ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, November 14, 2023

Mahabharata Tatparya Nirnaya Kannada 32-66-73

 

ದ್ರೌಪದೀಸಹದೇವಾದಿಪಞ್ಚಾನಾಂ ತತ್ರ ಮಾರುತಿಃ ।

ಸದೇಹನಾಕಾನಿಚ್ಛುತ್ವಾದ್ ದೇಹಪ್ರಪತನಂ ಹಿ ತತ್ ॥ ೩೨.೬೬ ॥

 

ತೇಷಾಮಿಹೇತಿ ಯಾಥಾರ್ತ್ಥಂ ಜಾನನ್ ಪಪ್ರಚ್ಛ ಧರ್ಮ್ಮಜಮ್ ।

ಕೇನಕೇನಾಪತದ್ ದೇಹೋ ದೋಷೇಣ  ನ ಇತಿ ಕ್ರಮಾತ್ ॥ ೩೨.೬೭ ॥

 

ದ್ರೌಪದಿ ಮೊದಲಾಗಿರುವ ಐದು ಜನರು ಸಶರೀರ ಸ್ವರ್ಗವನ್ನು ಬಯಸದೇ ಇರುವುದರಿಂದ ಅವರ ದೇಹದ ಬೀಳುವಿಕೆಯು ಆಗಿದೆ ಎನ್ನುವ ಯಥಾರ್ಥ ಸಂಗತಿಯನ್ನು ತಿಳಿದಿದ್ದರೂ ಕೂಡಾ, ಭೀಮಸೇನನು ಧರ್ಮರಾಜನನ್ನು ಕುರಿತು ‘ಯಾವಯಾವ ದೋಷದಿಂದ ನಮ್ಮ ದೇಹ ಬಿತ್ತು’ ಎಂದು ಕೇಳಿದ.

 

ಮೃತಿಕಾಲೇ ಹಿ ಯೋ ಯಸ್ಯ ದೋಷಂ ವಕ್ತ್ಯೃಣಮೋಚನಮ್ ।

ತಸ್ಮಾತ್ ಸ್ಯಾದುಕ್ತದೋಷಸ್ಯೇತ್ಯಾಹ ಯಚ್ಛ್ರುತಿರೇವ ತತ್ ॥ ೩೨.೬೮ ॥

 

ಸಾಯುವ ಕಾಲದಲ್ಲಿ ಯಾರು ಯಾರ ದೋಷವನ್ನು ಹೇಳುತ್ತಾನೋ, ಆ ದೋಷವನ್ನು ಹೇಳುವವನಿಂದ ಹೇಳಲ್ಪಟ್ಟವನಿಗೆ ಋಣಮುಕ್ತಿಯಾಗುತ್ತದೆ ಎಂದು ವೇದವೇ ಹೇಳಿದೆ.

 

ಋಣಮೋಕ್ಷಾಯ ಸರ್ವೇಷಾಂ ಭೀಮೋ ದೋಷಾನವಾದಯತ್ ।

ಸೋSಪೀಚ್ಛಾಪತಿತಾನ್ ದೇಹಾನಜಾನಞ್ಛುದ್ಧಕರ್ಮ್ಮಣಾಮ್  ॥ ೩೨.೬೯ ॥

 

ಅಪಶ್ಯನ್ ಕಾರಣಂ ಪ್ರಾಹ ದೋಷಾನ್ ಸ್ಯಾದೇವಮಿತ್ಯಪಿ ।

ರಾಜಾ ಸಮ್ಭಾವನಾಮಾತ್ರಂ ನಹಿ ಕಾರ್ಯ್ಯಮಕಾರಣಮ್ ॥ ೩೨.೭೦ ॥

 

ಎಲ್ಲರ ಋಣದ ಬಿಡುಗಡೆಗಾಗಿ ಭೀಮಸೇನನು ಎಲ್ಲರ ದೋಷಗಳನ್ನೂ ಯುಧಿಷ್ಠಿರನಿಂದ ಹೇಳಿಸಿದ. ಯುಧಿಷ್ಠಿರ ಶುದ್ಧಕರ್ಮರಾದ ತನ್ನ ತಮ್ಮಂದಿರು ಮತ್ತು ಹೆಂಡತಿಯ ದೇಹ ಅವರ ಇಚ್ಛೆಯಿಂದಲೇ ಬಿದ್ದಿರುವುದು ಎಂದು ತಿಳಿಯದೇ, ಕಾರಣವೂ ತೋರದೇ, ‘ಹೀಗೆ ಇರಬಹುದು’ ಎಂದು ಊಹಿಸಿ, (ಸಮ್ಭಾವನಾಮಾತ್ರಮ್) ಎಲ್ಲರ ದೋಷಗಳನ್ನು ಹೇಳಿದ.

 

‘ಸ್ವಚ್ಛನ್ದಮೃತ್ಯವೋ ಯೋಗಾದ್ ದೇಹಾನುತ್ಸೃಜ್ಯ ಪಾಣ್ಡವಾಃ ।

ಕೃಷ್ಣಾ ಚಾSಪುಃ ಪರಂ ಸ್ಥಾನಂ ಯನ್ನ ಯಾನ್ತ್ಯಪಿ ದೇವತಾಃ’ ॥ ೩೨.೭೧ ॥

 

ಪಾಂಡವರು ತಾವು ಬಯಸಿದಂತಹ ಸಾವನ್ನು ಪಡೆಯಬಲ್ಲವರು. ಅವರು ಧ್ಯಾನಯೋಗದಿಂದ ದೇಹವನ್ನು ಬಿಟ್ಟು ಉತ್ಕೃಷ್ಟವಾದ ಸ್ಥಾನವನ್ನು ಹೊಂದಿದರು. ದೇವತೆಗಳೂ ಕೂಡಾ ಯಾವುದನ್ನು ಹೊಂದುವುದಿಲ್ಲವೋ ಅಂತಹ ಸ್ಥಾನವನ್ನು ಅವರು ಹೊಂದಿದರು.

 

ಇತಿ ಶ್ರುತೇರ್ನ್ನ ತೇ ಪಾಪಾದ್ ದೇಹಾಂಸ್ತತ್ಯಜುರೂರ್ಜ್ಜಿತಾಃ ।

‘ಋಣಾನ್ಯುನ್ಮುಚ್ಯ ದೋಷೋಕ್ತ್ಯಾ ಸ್ವಾನಾಂ ಭೀಮಃ ಸ್ವಕಾಂ ತನುಮ್  ॥ ೩೨.೭೨ ॥

 

‘ತತ್ಯಾಜ ಪರಮಂ ದ್ಧ್ಯಾಯನ್ನಾಪ ಚ ಸ್ಥಾನಮುತ್ತಮಮ್ ’।

ಇತಿ ಸ್ಕಾನ್ದಪುರಾಣೋಕ್ತಂ ವ್ಯಾಸವಾಕ್ಯಮೃಷೀನ್ ಪ್ರತಿ ॥ ೩೨.೭೩ ॥

 

ಈರೀತಿಯಾಗಿ ವೇದವಾಣಿ ಇರುವುದರಿಂದ, ಆ ಶ್ರೇಷ್ಠರಾದ ಪಾಂಡವರು ಪಾಪದಿಂದ ದೇಹಗಳನ್ನು ಬಿಡಲಿಲ್ಲ ಎನ್ನುವುದು ಸ್ಪಷ್ಟ. ‘ಭೀಮನು ತಮ್ಮವರ ದೋಷವನ್ನು ಹೇಳಿಸುವುದರ ಮೂಲಕ ಅವರ ಋಣವನ್ನು ಬಿಡಿಸಿ, ತನ್ನ ಶರೀರವನ್ನೂ ಬಿಟ್ಟ. ಭೀಮಸೇನನು ನಾರಾಯಣನನ್ನು ಧ್ಯಾನಮಾಡುತ್ತಾ. ಉತ್ಕೃಷ್ಟವಾದ ಸ್ಥಾನವನ್ನು ಹೊಂದಿದ’. ಇದು ಸ್ಕಾನ್ದಪುರಾಣದಲ್ಲಿ ಋಷಿಗಳನ್ನು ಕುರಿತು ಹೇಳಿದ ವೇದವ್ಯಾಸರ ಮಾತಾಗಿದೆ.

No comments:

Post a Comment