ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 17, 2019

Mahabharata Tatparya Nirnaya Kannada 12.19-12.23


ತದಾ ಕಲಿಶ್ಚ ರಾಕ್ಷಸಾ ಬಭೂವುರಿನ್ದ್ರಜಿನ್ಮುಖಾಃ ।
ವಿಚಿತ್ರವೀರ್ಯ್ಯನನ್ದನಪ್ರಿಯೋದರೇ ಹಿ ಗರ್ಭಗಾಃ ॥ ೧೨.೧೯  
         
ಇದೇ ಕಾಲದಲ್ಲಿ ಕಲಿ ಮತ್ತು ಇಂದ್ರಜಿತ್ ಮೊದಲಾದ ರಾಕ್ಷಸರು ವಿಚಿತ್ರವೀರ್ಯನ ಮಗನಾಗಿರುವ  ಧೃತರಾಷ್ಟ್ರನ ಹೆಂಡತಿಯಾದ ಗಾಂಧಾರಿಯ ಗರ್ಭವನ್ನು ಸೇರಿಕೊಂಡರು.

ತದಸ್ಯ ಸೋsನುಜೋsಶೃಣೋನ್ಮುನೀನ್ದ್ರದೂಷಿತಂ ಚ ತತ್ ।
ವಿಚಾರ್ಯ್ಯ ತು ಪ್ರಿಯಾಮಿದಂ ಜಗಾದ ವಾಸುದೇವಧೀಃ ೧೨.೨೦

ಋಷಿಶ್ರೇಷ್ಠರಿಂದ ಗಾಂಧಾರಿಯ ಗರ್ಭಪ್ರಾಪ್ತಿಯ ವಿಷಯವನ್ನು ತಿಳಿದ ಧೃತರಾಷ್ಟ್ರನ ತಮ್ಮನಾಗಿರುವ, ಪರಮಾತ್ಮನಲ್ಲಿ ನೆಟ್ಟ ಬುದ್ಧಿಯುಳ್ಳ ಪಾಂಡುವು, ತಾನು  ಮುಂದೇನು ಮಾಡಬೇಕು ಎಂದು ಚಿಂತಿಸಿ, ಕುಂತಿಯನ್ನು ಕುರಿತು ಈ ರೀತಿ ಹೇಳಿದನು.

ಯ ಏವ ಮದ್ಗುಣಾಧಿಕಸ್ತತಃ ಸುತಂ ಸಮಾಪ್ನುಹಿ ।
ಸುತಂ ವಿನಾ ನ ನೋ ಗತಿಂ ಶುಭಾಂ ವದನ್ತಿ ಸಾಧವಃ ॥ ೧೨.೨೧       

‘ಯಾರು ಗುಣದಿಂದ ಜ್ಯೇಷ್ಠನಾಗಿದ್ದಾನೋ, ನನಗಿಂತ ಹಿರಿಯನಾಗಿದ್ದಾನೋ, ಅಂಥವರಿಂದ ನೀನು ಪುತ್ರನನ್ನು ಪಡೆ. ನಮಗೆ ಮಕ್ಕಳಿಲ್ಲದೇ ಮುಂದೆ ಒಳ್ಳೆಯ ಗತಿಯನ್ನು ಸಾದುಗಳು ಹೇಳುತ್ತಿಲ್ಲಾ’

ತದಸ್ಯ ಕೃಚ್ಛ್ರತೋ ವಚಃ ಪೃಥಾsಗ್ರಹೀಜ್ಜಗಾದ ಚ 
ಮಮಾಸ್ತಿ ದೇವವಶ್ಯದೋ ಮನೂತ್ತಮಃ ಸುತಾಪ್ತಿದಃ  ॥ ೧೨.೨೨

ಪಾಂಡುವಿನ  ಈರೀತಿಯಾದ ಮಾತನ್ನು ಕುಂತಿಯು ಬಹಳ ಕಷ್ಟದಿಂದ ಸ್ವೀಕರಿಸಿದಳು ಮತ್ತು ಹೇಳಿದಳೂ ಕೂಡಾ. ‘ಪುತ್ರಪ್ರಾಪ್ತಿಗಾಗಿ  ದೇವತೆಗಳನ್ನು ವಶಮಾಡಿಕೊಳ್ಳುವ ಉತ್ಕೃಷ್ಟವಾದ ಮಂತ್ರ ಪ್ರಾಪ್ತಿ ನನಗಿದೆ’ ಎಂದು.

ನ ತೇ ಸುರಾನೃತೇ ಸಮಃ ಸುರೇಷು ಕೇಚಿದೇವ ಚ ।
ಅತಸ್ತವಾಧಿಕಂ ಸುರಂ ಕಮಾಹ್ವಯೇ ತ್ವದಾಜ್ಞಯಾ ೧೨.೨೩

ಮುಂದುವರಿದು ಕುಂತಿ ಹೇಳುತ್ತಾಳೆ: ನಿನಗೆ ದೇವತೆಗಳನ್ನು ಬಿಟ್ಟು ಮನುಷ್ಯರಲ್ಲಿ ಯಾರೂ ಸಮರಿಲ್ಲ. ದೇವತೆಗಳಲ್ಲಿಯೂ ಕೂಡಾ ಕೆಲವರು ಮಾತ್ರ ಸಮಾನರು. ನಿನ್ನಿಂದ ಅಧಿಕರಾದವರು ದೇವತೆಗಳಲ್ಲಿ  ಇದ್ದೇ ಇದ್ದಾರೆ. ಈ ಕಾರಣದಿಂದ, ನಿನ್ನ ಆಜ್ಞೆಯಿಂದ, ನಿನಗಿಂತಲೂ ಹಿರಿಯನಾದ ಯಾವ ದೇವತೆಯನ್ನು ಆಹ್ವಾನಿಸಲಿ? 

No comments:

Post a Comment