ಸ ದೇವಕಾರ್ಯ್ಯಸಿದ್ಧಯೇ ರರಕ್ಷ ಗರ್ಭಮೀಶ್ವರಃ ।
ಪರಾಶರಾತ್ಮಜಃ ಪ್ರಭುರ್ವಿಚಿತ್ರವೀರ್ಯ್ಯಜೋದ್ಭವಮ್ ॥೧೨.೩೭॥
ಸರ್ವನಿಯಾಮಕನಾದ
ವೇದವ್ಯಾಸರೂಪಿ ಭಗವಂತ ದೇವತಾ ಕಾರ್ಯಸಿದ್ಧಿಗಾಗಿ ವಿಚಿತ್ರವೀರ್ಯನ ಮಗನಾದ ಧೃತರಾಷ್ಟ್ರನಿಂದ
ಉಂಟಾದ ಗರ್ಭವನ್ನು ರಕ್ಷಿಸಿದ.
ಕಲಿಃ ಸುಯೋಧನೋsಜನಿ ಪ್ರಭೂತಬಾಹುವೀರ್ಯ್ಯಯುಕ್
।
ಪ್ರಧಾನವಾಯುಸನ್ನಿಧೇರ್ಬಲಾಧಿಕತ್ವಮಸ್ಯ ತತ್ ॥೧೨.೩೮॥
ಬಹಳ ಬಾಹುವೀರ್ಯದಿಂದ
ಕೂಡಿಕೊಂಡು ಕಲಿಯೇ ಸುಯೋಧನನಾಗಿ ಹುಟ್ಟಿದ. ಮುಖ್ಯಪ್ರಾಣನ ಸಾನಿಧ್ಯದೊಂದಿಗೆ ಹುಟ್ಟಿದ ಕಾರಣದಿಂದ ಅವನಲ್ಲಿ ಬಲಾಧಿಕತ್ಯವಿತ್ತು.
[ಕಲಿಯೇ ಸುಯೋಧನನಾಗಿ
ಹುಟ್ಟಿರುವ ಕುರಿತು ಸ್ಪಷ್ಟವಾದ ವಿವರ
ಮಹಾಭಾರತದಲ್ಲೇ ಕಾಣಸಿಗುತ್ತದೆ: ಆದಿಪರ್ವದಲ್ಲಿ(೬೮.೮೭) ‘ಕಲೇರಂಶಸ್ತು ಸಞ್ಜಜ್ಞೇ
ಭುವಿ ದುರ್ಯೋಧನೋ ನೃಪಃ’ ಎಂದರೆ, ಸ್ತ್ರೀಪರ್ವದಲ್ಲಿ(೮.೩೦) ‘ಕಲೇರಂಶಃ ಸಮುತ್ಪನ್ನೋ
ಗಾಂಧಾರ್ಯಾ ಜಠರೇ ನೃಪ’ ಎಂದಿದ್ದಾರೆ. ಆಶ್ರಮವಾಸಿಕ ಪರ್ವದಲ್ಲಿ(೩೩.೧೦) ಹೇಳುವಂತೆ: ‘ಕಲಿಂ
ದುರ್ಯೋಧನಂ ವಿದ್ಧಿ ಶಕುನಿಂ ದ್ವಾಪರಂ ನೃಪಂ । ದುಃಶಾಸನಾದೀನ್ ವಿದ್ಧಿ ತ್ವಂ ರಾಕ್ಷಸಾನ್ ಶುಭದರ್ಶನೇ’. ಹರಿವಂಶಪರ್ವದಲ್ಲಿ(೫೩.೬೩)
ಹೇಳುವಂತೆ: ‘ವಿಗ್ರಹಸ್ಯ ಕಲಿರ್ಮೂಲಂ ಗಾಂಧಾರ್ಯಾಂ ವಿನಿಯುಜ್ಯತಾಂ’. ಹೀಗೆ ಅನೇಕ ಕಡೆ ಕಲಿಯೇ
ಸುಯೋಧನನಾಗಿ ಹುಟ್ಟಿದ ಎನ್ನುವುದನ್ನು ಸ್ಪಷ್ಟವಾಗಿ ಹೇಳಿರುವುದನ್ನು ಕಾಣುತ್ತೇವೆ].
ಪುರಾ ಹಿ ಮೇರುಮೂರ್ದ್ಧನಿ ತ್ರಿವಿಷ್ಟಪೌಕಸಾಂ ವಚಃ ।
ವಸುನ್ಧರಾತಳೋದ್ಭವೋನ್ಮುಖಂ ಶ್ರುತಂ ದಿತೇಃಸುತೈಃ ॥೧೨.೩೯॥
(ರಾಕ್ಷಸರು ಈ ರೀತಿ ಹುಟ್ಟಲು
ಕಾರಣವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ:) ಈಹಿಂದೆ ಮೇರು ಪರ್ವತದಲ್ಲಿ ಸೇರಿದ ದೇವತೆಗಳು ‘ತಾವೆಲ್ಲರೂ ಭೂಮಿಯಲ್ಲಿ ಅವತಾರ ಮಾಡಬೇಕು’ ಎಂದು ಕೈಗೊಂಡ
ತೀರ್ಮಾನದ ಮಾತು ದೈತ್ಯರಿಂದ ಕೇಳಿಸಿಕೊಳ್ಳಲ್ಪಟ್ಟಿತು.
ತತಸ್ತು ತೇ ತ್ರಿಲೋಚನಂ ತಪೋಬಲಾದತೋಷಯನ್ ।
ವೃತಶ್ಚ ದೇವಕಣ್ಟಕೋ ಹ್ಯವಧ್ಯ ಏವ ಸರ್ವತಃ ॥೧೨.೪೦॥
ಈ ಸುದ್ಧಿ ತಿಳಿದ ದೈತ್ಯರು
ರುದ್ರನನ್ನು ತಪೋಬಲದಿಂದ ಸಂತೋಷಗೊಳಿಸಿ, ದೇವತೆಗಳಿಗೆ ಕಷ್ಟಕೊಡುವುದಕ್ಕೆ ತಕ್ಕನಾದ ವರವನ್ನು
ಕೊಡು ಎಂದು ಕೇಳಿಕೊಂಡರಂತೆ.
ವರಾದುಮಾಪತೇಸ್ತತಃ ಕಲಿಃ ಸ ದೇವಕಣ್ಟಕಃ ।
ಬಭೂವ ವಜ್ರಕಾಯಯುಕ್ ಸುಯೋಧನೋ ಮಹಾಬಲಃ ॥೧೨.೪೧॥
ಹೀಗೆ ದೇವತೆಗಳಿಗೆ ಪೀಡೆಯನ್ನು ಕೊಡತಕ್ಕ ವರವನ್ನು ಉಮಾಪತಿಯಿಂದ ಪಡೆದ ದೇವಕಂಟಕ ಕಲಿ ಸುಯೋಧನನಾಗಿ ಭೂಮಿಯಲ್ಲಿ ಹುಟ್ಟಿದ. ಅವನು
ಮಹಾಬಲಿಷ್ಠ ಹಾಗು ಅಭೇಧ್ಯವಾದ ಶರೀರದಿಂದ ಕೂಡಿದವನಾಗಿದ್ದ.
No comments:
Post a Comment