ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, June 27, 2019

Mahabharata Tatparya Nirnaya Kannada 1330_1333


ದೈತ್ಯಂ ಸ ವತ್ಸತನುಮಪ್ರಮಯಃ ಪ್ರಗೃಹ್ಯ ಕಂಸಾನುಗಂ ಹರವರಾದಪರೈರವದ್ಧ್ಯಮ್ ।
ಪ್ರಕ್ಷಿಪ್ಯ ವೃಕ್ಷಶಿರಸಿ ನ್ಯಹನದ್ ಬಕೋsಪಿ ಕಂಸಾನುಗೋsಥ ವಿಭುಮಚ್ಯುತಮಾಸಸಾದ ॥೧೩.೩೦

ಸಂಪೂರ್ಣವಾಗಿ  ಯಾರಿಂದಲೂ ತಿಳಿಯಲಾಗದ ಪರಾಕ್ರಮವುಳ್ಳ ಶ್ರೀಕೃಷ್ಣನು, ರುದ್ರದೇವರ ವರದಿಂದ ಇನ್ನ್ಯಾರಿಂದಲೂ ಕೊಲ್ಲಲಾಗದ ಕಂಸನ ಭೃತ್ಯನಾದ, ಗೋವಿನಂತೆ(ಕರುವಿನಂತೆ) ಶರೀರವಿರುವ ದೈತ್ಯನನ್ನು ವೃಕ್ಷದ ಮೇಲುಗಡೆ ಎಸೆದು ಕೊಂದನು. ಹೀಗೆ ಕಂಸನನ್ನೇ ಅನುಸರಿಸಿರುವ ಬಕನೂ ಕೂಡಾ ಗುಣಗಣಾದಿಗಳಿಂದ ಎಂದೂ ಜಾರದ, ಸೃಷ್ಟಿಕರ್ತ ಪರಮಾತ್ಮನನ್ನು ಹೊಂದಿದನು.

ಸ್ಕನ್ದಪ್ರಸಾದಕವಚಃ ಸ ಮುಖೇ ಚಕಾರ ಗೋವಿನ್ದಮಗ್ನಿವದಮುಂ ಪ್ರದಹನ್ತಮುಚ್ಚೈಃ ।
ಚಚ್ಛರ್ದ್ದ ತುಣ್ಡಶಿರಸೈವ ನಿಹನ್ತುಮೇತಮಾಯಾನ್ತಮೀಕ್ಷ್ಯ ಜಗೃಹೇsಸ್ಯ ಸ ತುಣ್ಡಮೀಶಃ ॥೧೩.೩೧॥     

ಸ್ಕನ್ದನ ಅನುಗ್ರಹವೆಂಬ ಕವಚವುಳ್ಳ ಬಕನು, ಶ್ರೀಕೃಷ್ಣನನ್ನು ತನ್ನ ಬಾಯಿಯಿಂದ ನುಂಗಿದನು. ಆದರೆ ಬೆಂಕಿಯಂತೆ ಚೆನ್ನಾಗಿ ಸುಡುತ್ತಿರುವ ಶ್ರೀಕೃಷ್ಣನು ಆ ಬಕನನ್ನು ವಾಂತಿಮಾಡಿಸಿದನು. ತನ್ನ ಕೊಕ್ಕಿನಿಂದಲೇ ಕೊಲ್ಲಲು ಬಂದಿರುವ  ಬಕನ ಕೊಕ್ಕನ್ನು ಶ್ರೀಕೃಷ್ಣ ಹಿಡಿದನು.

ತುಣ್ಡದ್ವಯಂ ಯದುಪತಿಃ ಕರಪಲ್ಲವಾಭ್ಯಾಂ ಸಙ್ಗೃಹ್ಯ ಚಾsಶು ವಿದದಾರ ಹ ಪಕ್ಷಿದೈತ್ಯಮ್ ।
ಬ್ರಹ್ಮಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ  ಸಾಯಂ ಯಯೌ ವ್ರಜಭುವಂ ಸಹಿತೋsಗ್ರಜೇನ ॥೧೩.೩೨॥

ಯದುಪತಿಯಾದ ಶ್ರೀಕೃಷ್ಣನು ತನ್ನ ಎರಡು ಕೈಗಳಿಂದ ಆ ಪಕ್ಷಿದೈತ್ಯನ ಕೊಕ್ಕನ್ನು ಹಿಡಿದು  ಸೀಳಿದನು. ಪುಷ್ಪವೃಷ್ಟಿಯನ್ನು ಸುರಿಸುವ ಬ್ರಹ್ಮಾದಿಗಳಿಂದ ಸ್ತೋತ್ರಮಾಡುವವನಾದ ಶ್ರೀಕೃಷ್ಣನು ಅಣ್ಣನಿಂದ ಕೂಡಿಕೊಂಡು ಸಂಜೆ ವ್ರಜಕ್ಕೆ ತೆರಳಿದನು.

ಏವಂ ಸ ದೇವವರವನ್ದಿತಪಾದಪದ್ಮೋ ಗೋಪಾಲಕೇಷು ವಿಹರನ್ ಭುವಿ ಷಷ್ಠಮಬ್ದಮ್ ।
ಪ್ರಾಪ್ತೋ ಗವಾಮಖಿಲಪೋsಪಿ ಸ ಪಾಲಕೋsಭೂದ್ ವೃನ್ದಾವನಾನ್ತರಗಸಾನ್ದ್ರಲತಾವಿತಾನೇ ॥೧೩. ೩೩॥

ಈರೀತಿಯಾಗಿ ಶ್ರೇಷ್ಠ ದೇವತೆಗಳಿಂದಲೂ ವನ್ದ್ಯವಾದ ಪಾದಕಮಲಗಳುಳ್ಳ ಕೃಷ್ಣನು, ಗೋಪಾಲಕರೊಂದಿಗೆ ಕ್ರೀಡಿಸುತ್ತಾ,  ಈ ಭೂಮಿಯಲ್ಲಿ ಆರನೆಯ ವರ್ಷವನ್ನು ಹೊಂದಿದನು. ಎಲ್ಲವನ್ನೂ ಪಾಲನೆ ಮಾಡುವವನಾದರೂ ಕೂಡಾ, ವೃಂದಾವನದ ನಿಬಿಡವಾಗಿರುವ ಬಳ್ಳಿಗಳ ಮಧ್ಯದಲ್ಲಿ ಶ್ರೀಕೃಷ್ಣ ಗೋವುಗಳನ್ನು ಕಾಯುವವನಾಗಿ ಕಂಡನು.

No comments:

Post a Comment