ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 2, 2020

Mahabharata Tatparya Nirnaya Kannada 1561_1566


ಶ್ರುತ್ವಾ ರಾವಂ ಸಾರಮೇಯಸ್ಯ ದೂರಾಚ್ಛರೈರ್ಮ್ಮುಖಂ ಶಬ್ದವೇಧೀ ಪುಪೂರೇ
ಸ ಏಕಲವ್ಯೋ ವ್ರಣಮಸ್ಯ ನಾಕರೋಚ್ಛ್ವಾಪೂರಿತಾಸ್ಯಃ ಪಾಣ್ಡವಾನಭ್ಯಯಾತ್ ಸಃ ೧೫.೬೧

ಆ ಸಾರಮೇಯದ(ನಾಯಿಯ) ಬೊಗಳುವಿಕೆಯನ್ನು ದೂರದಿಂದಲೇ ಕೇಳಿ, ಬಾಣಗಳಿಂದ ಶಬ್ದವನ್ನು  ಭೇದಿಸಿ ಹೊಡೆಯುವುದರಲ್ಲಿ ಸಮರ್ಥನಾದ ಏಕಲವ್ಯನು, ತನ್ನ ಬಾಣಗಳಿಂದ ಆ ನಾಯಿಯ ಮುಖವನ್ನು ಮುಚ್ಚಿದನು. ಆದರೆ ಅದಕ್ಕೆ ಯಾವುದೇ ಗಾಯವನ್ನುಂಟುಮಾಡಲಿಲ್ಲ. ಆಗ ಆ ನಾಯಿಯು ಬಾಣಗಳಿಂದ ತುಂಬಿದ ಮುಖವುಳ್ಳದ್ದಾಗಿ ಪಾಂಡವರ ಬಳಿ ಬಂದಿತು.

ದೃಷ್ಟ್ವಾ ಚಿತ್ರಂ ಕುರವಃ ಪಾಣ್ಡವಾಶ್ಚ ದ್ರಷ್ಟುಂ ಕರ್ತ್ತಾರಂ ಮಾರ್ಗ್ಗಯಾಮಾಸುರತ್ರ
ದ್ರೋಣಾಕೃತಿಂ ಮಾರ್ತ್ತಿಕೀಂ ಪೂಜಯನ್ತಂ ದದೃಶುಶ್ಚೈನಂ ಧನುರೇವಾಭ್ಯಸನ್ತಮ್ ೧೫.೬೨

ಈ ಅಚ್ಚರಿಯನ್ನು ಕಂಡ ಕುರುಗಳು ಮತ್ತು ಪಾಂಡವರು, ಆ ಕಾರ್ಯವನ್ನು ಮಾಡಿರುವವನನ್ನು ನೋಡಬೇಕೆಂದು ಹುಡುಕಿದರು. ಸ್ವಲ್ಪಹೊತ್ತು ಹುಡುಕಿದ ಮೇಲೆ, ಮಣ್ಣಿನ ದ್ರೋಣರ ಆಕೃತಿಯನ್ನು ಪೂಜೆಮಾಡುವ, ಬಿಲ್ಲನ್ನು ಅಭ್ಯಾಸಮಾಡುವ ಏಕಲವ್ಯನನ್ನು ಅವರು ಕಂಡರು.  

ಪೈಶಾಚಮೇವೈಷ ಪಿಶಾಚಕೇಭ್ಯಃ ಪೂರ್ವಂ ವಿವೇದಾಸ್ತ್ರವೃನ್ದಂ ನಿಷಾದಃ
ದಿವ್ಯಾನ್ಯಸ್ತ್ರಾಣ್ಯಾಪ್ತುಮೇತಾಂ ಚ ಶಿಕ್ಷಾಂ ದ್ರೋಣಂ ಸದಾ ಪೂಜಯತಿ ಸ್ಮ ಭಕ್ತ್ಯಾ ೧೫.೬೩

ಏಕಲವ್ಯನು ಪಿಶಾಚಿಗಳಿಂದ ಪಿಶಾಚಿ ಸಂಬಂಧಿಯಾಗಿರುವ ಅಸ್ತ್ರವೃಂದವನ್ನು ಮೊದಲೇ ತಿಳಿದಿದ್ದ. ಈಗ ದಿವ್ಯಾಸ್ತ್ರವನ್ನು ಹೊಂದಬೇಕೆಂದು ನಿರಂತರವಾದ ಅಭ್ಯಾಸವನ್ನು ಮಾಡುತ್ತಿದ್ದ. ಅದಕ್ಕಾಗಿ ದ್ರೋಣರನ್ನು ಭಕ್ತಿಯಿಂದ ಪೂಜಿಸುತ್ತಿದ್ದ.
[ಒಂದಲ್ಲಾ ಒಂದು ದಿನ ನನ್ನ ಭಕ್ತಿಯನ್ನು ಕಂಡು ದ್ರೋಣರು ನನಗೆ ವಿದ್ಯೆಯನ್ನು ಉಪದೇಶ ಮಾಡುತ್ತಾರೆ ಎಂಬ ಭರವಸೆ ಅಷ್ಟೇ ಹೊರತು ಇನ್ನೇನೂ ಅಲ್ಲಾ. ಏಕೆಂದರೆ ಅಸ್ತ್ರವನ್ನು ಗುರುವಿನ ಉಪದೇಶದಿಂದಷ್ಟೇ ಪಡೆಯಲು ಸಾಧ್ಯ ಹೊರತು ಕೇವಲ ಅಭ್ಯಾಸದಿಂದಲ್ಲ].

ದೃಷ್ಟ್ವಾ ವಿಶೇಷಂ ತಮಮುಷ್ಯ ಪಾರ್ತ್ಥೋ ದ್ರೋಣಾಯೋಚೇ ತ್ವದ್ವರೋ ಮೇ ಮೃಷಾssಸೀತ್
ಇತ್ಯುಕ್ತ ಏನಂ ತ್ವಭಿಗಮ್ಯ ದಕ್ಷಿಣಾಂ ವಿಪ್ರೋ ಯಯಾಚೇ ದಕ್ಷಿಣಾಙ್ಗುಷ್ಠಮೇವ ೧೫.೬೪

ಅರ್ಜುನನು ಈರೀತಿಯಾದ ವಿಶೇಷವನ್ನು ಕಂಡು, ‘ನಿನ್ನ ವರವು ನನ್ನ ಪಾಲಿಗೆ ಸುಳ್ಳಾಯಿತು’ (ಧನುರ್ಧಾರಿಗಳಲ್ಲೇ ಶ್ರೇಷ್ಠನನ್ನಾಗಿ ಮಾಡುವೆ ಎನ್ನುವ ದ್ರೋಣರ ಮಾತು ನನ್ನ ಪಾಲಿಗೆ ಸುಳ್ಳಾಯಿತು) ಎಂದು ದ್ರೋಣನಿಗೆ ಹೇಳಿದನು. ಈರೀತಿಯಾದ ಮಾತನ್ನು ಕೇಳಿದ ಆ ಬ್ರಾಹ್ಮಣನು (ದ್ರೋಣನು), ಏಕಲವ್ಯನನ್ನು ಹೊಂದಿ, ಆತನ ಬಲ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಕೇಳಿದನು.

ತಸ್ಯ ಪ್ರಸಾದೋಪಚಿತೋರುಶಿಕ್ಷೋ ನಿಷಾದೋsದಾದ್ ದಕ್ಷಿಣಾಙ್ಗುಷ್ಠಮಸ್ಮೈ
ತತಃ ಪರಂ ನಾಸ್ಯ ಬಭೂವ ಶಿಕ್ಷಾ ಸನ್ಮುಷ್ಟಿಹೀನಸ್ಯ ಸಮಾsರ್ಜ್ಜುನೇನ ೧೫.೬೫

ದ್ರೋಣಾಚಾರ್ಯರ ಅನುಗ್ರಹದಿಂದ ಸಮೃದ್ಧವಾದ, ಉತ್ಕೃಷ್ಟವಾದ ಶಿಕ್ಷೆಯುಳ್ಳ ಏಕಲವ್ಯನು, ದ್ರೋಣಾಚಾರ್ಯರಿಗೆ ತನ್ನ ಬಲ ಹೆಬ್ಬೆರಳನ್ನು ತುಂಡರಿಸಿ ಕೊಟ್ಟನು. ಅದಾದಮೇಲೆ, ಮುಷ್ಟಿಹೀನನಾದ ಏಕಲವ್ಯನ  ಬಲ ಮತ್ತು ಶಿಕ್ಷಣವು ಅರ್ಜುನನಿಗೆ ಸಮವಾಗಲಿಲ್ಲ.   

ಪುನಃ ಕೃಪಾಲೂ ರೈವತಪರ್ವತೇ ತಂ ದ್ರೋಣಃ ಪ್ರಾಪ್ಯಾsದಾದಸ್ತ್ರವರಾಣಿ ತಸ್ಮೈ
ಏಕಾನ್ತ ಏವಾಸ್ಯ ಭಕ್ತ್ಯಾ ಸುತುಷ್ಟೋ ಧನ್ವಿಶ್ರೇಷ್ಠಂ ಕೃತವಾನರ್ಜ್ಜುನಂ ಚ ೧೫.೬೬

ಆ ಕಾರಣದಿಂದ ಪುನಃ ಕೃಪಾಳುವಾಗಿರುವ ದ್ರೋಣಾಚಾರ್ಯರು ರೈವತ ಪರ್ವತದಲ್ಲಿ ಏಕಲವ್ಯನನ್ನು ಹೊಂದಿ, ಅವನಿಗಾಗಿ ಏಕಾಂತದಲ್ಲಿ ಶ್ರೇಷ್ಠ ಅಸ್ತ್ರಗಳನ್ನು ಕೊಟ್ಟರು. ಏಕಲವ್ಯನ ಭಕ್ತಿಯಿಂದ ಸಂತಸಗೊಂಡು, ಏಕಾಂತದಲ್ಲಿ (ಅರ್ಜುನನಿಗೂ ತಿಳಿಯದಂತೆ) ಅಸ್ತ್ರ ವಿದ್ಯೆಗಳನ್ನು ಅವನಿಗೆ ನೀಡಿದರು. ಹಾಗೆಯೇ, ಅರ್ಜುನನನ್ನೂ ಕೂಡಾ ಶ್ರೇಷ್ಠ ಧನುರ್ಧಾರಿಯನ್ನಾಗಿ  ಮಾಡಿದರು.
ಈ ಮೇಲಿನ ವಿವರವನ್ನು ಹರಿವಂಶದಲ್ಲಿ(ವಿ.ಪ ೫೬.೨೭-೮).  ಹೇಳಿರುವುದನ್ನು ನಾವು  ಕಾಣುತ್ತೇವೆ,ತತ್ರ ರೈವತಕೋನಾಮ  ಪರ್ವತೋ ನಾತಿದೂರತಃ ಮಂದರೋದಾರಶಿಖರಃ  ಸರ್ವತೋsಭಿವಿರಾಜತೇ ತತ್ರೈಕಲವ್ಯ ಸಂವಾಸೋ  ದ್ರೋಣೇನಾಧ್ಯುಷಿತಶ್ಚಿರಮ್’
[ಶ್ರೀಕೃಷ್ಣ ಇನ್ನೂ ದ್ವಾರಕೆಗೆ ಬಂದಿರಲಿಲ್ಲಾ. ಅವರು ಮಧುರೆಯಲ್ಲಿದ್ದರು. ಅಂತಹ ಸಂದರ್ಭದಲ್ಲಿ ರೈವತಕ ಪರ್ವತದಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಅಸ್ತ್ರದ  ಶಿಕ್ಷಣವನ್ನು ನೀಡಿದರು]  
  

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಪಾಣ್ಡವಶಸ್ತ್ರಾಭ್ಯಾಸೋ ನಾಮ ಪಞ್ಚದಶೋsಧ್ಯಾಯಃ

No comments:

Post a Comment