಂದು,  ನಳಕೂಬರ-ಮಣಿಗ್ರೀವರಿಗೆ  ಶಾಪ ವಿಮೊಚನೆಯನ್ನು ನೀಡಿದನು)

ನಳಕೂಬರಮಣಿಗ್ರೀವೌ ಮೋಚಯಿತ್ವಾ ತು ಶಾಪತಃ ।
ವಾಸುದೇವೋsಥ ಗೋಪಾಲೈರ್ವಿಸ್ಮಿತೈರಭಿವೀಕ್ಷಿತಃ ॥೧೩.೨೫॥

ಹೀಗೆ ನಳಕೂಬರ ಮತ್ತು ಮಣಿಗ್ರೀವ ಎನ್ನುವ ಅವರಿಬ್ಬರನ್ನು ಶಾಪದಿಂದ ಬಿಡುಗಡೆಗೊಳಿಸಿದ ಶ್ರೀಕೃಷ್ಣನು, ಅಚ್ಚರಿಗೊಂಡ ಗೋಪಾಲಕರಿಂದ ಕಾಣಲ್ಪಟ್ಟನು.

No comments:

Post a Comment