ಯತ್ರ ಸನ್ತಸ್ತು ತೇ
ಸನ್ತಿ ತತ್ರ ಸ್ಥಾತವ್ಯಮೇವ ಮೇ ।
ನಿರಯೇSಪಿ ನಚಾತ್ರಾಪಿ ನಾನೇನ ಸಹ ಪಾಪಿನಾ ॥ ೩೨.೯೮ ॥
‘ಎಲ್ಲಿ ಸಜ್ಜನರಿದ್ದಾರೋ
ಅಲ್ಲಿಯೇ ನಾನಿರಬೇಕು. ಅದು ನರಕವಾದರೂ ಸರಿ. ಇಲ್ಲಿ ಈ ಪಾಪಿಯಾದ ದುರ್ಯೋಧನನ ಜೊತೆಗೆ
ನಾನಿರಲಾರೆ’ ಎನ್ನುತ್ತಾನೆ ಯುಧಿಷ್ಠಿರ.
ಅಸ್ಯ ವೀರತಮಸ್ಯೇದಂ ಧಾರ್ತ್ತರಾಷ್ಟ್ರಸ್ಯ
ಯುಜ್ಯತೇ ।
ಇತ್ಯುಕ್ತಾ ದೇವತಾ
ದೂತಂ ಸ್ವಾನಾಂ ಸನ್ದರ್ಶನಾರ್ತ್ಥಿನಃ ॥ ೩೨.೯೯ ॥
ರಾಜ್ಞಃ
ಸಮ್ಪ್ರೇಷಯಾಮಾಸುಸ್ತತ್ಸನ್ದರ್ಶಿತವರ್ತ್ಮನಾ ।
ದುರ್ಗ್ಗನ್ಧೇನ
ಸುಕೃಚ್ಛ್ರೇಣ ತಮಸಾ ಪ್ರಾವೃತೇನ ಚ । ॥ ೩೨.೧೦೦ ॥
ಗತ್ವೈವ ಕಿಯತೀಂ ಭೂಮಿಂ
ತದ್ದುರ್ಗ್ಗನ್ಧಾಸಹೋ ನೃಪಃ ।
ಇಚ್ಛನ್ ನಿವರ್ತ್ತನಂ
ತತ್ರ ಸ್ವಾನಾಂ ವಾಚ ಇವಾಶೃಣೋತ್ ॥ ೩೨.೧೦೧ ॥
‘ಅತ್ಯಂತ
ವೀರನಾಗಿರುವ ದುರ್ಯೋಧನನಿಗೆ ಈರೀತಿಯ ಸ್ವರ್ಗಪ್ರಾಪ್ತಿಯಾಗಿದೆ’ ಎಂದು ದೇವತೆಗಳು ಹೇಳಿದಮೇಲೆ, ತನ್ನವರನ್ನು ನೋಡಬೇಕೆಂದು ಬಯಸಿದ ಯುಧಿಷ್ಠಿರನಿಗಾಗಿ ದಾರಿ ತೋರಲು, ದೇವತೆಗಳು ಧೂತನೊಬ್ಬನನ್ನು ಕಳುಹಿಸಿದರು. ಧೂತನಿಂದ ತೋರಲ್ಪಟ್ಟ ಹಾದಿಯಿಂದ, ಅತ್ಯಂತ ದುರ್ವಾಸನೆಯಿಂದ ಕೂಡಿರುವ, ಬಹಳ ಕಷ್ಟವಾದ, ಕತ್ತಲಿನಿಂದ ಒಡಗೂಡಿರುವ
ದಾರಿಯಿಂದ ತೆರಳಿ, ಎಷ್ಟೋ ದಾರಿಯನ್ನು ಸವೆಸಿ, ಆ ಕೆಟ್ಟ ವಾಸನೆಯನ್ನು ಸಹಿಸಲಾರದ ಯುಧಿಷ್ಠಿರ, ತಿರುಗಿ ಬರಬೇಕು ಎಂದು ಬಯಸಿದಾಗ, ಅಲ್ಲಿ ತನ್ನವರ ಮಾತು ಎಂಬಂತೆ ಧ್ವನಿಯನ್ನುಕೇಳಿದನು.
ಕ್ಷಣಂ ತಿಷ್ಠ ಮಹಾರಾಜ
ಸನ್ನಿಧಾನಬಲಾತ್ ತವ ।
ವೇದನಾ ನೋ ನ ಮಹತೀತ್ಯೇಚ್ಛ್ರುತ್ವಾ
ಯುಧಿಷ್ಠಿರಃ ॥ ೩೨.೧೦೨ ॥
ಕೇ ಯೂಯಮಿತಿ ಪಪ್ರಚ್ಛ
ದೀನಧ್ವನಿವಿಶಙ್ಕಿತಃ ।
ಭೀಮೋSಹಮರ್ಜ್ಜುನಃ ಕರ್ಣ್ಣ ಇತ್ಯಾದ್ಯುಕ್ತಮಿವಾಶೃಣೋತ್
॥ ೩೨.೧೦೩ ॥
‘ಓ ಮಹಾರಾಜನೇ, ಒಂದು ಕ್ಷಣಕಾಲ ಇಲ್ಲಿಯೇ ನಿಲ್ಲು. ನಿನ್ನ ಸನ್ನಿಧಿಯ ಬಲದಿಂದ ನಮಗೆ
ಅಪಾರವಾದ ನೋವಿರುವುದಿಲ್ಲ’. ಈ ಮಾತನ್ನು ಕೇಳಿ, ಧ್ವನಿಯಮೇಲೆ
ಅನುಮಾನಗೊಂಡು, ಧೀನವಾಗಿರುವ ಧ್ವನಿಯಲ್ಲಿ ಯುಧಿಷ್ಠಿರ ‘ನೀವು ಯಾರು’ ಎಂದು ಕೇಳಿದ. ಆಗ ‘ನಾನು ಭೀಮ’, ‘ನಾನು ಅರ್ಜುನ’ , ‘ನಾನು ಕರ್ಣ’ ಇತ್ಯಾದಿಯಾಗಿ ಹೇಳಿದಂತೆ
ಕೇಳಿಸಿಕೊಂಡ.
ಶ್ರುತ್ವಾ ತತ್ ಕೃಪಯಾSSವಿಷ್ಟಃ ಶೋಕಾಮರ್ಷಸಮನ್ವಿತಃ ।
ಆಹ ದೂತ ಯಥೇಷ್ಟಂ ತ್ವಂ
ಗಚ್ಛ ನಾಹಮಿತೋ ವ್ರಜೇ ॥ ೩೨.೧೦೪ ॥
ನಚ ಸ್ವರ್ಗ್ಗೇಣ ಮೇ ಕಾರ್ಯ್ಯಂ
ತ್ಯಕ್ತ್ವಾ ಸ್ವಜನಮೀದೃಶಮ್ ।
ಇತ್ಯುಕ್ತಃ ಪ್ರಯಯೌ
ದೂತಸ್ತಸ್ಥಾವೇವ ಯುಧಿಷ್ಠಿರಃ ॥ ೩೨.೧೦೫ ॥
ಅದನ್ನು ಕೇಳಿ, ದಯೆಯಿಂದ, ಶೋಕದಿಂದ, ಮುನಿಸಿನಿಂದಲೂ ಕೂಡಿದ ಯುಧಿಷ್ಠಿರನು, ಧೂತನನ್ನು ಕುರಿತು, ‘ಓ ಧೂತನೇ, ನೀನು
ನಿನ್ನ ಇಚ್ಛಾನುಸಾರ ಹೊರಡಬಹುದು. ನಾನು ಇಲ್ಲಿಂದ ಹೋಗಲಾರೆನು. ಈರೀತಿಯಾಗಿರುವ ನನ್ನ
ಬಂಧುಗಳನ್ನು ಬಿಟ್ಟು, ನನಗೆ ಸ್ವರ್ಗದಿಂದ ಯಾವ ಪ್ರಯೋಜನವೂ ಇಲ್ಲ’ ಎಂದನು. ಈ ರೀತಿಯಾಗಿ ಹೇಳಲ್ಪಟ್ಟ ಧೂತನು ಅಲ್ಲಿಂದ ತೆರಳಿದನು.
ಯುಧಿಷ್ಠಿರ ಮಾತ್ರ ಅಲ್ಲಿಯೇ ನಿಂತನು.
ತತೋSತ್ರ ದೇವಾಃ ಪುರೂಹೂತಪೂರ್ವಕಾಃ ಸಮಾಯಯುಃ
ಸ್ನೇಹವಶಾದ್ ಯುಧಿಷ್ಠಿರೇ ।
ತೇಷ್ವಾಗತೇಷ್ವೇವ ನ
ತತ್ರ ವಾಚೋ ದೀನಾ ನ ದುರ್ಗ್ಗನ್ಧತಮೋSಪ್ಯಪಶ್ಯತ್ ॥ ೩೨.೧೦೬ ॥
ತದನಂತರ ಇಂದ್ರನೇ
ಮೊದಲಾಗಿರುವ ದೇವತೆಗಳು ಯುಧಿಷ್ಠಿರನಲ್ಲಿ ಪ್ರೀತಿಯಿಂದ ಬಂದರು. ಅವರು ಬರಲು ಅಲ್ಲಿ ಕೆಟ್ಟ
ಮಾತು, ಕೆಟ್ಟ ವಾಸನೆ , ತಮಸ್ಸು ಮೊದಲಾದವುಗಳನ್ನು ಅವನು ಕಾಣಲಿಲ್ಲ.
No comments:
Post a Comment