ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, June 9, 2019

Mahabharata Tatparya Nirnaya Kannada 1314_1318


ಅಥಾsತ್ತಯಷ್ಟಿಮೀಕ್ಷ್ಯ ತಾಂ ಸ್ವಮಾತರಂ ಜಗದ್ಗುರುಃ ।
ಪ್ರಪುಪ್ಲುವೇ ತಮನ್ವಯಾನ್ಮನೋವಿದೂರಮಙ್ಗನಾ ॥೧೩.೧೪॥

ತದನಂತರ ಕೋಲನ್ನು ತೆಗೆದುಕೊಂಡ ತನ್ನ ತಾಯಿಯನ್ನು ಕಂಡ ಜಗದ್ಗುರು ಶ್ರೀಕೃಷ್ಣನು ತನ್ನ ಲೀಲೆಯನ್ನು ತೋರುತ್ತಾ  ಹಾರಿ ಓಡಿದನು. ಮನಸ್ಸಿಗೇ ನಿಲುಕದ ಅವನನ್ನು ಆ ಯಶೋದೆಯು ಅನುಸರಿಸಿ ಓಡಿದಳು.

ಪುನಃ ಸಮೀಕ್ಷ್ಯ ತಚ್ಛ್ರಮಂ ಜಗಾಮ ತತ್ಕರಗ್ರಹಮ್ ।
ಪ್ರಭುಃ ಸ್ವಭಕ್ತವಶ್ಯತಾಂ ಪ್ರಕಾಶಯನ್ನುರುಕ್ರಮಃ ॥೧೩.೧೫॥

ಉತ್ಕೃಷ್ಟವಾದ ಪಾದವಿನ್ಯಾಸವುಳ್ಳ ಭಗವಂತನು ಮತ್ತೆ ಅವಳ ಶ್ರಮವನ್ನು ನೋಡಿ(ತಾಯಿ ಬಳಲಿರುವುದನ್ನು ನೋಡಿ), ಅವಳ ಕೈಸೆರೆಯಾಗಿ ಸಿಕ್ಕಿದನು. ಹೀಗೆ  ಸರ್ವಸಮರ್ಥನಾದ ಶ್ರೀಕೃಷ್ಣನು  ತಾನು ತನ್ನ ಭಕ್ತರಿಗೆ ವಶನಾಗಿದ್ದೇನೆ ಎನ್ನುವುದನ್ನು ತೋರಿಸುತ್ತಾ, ತಾಯಿಯ ಕೈಯಲ್ಲಿ ಸಿಕ್ಕಿದನು.

ಸದಾ ವಿಮುಕ್ತಮೀಶ್ವರಂ ನಿಬದ್ಧುಮಞ್ಜಸಾssದದೇ ।
ಯದೈವ ದಾಮ ಗೋಪಿಕಾ ನ ತತ್ ಪುಪೂರ ತಂ ಪ್ರತಿ ॥೧೩.೧೬

ಯಾವಾಗಲೂ ವಿಮುಕ್ತನಾಗಿರುವ(ಬಂಧನರಹಿತನಾದ) ಭಗವಂತನನ್ನು ಚನ್ನಾಗಿ ಕಟ್ಟುವುದಕ್ಕಾಗಿ ಯಶೋದೆ ಯಾವಾಗ ಹಗ್ಗವನ್ನು ತೆಗೆದುಕೊಂಡಳೋ, ಆಗ ಆ ಹಗ್ಗವು , ಅವನನ್ನು ಕುರಿತು ಪೂರ್ತಿಯಾಗಲಿಲ್ಲ.

[ಯಾವಾಗಲೂ ವಿಮುಕ್ತ ಅಂದರೆ ಅವನು ಮನಸ್ಸಿಗೇ ನಿಲುಕದವನು. ಅಂತಹ ಶ್ರೀಕೃಷ್ಣನ ಹಿಂದೆ ಯಶೋದೆ ಅವನನ್ನು ಹಿಡಿದು ಕಟ್ಟುವುದಕ್ಕಾಗಿ ಓಡುತ್ತಾಳೆ. ಭಗವಂತ ಯಾವಾಗಲೂ ಒಂದೇರೀತಿ ಇರುತ್ತಾನೆ. ಆದರೂ ಬಾಲ್ಯ ಯೌವನಾದಿಗಳಿಗೆ ತಕ್ಕನಾದ ಲೀಲಾ ನಾಟಕವಾಡುತ್ತಾನೆ]

ಸಮಸ್ತದಾಮಸಞ್ಚಯಃ ಸುಸನ್ಧಿತೋsಪ್ಯಪೂರ್ಣ್ಣತಾಮ್ ।
ಯಯಾವನನ್ತವಿಗ್ರಹೇ ಶಿಶುತ್ವಸಮ್ಪ್ರದರ್ಶಕೇ ॥೧೩.೧೭॥

ಯಶೋದೆ ಅಲ್ಲಿದ್ದ ಎಲ್ಲಾ ಹಗ್ಗಗಳ ಸಮೂಹವನ್ನು ಸೇರಿಸಿದರೂ ಸಹ,  ಶಿಶುವಿನ ರೂಪವನ್ನು ತೋರುವ, ಎಣೆಯಿರದ ದೇಹವುಳ್ಳ ಶ್ರೀಕೃಷ್ಣನಲ್ಲಿ ಅದು ಅಪೂರ್ಣತೆಯನ್ನೇ ಹೊಂದಿತು.

ಅಬನ್ಧಯೋಗ್ಯತಾಂ ಪ್ರಭುಃ ಪ್ರದರ್ಶ್ಯ ಲೀಲಯಾ ಪುನಃ ।
ಸ ಏಕವತ್ಸಪಾಶಕಾನ್ತರಂ ಗತೋsಖಿಲಮ್ಭರಃ ॥೧೩.೧೮॥

ಹೀಗೆ ಸರ್ವಸಮರ್ಥನಾದ ಶ್ರೀಕೃಷ್ಣನು ತಾನು ಅನಾಯಾಸದಿಂದ ಬಂಧನಕ್ಕೆ  ಯೋಗ್ಯನಲ್ಲ ಎನ್ನುವುದನ್ನು ತೋರಿಸಿ, ತಕ್ಷಣ  ಕರುವನ್ನು ಕಟ್ಟುವ ಒಂದು ಚಿಕ್ಕ ಹಗ್ಗದ ಒಳಗಡೆ ಸೇರಿದನು(ಕಟ್ಟಿಸಿಕೊಂಡನು).

No comments:

Post a Comment