ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, June 11, 2022

Mahabharata Tatparya Nirnaya Kannada 22: 167-172

 

ರಾತ್ರೌ ಕೃಷ್ಣೇ ಮುನಿಮದ್ಧ್ಯೇ ನಿವಿಷ್ಟೇ ಘಣ್ಟಾಕರ್ಣ್ಣಃ  ಕರ್ಣ್ಣನಾಮಾ ಪಿಶಾಚೌ ।

ಸಮಾಯಾತಾಂ ಗಿರಿಶೇನ ಪ್ರದಿಷ್ಟೌ ಕೃಷ್ಣಂ ದ್ರಷ್ಟುಂ ದ್ವಾರಕಾಂ ಗನ್ತುಕಾಮೌ ॥೨೨.೧೬೭॥

 

ಆ ರಾತ್ರಿಯಲ್ಲಿ ಕೃಷ್ಣನು ಮುನಿಗಳ ನಡುವಿನಲ್ಲಿ ಇರಲು, ಘಣ್ಟಾಕರ್ಣ ಮತ್ತು ಕರ್ಣ ಎಂಬ ಹೆಸರಿನ ಎರಡು ಪಿಶಾಚಿಗಳು, ಸದಾಶಿವನ ಆದೇಶಕ್ಕೆ ಒಳಗಾಗಿ, ಕೃಷ್ಣನನ್ನು ಕಾಣಲು ದ್ವಾರಕೆಗೆ ತೆರಳಲು ಇಚ್ಛೆಯುಳ್ಳವರಾಗಿ ಬದರಿಕಾಶ್ರಮಕ್ಕೆ ಬಂದವು.

 

ತೌ ದೃಷ್ಟ್ವಾ ಮುನಿಮದ್ಧ್ಯಸ್ಥಂ ಕೇಶವಂ ತದಬೋಧತಃ ।

ಕೃತ್ವಾ ಸ್ವಜಾತಿಚೇಷ್ಟಾಶ್ಚ ದ್ಧ್ಯಾನೇನೈನಮಪಶ್ಯತಾಮ್             ॥೨೨.೧೬೮॥

 

ಆ ಎರಡು ಪಿಶಾಚಿಗಳು ಮುನಿಗಳ ನಡುವೆ ಇರುವ ಕೃಷ್ಣನನ್ನು ನೋಡಿ, ಅಜ್ಞಾನದಿಂದ ಸ್ವಜಾತಿ ಚೇಷ್ಟೆಗಳನ್ನು  ಮಾಡಿದವು. ನಂತರ ಧ್ಯಾನದಲ್ಲಿ ಕೃಷ್ಣ ಯಾರು ಎನ್ನುವುದನ್ನು ತಿಳಿದವು.

 

ದೃಷ್ಟ್ವಾ ಹೃದಿ ಸ್ಥಿತಂ ತಂ ತು ಕೌತೂಹಲಸಮನ್ವಿತೌ ।

ಸ್ತುತ್ವಾ ಭಕ್ತ್ಯಾ ಪ್ರಣಾಮಂ ಚ ಬಹುಶಶ್ಚಕ್ರತುಃ ಶುಭೌ                  ॥೨೨.೧೬೯॥

 

ತಮ್ಮ ಹೃದಯದಲ್ಲಿ ಇರುವ ಕೃಷ್ಣನನ್ನು ಅತ್ಯಂತ ಕುತೂಹಲದಿಂದ ಕಂಡ ಆ ಪಿಶಾಚಿಗಳು, ಸ್ತೋತ್ರಮಾಡಿ, ಭಕ್ತಿಯಿಂದ ಬಹಳ ಸಲ ನಮಸ್ಕಾರ ಮಾಡಿದವು.

 

ತಯೋಃ ಪ್ರಸನ್ನೋ ಭಗವಾನ್ ಸ್ಪೃಷ್ಟ್ವಾ ಗನ್ಧರ್ವಸತ್ತಮೌ ।

ಚಕಾರ ಕ್ಷಣಮಾತ್ರೇಣ ದಿವ್ಯರೂಪಸ್ವರಾನ್ವಿತೌ                         ॥೨೨.೧೭೦॥

 

ಅವರಿಬ್ಬರಿಗೆ ಪ್ರಸನ್ನನಾದ ಭಗವಂತನು, ಆ ಪಿಶಾಚಿಗಳನ್ನು ಮುಟ್ಟಿ, ಕ್ಷಣಮಾತ್ರದಲ್ಲಿ ಅಲೌಕಿಕವಾದ ರೂಪ ಹಾಗೂ ಸ್ವರದಿಂದ ಕೂಡಿರುವ ಗಂಧರ್ವರನ್ನಾಗಿ ಮಾಡಿದನು.

 

ತಾಭ್ಯಾಂ ಪುನರ್ನ್ನೃತ್ತಗೀತಸಂಸ್ತವೈಃ ಪೂಜಿತಃ ಪ್ರಭುಃ ।

ಯಯೌ ಕೈಲಾಸಮದ್ರೀಶಂ ಚಕಾರೇವ ತಪೋSತ್ರ ಚ             ॥೨೨.೧೭೧॥

 

ಅವರಿಬ್ಬರ ಕುಣಿತ, ಹಾಡು, ಸ್ತೋತ್ರಗಳಿಂದ ಪೂಜಿತನಾದ ಸರ್ವಸಮರ್ಥನಾದ ಕೃಷ್ಣನು, ಬೆಟ್ಟಗಳಲ್ಲಿಯೇ ಶ್ರೇಷ್ಠವಾದ ಕೈಲಾಸ ಪರ್ವತವನ್ನು ಕುರಿತು ತೆರಳಿದ ಮತ್ತು ಅಲ್ಲಿ ತಪಸ್ಸನ್ನು ಮಾಡಿದಂತೆ ತೋರಿಸಿದ.

 

ಸ್ವೀಯಾನೇವ ಗುಣಾನ್ ವಿಷ್ಣುರ್ಭುಞ್ಜನ್ ನಿತ್ಯೇನ ಶೋಚಿಷಾ ।

ಶಾರ್ವಂ ತಪಃ ಕರೋತೀವ ಮೋಹಯಾಮಾಸ ದುರ್ಜ್ಜನಾನ್             ॥೨೨.೧೭೨॥

 

ವಿಷ್ಣುವು ತನ್ನ ಒಳಗಿನ ಗುಣವನ್ನೇ ನಿತ್ಯವಾಗಿರುವ ಜ್ಞಾನದಿಂದ ಅನುಭವಿಸುತ್ತಾ  (ತನ್ನ ಗುಣಗಳಿಂದಲೇ ಆನಂದಿಸುತ್ತಾ) ರುದ್ರದೇವರನ್ನು ಕುರಿತಾದ ತಪಸ್ಸನ್ನು ಮಾಡುತ್ತಿರುವನೋ ಎಂಬಂತೆ ದುರ್ಜನರನ್ನು ಮೋಹಗೊಳಿಸಿದ.

No comments:

Post a Comment