ಜರಾಸುತೋ ರೌಹಿಣೇಯೇನ
ಯುದ್ಧಂ ಚಿರಂ ಕೃತ್ವಾ ತನ್ಮುಸಲೇನ ಪೋಥಿತಃ ।
ವಿಮೋಹಿತಃ ಪ್ರಾಪ್ತಸಂಜ್ಞಶ್ಚಿರೇಣ
ಕ್ರುದ್ಧೋ ಗದಾಂ ತದುರಸ್ಯಭ್ಯಪಾತಯತ್ ॥೧೬.೨೦ ॥
ಜರಾಸಂಧನು ಬಲರಾಮನೊಂದಿಗೆ ಧೀರ್ಘಕಾಲ ಯುದ್ಧಮಾಡಿ, ಅವನ ಒನಕೆಯ ಪೆಟ್ಟು ತಿನ್ದವನಾಗಿ, ಪ್ರಜ್ಞೆ ಕಳೆದುಕೊಂಡು, ಬಹಳ ಹೊತ್ತಿನ ನಂತರ
ಸಂಜ್ಞೆಯನ್ನು ಹೊಂದಿ, ಕ್ರುದ್ಧನಾಗಿ ತನ್ನ ಗದೆಯನ್ನು ಬಲರಾಮನ
ಎದೆಯಮೇಲೆ ಎಸೆದನು.
ತೇನಾsಹತಃ ಸುಭೃಶಂ ರೌಹಿಣೇಯಃ ಪಪಾತ ಮೂರ್ಛಾಭಿಗತಃ ಕ್ಷಣೇನ ।
ಅಜೇಯತ್ವಂ ತಸ್ಯ
ದತ್ತಂ ಹಿ ಧಾತ್ರಾ ಪೂರ್ವಂ ಗೃಹೀತೋ ವಿಷ್ಣುನಾ ರಾಮಗೇನ ॥೧೬.೨೧ ॥
ಅವನಿಂದ ಚೆನ್ನಾಗಿ ಹೊಡೆಯಲ್ಪಟ್ಟ ಬಲರಾಮನು ಒಂದು ಕ್ಷಣ
ಮೂರ್ಛೆಹೋದನು. ಜರಾಸಂಧನಿಗೆ ಬ್ರಹ್ಮನಿಂದ
ಅಜೇಯತ್ವವು ಕೊಡಲ್ಪಟ್ಟಿತ್ತಷ್ಟೇ.
(ಆದರೆ ಹಿಂದಿನ ಶ್ಲೋಕದಲ್ಲಿ ಜರಾಸಂಧ ಬಲರಾಮನ ಹೊಡೆತದಿಂದ ಮೂರ್ಛೆಹೋಗಿದ್ದ
ಎಂದು ಹೇಳಲಾಗಿದೆಯಲ್ಲಾ ಎಂದರೆ:) ಹಿಂದೆ ಬಲರಾಮನಲ್ಲಿರುವ ಸಂಕರ್ಷಣರೂಪಿ ಪರಮಾತ್ಮನಿಂದಾಗಿ
ಜರಾಸಂಧ ಹಿಡಿಯಲ್ಪಟ್ಟಿದ್ದ.
ತಥಾಕೃತೇ ಬಲಭದ್ರೇ
ತು ಕೃಷ್ಣೋ ಗದಾಮಾದಾಯ ಸ್ವಾಮಗಾನ್ಮಾಗಧೇಶಮ್ ।
ತತಾಡ ಜತ್ರೌ ಸ
ತಯಾsಭಿತಾಡಿತೋ ಜಗಾಮ ಗಾಂ ಮೂರ್ಚ್ಛಯಾsಭಿಪ್ಲುತಾಙ್ಗಃ ॥೧೬.೨೨ ॥
ಜರಾಸಂಧನಿಂದ ಬಲರಾಮ ಹೊಡೆಯಲ್ಪಟ್ಟಾಗ ಶ್ರೀಕೃಷ್ಣನು ತನ್ನ ಕೌಮೋದಕಿ
ಗದೆಯನ್ನು ಹಿಡಿದು ಜರಾಸಂಧನನ್ನು ಕುರಿತು
ತೆರಳಿದನು. ಆ ಗದೆಯಿಂದ ಜರಾಸಂಧನ ಜತ್ರುವಿನಲ್ಲಿ(ಎದೆಗಿಂತ ಮೇಲೆ, ಕಂಠಕ್ಕಿಂತ ಕೆಳಗೆ) ಹೊಡೆದನು ಕೂಡಾ. ಇದರಿಂದ ಜರಾಸಂಧ ಒದ್ದಾಡುತ್ತಾ, ಮೂರ್ಛೆಹೊಂದಿ
ಭೂಮಿಯಲ್ಲಿ ಬಿದ್ದನು.
ಅಥೋತ್ತಸ್ಥೌ ರೌಹಿಣೇಯಃ ಸಹೈವ ಸಮುತ್ತಸ್ಥೌ ಮಾಗಧೋsಪ್ಯಗ್ರ್ಯವೀರ್ಯ್ಯಃ ।
ಕ್ರುದ್ಧೋ ಗೃಹೀತ್ವಾ ಮೌಲಿಮಸ್ಯಾsಶು ರಾಮೋ ವಧಾಯೋದ್ಯಚ್ಚನ್ಮುಸಲಂ ಬಾಹುಷಾಳೀ ॥೧೬.೨೩ ॥
ತದನಂತರ ಬಲರಾಮನು ಮೇಲೆದ್ದ. ಬಲರಾಮ ಏಳುತ್ತಿರುವಾಗಲೇ ಶ್ರೇಷ್ಠವಾದ
ಪರಾಕ್ರಮವುಳ್ಳ ಜರಾಸಂಧನೂ ಕೂಡಾ ಎದ್ದುನಿಂತ. ಆಗ ಸಿಟ್ಟಿನವನಾಗಿ ರಾಮನು ಜರಾಸಂಧನ
ತೆಲೆಗೂದಲನ್ನು ಹಿಡಿದನು, ಒಳ್ಳೆಯ ಬಲವುಳ್ಳ ಬಲರಾಮನು ಜರಾಸಂಧನನ್ನು
ಸಾಯಿಸಲೆಂದು ತನ್ನ ಒನಕೆಯನ್ನು ಎತ್ತಿ ಹಿಡಿದನು.
ಅಥಾಬ್ರವೀದ್ ವಾಯುರೇನಂ
ನ ರಾಮ ತ್ವಯಾ ಹನ್ತುಂ ಶಕ್ಯತೇ ಮಾಗಾಧೋsಯಮ್ ।
ವೃಥಾ ನ ತೇ ಬಾಹುಬಲಂ
ಪ್ರಯೋಜ್ಯಮಮೋಘಂ ತೇ ಯದ್ ಬಲಂ ತದ್ವದಸ್ತ್ರಮ್ ॥೧೬.೨೪ ॥
ತದನಂತರ ಮುಖ್ಯಪ್ರಾಣನು(ಅಶರೀರವಾಣಿ) ಬಲರಾಮನನ್ನು ಕುರಿತು ಹೀಗೆ
ಹೇಳಿದನು: ‘ಬಲರಾಮನೇ, ನಿನ್ನಿಂದ ಈ ಜರಾಸಂಧನನ್ನು ಕೊಲ್ಲಲು ಸಾಧ್ಯವಿಲ್ಲ. ಹಾಗಾಗಿ ನಿನ್ನ
ಬಾಹುಬಲವನ್ನು ವ್ಯರ್ಥವಾಗಿ ಪ್ರಯೋಗಮಾಡಬೇಡ. ನನ್ನ ಅಸ್ತ್ರದಂತೆ ನಿನ್ನ ಬಲವೂ ಕೂಡಾ
ಅಮೋಘವಾಗಿದೆ. ಅದನ್ನು ವ್ಯರ್ಥಮಾಡಿಕೊಳ್ಳಬೇಡ’.
ಅನ್ಯೋ ಹನ್ತಾ
ಬಲವಾನಸ್ಯ ಚೇತಿ ಶ್ರುತ್ವಾ ಯಯೌ ಬಲಭದ್ರೋ ವಿಮುಚ್ಯ ।
ಜರಾಸುತಂ ಪುನರುದ್ಯಚ್ಛಮಾನಂ
ಜಘಾನ ಕೃಷ್ಣೋ ಗದಯಾ ಸ್ವಯೈವ ॥೧೬. ೨೫ ॥
‘ಇನ್ನೊಬ್ಬ ಬಲಿಷ್ಠ ಇವನನ್ನು ಕೊಲ್ಲುತ್ತಾನೆ’ ಎನ್ನುವ ಮಾತನ್ನು
ಕೇಳಿದ ಬಲರಾಮನು ಜರಾಸಂಧನನ್ನು ಅಲ್ಲೇ ಬಿಟ್ಟು ತೆರಳಿದನು. ಆದರೆ ಮತ್ತೆ ಅವನತ್ತ ಧಾವಿಸುತ್ತಿರುವ
ಜರಾಸಂಧನನ್ನು ಶ್ರೀಕೃಷ್ಣ ತನ್ನ ಕೌಮೋದಕಿ ಗದೆಯಿಂದ ಹೊಡೆದನು.
[ಹರಿವಂಶದಲ್ಲಿ ಮುಖ್ಯಪ್ರಾಣ ಬಲರಾಮನನ್ನು ಕುರಿತು ಹೇಳಿದ ಮಾತಿನ
ವಿವರವನ್ನು ಕಾಣಬಹುದು: ‘ತತೋsನ್ತರಿಕ್ಷೇ
ವಾಗಾಸೀತ್ ಸುಸ್ವರಾ ಲೋಕಸಾಕ್ಷಿಣೀ । ನ ತ್ವಯಾ ರಾಮ ವಧ್ಯೋsಯಮಲಂ
ಖೇದೇನ ಮಾನದ । ವಿಹಿತೋsಸ್ಯ ಮಯಾ ಮೃತ್ಯುಸ್ತಸ್ಮಾತ್ ಸಾಧು ವ್ಯುಪಾರಮ
। ಅಚಿರೇಣೈವ ಕಾಲೇನ ಪ್ರಾಣಾಂಸ್ತ್ಯಕ್ಷತಿ ಮಾಗಧಃ’ (ವಿಷ್ಣುಪರ್ವಣೀ ೪೩.೭೨-೭೩) [ಈ
ಜರಾಸಂಧನನ್ನು ನಾನೇ ಕೊಲ್ಲುವವನಿದ್ದೇನೆ. ಇಂದು ನೀನು ಹೊಡೆದರೂ ಅವನು ಸಾಯುವುದಿಲ್ಲ. ಏಕೆ ಸುಮ್ಮನೆ ನಿನ್ನ ಬಾಹುಬಲವನ್ನು ವ್ಯರ್ಥ ಮಾಡಿಕೊಳ್ಳುವೆ’
ಪ್ರಹರ್ತವ್ಯೋ ನ ರಾಜಾsಯಮವಧ್ಯೋsಯಂ ತ್ವಯಾsನಘ । ಕಲ್ಪಿತೋsಸ್ಯ ವಧೋsನ್ಯಸ್ಮಾದ್ ವಿರಮಸ್ವ ಹಲಾಯುಧ ।
ಶ್ರುತ್ವಾsಹಂ ತೇನ ವಾಕ್ಯೇನ ಚಿನ್ತಾವಿಷ್ಟೋ ನಿವರ್ತಿತಃ । ಸರ್ವಪ್ರಾಣಹರಂ
ಘೋರಂ ಬ್ರಹ್ಮಣಾ ಸ್ವಯಮೀರಿತಮ್’ (೭೩.೪೯-೫೦) [‘ಸ್ವಯಂ
ಬ್ರಹ್ಮನ(ಪ್ರಾಣ-ಬ್ರಹ್ಮ ಅಭೇದ) ಈ ಮಾತಿನಿಂದಾಗಿ ಚಿಂತಾವರ್ತಿತನಾಗಿ ನಾನು ಆ ಕೆಲಸದಿಂದ ಹಿಂದೆ
ಸರಿದೆ’ ಎಂದು ಇಲ್ಲಿ ಬಲರಾಮ ಹೇಳಿರುವುದನ್ನು ಕಾಣುತ್ತೇವೆ].
ತೇನಾsಹತಃ ಸ್ತ್ರಸ್ತಸಮಸ್ತಗಾತ್ರಃ ಪಪಾತ ಮೂರ್ಚ್ಛಾಭಿಗತಃ ಸ ರಾಜಾ ।
ಚಿರಾತ್ ಸಙ್ಜ್ಞಾಂ
ಪ್ರಾಪ್ಯ ಚಾನ್ತರ್ಹಿತೋsಸೌ ಸಮ್ಪ್ರಾದ್ರವದ್ ಭೀತಭೀತಃ ಸಲಜ್ಜಃ ॥೧೬.೨೬
॥
ಕೃಷ್ಣನಿಂದ ಹೊಡೆಯಲ್ಪಟ್ಟ, ತನ್ನೆಲ್ಲಾ ದೇಹದ ನಿಯಂತ್ರಣವನ್ನು ಕಳೆದುಕೊಂಡು
ಮೂರ್ಛೆಯನ್ನು ಹೊಂದಿದ ಆ ರಾಜನು ಬಹಳ ಹೊತ್ತಿನ ನಂತರ ಮೂರ್ಛೆಯಿಂದೆದ್ದು, ಭಯಗೊಂಡು, ತನ್ನನ್ನು ಅಡಗಿಸಿಕೊಂಡು, ಲಜ್ಜೆಯಿಂದ ಕೂಡಿ, ಓಡಿಹೋದನು.
ಯಯೌ ಶಿಷ್ಟೈ ರಾಜಭಿಃ
ಸಂಯುತಶ್ಚ ಪುರಂ ಜೀವೇತ್ಯೇವ ಕೃಷ್ಣೇನ ಮುಕ್ತಃ ।
ಪುನರ್ಯ್ಯುದ್ಧಂ ಬಹುಶಃ ಕೇಶವೇನ ಕೃತ್ವಾ ಜಿತೋ ರಾಜಗಣೈಃ ಸಮೇತಃ ॥೧೬.೨೭ ॥
ಉಳಿದ ರಾಜರಿಂದ ಕೂಡಿಕೊಂಡ ಅವನು ‘ಬದುಕಿಕೋ ಹೋಗು’
ಎಂಬಿತ್ತ್ಯಾದಿಯಾಗಿ ಹೇಳಿ ಶ್ರೀಕೃಷ್ಣನಿಂದ ಬಿಡಲ್ಪಟ್ಟವನಾಗಿ ಪಟ್ಟಣಕ್ಕೆ ತೆರಳಿದನು. ಇದೇ ರೀತಿ
ಮತ್ತೆ ಶ್ರೀಕೃಷ್ಣನ ಜೊತೆಗೆ ಅನೇಕ ಬಾರಿ ಯುದ್ಧಮಾಡಿ, ತನ್ನ ರಾಜಗಣಸಮೇತನಾಗಿಯೇ ಜರಾಸಂಧ ಸೋತುಹೋದ.
No comments:
Post a Comment