ಅವದ್ಧ್ಯ ಏವ ಸರ್ವತಃ ಸುಯೋಧನೇ ಸಮುತ್ಥಿತೇ ।
ಘೃತಾಭಿಪೂರ್ಣ್ಣಕುಮ್ಭತಃ ಸ ಇನ್ದ್ರಜಿತ್ ಸಮುತ್ಥಿತಃ ॥೧೨.೪೨॥
ಎಲ್ಲರಿಂದಲೂ
ಅವಧ್ಯನಾಗಿರುವ ದುರ್ಯೋಧನನು ತುಪ್ಪದಿಂದ ಕೂಡಿದ ಮಡಿಕೆಯಿಂದ ಮೇಲೆದ್ದು ಬಂದ. ನಂತರ (ಹಿಂದೆ
ರಾವಣಪುತ್ರನಾಗಿದ್ದ) ಇಂದ್ರಜಿತು ಘೃತದಿಂದ ತುಂಬಿದ ಘಟದಿಂದ ಮೇಲೆದ್ದ.
[ಮಹಾಭಾರತ ಆದಿಪರ್ವದಲ್ಲಿ(೬೮.೮೯)
ದುರ್ಯೋಧನನ ತಮ್ಮಂದಿರ ಕುರಿತಾದ ಮಾತು ಬರುತ್ತದೆ: ‘ಪೌಲಸ್ತ್ಯಾ ಭ್ರಾತರಶ್ಚಾಸ್ಯ ಜಗ್ನಿರೇ ಮನುಜೇಷ್ವಿಹ’. ದುರ್ಯೋಧನನ ತಮ್ಮಂದಿರು ಪುಲಸ್ಯ ವಂಶದಲ್ಲಿ ಬಂದ ದೈತ್ಯರೇ ಆಗಿದ್ದು,
ಮನುಷ್ಯ ರೂಪದಿಂದ ಅಭಿವ್ಯಕ್ತರಾಗಿದ್ದಾರೆ. ‘ದುರ್ಯೋಧನಸಹಾಯಾಸ್ತೇ ಪೌಲಸ್ತ್ಯಾ ಭರತರ್ಷಭ’(೯೧)
ಈ ಪೌಲಸ್ತ್ಯರು (ರಾಕ್ಷಸ ವಂಶದವರು) ದುರ್ಯೋಧನನ ಸಹಾಯಕರಾಗಿ ಹುಟ್ಟಿದ್ದಾರೆ].
ಸ ದುಃಖಶಾಸನೋsಭವತ್ ತತೋsತಿಕಾಯಸಮ್ಭವಃ ।
ಸ ವೈ ವಿಕರ್ಣ್ಣ ಉಚ್ಯತೇ ತತಃ ಕರೋsಭವದ್ ಬಲೀ ॥೧೨.೪೩॥
ಸ ಚಿತ್ರಸೇನನಾಮಕಃ ತಥಾsಪರೇ ಚ ರಾಕ್ಷಸಾಃ ।
ಬಭೂವುರುಗ್ರಪೌರುಷಾ ವಿಚಿತ್ರವೀರ್ಯ್ಯಜಾತ್ಮಜಾಃ ॥೧೨.೪೪॥
ಈರೀತಿ ಹುಟ್ಟಿದ ಇಂದ್ರಜಿತ್
ದುಃಖಶಾಸನನಾಗಿದ್ದ. (ಅವನ ಶಾಸನ ಅಥವಾ ಆಳ್ವಿಕೆ ಅತ್ಯಂತ ದುಃಖದಾಯಕವಾದ ಕಾರಣ ಆತ ದುಃಶಾಸನ ಎನ್ನುವ ಹೆಸರನ್ನು ಪಡೆದ) . ತದನಂತರ
ಅತಿಕಾಯ ಎನ್ನುವ ರಾಕ್ಷಸ ಹುಟ್ಟಿದ. ಅವನೇ
ವಿಕರ್ಣ ಎಂದು ಹೆಸರಾದ. ಆನಂತರ ಬಲಿಷ್ಠನಾದ ಖರಾಸುರ ಹುಟ್ಟಿದ.
ಈ ಖರನೇ ಚಿತ್ರಸೇನ ಎನ್ನುವ
ಹೆಸರಿನವನಾದ. ಇದೇ ರೀತಿ ಉಳಿದ ಎಲ್ಲಾ ಗಾಂಧಾರಿಯ ಮಕ್ಕಳೂ ಕೂಡಾ ರಾಕ್ಷಸರೇ ಆಗಿದ್ದರು.
ವಿಚಿತ್ರವೀರ್ಯನ ಪೌತ್ರನಾದ ದೃತರಾಷ್ಟ್ರನ
ಆತ್ಮಜರಾದ ಅವರು ಉಗ್ರಪೌರುಷವುಳ್ಳವರಾದರು.
[ಮಹಾಭಾರತದ ಆದಿಪರ್ವದಲ್ಲಿ
(೬೩.೫೮) ದುರ್ಯೋಧನನ ನಾಲ್ಕು ಮಂದಿ ತಮ್ಮಂದಿರರ
ಕುರಿತಾದ ವಿವರವನ್ನು ಕಾಣುತ್ತೇವೆ: ಧೃತರಾಷ್ಟ್ರಾತ್ ಪುತ್ರಶತಂ ಬಭೂವ ಗಾಂಧರ್ಯಾಂ
ವರದಾನಾದ್ ದ್ವೈಪಾಯನಸ್ಯ । ತೇಷಾಂ ಚ
ಧಾರ್ತರಾಷ್ಟ್ರಾಣಾಂ ಚತ್ವಾರಃ ಪ್ರಧಾನಾ
ದುರ್ಯೋಧನೋ ದುಃಶಾಸನೋ ವಿಕರ್ಣಶ್ಚಿತ್ರಸೇನಶ್ಚೇತಿ’].
ಸಮಸ್ತದೋಷರೂಪಿಣಃ ಶರೀರಿಣೋ ಹಿ ತೇsಭವನ್ ।
ಮೃಷೇತಿ ನಾಮತೋ ಹಿ ಯಾ ಬಭೂವ ದುಃಶಳಾssಸುರೀ ॥೧೨.೪೫॥
ಅವರೆಲ್ಲರೂ ಕೂಡಾ
ಬೇರೆಬೇರೆ ದೋಷ ಮೈದಾಳಿ ಬಂದವರಾಗಿದ್ದರು. ಈ
ರೀತಿ ಗಾಂಧಾರಿಯಲ್ಲಿ ಹುಟ್ಟಿದ ಅವರು ಮನುಷ್ಯ ಶರೀರವುಳ್ಳವರಾದರು. ಸುಳ್ಳಿಗೆ ಅಭಿಮಾನಿನಿಯಾದ ‘ಮೃಷ’ ಎನ್ನುವ ಅಸುರ ಸ್ತ್ರೀ, ದುಶ್ಶಳಾ ಎನ್ನುವ ಹೆಸರಿನಿಂದ ಹುಟ್ಟಿದಳು.
ಕುಹೂಪ್ರವೇಶಸಂಯುತಾ ಯಯಾssರ್ಜ್ಜುನೇರ್ವಧಾಯ ಹಿ ।
ತಪಃ ಕೃತಂ ತ್ರಿಶೂಲಿನೇ ತತೋ ಹಿ ಸಾsತ್ರ ಜಜ್ಞುಷೀ ॥೧೨.೪೬॥
‘ದುಶ್ಶಳಾ’ಳಾಗಿ ಹುಟ್ಟಿದ ಮೃಷ ಅಮಾವಾಸ್ಯೆಯ
ಅಭಿಮಾನಿಯಾದ ‘ಕುಹೂ’
ಎನ್ನುವ ದೇವತೆಯ ಪ್ರವೇಶದಿಂದ ಕೂಡಿದವಳಾಗಿದ್ದಳು. ಈ ಮೃಷ ಎನ್ನುವ ಅಸುರಸ್ತ್ರೀ ಅರ್ಜುನ ಪುತ್ರನ (ಅಭಿಮನ್ಯುವಿನ) ಕೊಲೆಗಾಗಿ ರುದ್ರನನ್ನು ಕುರಿತು
ತಪಸ್ಸು ಮಾಡಲ್ಪಟ್ಟು, ಆ ಕಾರಣಕ್ಕಾಗಿ ಇಲ್ಲಿ
ಹುಟ್ಟಿದ್ದಳು.
ತಯೋದಿತೋ ಹಿ ಸೈನ್ಧವೋ ಬಭೂವ ಕಾರಣಂ ವಧೇ ।
ಸ ಕಾಲಕೇಯದಾನವಸ್ತದರ್ತ್ಥಮಾಸ ಭೂತಳೇ ॥೧೨.೪೭॥
ಮುಂದೆ ದುಶ್ಶಳಾಳಿಂದಲೇ ಪ್ರಚೋದಿಸಲ್ಪಟ್ಟ ಜಯದ್ರಥನು ಅಭಿಮನ್ಯುವಿನ ವಧೆಗೆ
ಕಾರಣನಾಗುತ್ತಾನೆ. ಜಯದ್ರಥ ‘ಕಾಲಕೇಯ’ ಎನ್ನುವ ದೈತ್ಯ. ಅವನೂ ಅಭಿಮನ್ಯುವಿನ ಕೊಲೆಗಾಗಿಯೇ
ಭೂಮಿಯಲ್ಲಿ ಹುಟ್ಟಿದ್ದ.
No comments:
Post a Comment