(ಕಾಲಾನುಕ್ರಮಣಿಯಂತೆ
ಧರ್ಮರಾಜ ಕೃಷ್ಣಾವತಾರಕ್ಕೂ ಮೊದಲು ಹುಟ್ಟಿರುವುದರಿಂದ,
ಶ್ರೀಕೃಷ್ಣನ ಕಥೆಯನ್ನು ಮಧ್ಯದಲ್ಲಿ ಸ್ಥಾಪಿಸಿ, ಧರ್ಮರಾಜನ ಉತ್ಪತ್ತಿಯ ಕಥೆಯನ್ನು
ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ:)
ತದಾ ಮುನೀನ್ದ್ರಸಂಯುತಃ ಸದೋ ವಿಧಾತುರುತ್ತಮಮ್ ।
ಸ ಪಾಣ್ಡುರಾಪ್ತುಮೈಚ್ಛತ ನ್ಯವಾರಯಂಶ್ಚ ತೇ ತದಾ ॥೧೨.೧೫॥
ದೇವಕೀದೇವಿಯು ತನ್ನ ಆರು
ಮಂದಿ ಮಕ್ಕಳನ್ನು ಕಳೆದುಕೊಂಡು
ಸಮಸ್ಯೆಪಡುತ್ತಿರುವ ಸಮಯದಲ್ಲಿ, ಅತ್ತ ಕಾಡಿನಲ್ಲಿರುವ ಪಾಂಡುವು ಮುನಿಗಳಿಂದ ಕೂಡಿಕೊಂಡು
ಬ್ರಹ್ಮದೇವರ ಉತ್ಕೃಷ್ಟವಾದ ಮನೆಯನ್ನು(ಸತ್ಯಲೋಕವನ್ನು) ಹೊಂದಲು ಬಯಸಿದನು. ಆದರೆ ಅವನನ್ನು
ಮುನಿಗಳು ತಡೆದರು.
ಯದರ್ತ್ಥಮೇವ ಜಾಯತೇ ಪುಮಾನ್ ಹಿ ತಸ್ಯ ಸೋsಕೃತೇಃ ।
ಶುಭಾಂ ಗತಿಂ ನತು ವ್ರಜೇದ್ ದ್ಧ್ರುವಂ ತತೋ ನ್ಯವಾರಯನ್ ॥೧೨.೧೬॥
ಪ್ರಧಾನದೇವತಾಜನೇ ನಿಯೋಕ್ತುಮಾತ್ಮನಃ ಪ್ರಿಯಾಮ್ ।
ಬಭೂವ ಪಾಣ್ಡುರೇಷ ತದ್ ವಿನಾ ನ ತಸ್ಯ ಸದ್ಗತಿಃ ॥೧೨.೧೭॥
ಒಬ್ಬ ಪುರುಷ ಯಾವ
ಕಾರ್ಯಸಾಧನೆಗೆಂದು ಹುಟ್ಟಿರುತ್ತಾನೋ, ಅದನ್ನು ಮಾಡದೇ ಸದ್ಗತಿಯನ್ನು ಪಡೆಯಲಾರ. ಪ್ರಧಾನರಾದ
ದೇವತೆಗಳಲ್ಲಿ ತನ್ನ ಹೆಂಡತಿಯಾದ ಕುಂತೀದೇವಿಯನ್ನು ನಿಯೋಗಿಸಬೇಕೆಂದೇ ಪಾಂಡು ಹುಟ್ಟಿರುವುದು. ಈ
ಕಾರ್ಯ ನೆರವೇರದೇ ಅವನಿಗೆ ಸದ್ಗತಿ ಇಲ್ಲಾ. ಈ ಕಾರಣದಿಂದ ಮುನಿಗಳು ಅವನನ್ನು ತಡೆದರು.
ಅತೋsನ್ಯಥಾ ಸುತಾನೃತೇ
ವ್ರಜನ್ತಿ ಸದ್ಗತಿಂ ನರಾಃ ।
ಯಥೈವ ಧರ್ಮ್ಮಭೂಷಣೋ ಜಗಾಮ ಸನ್ಧ್ಯಕಾಸುತಃ ॥೧೨.೧೮॥
ಯಾವ ಕಾರಣಕ್ಕಾಗಿ ಹುಟ್ಟಿದ್ದನೋ
ಆ ಕಾರ್ಯವನ್ನು ಮಾಡದೇ ಸದ್ಗತಿ ಇಲ್ಲಾ ಎನ್ನುವ ಕಾರಣಕ್ಕಾಗಿ ಮುನಿಗಳು ಪಾಂಡುವನ್ನು ತಡೆದರೇ
ವಿನಃ, ಬೇರೆ ರೀತಿಯಾಗಿ ಅಲ್ಲ. (ಅಂದರೆ ‘ಮಕ್ಕಳಿಲ್ಲದೇ ಸದ್ಗತಿ ಇಲ್ಲಾ’ ಎನ್ನುವ ಕಾರಣಕ್ಕಾಗಿ ಅಲ್ಲಾ.
ಏಕೆಂದರೆ ಮಕ್ಕಳಿಲ್ಲದವರಿಗೂ ಸದ್ಗತಿ ಇದೆ. ಇದಕ್ಕೆ ಉದಾಹರಣೆಯಾಗಿ ಆಚಾರ್ಯರು ಧರ್ಮಭೂಷಣನ
ಕಥೆಯನ್ನು ಇಲ್ಲಿ ಉಲ್ಲೇಖಿಸಿದ್ದಾರೆ). ಸಂಧ್ಯಾದೇವಿ ಮತ್ತು ರುಗ್ಮಾಂಗದನಮಗನಾದ ಧರ್ಮಭೂಷಣ ಏಕಾದಶಿ ವ್ರತದ ಮಹತ್ವವನ್ನು ಜನರಲ್ಲಿ
ಹರಡಲಿಕ್ಕಾಗಿಯೇ ಹುಟ್ಟಿದ್ದ. ಅದನ್ನು ಮಾಡಿ ಅವನು ಮುಕ್ತಿಯನ್ನು ಪಡೆದ. ಅದಿಲ್ಲದೇ ಅವನಿಗೆ ಮುಕ್ತಿ ಸಿಗುವಂತಿರಲಿಲ್ಲಾ. ಇದೇ
ರೀತಿ, ಪಾಂಡು ಹುಟ್ಟಿರುವುದೇ ಪ್ರಧಾನರಾದ
ದೇವತೆಗಳಲ್ಲಿ ತನ್ನ ಹೆಂಡತಿಯಿಂದ ಮಕ್ಕಳನ್ನು ನಿಯೋಗ ಪದ್ದತಿಯಲ್ಲಿ ಪಡೆಯಲು. ಹಾಗಾಗಿ ಆ
ಕಾರ್ಯವನ್ನು ಆತ ಪೂರೈಸಿಯೇ ಸದ್ಗತಿಯನ್ನು ಪಡೆಯಬೇಕಾಗಿತ್ತು.
No comments:
Post a Comment