ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, May 1, 2022

Mahabharata Tatparya Nirnaya Kannada 22: 68-74

[ಹದಿನಾಲ್ಕನೇ ವರ್ಷದಲ್ಲಿಯಾದರೂ ಧರ್ಮರಾಜ ಅಧರ್ಮಿಗಳ ವಿರುದ್ಧ ಯುದ್ಧಕ್ಕೆ ತೆರಳಬೇಕು, ಆ ಗುರಿ ಮುಟ್ಟಲು ತೀವ್ರವಾದ ಮಾತಿನೌಷಧವನ್ನು ಕೊಡಬೇಕು -ಅದಕ್ಕಾಗಿ ಭೀಮ ದ್ರೌಪದಿಯನ್ನು ಕಳುಹಿಸಿದ. ಅವಳು ಧರ್ಮರಾಜನನ್ನು ಕುರಿತು ಮಾತನಾಡಿದಳು:]

 

ನೈವ ಕ್ಷಮಾ ಕುಜನತಾಸು ನೃಪಸ್ಯ ಧರ್ಮ್ಮಸ್ತಾಂ ತ್ವಂ ವೃಥೈವ ಧೃತವಾನಸಿ ಸರ್ವಕಾಲಮ್ ।

ಇತ್ಯುಕ್ತ ಆಹ ನೃಪತಿಃ ಪರಮಾ ಕ್ಷಮೈವ ಸರ್ವತ್ರ ತದ್ವಿಧೃತಮೇವ ಜಗತ್ ಸಮಸ್ತಮ್ ॥೨೨.೬೮॥

 

ಕರ್ತ್ತಾ ಚ ಸರ್ವಜಗತಃ ಸುಖದುಃಖಯೋರ್ಹಿ ನಾರಾಯಣಸ್ತದನುದತ್ತಮಿಹಾಸ್ಯ ಸರ್ವಮ್ ।

ತಸ್ಮಾನ್ನ ಕೋಪವಿಷಯೋsಸ್ತಿ ಕುತಶ್ಚ ಕಶ್ಚಿತ್ ತಸ್ಮಾತ್ಕ್ಷಮೈವ ಸಕಲೇಷು ಪರೋSಸ್ಯ ಧರ್ಮ್ಮಃ ॥೨೨.೬೯॥

 

ಸಹನೆಯು ಕೆಟ್ಟ ಜನರಲ್ಲಿ ಒಳ್ಳೆಯದಲ್ಲ. ಕೆಟ್ಟವರನ್ನು ಯಾವತ್ತೂ ಸಹಿಸಬಾರದು. ಅವರಿಗೆ ಕ್ಷಮಾದಾನ ಪಾಪಕ್ಕೆ  ಕಾರಣ. ಅಂತಹ ಕ್ಷಮೆಯನ್ನು ನೀನು ವ್ಯರ್ಥವಾಗಿ ಯಾವಾಗಲೂ ಧರಿಸಿರುತ್ತೀಯ. (ಅದನ್ನು ಬಿಟ್ಟುಬಿಡು. ದುರ್ಜನರನ್ನು ಕ್ಷಮಿಸಬೇಡ. ದುರ್ಯೋಧನಾದಿಗಳು ದುರ್ಜನರು. ಅವರನ್ನು ಕೊಂದುಬಿಡು ಎನ್ನುವ ಧ್ವನಿ).  ಈ ರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ಹೇಳುತ್ತಾನೆ: ಕ್ಷಮೆಯೇ ಒಳ್ಳೆಯದು. ಕ್ಷಮೆಯಿಂದಲೇ ಈ ಪ್ರಪಂಚ ನಡೆಯುತ್ತಿದೆ.

ಇಡೀ ಪ್ರಪಂಚದ ಸುಖ ಹಾಗೂ ದುಃಖಕ್ಕೆ ನಾರಾಯಣನಲ್ಲವೇ ಕರ್ತೃ. ಅವನು ಕೊಟ್ಟಿದ್ದೇ ಇವೆಲ್ಲವೂ. ಅದರಿಂದ ಯಾರ ಮೇಲೂ ಸಿಟ್ಟು ಮಾಡಬಾರದು.  (ನಮಗೆ ದುಃಖ ಕೊಟ್ಟವನು ದುರ್ಯೋಧನನಲ್ಲ. ಅವನೊಳಗಿರುವ ಭಗವಂತ ಎನ್ನುವ ಧ್ವನಿ). ಎಲ್ಲವೂ ದೇವರ ಪ್ರೇರಣೆ. ಹಾಗಾಗಿ ಯಾರಮೇಲೂ ಕೋಪ ಮಾಡುವಂತಿಲ್ಲ. ಆ ಕಾರಣದಿಂದ ಎಲ್ಲರಲ್ಲಿಯೂ ಕ್ಷಮೆಯನ್ನೇ ಮಾಡಬೇಕು(ಕ್ಷಮೆಯೇ ಪರಮಧರ್ಮ, ದೇವರು ಸರ್ವಕರ್ತೃನಾದ್ದರಿಂದ ಅವನೇ ಎಲ್ಲವನ್ನೂ ಮಾಡಿಸುತ್ತಾನೆ - ನಾನು ಯಾವುದೇ ರೀತಿಯಾಗಿ ಪ್ರಯತ್ನಪಡುವುದಿಲ್ಲ ಎನ್ನುವ ಧ್ವನಿಯಲ್ಲಿ ಧರ್ಮರಾಜ ಮಾತನಾಡಿದ).  

 

ಇತ್ಯುಕ್ತವನ್ತಂ ನೃಪಮಾಹ ಪಾರ್ಷತೀ ಯದಿ ಕ್ಷಮಾ ಸರ್ವನರೇಷು ಧರ್ಮ್ಮಃ ।

ರಾಜ್ಞಾ ನ ಕೃತ್ಯಂ ನಚ ಲೋಕಯಾತ್ರಾ ಭವೇಜ್ಜಗತ್ ಕಾಪುರುಷೈರ್ವಿನಶ್ಯೇತ್ ॥೨೨.೭೦॥

 

ಈರೀತಿಯಾಗಿ ಹೇಳುವ ಧರ್ಮರಾಜನಿಗೆ ದ್ರೌಪದಿಯು ಹೇಳುತ್ತಾಳೆ: ಒಂದು ವೇಳೆ ಕ್ಷಮೆಯೇ  ಎಲ್ಲರಲ್ಲಿಯೂ  ಧರ್ಮವಾದರೆ ರಾಜನಿಂದ ಪ್ರಯೋಜನವಿಲ್ಲ. ಲೋಕದ ನಡವಳಿಕೆಗೆ ಅರ್ಥವೇ ಇರುವುದಿಲ್ಲ. (ಒಬ್ಬ ರಾಜ, ಒಂದು ದೇಶ, ಒಂದು ಸಂವಿದಾನ – ಈ ಯಾವ ಸಂಗತಿಯೂ ಕೂಡಾ ಸಂಗತವಾಗುವುದಿಲ್ಲ.) ಹೇಡಿಗಳಿಂದ ಜಗತ್ತು ನಾಶವಾಗುತ್ತದೆ. 

 

ಸತ್ಯಂ ಚ ವಿಷ್ಣುಃ ಸಕಲಪ್ರವರ್ತ್ತಕೋ ರಮಾವಿರಿಞ್ಚೇಶಪುರಸ್ಸರಾಶ್ಚ ।

ಕಾಷ್ಠಾದಿವತ್ ತದ್ವಶಗಾಃ ಸಮಸ್ತಾಸ್ತಥಾsಪಿ ನ ವ್ಯರ್ತ್ಥತಾ ಪೌರುಷಸ್ಯ ॥೨೨.೭೧॥

 

ನಾರಾಯಣನು ಎಲ್ಲವನ್ನೂ ಮಾಡಿಸುತ್ತಾನೆ ಎನ್ನುವುದು ಸತ್ಯವು. ಲಕ್ಷ್ಮೀದೇವಿ, ಬ್ರಹ್ಮ, ರುದ್ರ, ಇವರೇ ಮೊದಲಾಗಿರುವ ದೇವತೆಗಳೆಲ್ಲರೂ ಕೂಡಾ ಕಟ್ಟಿಗೆಯ ಬೊಂಬೆಯಂತೆ ಅವನ ವಶದಲ್ಲಿದ್ದಾರೆ. (ಕಟ್ಟಿಗೆಯ ಬೊಂಬೆಯನ್ನು ಒಳಗಿರುವ ವ್ಯಕ್ತಿ ಹೇಗೆ ನಿಯಂತ್ರಣ ಮಾಡುತ್ತಾನೋ ಹಾಗೇ ಬ್ರಹ್ಮ-ರುದ್ರಾದಿಗಳನ್ನೂ ಕೂಡಾ ನಾರಾಯಣ ನಿಯಂತ್ರಣ ಮಾಡುತ್ತಾನೆ) ಆದರೂ ಪುರುಷ ಪ್ರಯತ್ನದ ವ್ಯರ್ಥತೆಯು ಇಲ್ಲ. (ದೇವರು ಅಂತರ್ಯಾಮಿ, ಸರ್ವಕರ್ತೃ ಹೌದು. ಹಾಗೆಂದು  ಪುರುಷ ಪ್ರಯತ್ನ ಬೇಡ ಎಂದು ಹೇಳುವುದು ಅಸಂಗತ).

 

ತದಾಜ್ಞಯಾ ಪುರುಷಶ್ಚೇಷ್ಟಮಾನಶ್ಚೇಷ್ಟಾನುಸಾರೇಣ ಶುಭಾಶುಭಸ್ಯ ।

ಭೋಕ್ತಾ ನ ತಚ್ಚೇಷ್ಟಿತಮನ್ಯಥಾ ಭವೇತ್ ಕರ್ತ್ತಾ ತಸ್ಮಾತ್ ಪುರುಷೋSಪ್ಯಸ್ಯ ವಶ್ಯಃ ॥೨೨.೭೨॥

 

ಪರಮಾತ್ಮನ ಆಜ್ಞೆಯಿಂದ ಕ್ರಿಯೆಗಳನ್ನು ಮಾಡುತ್ತಿರುವ ಪುರುಷನು ಅವನ ಕ್ರಿಯೆಗಳಿಗೆ ಅನುಗುಣವಾಗಿ ಪಾಪ-ಪುಣ್ಯಗಳ ಫಲವನ್ನು ಭೋಗಿಸುತ್ತಾನೆ. (ದೇವರು ತನ್ನ ಅವತಾರಗಳ ಮೂಲಕ ಅಥವಾ ತಾನೇ ತನ್ನ ಗ್ರಂಥದಲ್ಲಿ ಈರೀತಿಯಾಗಿ ನೆಡೆಯಬೇಕು ಎಂದು ಹೇಳಿರುತ್ತಾನೆ. ಅದರಂತೆ ಇವನು ಮುನ್ನೆಡೆಯುತ್ತಾನೆ. ಒಬ್ಬ ಜೀವ ಕೆಟ್ಟದ್ದನ್ನು ಮಾಡಿದರೆ ದುಃಖವನ್ನು ಅನುಭವಿಸುತ್ತಾನೆ. ಒಳ್ಳೆಯದು ಮಾಡಿದರೆ ಅದರ ಸುಖವನ್ನು ಅನುಭವಿಸುತ್ತಾನೆ). ಜೀವನ ಕ್ರಿಯೆಯು ಬೇರೆ ಆಗುವುದಿಲ್ಲ. (ಅಂದರೆ ಒಳ್ಳೆಯ ಕೆಲಸ ಮಾಡಿದರೆ ಅದರ ಫಲವಾಗಿ ಸುಖವೇ ಬರುವುದು, ಕೆಟ್ಟ ಕೆಲಸ ಮಾಡಿದರೆ-ದುಃಖವೇ ಬರುವುದು ) ಅದರಿಂದ ಜೀವನೂ ಕೂಡಾ ಭಗವಂತನಿಗೆ ವಶನಾಗಿರುವ ಕರ್ತೃ ಆಗಿದ್ದಾನೆ. ( ಜೀವ ಅಸ್ವತಂತ್ರ ಕರ್ತೃಹೌದು ಆದರೆ ಜೀವನಿಗೆ ಕರ್ತೃತ್ವವಿಲ್ಲ ಎನ್ನುವುದು ಸುಳ್ಳು)

 

  ವೃಥಾ ಯದಿ ಸ್ಯಾತ್ ಪೌರುಷಂ ಕಸ್ಯ ಹೇತೋರ್ವಿಧಿರ್ನ್ನಿಷೇಧಶ್ಚ ಸಮಸ್ತವೇದಗಃ ।

  ವಿಧೇರ್ನ್ನಿಷೇಧಸ್ಯ ಚ ನೈವ ಗೋಚರಃ ಪುಮಾನ್ ಯದಿ ಸ್ಯಾದ್ ಭವತೋ ಹಿ ತೌ ಹರೇಃ ॥೨೨.೭೩॥

 

ಒಂದುವೇಳೆ  ಪುರುಷ ಪ್ರಯತ್ನವು ವ್ಯರ್ಥವಾದರೆ ಎಲ್ಲಾ ವೇದಗಳಲ್ಲಿ ಹೇಳಿರುವ ವಿಧಿ-ನಿಷೇಧ (ಇಂಥಹ ಕೆಲಸ  ಮಾಡಬೇಕು ಎನ್ನುವ ವಿಧಿ, ಇಂತಹ ಕೆಲಸವನ್ನು ಮಾಡಬಾರದು ಎನ್ನುವ ನಿಷೇಧ) ಯಾರಿಗಾಗಿ ಇದೆ? ಒಂದು ವೇಳೆ  ಜೀವ ಕರ್ತೃ ಅಲ್ಲವಾದರೆ ಈ ವಿಧಿ-ನಿಷೇಧ ಎನ್ನುವುದು ದೇವರಿಗೆ ಹೇಳಿದಂತಾಗುತ್ತದೆ!

 

ತೇನೈವ ಲೇಪಶ್ಚ ಭವೇದಮುಷ್ಯ ಪುಣ್ಯೇನ ಪಾಪೇನ ಚ ನೈವ ಚಾಸೌ ।

ಲಿಪ್ಯೇತ ತಾಭ್ಯಾಂ ಪರಮಸ್ವತನ್ತ್ರಃ ಕರ್ತ್ತಾ ತತಃ ಪುರುಷೋSಪ್ಯಸ್ಯ ವಶ್ಯಃ ॥೨೨.೭೪॥

 

ಒಂದು ವೇಳೆ  ಎಲ್ಲವೂ ದೇವರಿಗೆ ಹೇಳಿರುವುದಾದರೆ ದೇವರಿಗೆ  ಪುಣ್ಯ-ಪಾಪದ ಲೇಪವಾಗುತ್ತದೆ.  ಜೀವರಿಗೆ ಪುಣ್ಯ-ಪಾಪದ ಲೇಪ ಇಲ್ಲವಾಗುತ್ತದೆ. ಅತ್ಯಂತ ಸ್ವತಂತ್ರನಾಗಿರುವ ನಿರತಿಶಯ ಕರ್ತೃ ಆಗಿರುವ ನಾರಾಯಣನು ಈ ವೇದದ ವಿಧಿ ಹಾಗೂ ನಿಷೇಧಗಳಿಗೆ ಒಳಗಾಗಬೇಕಾಗುತ್ತದೆ. (ಅಂದರೆ ದೇವರಿಗೆ ಫಲ ಲೇಪ ಬರಬೇಕಾಗುತ್ತದೆ. ಫಲ ಲೇಪ ಬಂದರೆ ಪುಣ್ಯದಿಂದ ಸುಖವೂ, ಪಾಪದಿಂದ ದುಃಖವೂ ಬರಬೇಕಾಗುತ್ತದೆ. ಹೀಗಾದರೆ ದೇವರು ಪಾಪದಿಂದ ನರಳಬೇಕಾಗುತ್ತದೆ. ಅವನ ಸ್ವಾತಂತ್ರ ನಾಶವಾಗಬೇಕಾಗುತ್ತದೆ. ಜಗತ್ತಿನ ವ್ಯವಸ್ಥೆಯೇ ನಾಶವಾಗುತ್ತದೆ. ಅದರಿಂದಾಗಿ ದೇವರು ಸರ್ವಕರ್ತೃ ಎನ್ನುವ ನೆಪದಿಂದ ನೀನು ಏನೂ ಕೆಲಸ ಮಾಡದೇ ಇರುವುದು ಅಸಂಗತ ಎನ್ನುವ ಧ್ವನಿ). ಭಗವಂತ ಸರ್ವಸ್ವಾತಂತ್ರ-ಸರ್ವೋತ್ತಮ. ಅವನಿಗೆ ಪುಣ್ಯ-ಪಾಪಗಳ ಲೇಪವಿಲ್ಲದಿರುವುದರಿಂದ ಅವನ ಅಧೀನದಲ್ಲಿ ಪುರುಷನು ಕರ್ತನು.

No comments:

Post a Comment