ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, November 9, 2023

Mahabharata Tatparya Nirnaya Kannada 32-59-65

 

ತತ್ರ ಕಾಳೀ ಭೀಮಭಾರ್ಯ್ಯಾ ವೈಷ್ಣವಂ ಯೋಗಮಾಸ್ಥಿತಾ।

ಕೃಷ್ಣಯೈಕತ್ವಮಾಪನ್ನಾ ತ್ಯಕ್ತ್ವಾ ದೇಹಂ ತು ಮಾನುಷಮ್ ॥ ೩೨.೫೯ ॥

 

ಸುಭದ್ರಾದ್ಯಾಸ್ತು ಯಾ ಭಾರ್ಯ್ಯಾಃ ಪಾರ್ತ್ಥಾನಾಂ ತು ತದಾಜ್ಞಯಾ ।

ಯುಯುತ್ಸುಶ್ಚಾತ್ರ ಶಿಕ್ಷಾರ್ತ್ಥಂ ಪೌತ್ರಸ್ಯೈವಾವಸನ್ ಪುರೇ ॥ ೩೨.೬೦ ॥

 

ಆ ಸಂದರ್ಭದಲ್ಲಿ ಭೀಮನ ಪತ್ನಿ ಕಾಳೀದೇವಿಯು ಪರಮಾತ್ಮನ ಧ್ಯಾನವನ್ನು ಮಾಡುತ್ತಾ,  ಮನುಷ್ಯದೇಹವನ್ನು ಬಿಟ್ಟು, ದ್ರೌಪದೀದೇವಿಯಲ್ಲಿ ಐಕ್ಯವನ್ನು ಹೊಂದಿದಳು. ಸುಭದ್ರಾ ಮೊದಲಾದವರು, ಯುಯುತ್ಸುವೂ ಕೂಡಾ ಪಾಂಡವರ ಆಜ್ಞೆಯಂತೆ ಪರೀಕ್ಷಿತರಾಜನ ಮಾರ್ಗದರ್ಶನಕ್ಕಾಗಿ ಅಲ್ಲಿಯೇ ವಾಸಮಾಡಿದರು.

 

ಸನ್ತ್ಯಜ್ಯ ರಾಜ್ಯಚಿಹ್ನಾನಿ ವೈಷ್ಣವಂ ಯೋಗಮಾಸ್ಥಿತಾಃ ।

ವೀರಾಧ್ವಾನಂ ಯಯುಃ ಸರ್ವೇ ಕೃಷ್ಣಯಾ ಸಹ ಪಾಣ್ಡವಾಃ ॥ ೩೨.೬೧ ॥

 

ದ್ರೌಪದೀದೇವಿಯಿಂದ ಕೂಡಿದ ಪಾಂಡವರು ತಮ್ಮ ಲಾಂಛನಗಳನ್ನು ಬಿಟ್ಟು, ನಾರಾಯಣನ ಧ್ಯಾನವನ್ನು ಮಾಡುತ್ತಾ, ವೀರರ ಮಾರ್ಗವನ್ನು ಹಿಡಿದರು. (ಅಂದರೆ ರಾಜ್ಯವನ್ನು ತ್ಯಾಗಮಾಡಿ, ಕಾಡಿನ ಮಾರ್ಗವನ್ನು ಹಿಡಿದಿದರು).

 

ಪ್ರಾಗುದೀಚೀಂ ದಿಶಂ ಪೂರ್ವಂ ಯುಯುಸ್ತತ್ರಾರ್ಜ್ಜುನೋ ಧನುಃ ।

ನಾತ್ಯಜಲ್ಲೋಭತಸ್ತಂ ತು ಸಮುದ್ರಮುಪ ಪಾವಕಃ ॥ ೩೨.೬೨ ॥

 

 

ದೃಷ್ಟ್ವಾ ಯಯಾಚೇ ರಾಜಾನಂ ತದುಕ್ತಃ ಪ್ರಾಸ್ಯದಮ್ಬುಧೌ ।

ಪ್ರಾತಿಭಾವ್ಯಂ ತು ವರುಣೇ ನಿಸ್ತೀರ್ಯ್ಯಾಗ್ನಿರದೃಶ್ಯತಾಮ್ ॥ ೩೨.೬೩ ॥

 

ಯಯೌ ತೇSಪಿ ಯಯುಃ ಕ್ಷಿಪ್ರಂ ಪ್ಲವನ್ತಃ ಸಪ್ತ ವಾರಿಧೀನ್ ।

ಅಹೋಭಿಃ ಸಪ್ತಭಿರ್ಯ್ಯೋಗಂ ಸಮಾರೂಢಾಃ ಪ್ರದಕ್ಷಿಣಮ್  ॥ ೩೨.೬೪ ॥

 

ಕೃತ್ವಾ ಕ್ವಚಿದಸಜ್ಜನ್ತ ಆಸೇದುರ್ಗ್ಗನ್ಧಮಾದನಮ್ ।

ತತ್ರ ನಾರಾಯಣಕ್ಷೇತ್ರೇ ತೇಷಾಂ ತನ್ವೋSಪತನ್ ಕ್ರಮಾತ್ ॥ ೩೨.೬೫ ॥

 

ಮೊದಲು ಅವರು ಪೂರ್ವ ಹಾಗೂ ಉತ್ತರ ದಿಕ್ಕಿನ ಮಧ್ಯದ ದಿಕ್ಕನ್ನು ಕುರಿತು ತೆರಳಿದರು. ಹೀಗೆ ಹೋಗುತ್ತಿರುವಾಗ ಪಾಂಡವರಲ್ಲಿ  ಅರ್ಜುನನು ಗಾಂಡೀವ ಧನುಸ್ಸನ್ನು ಲೋಭದಿಂದ ಬಿಡಲಿಲ್ಲ. ಆಗ ಸಮುದ್ರದ ಬಳಿಯಲ್ಲಿ ಅಗ್ನಿಯು ಕಾಣಿಸಿಕೊಂಡು, ರಾಜನನ್ನು (ಯುಧಿಷ್ಠಿರನನ್ನು)ಬೇಡಿಕೊಂಡ.  [‘ಅಯಮ್ ವಃ ಫಲ್ಗುನೋ ಭ್ರಾತಾ ಗಾಂಡೀವಂ ಪರಮಾಯುಧಂ। ಪರಿತ್ಯಜ್ಯ ವನೇ ಯಾತು ನಾನೇನಾರ್ಥೋSಸ್ತಿ ಕಶ್ಚನ’. (ಮಹಾಭಾರತ – ಮಹಾಪ್ರಸ್ಥಾನಿಕಪರ್ವ ೧.೪೦)- ನಿನ್ನ ಸಹೋದರನಾದ ಅರ್ಜುನನು ಪರಮಾಯುಧವಾದ  ಗಾಂಡೀವವನ್ನು ಇಲ್ಲಿಯೇ ಬಿಟ್ಟು ವನಕ್ಕೆ ತೆರಳಬೇಕು. ಅವನಿಗೆ ಇನ್ನು ಮುಂದೆ ಇದರ ಅವಶ್ಯಕತೆಯಿರುವುದಿಲ್ಲ]. ಆಗ ಅರ್ಜುನನು ಯುಧಿಷ್ಠಿರನಿಂದ ಹೇಳಲ್ಪಟ್ಟವನಾಗಿ ಗಾಂಡೀವವನ್ನು ಸಮುದ್ರಕ್ಕೆ ಎಸೆದನು. ವರುಣನಿಗೆ ಸೇರಿರುವ ಆ ಬಿಲ್ಲನ್ನು ಹಿಂದೆ ಅಗ್ನಿ ತಂದು ಅರ್ಜುನನಿಗೆ ಕೊಟ್ಟಿದ್ದ. ಹೀಗೆ ತನ್ನಲ್ಲಿ ಗಿರವಿ ಇಟ್ಟಿದ್ದ ಆ ಧನುಸ್ಸನ್ನು ಅಗ್ನಿ ವರುಣನಿಗೆ ಹಿಂತಿರುಗಿಸಿ ಅಲ್ಲಿಂದ ಕಾಣದಾದನು.

ಪಾಂಡವರು ತಮ್ಮ ಯೋಗಶಕ್ತಿಯನ್ನು ಆಶ್ರಯಿಸಿ, ವೇಗದಲ್ಲಿ ಏಳು ಸಮುದ್ರಗಳನ್ನು ಏಳು ದಿವಸಗಳಲ್ಲಿ ದಾಟಿ ಭೂಮಿಗೆ ಪ್ರದಕ್ಷಿಣೆ ಬಂದು, ಗಂಧಮಾದನಕ್ಕೆ ಬಂದರು. ಆ ನಾರಾಯಣ ಕ್ಷೇತ್ರದಲ್ಲಿ ಅವರ ದೇಹಗಳು ಕ್ರಮವಾಗಿ ಬಿದ್ದವು.

No comments:

Post a Comment