ಶ್ರೀಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯಃ(ಭಾಗ-೦೨)
ಓಂ ॥
ಕಾಲೇ ತ್ವೇತಸ್ಮಿನ್ ಭೂಯ ಏವಾಖಿಲೈಶ್ಚ ನೃಪೈರ್ಯ್ಯುಕ್ತೋ ಮಾಗಧೋ ಯೋದ್ಧುಕಾಮಃ ।
ಪ್ರಾಯಾದ್ ಯದೂಂಸ್ತತ್ರ ನಿತ್ಯಾವ್ಯಯಾತಿಬಲೈಶ್ವರ್ಯ್ಯೋsಪೀಚ್ಛಯಾsಗಾತ್ ಸ ಕೃಷ್ಣಃ ॥೧೬.೦೧॥
ಇದೇ ಕಾಲದಲ್ಲಿ (ಪಾಂಡವರು ವಿದ್ಯಾಭ್ಯಾಸ ಮಾಡುತ್ತಿರುವ ಕಾಲದಲ್ಲಿ) ಜರಾಸಂಧನು ಎಲ್ಲಾ
ರಾಜರೊಂದಿಗೆ ಕೂಡಿಕೊಂಡು ಯುದ್ಧಮಾಡಲು ಬಯಸಿ ಯಾದವರನ್ನು ಕುರಿತು ತೆರಳಿದನು. ಆದರೆ ಮದುರಾಪಟ್ಟಣದಲ್ಲಿ
ಯಾವಾಗಲೂ ಇರುವ, ಎಂದೂ ನಾಶವಾಗದ ಶ್ರೀಕೃಷ್ಣನು, ಉತ್ಕೃಷ್ಟವಾದ ಬಲ ಎಂಬ ಐಶ್ವರ್ಯ ಇದ್ದರೂ ಕೂಡಾ,
ತನ್ನ ಇಚ್ಛೆಯಿಂದಲೇ ಮದುರೆಯನ್ನು ಬಿಟ್ಟು ತೆರಳಿದನು/ಓಡಿದನು.
ಏಕೆ ಶ್ರೀಕೃಷ್ಣ ಹೀಗೆ ಮಾಡಿದ ಎಂದರೆ:
ಸನ್ದರ್ಶಯನ್ ಬಲಿನಾಮಲ್ಪಸೇನಾದ್ಯುಪಸ್ಕರಾಣಾಂ
ಬಹಳೋಪಸ್ಕರೈಶ್ಚ ।
ಪ್ರಾಪ್ತೇ ವಿರೋಧೇ ಬಲಿಭಿರ್ನ್ನೀತಿಮಗ್ರ್ಯಾಂ ಯಯೌ ಸರಾಮೋ ದಕ್ಷಿಣಾಶಾಂ ರಮೇಶಃ ॥೧೬. ೦೨ ॥
ಬಲಿಷ್ಠರಾಗಿರುವ, ಆದರೆ ಅತ್ಯಂತ ಸ್ವಲ್ಪ ಸೇನೆಯನ್ನು ಹೊಂದಿರುವ ರಾಜರಿಗೆ, ಬಹಳ ಸೈನಿಕರ
ಸಂಖ್ಯೆಯನ್ನು ಹೊಂದಿರುವ ರಾಜರೊಂದಿಗೆ ವಿರೋಧವು ಒದಗಿದಾಗ, ಉತ್ಕೃಷ್ಟವಾದ ನೀತಿಯನ್ನು
ತೋರಿಸುತ್ತಾ, ಬಲರಾಮನಿಂದ ಕೂಡಿದ ಶ್ರೀಕೃಷ್ಣನು ದಕ್ಷಿಣದಿಕ್ಕಿಗೆ ಓಡಿದ/ತೆರಳಿದ.
[ಒಬ್ಬ ರಾಜನಲ್ಲಿ ಬಹಳ ಸೇನೆ ಮತ್ತು ಯುದ್ಧೋಪಕರಣಗಳು(ರಥ, ಆಯುಧ,
ಇತ್ಯಾದಿ) ಇದ್ದು, ಆತ ಕಡಿಮೆ ಸೈನ್ಯವಿರುವ ಇನ್ನೊಬ್ಬ ರಾಜನ ಮೇಲೆ ದಂಡೆತ್ತಿ ಹೋದಾಗ,
ಕಡಿಮೆ ಸೈನ್ಯ ಹೊಂದಿರುವ ರಾಜ ಬಲಿಷ್ಠನಾಗಿದ್ದರೂ ಕೂಡಾ, ಅವನಲ್ಲಿ ಸಾಕಷ್ಟು ಸೈನ್ಯ, ಯುದ್ಧೋಪಕರಣ
ಇಲ್ಲದಿದ್ದಾಗ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ಇಲ್ಲಿ ತೋರಿಸಿದ್ದಾನೆ. ಇದನ್ನೇ ಇಂದು ಗೆರಿಲ್ಲಾ
ಯುದ್ಧ ಎಂದು ಕರೆಯುತ್ತಾರೆ]
ಸೋsನನ್ತವೀರ್ಯ್ಯಃ
ಪರಮೋsಭಯೋsಪಿ ನೀತ್ಯೈ ಗಚ್ಛನ್ ಜಾಮದಗ್ನ್ಯಂ
ದದರ್ಶ ।
ಕ್ರೀಡಾರ್ತ್ಥಮೇಕೋsಪಿ ತತೋsತಿದುರ್ಗ್ಗಂ ಶ್ರುತ್ವಾ ಗೋಮನ್ತಂ ತತ್ರ ಯಯೌ ಸಹಾಗ್ರಜಃ॥೧೬.೦೩
॥
ಎಣೆಯಿರದ ವೀರ್ಯವುಳ್ಳ, ಎಲ್ಲರಿಗಿಂತ ಉತ್ಕೃಷ್ಟನಾದ, ನಿರ್ಭಯನಾದರೂ ಕೂಡಾ, ಲೋಕಕ್ಕೆ
ನೀತಿಯನ್ನು ತೋರುವುದಕ್ಕಾಗಿ ಮದುರೆಯಿಂದ ಪಲಾಯನ ಮಾಡುವವನಂತೆ ತೆರಳಿದ ಶ್ರೀಕೃಷ್ಣ, ಪರಶುರಾಮನನ್ನು
ಕಂಡನು. ವಿಲಾಸಕ್ಕಾಗಿ, ಒಬ್ಬನೇ ಆದರೂ(ಶ್ರೀಕೃಷ್ಣ-ಪರಶುರಾಮ ಅವರಿಬ್ಬರೂ ಒಬ್ಬನೇ
ಆದರೂ), ಪರಶುರಾಮನಿಂದ ಅತ್ಯಂತ ಗೋಪ್ಯವಾದ ಪ್ರದೇಶ ಯಾವುದೆಂದು ಕೇಳಿ, ಅದರಂತೆ
ಅಣ್ಣನಿಂದ ಕೂಡಿಕೊಂಡು ಗೋಮನ್ತ ಪರ್ವತಕ್ಕೆ ತೆರಳಿದನು.
ತದಾ ದುಗ್ಧಾಬ್ಧೌ ಸಂಸೃತಿಸ್ಥೈಃ ಸುರಾದ್ಯೈಃ ಪೂಜಾಂ ಪ್ರಾಪ್ತುಂ ಸ್ಥಾನಮೇಷಾಂ ಚ ಯೋಗ್ಯಮ್ ।
ಮುಕ್ತಸ್ಥಾನಾದಾಪ
ನಾರಾಯಣೋsಜೋ ಬಲಿಶ್ಚಾsಗಾತ್ ತತ್ರ ಸನ್ದೃಷ್ಟುಮೀಶಮ್
॥ ೦೪ ॥
ಆಗಲೇ, ಕ್ಷೀರಸಾಗರದಲ್ಲಿ ಸಂಸಾರದಲ್ಲಿರುವ ದೇವತೆಗಳಿಂದ ಪೂಜೆಯನ್ನು ಹೊಂದಲು, ಆ
ಸಂಸಾರದಲ್ಲಿರುವ ಸುರರಿಗೆ ಯೋಗ್ಯವಾಗಿರುವ ಅಮುಕ್ತಸ್ಥಾನವನ್ನು, ಮುಕ್ತಸ್ಥಾನದೊಳಗಡೆಯಿಂದ ನಾರಾಯಣನು
ಹೊಂದಿದನು. ಆಗ ಅಲ್ಲಿಗೆ ಬಲಿಯೂ ಕೂಡಾ
ನಾರಾಯಣನನ್ನು ಕಾಣಲೆಂದು ಬಂದನು.
[ವೈಕುಂಠದಲ್ಲಿ ಮುಕ್ತ ಹಾಗು ಅಮುಕ್ತಸ್ಥಾನ
ಎನ್ನುವ ಎರಡು ವಿಭಾಗವಿದೆ. ಅಮುಕ್ತಸ್ಥಾನದಲ್ಲಿ ಸಂಸಾರದಲ್ಲಿರುವ ದೇವತೆಗಳೆಲ್ಲಾ ಪೂಜೆ
ಮಾಡುತ್ತಿದ್ದರು. ಆಗ ಪರಮಾತ್ಮ ಅಲ್ಲಿ ಪ್ರಕಟನಾದ. ಅದೇ ಸಮಯದಲ್ಲಿ ಪರಮಾತ್ಮನನ್ನು ನೋಡಲು ಬಲಿಚಕ್ರವರ್ತಿಯೂ ಅಲ್ಲಿಗೆ ಬಂದ].
ತತ್ರಾಸುರಾವೇಶಮಮುಷ್ಯ ವಿಷ್ಣುಃ ಸನ್ದರ್ಶಯನ್ ಸುಪ್ತಿಹೀನೋsಪಿ ನಿತ್ಯಮ್ ।
ಸಂಸುಪ್ತವಚ್ಛಿಶ್ಯ
ಉದಾರಕರ್ಮ್ಮಾ ಸಙ್ಯಾಯೈ ದೇವಾನಾಂ ಮುಖಮೀಕ್ಷ್ಯಾಪ್ರಮೇಯಃ ॥ ೦೫ ॥
ಉತ್ಕೃಷ್ಟಕರ್ಮವುಳ್ಳ, ಯಾರಿಂದಲೂ ಸಂಪೂರ್ಣ ತಿಳಿಯಲು ಅಸಾಧ್ಯನಾದ ಭಗವಂತನು, ಅಲ್ಲಿಗೆ ಬಂದ
ಬಲಿಯ ಅಸುರಾವೇಶವನ್ನು ಪ್ರಪಂಚಕ್ಕೆ ತೋರುವುದಕ್ಕಾಗಿ(ತೋರಿಸುತ್ತಾ), ಸುಪ್ತಿಹೀನನಾದರೂ ಕೂಡಾ, ದೇವತೆಗಳ ಮುಖವನ್ನು ಕಂಡು ಅವರಿಗೂ
ನಿದ್ರಿಸುವಂತೆ ಸಂಜ್ಞೆಮಾಡಿ, ತಾನು ನಿದ್ರೆಮಾಡಿದವನಂತೆ
ಮಲಗಿದನು.
ದೇವಾಶ್ಚ ತದ್ಭಾವವಿದೋsಖಿಲಾಶ್ಚ ನಿಮೀಲಿತಾಕ್ಷಾಃ ಶಯನೇಷು ಶಿಶ್ಯಿರೇ ।
ತದಾ ಬಲಿಸ್ತಸ್ಯ
ವಿಷ್ಣೋಃ ಕೀರೀಟಮಾದಾಯಗಾಜ್ಜಹಸುಃ ಸರ್ವದೇವಾಃ ॥ ೧೬.೦೬ ॥
ಎಲ್ಲಾ ದೇವತೆಗಳು ಪರಮಾತ್ಮನ ಅಭಿಪ್ರಾಯವನ್ನು ತಿಳಿದು, ತಮ್ಮ ಕಣ್ಗಳನ್ನು
ಮುಚ್ಚಿ ಹಾಸಿಗೆಗಳಲ್ಲಿ ನಿದ್ರಿಸಿದವರಂತೆ ಮಲಗಿಕೊಂಡರು. ಆಗ ಬಲಿಯು ವಿಷ್ಣುವಿನ ಕಿರೀಟವನ್ನು ತೆಗೆದುಕೊಂಡು(ತನ್ನ ಲೋಕವಾದ
ಪಾತಾಳಕ್ಕೆ) ಓಡಿಹೋದನು. ಇದನ್ನು ಕಂಡು ಎಲ್ಲಾ ದೇವತೆಗಳು ನಕ್ಕರು ಕೂಡಾ.
[ಈ ಕುರಿತಾದ ವಿವರವನ್ನು ನಾವು ಹರಿವಂಶದಲ್ಲಿ ಕಾಣುತ್ತೇವೆ: ಗೋಮಂತಮಿತಿ ವಿಖ್ಯಾತಂ ನೈಕಶೃಙ್ಗವಿಭೂಷಿತಂ
। ಸ್ವರ್ಗತೈಕಮಹಾಶೃಙ್ಗಂ ದುರಾರೋಹಂ ಖಗೈರಪಿ(ವಿಷ್ಣುಪರ್ವಣಿ - ೩೯.೬೪), ‘ಉದಯಾಸ್ತಮಯೇ ಸೂರ್ಯಂ ಸೋಮಂ ಚ ಜ್ಯೋತಿಷಾಂ ಪತಿಮ್ । ಊರ್ಮಿಮನ್ತಂ ಸಮುದ್ರಂ ಚ
ಅಪಾರದ್ವೀಪಭೂಷಣಮ್ । ಪ್ರೇಕ್ಷಮಾಣೌ ಸುಖಂ ತತ್ರ ನಗಾಗ್ರೇ ವಿಚರಿಷ್ಯಥಃ । ಶೃಙ್ಗಸ್ಥೌ ತಸ್ಯ ಶೈಲಸ್ಯ ಗೋಮಂತಸ್ಯ ವನೇಚರೌ । ದುರ್ಗಯುದ್ಧೇನ ಧಾವಂತೌ ಜರಾಸಂಧಂ
ವಿಜೇಷ್ಯಥಃ’ (೬೭-೬೯) [‘ನೀವು ಗೋಮಂತಕ ಪರ್ವತವನ್ನೇರಿ ಅಲ್ಲಿ ಜರಾಸಂಧನನ್ನು ಗೆಲ್ಲಿ’ ಎನ್ನುವ ಪರಶುರಾಮನ ಮಾತು
ಇದಾಗಿದೆ].
‘ಸುಪ್ತಸ್ಯ ಶಯನೇ ದಿವ್ಯೇ ಕ್ಷೀರೋದೇ ವರುಣಾಲಯೇ । ವಿಷ್ಣೋಃ ಕಿರೀಟಂ ದೈತ್ಯೇನ ಹೃತಂ ವೈರೋಚನೇನ ವೈ’ (ವಿಷ್ಣುಪರ್ವಣಿ - ೪೧.೩೯) [ಮಲಗಿರುವ
ಅವನ ಕಿರೀಟವು ಬಲಿಯಿಂದ ಅಪಹರಿಸಲ್ಪಟ್ಟಿತು].
‘ವೈರೋಚನೇನ ಸುಪ್ತಸ್ಯ ಮಮ ಮೌಲಿರ್ಮಹೋದಧೌ ।
ಶಕ್ರಸ್ಯ ಸದೃಶಂ ರೂಪಂ ದಿವ್ಯಮಾಸ್ಥಾಯ ಸಾಗರಾತ್ ।
ಗ್ರಾಹರೂಪೇಣ ಯೋ ನೀತ ಆನೀತೋsಸೌ ಗರುತ್ಮತಾ’(೪೮) (‘ವೈಕುಂಠಲೋಕದಲ್ಲಿ
ಮಲಗಿದ್ದ ನನ್ನ ಕಿರೀಟವನ್ನು ಬಲಿ ಎತ್ತಿಕೊಂಡು ಹೋದ’ ಎಂದು ಹೇಳುವ ಶ್ರೀಕೃಷ್ಣನ ಮಾತು ಇದಾಗಿದೆ)].
No comments:
Post a Comment