ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, April 29, 2020

Mahabharata Tatparya Nirnaya Kannada 17124_17131


ಸ ಬಾಹುನೈವ ಕೇಶವೋ ವಿಜಿತ್ಯ ಯಾವನಂ ಪ್ರಭುಃ ।
ನಿಹತ್ಯ ಸರ್ವಸೈನಿಕಾನ್ ಸ್ವಮಸ್ಯ ಯಾಪಯತ್ ಪುರೀಮ್ ॥೧೭.೧೨೪॥

ಕೃಷ್ಣನಾದರೋ, ಕೇವಲ ತನ್ನ ಬಾಹುಗಳಿಂದ ಕಾಲಯವನನನ್ನು ಗೆದ್ದು, ಅವನ ಎಲ್ಲಾ ಸೈನಿಕರನ್ನು ಕೊಂದು, ಅವನಿಗೆ ಸೇರಿದ ಎಲ್ಲಾ  ದ್ರವ್ಯಗಳನ್ನು ತನ್ನ ಪಟ್ಟಣವನ್ನು ಕುರಿತು ಕಳುಹಿಸಿಕೊಟ್ಟನು.

ಸಹಾಸ್ತ್ರಶಸ್ತ್ರಸಞ್ಚಯಾನ್ ಸೃಜನ್ತಮಾಶು ಯಾವನಮ್ ।
ನ್ಯಪಾತಯದ್ ರಥೋತ್ತಮಾತ್ ತಳೇನ ಕೇಶವೋsರಿಹಾ ॥೧೭.೧೨೫॥

ಶತ್ರುಗಳನ್ನು ಕೊಲ್ಲುವ ಕೇಶವನು, ಅಸ್ತ್ರ-ಶಸ್ತ್ರಗಳ ಸಮೂಹವನ್ನೇ ತನ್ನತ್ತ ಬಿಡುತ್ತಿರುವ ಕಾಲಯವನನನ್ನು  ಉತ್ಕೃಷ್ಟವಾದ ಅವನ ರಥದಿಂದ ಕೆಳಗೆ ಬೀಳಿಸಿದನು.

ವಿವಾಹನಂ ನಿರಾಯುಧಂ ವಿಧಾಯ ಬಾಹುನಾ ಕ್ಷಣಾತ್ ।
ವಿಮೂರ್ಚ್ಛಿತಂ ನಚಾಹನತ್ ಸುರಾರ್ತ್ಥಿತಂ ಸ್ಮರನ್ ಹರಿಃ ॥೧೭.೧೨೬॥

ಪರಮಾತ್ಮನು ಕ್ಷಣದಲ್ಲಿ ತನ್ನ ಬಾಹುವಿನಿಂದ ಅವನನ್ನು ವಾಹನವಿಲ್ಲದವನಾಗಿಯೂ, ಆಯುಧವಿಲ್ಲದವನಾಗಿಯೂ ಮಾಡಿದನು.  ಮೂರ್ಛೆಗೊಂಡ ಅವನನ್ನು ದೇವತೆಗಳ ಪ್ರಾರ್ಥನೆಯನ್ನು  ನೆನಪಿಸಿಕೊಂಡು ಕೊಲ್ಲಲಿಲ್ಲ.

[ದೇವತೆಗಳ ಪ್ರಾರ್ಥನೆ ಏನಾಗಿತ್ತು?]

ಪುರಾ ಹಿ ಯೌವನಾಶ್ವಜೇ ವರಪ್ರದಾಃ ಸುರೇಶ್ವರಾಃ ।
ಯಯಾಚಿರೇ ಜನಾರ್ದ್ದನಂ ವರಂ ವರಪ್ರದೇಶ್ವರಮ್ ॥೧೭.೧೨೭॥

ಅನರ್ತ್ಥಕೋ ವರೋsಮುನಾ ವೃತೋsಪಿ ಸಾರ್ತ್ಥಕೋ ಭವೇತ್ ।
ಅರಿಂ ಭವಿಷ್ಯಯಾವನಂ ದಹತ್ವಯಂ ತವೇಶ್ವರ ॥೧೭.೧೨೮॥

ಯುವನಾಶ್ವನ ಮಗ ಮಾನ್ಧಾತಾ, ಮಾನ್ಧಾತಾನ ಮಗನಾದ  ಮುಚುಕುನ್ದನಿಗೆ ಹಿಂದೆ  ವರವನ್ನು ನೀಡಿದ್ದ ಶ್ರೇಷ್ಠರಾದ ದೇವತೆಗಳು, ತಾವು ಕೊಟ್ಟ ವರವನ್ನು ಸತ್ಯವಾಗಿಸುವಂತೆ, ವರವನ್ನು ಕೊಡುವವರಲ್ಲಿಯೇ ಅಗ್ರಗಣ್ಯನಾದ ನಾರಾಯಣನನ್ನು ಕುರಿತು ಹೀಗೆ ಬೇಡಿದ್ದರು:
‘ಈ ಮುಚುಕುನ್ದನಿಂದ ವ್ಯರ್ಥವಾದ ವರವು ಬೇಡಲ್ಪಟ್ಟರೂ ಕೂಡಾ, ಅದು ಅವನಿಗೆ ಸಾರ್ಥಕವಾಗಬೇಕು. ನಿನ್ನ ಶತ್ರುವಾಗಿರುವ, ಮುಂದೆ ಬರುವ ಕಾಲಯವನನನ್ನು ಈ ಮುಚುಕುನ್ದನು  ಸುಟ್ಟುಬಿಡಲಿ’  ಎಂದು.

ತಥಾsಸ್ತ್ವಿತಿ ಪ್ರಭಾಷಿತಂ ಸ್ವವಾಕ್ಯಮೇವ ಕೇಶವಃ ।
ಋತಂ ವಿಧಾತುಮಭ್ಯಯಾತ್ ಸ ಯೌವನಾಶ್ವಜಾನ್ತಿಕಮ್ ॥೧೭.೧೨೯॥

ಕೃಷ್ಣನು ‘ಹಾಗೆಯೇ ಆಗಲಿ’ ಎಂದು ಹೇಳಲ್ಪಟ್ಟ  ತನ್ನ ಮಾತನ್ನೇ ಸತ್ಯವನ್ನಾಗಿ ಮಾಡಲು ಮುಚಕುನ್ದನ ಸಮೀಪ ತೆರಳಿದನು.

ಸಸಙ್ಜ್ಞಕೋsಥ ಯಾವನೋ ಧರಾತಳಾತ್ ಸಮುತ್ಥಿತಃ ।
ನಿಪಾತ್ಯ ಯಾನ್ತಮೀಶ್ವರಂ ಸ ಪೃಷ್ಠತೋsನ್ವಯಾತ್ ಕ್ರುಧಾ ॥೧೭.೧೩೦॥

ಸ್ವಲ್ಪಹೊತ್ತಾದಮೇಲೆ, ಪ್ರಜ್ಞೆಬಂದ ಕಾಲಯವನನು, ಭೂಮಿಯಿಂದ ಮೇಲೆದ್ದು, ಕೋಪದಿಂದ,  ತೆರಳುತ್ತಿರುವ ಕೃಷ್ಣನನ್ನು ಹಿಂದಿನಿಂದ ಅನುಸರಿಸಿದನು.

[ಈ ಎಲ್ಲಾ ಘಟನೆಯ ವಿವರವನ್ನು ನಾವು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೭.೪೩-೪೭)ಕಾಣುತ್ತೇವೆ:  ಮಾನ್ಧಾತುಸ್ತು ಸುತೋ ರಾಜಾ ಮುಚುಕುನ್ದೋ ಮಹಾಯಶಾಃ  । (ಯುವನಾಶ್ವನ ಮಗ ಮಾನ್ಧಾತ, ಮಾನ್ಧಾತುವಿನ ಮಗ  ಮುಚುಕುನ್ದ) ಪುರಾ ದೇವಾಸುರೇ ಯುದ್ಧೇ ಕೃತಕರ್ಮ ಮಹಾಬಲಃ । ವರೇಣ  ಚ್ಛನ್ದಿತೋ ದೆವೈರ್ನಿದ್ರಾಮೇವ ಗೃಹೀತವಾನ್ ।  (ದೇವಾಸುರ ಯುದ್ಧದಲ್ಲಿ ದೇವತೆಗಳ ಪರವಾಗಿ ಯುದ್ಧಮಾಡಿ ದಣಿದಿದ್ದ ಮುಚುಕುನ್ದ, ಯುದ್ಧಾನಂತರ  ತನಗೆ ವಿಶ್ರಾಂತಿಬೇಕು ಎಂದು ನಿದ್ರೆಯನ್ನೇ ವರವಾಗಿ ಬೇಡಿದ) ಶ್ರಾನ್ತಸ್ಯ ತಸ್ಯ ವಾಗೇವಂ ತದಾ ಪ್ರಾದುರಭೂತ್ ಕಿಲ । ಪ್ರಸುಪ್ತೋ ಬೋಧಯೇದ್ ಯೋ ಮಾಂ ತಂ ದಹೇಯಮಹಂ ಸುರಾಃ  ।  (‘ನಾನು ಮಲಗಿರುತ್ತೇನೆ. ಯಾರಾದರು ವಿಶ್ರಾಂತಿ ಕಾಲದಲ್ಲಿ ನನ್ನನ್ನು ಎಬ್ಬಿಸಿದರೆ ಅವರು ಬಸ್ಮವಾಗಲಿ’ ಎಂದು ಅವನು ವರವನ್ನು ಬೇಡಿದ್ದ) ಚಕ್ಷುಷಾ ಕ್ರೋಧದೀಪ್ತೇನ ಏವಮಾಹ ಪುನಃಪುನಃ  (ಒಮ್ಮೆ ಅಲ್ಲ, ಪದೇಪದೇ ಅದನ್ನೇ ಕೇಳಿದ). ಏವಮಸ್ತ್ವಿತಿ ತಂ ಶಕ್ರ ಉವಾಚ ತ್ರಿದಶೈಃ ಸಹ ।  ಸ ಸುರೈರಭ್ಯನುಜ್ಞಾತೋ ಲೋಕಂ  ಮಾನುಷಮಾಗಮತ್ । ಸ ಪರ್ವತಗುಹಾಂ  ಕಾಞ್ಚಿತ್ ಪ್ರವಿಷ್ಯ ಶ್ರಮಕರ್ಷಿತಃ  (ವರವನ್ನು ಪಡೆದ ಮುಚುಕುನ್ದ ಮನುಷ್ಯಲೋಕಕ್ಕೆ ಬಂದು, ಗೂಢವಾದ ಪರ್ವತದ ಗುಹೆಯ  ಒಳಗಡೆ ಮಲಗಿದ್ದ).  ಸುಶ್ವಾಪ ಕಾಲಮೇತಂ ವೈ ಯಾವತ್ ಕೃಷ್ಣಸ್ಯ ದರ್ಶನಮ್’ (ಶ್ರೀಕೃಷ್ಣನ ದರ್ಶನವಾಗುವ ತನಕವೂ ಅಲ್ಲೇ ಮಲಗಿದ್ದ. 

ಹರಿರ್ಗ್ಗುಹಾಂ ನೃಪಸ್ಯ ತು ಪ್ರವಿಶ್ಯ ಸಂವ್ಯವಸ್ಥಿತಃ ।
ಸ ಯಾವನಃ ಪದಾsಹನನ್ನೃಪಂ ಸ ತಂ ದದರ್ಶ ಹ ॥೧೭.೧೩೧॥

ಪರಮಾತ್ಮನು ಮುಚುಕುನ್ದ ರಾಜನು ನಿದ್ರಿಸುತ್ತಿರುವ ಗವಿಯನ್ನು ಪ್ರವೇಶಮಾಡಿ, ಅಲ್ಲೇ ಅಡಗಿ ನಿಂತ. ಶ್ರೀಕೃಷ್ಣನನ್ನು ಹಿಂಬಾಲಿಸಿ ಬಂದ ಕಾಲಯವನನು ನಿದ್ರಿಸುತ್ತಿರುವ ಮುಚುಕುನ್ದನನ್ನು ತುಳಿದ. ಆಗ ಮುಚುಕುನ್ದ ನಿದ್ರೆಯಿಂದೆದ್ದು ಕಾಲಯವನನನ್ನು ಕಂಡ.

No comments:

Post a Comment