ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, June 29, 2019

Mahabharata Tatparya Nirnaya Kannada 1334_1337


ಜ್ಯೇಷ್ಠಂ ವಿಹಾಯ ಸ ಕದಾಚಿದಚಿನ್ತ್ಯಶಕ್ತಿರ್ಗ್ಗೋಗೋಪಗೋಗಣಯುತೋ ಯಮುನಾ ಜಲೇಷು।
ರೇಮೇ ಭವಿಷ್ಯದನುವೀಕ್ಷ್ಯ ಹಿ ಗೋಪದುಃಖಂ ತತ್ಬಾಧನಾಯ ನಿಜಮಗ್ರಜಮೇಷು ಸೋsಧಾತ್ ॥೧೩.೩೪

ಒಮ್ಮೆ ಅಚಿನ್ತ್ಯಶಕ್ತಿಯುಳ್ಳ  ಶ್ರೀಕೃಷ್ಣನು ಜ್ಯೇಷ್ಠನಾದ ಬಲರಾಮನನ್ನು ಬಿಟ್ಟು, ಗೋವುಗಳಿಂದಲೂ, ಗೋಪಾಲಕರಿಂದಲೂ ಕೂಡಿಕೊಂಡು ಯಮುನಾ ಜಲದಲ್ಲಿ ಕ್ರೀಡಿಸುತ್ತಿದ್ದನು. 
ಮುಂದೆ  ಗೋಪಾಲಕರು ಎದುರಿಸಬೇಕಾಗಿರುವ ದುಃಖವನ್ನು ಮನಗಂಡು, ಅವರೊಂದಿಗಿದ್ದು, ಅವರ ದುಃಖವನ್ನು ಪರಿಹರಿಸುವುದಕ್ಕಾಗಿ ಅಣ್ಣ ಬಲರಾಮನನ್ನು ಶ್ರೀಕೃಷ್ಣ  ಗೋಪಾಲಕರಿಗಾಗಿ ಹಾಗೆ ಬಿಟ್ಟಿದ್ದನು.  
[ಮುಂದೆ ಕಾಳಿಯಮರ್ದನವೆಂಬ ಅತ್ಯಂತ ಭಯಂಕರ ಘಟನೆ ನಡೆಯಲಿದ್ದು, ಆ ಸಮಯದಲ್ಲಿ ಭಯಭೀತರಾಗುವ ಗೋಪಾಲಕರನ್ನು ನೋಡಿಕೊಳ್ಳುವುದಕ್ಕಾಗಿ ಅಣ್ಣ ಬಲರಾಮನನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟು, ಯಮುನಾನದಿಯಲ್ಲಿ ಕೃಷ್ಣ ಕ್ರೀಡಿಸುತ್ತಿದ್ದನು]


ಸ ಬ್ರಹ್ಮಣೋ ವರಬಲಾದುರಗಂ ತ್ವವದ್ಧ್ಯಂ ಸರ್ವೈರವಾರ್ಯ್ಯವಿಷವೀರ್ಯ್ಯಮೃತೇ ಸುಪರ್ಣ್ಣಾತ್ ।
ವಿಜ್ಞಾಯ ತದ್ವಿಷವಿದೂಷಿತವಾರಿಪಾನಸನ್ನಾನ್ ಪಶೂನಪಿ ವಯಸ್ಯಜನಾನ್ ಸ ಆವೀತ್ ॥೧೩.೩೫॥

ಬ್ರಹ್ಮದೇವರ ವರಬಲದಿಂದ ಅವಧ್ಯನಾಗಿದ್ದ, ಗರುಡನನ್ನು ಬಿಟ್ಟು ಉಳಿದ ಯಾರಿಂದಲೂ ತಡೆಯಲು ಅಸಾಧ್ಯವಾದ ವಿಷದ ಪರಾಕ್ರಮವುಳ್ಳ ಅವನು(ಕಾಳಿಯಃ) ಅಲ್ಲಿದ್ದಾನೆ ಎಂದು ತಿಳಿದು, ವಿಷದಿಂದ ಕೊಳಕಾದ ನೀರನ್ನು ಕುಡಿದುದ್ದರಿಂದ ಸತ್ತ ಪಶುಗಳನ್ನೂ,  ಮಿತ್ರರೆಲ್ಲರನ್ನೂ ಕೃಷ್ಣ ರಕ್ಷಣೆ ಮಾಡಿದನು.

ಹೇಗೆ ರಕ್ಷಣೆ ಮಾಡಿದ ಅಂದರೆ:

ತದ್ದೃಷ್ಟಿದಿವ್ಯಸುಧಯಾ ಸಹಸಾsಭಿವೃಷ್ಟಾಃ  ಸರ್ವೇಪಿ ಜೀವಿತಮವಾಪುರಥೋಚ್ಚಶಾಖಮ್ ।
ಕೃಷ್ಣಃ ಕದಮ್ಬಮಧಿರುಹ್ಯ ತತೋsತಿತುಙ್ಗಾದಾಸ್ಪೋಟ್ಯ ಗಾಢರಶನೋ ನ್ಯಪತದ್ ವಿಷೋದೇ॥೧೩.೩೬॥

ಪರಮಾತ್ಮನ ಕಣ್ನೋಟವೆಂಬ ಅಮೃತದಿಂದ ಪುಳಕಿತರಾದ ಎಲ್ಲರೂ ಕೂಡಾ ಕೂಡಲೇ ಮರುಜೀವವನ್ನು ಹೊಂದಿದರು.
ತದನಂತರ, ಎತ್ತರದ ಕೊಂಬೆಗಳುಳ್ಳ ಕದಂಬ(ಕಡವೆ) ವೃಕ್ಷವನ್ನು ಏರಿ, ಅತ್ಯಂತ ಎತ್ತರವಾಗಿರುವ ಅಲ್ಲಿಂದ, ದೃಢವಾದ ಕಟಿಬಂಧನವುಳ್ಳವನಾಗಿ, ತನ್ನ ಭುಜಗಳನ್ನು ತಟ್ಟುತ್ತಾ, ವಿಷಪೂರಿತವಾದ ಅಗಾಧ ಜಲಕ್ಕೆ ಹಾರಿದನು ಕೃಷ್ಣ.
[ಈ ಕುರಿತಾದ ವಿವರ ಭಾಗವತದಲ್ಲಿ(೧೦.೧೪.೬) ಕಾಣಸಿಗುತ್ತದೆ: ‘ತಂ ಚಣ್ಡವೇಗವಿಷವೀರ್ಯಮವೇಕ್ಷ್ಯ ತೇನ ದುಷ್ಟಾಂ ನದೀಂ ಚ ಖಲಸಂಯಮನಾವತಾರಃ ಕೃಷ್ಣಃ ಕದಂಬಮಧಿರುಹ್ಯ ತತೋsತಿತುಙ್ಗಾದಾಸ್ಫೋಟ್ಯ ಗಾಢರಶನೋ ನ್ಯಪತದ್ ವಿಶೋದೇ’]

ಸಾರ್ಪ್ಪಹ್ರದಃ ಪುರುಷಸಾರನಿಪಾತವೇಗಸಙ್ಕ್ಷೋಭಿತೋರಗವಿಷೋಚ್ಛ್ವಸಿತಾಮ್ಬುರಾಶಿಃ 
ಪರ್ಯ್ಯುತ್ಪ್ಲುತೋ ವಿಷಕಷಾಯವಿಭೀಷಣೋರ್ಮ್ಮಿಭೀಮೋ ಧನುಃಶತಮನನ್ತಬಲಸ್ಯ ಕಿಂ ತತ್ ॥೧೩.೩೭॥

ಆ ಕಾಳಿಯಸರ್ಪವಿರುವ ಮಡುವು, ಪುರುಷರಲ್ಲಿ ಶ್ರೇಷ್ಠನಾದ ಕೃಷ್ಣನ ಬೀಳುವಿಕೆಯ ವೇಗದಿಂದ ಉಲ್ಲೋಲಕಲ್ಲೋಲವಾಯಿತು.  ನದಿ ಹಾವಿನ ವಿಷಭರಿತವಾದ ನಿಟ್ಟುಸಿರಿನಿಂದ ಉಲ್ಲೋಲಕಲ್ಲೋಲವಾಗಿ ನೀರಿನ ಭಯಂಕರವಾದ ಅಲೆಗಳುಳ್ಳದ್ದಾಗಿ ಎಲ್ಲೆಡೆ ಉಕ್ಕಿ ಹರಿಯಿತು. ಆದರೆ ಈರೀತಿ ನೂರು ಮಾರು ಎಗರಿದ ನೀರು  ಅನಂತಬಲನಾಗಿರುವ ಕೃಷ್ಣನಿಗೆ ಯಾವ ಲೆಕ್ಕ. 

No comments:

Post a Comment