ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, December 2, 2019

Mahabharata Tatparya Nirnaya Kannada 1461_1465


ವೈಚಿತ್ರವೀರ್ಯ್ಯತನಯಾಃ ಕೃಪತೋ ಮಹಾಸ್ತ್ರಾಣ್ಯಾಪುಶ್ಚ ಪಾಣ್ಡುತನಯೈಃ ಸಹ ಸರ್ವರಾಜ್ಞಾಮ್
ಪುತ್ರಾಶ್ಚ ತತ್ರ ವಿವಿಧಾ ಅಪಿ ಬಾಲಚೇಷ್ಟಾಃ ಕುರ್ವತ್ಸು ವಾಯುತನಯೇನ ಜಿತಾಃ ಸಮಸ್ತಾಃ ೧೪.೬೧

ಧೃತರಾಷ್ಟ್ರನ ಮಕ್ಕಳು, ಎಲ್ಲಾ ರಾಜಕುಮಾರರೂ ಕೂಡಾ  ಪಾಂಡವರಿಂದ ಕೂಡಿಕೊಂಡು ಕೃಪಾಚಾರ್ಯರಿಂದ ಅಸ್ತ್ರಗಳನ್ನು ಪಡೆದರು(ಇದು ಅವರ ಪ್ರಾಥಮಿಕ ವಿದ್ಯಾಭ್ಯಾಸ). ಈ ವಿದ್ಯಾಭ್ಯಾಸಕಾಲದಲ್ಲಿ ತರತರನಾದ ಆಟವಾಡುತ್ತಿರುವಾಗ, ಎಲ್ಲರೂ ಕೂಡಾ ಭೀಮಸೇನನಿಂದ ಪರಾಜಿತರಾದರು.   
[ತತೋsಧಿಜಗ್ಮುಃ  ಸರ್ವೇ ತೇ ಧನುರ್ವೇದಂ ಮಹಾರಥಾಃ ಧೃತರಾಷ್ಟ್ರಾತ್ಮಜಾಶ್ಚೈವ ಪಾಣ್ಡವಾಃ ಸಹ ಯಾದವೈಃ ವೃಷ್ಣಯಶ್ಚ ನೃಪಾಶ್ಚಾನ್ಯೇ ನಾನಾದೇಶಸಮಾಗತಾಃ  ಕೃಪಮಾಚಾರ್ಯಮಾಸಾದ್ಯ ಪರಮಾಸ್ತ್ರಜ್ಞತಾಂ ಗತಾಃ’ ಎಂದು ಈ ಕುರಿತು ಮಹಾಭಾರತದ ಆದಿಪರ್ವದಲ್ಲಿ(೧೪೦.೨೪-೨೫) ಏನನ್ನು ಹೇಳಿದ್ದಾರೋ, ಅದನ್ನೇ ಆಚಾರ್ಯರು ಕೃಪಾಚಾರ್ಯರಿಂದ ಆರಂಭದ ವಿದ್ಯಾಭ್ಯಾಸ ಪಡೆದರು’ ಎಂದು ಇಲ್ಲಿ ಸಂಕ್ಷೇಪಿಸಿ ಹೇಳಿದ್ದಾರೆ].

ಪಕ್ವೋರುಭೋಜ್ಯಫಲಸನ್ನಯನಾಯ ವೃಕ್ಷೇಷ್ವಾರೂಢರಾಜತನಯಾನಭಿವೀಕ್ಷ್ಯ ಭೀಮಃ
ಪಾದಪ್ರಹಾರಮುರುವೃಕ್ಷತಳೇ ಪ್ರದಾಯ ಸಾಕಂ ಫಲೈರ್ವಿನಿಪತತ್ಸು ಫಲಾನ್ಯಭುಙ್ಕ್ತ ೧೪.೬೨

ಭೀಮನು ಉತ್ಕೃಷ್ಟವಾದ ಹಣ್ಣುಗಳನ್ನು ಕೀಳಲೆಂದು ಮರ ಏರಿದ ರಾಜರ ಮಕ್ಕಳನ್ನು ಕಂಡು, ಮರದ ಬುಡಕ್ಕೆ ತನ್ನ ಕಾಲಿನ ಒದೆತವನ್ನು ಕೊಟ್ಟು, ಹಣ್ಣಿನ ಜೊತೆಗೇ ಎಲ್ಲಾ ರಾಜರ ಮಕ್ಕಳು ಬೀಳುವಂತೆ ಮಾಡಿ,  ಹಣ್ಣುಗಳನ್ನು ತಾನು ತಿನ್ನುತ್ತಿದ್ದ.


ಯುದ್ಧೇ ನಿಯುದ್ಧ ಉತ ಧಾವನ ಉತ್ಪ್ಲವೇ ಚ ವಾರಿಪ್ಲವೇ ಚ ಸಹಿತಾನ್ ನಿಖಿಲಾನ್ ಕುಮಾರಾನ್
ಏಕೋ ಜಿಗಾಯ ತರಸಾ ಪರಮಾರ್ಯ್ಯಕರ್ಮ್ಮಾ ವಿಷ್ಣೋಃ ಸುಪೂರ್ಣ್ಣಸದನುಗ್ರಹತಃ ಸುನಿತ್ಯಾತ್ ೧೪.೬೩

ಆಯುಧ ಯುದ್ಧದಲ್ಲಿ, ಮಲ್ಲಯುದ್ಧದಲ್ಲಿ, ಓಡುವಿಕೆಯಲ್ಲಿ, ಎತ್ತರಕ್ಕೆ ಜಿಗಿಯುವುದರಲ್ಲಿ, ನೀರಿಗೆ ಹಾರಿ ಈಜುವುದರಲ್ಲಿ, ಹೀಗೆ ಎಲ್ಲದರಲ್ಲೂ ಕೂಡಾ ಭೀಮ ಆ ಎಲ್ಲಾ ಕುಮಾರರನ್ನು ಒಬ್ಬನೇ ಸ್ಫುಟವಾಗಿ ಗೆದ್ದ. ಹೀಗೆ ಶ್ರೇಷ್ಠವಾದ ಕರ್ಮವುಳ್ಳ, ನಾರಾಯಣನ ನಿತ್ಯವಾದ, ಪೂರ್ಣ ಹಾಗೂ ಯಾವುದೇ ದೋಷವಿಲ್ಲದ ಅನುಗ್ರಹದಿಂದ ಭೀಮ ಎಲ್ಲರನ್ನೂ ಗೆದ್ದ.

ಸರ್ವಾನ್ ಪ್ರಗೃಹ್ಯ ವಿನಿಮಜ್ಜತಿ ವಾರಿಮದ್ಧ್ಯೇ ಶ್ರಾನ್ತಾನ್ ವಿಸೃಜ್ಯ ಹಸತಿ ಸ್ಮ ಸ ವಿಷ್ಣುಪದ್ಯಾಮ್
ಸರ್ವಾನುದೂಹ್ಯ ಚ ಕದಾಚಿದುರುಪ್ರವಾಹಾಂ ಗಙ್ಗಾಂ ಸುತಾರಯತಿ ಸಾರಸುಪೂರ್ಣ್ಣಪೌಂಸ್ಯಃ ೧೪.೬೪

ಸಾರಭೂತವಾದ, ಸುಪೂರ್ಣಪೌಂಸ್ಯ(ಚೆನ್ನಾಗಿ ಪೂರಿತವಾದ) ಬಲವುಳ್ಳ ಭೀಮನು, ಎಲ್ಲರನ್ನೂ ಹಿಡಿದುಕೊಂಡು ಗಂಗೆಯ ನೀರಿನ ಮಧ್ಯದಲ್ಲಿ ಮುಳುಗುತ್ತಿದ್ದ. ಅವರೆಲ್ಲರೂ ಬಹಳ ಬಳಲಿದಾಗ ಅವರನ್ನು ಬಿಟ್ಟು ನಗುತ್ತಿದ್ದ. ಕೆಲವೊಮ್ಮೆ  ಉತ್ಕೃಷ್ಟವಾದ ಪ್ರವಾಹವುಳ್ಳ ಗಂಗೆಯನ್ನು ಎಲ್ಲರನ್ನೂ ಹೊತ್ತು ದಾಟಿಸುತ್ತಿದ್ದ.

ಏಕೆ ಭೀಮಸೇನ ಈರೀತಿಯಾಗಿ ನಡೆದುಕೊಳ್ಳುತ್ತಿದ್ದ ಎಂದರೆ-

ದ್ವೇಷಂ ಹ್ಯೃತೇ ನಹಿ ಹರೌ ತಮಸಿ ಪ್ರವೇಶಃ ಪ್ರಾಣೇ ಚ ತೇನ ಜಗತೀಮನು ತೌ ಪ್ರಪನ್ನೌ
ತತ್ಕಾರಣಾನ್ಯಕುರುತಾಂ ಪರಮೌ ಕರಾಂಸಿ ದೇವದ್ವಿಷಾಂ ಸತತವಿಸ್ತೃತಸಾಧುಪೌಂಸ್ಯೌ ೧೪.೬೫

ಪರಮಾತ್ಮನಲ್ಲಿಯೂ ಹಾಗು ಮುಖ್ಯಪ್ರಾಣನಲ್ಲಿಯೂ ದ್ವೇಷವಿಲ್ಲದೇ ಯಾರಿಗೂ ತಮಸ್ಸಿಗೆ ಪ್ರವೇಶವಿಲ್ಲ. ಆದ್ದರಿಂದ, ವಿಸ್ತೃತವಾದ ಪುರುಷಸ್ವಭಾವವುಳ್ಳ, ಸ್ವಾಭಾವಿಕವಾದ ಬಲದೊಂದಿಗೆ ಜಗತ್ತನ್ನು ಹೊಂದಿರುವ ಅವರಿಬ್ಬರೂ[ಶ್ರೀಕೃಷ್ಣ ಹಾಗು ಮುಖ್ಯಪ್ರಾಣ(ಭೀಮ)],  ದೈತ್ಯರಲ್ಲಿ ದ್ವೇಷ ಹುಟ್ಟಿಸುವುದಕ್ಕಾಗಿಯೇ ಆ ರೀತಿಯ  ಕರ್ಮಗಳನ್ನು ಮಾಡಿದರು.

[ರಾಜರ ರೂಪದಲ್ಲಿದ್ದ ದೈತ್ಯರಲ್ಲಿ ಶ್ರೀಕೃಷ್ಣ ದ್ವೇಷ ಹುಟ್ಟಿಸಿದರೆ, ಆ ರಾಜರ ಮಕ್ಕಳಲ್ಲಿ ಭೀಮಸೇನ ದ್ವೇಷ ಹುಟ್ಟಿಸಿದ. ಇವೆಲ್ಲವೂ ದುಷ್ಟಸಂಹಾರಕ್ಕಾಗಿ ಪ್ರಾಣ-ನಾರಾಯಣರಾಡಿದ ಲೀಲಾನಾಟಕ].

No comments:

Post a Comment