ನಾರಾಯಣೇ ಸರ್ವದೇವೈಃ ಸಮೇತೇ ಬ್ರಹ್ಮಾದಿಭಿರ್ಹಾಸಮಾನೇ ಸುಪರ್ಣ್ಣಃ ।
ಗತ್ವಾ ಪಾತಾಳಂ
ಯುಧಿ ಜಿತ್ವಾ ಬಲಿಂ ಚ ಕಿರೀಟಮಾದಾಯಾಭ್ಯಯಾದ್ ಯತ್ರ ಕೃಷ್ಣಃ ॥೧೬.೦೭॥
ಬ್ರಹ್ಮಾದಿ ಸಮಸ್ತ ದೇವತೆಗಳೊಂದಿಗೆ ನಾರಾಯಣನೂ ಕೂಡಾ ನಗುತ್ತಿರಲು,
ಗರುಡನು ಪಾತಾಳಕ್ಕೆ ತೆರಳಿ, ಯುದ್ಧದಲ್ಲಿ ಬಲಿಯನ್ನು ಗೆದ್ದು, ಕಿರೀಟವನ್ನು ತೆಗೆದುಕೊಂಡು ಶ್ರೀಕೃಷ್ಣನಿದ್ದಲ್ಲಿಗೆ
ಬಂದನು.
ತತ್ ತಸ್ಯ ಶೀರ್ಷ್ಣಿ ಪ್ರತಿಮುಚ್ಯ ನತ್ವಾ ಖಗಃ ಸ್ತುತ್ವಾ ದೇವದೇವಂ ರಮೇಶಮ್
।
ಸ್ಮೃತ ಆಗಚ್ಛೇತ್ಯೇವ ವಿಸರ್ಜ್ಜಿತೋsಮುನಾ ಯಯೌ ದುಗ್ಧಾಬ್ಧಿಂ ಯತ್ರ ನಾರಾಯಣೋsಸೌ ॥೧೬.೦೮ ॥
ಗರುಡನು ಆ ಕಿರೀಟವನ್ನು ಶ್ರೀಕೃಷ್ಣನ ತಲೆಯಮೇಲೆ ಇಟ್ಟು, ದೇವದೇವನಾದ
ರಮೇಶನನ್ನು ಸ್ತೋತ್ರಮಾಡಿ, ‘ಸ್ಮರಿಸಿದೊಡನೆ ಬಾ’ ಎಂದು ಶ್ರೀಕೃಷ್ಣನಿಂದ ಬೀಳ್ಕೊಟ್ಟವನಾಗಿ, ಭಗವಂತನ
ನಾರಾಯಣ ರೂಪವಿರುವ ದುಗ್ಧಾಬ್ಧಿಯನ್ನು(ಕ್ಷೀರಸಾಗರವನ್ನು)
ಕುರಿತು ತೆರಳಿದನು.
ಕಿರೀಟಂ ತತ್ ಕೃಷ್ಣಮೂರ್ಧ್ನಿ
ಪ್ರವಿಷ್ಟಂ ತತ್ತುಲ್ಯಮಾಸೀತ್ ತಸ್ಯ ರೂಪೇಷ್ವಭೇದಾತ್ ।
ತದಿಚ್ಛಯಾ ಚೈವ
ನಾರಾಯಣಸ್ಯ ಶೀರ್ಷ್ಣ್ಯಪ್ಯಾಸೀದ್ ಯುಗಪದ್ ದುಗ್ಧವಾರ್ದ್ಧೌ ॥೧೬.೦೯ ॥
ಪರಮಾತ್ಮನ ರೂಪಗಳಲ್ಲಿ ಅಭೇದವಿರುವುದರಿಂದ, ನಾರಾಯಣನ ಇಚ್ಛೆಯಿಂದಲೇ, ಇಲ್ಲಿ ಶ್ರೀಕೃಷ್ಣನ ತಲೆಯಲ್ಲಿ ಇರಿಸಿದ್ದ ಕಿರೀಟವೇ ಕ್ಷೀರಸಾಗರದಲ್ಲಿರುವ
ನಾರಾಯಣನ ರೂಪದಲ್ಲಿಯೂ ಇತ್ತು ( ಇದು ಭಗವಂತ ತನ್ನ ರೂಪದಲ್ಲಿ ಅಭೇದವನ್ನು ತೋರಿಸಿಕೊಟ್ಟ ಘಟನೆ. ಒಂದೇ
ಸಂದರ್ಭದಲ್ಲಿ, ಇಲ್ಲಿ ಶ್ರೀಕೃಷ್ಣ ಕಿರೀಟ
ಧರಿಸುತ್ತಿರುವಾಗಲೇ, ಅಲ್ಲೂ ಕೂಡಾ ನಾರಾಯಣನಿಂದ ಕಿರೀಟ ಧರಿಸಲ್ಪಟ್ಟಿತು).
ಪೂರ್ವಂ ಪ್ರಾಪ್ತಾನ್ಯೇವ ದಿವ್ಯಾಯುಧಾನಿ ಪುನರ್ವೈಕುಣ್ಠಂ ಲೋಕಮಿತಾನಿ
ಭೂಯಃ ।
ತದಾSವತೇರೂ ರೌಹಿಣೇಯಸ್ಯ
ಚೈವಂ ಭಾರ್ಯ್ಯಾsಪ್ಯಾಯಾದ್ ವಾರುಣೀ ನಾಮ ಪೂರ್ವಾ ॥೧೬.೧೦ ॥
ಹಿಂದೆ ಜರಾಸಂಧನೊಂದಿಗೆ ಯುದ್ಧಮಾಡುವಾಗ ಹೊಂದಿದ್ದ ದಿವ್ಯಾಯುಧಗಳು ಯುದ್ಧ
ಮುಗಿದಾಗ ಮತ್ತೆ ವೈಕುಂಠಲೋಕವನ್ನು ಹೊಂದಿದ್ದವು.
ಈಗ ಆ ಎಲ್ಲಾ ಆಯುಧಗಳು ಮತ್ತೆ ಇಳಿದು ಬಂದವು. ಅಷ್ಟೇ ಅಲ್ಲದೆ, ಬಲರಾಮನ ಹಿಂದಿನ ಹೆಂಡತಿಯಾದ, ‘ವಾರುಣೀ’ ಎಂದು ಯಾರು ಪ್ರಸಿದ್ಧಳೋ ಆಕೆಯೂ ಕೂಡಾ ಇಳಿದು
ಬಂದಳು.
ಸೈವಾಪರಂ ರೂಪಮಾಸ್ಥಾಯ ಚಾsಗಾಚ್ಛ್ರೀರಿತ್ಯಾಖ್ಯಂ ಸೇನ್ದಿರಾವೇಶಮಗ್ರ್ಯಮ್ ।
ಕಾನ್ತಿಶ್ಚಾsಗಾತ್ ತಸ್ಯ ಸೋಮಸ್ಯ
ಚಾನ್ಯಾ ಭಾರ್ಯ್ಯಾ ದ್ವಯೋಃ ಪೂರ್ವತನಾ ಸುರೂಪಾ ॥೧೬.೧೧ ॥
ಆ ವಾರುಣಿಯೇ ‘ಶ್ರೀಃ’ ಎನ್ನುವ ಹೆಸರುಳ್ಳವಳಾಗಿ ಲಕ್ಷ್ಮಿಯ ಆವೇಶದಿಂದ(ಇಂದಿರಾವೇಶದಿಂದ) ಕೂಡಿದ ಇನ್ನೊಂದು
ರೂಪವನ್ನು ಧರಿಸಿ ಬಂದಳು. ಬಲರಾಮನ ‘ಕಾಂತಿ’ ಎನ್ನುವ ಹೆಸರಿನ
ಹೆಂಡತಿಯೂ ಕೂಡಾ ಇಳಿದು ಬಂದಳು. ಸೋಮನ ಹೆಂಡತಿಯ ಹೆಸರೂ ಕೂಡಾ ‘ಕಾಂತಿ’.
ಈ ಇಬ್ಬರು ‘ಕಾಂತಿ’ಯರಲ್ಲಿ ಬಲರಾಮನ ಹೆಂಡತಿ ‘ಕಾಂತಿ’
ಜ್ಯೇಷ್ಠಳೂ ಹಾಗೂ ಸೌಂದರ್ಯವತಿಯೂ ಕೂಡಾ.
[ ಈ ಕುರಿತಾದ ವಿವರವನ್ನು ನಾವು ಹರಿವಂಶದಲ್ಲಿ ಕಾಣಬಹುದು: ಮದಿರಾ
ರೂಪಿಣೀ ಭೂತ್ವಾ ಕಾನ್ತಿಶ್ಚ ಶಶಿನಃ ಪ್ರಿಯ । ಶ್ರೀಶ್ಚ ದೇವೀ ವರಿಷ್ಠಾ ಸ್ತ್ರೀ ಸ್ವಯಮೇವಾಮ್ಬುಜಧ್ವಜಾ । ಸಾಞ್ಜಲಿಪ್ರಗ್ರಹ
ದೇವಿ ಬಲಭದ್ರಮುಪಸ್ಥಿತಾ’ (೪೧.೧೫)]
ತಾಭಿ ರಾಮೋ ಮುಮುದೇ
ತತ್ರ ತಿಷ್ಠಞ್ಛಶಾಙ್ಕಪೂಗೋದ್ರಿಕ್ತಕಾನ್ತಿಃ ಸುಧಾಮಾ
ತಸ್ಯಾ ವಾರುಣ್ಯಾಃ
ಪ್ರತಿಮಾ ಪೇಯರೂಪಾ ಕಾದಮ್ಬರೀ ವಾರುಣೀ ತಾಂ ಪಪೌ ಸಃ ॥೧೬.೧೨ ॥
ಅವರೆಲ್ಲರ(ವಾರುಣಿ, ಶ್ರೀಃ ಮತ್ತು
ಕಾಂತಿ ಇವರ) ಆಗಮನದಿಂದ, ಹುಣ್ಣಿಮೆಯ ಚಂದ್ರನ ಬೆಳದಿಂಗಳಿಗಿಂತ ಉತ್ಕೃಷ್ಟವಾದ ಕಾಂತಿಯುಳ್ಳ,
ಒಳ್ಳೆಯ ಮೈಬಣ್ಣವುಳ್ಳ(ಸುಧಾಮ) ರಾಮನು ಸಂತಸಪಟ್ಟನು. ವಾರುಣಿಯ ಅಭಿಮನ್ಯವಾದ ದೇಹಕ್ಕೆ ಸಮನಾದ,
ಕದಂಬ ಕುಸುಮದಿಂದ ಹುಟ್ಟಿರುವುದರಿಂದ ಕಾದಂಬರಿ ಎನಿಸಿರುವ ಮದ್ಯವನ್ನು ಬಲರಾಮ ಕುಡಿದ. (ಅಂದರೆ ಮದ್ಯದರೂಪದಲ್ಲಿರುವ
ತನ್ನ ಹೆಂಡತಿ ವಾರುಣಿಯನ್ನು ಬಲಭದ್ರ ಸೇವಿಸಿದ).
No comments:
Post a Comment