ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 27, 2022

Mahabharata Tatparya Nirnaya Kannada 22: 31-40

 

[‘ನಾನು ನಿಮ್ಮ ಸಮೀಪ ಇಲ್ಲದಿದ್ದುದರಿಂದ ಹೀಗಾಯಿತು’ ಎಂದು ಹೇಳಿರುವುದರ ಅರ್ಥ  ಭಗವಂತನಿಗೆ ದೇಶ-ಕಾಲದ ವ್ಯಾಪ್ತಿಯಿಲ್ಲವೆಂದಲ್ಲ. ಅದನ್ನು ವಿವರಿಸುತ್ತಾರೆ:]

 

ಸನ್ನಿಧಾನೇSಥ ದೂರೇ ವಾ ಕಾಲವ್ಯವಹಿತೇsಪಿ ವಾ ।

ಸ್ವಭಾವಾದ್ ವಾ ವ್ಯವಹಿತೇ ವಸ್ತುವ್ಯವಹಿತೇSಪಿ ವಾ                ॥ ೨೨.೩೧॥

 

ನಾಶಕ್ತಿರ್ವಿದ್ಯತೇ ವಿಷ್ಣೋರ್ನ್ನಿತ್ಯಾವ್ಯವಹಿತತ್ವತಃ ।

ತಥಾSಪಿ ನರಲೋಕಸ್ಯ ಕರೋತ್ಯನು ಕೃತಿಂ ಪ್ರಭುಃ                 ॥ ೨೨.೩೨॥

 

ಹತ್ತಿರ ಇದ್ದರೂ, ಕಾಲದ ತಡೆ ಇದ್ದರೂ, ಸ್ವಭಾವದಿಂದ ತಡೆ ಇದ್ದರೂ, ವಸ್ತುವಿನಿಂದ ತಡೆ ಇದ್ದರೂ, ನಾರಾಯಣನಿಗೆ ಅಶಕ್ತಿಯೆನ್ನುವುದು ಇಲ್ಲವೇ ಇಲ್ಲ. ಅವನು ಎಲ್ಲಾಕಾಲದಲ್ಲೂ ಎಲ್ಲಾ ಶಕ್ತಿಯಿಂದ ಕೂಡಿರುತ್ತಾನೆ. ಸರ್ವತ್ರ ವ್ಯಾಪ್ತನಾಗಿರುವುದರಿಂದ ಅವನಿಗೆ ಸಮೀಪ-ದೂರದ ತಡೆ ಇಲ್ಲ. ಆದರೂ  (ಶ್ರೀಕೃಷ್ಣ ಏಕೆ ಹಾಗೆ ಹೇಳಿದ ಎಂದರೆ: )  ಮನುಷ್ಯಲೋಕದ ಅನುಕರಣೆಯನ್ನು ದೇವರು ಮಾಡುತ್ತಾನೆ.

 

ದುಷ್ಟಾನಾಂ ದೋಷವೃದ್ಧ್ಯರ್ತ್ಥಂ ಭೀಮಾದೀನಾಂ ಗುಣೋನ್ನತೇಃ ।

ಯುಧಿಷ್ಠಿರೇSತಿವೃದ್ಧಂ ತು ರಾಜಸೂಯಾದಿಸಮ್ಭವಮ್            ॥ ೨೨.೩೩॥

 

ಧರ್ಮ್ಮಂ ಚ ಸಙ್ಕ್ರಾಮಯಿತುಂ ಕೃಷ್ಣಾಯಾಮನುಜೇಷು ಚ ।

ಯೋಗ್ಯತಾಕ್ರಮತೋ ವಿಷ್ಣುರಿಚ್ಛಯೇತ್ಥಮಚೀಕ್ಲ್ ಪತ್               ॥ ೨೨.೩೪॥

 

ದುಷ್ಟರ ದೋಷದ ಅಭಿವೃದ್ಧಿಗಾಗಿ, ಭೀಮಸೇನ ಮೊದಲಾದವರ ಗುಣೋನ್ನತಿಗಾಗಿ ಕೃಷ್ಣ ಹೀಗೆ ಮಾಡಿದ. ಯುಧಿಷ್ಠಿರನಲ್ಲಿ ಅವನ ಯೋಗ್ಯತೆಗಿಂತ ಮಿಗಿಲಾದ, ರಾಜಸೂಯಯಾಗ ಮೊದಲಾದ ಕರ್ಮಗಳಿಂದ ಉಂಟಾದ ಪುಣ್ಯ ಇದೆಯಷ್ಟೇ. ಭೀಮಸೇನ, ದ್ರೌಪದಿ, ಹೀಗೆ ಯೋಗ್ಯತಾಕ್ರಮದಲ್ಲಿ ಯುಧಿಷ್ಠಿರನಲ್ಲಿದ್ದ  ಯೋಗ್ಯತೆಗಿಂತ ಜಾಸ್ತಿಯಾಗಿರುವ ಪುಣ್ಯವನ್ನು ದಾಟಿಸಲು ಬಯಸಿ ಶ್ರೀಕೃಷ್ಣನು ಈರೀತಿಯಾಗಿ ಮಾಡಿದ.

 

ಏಧಮಾನದ್ವಿಳಿತ್ಯೇವ ವಿಷ್ಣೋರ್ನ್ನಾಮ ಹಿ ವೈದಿಕಮ್ ।

ಸ್ವಯೋಗ್ಯತಾಯ ಅಧಿಕಧರ್ಮ್ಮಜ್ಞಾನಾದಿಜಂ ಫಲಮ್             ॥ ೨೨.೩೫॥

 

ಭೀಷ್ಮದ್ರೋಣಾಮ್ಬಿಕೇಯಾದೇಃ ಪಾರ್ತ್ಥೇಷ್ವೇವ ನಿಧಾಪಿತುಮ್ ।

ಪುನಶ್ಚ ಪಾಪವೃದ್ಧ್ಯರ್ತ್ಥಮಜೋ ದುರ್ಯ್ಯೋಧನಾದಿಷು             ॥ ೨೨.೩೬॥

 

ವ್ಯಾಸೋSಮ್ಬಿಕಾಸುತಂ ಪ್ರಾಹ ಪಾರ್ತ್ಥಾ ಮೇSಭ್ಯಧಿಕಂ ಪ್ರಿಯಾಃ ।

ತೇಷಾಂ ಪ್ರವಾಸನಂ ಚೈವ ಪ್ರಿಯಂ ನ ಮಮ ಸರ್ವಥಾ           ॥ ೨೨.೩೭॥

 

ಇತಿ ದುರ್ಯ್ಯೋಧನಾದೀನಾಂ ಪಾಪವೃದ್ಧ್ಯರ್ತ್ಥಮೇವ ಸಃ ।

ಪ್ರಿಯಾ ಇತ್ಯೇವ ಕಥನಾತ್ ಪಾಣ್ಡವಾನಾಂ ಶುಭೋನ್ನತೇಃ       ॥ ೨೨.೩೮॥

 

ತನ್ನ ಯೋಗ್ಯತೆಗಿಂತ ಮಿಗಿಲಾಗಿ ಬೆಳೆಯುವ ಯಾರನ್ನೇ ಆಗಲಿ ದೇವರು ಸಹಿಸುವುದಿಲ್ಲ. (ಅವರ ಯೋಗ್ಯತೆಗೆ ಅನುಗುಣವಾಗಿಯೇ ಫಲವನ್ನು ಕೊಡುತ್ತಾನೆ). ಹೀಗಾಗಿ ಭಗವಂತನಿಗೆ ಏಧಮಾನದ್ವಿಟ್ ಎನ್ನುವ ವೈದಿಕ ನಾಮವಿದೆ. [ಶೃಣ್ವೇ ವೀರ ಉಗ್ರಮುಗ್ರಂ ದಮಾಯನ್ನನ್ಯಮನ್ಯಮತಿನೇನೀಯಮಾನಃ । ಏಧಮಾನದ್ವಿಳುಭಯಸ್ಯ ರಾಜಾ ಚೋಷ್ಕೂಯತೇ ವಿಶ ಇಂದ್ರೋ ಮನುಷ್ಯಾನ್ ॥ (ಋಗ್ವೇದ ಸಂಹಿತ ೬.೪೭.೧೬)] ವೈದಿಕ ನಾಮ ಹೀಗಿರುವುದರಿಂದ ತಮ್ಮ ಯೋಗ್ಯತೆಗಿಂತ ಅಧಿಕವಾಗಿರುವ ಧರ್ಮ, ಪುಣ್ಯ, ಶಾಸ್ತ್ರಜ್ಞಾನ, ಇತ್ಯಾದಿಗಳಿಂದ ಉಂಟಾದ ಫಲವನ್ನು ಪಾಂಡವರಲ್ಲಿ ಇಡುವುದಕ್ಕಾಗಿಯೇ  ಜೂಜು ನಡೆಯುವ ಸಮಯದಲ್ಲಿ  ಕೃಷ್ಣಪರಮಾತ್ಮ ಅಲ್ಲಿರಲಿಲ್ಲ. ಕೇವಲ ಧರ್ಮರಾಜನದು ಮಾತ್ರವಲ್ಲ, ಭೀಷ್ಮ, ದ್ರೋಣ, ಧೃತರಾಷ್ಟ್ರ, ಇವರೆಲ್ಲರೂ ಕೂಡಾ ಅವರ ಯೋಗ್ಯತೆಗಿಂತ ಮಿಗಿಲಾಗಿ ಪುಣ್ಯವನ್ನು ಮಾಡಿದ್ದರು. [ಅದರಿಂದಾಗಿ ದ್ಯೂತ ಎನ್ನುವ ಪ್ರಸಂಗದಲ್ಲಿ ಬೇಕಂತಲೇ ತಾನು ಇರದೇ, ಅವರೆಲ್ಲರ ಯೋಗ್ಯತೆಗಿಂತ ಹೆಚ್ಚಿನ  ಪುಣ್ಯಕ್ಷಯಕ್ಕೆ ಕೃಷ್ಣ ಕಾರಣನಾದ]. ಮತ್ತೆ ದುರ್ಯೋಧನ ಮೊದಲಾದವರ ಪಾಪ ವೃದ್ಧಿಗಾಗಿ ವೇದವ್ಯಾಸರು ಧೃತರಾಷ್ಟ್ರನ ಹತ್ತಿರ ಹೀಗೆ ಹೇಳಿದರು: ‘ಪಾಂಡವರು ನನಗೆ ಬಹಳ ಪ್ರಿಯ. ಅವರ ಕಾಡಿಗೆ ತೆರಳುವಿಕೆಯು ನನಗೆ ಸರ್ವಥಾ ಇಷ್ಟವಿಲ್ಲ’.  ವೇದವ್ಯಾಸರು ಹೀಗೆ ಹೇಳಿದ್ದರಿಂದ ಪಾಂಡವರ ಪುಣ್ಯ ವೃದ್ಧಿಯಾಗುವಂತಾದರೆ,  ದುರ್ಯೋಧನಾದಿಗಳಿಗೆ ವಿಪರೀತ ಅಸೂಯೆ ಉಂಟಾಗಿ ಅವರ ಪಾಪ ವೃದ್ಧಿಯಾಗುವಂತಾಯಿತು.

 

ಗುರುತ್ವಾದ್ ಭೀಮಸೇನಸ್ಯ ಕ್ಷಮಾ ದ್ಯೂತೇSರ್ಜ್ಜುನಾದಿನಾಮ್ ।

ನಾತಿಧರ್ಮ್ಮಸ್ವರೂಪೋSತ್ರ ಧರ್ಮ್ಮೋ ಭೀಮೇ ನಿರೌಪಧಃ       ॥ ೨೨.೩೯॥

 

ಜೂಜಿನಲ್ಲಿ ಅರ್ಜುನ ಮೊದಲಾದವರ ಸಹನೆಯಿಂದ ಅವರಿಗೆ ಪೂರ್ತಿ ಪುಣ್ಯ ಬರಲಿಲ್ಲ. ಆದರೆ ಭೀಮಸೇನ ಎಲ್ಲರಿಗೂ ಗುರುವಾದ್ದರಿಂದ, ಅವನಿಗೆ ಎಣೆಯಿಲ್ಲದ ಪುಣ್ಯ ಬಂತು. (ಭೀಮ ಪ್ರತಿಭಟನೆ ಮಾಡುವುದನ್ನೂ ಮಾಡಿದ, ದೇವರ ಇಚ್ಛೆಯಂತೆ ದುರ್ಯೋಧನಾದಿಗಳ ಪಾಪವನ್ನು ಬೆಳೆಸಲು ಸಹನೆಯನ್ನೂ ತೋರಿದ).

 

ದ್ರೌಪದ್ಯಾ ಅಪ್ಯತಿಕ್ಲೇಶಾತ್ ಕ್ಷಮಾ ಧರ್ಮ್ಮೋ ಮಹಾನಭೂತ್ ।

ಸಾ ಹಿ ಭೀಮಮನೋ ವೇದ ನ ಕಾರ್ಯ್ಯಃ ಶಾಪ ಇತ್ಯಲಮ್     ॥ ೨೨.೪೦॥

 

ದ್ರೌಪದಿಗೆ ಬಹಳ ಕಷ್ಟ ಆದರೂ ಕೂಡಾ ಅವಳು ಅದನ್ನು ಸಹಿಸಿಕೊಂಡಳು. (ಅತ್ಯಂತ ಉನ್ನತ ಸ್ಥಾನದಲ್ಲಿದ್ದ ಹೆಣ್ಣು ಸಭೆಯಲ್ಲಿ ವಸ್ತ್ರಾಪಹಾರವನ್ನು ಸಹಿಸುವುದು ಸಣ್ಣ ವಿಷಯವಲ್ಲ. ಇಡೀ ಪ್ರಪಂಚವನ್ನು ಗೆದ್ದು ಬಂದವರ ಹೆಂಡತಿ, ರಾಜಸೂಯ ಯಾಗದಲ್ಲಿ ಯಜ್ಞಪತ್ನಿಯಾಗಿ ಭಾಗವಹಿಸಿದವಳು. ಇಷ್ಟು ಅರ್ಹತೆ ಇರುವ ಹೆಣ್ಣು ತನ್ನ ಎಲ್ಲಾ ಅವಮಾನಗಳನ್ನು ಸಹಿಸುತ್ತಾಳೆ ಅಂದರೆ ಅದು ಸಾಮಾನ್ಯವಲ್ಲ.) ಹೀಗಾಗಿ ದೊಡ್ಡ ಪುಣ್ಯ ಅವಳಿಗೆ ಬಂದಿತು. ಅವಳಿಗೆ ಭೀಮನ ಮನಸ್ಸು ಗೊತ್ತಿತ್ತು. ಹೀಗಾಗಿ ‘ನಾನು ಯಾರಿಗೂ ಶಾಪ ಕೊಡಬಾರದು’ ಎನ್ನುವುದನ್ನು ಅವಳು ತಿಳಿದಿದ್ದಳು. (ಶಾಪ ಕೊಡಬಾರದು, ಬಾಹುಬಲದಿಂದಲೇ ಇವರನ್ನೆಲ್ಲ ಕೊಲ್ಲಬೇಕು ಎನ್ನುವುದು ಭೀಮಸೇನನ ಅಭಿಪ್ರಾಯವಾಗಿತ್ತು. ಭೀಮಸೇನನ ಮನಸ್ಸಿಗೆ ಅನುಗುಣವಾಗಿ ದ್ರೌಪದಿ ನಡೆದಳು).

No comments:

Post a Comment