[ಹಾಗಿದ್ದರೆ – ‘ನಾನು ಭೂಮಿಯಮೇಲೆ ಇರುವಾಗ ಅರ್ಜುನನನ್ನು ಯಾರೊಬ್ಬರೂ ಗೆಲ್ಲುವುದಿಲ್ಲ’ ಎಂದು ಶ್ರೀಕೃಷ್ಣನ ವರವಿದ್ದರೂ ಕೂಡ, ಇಲ್ಲಿ ಏಕೆ ಅರ್ಜುನ ಪರಾಜಯವನ್ನು ಹೊಂದಿದ
ಎಂದರೆ ಹೇಳುತ್ತಾರೆ- ]
ಪೂರ್ವಂ ಸಮ್ಪ್ರಾರ್ತ್ಥಯಾಮಾಸ
ಶಙ್ಕರೋ ಗರುಡಧ್ವಜಮ್ ।
ಅವರಾಣಾಂ ವರಂ ಮತ್ತೋ
ಯೇಷಾಂ ತ್ವಂ ಸಮ್ಪ್ರಯಚ್ಛಸಿ ॥೨೨.೧೪೨॥
ಅಜೇಯತ್ವಂ ಪ್ರಸಾದಾತ್
ತೇ ವಿಜೇಯಾಃ ಸ್ಯುರ್ಮ್ಮಯಾSಪಿ ತೇ ।
ಇತ್ಯುಕ್ತಃ ಪ್ರದದೌ
ವಿಷ್ಣುರುಮಾಧೀಶಾಯ ತಂ ವರಮ್ ॥೨೨.೧೪೩॥
ಹಿಂದೆ ಶಂಕರನು ‘ನನಗಿಂತ ಕೆಳಗಿನ ಯಾರಿಗೆ ನೀನು ಅಜೆಯತ್ವದ ವರವನ್ನು ಕೊಡುತ್ತೀಯೋ,
ಅವರೆಲ್ಲರೂ ನಿನ್ನ ಅನುಗ್ರಹದಿಂದ ನನ್ನಿಂದ ಗೆಲ್ಲಲ್ಪಡಲು ಅರ್ಹರಾಗಿರಬೇಕು’ ಎಂದು ಗರುಡಧ್ವಜ
ವಿಷ್ಣುವಿನಲ್ಲಿ ಪ್ರಾರ್ಥಿಸಿ, ಭಗವಂತನಿಂದ ಆರೀತಿಯ ವರವನ್ನು ಪಡೆದಿದ್ದ.
[ಉದಾಹರಣೆಗೆ: ಹಿಂದೆ ಬಸ್ಮಾಸುರನಿಗೆ
ವರವನ್ನು ನೀಡಿದ್ದ ಶಿವ ಅವನಿಂದಲೇ ಸಮಸ್ಯಗೆ ಒಳಪಟ್ಟಿರುವ ಪ್ರಸಂಗದಂತೆ ಆಗಬಾರದು ಎಂದು ಸದಾಶಿವ ಭಗವಂತನಲ್ಲಿ ವರವನ್ನು
ಪಡೆದಿದ್ದ].
ತೇನಾಜಯಚ್ಛ್ವೇತವಾಹಂ
ಗಿರಿಶೋ ರಣಮದ್ಧ್ಯಗಮ್ ।
ಕೇವಲಾನ್ ವೈಷ್ಣವಾನ್
ಮನ್ತ್ರಾನ್ ವ್ಯಾಸಃ ಪಾರ್ತ್ಥಾಯ ನೋ ದದೌ ॥೨೨.೧೪೪॥
ಏತಾವತಾSಲಂ
ಭೀಷ್ಮಾದೇರ್ಜ್ಜಯಾರ್ತ್ಥಮಿತಿ ಚಿದ್ಧನಃ ।
ಕೇವಲೈರ್ವೈಷ್ಣವೈರ್ಮ್ಮನ್ತ್ರೈಃ
ಸ್ವದತ್ತೈರ್ವಿಜಯಾವಹೈಃ ॥೨೨.೧೪೫॥
ಅತಿವೃದ್ಧಸ್ಯ ಪಾರ್ತ್ಥಸ್ಯ
ದರ್ಪ್ಪಃ ಸ್ಯಾದಿತ್ಯಚಿನ್ತಯತ್ ।
ಪಾರ್ತ್ಥಃ
ಸಙ್ಜ್ಞಾಮವಾಪ್ಯಾಥ ಜಯಾರ್ತ್ಥ್ಯಾರಾಧಯಚ್ಛಿವಮ್ ॥೨೨.೧೪೬॥
ವ್ಯಾಸೋದಿತೇನ
ಮನ್ತ್ರೇಣ ತಾನಿ ಪುಷ್ಪಾಣಿ ತಚ್ಛಿರಃ ।
ಆರುಹನ್ ಸ ತು ತಂ
ಜ್ಞಾತ್ವಾ ರುದ್ರ ಇತ್ಯೇವ ಫಲ್ಗುನಃ ॥೨೨.೧೪೭॥
ಹೀಗಾಗಿ ಅರ್ಜುನನನ್ನು ಯುದ್ಧದಲ್ಲಿ ಸದಾಶಿವ ಗೆದ್ದ. ವೇದವ್ಯಾಸರು ಅರ್ಜುನನಿಗೆ ಕೇವಲ
ವೈಷ್ಣವ (ವಿಷ್ಣುವೇ ಋಷಿಯಾಗಿರುವ, ವಿಷ್ಣುವೇ ದೇವತೆಯಾಗಿರುವ) ಮಂತ್ರವನ್ನು ಕೊಡಲಿಲ್ಲ. ‘ಇದು
ಭೀಷ್ಮ ಹಾಗೂ ದ್ರೋಣಾದಿಗಳನ್ನು ಗೆಲ್ಲಲು ಸಾಕು’ ಎಂದು ಬೇರೆ ದೇವತೆಗಳ ಮಂತ್ರವನ್ನು ಉಪದೇಶ
ಮಾಡಿದ್ದರು. (ಏಕೆ ಹೀಗೆ ಎಂದರೆ: ) ಕೇವಲ ತಾನು ಉಪದೇಶ ಮಾಡಿದ ವೈಷ್ಣವ ಮಂತ್ರಗಳಿಂದ ವಿಪರೀತವಾದ
ಗೆಲುವನ್ನು ಅರ್ಜುನ ಹೊಂದಿದರೆ, ಅದರಿಂದ ಅವನಿಗೆ ಅಹಂಕಾರ ಬರಬಹುದು ಎಂದು ಚಿಂತಿಸಿ, ಇತರ
ದೇವತಾಕವಾದ ಮಂತ್ರಗಳನ್ನು ಕೊಟ್ಟಿದ್ದರು.
ಇತ್ತ ಮೂರ್ಛೆಯಿಂದೆದ್ದ ಅರ್ಜುನ ಗೆಲುವಿಗಾಗಿ ವೇದವ್ಯಾಸರು ಹೇಳಿದ ಮಂತ್ರಗಳಿಂದ ಶಿವನನ್ನು
ಆರಾಧಿಸಿದ. ಆದರೆ ಅವನು ಶಿವನಿಗೆ ಅರ್ಪಿಸಿದ ಹೂವುಗಳು ಬೇಡನ ವೇಷದಲ್ಲಿರುವ ಸದಾಶಿವನ ತಲೆಯನ್ನು
ಏರಿದವು. ಆಗ ಅರ್ಜುನ ಬೇಡನ ವೇಷದಲ್ಲಿರುವವನು ಸದಾಶಿವ ಎಂದು ತಿಳಿದು. ಅವನಿಗೆ ನಮಸ್ಕರಿಸಿದನು.
No comments:
Post a Comment