ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, June 1, 2022

Mahabharata Tatparya Nirnaya Kannada 22: 134-141

 

ಷಣ್ಮಾಸೇsತಿಗತೇSಪಶ್ಯನ್ಮೂಕಂ ನಾಮಾಸುರಂ ಗಿರೌ ।

ವರಾಹರೂಪಮಾಯಾತಂ ವಧಾರ್ತ್ಥಂ ಫಲ್ಗುನಸ್ಯ ಚ ॥೨೨.೧೩೪॥

 

ಆರು ತಿಂಗಳಾದಮೇಲೆ ಆ ಬೆಟ್ಟದಲ್ಲಿ ತನ್ನನ್ನು ವಧಿಸಲೆಂದು ಬಂದಿರುವ ಹಂದಿಯ ರೂಪವನ್ನು ಧರಿಸಿರುವ ಮೂಕನೆಂಬ ಅಸುರನನ್ನು ಇಂದ್ರಕೀಲಕ ಪರ್ವತದಲ್ಲಿ ಅರ್ಜುನ ಕಂಡ.

 

ತಂ ಜ್ಞಾತ್ವಾ ಫಲ್ಗುನೋ ವೀರಃ ಸಜ್ಯಂ ಕೃತ್ವಾ ತು ಗಾಣ್ಡಿವಮ್ ।

ಚಿಕ್ಷೇಪ ವಜ್ರಸಮಿತಾಂಸ್ತತ್ಕಾಯೇ ಸಾಯಕಾನ್ ಬಹೂನ್ ॥೨೨.೧೩೫॥

 

ಶೂರನಾದ ಅರ್ಜುನನ್ನು ಮೂಕನೆಂಬ ಅಸುರ ಬಂದದ್ದನ್ನು ತಿಳಿದು, ಗಾಣ್ಡಿವವನ್ನು ಸಜ್ಜುಗೊಳಿಸಿ, ವಜ್ರಾಯುಧಕ್ಕೆ ಸಮನಾಗಿರುವ ಬಹಳ ಬಾಣಗಳನ್ನು ಅವನ ಶರೀರದ ಮೇಲೆ ಪ್ರಯೋಗಿಸಿದ.

 

ಕಿರಾತರೂಪಸ್ತಮನು ಸಭಾರ್ಯ್ಯಶ್ಚ ತ್ರಿಯಮ್ಬಕಃ ।

ಸ ಮಮಾರ ಹತಸ್ತಾಭ್ಯಾಮ್ ದಾನವಃ ಪಾಪಚೇತನಃ ॥೨೨.೧೩೬॥

 

ಅದೇಸಮಯದಲ್ಲಿ ಸಪತ್ನೀಕನಾದ, ಬೇಡರ ವೇಷವನ್ನು ಧರಿಸಿರುವ ಶಿವನು ಬಹಳ ಬಾಣಗಳನ್ನು ಆ ಅಸುರನ ದೇಹದೊಳಗೆ ಎಸೆದ. (ಅಂದರೆ ಈಕಡೆಯಿಂದ  ಅರ್ಜುನನು ಬಾಣಗಳನ್ನು ಬಿಟ್ಟರೆ, ಆ ಕಡೆಯಿಂದ ಸದಾಶಿವನೂ ಅಸುರನ ಮೇಲೆ ಬಾಣಗಳನ್ನು ಪ್ರಯೋಗಿಸಿದ). ಅವರಿಬ್ಬರಿಂದ ಹೊಡೆಯಲ್ಪಟ್ಟ ದುಷ್ಟ ಜೀವನಾಗಿರುವ ಮೂಕನೆಂಬ ಅಸುರನು ಮರಣ ಹೊಂದಿದ.  

 

ತೇನೋಕ್ತೋSಸೌ ಮಯೈವಾಯಂ  ವರಾಹೋSನುಗತೋSದ್ಯ ಹಿ ।

ತಮವಿದ್ಧ್ಯೋ ಯತಸ್ತ್ವಂ ಹಿ ತದ್ ಯುದ್ಧ್ಯಸ್ವ ಮಯಾ ಸಹ ॥೨೨.೧೩೭॥

 

‘ನನ್ನಿಂದಲೇ ಆ ವರಾಹವು ಬೇಟೆಗಾಗಿ ಹಿಂಬಾಲಿಸಲ್ಪಟ್ಟಿತ್ತು. ನೀನು ಏಕೆ ಹೊಡೆದೆ? ಆ ಕಾರಣದಿಂದ ನನ್ನ ಜೊತೆಗೆ ಯುದ್ಧಮಾಡು’ ಎಂದು ಬೇಡರ ವೇಷದಲ್ಲಿರುವ ಸದಾಶಿವನೆಂದ.

 

ಇತ್ಯುಕ್ತಃ ಫಲ್ಗುನಃ ಪ್ರಾಹ ತಿಷ್ಠತಿಷ್ಠ ನ ಮೋಕ್ಷ್ಯಸೇ ।

ಇತ್ಯುಕ್ತ್ವಾ ತಾವುಭೌ ಯುದ್ಧಂ ಚಕ್ರತುಃ ಪುರುಷರ್ಷಭೌ ॥೨೨.೧೩೮॥

 

ಈರೀತಿಯಾಗಿ ಹೇಳಪಟ್ಟ ಅರ್ಜುನ ‘ನಿಲ್ಲು-ನಿಲ್ಲು, ನಿನ್ನನ್ನು ಬಿಡುವುದಿಲ್ಲ’ ಎಂದು ಹೇಳಿದ. ಆಗ ಪುರುಷಶ್ರೇಷ್ಠರಾದ ರುದ್ರ-ಅರ್ಜುನರು ಕಾಳಗವನ್ನು ಮಾಡಿದರು.

 

ತತ್ರಾಖಿಲಾನಿ ಚಾಸ್ತ್ರಾಣಿ ಫಲ್ಗುನಸ್ಯಾಗ್ರಸಚ್ಛಿವಃ ।

ತತೋSರ್ಜ್ಜುನಸ್ತು ಗಾಣ್ಡೀವಂ ಸಮಾದಾಯಾಭ್ಯತಾಡಯತ್ ॥೨೨.೧೩೯॥

 

ಆ ಯುದ್ಧದಲ್ಲಿ ಸದಾಶಿವನು ಅರ್ಜುನನ ಎಲ್ಲಾ ಅಸ್ತ್ರಗಳನ್ನೂ ನುಂಗಿಬಿಟ್ಟನು. ಆಗ ಅರ್ಜುನನು ಗಾಣ್ಡಿವವನ್ನು ಹಿಡಿದು ಅದರಿಂದ ಹೊಡೆದನು.

 

ತದಪ್ಯಗ್ರಸದೇವಾಸೌ ಪ್ರಹಸನ್ ಗಿರಿಶಸ್ತದಾ ।

ಬಾಹುಯುದ್ಧಂ ತತಸ್ತ್ವಾಸೀತ್ ತಯೋಃ ಪುರುಷಸಿಂಹಯೋಃ ॥೨೨.೧೪೦॥

 

ಗಿರೀಶನು ನಗುತ್ತಾ, ಗಾಣ್ಡಿವವೆಂಬ ಬಿಲ್ಲನ್ನೂ ನುಂಗಿದ. ತದನಂತರ ಪುರುಷಶ್ರೇಷ್ಠರಾಗಿರುವ ಅವರಿಬ್ಬರಿಗೂ ಬಾಹುಯುದ್ಧವಾಯಿತು.

 

ಪಿಣ್ಡೀಕೃತ್ಯ ತತೋ ರುದ್ರಶ್ಚಿಕ್ಷೇಪಾಥ ಧನಞ್ಜಯಮ್ ।

ಮೂರ್ಚ್ಛಾಮವಾಪ ಮಹತೀಂ ಫಲ್ಗುನೋ ರುದ್ರಪೀಡಿತಃ ॥೨೨.೧೪೧॥

 

ಮಲ್ಲಯುದ್ಧದಲ್ಲಿ ಸದಾಶಿವನು ಅರ್ಜುನನನ್ನು ಮುದ್ದೆಮಾಡಿ ಎಸೆದ. ರುದ್ರನಿಂದ ನೋವಿಗೆ ಒಳಗಾದ ಫಲ್ಗುನನು ಬಹಳಕಾಲ ಮೂರ್ಛೆತಪ್ಪಿ ಬಿದ್ದಿದ್ದ.

No comments:

Post a Comment