ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 28, 2019

Mahabharata Tatparya Nirnaya Kannada 12.42-12.47


ಅವದ್ಧ್ಯ ಏವ ಸರ್ವತಃ ಸುಯೋಧನೇ ಸಮುತ್ಥಿತೇ ।
ಘೃತಾಭಿಪೂರ್ಣ್ಣಕುಮ್ಭತಃ ಸ ಇನ್ದ್ರಜಿತ್ ಸಮುತ್ಥಿತಃ ॥೧೨.೪೨॥

ಎಲ್ಲರಿಂದಲೂ ಅವಧ್ಯನಾಗಿರುವ ದುರ್ಯೋಧನನು ತುಪ್ಪದಿಂದ ಕೂಡಿದ ಮಡಿಕೆಯಿಂದ ಮೇಲೆದ್ದು ಬಂದ. ನಂತರ (ಹಿಂದೆ ರಾವಣಪುತ್ರನಾಗಿದ್ದ) ಇಂದ್ರಜಿತು ಘೃತದಿಂದ ತುಂಬಿದ ಘಟದಿಂದ  ಮೇಲೆದ್ದ.

[ಮಹಾಭಾರತ ಆದಿಪರ್ವದಲ್ಲಿ(೬೮.೮೯) ದುರ್ಯೋಧನನ ತಮ್ಮಂದಿರ ಕುರಿತಾದ ಮಾತು ಬರುತ್ತದೆ: ‘ಪೌಲಸ್ತ್ಯಾ ಭ್ರಾತರಶ್ಚಾಸ್ಯ ಜಗ್ನಿರೇ ಮನುಜೇಷ್ವಿಹ’. ದುರ್ಯೋಧನನ ತಮ್ಮಂದಿರು ಪುಲಸ್ಯ ವಂಶದಲ್ಲಿ ಬಂದ ದೈತ್ಯರೇ ಆಗಿದ್ದು, ಮನುಷ್ಯ ರೂಪದಿಂದ ಅಭಿವ್ಯಕ್ತರಾಗಿದ್ದಾರೆ. ‘ದುರ್ಯೋಧನಸಹಾಯಾಸ್ತೇ ಪೌಲಸ್ತ್ಯಾ ಭರತರ್ಷಭ’(೯೧) ಈ ಪೌಲಸ್ತ್ಯರು (ರಾಕ್ಷಸ ವಂಶದವರು) ದುರ್ಯೋಧನನ ಸಹಾಯಕರಾಗಿ  ಹುಟ್ಟಿದ್ದಾರೆ].

ಸ ದುಃಖಶಾಸನೋsಭವತ್ ತತೋsತಿಕಾಯಸಮ್ಭವಃ ।
ಸ ವೈ ವಿಕರ್ಣ್ಣ ಉಚ್ಯತೇ ತತಃ ಕರೋsಭವದ್ ಬಲೀ ॥೧೨.೪೩॥

ಸ ಚಿತ್ರಸೇನನಾಮಕಃ ತಥಾsಪರೇ ಚ ರಾಕ್ಷಸಾಃ ।
ಬಭೂವುರುಗ್ರಪೌರುಷಾ ವಿಚಿತ್ರವೀರ್ಯ್ಯಜಾತ್ಮಜಾಃ ॥೧೨.೪೪

ಈರೀತಿ ಹುಟ್ಟಿದ ಇಂದ್ರಜಿತ್ ದುಃಖಶಾಸನನಾಗಿದ್ದ. (ಅವನ ಶಾಸನ ಅಥವಾ ಆಳ್ವಿಕೆ ಅತ್ಯಂತ ದುಃಖದಾಯಕವಾದ ಕಾರಣ  ಆತ ದುಃಶಾಸನ ಎನ್ನುವ ಹೆಸರನ್ನು ಪಡೆದ) . ತದನಂತರ ಅತಿಕಾಯ ಎನ್ನುವ ರಾಕ್ಷಸ  ಹುಟ್ಟಿದ. ಅವನೇ ವಿಕರ್ಣ ಎಂದು  ಹೆಸರಾದ. ಆನಂತರ ಬಲಿಷ್ಠನಾದ  ಖರಾಸುರ ಹುಟ್ಟಿದ.
ಈ ಖರನೇ ಚಿತ್ರಸೇನ ಎನ್ನುವ ಹೆಸರಿನವನಾದ. ಇದೇ ರೀತಿ ಉಳಿದ ಎಲ್ಲಾ ಗಾಂಧಾರಿಯ ಮಕ್ಕಳೂ ಕೂಡಾ ರಾಕ್ಷಸರೇ ಆಗಿದ್ದರು. ವಿಚಿತ್ರವೀರ್ಯನ ಪೌತ್ರನಾದ  ದೃತರಾಷ್ಟ್ರನ ಆತ್ಮಜರಾದ ಅವರು  ಉಗ್ರಪೌರುಷವುಳ್ಳವರಾದರು.
[ಮಹಾಭಾರತದ ಆದಿಪರ್ವದಲ್ಲಿ (೬೩.೫೮) ದುರ್ಯೋಧನನ  ನಾಲ್ಕು ಮಂದಿ ತಮ್ಮಂದಿರರ ಕುರಿತಾದ ವಿವರವನ್ನು ಕಾಣುತ್ತೇವೆ: ಧೃತರಾಷ್ಟ್ರಾತ್ ಪುತ್ರಶತಂ ಬಭೂವ ಗಾಂಧರ್ಯಾಂ ವರದಾನಾದ್  ದ್ವೈಪಾಯನಸ್ಯ ತೇಷಾಂ ಚ ಧಾರ್ತರಾಷ್ಟ್ರಾಣಾಂ ಚತ್ವಾರಃ  ಪ್ರಧಾನಾ ದುರ್ಯೋಧನೋ ದುಃಶಾಸನೋ ವಿಕರ್ಣಶ್ಚಿತ್ರಸೇನಶ್ಚೇತಿ].

ಸಮಸ್ತದೋಷರೂಪಿಣಃ ಶರೀರಿಣೋ ಹಿ ತೇsಭವನ್ ।
ಮೃಷೇತಿ ನಾಮತೋ ಹಿ ಯಾ ಬಭೂವ ದುಃಶಳಾssಸುರೀ ॥೧೨.೪೫

ಅವರೆಲ್ಲರೂ ಕೂಡಾ ಬೇರೆಬೇರೆ ದೋಷ ಮೈದಾಳಿ ಬಂದವರಾಗಿದ್ದರು.  ಈ ರೀತಿ ಗಾಂಧಾರಿಯಲ್ಲಿ ಹುಟ್ಟಿದ ಅವರು ಮನುಷ್ಯ ಶರೀರವುಳ್ಳವರಾದರು. ಸುಳ್ಳಿಗೆ ಅಭಿಮಾನಿನಿಯಾದ ‘ಮೃಷ’  ಎನ್ನುವ ಅಸುರ ಸ್ತ್ರೀ,  ದುಶ್ಶಳಾ ಎನ್ನುವ ಹೆಸರಿನಿಂದ ಹುಟ್ಟಿದಳು.

ಕುಹೂಪ್ರವೇಶಸಂಯುತಾ ಯಯಾssರ್ಜ್ಜುನೇರ್ವಧಾಯ ಹಿ ।
ತಪಃ ಕೃತಂ ತ್ರಿಶೂಲಿನೇ ತತೋ ಹಿ ಸಾsತ್ರ ಜಜ್ಞುಷೀ ॥೧೨.೪೬॥

ದುಶ್ಶಳಾಳಾಗಿ ಹುಟ್ಟಿದ ಮೃಷ ಅಮಾವಾಸ್ಯೆಯ ಅಭಿಮಾನಿಯಾದ    ‘ಕುಹೂ’ ಎನ್ನುವ ದೇವತೆಯ ಪ್ರವೇಶದಿಂದ ಕೂಡಿದವಳಾಗಿದ್ದಳು. ಈ  ಮೃಷ ಎನ್ನುವ ಅಸುರಸ್ತ್ರೀ ಅರ್ಜುನ ಪುತ್ರನ  (ಅಭಿಮನ್ಯುವಿನ) ಕೊಲೆಗಾಗಿ ರುದ್ರನನ್ನು ಕುರಿತು ತಪಸ್ಸು ಮಾಡಲ್ಪಟ್ಟು,  ಆ ಕಾರಣಕ್ಕಾಗಿ ಇಲ್ಲಿ ಹುಟ್ಟಿದ್ದಳು.

ತಯೋದಿತೋ ಹಿ ಸೈನ್ಧವೋ ಬಭೂವ ಕಾರಣಂ ವಧೇ ।
ಸ ಕಾಲಕೇಯದಾನವಸ್ತದರ್ತ್ಥಮಾಸ ಭೂತಳೇ ॥೧೨.೪೭॥

ಮುಂದೆ ದುಶ್ಶಳಾಳಿಂದಲೇ  ಪ್ರಚೋದಿಸಲ್ಪಟ್ಟ ಜಯದ್ರಥನು ಅಭಿಮನ್ಯುವಿನ ವಧೆಗೆ ಕಾರಣನಾಗುತ್ತಾನೆ. ಜಯದ್ರಥ ‘ಕಾಲಕೇಯ’ ಎನ್ನುವ ದೈತ್ಯ. ಅವನೂ ಅಭಿಮನ್ಯುವಿನ ಕೊಲೆಗಾಗಿಯೇ ಭೂಮಿಯಲ್ಲಿ ಹುಟ್ಟಿದ್ದ.

Monday, March 25, 2019

Mahabharata Tatparya Nirnaya Kannada 12.37-12.41


ಸ ದೇವಕಾರ್ಯ್ಯಸಿದ್ಧಯೇ ರರಕ್ಷ ಗರ್ಭಮೀಶ್ವರಃ
ಪರಾಶರಾತ್ಮಜಃ ಪ್ರಭುರ್ವಿಚಿತ್ರವೀರ್ಯ್ಯಜೋದ್ಭವಮ್ ॥೧೨.೩೭॥

ಸರ್ವನಿಯಾಮಕನಾದ ವೇದವ್ಯಾಸರೂಪಿ ಭಗವಂತ ದೇವತಾ ಕಾರ್ಯಸಿದ್ಧಿಗಾಗಿ ವಿಚಿತ್ರವೀರ್ಯನ ಮಗನಾದ ಧೃತರಾಷ್ಟ್ರನಿಂದ ಉಂಟಾದ ಗರ್ಭವನ್ನು ರಕ್ಷಿಸಿದ.

ಕಲಿಃ ಸುಯೋಧನೋsಜನಿ ಪ್ರಭೂತಬಾಹುವೀರ್ಯ್ಯಯುಕ್
ಪ್ರಧಾನವಾಯುಸನ್ನಿಧೇರ್ಬಲಾಧಿಕತ್ವಮಸ್ಯ ತತ್ ॥೧೨.೩೮॥

ಬಹಳ ಬಾಹುವೀರ್ಯದಿಂದ ಕೂಡಿಕೊಂಡು ಕಲಿಯೇ ಸುಯೋಧನನಾಗಿ ಹುಟ್ಟಿದ. ಮುಖ್ಯಪ್ರಾಣನ ಸಾನಿಧ್ಯದೊಂದಿಗೆ ಹುಟ್ಟಿದ ಕಾರಣದಿಂದ  ಅವನಲ್ಲಿ ಬಲಾಧಿಕತ್ಯವಿತ್ತು.

[ಕಲಿಯೇ ಸುಯೋಧನನಾಗಿ ಹುಟ್ಟಿರುವ ಕುರಿತು ಸ್ಪಷ್ಟವಾದ  ವಿವರ ಮಹಾಭಾರತದಲ್ಲೇ ಕಾಣಸಿಗುತ್ತದೆ:  ಆದಿಪರ್ವದಲ್ಲಿ(೬೮.೮೭) ‘ಕಲೇರಂಶಸ್ತು ಸಞ್ಜಜ್ಞೇ ಭುವಿ ದುರ್ಯೋಧನೋ ನೃಪಃ’ ಎಂದರೆ, ಸ್ತ್ರೀಪರ್ವದಲ್ಲಿ(೮.೩೦) ‘ಕಲೇರಂಶಃ ಸಮುತ್ಪನ್ನೋ ಗಾಂಧಾರ್ಯಾ ಜಠರೇ ನೃಪ’  ಎಂದಿದ್ದಾರೆ.  ಆಶ್ರಮವಾಸಿಕ ಪರ್ವದಲ್ಲಿ(೩೩.೧೦) ಹೇಳುವಂತೆ: ‘ಕಲಿಂ ದುರ್ಯೋಧನಂ ವಿದ್ಧಿ ಶಕುನಿಂ ದ್ವಾಪರಂ ನೃಪಂ ದುಃಶಾಸನಾದೀನ್ ವಿದ್ಧಿ ತ್ವಂ ರಾಕ್ಷಸಾನ್  ಶುಭದರ್ಶನೇ’. ಹರಿವಂಶಪರ್ವದಲ್ಲಿ(೫೩.೬೩) ಹೇಳುವಂತೆ: ‘ವಿಗ್ರಹಸ್ಯ ಕಲಿರ್ಮೂಲಂ ಗಾಂಧಾರ್ಯಾಂ ವಿನಿಯುಜ್ಯತಾಂ’. ಹೀಗೆ ಅನೇಕ ಕಡೆ ಕಲಿಯೇ ಸುಯೋಧನನಾಗಿ ಹುಟ್ಟಿದ ಎನ್ನುವುದನ್ನು ಸ್ಪಷ್ಟವಾಗಿ ಹೇಳಿರುವುದನ್ನು ಕಾಣುತ್ತೇವೆ].

ಪುರಾ ಹಿ ಮೇರುಮೂರ್ದ್ಧನಿ ತ್ರಿವಿಷ್ಟಪೌಕಸಾಂ ವಚಃ ।
ವಸುನ್ಧರಾತಳೋದ್ಭವೋನ್ಮುಖಂ ಶ್ರುತಂ ದಿತೇಃಸುತೈಃ ॥೧೨.೩೯

(ರಾಕ್ಷಸರು ಈ ರೀತಿ ಹುಟ್ಟಲು ಕಾರಣವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ:) ಈಹಿಂದೆ ಮೇರು ಪರ್ವತದಲ್ಲಿ ಸೇರಿದ  ದೇವತೆಗಳು  ‘ತಾವೆಲ್ಲರೂ ಭೂಮಿಯಲ್ಲಿ ಅವತಾರ ಮಾಡಬೇಕು’ ಎಂದು ಕೈಗೊಂಡ ತೀರ್ಮಾನದ ಮಾತು ದೈತ್ಯರಿಂದ ಕೇಳಿಸಿಕೊಳ್ಳಲ್ಪಟ್ಟಿತು.

ತತಸ್ತು ತೇ ತ್ರಿಲೋಚನಂ ತಪೋಬಲಾದತೋಷಯನ್ ।
ವೃತಶ್ಚ ದೇವಕಣ್ಟಕೋ ಹ್ಯವಧ್ಯ ಏವ ಸರ್ವತಃ ॥೧೨.೪೦॥


ಈ ಸುದ್ಧಿ ತಿಳಿದ ದೈತ್ಯರು ರುದ್ರನನ್ನು ತಪೋಬಲದಿಂದ ಸಂತೋಷಗೊಳಿಸಿ, ದೇವತೆಗಳಿಗೆ ಕಷ್ಟಕೊಡುವುದಕ್ಕೆ ತಕ್ಕನಾದ ವರವನ್ನು ಕೊಡು ಎಂದು ಕೇಳಿಕೊಂಡರಂತೆ.

ವರಾದುಮಾಪತೇಸ್ತತಃ ಕಲಿಃ ಸ ದೇವಕಣ್ಟಕಃ ।
ಬಭೂವ ವಜ್ರಕಾಯಯುಕ್ ಸುಯೋಧನೋ ಮಹಾಬಲಃ ॥೧೨.೪೧॥

ಹೀಗೆ  ದೇವತೆಗಳಿಗೆ  ಪೀಡೆಯನ್ನು ಕೊಡತಕ್ಕ  ವರವನ್ನು ಉಮಾಪತಿಯಿಂದ ಪಡೆದ  ದೇವಕಂಟಕ ಕಲಿ ಸುಯೋಧನನಾಗಿ ಭೂಮಿಯಲ್ಲಿ ಹುಟ್ಟಿದ. ಅವನು ಮಹಾಬಲಿಷ್ಠ ಹಾಗು ಅಭೇಧ್ಯವಾದ ಶರೀರದಿಂದ ಕೂಡಿದವನಾಗಿದ್ದ.

Thursday, March 21, 2019

Mahabharata Tatparya Nirnaya Kannada 12.31-12.36


ಇತೀರಿತೋsಬ್ರವೀನ್ನೃಪೋ ನ ಧರ್ಮ್ಮತೋ ವಿನಾ ಭುವಃ ।
ನೃಪೋsಭಿರಕ್ಷಿತಾ ಭವೇತ್ ತದಾಹ್ವಯಾsಶು ತಂ ವಿಭುಮ್ ॥೧೨.೩೧

ಈ ರೀತಿಯಾಗಿ ಹೇಳಲ್ಪಟ್ಟ ಪಾಂಡುರಾಜನು ಹೇಳುತ್ತಾನೆ: ‘ಧರ್ಮವಿಲ್ಲದೇ ಭೂಮಿ ವ್ಯವಸ್ಥಿತವಾಗಿ ಇರಲಾರದು. ಯಾವಕಾರಣದಿಂದ ಒಬ್ಬ ರಾಜನು ಧರ್ಮದ ಹೊರತು ಭೂ ರಕ್ಷಕನಾಗಲಾರನೋ, ಆ ಕಾರಣದಿಂದ ಧರ್ಮದೇವತೆಯಾಗಿರುವವನನ್ನೇ ಕರೆ’ ಎಂದು.

ಸ ಧರ್ಮ್ಮಜಃ ಸುಧಾರ್ಮ್ಮಿಕೋ ಭವೇದ್ಧಿ ಸೂನುರುತ್ತಮಃ ।
ಇತೀರಿತೇ ತಯಾ ಯಮಃ ಸಮಾಹುತೋsಗಮದ್ ದ್ರುತಮ್ ॥೧೨.೩೨

‘ಧರ್ಮದಿಂದ ಧಾರ್ಮಿಕನಾದ ಮಗನು ಹುಟ್ಟುತ್ತಾನೆ’ ಎಂದು ಪಾಂಡುರಾಜನು ಹೇಳಲು, ಕುಂತಿಯಿಂದ ಕರೆಯಲ್ಪಟ್ಟ ಯಮನು ಶೀಘ್ರದಲ್ಲಿ ಪ್ರತ್ಯಕ್ಷನಾದನು.

ತತಶ್ಚ ಸದ್ಯ ಏವ ಸಾ ಸುಷಾವ ಪುತ್ರಮುತ್ತಮಮ್ ।
ಯುದಿಷ್ಠಿರಂ ಯಮೋ ಹಿ ಸ ಪ್ರಪೇದ ಆತ್ಮಪುತ್ರತಾಮ್ ॥೧೨.೩೩॥

ಕುಂತೀದೇವಿಯು  ತಕ್ಷಣ ಯಮನಿಂದ ಉತ್ಕೃಷ್ಟನಾದ ಯುದಿಷ್ಠಿರನಾಮಕ ಮಗನನ್ನು ಹೆತ್ತಳು. ಯಾವ ಕಾರಣದಿಂದ ಧರ್ಮರಾಯನಾದ ಯಮನೇ ಯುದಿಷ್ಠಿರನೋ, ಆ ಕಾರಣದಿಂದ ಯಮ ತಾನೇ ಪುತ್ರತ್ವವನ್ನು ಹೊಂದಿದನು. (ಯಮನೇ ಕುಂತಿಯಲ್ಲಿ ಯುದಿಷ್ಠಿರನಾಗಿ ಹುಟ್ಟಿದನು).

ಯಮೇ ಸುತೇ ತು ಕುನ್ತಿತಃ ಪ್ರಜಾತ ಏವ ಸೌಬಲೀ ।
ಅದ̐ಹ್ಯತೇರ್ಷ್ಯಯಾ ಚಿರಂ ಬಭಞ್ಜ ಗರ್ಭಮೇವ ಚ ॥೧೨.೩೪

ಕುಂತಿಯಿಂದ ಯಮನು ಮಗನಾಗಿ ಹುಟ್ಟಿ ಬರಲು, ಗಾಂಧಾರಿಯು ಹೊಟ್ಟೆಕಿಚ್ಚಿನಿಂದ ಸುಟ್ಟು ಹೋದಳು. ಅದರಿಂದ ಬಹುಕಾಲ ಧರಿಸಿದ ಗರ್ಭವನ್ನು ಭಂಗಮಾಡಿಕೊಂಡಳು.

ಸ್ವಗರ್ಭಪಾತನೇ ಕೃತೇ ತಯಾ ಜಗಾಮ ಕೇಶವಃ ।
ಪರಾಶರಾತ್ಮಜೋ ನ್ಯಧಾದ್ ಘಟೇಷು ತಾನ್ ವಿಭಾಗಶಃ ॥೧೨.೩೫॥

ಗಾಂಧಾರಿ ತನ್ನ ಗರ್ಭನಾಶ ಮಾಡಿಕೊಳ್ಳುತ್ತಿರಲು ವೇದವ್ಯಾಸರೂಪಿಯಾದ ಕೇಶವ ಓಡಿಬಂದು, ಆ ಗರ್ಭದ ತುಣುಕುಗಳನ್ನು ನೂರಾ ಒಂದು ವಿಭಾಗ ಮಾಡಿ, ಮಡಿಕೆಗಳಲ್ಲಿ ಇಟ್ಟರು.

ಶತಾತ್ಮನಾ ವಿಭೇದಿತಾಃ ಶತಂ ಸುಯೋಧನಾದಯಃ ।
ಬಭೂವುರನ್ವಹಂ ತತಃ ಶತೋತ್ತರಾ ಚ ದುಶ್ಶಳಾ೧೨.೩೬

ನೂರರ ಸಂಖ್ಯೆಯಲ್ಲಿ ವಿಭಾಗಿಸಲ್ಪಟ್ಟ ಪಿಂಡಗಳಿಂದ ಸುಯೋಧನಾದಿಗಳು ಹುಟ್ಟಿದರೆ,  ನೂರು ಆದ ಮೇಲೆ ದುಶ್ಶಳಾ ನಾಮಕ ಕನ್ನಿಕೆಯು ಹುಟ್ಟಿದಳು.

Tuesday, March 19, 2019

Mahabharata Tatparya Nirnaya Kannada 12.24-12.30


(‘ನಿನಗಿಂತಲೂ ಹಿರಿಯನಾದ ಯಾವ ದೇವತೆಯನ್ನು ಆಹ್ವಾನಿಸಲಿ’ ಎಂದು ಕುಂತಿ ಏಕೆ ಕೇಳಿರುವುದು ಎನ್ನುವುದನ್ನೂ ಆಚಾರ್ಯರು ಇಲ್ಲಿ ವಿವರಿಸಿದ್ದಾರೆ:)

ವರಂ ಸಮಾಶ್ರಿತಾ ಪತಿಂ ವ್ರಜೇತ ಯಾ ತತೋsಧಮಮ್ 
ನ ಕಾಚಿದಸ್ತಿ ನಿಷ್ಕೃತಿರ್ನ್ನ ಭರ್ತ್ತೃಲೋಕಮೃಚ್ಛತಿ ॥೧೨.೨೪

ಯಾರು ನಿಯೋಗ ಪದ್ಧತಿಯಲ್ಲಿ ಉತ್ತಮನಾದವನನ್ನು ಆರಿಸುತ್ತಾಳೋ, ಅವಳಿಗೆ ಮರಣಾನಂತರ ಪತಿಲೋಕ ಪ್ರಾಪ್ತವಾಗುತ್ತದೆ. ಒಂದುವೇಳೆ ಪತಿಗಿಂತ ಕೆಳಗಿನವನನ್ನು ಸೇರಿದರೆ ಅದಕ್ಕೆ ಪ್ರಾಯಶ್ಚಿತ್ತವೇ ಇಲ್ಲ. ಅವಳು ಗಂಡ ಹೊಂದುವ ಲೋಕವನ್ನು ಹೊಂದುವುದಿಲ್ಲ.

ಕೃತೇ ಪುರಾ ಸುರಾಸ್ತಥಾ ಸುರಾಙ್ಗನಾಶ್ಚ ಕೇವಲಮ್ ।
ನಿಮಿತ್ತತೋsಪಿ ತಾಃ ಕ್ವಚಿನ್ನ ತಾನ್ ವಿಹಾಯ ಮೇನಿರೇ ॥೧೨.೨೫


ಮನೋವಚಃ ಶರೀರತೋ ಯತೋ ಹಿ ತಾಃ ಪತಿವ್ರತಾಃ ।
ಅನಾದಿಕಾಲತೋsಭವಂಸ್ತತಃ ಸಭರ್ತ್ತೃಕಾಃ ಸದಾ ॥೧೨.೨೬

ಸ್ವಭರ್ತ್ತೃಭಿರ್ವಿಮುಕ್ತಿಗಾಃ ಸಹೈವ ತಾ ಭವನ್ತಿ ಹಿ ।
ಕೃತಾನ್ತಮಾಪ್ಯ ಚಾಪ್ಸರಃಸ್ತ್ರಿಯೋ ಬಭೂವುರೂರ್ಜ್ಜಿತಾಃ ॥೧೨.೨೭

ಅನಾವೃತಾಶ್ಚ ತಾಸ್ತಥಾ ಯಥೇಷ್ಟಭರ್ತ್ತೃಕಾಃ ಸದಾ ।
ಅತಸ್ತು ತಾ ನ ಭರ್ತ್ತೃಭಿರ್ವಿಮುಕ್ತಿಮಾಪುರುತ್ತಮಾಮ್ ॥೧೨.೨೮ ॥

ಸುರಸ್ತ್ರಿಯೋsತಿಕಾರಣೈರ್ಯ್ಯದಾsನ್ಯಥಾ ಸ್ಥಿತಾಸ್ತದಾ
ದುರನ್ವಯಾತ್ ಸುದುಃಸಹಾ ವಿಪತ್ ತತೋ ಭವಿಷ್ಯತಿ ॥೧೨.೨೯॥

ಅಯುಕ್ತಮುಕ್ತವಾಂಸ್ತತೋ ಭವಾಂಸ್ತಥಾsಪಿ ತೇ ವಚಃ ।
ಅಲಙ್ಘ್ಯಮೇವ ಮೇ ತತೋ ವದಸ್ವ ಪುತ್ರದಂ ಸುರಮ್ ೧೨.೩೦

ಕೃತಯುಗದಲ್ಲಿ ಪುರುಷ ದೇವತೆ  ಹಾಗು ಸ್ತ್ರೀ ದೇವತೆಗಳಿಬ್ಬರೂ, ಯಾವುದೇ ಒಂದು ಬಲಿಷ್ಠವಾದ ನಿಮಿತ್ತವಿದ್ದರೂ ಕೂಡಾ, ನಿಯತ ಪತಿ-ಪತ್ನಿ ಸಂಬಂಧದಿಂದಲೇ ಕೂಡಿದವರಾಗಿರುತ್ತಿದ್ದರು. (ಅವತಾರದಲ್ಲೂ ಕೂಡಾ).
ಮನಸ್ಸು, ಮಾತು ಮತ್ತು ದೇಹ ಈ ಮೂರನ್ನೂ ಸ್ತ್ರೀಯರು  ಸದಾ ಒಬ್ಬನಿಗೆ ಮಾತ್ರ ಮೀಸಲಿಟ್ಟವರಾಗಿರುತ್ತಿದ್ದರು. ಆ ಕಾರಣದಿಂದ ಅವರನ್ನು ಪತಿವ್ರತೆಯರು ಎಂದು ಕರೆಯುತ್ತಿದ್ದರು. ಇದು ಅನಾದಿಕಾಲದ ನಿಯಮವಾಗಿರುವುದರಿಂದ ಅವರು ಎಂದೆಂದಿಗೂ ಸಭರ್ತೃಕರಾಗಿದ್ದರು(ಕೇವಲ ತನ್ನ ಗಂಡನೊಡನೆ ಮಾತ್ರ ಕೂಡಿದವರಾಗಿರುತ್ತಿದ್ದರು). ಇದು ಅನಾದಿಕಾಲದ ದೇವತೆಗಳ ಸಂಬಂಧ. ಇವರು ಮೋಕ್ಷವನ್ನೂ ಕೂಡಾ ಜೊತೆಯಾಗಿಯೇ ಪಡೆಯುತ್ತಿದ್ದರು. (ಪತಿ ಸಹಿತರಾಗಿಯೇ ಪತ್ನಿಯರು ವಿಮುಕ್ತರಾಗುತ್ತಿದ್ದರು).
ತದನಂತರ, ಕೃತಯುಗ ಪೂರೈಸುತ್ತಿರಲು, ಅಪ್ಸರ ಸ್ತ್ರೀಯರು ಬಹಳ ಸಂಖ್ಯೆಯಲ್ಲಿ ಉಂಟಾದರು. (ಅಪ್ಸರೆಯರಿಗೆ ನಿಯತ ಪತಿ ಅಥವಾ ಪುರುಷ ಎನ್ನುವ ನಿಯಮವಿಲ್ಲ.  ದೇವರ ವಿಶೇಷವಾದ ವರ ಅವರಿಗಿತ್ತು). ಅವರು ಯಾರೋ ಒಬ್ಬರಿಗೆ ಕಟ್ಟು ಬಿದ್ದವರಲ್ಲ. ಅವರು ಯಥೇಷ್ಟಭರ್ತೃಕರು. ಅಂದರೆ ತಮಗಿಷ್ಟಬಂದವರೊಂದಿಗೆ ಅವರು ಇರಬಹುದಿತ್ತು. ಆದ್ದರಿಂದಲೇ ಅವರಿಗೆ ಪತಿಯೊಂದಿಗೆ ಮುಕ್ತಿ ಎನ್ನುವ ನಿಯಮವಿರಲಿಲ್ಲ.
ದೇವತಾ ಸ್ತ್ರೀಯರಿಗೆ ಕೆಲವೊಮ್ಮೆ ಪ್ರಬಲವಾದ ಕಾರಣಗಳಿಂದ (ಶಾಪ, ಯೋಗ್ಯತೆಗೆ ಮೀರಿ ಪುಣ್ಯವಾಗಿದ್ದರೆ ಅದನ್ನು ಹ್ರಾಸ ಮಾಡಲು, ಪ್ರಬಲವಾದ ಪ್ರಾರಬ್ಧ, ಇತ್ಯಾದಿ ಕಾರಣಗಳಿಂದ) ತಮ್ಮ ನಿಯತ ಪತಿಯನ್ನು ಬಿಟ್ಟು ಬೇರೆ ಗಂಡಿನ ಜೊತೆಗೆ ಪತ್ನಿ ಭಾವವನ್ನು ತಾಳುವ ಪ್ರಸಂಗ ಒದಗಿಬಂದರೆ, ಆಗ  ಅಲ್ಲಿ ಬಹಳ ಕಷ್ಟವಾಗುತ್ತದೆ. ಅಲ್ಲಿ ಹುಟ್ಟುವ ಮಕ್ಕಳಿಂದಲೇ ಸಮಸ್ಯೆ ಬರುತ್ತದೆ. ತಡೆಯಲಾಗದಂತಹ ಕೆಟ್ಟ ಪ್ರಸಂಗ ಒದಗಿ ಬರುತ್ತದೆ.
ಈ ಎಲ್ಲಾ ಕಾರಣದಿಂದ ‘ನೀನು(ಪಾಂಡು) ಯುಕ್ತವಲ್ಲದ ಮಾತನ್ನು ಹೇಳಿರುವೆ’ ಎನ್ನುತ್ತಾಳೆ ಕುಂತಿ. ಆದರೂ ಕೂಡಾ, ಪತಿಯ ಮಾತನ್ನು ಮೀರಲು ಸಾದ್ಯವಿಲ್ಲದೇ ಇರುವುದರಿಂದ,  ‘ಮಗನನ್ನು ಕೊಡುವ ಒಬ್ಬ ದೇವತೆಯನ್ನು ನೀನೇ ಹೇಳು’  ಎಂದು ಕುಂತಿ ಪಾಂಡುವನ್ನು ಕೇಳಿಕೊಳ್ಳುತ್ತಾಳೆ.

Sunday, March 17, 2019

Mahabharata Tatparya Nirnaya Kannada 12.19-12.23


ತದಾ ಕಲಿಶ್ಚ ರಾಕ್ಷಸಾ ಬಭೂವುರಿನ್ದ್ರಜಿನ್ಮುಖಾಃ ।
ವಿಚಿತ್ರವೀರ್ಯ್ಯನನ್ದನಪ್ರಿಯೋದರೇ ಹಿ ಗರ್ಭಗಾಃ ॥ ೧೨.೧೯  
         
ಇದೇ ಕಾಲದಲ್ಲಿ ಕಲಿ ಮತ್ತು ಇಂದ್ರಜಿತ್ ಮೊದಲಾದ ರಾಕ್ಷಸರು ವಿಚಿತ್ರವೀರ್ಯನ ಮಗನಾಗಿರುವ  ಧೃತರಾಷ್ಟ್ರನ ಹೆಂಡತಿಯಾದ ಗಾಂಧಾರಿಯ ಗರ್ಭವನ್ನು ಸೇರಿಕೊಂಡರು.

ತದಸ್ಯ ಸೋsನುಜೋsಶೃಣೋನ್ಮುನೀನ್ದ್ರದೂಷಿತಂ ಚ ತತ್ ।
ವಿಚಾರ್ಯ್ಯ ತು ಪ್ರಿಯಾಮಿದಂ ಜಗಾದ ವಾಸುದೇವಧೀಃ ೧೨.೨೦

ಋಷಿಶ್ರೇಷ್ಠರಿಂದ ಗಾಂಧಾರಿಯ ಗರ್ಭಪ್ರಾಪ್ತಿಯ ವಿಷಯವನ್ನು ತಿಳಿದ ಧೃತರಾಷ್ಟ್ರನ ತಮ್ಮನಾಗಿರುವ, ಪರಮಾತ್ಮನಲ್ಲಿ ನೆಟ್ಟ ಬುದ್ಧಿಯುಳ್ಳ ಪಾಂಡುವು, ತಾನು  ಮುಂದೇನು ಮಾಡಬೇಕು ಎಂದು ಚಿಂತಿಸಿ, ಕುಂತಿಯನ್ನು ಕುರಿತು ಈ ರೀತಿ ಹೇಳಿದನು.

ಯ ಏವ ಮದ್ಗುಣಾಧಿಕಸ್ತತಃ ಸುತಂ ಸಮಾಪ್ನುಹಿ ।
ಸುತಂ ವಿನಾ ನ ನೋ ಗತಿಂ ಶುಭಾಂ ವದನ್ತಿ ಸಾಧವಃ ॥ ೧೨.೨೧       

‘ಯಾರು ಗುಣದಿಂದ ಜ್ಯೇಷ್ಠನಾಗಿದ್ದಾನೋ, ನನಗಿಂತ ಹಿರಿಯನಾಗಿದ್ದಾನೋ, ಅಂಥವರಿಂದ ನೀನು ಪುತ್ರನನ್ನು ಪಡೆ. ನಮಗೆ ಮಕ್ಕಳಿಲ್ಲದೇ ಮುಂದೆ ಒಳ್ಳೆಯ ಗತಿಯನ್ನು ಸಾದುಗಳು ಹೇಳುತ್ತಿಲ್ಲಾ’

ತದಸ್ಯ ಕೃಚ್ಛ್ರತೋ ವಚಃ ಪೃಥಾsಗ್ರಹೀಜ್ಜಗಾದ ಚ 
ಮಮಾಸ್ತಿ ದೇವವಶ್ಯದೋ ಮನೂತ್ತಮಃ ಸುತಾಪ್ತಿದಃ  ॥ ೧೨.೨೨

ಪಾಂಡುವಿನ  ಈರೀತಿಯಾದ ಮಾತನ್ನು ಕುಂತಿಯು ಬಹಳ ಕಷ್ಟದಿಂದ ಸ್ವೀಕರಿಸಿದಳು ಮತ್ತು ಹೇಳಿದಳೂ ಕೂಡಾ. ‘ಪುತ್ರಪ್ರಾಪ್ತಿಗಾಗಿ  ದೇವತೆಗಳನ್ನು ವಶಮಾಡಿಕೊಳ್ಳುವ ಉತ್ಕೃಷ್ಟವಾದ ಮಂತ್ರ ಪ್ರಾಪ್ತಿ ನನಗಿದೆ’ ಎಂದು.

ನ ತೇ ಸುರಾನೃತೇ ಸಮಃ ಸುರೇಷು ಕೇಚಿದೇವ ಚ ।
ಅತಸ್ತವಾಧಿಕಂ ಸುರಂ ಕಮಾಹ್ವಯೇ ತ್ವದಾಜ್ಞಯಾ ೧೨.೨೩

ಮುಂದುವರಿದು ಕುಂತಿ ಹೇಳುತ್ತಾಳೆ: ನಿನಗೆ ದೇವತೆಗಳನ್ನು ಬಿಟ್ಟು ಮನುಷ್ಯರಲ್ಲಿ ಯಾರೂ ಸಮರಿಲ್ಲ. ದೇವತೆಗಳಲ್ಲಿಯೂ ಕೂಡಾ ಕೆಲವರು ಮಾತ್ರ ಸಮಾನರು. ನಿನ್ನಿಂದ ಅಧಿಕರಾದವರು ದೇವತೆಗಳಲ್ಲಿ  ಇದ್ದೇ ಇದ್ದಾರೆ. ಈ ಕಾರಣದಿಂದ, ನಿನ್ನ ಆಜ್ಞೆಯಿಂದ, ನಿನಗಿಂತಲೂ ಹಿರಿಯನಾದ ಯಾವ ದೇವತೆಯನ್ನು ಆಹ್ವಾನಿಸಲಿ? 

Tuesday, March 12, 2019

Mahabharata Tatparya Nirnaya Kannada 12.15-12.18


(ಕಾಲಾನುಕ್ರಮಣಿಯಂತೆ ಧರ್ಮರಾಜ ಕೃಷ್ಣಾವತಾರಕ್ಕೂ ಮೊದಲು ಹುಟ್ಟಿರುವುದರಿಂದ,  ಶ್ರೀಕೃಷ್ಣನ ಕಥೆಯನ್ನು ಮಧ್ಯದಲ್ಲಿ ಸ್ಥಾಪಿಸಿ, ಧರ್ಮರಾಜನ ಉತ್ಪತ್ತಿಯ ಕಥೆಯನ್ನು ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ:)

ತದಾ ಮುನೀನ್ದ್ರಸಂಯುತಃ ಸದೋ ವಿಧಾತುರುತ್ತಮಮ್ ।
ಸ ಪಾಣ್ಡುರಾಪ್ತುಮೈಚ್ಛತ ನ್ಯವಾರಯಂಶ್ಚ ತೇ ತದಾ ॥೧೨.೧೫

ದೇವಕೀದೇವಿಯು ತನ್ನ ಆರು ಮಂದಿ ಮಕ್ಕಳನ್ನು  ಕಳೆದುಕೊಂಡು ಸಮಸ್ಯೆಪಡುತ್ತಿರುವ ಸಮಯದಲ್ಲಿ, ಅತ್ತ ಕಾಡಿನಲ್ಲಿರುವ ಪಾಂಡುವು ಮುನಿಗಳಿಂದ ಕೂಡಿಕೊಂಡು ಬ್ರಹ್ಮದೇವರ ಉತ್ಕೃಷ್ಟವಾದ ಮನೆಯನ್ನು(ಸತ್ಯಲೋಕವನ್ನು) ಹೊಂದಲು ಬಯಸಿದನು. ಆದರೆ ಅವನನ್ನು ಮುನಿಗಳು  ತಡೆದರು.

ಯದರ್ತ್ಥಮೇವ ಜಾಯತೇ ಪುಮಾನ್ ಹಿ ತಸ್ಯ ಸೋsಕೃತೇಃ ।
ಶುಭಾಂ ಗತಿಂ ನತು ವ್ರಜೇದ್ ದ್ಧ್ರುವಂ ತತೋ ನ್ಯವಾರಯನ್ ॥೧೨.೧೬

ಪ್ರಧಾನದೇವತಾಜನೇ ನಿಯೋಕ್ತುಮಾತ್ಮನಃ ಪ್ರಿಯಾಮ್ ।
ಬಭೂವ ಪಾಣ್ಡುರೇಷ ತದ್ ವಿನಾ ನ ತಸ್ಯ ಸದ್ಗತಿಃ               ॥೧೨.೧೭॥

ಒಬ್ಬ ಪುರುಷ ಯಾವ ಕಾರ್ಯಸಾಧನೆಗೆಂದು ಹುಟ್ಟಿರುತ್ತಾನೋ, ಅದನ್ನು ಮಾಡದೇ ಸದ್ಗತಿಯನ್ನು ಪಡೆಯಲಾರ. ಪ್ರಧಾನರಾದ ದೇವತೆಗಳಲ್ಲಿ ತನ್ನ ಹೆಂಡತಿಯಾದ ಕುಂತೀದೇವಿಯನ್ನು ನಿಯೋಗಿಸಬೇಕೆಂದೇ ಪಾಂಡು ಹುಟ್ಟಿರುವುದು. ಈ ಕಾರ್ಯ ನೆರವೇರದೇ ಅವನಿಗೆ ಸದ್ಗತಿ ಇಲ್ಲಾ. ಈ ಕಾರಣದಿಂದ ಮುನಿಗಳು ಅವನನ್ನು ತಡೆದರು.

ಅತೋsನ್ಯಥಾ ಸುತಾನೃತೇ ವ್ರಜನ್ತಿ ಸದ್ಗತಿಂ ನರಾಃ ।
ಯಥೈವ ಧರ್ಮ್ಮಭೂಷಣೋ ಜಗಾಮ ಸನ್ಧ್ಯಕಾಸುತಃ            ॥೧೨.೧೮

ಯಾವ ಕಾರಣಕ್ಕಾಗಿ ಹುಟ್ಟಿದ್ದನೋ ಆ ಕಾರ್ಯವನ್ನು ಮಾಡದೇ ಸದ್ಗತಿ ಇಲ್ಲಾ ಎನ್ನುವ ಕಾರಣಕ್ಕಾಗಿ ಮುನಿಗಳು ಪಾಂಡುವನ್ನು ತಡೆದರೇ ವಿನಃ, ಬೇರೆ ರೀತಿಯಾಗಿ ಅಲ್ಲ.  (ಅಂದರೆ ‘ಮಕ್ಕಳಿಲ್ಲದೇ ಸದ್ಗತಿ ಇಲ್ಲಾ’ ಎನ್ನುವ ಕಾರಣಕ್ಕಾಗಿ ಅಲ್ಲಾ. ಏಕೆಂದರೆ ಮಕ್ಕಳಿಲ್ಲದವರಿಗೂ ಸದ್ಗತಿ ಇದೆ. ಇದಕ್ಕೆ ಉದಾಹರಣೆಯಾಗಿ ಆಚಾರ್ಯರು ಧರ್ಮಭೂಷಣನ ಕಥೆಯನ್ನು ಇಲ್ಲಿ ಉಲ್ಲೇಖಿಸಿದ್ದಾರೆ).  ಸಂಧ್ಯಾದೇವಿ ಮತ್ತು ರುಗ್ಮಾಂಗದನಮಗನಾದ  ಧರ್ಮಭೂಷಣ ಏಕಾದಶಿ ವ್ರತದ ಮಹತ್ವವನ್ನು ಜನರಲ್ಲಿ ಹರಡಲಿಕ್ಕಾಗಿಯೇ ಹುಟ್ಟಿದ್ದ. ಅದನ್ನು ಮಾಡಿ ಅವನು ಮುಕ್ತಿಯನ್ನು ಪಡೆದ.  ಅದಿಲ್ಲದೇ ಅವನಿಗೆ ಮುಕ್ತಿ ಸಿಗುವಂತಿರಲಿಲ್ಲಾ. ಇದೇ ರೀತಿ,  ಪಾಂಡು ಹುಟ್ಟಿರುವುದೇ ಪ್ರಧಾನರಾದ ದೇವತೆಗಳಲ್ಲಿ ತನ್ನ ಹೆಂಡತಿಯಿಂದ ಮಕ್ಕಳನ್ನು ನಿಯೋಗ ಪದ್ದತಿಯಲ್ಲಿ ಪಡೆಯಲು. ಹಾಗಾಗಿ ಆ ಕಾರ್ಯವನ್ನು ಆತ ಪೂರೈಸಿಯೇ ಸದ್ಗತಿಯನ್ನು ಪಡೆಯಬೇಕಾಗಿತ್ತು.