ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, March 19, 2019

Mahabharata Tatparya Nirnaya Kannada 12.24-12.30


(‘ನಿನಗಿಂತಲೂ ಹಿರಿಯನಾದ ಯಾವ ದೇವತೆಯನ್ನು ಆಹ್ವಾನಿಸಲಿ’ ಎಂದು ಕುಂತಿ ಏಕೆ ಕೇಳಿರುವುದು ಎನ್ನುವುದನ್ನೂ ಆಚಾರ್ಯರು ಇಲ್ಲಿ ವಿವರಿಸಿದ್ದಾರೆ:)

ವರಂ ಸಮಾಶ್ರಿತಾ ಪತಿಂ ವ್ರಜೇತ ಯಾ ತತೋsಧಮಮ್ 
ನ ಕಾಚಿದಸ್ತಿ ನಿಷ್ಕೃತಿರ್ನ್ನ ಭರ್ತ್ತೃಲೋಕಮೃಚ್ಛತಿ ॥೧೨.೨೪

ಯಾರು ನಿಯೋಗ ಪದ್ಧತಿಯಲ್ಲಿ ಉತ್ತಮನಾದವನನ್ನು ಆರಿಸುತ್ತಾಳೋ, ಅವಳಿಗೆ ಮರಣಾನಂತರ ಪತಿಲೋಕ ಪ್ರಾಪ್ತವಾಗುತ್ತದೆ. ಒಂದುವೇಳೆ ಪತಿಗಿಂತ ಕೆಳಗಿನವನನ್ನು ಸೇರಿದರೆ ಅದಕ್ಕೆ ಪ್ರಾಯಶ್ಚಿತ್ತವೇ ಇಲ್ಲ. ಅವಳು ಗಂಡ ಹೊಂದುವ ಲೋಕವನ್ನು ಹೊಂದುವುದಿಲ್ಲ.

ಕೃತೇ ಪುರಾ ಸುರಾಸ್ತಥಾ ಸುರಾಙ್ಗನಾಶ್ಚ ಕೇವಲಮ್ ।
ನಿಮಿತ್ತತೋsಪಿ ತಾಃ ಕ್ವಚಿನ್ನ ತಾನ್ ವಿಹಾಯ ಮೇನಿರೇ ॥೧೨.೨೫


ಮನೋವಚಃ ಶರೀರತೋ ಯತೋ ಹಿ ತಾಃ ಪತಿವ್ರತಾಃ ।
ಅನಾದಿಕಾಲತೋsಭವಂಸ್ತತಃ ಸಭರ್ತ್ತೃಕಾಃ ಸದಾ ॥೧೨.೨೬

ಸ್ವಭರ್ತ್ತೃಭಿರ್ವಿಮುಕ್ತಿಗಾಃ ಸಹೈವ ತಾ ಭವನ್ತಿ ಹಿ ।
ಕೃತಾನ್ತಮಾಪ್ಯ ಚಾಪ್ಸರಃಸ್ತ್ರಿಯೋ ಬಭೂವುರೂರ್ಜ್ಜಿತಾಃ ॥೧೨.೨೭

ಅನಾವೃತಾಶ್ಚ ತಾಸ್ತಥಾ ಯಥೇಷ್ಟಭರ್ತ್ತೃಕಾಃ ಸದಾ ।
ಅತಸ್ತು ತಾ ನ ಭರ್ತ್ತೃಭಿರ್ವಿಮುಕ್ತಿಮಾಪುರುತ್ತಮಾಮ್ ॥೧೨.೨೮ ॥

ಸುರಸ್ತ್ರಿಯೋsತಿಕಾರಣೈರ್ಯ್ಯದಾsನ್ಯಥಾ ಸ್ಥಿತಾಸ್ತದಾ
ದುರನ್ವಯಾತ್ ಸುದುಃಸಹಾ ವಿಪತ್ ತತೋ ಭವಿಷ್ಯತಿ ॥೧೨.೨೯॥

ಅಯುಕ್ತಮುಕ್ತವಾಂಸ್ತತೋ ಭವಾಂಸ್ತಥಾsಪಿ ತೇ ವಚಃ ।
ಅಲಙ್ಘ್ಯಮೇವ ಮೇ ತತೋ ವದಸ್ವ ಪುತ್ರದಂ ಸುರಮ್ ೧೨.೩೦

ಕೃತಯುಗದಲ್ಲಿ ಪುರುಷ ದೇವತೆ  ಹಾಗು ಸ್ತ್ರೀ ದೇವತೆಗಳಿಬ್ಬರೂ, ಯಾವುದೇ ಒಂದು ಬಲಿಷ್ಠವಾದ ನಿಮಿತ್ತವಿದ್ದರೂ ಕೂಡಾ, ನಿಯತ ಪತಿ-ಪತ್ನಿ ಸಂಬಂಧದಿಂದಲೇ ಕೂಡಿದವರಾಗಿರುತ್ತಿದ್ದರು. (ಅವತಾರದಲ್ಲೂ ಕೂಡಾ).
ಮನಸ್ಸು, ಮಾತು ಮತ್ತು ದೇಹ ಈ ಮೂರನ್ನೂ ಸ್ತ್ರೀಯರು  ಸದಾ ಒಬ್ಬನಿಗೆ ಮಾತ್ರ ಮೀಸಲಿಟ್ಟವರಾಗಿರುತ್ತಿದ್ದರು. ಆ ಕಾರಣದಿಂದ ಅವರನ್ನು ಪತಿವ್ರತೆಯರು ಎಂದು ಕರೆಯುತ್ತಿದ್ದರು. ಇದು ಅನಾದಿಕಾಲದ ನಿಯಮವಾಗಿರುವುದರಿಂದ ಅವರು ಎಂದೆಂದಿಗೂ ಸಭರ್ತೃಕರಾಗಿದ್ದರು(ಕೇವಲ ತನ್ನ ಗಂಡನೊಡನೆ ಮಾತ್ರ ಕೂಡಿದವರಾಗಿರುತ್ತಿದ್ದರು). ಇದು ಅನಾದಿಕಾಲದ ದೇವತೆಗಳ ಸಂಬಂಧ. ಇವರು ಮೋಕ್ಷವನ್ನೂ ಕೂಡಾ ಜೊತೆಯಾಗಿಯೇ ಪಡೆಯುತ್ತಿದ್ದರು. (ಪತಿ ಸಹಿತರಾಗಿಯೇ ಪತ್ನಿಯರು ವಿಮುಕ್ತರಾಗುತ್ತಿದ್ದರು).
ತದನಂತರ, ಕೃತಯುಗ ಪೂರೈಸುತ್ತಿರಲು, ಅಪ್ಸರ ಸ್ತ್ರೀಯರು ಬಹಳ ಸಂಖ್ಯೆಯಲ್ಲಿ ಉಂಟಾದರು. (ಅಪ್ಸರೆಯರಿಗೆ ನಿಯತ ಪತಿ ಅಥವಾ ಪುರುಷ ಎನ್ನುವ ನಿಯಮವಿಲ್ಲ.  ದೇವರ ವಿಶೇಷವಾದ ವರ ಅವರಿಗಿತ್ತು). ಅವರು ಯಾರೋ ಒಬ್ಬರಿಗೆ ಕಟ್ಟು ಬಿದ್ದವರಲ್ಲ. ಅವರು ಯಥೇಷ್ಟಭರ್ತೃಕರು. ಅಂದರೆ ತಮಗಿಷ್ಟಬಂದವರೊಂದಿಗೆ ಅವರು ಇರಬಹುದಿತ್ತು. ಆದ್ದರಿಂದಲೇ ಅವರಿಗೆ ಪತಿಯೊಂದಿಗೆ ಮುಕ್ತಿ ಎನ್ನುವ ನಿಯಮವಿರಲಿಲ್ಲ.
ದೇವತಾ ಸ್ತ್ರೀಯರಿಗೆ ಕೆಲವೊಮ್ಮೆ ಪ್ರಬಲವಾದ ಕಾರಣಗಳಿಂದ (ಶಾಪ, ಯೋಗ್ಯತೆಗೆ ಮೀರಿ ಪುಣ್ಯವಾಗಿದ್ದರೆ ಅದನ್ನು ಹ್ರಾಸ ಮಾಡಲು, ಪ್ರಬಲವಾದ ಪ್ರಾರಬ್ಧ, ಇತ್ಯಾದಿ ಕಾರಣಗಳಿಂದ) ತಮ್ಮ ನಿಯತ ಪತಿಯನ್ನು ಬಿಟ್ಟು ಬೇರೆ ಗಂಡಿನ ಜೊತೆಗೆ ಪತ್ನಿ ಭಾವವನ್ನು ತಾಳುವ ಪ್ರಸಂಗ ಒದಗಿಬಂದರೆ, ಆಗ  ಅಲ್ಲಿ ಬಹಳ ಕಷ್ಟವಾಗುತ್ತದೆ. ಅಲ್ಲಿ ಹುಟ್ಟುವ ಮಕ್ಕಳಿಂದಲೇ ಸಮಸ್ಯೆ ಬರುತ್ತದೆ. ತಡೆಯಲಾಗದಂತಹ ಕೆಟ್ಟ ಪ್ರಸಂಗ ಒದಗಿ ಬರುತ್ತದೆ.
ಈ ಎಲ್ಲಾ ಕಾರಣದಿಂದ ‘ನೀನು(ಪಾಂಡು) ಯುಕ್ತವಲ್ಲದ ಮಾತನ್ನು ಹೇಳಿರುವೆ’ ಎನ್ನುತ್ತಾಳೆ ಕುಂತಿ. ಆದರೂ ಕೂಡಾ, ಪತಿಯ ಮಾತನ್ನು ಮೀರಲು ಸಾದ್ಯವಿಲ್ಲದೇ ಇರುವುದರಿಂದ,  ‘ಮಗನನ್ನು ಕೊಡುವ ಒಬ್ಬ ದೇವತೆಯನ್ನು ನೀನೇ ಹೇಳು’  ಎಂದು ಕುಂತಿ ಪಾಂಡುವನ್ನು ಕೇಳಿಕೊಳ್ಳುತ್ತಾಳೆ.

No comments:

Post a Comment