ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, June 6, 2022

Mahabharata Tatparya Nirnaya Kannada 22: 148-156

 

ನಮಶ್ಚಕ್ರೇ ತತಃ ಪ್ರಾದಾದಸ್ತ್ರಂ ಪಾಶುಪತಂ ಶಿವಃ ।

ಅಸ್ತ್ರಂ ತದ್ ವಿಷ್ಣುದೈವತ್ಯಂ ಸಾಧಿತಂ ಶಙ್ಕರೇಣ ಯತ್ ॥೨೨.೧೪೮॥

 

ತಸ್ಮಾತ್ ಪಾಶುಪತಂ ನಾಮ ಸ್ವಾನ್ಯಸ್ತ್ರಾಣ್ಯಪರೇ ಸುರಾಃ ।

ದದುಸ್ತದೈವ ಪಾರ್ತ್ಥಾಯ ಸರ್ವೇ ಪ್ರತ್ಯಕ್ಷಗೋಚರಾಃ ॥೨೨.೧೪೯॥

 

ತದನಂತರ ಸದಾಶಿವನು ಪಾಶುಪತವಾಗಿರುವ ಅಸ್ತ್ರವನ್ನು ಕೊಟ್ಟನು. ಆ ಅಸ್ತ್ರವು ನಾರಾಯಣನನ್ನೇ ದೇವತೆಯನ್ನಾಗಿ ಹೊಂದಿದೆ. ಸದಾಶಿವ ಅದನ್ನು ಸಾಕ್ಷಾತ್ಕರಿಸಿಕೊಂಡಿರುವ ಕಾರಣದಿಂದ(ಸದಾಶಿವನೇ ಋಷಿಯಾಗಿ ಉಳ್ಳದ್ದರಿಂದ) ಅದಕ್ಕೆ ‘ಪಾಶುಪತ’ ಎನ್ನುವ ಹೆಸರಿತ್ತು. ತದನಂತರ ಉಳಿದ ಎಲ್ಲಾ ದೇವತೆಗಳೂ ಆಗಲೇ ತಮ್ಮ ಅಸ್ತ್ರಗಳನ್ನು ಪ್ರತ್ಯಕ್ಷ ಗೋಚರವಾಗಿ ಅರ್ಜುನನಿಗೆ ಕೊಟ್ಟರು.

[ಮಹಾಭಾರತದಲ್ಲಿ(ವನಪರ್ವ ೪೦.೮) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ಕಾಮಯೇ ದಿವ್ಯಮಸ್ತ್ರಂ ತದ್ ಘೋರಂ ಪಾಶುಪತಂ ಪ್ರಭೋ । ಯತ್ತದ್ ಬ್ರಹ್ಮಶಿರೋ ನಾಮ ರೌದ್ರಂ ಭೀಮಪರಾಕ್ರಮಮ್’ – ಸದಾಶಿವನಿಗೆ ಅರ್ಜುನ ಹೇಳುವ ಮಾತು ಇದಾಗಿದೆ: ‘ಯಾವುದನ್ನು ಬ್ರಹ್ಮಶಿರಾ ಎಂದು ಕರೆಯುತ್ತಾರೋ, ಆ ಅಸ್ತ್ರವನ್ನು ನಾನು ಬಯಸುತ್ತೇನೆ. ಅದನ್ನು ನನಗೆ ಕೊಡು’ ಎಂದು. ಮುಂದೆ ಅಲ್ಲಿ ಹೀಗೆ ಹೇಳಿದ್ದಾರೆ:  ಯತ್ತತ್ ಬ್ರಹ್ಮಶಿರೋ ನಾಮ ತಪಸಾ ರುದ್ರಮಾಗಮತ್’ (೮೯.೧೧) ಬ್ರಹ್ಮಶಿರ ಎನ್ನುವ ಅಸ್ತ್ರವೇನಿದೆ, ಅದು ತಪಸ್ಸಿನಿಂದ ರುದ್ರನಿಗೆ ಒಲಿದದ್ದು ಎಂದು.  ಹೀಗಾಗಿ ಈ ಅಸ್ತ್ರದ ದೇವತೆ ರುದ್ರ ಅಲ್ಲ. ಇಲ್ಲಿ ದೇವತೆ ‘ಬ್ರಹ್ಮ’ ಎಂದು ಹೇಳಿರುವುದು ತಿಳಿಯುತ್ತದೆ. ಹಾಗಾಗಿ ಯಾರು  ಅಥಾತೋ ಬ್ರಹ್ಮಜಿಜ್ಞಾಸಾ’ ಎನ್ನುವಲ್ಲಿ ಬ್ರಹ್ಮಾ ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿದ್ದಾನೋ ಅವನೇ ಪಾಶುಪತ ಅಸ್ತ್ರದ ದೇವತೆ. ಅವನೇ ಶ್ರೀಮನ್ನಾರಾಯಣ].

 

ಇನ್ದ್ರೋSರ್ಜ್ಜುನಂ ಸಮಾಗಮ್ಯ ಪ್ರಾಹ ಪ್ರೀತೋSಸ್ಮಿ ತೇSನಘ

ರುದ್ರದೇಹಸ್ಥಿತಂ ಬ್ರಹ್ಮ ವಿಷ್ಣ್ವಾಖ್ಯಂ ತೋಷಿತಂ ತ್ವಯಾ ॥೨೨.೧೫೦॥

 

ತೇನ ಲೋಕಂ ಮಮಾSಗಚ್ಛ ಪ್ರೇಷಯಾಮಿ ರಥಂ ತವ ।

ಇತ್ಯುಕ್ತ್ವಾ ಪ್ರಯಯಾವಿನ್ದ್ರಸ್ತದ್ರಥೇನ ಚ ಮಾತಲಿಃ ॥೨೨.೧೫೧॥

 

ಇಂದ್ರನು ಅರ್ಜುನನ ಬಳಿ ಬಂದು ಹೀಗೆ ಹೇಳಿದ:  ‘ಪಾಪವಿಲ್ಲದ ಹೇ ಅರ್ಜುನನೇ, ನಿನ್ನಿಂದ ರುದ್ರನ ದೇಹದೊಳಗಿರುವ ವಿಷ್ಣು ಎನ್ನುವ ಹೆಸರಿನ ಬ್ರಹ್ಮನು ಸಂತುಷ್ಟಗೊಳಿಸಲ್ಪಟ್ಟಿದ್ದಾನೆ. (ನೀನು ಶಿವನ ಅಂತರ್ಯಾಮಿ ಪರಮಾತ್ಮನನ್ನು ಸಂತೋಷಗೊಳಿಸಿದ್ದೀಯ). ಅದರಿಂದ ನನಗೆ ಪ್ರೀತಿಯಾಗಿದೆ. ಆ ವಿಷ್ಣುವಿನ ಪ್ರೇರಣೆಯಂತೇ ನೀನು ನನ್ನ ಲೋಕವನ್ನು ಕುರಿತು ಬಾ. ನಿನಗಾಗಿ ರಥವನ್ನು ಕಳುಹಿಸುತ್ತೇನೆ’ ಎಂದು. ಹೀಗೆ ಹೇಳಿದ ಇಂದ್ರನು  ಅಲ್ಲಿಂದ ತೆರಳಿದ ನಂತರ ಇಂದ್ರನ ರಥದೊಂದಿಗೆ ಮಾತಲಿಯು ಅರ್ಜುನನ ಬಳಿಗೆ ಬಂದ.

 

ಆಯಾತ್ ಪಾರ್ತ್ಥಸ್ತಮಾರು̐ಹ್ಯ ಯಯೌ ತಾತನಿವೇಶನಮ್ ।

ಪೂಜಿತೋ ದೈವತೈಃ ಸರ್ವೈರಿದ್ರೇಣೈವ ನಿವೇಶಿತಃ ।

ತೇನ ಸಾರ್ದ್ಧಮುಪಾಸೀದತ್ ತಸ್ಮಿನ್ನೈನ್ದ್ರೇ ವರಾಸನೇ             ॥೨೨.೧೫೨॥

 

ಆ ರಥವನ್ನು ಏರಿದ ಅರ್ಜುನ ಇಂದ್ರನ ಮನೆಗೆ ತೆರಳಿದ. ಅಲ್ಲಿ ಎಲ್ಲಾ ದೇವತೆಗಳಿಂದ ಸತ್ಕರಿಸಲ್ಪಟ್ಟವನಾಗಿ, ಇಂದ್ರನಿಂದಲೇ, ಇಂದ್ರನಿಗೆ ಸಂಬಂಧಪಟ್ಟ ಸಿಂಹಾಸನದಲ್ಲಿ ಇಂದ್ರನ ಜೊತೆಗೆ ಕುಳ್ಳಿರಿಸಲ್ಪಟ್ಟವನಾದ.  

 

ಪ್ರೀತ್ಯಾ ಸಮಾಶ್ಲಿಷ್ಯ ಕುರುಪ್ರವೀರಂ ಶಕ್ರೋ ದ್ವಿತೀಯಾಂ ತನುಮಾತ್ಮನಃ ಸಃ ।

ಈಕ್ಷನ್ ಮುಖಂ ತಸ್ಯ ಮುಮೋದ ಸೋSಪಿ ಹ್ಯುವಾಸ ತಸ್ಮಿನ್ ವತ್ಸರಾನ್ ಪಞ್ಚ ಲೋಕೇ ॥೨೨.೧೫೩॥ ॥

 

ಇಂದ್ರನು ತನ್ನ ಎರಡನೇ ದೇಹವಾದ ಅರ್ಜುನನನ್ನು ಪ್ರೀತಿಯಿಂದ ಆಲಿಂಗಿಸಿ, ಅರ್ಜುನನ ಮೊರೆಯನ್ನು ನೋಡುತ್ತಾ ಸಂತೋಷಪಟ್ಟ. ಅರ್ಜುನನು ಆ ಲೋಕದಲ್ಲಿ ಐದು ವರ್ಷಗಳ ಕಾಲ ವಾಸಮಾಡಿದ.

 

ಅಸ್ತ್ರಾಣಿ ತಸ್ಮಾ ಅದಿಶತ್ ಸ ವಾಸವೋ ಮಹಾನ್ತಿ ದಿವ್ಯಾನಿ ತದೋರ್ವಶೀ ತಮ್ ।

ಸಮ್ಪ್ರಾಪ್ಯ ಭಾವೇನ ತು ಮಾನುಷೇಣ ಮಾತಾ ಕುಲಸ್ಯೇತಿ ನಿರಾಕೃತಾSಭೂತ್ ॥೨೨.೧೫೪॥

 

ಆ ಇಂದ್ರನು ದೊಡ್ಡ ದೊಡ್ಡ ಅಲೌಕಿಕವಾಗಿರುವ ಅಸ್ತ್ರಗಳನ್ನು ಅರ್ಜುನನಿಗಾಗಿ ನೀಡಿದ. ಆಗ ಅರ್ಜುನನನ್ನು ಊರ್ವಶಿಯು ಹೊಂದಿ(ಬಯಸಿ), ಮಾನುಷ್ಯ ಸಂಸ್ಕಾರದಿಂದಾಗಿ ನಮ್ಮ ಕುಲದ ಮುತ್ತಜ್ಜಿ ಎಂದು, ಅರ್ಜುನನಿಂದ ನಿರಾಕರಿಸಲ್ಪಟ್ಟಳು.  

[ಅರ್ಜುನ ಇಂದ್ರನಿಂದ ಅಸ್ತ್ರಗಳನ್ನು ಪಡೆದ. ನಂತರ ಊರ್ವಶಿ ಅರ್ಜುನನನ್ನು ಬಯಸಿದಳು. ಆದರೆ ಅವನು ಅವಳಿಗೆ ನಮಸ್ಕರಿಸಿ,  ನೀನು ನಮ್ಮ ಕುಲದ ಮುತ್ತಜ್ಜಿ (ಯಯಾತಿಯ ಅಪ್ಪ ನಹುಷ. ನಹುಷನ ಅಪ್ಪ ಆಯು, ಆಯುವಿನ ಅಪ್ಪ ಪುರೂರವಸ್, ಪುರೂರವಸ್  ಹೆಂಡತಿ ಊರ್ವಶಿ).  ಎನ್ನುವ ಕಾರಣದಿಂದ ತಾಯಿಯಂತೆ ಅವಳನ್ನು ಕಂಡು ನಮಸ್ಕರಿಸಿದ. ಮನುಷ್ಯ ಸಂಸ್ಕಾರದಿಂದ  ಅರ್ಜುನ ಈ ರೀತಿ ಮಾಡಿದ]   

 

ಷಣ್ಢೋ ಭವೇತ್ಯೇವ ತಯಾSಭಿಶಪ್ತೇ ಪಾರ್ತ್ಥೇ ಶಕ್ರೋSನುಗ್ರಹಂ ತಸ್ಯ ಚಾದಾತ್ ।

ಸಂವತ್ಸರಂ ಷಣ್ಢರೂಪೀ ಚರಸ್ವ ನ ಷಣ್ಢತಾ ತೇ ಭವತೀತಿ ಧೃಷ್ಣುಃ ॥೨೨.೧೫೫॥

 

ಅವಳಿಂದ ‘ನಪುಂಸಕನಾಗು’ ಎಂದು ಅರ್ಜುನನು ಶಪಿಸಲ್ಪಡಲು, ಶತ್ರುಗಳನ್ನು ಎದುರಿಸುವ ಇಂದ್ರನು ಅವನಿಗೆ ಆ ಶಾಪವನ್ನು ಅನುಗ್ರಹನ್ನಾಗಿ ಮಾಡಿಕೊಟ್ಟ. ಅಜ್ಞಾತವಾಸದಲ್ಲಿ ಒಂದು ವರ್ಷದ ಕಾಲ  ಷಣ್ಢನಾಗಿ ತಿರುಗಾಡು, ಮುಂದೆ ನಿನಗೆ ಷಣ್ಢತ್ವವು ಬರುವುದಿಲ್ಲ’ ಎಂದು ಆ ಶಾಪವನ್ನು ಇಂದ್ರ ವರವನ್ನಾಗಿ ಪರಿವರ್ತಿಸಿದ.

 

ತತೋSವಸತ್ ಪಾಣ್ಡವೇಯೋ ಗಾನ್ಧರ್ವಂ ವೇದಮಭ್ಯಸನ್ ।

ಗನ್ಧರ್ವಾಚ್ಚಿತ್ರಸೇನಾತ್ತು ತಥಾSಸ್ತ್ರಾಣಿ ಸುರೇಶ್ವರಾತ್ ॥೨೨.೧೫೬॥

 

ತದನಂತರ ಅರ್ಜುನನನ್ನು ಸಂಗೀತ, ನಾಟ್ಯ, ಮೊದಲಾದುದಕ್ಕೆ ಸಂಬಂಧಿಸಿದ ವೇದವನ್ನು ಚಿತ್ರಸೇನನೆಂಬ ಗಂಧರ್ವನಿಂದ ಅಭ್ಯಾಸಮಾಡುತ್ತಾ, ಇಂದ್ರನಿಂದ ಅಸ್ತ್ರಗಳನ್ನೂ ಅಭ್ಯಾಸಮಾಡುತ್ತಾ, ಆವಾಸಮಾಡಿದ.

No comments:

Post a Comment