ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, June 11, 2022

Mahabharata Tatparya Nirnaya Kannada 22: 157-166

[ಅರ್ಜುನ ಇಂದ್ರಲೋಕದಲ್ಲಿ ಅಭ್ಯಾಸ ಮಾಡುತ್ತಿರುವ ಆ ಕಾಲದಲ್ಲಿ ಇತ್ತ ದ್ವಾರಕೆಯಲ್ಲಿ ಏನು ಘಟನೆ ನಡೆಯಿತು ಎನ್ನುವುದನ್ನು ವಿವರಿಸುತ್ತಾರೆ:]

 

ಸುಭದ್ರಯಾSಭಿಮನ್ಯುನಾ ಸಹ ಸ್ವಕಾಂ ಪುರಂ ಗತಃ ।

ಜನಾರ್ದ್ದನೋSತ್ರ ಸಂವಸನ್ ಕದಾಚಿದಿತ್ಥಮೈಕ್ಷತ      ॥೨೨.೧೫೭॥

 

ಮಯಾ ವರೋ ಹಿ ಶಮ್ಭವೇ ಪ್ರದತ್ತ ಆಸ ಪೂರ್ವತಃ ।

ವರಂ ಗ್ರಹೀಷ್ಯ ಏವ ತೇ ಸಕಾಶತೋ ವಿಮೋಹಯನ್  ॥೨೨.೧೫೮॥

 

ಸುಭದ್ರೆ, ಅಭಿಮನ್ಯುವಿನೊಂದಿಗೆ ಕೂಡಿಕೊಂಡು ದ್ವಾರಕೆಗೆ ತೆರಳಿದ ಜನಾರ್ದನನು, ದ್ವಾರಕೆಯಲ್ಲಿ ವಾಸಮಾಡುತ್ತಾ, ಒಮ್ಮೆ ಈರೀತಿಯಾಗಿ ಚಿಂತಿಸಿದ: 

‘ನಾನು ಮೊಹಿಸುವವನಾಗಿ ನಿನ್ನ ಸಕಾಶದಿಂದ ವರವನ್ನು ತೆಗೆದುಕೊಳ್ಳುವೆ’ - ಈ ಪ್ರಕಾರವಾಗಿ ನನ್ನಿಂದ ಪೂರ್ವದಲ್ಲಿ ರುದ್ರನಿಗೆ ವರವು ಕೊಡಲ್ಪಟ್ಟಿದೆಯಷ್ಟೇ.

 

[ಈ ಮಾತಿಗೆ ಪೂರಕವಾಗಿರುವ ಇತರ ಪುರಾಣದ ವಚನವನ್ನು ಆಚಾರ್ಯರು ಇಲ್ಲಿ ಉಲ್ಲೇಖಿಸುತ್ತಾರೆ:]

 

‘ತ್ವಾಮಾರಾಧ್ಯ ತಥಾ ಶಮ್ಭೋ ಗ್ರಹಿಷ್ಯಾಮಿ ವರಂ ಸದಾ ।

‘ದ್ವಾಪರಾದೌ ಯುಗೇ ಭೂತ್ವಾ ಕಲಯಾ ಮಾನುಷಾದಿಷು’ ॥೨೨.೧೫೯॥

 

ರುದ್ರನೇ, ದ್ವಾಪರಯುಗದಲ್ಲಿ ಮನುಷ್ಯರಂತೆ ಇರುವ ದೇಹದಿಂದ ಹುಟ್ಟಿ,  ನಿನ್ನನ್ನು ಆರಾಧಿಸಿ, ವರವನ್ನು ಬೇಡುತ್ತೇನೆ. [ಪದ್ಮಪುರಾಣದಲ್ಲಿ ಈ ವಾಕ್ಯವನ್ನು ಕಾಣಬಹುದು. ‘ನಿನ್ನನ್ನು ಕುರಿತು ತಪಸ್ಸು ಮಾಡುತ್ತೇನೆ, ದುರ್ಜನರಿಗೆ ಮೋಹವನ್ನು ಕೊಡುತ್ತೇನೆ’ ಎಂದು ಭಗವಂತ ತನಗೆ ಹೇಳಿದ ಮಾತನ್ನು ಶಿವ ಪಾರ್ವತಿಗೆ ಹೇಳುವುದನ್ನು ಅಲ್ಲಿ ಕಾಣಬಹುದು. ಈ ಕುರಿತು ಈಗಾಗಲೇ ಪ್ರಥಮ ಅಧ್ಯಾಯದಲ್ಲಿ(೧.೫೭) ವಿಶ್ಲೇಸಿದ್ದೇವೆ]

 

ಇತಿ ವಾಕ್ಯಮೃತಂ ಕರ್ತ್ತುಮಭಿಪ್ರಾಯಂ ವಿಜಜ್ಞುಷೀ ।

ಪ್ರೀತ್ಯರ್ತ್ಥಂ ವಾಸುದೇವಸ್ಯ ರುಗ್ಮಿಣೀ ವಾಕ್ಯಮಬ್ರವೀತ್ ॥೨೨.೧೬೦॥

 

ಪೂರ್ವೋಕ್ತವಾದ ಕೃಷ್ಣನ ಮಾತನ್ನು ಸತ್ಯವನ್ನಾಗಿ ಮಾಡಲು, ಭಗವಂತನ ಅಭಿಪ್ರಾಯವನ್ನು ವಿಶೇಷವಾಗಿ  ತಿಳಿದ ರುಗ್ಮಿಣಿಯು ಶ್ರೀಕೃಷ್ಣನ ಪ್ರೀತಿಗಾಗಿ ವಾಕ್ಯವನ್ನು ಹೇಳಿದಳು:

 

ಜಾತೇSಪಿ ಪುತ್ರೇ ಪುತ್ರಾರ್ತ್ಥಂ ಸಾ ಹಿ ವೇದ ಮನೋಗತಮ್ ।

ಪುತ್ರೋ ಮೇ ಬಲವಾನ್ ದೇವ ಸ್ಯಾತ್ ಸರ್ವಾಸ್ತ್ರವಿದುತ್ತಮಃ ॥೨೨.೧೬೧॥

 

ಭಗವಂತನ ಅಭಿಪ್ರಾಯವನ್ನು ತಿಳಿದವಳಾಗಿರುವ ರುಗ್ಮಿಣಿಯು, ಮಗನು ಹುಟ್ಟಿದ್ದರೂ ಕೂಡಾ, ‘ಮಗ ಬೇಕು’ ಎನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಾ ಹೇಳುತ್ತಾಳೆ:  ‘ದೇವಾ, ನನಗೆ ಎಲ್ಲಾ ಅಸ್ತ್ರಗಳನ್ನು ಬಲ್ಲವರಲ್ಲಿ ಅಗ್ರಗಣ್ಯನಾಗಿರುವ ಮಗನೊಬ್ಬ ಆಗಬೇಕು’ ಎಂದು.

 

ಇತ್ಯುಕ್ತೋ ಭಗವಾನ್ ದೇವ್ಯಾ ಸಮ್ಮೋಹಾಯ ಸುರದ್ವಿಷಾಮ್ ।

ಯಯೌ ಸುಪರ್ಣ್ಣಮಾರು̐ಹ್ಯ ಸ್ವೀಯಂ ಬದರಿಕಾಶ್ರಮಮ್ ॥೨೨.೧೬೨॥

 

ಈರೀತಿಯಾಗಿ ಹೇಳಲ್ಪಟ್ಟ ಶ್ರೀಕೃಷ್ಣನು ದೈತ್ಯರನ್ನು ಮೋಹಗೊಳಿಸುವುದಕ್ಕಾಗಿ, ರುಗ್ಮಿಣೀದೇವಿಯಿಂದ ಕೂಡಿಕೊಂಡು, ಗರುಡನನ್ನು ಏರಿ, ತನ್ನದೇ ಆಗಿರುವ ಬದರಿಕಾಶ್ರಮವನ್ನು ಕುರಿತು ತೆರಳಿದನು,

 

[ಈ ಮೇಲಿನ ವಿಷಯಕ್ಕೆ ಸಂಬಂಧಿಸಿದ ಪುರಾಣ ಶ್ಲೋಕವನ್ನು ಇಲ್ಲಿ ಆಚಾರ್ಯರು ಉಲ್ಲೇಖಿಸುತ್ತಾರೆ:]

 

‘ಏಷ ಮೋಹಂ ಸೃಜಾಮ್ಯಾಶು ಯೋ ಜನಾನ್ ಮೋಹಯಿಷ್ಯತಿ ।

‘ತ್ವಂ ಚ ರುದ್ರ ಮಹಾಬಾಹೋ ಮೋಹಶಾಸ್ತ್ರಾಣಿ ಕಾರಯ             ॥೨೨.೧೬೩॥

 

‘ಅತತ್ಥ್ಯಾನಿ ವಿತತ್ಥ್ಯಾನಿ ದರ್ಶಯಸ್ವ ಮಹಾಭುಜ ।

‘ಪ್ರಕಾಶಂ ಕುರು ಚಾSತ್ಮಾನಮಪ್ರಕಾಶಂ ಚ ಮಾಂ ಕುರು             ॥೨೨.೧೬೪॥

 

‘ಅಹಂ ತ್ವಾಂ ಪೂಜಯಿಷ್ಯಾಮಿ ಲೋಕಸಮ್ಮೋಹನೋತ್ಸುಕಃ ।

‘ತಮೋSಸುರಾ ನಾನ್ಯಥಾ ಹಿ ಯಾನ್ತೀತ್ಯೇತನ್ಮತಂ ಮಮ’             ॥೨೨.೧೬೫॥

 

ಇತ್ಯುಕ್ತವಚನಂ ಪೂರ್ವಂ ಕೇಶವೇನ ಶಿವಾಯ ಯತ್ ।

ತತ್ ಸತ್ಯಂ ಕರ್ತುಮಾಯಾತಂ ಕೃಷ್ಣಂ ಬದರಿಕಾಶ್ರಮಮ್ ।

ಸರ್ವಜ್ಞಾ ಮುನಯಃ ಸರ್ವೇ ಪೂಜಯಾಞ್ಚಕ್ರಿರೇ ಪ್ರಭುಮ್             ॥೨೨.೧೬೬॥

 

‘ಸರ್ವೋತ್ತಮನಾಗಿರುವ ನಾನು ದುರ್ಜನರಿಗೆ ಮೋಹವನ್ನು ಕೊಡುತ್ತೇನೆ. ಓ ರುದ್ರನೇ, ದೊಡ್ಡ ತೊಳ್ಗಳುಳ್ಳವನೇ, ನೀನೂ ಕೂಡಾ ಪಾಶುಪತ ಮೊದಲಾದ ಆಗಮಗಳನ್ನು ರಚನೆ ಮಾಡು.

ಪರಾಕ್ರಮಿಯೇ, ಯಾವುದು ಸತ್ಯವಲ್ಲವೋ, ಯಾವುದು ಸತ್ಯಕ್ಕೆ ವಿರುದ್ದವೋ, ಅದನ್ನು ನೀನು ತೋರಿಸು. ನಿನ್ನನ್ನು ವಿಪರೀತವಾಗಿ ಪ್ರಕಾಶಿಸು. ನನ್ನನ್ನು ಮುಚ್ಚಿಬಿಡು. 

ನಾನು ಲೋಕವನ್ನು ದಾರಿ ತಪ್ಪಿಸಲು ನಿನ್ನನ್ನು ಪೂಜಿಸುತ್ತೇನೆ. ದೈತ್ಯರು ಇದನ್ನೇ ನಂಬಿ ಅನ್ಧಂತಮಸ್ಸಿಗೆ ತೆರಳುತ್ತಾರೆ. ಹೀಗೆ ಮಾಡಿಲ್ಲವೆಂದರೆ ಅವರು ಅನ್ಧಂತಮಸ್ಸಿಗೆ ಹೋಗುವುದಿಲ್ಲ.

ಈರೀತಿಯಾಗಿ ಹಿಂದೆ ತಾನೇ ಹೇಳಿದ ಮಾತನ್ನು ಸತ್ಯವನ್ನಾಗಿ ಮಾಡಲು ಬದರಿಕಾಶ್ರಮಕ್ಕೆ ಬಂದಿರುವ ಶ್ರೀಕೃಷ್ಣನನ್ನು ಸರ್ವಜ್ಞರಾದ ಎಲ್ಲಾ ಮುನಿಗಳೂ ಕೂಡಾ ಪೂಜಿಸಿದರು.

[‘ಏಷ ಮೋಹಂ..’ ಇತ್ಯಾದಿಯಾದ ಪುರಾಣದ ವಚನಗಳನ್ನು ನಾವು ಪ್ರಥಮ ಅಧ್ಯಾಯದಲ್ಲಿ(೧.೪೮-೧.೫೫)  ವಿಶ್ಲೇಷಿಸಿದ್ದೇವೆ. ಹರಿವಂಶದಲ್ಲಿಯೂ ಕೂಡಾ ಸ್ವಲ್ಪಮಟ್ಟಿಗೆ ಈ ಕುರಿತು ಸೂಚಿಸಲಾಗಿದೆ: ‘ ಅಹಂ ತು ಯಾಸ್ಯೇ ಕೈಲಾಸಂ ಕುತಶ್ಚಿತ್ ಕಾರಣಾನ್ನೃಪಾಃ । ಶಙ್ಕರಂ ದ್ರಷ್ಟುಕಾಮೋSಸ್ಮಿ ಭೂತಭಾವನಭಾವನಮ್’ (ಭ.ಪ. ೭೪.೨೦).  ವಾಮನ ಪುರಾಣದಲ್ಲಿ(೭೩.೪೫) ಈ ಕುರಿತು ಹೇಳಿರುವುದನ್ನು ಕಾಣಬಹುದು: ‘ ದೇವಕಾರ್ಯಾವತಾರೇಷು ಮಾನುಷತ್ವಮುಪಾಗತಃ ।  ತ್ವಾಮೇವಾSರಾಧಯಿಷ್ಯಾಮಿ ತ್ವಂ ಚ ಮೇ ವರದೋ ಭವ’ ]

No comments:

Post a Comment