ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 21, 2019

Mahabharata Tatparya Nirnaya Kannada 12.31-12.36


ಇತೀರಿತೋsಬ್ರವೀನ್ನೃಪೋ ನ ಧರ್ಮ್ಮತೋ ವಿನಾ ಭುವಃ ।
ನೃಪೋsಭಿರಕ್ಷಿತಾ ಭವೇತ್ ತದಾಹ್ವಯಾsಶು ತಂ ವಿಭುಮ್ ॥೧೨.೩೧

ಈ ರೀತಿಯಾಗಿ ಹೇಳಲ್ಪಟ್ಟ ಪಾಂಡುರಾಜನು ಹೇಳುತ್ತಾನೆ: ‘ಧರ್ಮವಿಲ್ಲದೇ ಭೂಮಿ ವ್ಯವಸ್ಥಿತವಾಗಿ ಇರಲಾರದು. ಯಾವಕಾರಣದಿಂದ ಒಬ್ಬ ರಾಜನು ಧರ್ಮದ ಹೊರತು ಭೂ ರಕ್ಷಕನಾಗಲಾರನೋ, ಆ ಕಾರಣದಿಂದ ಧರ್ಮದೇವತೆಯಾಗಿರುವವನನ್ನೇ ಕರೆ’ ಎಂದು.

ಸ ಧರ್ಮ್ಮಜಃ ಸುಧಾರ್ಮ್ಮಿಕೋ ಭವೇದ್ಧಿ ಸೂನುರುತ್ತಮಃ ।
ಇತೀರಿತೇ ತಯಾ ಯಮಃ ಸಮಾಹುತೋsಗಮದ್ ದ್ರುತಮ್ ॥೧೨.೩೨

‘ಧರ್ಮದಿಂದ ಧಾರ್ಮಿಕನಾದ ಮಗನು ಹುಟ್ಟುತ್ತಾನೆ’ ಎಂದು ಪಾಂಡುರಾಜನು ಹೇಳಲು, ಕುಂತಿಯಿಂದ ಕರೆಯಲ್ಪಟ್ಟ ಯಮನು ಶೀಘ್ರದಲ್ಲಿ ಪ್ರತ್ಯಕ್ಷನಾದನು.

ತತಶ್ಚ ಸದ್ಯ ಏವ ಸಾ ಸುಷಾವ ಪುತ್ರಮುತ್ತಮಮ್ ।
ಯುದಿಷ್ಠಿರಂ ಯಮೋ ಹಿ ಸ ಪ್ರಪೇದ ಆತ್ಮಪುತ್ರತಾಮ್ ॥೧೨.೩೩॥

ಕುಂತೀದೇವಿಯು  ತಕ್ಷಣ ಯಮನಿಂದ ಉತ್ಕೃಷ್ಟನಾದ ಯುದಿಷ್ಠಿರನಾಮಕ ಮಗನನ್ನು ಹೆತ್ತಳು. ಯಾವ ಕಾರಣದಿಂದ ಧರ್ಮರಾಯನಾದ ಯಮನೇ ಯುದಿಷ್ಠಿರನೋ, ಆ ಕಾರಣದಿಂದ ಯಮ ತಾನೇ ಪುತ್ರತ್ವವನ್ನು ಹೊಂದಿದನು. (ಯಮನೇ ಕುಂತಿಯಲ್ಲಿ ಯುದಿಷ್ಠಿರನಾಗಿ ಹುಟ್ಟಿದನು).

ಯಮೇ ಸುತೇ ತು ಕುನ್ತಿತಃ ಪ್ರಜಾತ ಏವ ಸೌಬಲೀ ।
ಅದ̐ಹ್ಯತೇರ್ಷ್ಯಯಾ ಚಿರಂ ಬಭಞ್ಜ ಗರ್ಭಮೇವ ಚ ॥೧೨.೩೪

ಕುಂತಿಯಿಂದ ಯಮನು ಮಗನಾಗಿ ಹುಟ್ಟಿ ಬರಲು, ಗಾಂಧಾರಿಯು ಹೊಟ್ಟೆಕಿಚ್ಚಿನಿಂದ ಸುಟ್ಟು ಹೋದಳು. ಅದರಿಂದ ಬಹುಕಾಲ ಧರಿಸಿದ ಗರ್ಭವನ್ನು ಭಂಗಮಾಡಿಕೊಂಡಳು.

ಸ್ವಗರ್ಭಪಾತನೇ ಕೃತೇ ತಯಾ ಜಗಾಮ ಕೇಶವಃ ।
ಪರಾಶರಾತ್ಮಜೋ ನ್ಯಧಾದ್ ಘಟೇಷು ತಾನ್ ವಿಭಾಗಶಃ ॥೧೨.೩೫॥

ಗಾಂಧಾರಿ ತನ್ನ ಗರ್ಭನಾಶ ಮಾಡಿಕೊಳ್ಳುತ್ತಿರಲು ವೇದವ್ಯಾಸರೂಪಿಯಾದ ಕೇಶವ ಓಡಿಬಂದು, ಆ ಗರ್ಭದ ತುಣುಕುಗಳನ್ನು ನೂರಾ ಒಂದು ವಿಭಾಗ ಮಾಡಿ, ಮಡಿಕೆಗಳಲ್ಲಿ ಇಟ್ಟರು.

ಶತಾತ್ಮನಾ ವಿಭೇದಿತಾಃ ಶತಂ ಸುಯೋಧನಾದಯಃ ।
ಬಭೂವುರನ್ವಹಂ ತತಃ ಶತೋತ್ತರಾ ಚ ದುಶ್ಶಳಾ೧೨.೩೬

ನೂರರ ಸಂಖ್ಯೆಯಲ್ಲಿ ವಿಭಾಗಿಸಲ್ಪಟ್ಟ ಪಿಂಡಗಳಿಂದ ಸುಯೋಧನಾದಿಗಳು ಹುಟ್ಟಿದರೆ,  ನೂರು ಆದ ಮೇಲೆ ದುಶ್ಶಳಾ ನಾಮಕ ಕನ್ನಿಕೆಯು ಹುಟ್ಟಿದಳು.

No comments:

Post a Comment